ಯಾರೋ ಗಾಲಿಬನಿಗೆ ಕೇಳಿದರು
ಮಂಗಳವಾರ, ಮೇ 18, 2021
Mirza Ghalib: ಯಾವಾಗ ಪ್ರೀತಿಸಬೇಕು?
ಭಾನುವಾರ, ಮೇ 9, 2021
BMC Commissioner Iqbal Singh Chahal: ಕೋವಿಡ್ ನಿಯಂತ್ರಣಕ್ಕೆ 'ಮುಂಬೈ ಮಾಡೆಲ್' ಸೃಷ್ಟಿಸಿದ ಚಹಲ್
ಫಿಟ್ನೆಸ್ ಫ್ರೀಕ್ ಐಎಎಸ್ ಅಧಿಕಾರಿ, ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ಅವರು ಮುಂಬೈನಲ್ಲಿ ಕೋವಿಡ್ ನಿಯಂತ್ರಣಕ್ಕೆ ತಂದು, ‘ಮುಂಬೈ ಮಾಡೆಲ್’ ಸೃಷ್ಟಿಸಿದ್ದಾರೆ.
ನರ್ಸ್ಗಳಿಲ್ಲ
ಅನ್ನೋ ಪರಿಸ್ಥಿತಿ ಎಲ್ಲ ಕಡೆ ಇದೆ. ಕೋವಿಡ್ ನಿರ್ವಹಿಸಬೇಕಾದ ಸ್ಥಳೀಯ ಸಂಸ್ಥೆಗಳು ಕೈ ಚೆಲ್ಲಿ ಕುಳಿತಿವೆ. ಅಧಿಕಾರಿಗಳಿಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಇಡೀ ವ್ಯವಸ್ಥೆಯೇ
ವಿಫಲವಾಗಿದೆ. ಒಬ್ಬರು ಇನ್ನೊಬ್ಬರು ಮೇಲೆ ದೂರುತ್ತಿದ್ದಾರೆ. ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ನಗರ ಮಾತ್ರ ಭರವಸೆಯ
ಬೆಳಕಾಗಿದೆ.
ಬೃಹನ್ ಮುಂಬಯಿ
ಮಹಾನಗರ ಪಾಲಿಕೆ(ಬಿಎಂಸಿ)ಯು ‘ಕೋವಿಡ್ ಏರುಗತಿ ರೇಖೆ’ಯನ್ನು ತಡೆ
ಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಉಳಿದ ನಗರಗಳಿಗೆ ದಾರಿದೀಪವಾಗಿದೆ. ಸ್ವತಃ ಸುಪ್ರೀಂ
ಕೋರ್ಟ್, ಬಿಎಂಸಿ ಅನುಸರಿಸಿದ ಮಾದರಿಯನ್ನು ಮುಕ್ತಕಂಠದಿಂದ ಹೊಗಳಿದೆ;
ನೀವೂ ನೋಡಿ ಕಲಿಯಿರಿ ಎಂದು ತಾಕೀತು ಮಾಡಿದೆ!
ಮುಂಬಯಿಯ ಈ ಸಕ್ಸೆಸ್ ಸ್ಟೋರಿಯ
ನಾಯಕ ಇಕ್ಬಾಲ್ ಸಿಂಗ್ ಚಹಲ್. ಚಹಲ್ ಬೃಹನ್ ಮುಂಬಯಿ ಮಹಾನಗರ ಪಾಲಿಕೆಯ
ಆಯುಕ್ತರು. ಪಾಲಿಕೆ ಕಮಿಷನರ್ ಆಗಿ ಒಂದು ವರ್ಷವಷ್ಟೇ
ಆಗಿದೆ. ಈ ಕಡಿಮೆ ಅವಧಿಯಲ್ಲಿ ಅವರು ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸಿದ
ರೀತಿ ಮಾತ್ರ ಅನನ್ಯ. ಒಂದು ಕಾಲು ಕೋಟಿ ಜನಸಂಖ್ಯೆ ಇರುವ ದೇಶದ ಅತಿದೊಡ್ಡ
ನಗರ, 39,038.83 ಕೋಟಿ ರೂಪಾಯಿ ಬಜೆಟ್ ಮಂಡಿಸುವ
ಪಾಲಿಕೆಯ ಆಡಳಿತವೇನೂ ತಮಾಷೆಯಲ್ಲ. ನಮ್ಮ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್
10 ಸಾವಿರ ಕೋಟಿ ರೂ. ಅಚೆ ಈಚೆ ಇದೆ! ಇಂಥ ಮುಂಬಯಿಗೆ ಕೋವಿಡ್ ಅಪ್ಪಳಿಸಿದರೆ ಅದನ್ನು ಹತೋಟಿಗೆ ತರುವುದು
ಕೂಡ ಅಷ್ಟು ಸಲೀಸಲ್ಲ. ಆದರೆ, ಕಮಿಷನರ್
ಚಹಲ್ ಮತ್ತು ಅವರ ತಂಡ ದಿನದ 24 ಗಂಟೆಯೂ ಕೆಲಸ ಮಾಡಿ, ಅಸಾಧ್ಯವಾದುದನ್ನು ಸಾಧಿಸಿ ತೋರಿಸುತ್ತಿದೆ,
ಬಿಎಂಸಿಯ ಕಾರ್ಯಕ್ಕೆ ಅಲ್ಲಿನ ರಾಜ್ಯ ಸರಕಾರವೂ ಅಷ್ಟೇ ಸಹಾಯ, ಸಹಕಾರ ನೀಡುತ್ತಿದೆ.
ಚಹಲ್ ಅವರೇನೂ
ಮಂತ್ರದಂಡ ಪ್ರಯೋಗಿಸಿ, ರಾತ್ರೋರಾತ್ರಿ ಚಮತ್ಕಾರ ಮಾಡಲಿಲ್ಲ.
ಕಳೆದ ವರ್ಷ ಮೊದಲನೆ ಅಲೆ ಏರುಗತಿಯಲ್ಲಿದ್ದಾಗಲೇ ಚಹಲ್ ಬಿಎಂಸಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಆ ಕ್ಷಣದಿಂದಲೇ
ಕೋವಿಡ್ ನಿರ್ವಹಣೆಗೆ ತಮ್ಮನ್ನು ಒಡ್ಡಿಕೊಂಡರು. ಮೊದಲನೇ ಅಲೆ ವೇಳೆ ಮಾಡಿದ ತಪ್ಪುಗಳಿಂದ ಪಾಠ ಕಲಿತು, ಸ್ಥಳೀಯಾಡಳಿತವನ್ನು
ಎರಡನೇ ಅಲೆಗೆ ಸಜ್ಜುಗೊಳಿಸಿದರು. ಎರಡನೇ ಅಲೆಯ ಗಂಭೀರತೆಯನ್ನು ಗ್ರಹಿಸಿ
ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪಿಸಿದರು. ಫೆಬ್ರವರಿಯಿಂದಲೇ ಇಡೀ
ಬಿಎಂಸಿ ಯುದ್ಧ ಸನ್ನದ್ಧವಾಗಿತ್ತು!
ತ್ವರಿತ ಕೋವಿಡ್ ಟೆಸ್ಟ್ಗಳು, 24 ಗಂಟೆಯೂ ಕಾರ್ಯನಿರ್ವಹಿಸುವ 24 ವಾರ್ ರೂಮ್ಗಳು, ಎಲ್ಲರಿಗೂ ವೈದ್ಯಕೀಯ ಸೇವೆ, ಖಾಸಗಿ ಆಸ್ಪತ್ರೆಗಳ ಜತೆಗಿನ ಸಮನ್ವಯ,
ಸ್ಮಶಾನಗಳ ನಿರ್ವಹಣೆ... ಹೀಗೆ ಕೋವಿಡ್ಗೆ ಅಂತರ್ಗತವಾಗಿರುವ ಎಲ್ಲವನ್ನೂ ಬಿಎಂಸಿ ಅಚ್ಚುಕಟ್ಟಾಗಿ ನಿರ್ವಹಿಸಲು ಯಶಸ್ವಿಯಾಯಿತು.
ಅದರ ಪರಿಣಾಮ ಈಗ ಕೋವಿಡ್ ಹತೋಟಿಗೆ ‘ಮುಂಬಯಿ ಮಾಡೆಲ್’ ಸೃಷ್ಟಿಯಾಗಿ ನಿಂತಿದೆ. ಇದೆಲ್ಲದರ ಹಿಂದೆ 55 ವರ್ಷದ ಕಮಿಷನರ್ ಚಹಲ್ ದೂರದೃಷ್ಟಿ ಚಿಂತನೆ ಮತ್ತು ಪ್ರಯತ್ನಶೀಲತೆಯನ್ನು ಇಡೀ
ಜಗತ್ತೇ ಗುರುತಿಸುತ್ತಿದೆ.
ರಾಜಸ್ಥಾನದ ಜೋಧಪುರದ ಮೇಲ್ಮಧ್ಯಮ
ವರ್ಗದ ಕುಟುಂಬದಲ್ಲಿ 1966ರ ಜನವರಿ 20ರಂದು ಇಕ್ಬಾಲ್ ಸಿಂಗ್
ಚಹಲ್ ಜನಿಸಿದರು. ಶಾಲಾ ದಿನಗಳಿಂದಲೇ
ಕಲಿಕೆಯಲ್ಲಿ ಅಗ್ರಸ್ಥಾನಿ. 12ನೇ ತರಗತಿಯ ಬೋರ್ಡ್ ಎಕ್ಸಾಮ್ನಲ್ಲಿ ನ್ಯಾಷಲ್ ಮೆರಿಟ್
ಲಿಸ್ಟ್ನಲ್ಲಿ ಕಾಣಿಸಿಕೊಂಡವರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ನಲ್ಲಿ ಬಿಟೆಕ್ ಪದವಿ ಪಡೆದುಕೊಂಡಿದ್ದಾರೆ. ಹಾರ್ವರ್ಡ್ ಯೂನಿವರ್ಸಿಟಿಗೆ ತೆರಳಿ ಸಾರ್ವಜನಿಕ ಆಡಳಿತದಲ್ಲಿ
ಪದವಿ ಗಳಿಸಿದ್ದಾರೆ. ಅಲ್ಲಿಂದ ಹಿಂದಿರುಗಿದ ಬಳಿಕ 1988ರ ಯುಪಿಎಸ್ಸಿ ಪರೀಕ್ಷೆ ಬರೆದರು. ಮೊದಲ
ಯುಪಿಎಸ್ಸಿ ಪರೀಕ್ಷೆಯಲ್ಲೇ ಅತ್ಯುತ್ತಮ ಅಂಕ ಪಡೆದು ಪಾಸಾದರು.
