‘ಭಾರತೀಯ ವಾರೆನ್ ಬಫೆಟ್’ ರಾಕೇಶ್ ಜುಂಜುನ್‌ವಾಲಾ ಅವರೀಗ ‘ಆಕಾಶ’ಕ್ಕೆ ಏಣಿ ಹಾಕಲು ಅಣಿಯಾಗುತ್ತಿದ್ದಾರೆ. ಷೇರುಪೇಟೆ ಚತುರ ಹೂಡಿಕೆದಾರನ ವಿಮಾನಯಾನ ಸಂಸ್ಥೆಗೆ ಸಕ್ಸೆಸ್ ಸಿಗುತ್ತಾ?
-ಮಲ್ಲಿಕಾರ್ಜುನ ತಿಪ್ಪಾರ
ಷೇರುಪೇಟೆ ವಹಿವಾಟು ಬಲ್ಲವರಿಗೆ, ಹೂಡಿಕೆದಾರರ ವಲಯಕ್ಕೆ ರಾಕೇಶ್ ಜುಂಜುನ್‌ವಾಲಾ ಚಿರಪರಿಚಿತ ಹೆಸರು. ಆದರೆ, ಸಾಮಾನ್ಯರಿಗೆ ಅವರ ಬಗ್ಗೆ ಗೊತ್ತಾಗಿದ್ದು ಅಗ್ಗದ ವಿಮಾನಯಾನ ಸಂಸ್ಥೆ ಆರಂಭಿಸುವ ಬಗ್ಗೆ ಘೋಷಣೆ ಮಾಡಿದಾಗಲೇ!
‘ಭಾರತದ ವಾರೆನ್ ಬಫೆಟ್’ ಎಂದು ಕರೆಸಿಕೊಳ್ಳುವ 61 ವರ್ಷದ ಈ ಚಾಣಾಕ್ಷ ಹೂಡಿಕೆದಾರ ಇಡುವ ನಡೆಗಳೇ ನಿಗೂಢ. ಅವರ ಈ ಗುಣಕ್ಕೆ ಅಲ್ಟ್ರಾ ಲೋ ಕಾಸ್ಟ್ ಏರ್‌ಲೈನ್ ಸ್ಥಾಪನೆಯೇ ಘೋಷಣೆಯೇ ಸಾಕ್ಷಿ. ಯಾಕೆಂದರೆ, ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಇಡೀ ವಿಮಾನಯಾನ ವಲಯದ ಮೇಲೆ ‘ಆಕಾಶ’ವೇ ಕಳಚಿ ಬಿದ್ದಿದೆ. ಅದರಿಂದ ಹೊರಬರಲು ಹರಸಾಹಸ ಪಡುತ್ತಿದೆ. ಸಾಂಕ್ರಾಮಿಕ ಪರಿಸ್ಥಿತಿ ಶುರುವಾಗುವ ಕೆಲವು ವರ್ಷಗಳ ಮೊದಲೇ ಕಿಂಗ್ ಫಿಶರ್ ಸಂಸ್ಥೆ ಬಾಗಿಲು ಹಾಕಿದ್ದರೆ, 2019ರಲ್ಲಿಜೆಟ್ ಏರ್‌ವೇಸ್ ಕೂಡ ಸೇವೆ ರದ್ದುಪಡಿಸಿತ್ತು. ಜೊತೆಗೆ, ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡ ಲಾಭದಲ್ಲಿಲ್ಲ. ಟಾಟಾ ಒಡೆತನದ ವಿಸ್ತಾರ, ಸ್ಪೈಸ್‌ಜೆಟ್, ಇಂಡಿಗೋ, ಏರ್ ಏಷ್ಯಾ ಸೇರಿ ಕೆಲವು ಸಂಸ್ಥೆಗಳು ಸೇವೆಯನ್ನು ಒದಗಿಸುತ್ತಿವೆ. ಬಹುಶಃ ಕೊರೊನಾದಿಂದ ಅತಿ ಹೆಚ್ಚು ಹೊಡೆತ ಬಿದ್ದಿರುವುದು ವಿಮಾನಯಾನ ಕ್ಷೇತ್ರದ ಮೇಲೆ. ಹಾಗಾಗಿ, ಈ ಕ್ಷೇತ್ರದಲ್ಲಿಹೂಡಿಕೆ ಮಾಡುತ್ತಿರುವ ‘ಬಿಗ್ ಬುಲ್’ ರಾಕೇಶ್ ಜುಂಜುನ್‌ವಾಲಾ ಅವರ ನಡೆ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ.
