ಮುಂಬಯಿಯಲ್ಲಿ ಐಆರ್‌ಎಸ್ ಅಧಿಕಾರಿ ವಾಂಖೆಡೆ ಅವರು ಡ್ರಗ್ಸ್ ಜಾಲದ ವಿರುದ್ಧ ಸಮರವನ್ನೇ ಸಾರಿದ್ದಾರೆ. ಮಾದಕ ದ್ರವ್ಯ ಹಾಗೂ ಬಾಲಿವುಡ್ ನಡುವಿನ ನಂಟನ್ನು ಭೇದಿಸುವಲ್ಲಿ ನಿರತರಾಗಿದ್ದಾರೆ.
- ಮಲ್ಲಿಕಾರ್ಜುನ ತಿಪ್ಪಾರ
ಸಮೀರ್ ವಾಂಖೆಡೆ. ಈ ಹೆಸರನ್ನು ಕೇಳಿದರೆ ಬಾಲಿವುಡ್ ಸೆಲೆಬ್ರಿಟಿಗಳು ಬೆಚ್ಚಿ ಬೀಳುತ್ತಿದ್ದಾರೆ. ಮಾದಕ ದ್ರವ್ಯ ಸೇವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲಘಿ, ಈ ಹಿಂದೆ ಅವರು ಕಸ್ಟಮ್ಸ್ ಸೇವೆಯಲ್ಲಿದ್ದಾಗಲೂ ಸೆಲೆಬ್ರಿಟಿಗಳು ಥರಗುಟ್ಟಿದ್ದರು! ಅವರು ಮುಂಬಯಿ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿದ್ದರು. ಆಗಲೂ ಹೊರ ದೇಶಗಳಿಂದ ತರುತ್ತಿದ್ದ ಬೆಲೆ ಬಾಳುವ ವಸ್ತುಗಳಿಗೆ ತೆರಿಗೆ ಪಾವತಿಸದೇ ಬಿಟ್ಟುಕೊಡುತ್ತಿರಲಿಲ್ಲ ಈ ಖಡಕ್ ಅಧಿಕಾರಿ. ಹಾಗಾಗಿ, ಬಾಲಿವುಡ್ ಹಾಗೂ ವಾಂಖೆಡೆ ಅವರ ಮಧ್ಯೆ ಮೊದಲಿನಿಂದಲೂ ಒಂಥರಾ ಲವ್ ಆ್ಯಂಡ್ ಹೇಟ್ ಸಂಬಂಧ!
ಒಂದು ವರ್ಷದಿಂದ ವಾಂಖೆಡೆ ಅವರು, ಗಣ್ಯ ವಲಯದಲ್ಲಿ ಹೆಪ್ಪುಗಟ್ಟಿರುವ ಮಾದಕ ಸೇವನೆ, ಮಾರಾಟದ ಜಾಲವನ್ನು ಭೇದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2020ರ ಜೂನ್ ತಿಂಗಳಲ್ಲಿ ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಪ್ರಕರಣ ತನಿಖೆಯು ವಿಸ್ತಾರಗೊಳ್ಳುತ್ತಿದ್ದಂತೆ ಡ್ರಗ್ಸ್‌ನ ಭಯಾನಕತೆಗಳು ಅನಾವರಣಗೊಂಡವು. ಅಲ್ಲಿಂದ ಶುರುವಾದ ವಾಂಖೆಡೆ ಅವರ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯು ಸದ್ಯ ‘ಸೂಪರ್ ಸ್ಟಾರ್’ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವರೆಗೂ ಸಾಗಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಮಾದಕ ದ್ರವ್ಯ ಬಳಕೆಯ ಸಂಗತಿಗಳು ಬಯಲಾಗಿದ್ದವು. ಆಗ ಸುಶಾಂತ್‌ನ ಗೆಳತಿ ರೇಹಾ ಚಕ್ರವರ್ತಿ ಹಾಗೂ ಆಕೆಯ ಸಹೋದರನನ್ನು ಬಂಧಿಸಲಾಗಿತ್ತು. ಜೊತೆಗೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್‌ಪ್ರೀತ್ ಸಿಂಗ್, ಭಾರ್ತಿ ಸಿಂಗ್ ಇತ್ಯಾದಿ ನಟಿಯರನ್ನು ಡ್ರಗ್ಸ್ ಸಂಬಂಧ ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ಆರ್ಯನ್ ಖಾನ್ ಪ್ರಕರಣವು ಬಾಲಿವುಡ್‌ನ ಇತರೆ ಸೆಲೆಬ್ರಿಟಿಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಈಗಾಗಲೇ ನಟಿ ಅನನ್ಯಾ ಪಾಂಡೆ ಎರಡು ಬಾರಿ ವಿಚಾರಣೆ ಎದುರಿಸಿದ್ದಾಳೆ. ಈ ಎಲ್ಲದರ ಹಿಂದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಮುಂಬಯಿ ರೆನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಕರ್ತವ್ಯ ಎದ್ದು ಕಾಣುತ್ತಿದೆ. ಕಾನೂನು ಪಾಲನೆಯೊಂದನ್ನೇ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅವರಿಗೆ, ಸೆಲೆಬ್ರಿಟಿ ಅಥವಾ ಸಾಮಾನ್ಯರು ಎಂಬ ತಾರತಮ್ಯವಿಲ್ಲಘಿ. ಯಾರು ತಪ್ಪು ಮಾಡುತ್ತಾರೋ ಅವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ.