ಮಹಾರಾಷ್ಟ್ರ ಕೆಡರ್ ಐಎಎಸ್ ಅಧಿಕಾರಿಯಾಗಿ ಸೇರ್ಪಡೆಯಾದರು.
ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿಕೆಲಸ
ಮಾಡಿರುವ ಚಹಲ್,
ಕೆಲವು ಕಾಲ ಕೇಂದ್ರ ಸೇವೆಯಲ್ಲಿಯೂ ಇದ್ದರು. ಮಹಾರಾಷ್ಟ್ರದ
ಔರಂಗಾಬಾದ್ ಮತ್ತು ಥಾಣೆಯ ಜಿಲ್ಲಾಧಿಕಾರಿಯಾಗಿ ಅವರು ಮಾಡಿದ ಕಾರ್ಯಗಳನ್ನು
ಜನ ಈಗಲೂ ನೆನೆಯುತ್ತಾರೆ. ಈ ಜಿಲ್ಲೆಗಳಲ್ಲಿನ ಕೆಲಸದಿಂದಾಗಿ ಜನರ ಅಧಿಕಾರಿ
ಎನಿಸಿಕೊಂಡರು. ಮುಂಬಯಿನ ‘ಧಾರಾವಿ’ ಏಷ್ಯಾದ ಅತಿದೊಡ್ಡ ಕೊಳಗೇರಿ. ಈ ಕೊಳಗೇರಿ ಅಭಿವೃದ್ಧಿಗೆ ಮಹಾರಾಷ್ಟ್ರ
ಸರಕಾರ ‘ಧಾರಾವಿ ರಿಡೆವಲಪ್ಮೆಂಟ್ ಪ್ರಾಜೆಕ್ಟ್’ ಆರಂಭಿಸಿ, ಸಾರಥ್ಯವನ್ನು
ಚಹಲ್ಗೆ ವಹಿಸಿತ್ತು. ಈ ಪ್ರಾಜೆಕ್ಟ್ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಕೊರೊನಾ
ಅಲೆಯಲ್ಲಿ ಧಾರಾವಿಯನ್ನು ದೊಡ್ಡ ಅಪಾಯದಿಂದ ಪಾರು ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಈ ಪ್ರಾಜೆಕ್ಟ್ನ ಯಶಸ್ಸು ಅವರನ್ನು ಬಿಎಂಸಿ ಕಮಿಷನರ್ ಹುದ್ದೆಗೆ
ಕರೆದುಕೊಂಡು ಬಂತು.
ಚಹಲ್ ಅವರನ್ನು
‘ಫಿಟ್ನೆಸ್ ಫ್ರೀಕ್’ ಎಂದೂ
ಗುರುತಿಸಲಾಗುತ್ತದೆ. ಚಹಲ್ ಫಿಜಿಕಲ್
ಫಿಟ್ ಐಎಎಸ್ ಆಫೀಸರ್!
ಹಲವು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದಾರೆ.
2004ರಿಂದಲೂ ಮುಂಬಯಿ ಮ್ಯಾರಥಾನ್ನಲ್ಲಿ ಓಡುತ್ತಿದ್ದಾರೆ.
ಯೋಗ, ಫಿಟ್ನೆಸ್, ಓಟದ ಫೋಟೊಗಳನ್ನು
ಆಗಾಗ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಷೇರ್ ಮಾಡಿಕೊಳ್ಳುತ್ತಾರೆ.
ಕೋವಿಡ್ ಅತ್ಯುತ್ತಮ
ನಿರ್ವಹಣೆಗಾಗಿ ಇಂಡೋ ಅಮೆರಿಕನ್ ಚೇಂಬರ್ಸ್ ಆಫ್ ಕಾಮರ್ಸ್(ಐಎಸಿಸಿ)
‘ಕೋವಿಡ್ ಕ್ರುಸೆಡರ್ ಅವಾರ್ಡ್-2020’
ನೀಡಿ ಗೌರವಿಸಿದೆ. ಲೋಕಮತ್ ‘ಮಹಾರಾಷ್ಟ್ರಿಯನ್ ಆಫ್ ಇಯರ್-2020’ ಸೇರಿದಂತೆ ಹಲವು
ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದಲೂ
ಗೌರವಗಳು ಸಂದಿವೆ. ಕೋವಿಡ್ ಎರಡನೇ ಅಲೆಯನ್ನು
ನಿರ್ವಹಿಸುತ್ತಲೇ ಬಿಎಂಸಿಯನ್ನು ಸಂಭಾವ್ಯ ಮೂರನೇ ಅಲೆಗೆ ಸಜ್ಜುಗೊಳಿಸುವ ಕೆಲಸವನ್ನು ಚಹಲ್
ಮಾಡುತ್ತಿದ್ದಾರೆ. ಹಲವು ತಜ್ಞರ ಪ್ರಕಾರ, ಮೂರನೇ ಅಲೆಯು ಎರಡನೇ ಅಲೆಗಿಂತಲೂ ಭೀಕರವಾಗಿದ್ದು, ಮಕ್ಕಳು ಹೆಚ್ಚು
ಅಪಾಯಕ್ಕೆ ಈಡಾಗಲಿಧಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಎಂಸಿಯು ಮಕ್ಕಳ ಕೋವಿಡ್ ಕೇರ್ ಸೆಂಟರ್ಗಳನ್ನು ಈಗಿನಿಂದಲೇ ಆರಂಭಿಸುತ್ತಿದೆ.
ಚಹಲ್ ಅವರನ್ನು
ವಿವಾದಗಳೇನೂ ಬಿಟ್ಟಿಲ್ಲ. ಶಿವಸೇನೆ ಮತ್ತು ನಟಿ ಕಂಗನಾ ರಣಾವತ್
ನಡುವಿನ ಬೀದಿ ಕಾಳಗದಲ್ಲಿ ಬಿಎಂಸಿಯೂ ಭಾಗಿಯಾಗಬೇಕಾಯಿತು. ನಿಯಮ ಮೀರಿ ಬಿಲ್ಡಿಂಗ್ ಕಟ್ಟಿದ್ದಾರೆಂದು ಬಿಎಂಸಿ ಕಂಗನಾಳ ಮನೆಯನ್ನು
ಧ್ವಂಸ ಮಾಡಿತ್ತು. ಆಗ, ಪಾಲಿಕೆ ಆಯುಕ್ತ ಚಹಲ್
ವಿರುದ್ಧವೂ ಆರೋಪಗಳು ಕೇಳಿ ಬಂದವು. ಕೋರ್ಟ್
ಕೂಡ ಪಾಲಿಕೆ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಅದೇನೇ ಇರಲಿ, ಕೋವಿಡ್ ಬಿಕ್ಕಟ್ಟನ್ನು
ನಿರ್ವಹಿಸುತ್ತಿರುವ ಅವರ ರೀತಿ ಎಲ್ಲ ಅಧಿಕಾರಿಗಳಿಗೂ ದಾರಿದೀಪವಾಗಿದೆ.
ಭಾನುವಾರ, ಮೇ 2, 2021
Nandurbar DM Dr Rajendra Bharud: 'ಪ್ರಾಣವಾಯು' ನೀಡಿದ ನಂದೂರಬಾರ್ ಡಿಸಿ ಡಾ.ರಾಜೇಂದ್ರ ಭಾರೂಡ್
ಕೋವಿಡ್ ಬಿಕ್ಕಟ್ಟಿನ ನಡುವೆ ಆಕ್ಸಿಜನ್ ಉತ್ಪಾದನೆಯಲ್ಲಿಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿರುವ ನಂದೂರಬಾರ್ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ ಅವರ ಜೀವನಗಾಥೆ ಸ್ಫೂರ್ತಿದಾಯಕ.
- ಮಲ್ಲಿಕಾರ್ಜುನ ತಿಪ್ಪಾರ
ಇಡೀ ದೇಶವೇ ಕೋವಿಡ್ ಎರಡನೇ
ಅಲೆಗೆ ಕೊಚ್ಚಿ ಹೋಗುತ್ತಿದೆ. ವ್ಯವಸ್ಥೆಯ ವೈಫಲ್ಯದ ಪರಿಣಾಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ದೊರಕದೇ ಜನರು ಸಾವಿಗೀಡಾಗುತ್ತಿದ್ದಾರೆ; ಸ್ಮಶಾನಗಳು ಗಿಜಿಗಿಡುತ್ತಿವೆ;
ದೂರದೃಷ್ಟಿ ಮತ್ತು ಸಿದ್ಧತೆಯ ಕೊರತೆಯ ಫಲವಾಗಿ ಇಡೀ ದೇಶ ಅನಾಥಪ್ರಜ್ಞೆಯನ್ನು ಎದುರಿಸುತ್ತಿದೆ.
ಇದರ ನಡುವೆ ಮಹಾರಾಷ್ಟ್ರದ ನಂದೂರಬಾರ್ ಜಿಲ್ಲೆಮಾತ್ರ
ವಿಭಿನ್ನವಾಗಿ ನಿಂತಿದೆ; ಸೋಂಕನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.