ಇಂಥ ವಿಷಮ ಪರಿಸ್ಥಿತಿಯಲ್ಲಿ ಈತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಆರಂಭಿಸಲು ಹೊರಟಿದ್ದಾರೆ ಎಂದರೆ ಅವರ ಲೆಕ್ಕಾಚಾರದ ಬಗ್ಗೆ ಯೋಚಿಸಲೇಬೇಕಾಗುತ್ತದೆ. ಅವರ ಈ ಸಾಹಸಕ್ಕೆ ಇಂಡಿಗೋ ಹಾಗೂ ಜೆಟ್‌ವೇಸ್‌ನ ಮಾಜಿ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ. ತಾವು ಸ್ಥಾಪಿಸಲು ಹೊರಟಿರುವ ವಿಮಾನಯಾನ ಸಂಸ್ಥೆಗೆ ರಾಕೇಶ್, ‘ಆಕಾಶ್ ಏರ್’ ಎಂದು ನಾಮಕರಣ ಮಾಡಲಿದ್ದಾರೆ. ಈ ಸಂಸ್ಥೆಯಲ್ಲಿಅವರು ಶೇ.40 ಪಾಲು ಹೊಂದಲಿದ್ದಾರೆ. ಕೆಲವೇ ದಿನಗಳಲ್ಲಿಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡುವ ಸಾಧ್ಯತೆಯೂ ಇದೆ.
ದೊಡ್ಡ ವಿಮಾನ ತಯಾರಿಕಾ ಕಂಪನಿ ಎನಿಸಿಕೊಂಡಿರುವ ಬೋಯಿಂಗ್ ಭಾರತೀಯ ಆಕಾಶದಲ್ಲಿಮತ್ತೆ ರೆಕ್ಕೆ ಬಿಚ್ಚಲು ಜುಂಜುನ್‌ವಾಲಾ ಆರಂಭಿಸಲಿರುವ ಸಂಸ್ಥೆ ಬಲ ನೀಡುವ ಸಾಧ್ಯತೆ ಇದೆ. ಯಾಕೆಂದರೆ, ಭಾರತದಲ್ಲಿಜೆಟ್ ಏರ್‌ವೇಸ್ ಬೋಯಿಂಗ್‌ನ ಅತಿ ದೊಡ್ಡ ಗ್ರಾಹಕನಾಗಿತ್ತು. ಅದು ಬಾಗಿಲು ಹಾಕಿದ ಮೇಲೆ ಭಾರತದಲ್ಲಿಸ್ಪೈಸ್‌ಜೆಟ್ ಬಿಟ್ಟು ಬೋಯಿಂಗ್‌ಗೆ ಅಂಥ ಹೇಳಿಕೊಳ್ಳುವ ಗ್ರಾಹಕರಿರಲಿಲ್ಲ. ಉಳಿದ ವಿಯಾನಯಾನ ಕಂಪನಿಗಳು, ಏರ್‌ಬಸ್ ತಯಾರಿಸುವ ಕಡಿಮೆ ಅಗಲದ ವಿಮಾನಗಳನ್ನೇ ಹೆಚ್ಚಾಗಿ ಬಳಸುತ್ತಿವೆ. ಹಾಗಾಗಿ, ‘ಆಕಾಶ್ ಏರ್’ನಿಂದಾಗಿ ಭಾರತೀಯ ಆಕಾಶದಲ್ಲಿಬೋಯಿಂಗ್ ವರ್ಸಸ್ ಏರ್‌ಬಸ್ ಸ್ಪರ್ಧೆಯನ್ನು ಮತ್ತೆ ಕಾಣಬಹುದು. ಮುಂದಿನ ನಾಲ್ಕು ವರ್ಷಗಳಲ್ಲಿ180 ಆಸನಗಳುಳ್ಳ ಸುಮಾರು 70 ವಿಮಾನಗಳನ್ನು ಖರೀದಿಸುವ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ.
