ಬುಧವಾರ, ನವೆಂಬರ್ 13, 2019

Keep Children Safe: ಅಪಾಯಕಾರಿ ವಸ್ತುಗಳು ಮಕ್ಕಳ ಕೈಗೆ ಸಿಗದಂತಿರಲಿ

- ಮಲ್ಲಿಕಾರ್ಜುನ ತಿಪ್ಪಾರ

ಮನೆ ತುಂಬ ಮಕ್ಕಳು ಆಟ ಆಡಿಕೊಂಡು, ಓಡಾಡಿಕೊಂಡಿರೋದನ್ನು ನೋಡೋದೇ ಖುಷಿ ಮತ್ತು ಚಂದ. ಆದರೆ, ಸ್ವಲ್ಪವೇ ಎಚ್ಚರ ತಪ್ಪಿದರೂ ಪೋಷಕರ ಈ ಖುಷಿ ಕ್ಷಣದಲ್ಲೇ ಮಾಯವಾಗಿ ಕಣ್ಣೀರು ಸುರಿಸಬೇಕಾಗುತ್ತದೆ.

ಇದಕ್ಕೆ ತಾಜಾ ಉದಾಹರಣೆ ಎಂದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದುರ್ಗದ ಹಳ್ಳಿಯಲ್ಲಿ ಅಗಸ್ತ್ಯ ಎಂಬ 3 ವರ್ಷದ ಮಗುವೊಂದು ಜ್ಯೂಸ್‌ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಮೃತಪಟ್ಟ ಪ್ರಕರಣ. ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ನಾಣ್ಯ ನುಂಗಿದ ಮಗು, ಮೇಲಿಂದ ಮಗು ಬಿದ್ದ ಸಾವು, ಆಡಲು
ಹೋಗಿ ಸಂಪ್‌ಗೆ ಬಿದ್ದ ಮಗು ಇತ್ಯಾದಿ ಸುದ್ದಿಗಳನ್ನು ನೀವು ಓದಿರುತ್ತೀರಿ. ಇವೆಲ್ಲವೂ ಪೋಷಕರು ಎಚ್ಚರ ತಪ್ಪಿದಾಗ, ಬೇಜವಾಬ್ದಾರಿಯಿಂದ ಇದ್ದಾಗ ನಡೆದ ದುರ್ಘಟನೆಗಳೇ ಆಗಿರುತ್ತವೆ. ಹಾಗಾಗಿ, ಮಕ್ಕಳ ಪಾಲನೆ, ಪೋಷಣೆಯಲ್ಲಿ ಅದರಲ್ಲೂ ಐದು ವರ್ಷದೊಳಗಿನ ಮಕ್ಕಳ ವಿಷಯದಲ್ಲಿ ಹೆಚ್ಚು ಜಾಗರೂಕವಾಗಿರಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.

ಮಕ್ಕಳಿಗೆ ಹಾನಿಯುಂಟು ಮಾಡುವ ಯಾವುದೇ ವಸ್ತುಗಳು ಅವರ ಕೈಸಿಗದಂತೆ ನೋಡಿಕೊಂಡರೆ ನೀವು ಅರ್ಧ ಗೆದ್ದಂತೆ. ಹಾಗಾದರೆ, ಮಕ್ಕಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ? ಇದಕ್ಕೇನೂ ಮಹಾ ಜ್ಞಾನ ಬೇಕಾಗಿಲ್ಲ; ಒಂದಿಷ್ಟು ಸಾಮಾನ್ಯ ಜ್ಞಾನ ಇದ್ದರೆ ಸಾಕು. ಮಗುವಿಗೆ ಅಪಾಯ ತಂದೊಡ್ಡಬಹುದಾದ ವಸ್ತುಗಳನ್ನು ಗುರುತಿಸಿದರೆ ಸಾಕು. ನೀರು ಮತ್ತು ಬೆಂಕಿ ಹತ್ತಿರ ಮಕ್ಕಳು ಸುಳಿಯದಂತೆ ನೋಡಿಕೊಳ್ಳಬೇಕು. ಯಾವಾಗಲೂ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ
ಇಟ್ಟರೆ ಸಂಭಾವ್ಯ ಯಾವುದೇ ಅಪಾಯವನ್ನು ತಪ್ಪಿಸಬಹುದು.

ಅಪಾಯಕಾರಿ ವಸ್ತುಗಳು ಮಕ್ಕಳ ಕೈಗೆ ಸಿಗದಿರಲಿ

ನಾಣ್ಯ, ಬಟನ್‌, ಕ್ವಾಯಿನ್‌ ಬ್ಯಾಟರಿ: ಮಕ್ಕಳ ಗಂಟಲಲ್ಲಿ ನಾಣ್ಯ ಸಿಕ್ಕಿ ಹಾಕಿಕೊಂಡು ಅಸು ನೀಗಿದ ಉದಾಹರಣೆಗಳಿವೆ. ಹಾಗಾಗಿ ನಾಣ್ಯಗಳಿಂದ ದೂರ ಇರಲಿ. ಬಟನ್‌ (ಗುಂಡಿ), ಕ್ವಾಯಿನ್‌ ಗಾತ್ರದ ಬ್ಯಾಟರಿ ಸಿಗದಂತಿರಲಿ. ಸಿಂಗಿಂಗ್‌ ಗ್ರೀಟಿಂಗ್‌ ಕಾರ್ಡ್ಸ್, ರಿಮೋಟ್‌ ಕಂಟ್ರೋಲ್‌, ವಾಚ್‌ಗಳು, ಹಿಯರಿಂಗ್‌ ಸಾಧನಗಳು, ಡಿಜಿಟಲ್‌ ಸ್ಕೇಲ್ಸ್‌, ಥರ್ಮೋ ಮೀಟರ್ಸ್‌, ಕ್ಯಾಲ್ಕುಲೇಟರ್‌, ಆಟಿಕೆಗಳು, ಲೈಟ್‌ ಅಪ್‌ ಬಟನ್ಸ್‌ಗಳಲ್ಲಿ ಕ್ವಾಯಿನ್‌ ಗಾತ್ರದ ಬ್ಯಾಟರಿಗಳು ಇರುತ್ತವೆ.

ಆಟಿಕೆಗಳು: ಮ್ಯಾಗ್ನೆಟ್‌ ಮತ್ತು ಕ್ವಾಯಿನ್‌ ಬ್ಯಾಟರಿಗಳಿಲ್ಲದ ಆಟಿಕೆಗಳೂ ಮಕ್ಕಳ ಪ್ರಾಣಕ್ಕೆ ಎರವಾಗಬಹುದು. ಗಟ್ಟಿಮುಟ್ಟಾದ ಆಟಿಕೆಗಳಿರಲಿ. ಆಟಿಕೆಯ ಭಾಗಗಳು ಸುಲಭವಾಗಿ
ಕಿತ್ತು ಬರುವಂತಿರಬಾರದು. ಆಟಿಕೆಗಳಲ್ಲಿರುವ ಮ್ಯಾಗ್ನೆಟ್‌ಗಳನ್ನು ತೆಗೆದಿಡಿ. ಹೈ ಪವರ್‌ ಮ್ಯಾಗ್ನೆಟ್‌ಗಳು ಹೆಚ್ಚು ಅಪಾಯಕಾರಿ.

ಬಾತ್‌ಟಬ್ಸ್‌, ಟಾಯ್ಲೆಟ್ಸ್‌, ಬಕೆಟ್‌: ಮಕ್ಕಳನ್ನು ಒಂಟಿಯಾಗಿ ಬಾತ್‌ಟಬ್‌ಗೆ ಬಿಡಬೇಡಿ. ನಿಮ್ಮ ಬಾತ್‌ರೂಮ್‌ ಬಾಗಿಲುಗಳು ಯಾವಾಗಲೂ ಮುಚ್ಚಿರಲಿ. ಟಾಯ್ಲೆಟ್‌ ಸೀಟ್‌ ಕವರ್‌ ಆಗಿರಲಿ. ಆಯ ತಪ್ಪಿ ಕಮೋಡ್‌ನೊಳಗೆ ಮಕ್ಕಳ ಬಿದ್ದ ಉದಾಹರಣೆಗಳಿವೆ. ನೀರು ತುಂಬಿದ ದೊಡ್ಡ ಗಾತ್ರ ಬಕೆಟ್‌ಗಳತ್ತ ಹೋಗದಂತೆ ನೋಡಿಕೊಳ್ಳಿ.