ದೂರದೃಷ್ಟಿ ಮತ್ತು ದಕ್ಷತೆಯ
ಜಿಲ್ಲಾಧಿಕಾರಿಯೊಬ್ಬರಿದ್ದರೆ ಒಂದು ಜಿಲ್ಲೆಯ ವ್ಯವಸ್ಥೆಯು ಯಾವ ರೀತಿ ಕಾರ್ಯನಿರ್ವಹಿಸಬಲ್ಲದು ಎಂಬುದಕ್ಕೆ
ನಂದೂರ್ಬಾರ್ ಜಿಲ್ಲೆ ದೃಷ್ಟಾಂತ. ಮಹಾರಾಷ್ಟ್ರದಲ್ಲಿ ಆಕ್ಸಿಜನ್
ಕೊರತೆಯಿಂದ ಜನರು ಸಾಯುತ್ತಿದ್ದ ಸಂದರ್ಭದಲ್ಲಿ ನಂದೂರಬಾರ್ ಎಂಬ ಬುಡಕಟ್ಟು ಜನರೇ ಹೆಚ್ಚಿರುವ ಜಿಲ್ಲೆ ಆಕ್ಸಿಜನ್ ಉತ್ಪಾದನೆಯಲ್ಲಿ ಸ್ವಾವಲಂಬನೆ
ಸಾಧಿಸಿ ಚಿಕಿತ್ಸೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗಿದೆ. ನಂದರೂಬಾರ್ ಯಶಸ್ಸಿನ ಹಿಂದೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ ಮತ್ತು ಅವರ ತಂಡದ ಪರಿಶ್ರಮವಿದೆ;
ದೂರದೃಷ್ಟಿಯ ಚಿಂತನೆಯಿದೆ. ಸ್ವತಃ ವೈದ್ಯರಾಗಿರುವ ರಾಜೇಂದ್ರ
ಅವರಿಗೆ ಕೊರೊನಾದಿಂದ ಉಂಟಾಗಬಹುದಾದ ಅಪಾಯದ ಸ್ಪಷ್ಟತೆ ಇತ್ತು. ತಮ್ಮ ಆಡಳಿತದ
ಜಿಲ್ಲೆಯನ್ನು ಕೊರೊನಾ ಎದುರಿಸಲು ಎಲ್ಲರಿಗಿಂತಲೂ ಮುಂಚೆಯೇ ಸನ್ನದ್ಧ ಮಾಡಿ, ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಕೋವಿಡ್-19 ಸ್ಫೋಟವಾಗುವ ಮುಂಚೆ ನಂದೂರಬಾರ್ ಜಿಲ್ಲೆಯಲ್ಲಿಒಂದೂ ಲಿಕ್ವಿಡ್ ಆಕ್ಸಿಜನ್ ತಯಾರಿಕಾ ಘಟಕಗಳು ಇರಲಿಲ್ಲ. ಕೋವಿಡ್ ಕೇಸ್ಗಳು ಇಳಿಕೆಯಾಗುತ್ತಿದ್ದಂತೆ
ಸೆಪ್ಟೆಂಬರ್ನಲ್ಲಿ ಡಾ. ರಾಜೇಂದ್ರ ಅವರು ನಂದೂರಬಾರ್
ಜಿಲ್ಲಾಸ್ಪತ್ರೆಯಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ ಲಿಕ್ವಿಡ್
ಆಕ್ಸಿಜನ್ ಘಟಕ ಸ್ಥಾಪಿಸಿದರು. ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿಮತ್ತೆ ಎರಡು ಘಟಕಗಳನ್ನು ನಿರ್ಮಿಸಿದರು.
ಪರಿಣಾಮ ಜಿಲ್ಲೆಯಲ್ಲಿ ಪ್ರತಿ ನಿಮಿಷಕ್ಕೆ 2,400 ಲೀಟರ್
ಲಿಕ್ವಿಡ್ ಆಕ್ಸಿಜನ್ ಉತ್ಪಾದನೆಯ
ಸಾಮರ್ಥ್ಯವನ್ನು ಪಡೆದುಕೊಂಡಿತು. ಮೊದಲನೇ ಅಲೆ
ವೇಳೆ ಜಿಲ್ಲೆಯಲ್ಲಿ 190 ಕೇಸ್ಗಳಿದ್ದವು.
ಆದರೆ, ಸೋಂಕಿನ ಅಪಾಯದ ಬಗ್ಗೆ ಮತ್ತು ದೂರದೃಷ್ಟಿಯ ಚಿಂತನೆಯಿಂದಾಗಿ
ಡಾ. ಭಾರೂಡ್ ಅವರು ಆಕ್ಸಿಜನ್ ಉತ್ಪಾದನೆಯಲ್ಲಿಇಡೀ ಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿದರು.
ಮಹಾರಾಷ್ಟ್ರದಲ್ಲಿ ಯಾವಾಗ ಕೋವಿಡ್ ಎರಡನೇ
ಅಲೆ ತೀವ್ರವಾಯಿತೋ ಈ ಬುಡಕಟ್ಟು ಜಿಲ್ಲೆಯಲ್ಲಿ24 ಗಂಟೆಯೊಳಗೆ
1,200 ಪ್ರಕರಣಗಳು ಪತ್ತೆಯಾದವು. ಆದರೆ, ಆಕ್ಸಿಜನ್ ಕೊರತೆಯಿಂದಾಗಿಯೇ ಯಾವುದೇ ಸಾವು ನೋವು ಸಂಭವಿಸಲಿಲ್ಲ.
ಸರಕಾರಿ ಘಟಕಗಳಿಂದ ಪ್ರತಿ ನಿಮಿಷಕ್ಕೆ 1,800 ಲೀ.,
ಖಾಸಗಿ ಕಂಪನಿಗಳಿಂದ ನಿಮಿಷಕ್ಕೆ 1,200 ಲೀ. ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಸಾಧ್ಯವಾಗಿದೆ.
ಜನರು ಇಡೀ ಜಿಲ್ಲಾಡಳಿತವನ್ನು ಹಾಡಿ ಹೊಗಳುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ ಮತ್ತು ಅವರ ತಂಡದ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಾರಂಭಿಸಿದೆ.
ದಿಲ್ಲಿ, ಮುಂಬಯಿ,
ಬೆಂಗಳೂರಿನಂಥ ಮೆಟ್ರೋ ಸಿಟಿಗಳೇ ಆಕ್ಸಿಜನ್ ಕೊರತೆಯಿಂದ
ಬಳಲುತ್ತಿವೆ. ಈ ನಗರಗಳಲ್ಲಿ ಹೆಜ್ಜೆ ಹೆಜ್ಜೆಗೂ ಆಸ್ಪತ್ರೆಗಳಿದ್ದರೂ ಕೋವಿಡ್
ಸೋಂಕಿತ ಗಂಭೀರ ರೋಗಿಗಳಿಗೆ ಪ್ರಾಣವಾಯು ಸಿಗುತ್ತಿಲ್ಲ; ಪ್ರಾಣ ಉಳಿಸಲಾಗುತ್ತಿಲ್ಲ. ಅಂಥದ್ದರಲ್ಲಿ ಅಷ್ಟೇನೂ ಸಂಪನ್ಮೂಲಗಳು
ಇಲ್ಲದೇ ಬುಡಕಟ್ಟು ಜಿಲ್ಲೆಯೊಂದು ಆಕ್ಸಿಜನ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರುವುದು
ಇವರ ಕರ್ತೃತ್ವ ಶಕ್ತಿಗೆ ಉದಾಹರಣೆಯಾಗಿದೆ. ತಮ್ಮ ದೂರದೃಷ್ಟಿಯ ಆಡಳಿತದಿಂದಾಗಿ
ಪ್ರಸಿದ್ಧಿಯಾಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಭಾರೂಡ್ ಅವರ ಜೀವನ ಕತೆಯೂ ಯಾವುದೇ ಥ್ರಿಲ್ಲರ್ ಸಿನಿಮಾಗಿಂತಲೂ ಕಡಿಮೆ
ಇಲ್ಲ. ಪ್ರತಿಭಾವಂತ ಯಾವುದೇ ವಿದ್ಯಾರ್ಥಿಗೆ ಅವರ ಜೀವನಯಶೋಗಾಥೆ ಸೂಧಿರ್ತಿ.
ರಾಜೇಂದ್ರ ಭಾರೂಡ್ 1988ರ
ಜನವರಿ 7ರಂದು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಸಕ್ರಿ ತಾಲೂಕಿನ ಸಾಮೋಡೆ ಹಳ್ಳಿಯಲ್ಲಿ ಜನಿಸಿದರು.
ತಂದೆ ಬಂಡು ಭಾರೂಡ್, ತಾಯಿ ಕಮಲಾಬಾಯಿ. ಒಟ್ಟು ಮೂವರು ಮಕ್ಕಳು. ರಾಜೇಂದ್ರ ಕಮಲಾಬಾಯಿ ಗರ್ಭದಲ್ಲಿದ್ದಾಗಲೇ
ಬಂಡು ಇಹಲೋಕ ತ್ಯಜಿಸಿದರು. ಇಂದಿಗೂ ತಂದೆ ನೋಡಲು ಯಾವ ರೀತಿ ಇದ್ದರು ಎಂಬುದು
ರಾಜೇಂದ್ರಗೆ ಗೊತ್ತಿಲ್ಲ! ಅವರ ತಂದೆಯ ಒಂದೂ ಫೋಟೊ ಅವರ ಬಳಿಯಿಲ್ಲ.
ಅಷ್ಟು ಕಡು ಬಡತನದಲ್ಲಿರಾಜೇಂದ್ರ ಅವರು ಬೆಳೆದು ಬಂದಿದ್ದಾರೆ.
ಬಡತನವನ್ನೇ ಹಾಸಿ ಹೊದ್ದುಕೊಂಡಿದ್ದ
ಕುಟುಂಬ ನಿರ್ವಹಣೆ ಕಷ್ಟವೇ ಆಗಿತ್ತು. ತಾಯಿ ಮತ್ತು ಅಜ್ಜಿ ಇಬ್ಬರು ಸೇರಿ ಮೂವರು ಮಕ್ಕಳನ್ನು
ಕಷ್ಟಪಟ್ಟು ಬೆಳೆಸಿದರು. ಇವರಿಬ್ಬರೂ ದೇಸಿ ಸಾರಾಯಿಯನ್ನು ತಯಾರಿಸಿ ಮಾರಾಟ
ಮಾಡಿ ಕುಟುಂಬವನ್ನು ಸಾಕುತ್ತಿದ್ದರು. ದಿನಕ್ಕೆ ನೂರು ರೂಪಾಯಿ ಸಿಗುತ್ತಿತ್ತು.
ಕಬ್ಬಿನ ರವದಿಯಿಂದ ಮಾಡಿದ ಒಂದು ಸಣ್ಣ ಗುಡಿಸಲೇ ಇವರಿಗೆ ಅರಮನೆಯಾಗಿತ್ತು.
ಅಂಥ ಕಡುಬಡತನದಲ್ಲೇ ಬೆಳೆದ ರಾಜೇಂದ್ರ ವೈದ್ಯರಾಗಿ, ಐಎಸ್ಐ ಅಧಿಕಾರಿಯಾಗುವವರೆಗಿನ ಸಾಧನೆಯನ್ನು ಅಕ್ಷ ರಗಳಲ್ಲಿಹಿಡಿದಿಡಲು ಸಾಧ್ಯವಿಲ್ಲ.