‘ಫೋರ್ಬ್ಸ್ ಇಂಡಿಯಾ’ ಪ್ರಕಾರ ರಾಕೇಶ್ ಭಾರತದ 48ನೇ ಶ್ರೀಮಂತ ವ್ಯಕ್ತಿ. ಸುಮಾರು 34,387 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಸಾಧಾರಣ ವ್ಯಕ್ತಿಯೊಬ್ಬ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವ ಕತೆಯೂ ರಣರೋಚಕವಾಗಿದೆ. ರಾಕೇಶ್ ಅವರ ತಂದೆ ಮುಂಬೈಯಲ್ಲಿಆದಾಯ ತೆರಿಗೆ ಅಧಿಕಾರಿಯಾಗಿದ್ದರು. ಇವರದ್ದು ಮಧ್ಯಮ ವರ್ಗದ ಕುಟುಂಬ. ರಾಕೇಶ್ ಹುಟ್ಟಿದ್ದು 1960 ಜುಲೈ 5ರಂದು ಇಂದಿನ ತೆಲಂಗಾಣದ ಹೈದ್ರಾಬಾದ್‌ನಲ್ಲಿ. ಬೆಳೆದಿದ್ದೆಲ್ಲಮುಂಬಯಿಯಲ್ಲಿ. ತಂದೆ ಆದಾಯ ತೆರಿಗೆ ಅಧಿಕಾರಿಯಾಗಿದ್ದರಿಂದ ಮನೆಯಲ್ಲಿಷೇರು ಪೇಟೆ ಬಗೆಗಿನ ಮಾತುಕತೆಗಳು ಸಾಮಾನ್ಯವಾಗಿದ್ದವು. ಅದು ಯುವಕ ರಾಕೇಶ್ ಕಿವಿಯ ಮೇಲೆ ಬೀಳುತ್ತಿತ್ತು. ಪರಿಣಾಮ ಕಾಲೇಜಿನಲ್ಲಿರುವಾಗಲೇ ರಾಕೇಶ್‌ಗೆ ಷೇರು ಪೇಟೆ ವ್ಯವಹಾರ, ಹೂಡಿಕೆಯ ಮೇಲೆ ಆಸಕ್ತಿ ಬೆಳೆಯಿತು. 1985ರಲ್ಲಿಸಿಡನ್‌ಹಮ್ ಕಾಲೇಜಿನಿಂದ ಪದವಿ ಪಡೆದ ಬಳಿಕ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ ಆಫ್ ಇಂಡಿಯಾ ಸಂಸ್ಥೆ ಸೇರಿದರು.
1986ರಲ್ಲಿಅವರು ಕೇವಲ 43 ರೂಪಾಯಿಗೆ 5000 ಟಾಟಾ ಟೀ ಷೇರುಗಳನ್ನು ಖರೀದಿಸಿದ್ದರು. ಮೂರು ತಿಂಗಳ ಬಳಿಕ ಷೇರು ಮೌಲ್ಯ 143 ರೂ.ಗೆ ಏರಿಕೆಯಾಯಿತು. ಹೂಡಿಕೆಗೆಗಿಂತ ಮೂರು ಪಟ್ಟು ಲಾಭ ಮಾಡಿಕೊಂಡ ರಾಕೇಶ್ ಮುಂದಿನ ಮೂರು ವರ್ಷಗಳಲ್ಲಿಷೇರು ಹೂಡಿಕೆಗಳಲ್ಲಿ20ರಿಂದ 25 ಲಕ್ಷ ರೂಪಾಯಿ ಲಾಭ ಮಾಡಿಕೊಂಡರಂತೆ!
1987ರಲ್ಲಿರಾಕೇಶ್ ಅವರು ರೇಖಾ ಎಂಬವರನ್ನು ವಿವಾಹವಾದರು. ಪತ್ನಿ ಕೂಡ ಷೇರು ಪೇಟೆ ಹೂಡಿಕೆದಾರೆ. 2003ರಲ್ಲಿಇವರಿಬ್ಬರು ತಮ್ಮದೇ ಸ್ಟಾಕ್ ಟ್ರೇಡಿಂಗ್ ಕಂಪನಿ ಶುರು ಮಾಡಿದರು. ಅದಕ್ಕೆ ತಮ್ಮಿಬ್ಬರ ಹೆಸರಿನ ಮೊದಲನೇ ಅಕ್ಷ ರಗಳನ್ನು ಸೇರಿಸಿ ‘ರೇರಾ(್ಕಛ್ಟಿa) ಎಂಟರ್‌ಪ್ರೈಸಸ್’ ಎಂದು ಕರೆದಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಷೇರುಪೇಟೆ ವ್ಯವಹಾರದಲ್ಲಿರಾಕೇಶ್ ಅವರನ್ನೇ ಅನುಸರಿಸುವ ಬಹುದೊಡ್ಡ ವರ್ಗವೇ ಇದೆ. ಅವರ ಒಂದು ಸಣ್ಣ ಇಶಾರೆಯೂ ಕಂಪನಕ್ಕೆ ಕಾರಣವಾಗುತ್ತದೆ. ತಮ್ಮ ಖಾಸಗಿ ರೇರಾ ಸ್ಟಾಕ್ ಟ್ರೇಡಿಂಗ್ ಕಂಪನಿ ಮೂಲಕ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಟೈಟನ್, ಕ್ರಿಸಿಲ್, ಅರಬಿಂದೋ ಫಾರ್ಮಾ, ಪ್ರಜ್ ಇಂಡಸ್ಟ್ರೀಜ್, ಎನ್‌ಸಿಸಿ, ಆಪ್ಟೇಕ್ ಲಿ., ಅಯಾನ್ ಎಕ್ಸ್‌ಚೇಂಜ್, ಎಂಸಿಎಕ್ಸ್, ಫೋರ್ಟಿಸ್ ಹೆಲ್ತ್‌ಕೇರ್, ಲುಪಿನ್, ವಿಐಪಿ ಇಂಡಸ್ಟ್ರೀಜ್, ಜಿಯೋಜಿತ್ ಫೈನಾನ್ಷಿಯಲ್ ಸವೀರ್‍ಸಸ್, ರಾರಯಲಿಸ್ ಇಂಡಿಯಾ, ಜುಬಿಲಿಯೆಂಟ್ ಲೈಫ್ ಸೈನ್ಸೀಸ್, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಹೀಗೆ ಹಲವಾರು ಕಂಪನಿಗಳಲ್ಲಿರಾಕೇಶ್ ಹೂಡಿಕೆ ಮಾಡಿದ್ದಾರೆ. ಜೊತೆಗೆ, ಷೇರು ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆಯನ್ನೂ ಎದುರಿಸುತ್ತಿದ್ದಾರೆ!
ಷೇರುಪೇಟೆ ಬಿಟ್ಟು ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ ಬಾಲಿವುಡ್. ಹಲವು ಹಿಂದಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಶ್ರೀದೇವಿ ಅಭಿಯನದ ‘ಇಂಗ್ಲಿಷ್ ವಿಂಗ್ಲಿಷ್’, ಕರಿನಾ ಕಪೂರ್ ಅಭಿನಯದ ‘ಕೀ ಆ್ಯಂಡ್ ಕಾ’ ಚಿತ್ರಗಳನ್ನು ಹೆಸರಿಸಬಹುದು. ರಾಕೇಶ್ ಮಾನವ ಹಿತಾಕಾಂಕ್ಷಿ ಆಗಿಯೂ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಷೌಷ್ಟಿಕತೆ ಮತ್ತು ಶಿಕ್ಷ ಣಕ್ಕೆ ಸಂಬಂಧಿಸಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆದಾಯದ ಶೇ.25ರಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳುಸುತ್ತಿದ್ದಾರೆ. ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಆಶ್ರಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಮುಂಬೈಯಲ್ಲಿಕಣ್ಣಿನ ಆಸ್ಪತ್ರೆ ಕಟ್ಟಿಸಿ ಅದರ ಮೂಲಕ ಉಚಿತವಾಗಿ 15,000 ಕಣ್ಣಿನ ಚಿಕಿತ್ಸೆ ನಡೆಸುವ ಗುರಿ.
ಹೂಡಿಕೆ ಮಾಡಿದರೆ ‘ಹೊಳೆಯಲ್ಲಿಹುಣಸೆ ಹಣ್ಣು ತೊಳೆ’ದಂತೆ ಭಾವಿಸಲಾಗುತ್ತಿರುವ ವಿಮಾನಯಾನ ಕ್ಷೇತ್ರದಲ್ಲಿಹಣ ಸುರಿಯಲು ಜುಂಜುನ್‌ವಾಲಾ ಮುಂದಾಗಿದ್ದಾರೆಂದರೆ, ಅವರ ಲೆಕ್ಕಾಚಾರ ಸರಿಯಾಗೇ ಇರಬೇಕು. ಸದ್ಯ ಬಸವಳಿದಂತೆ ಕಾಣುತ್ತಿರುವ ವಿಮಾನಯಾನ ಮುಂಬರುವ ವರ್ಷಗಳಲ್ಲಿಪುಟಿದೇಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸೊರಗುತ್ತಿರುವ ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ರಾಕೇಶ್ ಜುಂಜುನ್‌ವಾಲಾ ಅವರ ಆಕಾಶ್ ಏರ್ ಸಂಸ್ಥೆ ಬಲ ನೀಡಲಿದೆ ಎಂಬ ವಿಶ್ಲೇಷಣೆಗಳೂ ನಡೆಯುತ್ತಿವೆ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಈ ವರ್ಷಾಂತ್ಯ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿಜುಂಜುನ್‌ವಾಲಾ ಅವರ ‘ಆಕಾಶ ಏರ್’ ವಿಮಾನದಲ್ಲಿಹಾರಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