ಔಷಧಗಳು, ಟ್ಯಾಬ್ಲೆಟ್ಸ್‌: ಮಕ್ಕಳ ಕೈಗೆ ಟ್ಯಾಬ್ಲೆಟ್‌, ಟಾನಿಕ್‌ ಬಾಟಲ್‌ಗಳು ಮತ್ತಿತರ ಔಷಧಗಳು ಸಿಗದಂತಿರಲಿ. ಮಕ್ಕಳ ಮುಂದೆ ನೀವು ಔಷಧವಾಗಲಿ, ಟ್ಯಾಬ್ಲೆಟ್‌ ಆಗಲಿ ಸೇವಿಸಲು ಹೋಗಬೇಡಿ. ಮಗು ನಿಮ್ಮನ್ನು ಅನುಕರಿಸುವ ಸಾಧ್ಯತೆ ಹೆಚ್ಚು.

ಬಾತ್‌ರೂಂ ಕ್ಲೀನರ್‌ಗಳು: ಸಾಬೂನುಗಳು, ಬ್ಲೀಚಿಂಗ್‌, ಬಾತ್‌ರೂಂ ಕ್ಲೀನ್‌ಗೆ ಬಳಸುವ ಇತರ ಯಾವುದೇ ರಾಸಾಯನಿಕ ಪದಾರ್ಥಗಳು ಮಕ್ಕಳಿಗೆ ನಿಲುಕದಂತೆ ನೋಡಿಕೊಳ್ಳಿ.

ವಸ್ತುಗಳು ಬೀಳದಂತಿರಲಿ: ಮಗು ಎಂದ ಮೇಲೆ ಅದು ಮನೆ ತುಂಬ ಓಡಾಡಿಕೊಂಡಿರುತ್ತದೆ. ಹಾಗಾಗಿ, ಯಾವುದೇ ವಸ್ತುಗಳು ಸುಲಭವಾಗಿ ನೆಲಕ್ಕೆ ಬೀಳದಂತೆ ಇರಲಿ. ಇಲ್ಲದಿದ್ದರೆ ಆಟವಾಡುವ ಹುಮ್ಮಸ್ಸಿನಲ್ಲಿ ಮನೆಯ ಯಾವುದೇ ವಸ್ತು ಹಿಡಿದು ಜಗ್ಗಿದರೆ ಅದು ಅದರ ಮೇಲೆ ಬೀಳುವ ಸಾಧ್ಯತೆಗಳಿರುತ್ತವೆ. ಅಂದರೆ ಫರ್ನಿಚರ್‌, ಟಿವಿಗಳು, ಡ್ರೆಸರ್ಸ್‌, ಬುಕ್‌ಗಳು ಇತ್ಯಾದಿ.

ವಾಲ್‌ ಪ್ಲಗ್‌, ವೈರ್‌, ಚಾರ್ಜರ್‌: ಈ ವಿಷಯದಲ್ಲಿ ಪೋಷಕರು ಬಹಳ ಎಚ್ಚರವಾಗಿರಬೇಕು. ಮಕ್ಕಳಿಗೆ ವಾಲ್‌ಪ್ಲಗ್‌ಗಳು, ಎಲೆಕ್ಟ್ರಿಕಲ್‌ ವೈರ್‌, ಮೊಬೈಲ್‌ ಚಾರ್ಜರ್‌ಗಳು ಎಟುಕದಂತಿರಲಿ. ಬಾತ್‌ಟಬ್‌, ಸಿಂಕ್‌ಗಳ ಹತ್ತಿರ ಎಲೆಕ್ಟ್ರಿಕಲ್‌ ಸಲಕರಣೆಗಳು ಇರದಿರಲಿ. ಮಕ್ಕಳಿಗೆ ಯಾವುದ ಸ್ವಿಚ್‌ಗಳನ್ನು ಆನ್‌ ಅಥವಾ ಆಫ್‌ ಮಾಡಲು ಹೇಳಬೇಡಿ.