ಗಣಿತ ಮತ್ತು ವಿಜ್ಞಾನ ವಿಷಯಗಳತ್ತ
ಆಸಕ್ತಿ ಬೆಳೆಸಿಕೊಂಡ ರಾಜೇಂದ್ರ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುತ್ತಿದ್ದರು. 10 ಮತ್ತು
12ನೇ ತರಗತಿ ಬೋರ್ಡ್ ಎಕ್ಸಾಮ್ನಲ್ಲಿ ಟಾಪರ್ ಆಗಿದ್ದರು. ಪರಿಣಾಮ ವಿದ್ಯಾರ್ಥಿ
ವೇತನ ಪಡೆದುಕೊಂಡು ಮುಂಬೈನ ಸೇಠ್ ಜಿಎಸ್ ಮೆಡಿಕಲ್
ಕಾಲೇಜ್ಗೆ ಪ್ರವೇಶ ಪಡೆದುಕೊಂಡರು. ಬಾಲ್ಯದಿಂದಲೂ ಅವರಿಗೆ ವೈದ್ಯನಾಗಬೇಕೆಂಬ ಕನಸು. ಆದರೆ,
ಅರಿವು ಹೆಚ್ಚಾಗುತ್ತಾ ಹೋದಂತೆ ತನ್ನ ಸುತ್ತಮುತ್ತ ಇರುವ ಜನರಿಗೆ ಜಾಗೃತಿ ಮೂಡಿಸುವುದು
ಅಗತ್ಯ ಎಂಬುದನ್ನು ಮನಗಂಡ ರಾಜೇಂದ್ರ ಅವರು ವೈದ್ಯರಾದರೂ ನಾಗರಿಕ ಆಡಳಿತ ಕ್ಷೇತ್ರವನ್ನು ಆಯ್ಕೆ
ಮಾಡಿಕೊಂಡರು. ಹಾಗಾಗಿಯೇ ಎಂಬಿಬಿಎಸ್ ಓದುತ್ತಿರುವಾಗಲೇ
ನಾಗರಿಕ ಸೇವಾ ಪರೀಕ್ಷೆಗೂ ತಯಾರಿ ಮಾಡಲಾರಂಭಿಸಿದರು. ಪಟ್ಟಾಗಿ ಕೂತು ಯುಪಿಎಸ್ಸಿ ಎಕ್ಸಾಮ್ಗೆ ಸಿದ್ಧತೆ ಮಾಡಿಕೊಂಡರು. ವೈದ್ಯ ಕೋರ್ಸ್ಗೆ ಸಂಬಂಧಿಸಿದ ಅಧ್ಯಯನದ ಜತೆಗೆ ಸ್ಪರ್ಧಾತ್ಮಕ
ಪರೀಕ್ಷೆಗೆ ಅಗತ್ಯವಾಗಿರುವ ಅಧ್ಯಯನವನ್ನು ಮುಂದುವರಿಸಿದರು. ಇದಕ್ಕಾಗಿ
ಕಠಿಣ ಪರಿಶ್ರಮಪಟ್ಟರು.
ಯುಪಿಎಸ್ಸಿ ಎಕ್ಸಾಮ್
ರಿಸಲ್ಟ್ ಗೊತ್ತಾಗುವ ಹೊತ್ತಿಗೆ ರಾಜೇಂದ್ರ ಹಳ್ಳಿಯಲ್ಲಿದ್ದರು.
ಅವರ ತಾಯಿಗೆ ಮಗ ಯಾವ ಪರೀಕ್ಷೆಯನ್ನು ಪಾಸು ಮಾಡಿದ್ದಾನೆಂಬುದರ ಬಗ್ಗೆ ಸಣ್ಣ ಕಲ್ಪನೆಯೂ
ಇರಲಿಲ್ಲ. 2012ರಲ್ಲಿ ಫರೀದಾಬಾದ್ನಲ್ಲಿ ಐಆರ್ಎಸ್ ಅಧಿಕಾರಿಯಾಗಿ ನಿಯುಕ್ತಿಗೊಂಡರು. ಈ ವೇಳೆ, 2ನೇ ಬಾರಿಗೆ ಯುಪಿಎಸ್ಸಿ
ಎಕ್ಸಾಮ್ ಬರೆದು, ಐಎಎಸ್ ಹುದ್ದೆಗೆ ಆಯ್ಕೆಯಾದರು. 2015ರಲ್ಲಿ ನಾಂದೇಡ್ ಜಿಲ್ಲೆಯಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಕೆಲಸ ಆರಂಭಿಸಿದರು. ಬಳಿಕ 2017ರಲ್ಲಿ ಸೋಲಾಪುರ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದರು.
2018ರಲ್ಲಿ ಅವರನ್ನು ನಂದೂರಬಾರ್ ಜಿಲ್ಲಾಧಿಕಾರಿಯಾಗಿ
ನೇಮಕ ಮಾಡಲಾಯಿತು.
ತಮ್ಮ ಸಂಘರ್ಷದ ಬದುಕಿನ ಜೀವನದ ಸಾರವನ್ನೇ ಸೃಜನಶೀಲ ಸಾಹಿತ್ಯವಾಗಿಸಿರುವ ರಾಜೇಂದ್ರ ‘ಮಿ ಏಕ್ ಸ್ವಪ್ನ ಪಹಿಲ್’ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಮೂವರು ಮಕ್ಕಳನ್ನು ಬೆಳೆಸಲು ತಮ್ಮ ತಾಯಿ ಪಟ್ಟ ಕಷ್ಟ, ಸಂಘರ್ಷದ ಬದಕನ್ನು ಚಿತ್ರಿಸಿದ್ದಾರೆ. ರಾಜೇಂದ್ರ ಅವರು ಈಗ ತಾಯಿ, ಪತ್ನಿ ಮತ್ತು ಮಕ್ಕಳ ಜತೆ ಸರಕಾರ ನೀಡಿರುವ ಕ್ವಾರ್ಟರ್ಸ್ನಲ್ಲಿದ್ದಾರೆ. ನಂದೂರಬಾರ್ ಜಿಲ್ಲಾಧಿಕಾರಿಯಾಗುವ ಮುಂಚೆ ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ತಮ್ಮ ದಕ್ಷ ಕಾರ್ಯನಿರ್ವಹಣೆಯ ದಟ್ಟ ಪ್ರಭಾವವನ್ನು ಬಿಟ್ಟು ಬಂದಿದ್ದಾರೆ. ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಬಡವರು, ನಿರ್ಗತಿಕರ ಬದುಕನ್ನು ಸಹನೀಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಈಗಲೂ ಅವರನ್ನು ಜನರು ಸ್ಮರಿಸಿಕೊಳ್ಳುತ್ತಾರೆ. ಇಂಥ ಜಿಲ್ಲಾಧಿಕಾರಿ ಪ್ರತಿ ಜಿಲ್ಲೆಗೆ ಸಿಕ್ಕರೆ ಕೋವಿಡ್ ಏನು, ಯಾವುದೇ ಸಮಸ್ಯೆಯನ್ನೂ ಆಡಳಿತ ಅನಾಯಸವಾಗಿ ಎದುರಿಸಬಹುದು.
ಸೋಮವಾರ, ಏಪ್ರಿಲ್ 26, 2021
Next Super star of Indian Cricket: 'ದೈವದತ್ತ' ಕ್ರಿಕೆಟ್ ಪ್ರತಿಭೆ
ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿಮಿಂಚುತ್ತಿರುವ ಕರ್ನಾಟಕದ ಎಡಗೈ ಬ್ಯಾಟ್ಸ್ಮನ್ ದೇವದತ್ತ ಪಡಿಕ್ಕಲ್ ಭಾರತೀಯ ಕ್ರಿಕೆಟ್ ತಂಡದ ಕದವನ್ನು ತಟ್ಟುತ್ತಿದ್ದಾರೆ.
- ಮಲ್ಲಿಕಾರ್ಜುನ ತಿಪ್ಪಾರ
ದೇವದತ್ ಪಡಿಕ್ಕಲ್ ಅದ್ಭುತ ಪ್ರತಿಭೆ ಎನ್ನುವುದರಲ್ಲಿಅನುಮಾನವೇ ಇಲ್ಲ. ಭವಿಷ್ಯದ ಆಟಗಾರರಲ್ಲಿಅವರೂ ಒಬ್ಬರು.
- ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ
ದೇವದತ್ ಪಡಿಕ್ಕಲ್ ಪ್ರಥಮ ದರ್ಜೆ ಹಾಗೂ ರಣಜಿ ಕ್ರಿಕೆಟ್ನಲ್ಲಿರನ್ ರಾಶಿಗಳನ್ನೇ ಗುಡ್ಡೆ ಹಾಕಿದ್ದಾರೆ. ಅವರಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂಬರುವ ದಿನಗಳಲ್ಲಿಕ್ರಿಕೆಟ್ನ ಯಾವುದಾದರೂ ಮಾದರಿಯಲ್ಲಿಭಾರತೀಯ ತಂಡವನ್ನು ಪ್ರತಿನಿಧಿಸಿದರೆ ಅಚ್ಚರಿಪಡಬೇಕಾಗಿಲ್ಲ.
- ಸುನೀಲ್ ಗವಾಸ್ಕರ್ ಮಾಜಿ ಕ್ರಿಕೆಟಿಗ
ಭಾರತೀಯ ಕ್ರಿಕೆಟ್ನ ಈ ಇಬ್ಬರು ದಿಗ್ಗಜರ ಮಾತುಗಳೇ ಕರ್ನಾಟಕದ ಪ್ರತಿಭಾವಂತ ದೇವದತ್ ಪಡಿಕ್ಕಲ್ ಕ್ರಿಕೆಟ್ ಬದುಕಿನ ಮುನ್ನುಡಿಗಳಾಗಿವೆ. ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿತನ್ನ ಬ್ಯಾಂಟಿಂಗ್ ಸ್ಥಿರ ಪ್ರದರ್ಶನದ ಮೂಲಕ ಕ್ರಿಕೆಟ್ ಪಂಡಿತರು, ಅಭಿಮಾನಿಗಳ ಗಮನ ಸೆಳೆದಿದ್ದ ದೇವದತ್, ಈ ಬಾರಿಯ ಐಪಿಎಲ್ನಲ್ಲಿ ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ‘ಭಾರತೀಯ ಕ್ರಿಕೆಟ್ನ ಭವಿಷ್ಯದ ಸ್ಟಾರ್’ ಎಂಬುದನ್ನು ನಿರೂಪಿಸುತ್ತಿದ್ದಾರೆ.