ಇಷ್ಟಾಗಿಯೂ ಅವರು ಆರೋಪಗಳಿಂದ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವುದಕ್ಕಾಗಿ ವಾಂಖೆಡೆ ಸೆಲೆಬ್ರಿಟಿಗಳ ಬೆನ್ನು ಹಿಂದೆ ಬಿದ್ದಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿದೆ. ಜೊತೆಗೆ ಎನ್‌ಸಿಪಿಯ ನಾಯಕ ನವಾಬ್ ಮಲಿಕ್ ಅವರಂತೂ, ಬಾಲಿವುಡ್ ಸೆಲೆಬ್ರಿಟಿಗಳಿಂದ ವಾಂಖೆಡೆ ಅವರು ಸುಲಿಗೆಗಿಳಿದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದುಘಿ, ಅವರನ್ನು ಜೈಲಿಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ ಎಂದಿದ್ದಾರೆ. ಜೊತೆಗೆ, ದುಬೈ ಮತ್ತು ಮಾಲ್ಡೀವ್ಸ್‌ಗೆ ವಾಂಖೆಡೆ ತೆರಳಿದ್ದ ೆಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆಲ್ಲಘಿ, ಸಮೀರ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಜೊತೆಗೆ, ಆರ್ಯನ್ ಖಾನ್ ಬಂಧನದ ವೇಳೆಯ ಹಾಜರಿದ್ದ ಕೆಲವು ಖಾಸಗಿ ವ್ಯಕ್ತಿಗಳಿಂದಾಗಿ ವಾಂಖೆಡೆ ಅವರ ಒಟ್ಟಾರೆ ಉದ್ದೇಶದ ಮೇಲೂ ಶಂಕೆ ಮೂಡುತ್ತಿರುವುದು ಸುಳ್ಳಲ್ಲಘಿ. ಇದಕ್ಕೆಲ್ಲ ಅವರು ಸಮರ್ಥನೆ ನೀಡಿದ್ದಾರೆಂಬುದು ಬೇರೆ ಮಾತು.
ವಿಶೇಷ ಏನೆಂದರೆ, ಸಮೀರ್ ಪತ್ನಿ ಕ್ರಾಂತಿ ರೇಡ್ಕರ್ ಕೂಡಾ ಒಬ್ಬ ನಟಿ. ಮರಾಠಿ ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಹೆಸರಿದೆ. ಅಜಯ್ ದೇವಗನ್ ನಟನೆಯ ‘ಗಂಗಾಜಲ್’ ಚಿತ್ರದಲ್ಲೂ ಕ್ರಾಂತಿ ನಟಿಸಿದ್ದಾರೆ. ಹಾಗಾಗಿ, ಸಮೀರ್ ಅವರಿಗೆ ಚಿತ್ರರಂಗ ಹೊಸದಲ್ಲ. ಅಲ್ಲಿ ನಡೆಯುವ ಬೆಳವಣಿಗೆಗಳು, ಹೈಕ್ಲಾಸ್ ಸೊಸೈಟಿಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಅರಿವು ಅವರಿಗಿದೆ.