ಚಾಕು, ಹರಿತ ವಸ್ತುಗಳು: ಮಕ್ಕಳಿಗೆ ಅಡಿಗೆ ಮನೆ ಯಾವಾಗಲೂ ಕುತೂಹಲದ ಕಣಜ. ಅಲ್ಲಿರುವ ಚಾಕು ಮತ್ತು ಇತರೆ ಹರಿತವಾದ ವಸ್ತುಗಳು ಅವರ ಕೈಗೆ ಸಿಗದಿರಲಿ. ಚೂಪಾದ ಪೆನ್ಸಿಲ್‌ಗಳು ಒಮ್ಮೊಮ್ಮೆ ಮಕ್ಕಳಿಗೆ ಗಾಯವುಂಟು ಮಾಡಬಹುದು. ಪೆನ್ಸಿಲ್‌ ಹೇಗೆ ಬಳಸಬೇಕು ಎಂಬುದನ್ನು ಹೇಳಿಕೊಡಬೇಕು.

ಗ್ಯಾಸ್‌ ಸಿಲಿಂಡರ್‌, ಸ್ಟೋವ್‌: ಅಡುಗೆ ಮನೆಯಲ್ಲಿರುವ ಸ್ಟೋವ್‌ ಹತ್ತಿರ ಮಕ್ಕಳು ಸುಳಿಯದಂತೆ ನೋಡಿಕೊಳ್ಳಿ. ಹಾಗೆಯೇ ಅಡುಗೆ ಸಿಲಿಂಡರ್‌ಗಳು ಕೂಡ ಮಕ್ಕಳಿಗೆ ಗೊತ್ತಾಗದಂತೆ ಇರಲಿ.

ಕ್ರಿಮಿನಾಶಕ, ಪೆಟ್ರೋಲ್: ಈ ವಿಷಯದಲ್ಲಿ ಹೆಚ್ಚು ಜಾಗೂರಕರಾಗಿರಬೇಕು. ಕ್ರಿಮಿನಾಶಕಗಳು, ಬೆಳೆಗೆ ಸಿಂಪಡಿಸುವ ಇತರೆ ಯಾವುದೇ ರಾಸಾಯನಿಕಗಳು ದೂರವಿಡಿ. ಪೆಟ್ರೋಲ್‌ ಮತ್ತು ಡೀಸೆಲ್ ಸಂಗ್ರಹ ಬಾಟಲ್‌ಗಳು ಮಕ್ಕಳ ಕಣ್ಣಿಗೆ ಬೀಳದಂತಿರಲಿ.

ಎತ್ತರ ಏರದಿರಲಿ: ಮಕ್ಕಳು ಒಂಟಿಯಾಗಿ ಸ್ಟೆಪ್‌ಗಳು, ಮಾಳಿಗೆ ಮೇಲೆ ಹೋಗದಂತೆ ನೋಡಿಕೊಳ್ಳಿ. ಆಡುತ್ತಾ ಮೇಲಿಂದ ಬಿದ್ದರೆ ಅಪಾಯ ಗ್ಯಾರಂಟಿ.

ಈ ವರದಿಯು ವಿಜಯ ಕರ್ನಾಟಕದ 2019ರ ನವೆಂಬರ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


1 ಕಾಮೆಂಟ್‌:

ವಿ.ರಾ.ಹೆ. ಹೇಳಿದರು...

ಉಪಯುಕ್ತ ಮಾಹಿತಿ. ನನ್ನ ಪುಟ್ಟ ಮಗನನ್ನ ಇದೇ ತರ ಕಾಯ್ದುಕೊಳ್ಳುವ ಪರಿಸ್ಥಿತಿ ಇದೆ ನಮಗೆ ಸದ್ಯಕ್ಕೆ:)