21 ವರ್ಷದ ಈ ಎಡಗೈ ಬ್ಯಾಟ್ಸ್ಮನ್ ಪಡಿಕ್ಕಲ್ ಆಟ ನೋಡುವುದೇ ಚೆಂದ. ಆಧುನಿಕ ಚುಟುಕು ಕ್ರಿಕೆಟ್ಗೆ ಬೇಕಾಗಿರುವ ಆಕ್ರಮಣಶೀಲತೆ ಮತ್ತು ತಾಂತ್ರಿಕವಾಗಿಯೂ ಪರಿಪೂರ್ಣ ಎನಿಸುವಂಥ ಆಟವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. 6.3 ಅಡಿ ಎತ್ತರದ ದೇವದತ್, ಈಗ ಐಪಿಎಲ್ನಲ್ಲಿಆಡುತ್ತಿರುವ ವೈಭವವನ್ನು ನೋಡಿದರೆ, ಶೀಘ್ರವೇ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಬಾಗಿಲನ್ನು ತಟ್ಟದೇ ಇರಲಾರರು. ಆಯ್ಕೆಗಾರರಿಗೂ ಪಡಿಕ್ಕಲ್ ಅವರನ್ನು ಬಿಟ್ಟುಕೊಡಲು ಸಾಧ್ಯವಾಗದೇ ಇರಬಹುದು. ಸದ್ಯದ ಮಟ್ಟಿಗೆ, ಕ್ರಿಕೆಟ್ನ ಮೂರೂ ಫಾಮ್ರ್ಯಾಟ್ಗಳಲ್ಲಿ ಆರಂಭಿಕ ಸ್ಥಾನದಲ್ಲಿ ಘಟಾನುಘಟಿ ಕ್ರಿಕೆಟರ್ಸ್ ಇದ್ದಾರೆ. ಜೊತೆಗೆ, ಬೆಂಚ್ ಸ್ಟ್ರೆಂಥ್ ಕೂಡ ಬಲಿಷ್ಠವಾಗಿದೆ. ಹಾಗಿದ್ದೂ, ಪಡಿಕ್ಕಲ್ ತೋರುತ್ತಿರುವ ಗಮನಾರ್ಹ ಪ್ರದರ್ಶನವು ಅವರನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಕರೆತರಬಹುದು.
‘ಟೀಮ್ ಫಸ್ಟ್’ ಎಂಬ ಮನೋಭಾವ ಕೂಡ ಪಡಿಕ್ಕಲ್ ಅವರಲ್ಲಿ ಇರುವುದನ್ನು ನಾವು ಈ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನೋಡಿದೆವು. ಐಪಿಎಲ್ ವೃತ್ತಿಜೀವನದ ಮೊದಲನೇ ಶತಕ ಗಳಿಸುವ ಅವಕಾಶ ಸಿಕ್ಕರೂ, ಆಟ ಬೇಗನೆ ಮುಗಿಸುವಂತೆ ನಾಯಕ ವಿರಾಟ್ ಕೊಹ್ಲಿ ಅವರಲ್ಲಿ ಕೇಳಿಕೊಂಡಿದ್ದರಂತೆ ದೇವದತ್. ‘‘ನಾನು ಶತಕ ಗಳಿಸುವುದಕ್ಕಿಂತ ತಂಡ ಗೆಲ್ಲುವುದು ಮುಖ್ಯ,’’ ಎಂದು ದೇವದತ್ ಬಳಿಕ ಹೇಳಿದ್ದರು. ಇದು ಅವರಲ್ಲಿರುವ ಟೀಮ್ ಫಸ್ಟ್ ಎಂಬ ಮನೋಭಾವವನ್ನು ಸಾರಿ ಹೇಳುತ್ತದೆ. ವೃತ್ತಿಪರ ಕ್ರಿಕೆಟರ್ನಲ್ಲಿರಬೇಕಾದ ಗುಣವಿದು.ಐಪಿಎಲ್ನಲ್ಲಿ ಮಿಂಚುತ್ತಿರುವ ದೇವದತ್ ಪಡಿಕ್ಕಲ್, ಕರ್ನಾಟಕದ ಪರವಾಗಿ ರಣಜಿ, ಲಿಸ್ಟ್ ಎ ಕ್ರಿಕೆಟ್ ಆಡುತ್ತಿದ್ದಾರೆ. ಕರ್ನಾಟಕ ಪ್ರೀಮಿಯಲ್ ಲೀಗ್(ಕೆಪಿಎಲ್)ನ ಬಳ್ಳಾರಿ ಟಸ್ಕರ್ ಪರವಾಗಿ 2017ರಲ್ಲಿಆಡಿದ್ದಾರೆ. 2019ರಲ್ಲಿಬೆಂಗಳೂರು ರಾಯಲ್ ಚಾಲೆಂಜರ್ಸ್(ಆರ್ಸಿಬಿ) ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. 2020ರ ಐಪಿಎಲ್ ಟೂರ್ನಿಯಲ್ಲಿಆರ್ಸಿಬಿ ಪರವಾಗಿ ಓಪನಿಂಗ್ ಸ್ಥಾನಕ್ಕೆ ಲಗ್ಗೆ ಹಾಕಿದ ಪಡಿಕ್ಕಲ್ ಮೊದಲ ಮೂರು ಪಂದ್ಯಗಳಲ್ಲಿ50 ಪ್ಲಸ್ ರನ್ ಗಳಿಸಿ ದಾಖಲೆ ಬರೆದರು. ಭಾರತೀಯ ಕ್ರಿಕೆಟ್ ತಂಡದ ನಾಯಕ ಕೊಹ್ಲಿಯಂಥ ಆಟಗಾರರ ಜತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಯಾವುದೇ ಆಟಗಾರನಿಗೆ ದೊರೆಯುವ ಅದೃಷ್ಟವೇ ಸರಿ. ಅಂಥದ್ದರಲ್ಲಿ ಪಡಿಕ್ಕಲ್ಗೆ ಕೊಹ್ಲಿಜತೆ ಇನ್ನಿಂಗ್ಸ್ ಕೂಡ ಆರಂಭಿಸುವ ಅವಕಾಶ ದೊರೆತಿರುವುದು ಅವರಲ್ಲಿರುವ ಪರಿಪೂರ್ಣ ಕ್ರಿಕೆಟ್ ಅನ್ನು ಹೊರ ತರಲು ಸಾಧ್ಯವಾಯಿತು. ಕೊಹ್ಲಿಗಿಂತಲೂ ಪಡಿಕ್ಕಲ್ಗೆ ದೊಡ್ಡ ಮೆಂಟರ್ ಸಿಗಲು ಸಾಧ್ಯವೆ? ಈ ದೃಷ್ಟಿಯಲ್ಲಿ ನೋಡಿದರೆ ದೇವದತ್ ಅದೃಷ್ಟವಂತ.
ಪಡಿಕ್ಕಲ್ ಮೊದಲ ಸೀಸನ್ನಲ್ಲಿ ಆರ್ಸಿಬಿ ಪರ 15 ಪಂದ್ಯ ಆಡಿದ್ದಾರೆ. 124 ಸ್ಟ್ರೈಕ್ ರೇಟ್ನಲ್ಲಿ, 31.53 ಸರಾಸರಿಯಲ್ಲಿ 473 ರನ್ ಕಲೆ ಹಾಕಿದ್ದಾರೆ. ಯುವ ಕ್ರಿಕೆಟರ್ ತಂಡಕ್ಕೆ ಪದಾರ್ಪಣೆ ಮಾಡಿದ ಟೂರ್ನಿಯಲ್ಲಿ ಇಷ್ಟೊಂದು ಸರಾಸರಿ ಮತ್ತು ಸ್ಟ್ರೈಕ್ ರೇಟ್ನಲ್ಲಿರನ್ ಗಳಿಸುವುದೇನೂ ಸುಲಭವಲ್ಲ. ಆ ಆವೃತ್ತಿಯಲ್ಲಿ ಆರ್ಸಿಬಿ ಪರ ಪಡಿಕ್ಕಲ್ ಗರಿಷ್ಠ ಸ್ಕೋರರ್ ಆಗಿದ್ದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು 50 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪಡಿಕ್ಕಲ್ಗೆ ಕೊರೊನಾ ಸೋಂಕು ತಗುಲಿದ್ದರಿಂದ ಈಗ ನಡೆಯುತ್ತಿರುವ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಆರ್ಸಿಬಿ ಪರ ಆಡಲು ಸಾಧ್ಯವಾಗಲಿಲ್ಲ. ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಅಂಗಣಕ್ಕೆ ಇಳಿದ ಪಡಿಕ್ಕಲ್ ತಮ್ಮ ನೈಜಸಾಮರ್ಥ್ಯ ಪ್ರದರ್ಶಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಅವರ ಆಟವಂತೂ ಹಬ್ಬವಾಗಿತ್ತು.
ಕೇರಳದ ಎಡಪ್ಪಾಳ್ ಎಂಬಲ್ಲಿ2000 ಜುಲೈ 7ರಂದು ದೇವದತ್ ಜನಿಸಿದರು. ತಂದೆ ಬಾಬು ಕುನ್ನಥ್ ಮತ್ತು ತಾಯಿ ಅಂಬಿಲಿ ಪಡಿಕ್ಕಲ್ ಅವರು ಬೆಂಗಳೂರಿಗೆ ತಮ್ಮ ನೆಲೆಯನ್ನು ಬದಲಾಯಿಸುವ ಮುನ್ನ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದರು. 11ನೇ ವಯಸ್ಸಿನಲ್ಲಿ ದೇವದತ್ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಾಸ ಆರಂಭಿಸಿದರು. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ನಲ್ಲಿ 2014ರಿಂದ ತರಬೇತಿ ಪಡೆಯಲಾರಂಭಿಸಿದರು. ಅಂಡರ್ 16 ಮತ್ತು ಅಂಡರ್ 19 ಕ್ರಿಕೆಟ್ ವಿಭಾಗದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
2018-19ರ ಸಾಲಿನಲ್ಲಿ ಕರ್ನಾಟಕದ ಪರವಾಗಿ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಕಣ್ಣಿಗೆ ಬಿದ್ದ ದೇವದತ್ ಐಪಿಎಲ್ನಲ್ಲಿ ಆಡಲು ವೇದಿಕೆ ಸೃಷ್ಟಿಸಿಕೊಂಡರು. 2019ರ ಸೆ.26ರಂದು ಕರ್ನಾಟಕ ಪರವಾಗಿ ಲಿಸ್ಟ್ ಎ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ವಿಜಯ ಹಜಾರೆ ಪಂದ್ಯಾವಳಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದರು. ಈ ಟೂರ್ನಿಯಲ್ಲಿ 11 ಪಂದ್ಯಗಳಿಂದ 609 ರನ್ ಗಳಿಸಿ ಎಲ್ಲರ ಗಮನ ಸೆಳೆದರು. 2019ರ ಅಕ್ಟೋಬರ್ನಲ್ಲಿ ಭಾರತೀಯ ಎ ತಂಡದ ಸದಸ್ಯರಾದರು. 2019ರ ನವೆಂಬರ್ನಲ್ಲಿದೇಶಿ ಟ್ವೆಂಟಿ20ಗೂ ಅಡಿಯಿಟ್ಟರೂ. 2019-20ರ ಸಾಲಿನ ಮಸ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿಕರ್ನಾಟಕವನ್ನು ಪ್ರತಿನಿಧಿಸಿದ್ದರು. ಮುಂದೆ 2021ರ ಸಾಲಿನ ಸಯ್ಯದ್ ಮಸ್ತಾಕ್ ಅಲಿ ಟ್ರೂಫಿ ಟೂರ್ನಿಗೆ ಕರ್ನಾಟಕ ತಂಡದ ಭಾಗವಾದರು.