ಎನ್‌ಸಿಬಿಯ ಮುಂಬಯಿ ರೆನಲ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುವ ಮೊದಲು ಮಹಾರಾಷ್ಟ್ರ ಸರ್ವೀಸ್ ಟ್ಯಾಕ್ಸ್ ವಿಭಾಗದಲ್ಲಿದ್ದರು. ಆಗ ಅವರು ತೆರಿಗೆ ವಂಚಿಸುತ್ತಿದ್ದ ಸುಮಾರು 2,500 ಮಂದಿ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಪೈಕಿ 200 ಸೆಲೆಬ್ರಿಟಿಗಳಿದ್ದರು. ಎರಡು ವರ್ಷದಲ್ಲಿ ಮುಂಬಯಿನಲ್ಲೇ ಒಟ್ಟು 87 ಕೋಟಿ ರೂಪಾಯಿಯನ್ನು ಖಜಾನೆಗೆ ಹರಿದು ಬರುವಂತೆ ಮಾಡಿದ್ದರು. 2011ರಲ್ಲಿ ಭಾರತೀಯ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದಿತು. ಆಗ ತಂಡಕ್ಕೆ ನೀಡಲಾಗಿದ್ದ ಟ್ರೋಫಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಇದೆ. ಹಾಗಾಗಿ, ತೆರಿಗೆ ಪಾವತಿಸಿಯೇ ಪಡೆದುಕೊಳ್ಳಬೇಕೆಂದು ಇವರು ಪಟ್ಟು ಹಿಡಿದಿದ್ದರು. ಕಸ್ಟಮ್ಸ್ ತೆರಿಗೆ ಕೊಟ್ಟ ಮೇಲೆಯೇ ಟ್ರೋಫಿಯನ್ನು ಕ್ಲಿಯರ್ ಮಾಡಿದ್ದರು. ಅವರ ಈ ನಡೆಯೂ ಭಾರೀ ಚರ್ಚೆಗೆ ಕಾರಣವಾಗಿತ್ತುಘಿ.
2013ರಲ್ಲಿ ವಿದೇಶಿ ಕರೆನ್ಸಿಯನ್ನು ಹೊಂದಿದ್ದ ಗಾಯಕ ಮಿಕಾ ಸಿಂಗ್ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಅದೇ ರೀತಿ, ಅನುರಾಗ್ ಕಶ್ಯಪ್, ವಿವೇಕ್ ಒಬೇರಾಯ್ ಮತ್ತು ರಾಮಗೋಪಾಲ್ ವರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಾಂಖೆಡೆ ಅವರ ತನಿಖಾ ಕ್ಷಕಿರಣಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಮುಂಬಯಿಯೊಂದರಲ್ಲೇ ವಾಂಖೆಡೆ ಹಾಗೂ ಅವರ ತಂಡವು 17 ಸಾವಿರ ಕೋಟಿ ರೂ. ವೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ! ಮಾದಕ ದ್ರವ್ಯ ಜಾಲ ಭೇದಿಸುವ ಅವರ ಈ ಕಾರ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ ವಾಂಖೆಡೆ. 2020 ನವೆಂಬರ್ 22ರಂದು 60 ಮಂದಿ ಇದ್ದ ಡ್ರಗ್ ಪೆಡ್ಲರ್‌ಗಳ ಗುಂಪೊಂದು ವಾಂಖೆಡೆ ಹಾಗೂ ಎನ್‌ಸಿಬಿಯ ಇತರ ಐದು ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿ ವೇಳೆ ವಾಂಖೆಡೆ ಅವರಿಗೆ ಸಣ್ಣ ಪುಟ್ಟ ಗಾಯಳಾದವು. ಆದರೆ, ತಂಡದ ಇತರ ಸದಸ್ಯರು ತೀವ್ರವಾಗಿ ಗಾಯಗೊಂಡರು. ಅವರನ್ನು ಬೆದರಿಸುವ ಹಲವು ಘಟನೆಗಳು ನಡೆಯುತ್ತಲೇ ಇವೆ. ಆದರೆ, ವಾಂಖೆಡೆ ಅದಾವುದಕ್ಕೂ ತಲೆಕೆಡಿಸಿಕೊಳ್ಳದೇ ಬಾಲಿವುಡ್ ಹಾಗೂ ಮಾದಕ ದ್ರವ್ಯ ಜಾಲ ನಡುವಿನ ನಂಟನ್ನು ಭೇದಿಸುವ ಕೆಲಸವನ್ನು ಮುಂದುವರಿಸಿದ್ದಾರೆ.
2008ರ ಬ್ಯಾಚಿನ ಐಆರ್‌ಎಸ್ ಅಧಿಕಾರಿಯಾಗಿರುವ ಸಮೀರ್ ಅವರ ಮೊದಲಿಗೆ ಮುಂಬಯಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಡೆಪ್ಯುಟಿ ಕಸ್ಟಮ್ಸ್ ಕಮಿಷನರ್ ಆಗಿದ್ದರು. ಆ ಬಳಿಕ ಅವರನ್ನು ದಿಲ್ಲಿ ಹಾಗೂ ಆಂಧ್ರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು. ಅಲ್ಲಿಂದ ಅವರು ಡೆಪ್ಯುಟಿ ಕಮಿಷನರ್ ಆ್ ಏರ್ ಇಂಟೆಲಿಜೆನ್ಸ್ ಯುನಿಟ್(ಎಐಯು), ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್‌ಐಎ) ಹೆಚ್ಚುವರಿ ಎಸ್‌ಪಿಯಾಗಿಯೂ ಕೆಲಸ ಮಾಡಿದ್ದಾರೆ. ಇದೀಗ ಎನ್‌ಸಿಬಿ ಮುಂಬಯಿ ರೆನಲ್ ನಿರ್ದೇಶಕರಾಗಿ ದಕ್ಷವಾಗಿ ಕೆಲಸ ಮಾಡುತ್ತಿದ್ದಾರೆ.
ಮೂಲತಃ ಮುಂಬೈನವರೇ ಆಗಿರುವ ಸಮೀರ್ ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಸಮೀರ್-ಕ್ರಾಂತಿ ರೇಡ್ಕರ್ ದಂಪತಿಗೆ ಅವಳಿ ಮಕ್ಕಳಿದ್ದಾರೆ. 42 ವರ್ಷದ ಸಮೀರ್ ವಾಂಖೆಡೆ ಅವರು ಸಾರ್ವಜನಿಕ ಅಧಿಕಾರಿಯಾಗಿ ತೋರಿದ ದಕ್ಷತೆಗಾಗಿ ಮಹಾರಾಷ್ಟ್ರದ ಜಮದಾರ್ ಬಾಪು ಲಕ್ಷ್ಮಣ್ ಲಮಖೆಡೆ ಅವಾರ್ಡ್ ಕೂಡ ಬಂದಿದೆ.
ಮುಂಬಯಿನಲ್ಲಿ ಮಾದಕ ದ್ರವ್ಯ ಮಾರಾಟ, ಸೇವನೆ ವಿರುದ್ಧ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವ ವಾಂಖೆಡೆಗೆ ಸಾಜರ್ವನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಅವರು ತಮ್ಮ ಕೆಲಸದಲ್ಲಿ ತೋರುತ್ತಿರುವ ಧೈರ್ಯ, ಸ್ಥೈರ್ಯ, ಕರ್ತವ್ಯ ಪ್ರಜ್ಞೆಘಿ, ವೃತ್ತಿಪರತೆಯೇ ಅವರಿಗೆ ‘ಗಣ್ಯ’ ಸ್ಥಾನವು ಲಭ್ಯವಾಗುವಂತೆ ಮಾಡಿದೆ. ಆದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಯಾವ ಅಧಿಕಾರಿಯಾಗಿ ಪ್ರಮಾಣಿಕವಾಗಿ, ನಿರ್ಭೀತಿಯಿಂದ ಕೆಲಸ ಮಾಡಲು ಆರಂಭಿಸುತ್ತಾನೋ ಆಗ ಆತನನ್ನು ಹಿಂದಕ್ಕೆ ಎಳೆಯುವ ಪ್ರಯತ್ನಗಳು ಬೇಕಾದಷ್ಟು ನಡೆಯುತ್ತವೆ. ಇದಕ್ಕೆ ವಾಂಖೆಡೆ ಕೂಡ ಅವರು ಹೊರತಾಗಿಲ್ಲಘಿ. ಈಗಾಗಲೇ ಅದು ಅವರ ಅನುಭವವಕ್ಕೂ ಬಂದಿದೆ. ಇದು ವ್ಯವಸ್ಥೆಯ ದೋಷ. ಇದೆಲ್ಲವನ್ನೂ ಮೀರಿ ಮುನ್ನಡೆಯುವ ಛಾತಿ ವಾಂಖೆಡೆ ಅವರಿಗಿದೆ ಎಂಬುದು ಈಗಾಗಲೇ ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.
ಈ ಲೇಖನವು ವಿಜಯ ಕರ್ನಾಟಕದ, 2021ರ ಅಕ್ಟೋಬರ್ 24ರ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