ಗೌತಮ್ ಗಂಭೀರ್ ಅವರನ್ನು ಮೆಚ್ಚುವ ಪಡಿಕ್ಕಲ್ ಸದ್ಯ 15 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 34.88ರ ಸರಾಸರಿಯಲ್ಲಿ907 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಹತ್ತು ಅರ್ಧ ಶತಕಗಳು ಸೇರಿವೆ. ಇನ್ನು 20 ಲಿಸ್ಟ್ ಎ ಕ್ರಿಕೆಟ್ ಪಂದ್ಯಗಳನ್ನಾಡಿರುವ ದೇವದತ್, 86.68ರ ಸರಾಸರಿಯಲ್ಲಿ1387 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕ ಮತ್ತು 8 ಅರ್ಧ ಶತಕಗಳಿವೆ. 36 ಟ್ವೆಂಟಿ20 ಪಂದ್ಯಗಳನ್ನಾಡಿ, 45.41 ಸರಾಸರಿಯಲ್ಲಿ 1408 ರನ್ ಪೇರಿಸಿದ್ದಾರೆ. ತುಂಬ ಕಡಿಮೆ ಅವಧಿಯಲ್ಲಿಸಾಕಷ್ಟು ರನ್ ಗಳಿಸುವ ಮೂಲಕ ಕ್ರಿಕೆಟ್ ಪಂಡಿತರ ಮನಸ್ಸು ಗೆದ್ದಿದ್ದಾರೆ.
ಐಪಿಎಲ್ನ ಪ್ರದರ್ಶನವಂತೂ ಅವರನ್ನು ಸ್ಟಾರ್ ಪಟ್ಟಕ್ಕೇರಿಸಿದೆ. ಶೀಘ್ರವೇ ಭಾರತೀಯ ಕ್ರಿಕೆಟ್ ತಂಡವನ್ನು ದೇವದತ್ ಪ್ರತಿನಿಧಿಸಬಹುದು ಎಂಬ ಭವಿಷ್ಯವನ್ನು ಬಹುತೇಕರು ನುಡಿಯುತ್ತಿದ್ದಾರೆ. ಜಿ.ಆರ್.ವಿಶ್ವನಾಥ, ರಾಹುಲ್ ದ್ರಾವಿಡ್ ಮತ್ತು ಕೆ.ಎಲ್ ರಾಹುಲ್ ಅವರಂಥ ಬ್ಯಾಟ್ಸಮನ್ಗಳನ್ನು ನೀಡಿರುವ ಕರ್ನಾಟಕದಿಂದ ಮತ್ತೊಬ್ಬ ಪ್ರತಿಭಾನ್ವಿತ ಬ್ಯಾಟ್ಸಮನ್ ಆಗಿ ದೇವದತ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚುವ ದಿನಗಳು ದೂರವಿಲ್ಲ. ದೇವದತ್ಗೆ ಈಗಿನ್ನೂ 21 ವರ್ಷ. ಅವರ ಮುಂದೆ ಬೇಕಾದಷ್ಟು ಕ್ರಿಕೆಟ್ ಜೀವನವಿದೆ.
Chief Justice N V Ramana: ನ್ಯಾಯ ನಿಪುಣ ನ್ಯಾ.ರಮಣ
ಕಾನೂನು ಪಾಂಡಿತ್ಯ, ಸಮಚಿತ್ತ, ನ್ಯಾಯನಿಷ್ಠ ವ್ಯಕ್ತಿತ್ವದ ನ್ಯಾ. ಎನ್ ವಿ ರಮಣ ಅವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಹೌದು.
- ಮಲ್ಲಿಕಾರ್ಜುನ ತಿಪ್ಪಾರ
ನ್ಯಾಯ ಪರಿಪಾಲನೆಯಲ್ಲಿನೈಪುಣ್ಯತೆಯನ್ನು ಸಾಧಿಸಿರುವ, ಅಪಾರ ಕಾನೂನು ಪಾಂಡಿತ್ಯವನ್ನು ಹೊಂದಿರುವ ನ್ಯಾ. ಎನ್ ವಿ ರಮಣ ಅವರು ದೇಶದ ಅಗ್ರ ನ್ಯಾಯಾಲಯ, ಸುಪ್ರೀಂ ಕೋರ್ಟ್ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಬಹುಶಃ ಈ ಘನ ಹುದ್ದೆಗೆ ರಮಣ ಅವರು ಪ್ರತಿಶತ ಸಮರ್ಥನೀಯ ವ್ಯಕ್ತಿಯಾಗಿದ್ದಾಧಿರೆಂಬುದು ಕಾನೂನು ವಲಯದಲ್ಲಿಕೇಳಿ ಬರುತ್ತಿರುವ ಮೆಚ್ಚುಗೆ ಮಾತು.
ಪತ್ರಿಕೆಯಲ್ಲಿ‘ಸುದ್ದಿ’ ಬರೆಯುತ್ತಿದ್ದ ರಮಣ ಅವರು ‘ತೀರ್ಪು’ ಬರೆಯುವವರೆಗೂ ತಲುಪಿದ ಜೀವನದ ಪಯಣವೂ ಸಾಕಷ್ಟು ರೋಚಕ ಹಾಗೂ ಸೂಧಿರ್ತಿದಾಯಕ. ರೈತನ ಮಗನೊಬ್ಬ ಇಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆಂದರೆ ಅದು ಈ ದೇಶದ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ; ಸಂವಿಧಾನ ಒದಗಿಸಿದ ಅವಕಾಶ.
ಸದಾ ಶಾಂತಚಿತ್ತರಾಗಿರುವ ರಮಣ ನ್ಯಾಯ ಪರಿಪಾಲನೆಯಲ್ಲಿಮಾತ್ರ ಕಠೋರ. ನ್ಯಾಯದ ಹಾದಿಯಲ್ಲಿಎಷ್ಟೇ ಎಡರು ತೊಡರುಗಳು ಎದುರಾದರೂ ಅವರು ಎದೆಗುಂದಿದ ಪ್ರಕರಣವಿಲ್ಲ. ಸತ್ಯವನ್ನು ಯಾವುದೇ ಅಂಜಿಕೆ ಇಲ್ಲದೇ ಹೇಳಿದ್ದಾರೆ ಮತ್ತು ನಾಗರಿಕ ಹಕ್ಕುಗಳನ್ನು ಸಂರಕ್ಷಿಸಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ; ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಕೇಂದ್ರ ಸರಕಾರ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್ ಸೇವೆಯನ್ನು ಬಂದ್ ಮಾಡಿತ್ತು. ಸರಕಾರದ ನಿಷೇಧ ವರ್ಷಗಟ್ಟಲೆ ಮುಂದುವರಿಯಿತು ಮತ್ತು ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಅದರ ವಿಚಾರಣೆ ನಡೆಸಿದ್ದು ಇದೇ ನ್ಯಾ. ಎನ್.ವಿ.ರಮಣ ನೇತೃತ್ವದ ಪೀಠ. ‘‘ಈ ಪ್ರಕರಣದಲ್ಲಿ ಅನಿರ್ದಿಷ್ಟಾವಧಿಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವುದು ಕಾನೂನುಬಾಹಿರವಾಗುತ್ತದೆ,’’ ಎಂದು ಹೇಳಿ, ಸಂವಿಧಾನದಡಿಯಲ್ಲಿ ಇಂಟರ್ನೆಟ್ ಸೇವೆಯೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿದೆ. ಹಾಗಾಗಿ, ಇಂಟರ್ನೆಟ್ ಕೂಡ ಮೂಲಭೂತ ಹಕ್ಕು ಎಂದು ಪೀಠ ಹೇಳಿತು ಮತ್ತು ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಸೇವೆ ಮರು ಆರಂಭಿಸಲು ಆದೇಶಿಸಿತು.
ಇದೇ ರೀತಿಯ ಹಲವು ಐತಿಹಾಸಿಕ ತೀರ್ಪುಗಳನ್ನು ಅವರು ನೀಡಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕಚೇರಿಯನ್ನು ಮಾಹಿತಿ ಹಕ್ಕು ಕಾಯಿದೆ(ಆರ್ಟಿಐ) ವ್ಯಾಪ್ತಿಗೆ ತರುವಲ್ಲಿ ಇವರು ನೀಡಿದ ತೀರ್ಪು ಕಾರಣ. ಉದ್ಯಮಿ ಹಾಗೂ ಆರ್ಟಿಐ ಕಾರ್ಯಕರ್ತ ಸುಭಾಶ್ಚಂದ್ರ ಅಗರ್ವಾಲ್ ಅವರು ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ಆಸ್ತಿ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ(ಸಿಪಿಐಒ) ಆರ್ಟಿಐನಡಿ ಕೇಳಿಕೊಂಡಿದ್ದರು. ಆದರೆ, ಗೌಪ್ಯ ಮಾಹಿತಿ ಎಂಬ ಕಾರಣ ನೀಡಿ, ಈ ಅರ್ಜಿಯನ್ನು ಸಿಪಿಐಒ ವಜಾ ಮಾಡಿದರು. ಈ ಪ್ರಕರಣ ಕಡೆಗೆ ಸುಪ್ರೀಂ ಕೋರ್ಟ್ನ ಸಂವಿಧಾನಪೀಠಕ್ಕೆ ವರ್ಗವಾಗಿ, ಸುಪ್ರೀಂ ಕೋರ್ಟ್ ಕೂಡ ಸಾರ್ವಜನಿಕ ಕಚೇರಿಯಾಗಿರುವುದರಿಂದ 2005ರ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಐತಿಹಾಸಿಕ ತೀರ್ಪು ಹೊರ ಬಿತ್ತು. ಈ ತೀರ್ಪಿನ ಹಿಂದೆ ನ್ಯಾ.ರಮಣ ಅವರ ಮಹತ್ತರ ಕಾಣಿಕೆ ಇದೆ. ಈ ತೀರ್ಪಿನೊಂದಿಗೆ ಹಾಲಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸಬೇಕಾಯಿತು.
ವಾಣಿಜ್ಯ ವ್ಯಾಜ್ಯಗಳನ್ನು ಬಗೆಹರಿಸುವಲ್ಲೂರಮಣರ ಕಾನೂನು ಪಾಂಡಿತ್ಯ ನೆರವಿಗೆ ಬಂದಿದೆ. ಅನೇಕ ಪ್ರಕರಣಗಳಲ್ಲಿ ಮೈಲುಗಲ್ಲುತೀರ್ಪುಗಳನ್ನು ನೀಡಿದ್ದಾರೆ. ಇದಕ್ಕೆ ವಿದ್ಯಾ ದ್ರೋಲಿಯಾ, ಅಲ್ಕನೋ ವರ್ಸಸ್ ಸಲೇಮ್ ಪ್ರಕರಣಗಳ ತೀರ್ಪನ್ನು ಉದಾಹರಣೆಯಾಗಿ ನೀಡಬಹುದು. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದ ಹಲವು ಪ್ರಕರಣಗಳಲ್ಲಿ ಅವರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಶಾಸಕರ ಅನರ್ಹ ಪ್ರಕರಣದಲ್ಲಿ, ಸ್ಪೀಕರ್ ನೀಡಿದ ತೀರ್ಮಾನವನ್ನು ಎತ್ತಿ ಹಿಡಿದಿದ್ದರು. 2019ರಲ್ಲಿ ಮಹಾರಾಷ್ಟ್ರದಲ್ಲಿಸರಕಾರ ರಚನೆ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ವೇಳೆ, ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ ಸಂವಿಧಾನಬದ್ಧ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗುವ ಮುಂಚೆ ರಮಣ, ಆಂಧ್ರಪ್ರದೇಶ ಹೈಕೋರ್ಟ್, ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ, ಆಂಧ್ರಪ್ರದೇಶ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್ ನಲ್ಲಿ ವಕೀಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ವಕೀಲಿಕೆ ಮಾಡುವಾಗ ಸಾಂವಿಧಾನಿಕ, ಅಪರಾಧ, ಸೇವೆ ಮತ್ತು ಅಂತಾರಾಜ್ಯ ಕಾನೂನುಗಳ ವಿಷಯತಜ್ಞತೆಯನ್ನು ಸಾಧಿಸಿದ್ದರು. ಜೊತೆಗೆ ಸಿವಿಲ್, ಕ್ರಿಮಿನಲ್, ಲೇಬರ್, ಸವೀಸ್, ಚುನಾವಣಾ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಹಲವು ಕೇಸ್ಗಳಲ್ಲಿ ಕೇಂದ್ರ ಸರಕಾರ, ರೇಲ್ವೆಯನ್ನು ಪ್ರತಿನಿಧಿಸಿದ್ದಾರೆ. ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಕೀಲಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದ ಅವರನ್ನು 2000 ಜೂನ್ 27ರಂದು ಆಂಧ್ರಪ್ರದೇಶದ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಮಾರ್ಚ್ 10ರಿಂದ 2013 ಮೇ 20ರವರೆಗೂ ಆಂಧ್ರಪ್ರದೇಶ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದಾರೆ. ಬಳಿಕ ಅವರನ್ನು 2013 ಸೆಪ್ಟೆಂಬರ್ 2ರಂದು ದಿಲ್ಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು. ಇದಾದ ಒಂದೇ ವರ್ಷದಲ್ಲಿ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ 2014 ಫೆಬ್ರವರಿ 17ರಂದು ನೇಮಕಗೊಂಡರು.
ಅಪಾರ ಕಾನೂನು ಪಾಂಡಿತ್ಯ ಮತ್ತು ಸಮಚಿತ್ತ, ದೃಢ ನಿಲುವು ಹೊಂದಿದ ವ್ಯಕ್ತಿಯೊಬ್ಬರು ಮುಖ್ಯ ನ್ಯಾಯಮೂರ್ತಿ ಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಆಗಿತ್ತು. ಕಾನೂನು ಪ್ರೀತಿಸುವಷ್ಟೇ ಕಲೆ ಮತ್ತು ಸಾಹಿತ್ಯವನ್ನೂ ಇಷ್ಟ ಪಡುತ್ತಾರೆ.
ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಹಳ್ಳಿಯ ಕೃಷಿಕ ಕುಟುಂಬದಲ್ಲಿ ಎನ್ ವಿ ರಮಣ ಅವರು 1957 ಆಗಸ್ಟ್ 27ರಂದು ಜನಿಸಿದರು. ಇವರ ತಂದೆ ಗಣಪತಿ ರಾವ್ ಮತ್ತು ತಾಯಿ ಸರೋಜನಿ ದೇವಿ ಕೃಷಿಕರು. ಬಿಎಸ್ಸಿ ಪದವಿ ಪಡೆದ ನಂತರ ಕಾನೂನು ಪದವಿ ಸಂಪಾದಿಸಿದರು. 1975ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿಧಿದಾಗ ರಮಣ ಅವರು ಒಂದು ಶೈಕ್ಷ ಣಿಕ ವರ್ಷವನ್ನು ತ್ಯಜಿಸಬೇಕಾದ ಪರಿಸ್ಥಿತಿ ಉಂಟಾಯಿತು. ಬಳಿಕ ಅವರು, ಎರಡು ವರ್ಷಗಳ ಕಾಲ ತೆಲುಗು ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ, ನಂತರ ಕಾನೂನು ಪದವಿಯನ್ನು ಪಡೆದುಕೊಂಡು ವಕೀಲಿಕೆ ಆರಂಭಿಸಿದರು. ಪೊನ್ನಾವರಮ್ ಹಳ್ಳಿಯಿಂದ ವಕೀಲಿಕೆ ಆರಂಭಿಸಿದ ಮೊದಲಿಗರು ಇವರು.
ವಿದ್ಯಾರ್ಥಿಯಾಗಿದ್ದಾಗಲೇ ರೈತರು, ಕಾರ್ಮಿಕರು ಮತ್ತು ಇತರ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿದ್ದರು. ನಾಗರಿಕರ ಹಕ್ಕುಗಳ ಪರವಾಗಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ಅವರಲ್ಲಿ ಸಾಮಾಜಿಕ ಬದ್ಧತೆ ಮೈಗೂಡಿರುವುದನ್ನು ನಾವು ಕಾಣಬಹುದು ಮತ್ತು ಅದು ಅವರ ತೀರ್ಪುಗಳಲ್ಲಿ ಪ್ರತಿಫಲನವಾಗಿದೆ. ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ ನ್ಯಾ.ರಮಣ ನೈತಿಕವಾಗಿ ಯಾವುದಾದರೂ ವಿಷಯ ಸರಿ ಅಲ್ಲಎಂದು ತೋರಿದರೆ ಅದನ್ನು ಟೀಕಿಸುವುದರಲ್ಲಿಎಂದೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ನಮ್ಮ ದೇಶದ ಶಿಕ್ಷ ಣ ವ್ಯವಸ್ಥೆಗೆ ಬಗ್ಗೆ ಮಾಡಿದ ಟೀಕೆಯನ್ನು ಉದಾಹರಿಸಬಹುದು.
ಇಷ್ಟೆಲ್ಲ ಹೆಗ್ಗಳಿಕೆಯ ಮಧ್ಯೆಯೂ ಅವರು ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಆಂಧ್ರಪ್ರದೇಶದ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು, ಸುಪ್ರೀಂ ಕೋರ್ಟ್ನ ಸಿಜೆಐಗೆ ಪತ್ರ ಬರೆದು ರಮಣ ಹಾಗೂ ಅವರ ಸಂಬಂಧಿಕರು ಅಮರಾವತಿಯ ಭೂಸ್ವಾಧೀನದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಜತೆಗೆ ತಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದರು. ಈ ಪತ್ರ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
63 ವರ್ಷದ ನ್ಯಾ. ರಮಣ ಅವರು, ಏಪ್ರಿಲ್ 24ರಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದು, ಅವರ ಅಧಿಕಾರಾವಧಿ 2022 ಆಗಸ್ಟ್ 26ಕ್ಕೆ ಕೊನೆಗೊಳ್ಳಲಿದೆ. ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಮಾತ್ರವಲ್ಲದೆ ಅವರು ಸುಪ್ರೀಂ ಕೋರ್ಟ್ನ ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರೂ ಆಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಅವರ ಮುಂದೆ ಸಾಕಷ್ಟು ಸವಾಲುಗಳಂತೂ ಇದ್ದೇ ಇವೆ.
How to make Whats app call from Desktop?: ಕಂಪ್ಯೂಟರ್ನಿಂದ ವಾಟ್ಸ್ಆ್ಯಪ್ ಕಾಲ್ ಮಾಡುವುದು ಹೇಗೆ?
- ಮಲ್ಲಿಕಾರ್ಜುನ ತಿಪ್ಪಾರ
ಕಿರು ಸಂದೇಶ ಸಂವಹನದಲ್ಲಿಕ್ರಾಂತಿಯನ್ನೇ ಸೃಷ್ಟಿಸಿರುವ ಫೇಸ್ಬುಕ್ ಒಡೆತನದ ‘ವಾಟ್ಸ್ಆ್ಯಪ್’, ತನ್ನ ಬಳಕೆದಾರರಿಗೆ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗಾಗಲೇ ನೀವು ಸ್ಮಾರ್ಟ್ಫೋನ್ ವರ್ಷನ್ನಲ್ಲಿವಾಟ್ಸ್ಆ್ಯಪ್ ವಾಯ್ಸ್ ಮತ್ತು ವಿಡಿಯೊ ಕಾಲ್ ಸೌಲಭ್ಯವನ್ನು ಬಳಸಿಕೊಂಡಿರುತ್ತೀರಿ. ಈ ವಾಟ್ಸ್ಆ್ಯಪ್ ವಾಯ್ಸ್ ಮತ್ತು ವಿಡಿಯೊ ಕಾಲ್ ಎಷ್ಟು ಜನಪ್ರಿಯವಾಗಿದೆ ಎಂದರೆ, 2020ರ ಹೊಸ ವರ್ಷದ ದಿನ ಜಗತ್ತಿನಾದ್ಯಂತ 140 ಕೋಟಿ ವಾಯ್ಸ್ ಮತ್ತು ವಿಡಿಯೊ ಕರೆಗಳನ್ನು ವ್ಯಾಟ್ಸ್ಆ್ಯಪ್ ಮೂಲಕ ಮಾಡಲಾಗಿದೆಯಂತೆ! ಅಂದರೆ, ಅಷ್ಟರಮಟ್ಟಿಗೆ ವಾಟ್ಸ್ಆ್ಯಪ್ ಆಧುನಿಕ ಸಂವಹನದ ಹೊಸ ಪರಿಭಾಷೆ ಮತ್ತು ಮಾಧ್ಯಮವಾಗಿ ರೂಪುಗೊಂಡಿದೆ.
ಈವರೆಗೂ ವಾಟ್ಸ್ಆ್ಯಪ್ ವಾಯ್ಸ್ ಮತ್ತು ವಿಡಿಯೊ ಕಾಲ್ ಸೇವೆ ಸ್ಮಾರ್ಟ್ಫೋನ್ಗಳಿಗೆ ಮಾತ್ರವೇ ಸಪೋರ್ಟ್ ಮಾಡುತ್ತಿತ್ತು. ಅಂದರೆ, ಸ್ಮಾರ್ಟ್ಫೋನ್ನಲ್ಲಿಮಾತ್ರವೇ ವಾಟ್ಸ್ಆ್ಯಪ್ ಬಳಸಿಕೊಂಡು ಕರೆ ಮಾಡಲು ಸಾಧ್ಯವಾಗುತ್ತಿತ್ತು. ಹಾಗಾಗಿ, ವಾಟ್ಸ್ಆ್ಯಪ್ ವೆಬ್ನಲ್ಲೂಈ ಸೇವೆ ನೀಡಬೇಕೆಂಬುದು ಬಳಕೆದಾರರ ಬೇಡಿಕೆಯಾಗಿತ್ತು. ವಾಟ್ಸ್ಆ್ಯಪ್ ಇದೀಗ ವಾಟ್ಸ್ಆ್ಯಪ್ ವೆಬ್ನಲ್ಲೂಆ ಸೇವೆಯನ್ನು ನೀಡುವ ಮೂಲಕ ಬಳಕೆದಾರರಿಗೆ ಮತ್ತೊಂದು ಅನುಭವವನ್ನು ಒದಗಿಸಿದೆ. ವಾಟ್ಸ್ವ್ಯಾಪ್ ವೆಬ್ ಮೂಲಕ ಅಂದರೆ, ನೀವು ಡೆಸ್ಕ್ಟಾಪ್(ಕಂಪ್ಯೂಟರ್)ನಲ್ಲೂವಾಟ್ಸ್ಆ್ಯಪ್ ಬಳಸಿಕೊಂಡು ವಾಯ್ಸ್ ಮತ್ತು ವಿಡಿಯೊ ಕಾಲ್ಗಳನ್ನು ಮಾಡಬಹುದು.
ಸದ್ಯಕ್ಕೆ, ವಾಟ್ಸ್ಆ್ಯಪ್ ವೆಬ್ ಸೇವೆ ಸೀಮಿತವಾಗಿದೆ; ಅದರ ವ್ಯಾಪ್ತಿ ವಿಸ್ತಾರವಾಗಿಲ್ಲ. ಹಾಗೆಯೇ, ಎಲ್ಲರೀತಿಯ ಒಎಸ್ಗಳಿಗೂ ಇದು ಸಪೋರ್ಟ್ ಮಾಡುತ್ತಿಲ್ಲ. ವಿಂಡೋಸ್ 10 ಮತ್ತು ಮ್ಯಾಕ್ಒಎಸ್ 10.13 ವರ್ಷನ್ನಲ್ಲಿಮಾತ್ರವೇ ನೀವು ಆಡಿಯೊ ಮತ್ತು ವಿಡಿಯೊ ಕಾಲ್ ಮಾಡಲು ಸಾಧ್ಯವಾಗಲಿದೆ. ಜೊತೆಗೆ, ವಾಟ್ಸ್ಆ್ಯಪ್ ಗ್ರೂಪ್ ಕರೆಗಳಿಗೂ ಅವಕಾಶವಿಲ್ಲ. ಸ್ಮಾರ್ಟ್ಫೋನ್ನಲ್ಲಾದರೆ ನೀವು ಗ್ರೂಪ್ ಕಾಲ್ ಮೂಲಕ ವರ್ಚುಯಲ್ ಮೀಟಿಂಗ್ಗಳಂಥ ಟಾಸ್ಕ್ಗಳನ್ನು ಮಾಡಬಹುದಾಗಿತ್ತು. ಸದ್ಯಕ್ಕೆ ವೈಯಕ್ತಿಕ ಕರೆಗಳಿಗೆ ಮಾತ್ರವೇ ವಾಟ್ಸ್ಆ್ಯಪ್ ವಾಯ್ಸ್ ಮತ್ತು ವಿಡಿಯೊ ಕಾಲ್ಗೆ ಸೀಮಿತವಾಗಿದ್ದು, ಮುಂಬರುವ ದಿನಗಳಲ್ಲಿವಾಟ್ಸ್ಆ್ಯಪ್ ಈ ತನ್ನ ಸೇವೆಯನ್ನು ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬಹುದು.
ಕಾಲ್ ಮಾಡುವುದು ಹೇಗೆ?- ಈ ಫೀಚರ್ ಸದ್ಯ ವಾಟ್ಸ್ಆ್ಯಪ್ ವೆಬ್ನಲ್ಲಿಮಾತ್ರವೇ ಲಭ್ಯವಿದ್ದು, ವಿಂಡೋಸ್ ಮತ್ತು ಮ್ಯಾಕ್ಒಎಸ್ನಲ್ಲಿಮಾತ್ರವೇ ಕೆಲಸ ಮಾಡುತ್ತದೆ. ಹಾಗೆಯೇ ಗ್ರೂಪ್ ಕಾಲ್ಗಳು ಸಾಧ್ಯವಾಗುವುದಿಲ್ಲ. ಕೇವಲ ಸೀಮಿತ ಕಾಲ್ಗೆ ಮಾತ್ರವೇ ಅವಕಾಶವಿದೆ.
ಏನೇನು ಇರಬೇಕು?: ವಿಂಡೋಸ್ 10 64-ಬಿಟ್ ವರ್ಷನ್ 1903 ಮತ್ತು ಹೊಸ ಮ್ಯಾಕ್ಒಎಸ್ 10.13. ಹಾಗೆಯೇ, ವಾಯ್ಸ್ ಮತ್ತು ವಿಡಿಯೊ ಕಾಲ್ ಮಾಡಲು ಅಗತ್ಯವಿರುವ ಆಡಿಯೊ ಔಟ್ಪುಟ್ ಡಿವೈಸ್ ಮ್ತತು ಮೈಕ್ರೋಫೋನ್ ಇರಬೇಕು. ವಿಡಿಯೊ ಕಾಲ್ಗೆ ಕ್ಯಾಮೆರಾ ಅಗತ್ಯ. ನಿಮ್ಮ ಪಿಸಿ ಮತ್ತು ಸ್ಮಾರ್ಟ್ಫೋನ್ ಇಂಟರ್ನೆಟ್ಗೆ ಕನೆಕ್ಟ್ ಆಗಿರಬೇಕು.
ಕರೆ ಮಾಡಲು ಹೀಗೆ ಮಾಡಿ
- ನಿಮ್ಮ ಆಪರೇಟಿಂಗ್ ಸಿಸ್ಟಮ್ನಲ್ಲಿವಾಟ್ಸ್ಆ್ಯಪ್ನ ಹೊಸ ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಂಡಿರಬೇಕು.
- ಡೆಸ್ಕ್ಟಾಪ್ನಲ್ಲಿರುವ ಆ್ಯಪ್ ಓಪನ್ ಮಾಡಿ ಮತ್ತು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ವಾಟ್ಸ್ಆ್ಯಪ್ ಬಳಸಿಕೊಂಡು ಕ್ಯೂಆರ್ ಸ್ಕ್ಯಾನಿಂಗ್ ಮೂಲಕ ಕಾನಿಧಿಗರ್ ಮಾಡಿಕೊಳ್ಳಿ.
- ಇಷ್ಟಾದ ಮೇಲೆ ಚಾಟ್ ವಿಂಡೋ ಟ್ಯಾಪ್ ಮಾಡಿ ಮತ್ತು ಅಲ್ಲಿನಿಮಗೆ ಬಲಬದಿಯ ಮೇಲ್ತುದಿಯಲ್ಲಿವಾಯ್ಸ್ ಮತ್ತು ವಿಡಿಯೊ ಕಾಲ್ ಐಕಾನ್ಗಳು ಕಾಣಿಸುತ್ತವೆ.
- ವಾಯ್ಸ್ ಕಾಲ್ ಮಾಡಲು ವಾಯ್ಸ್ ಕಾಲ್ ಬಟನ್ ಮತ್ತು ವಿಡಿಯೊ ಕಾಲ್ ಮಾಡಲು ವಿಡಿಯೊ ಕಾಲ್ ಬಟನ್ ಮೇಲೆ ಕ್ಲಿಕ್ ಮಾಡಿ.
ವಾಯ್ಸ್ ಮತ್ತು ವಿಡಿಯೊ ಕಾಲ್ ಸ್ವೀಕರಿಸುವುದು ಹೇಗೆ?: ವಾಟ್ಸ್ಆ್ಯಪ್ ಮೂಲಕ ಕರೆ ಬಂದ ಕೂಡಲೇ ನಿಮ್ಮ ಡೆಸ್ಕ್ಟಾಪ್ ಮೇಲೆ ವಿಂಡೋ ಪಾಪ್ಅಪ್ ಆಗುತ್ತದೆ. ಆಗ ನೀವು ಕರೆಯನ್ನು ಸ್ವೀಕರಿಸಲು ರಿಸೀವ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಕರೆ ಸ್ವೀಕರಿಸುವುದು ಬೇಡವಾಗಿದ್ದರೆ ಡಿಸ್ಕನೆಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಸೋಮವಾರ, ಮಾರ್ಚ್ 22, 2021
Did You Addicted to Smartphone: ನೀವು ಸ್ಮಾರ್ಟ್ಫೋನ್ಗೆ ಅಡಿಕ್ಟ್ ಆಗಿದ್ದೀರಾ?
- ಮಲ್ಲಿಕಾರ್ಜುನ ತಿಪ್ಪಾರ
ಸ್ಮಾರ್ಟ್ ಫೋನ್ ಬಳಸೋಕೆ ಶುರು ಮಾಡಿದ ಮೇಲೆ ಓದುವುದಕ್ಕೆ ಆಗುತ್ತಿಲ್ಲ? ನಿದ್ದೆ ಸರಿಯಾಗಿ ಮಾಡಲು ಆಗುತ್ತಿಲ್ಲವೇ? ಟಾಯ್ಲೆಟ್ಗೆ ಹೋಗಬೇಕಾದರೂ ಸ್ಮಾರ್ಟ್ ಫೋನ್ ಕೈಯಲ್ಲೇ ಇರುತ್ತದೆಯೇ? ಮೂರೂ ಹೊತ್ತು ಮೊಬೈಲ್ನಲ್ಲೇ ಮುಳುಗಿರ್ತಿಯಾ ಅಂತಾ ಬೈತಿರ್ತಾರೆ ಅಂತ ಅನಿಸುತ್ತಿದೆಯಾ?
ಹೌದು, ಎಂದಾದರೆ ಖಂಡಿತವಾಗಿಯೂ ನೀವು ಸ್ಮಾರ್ಟ್ ಫೋನ್ ಗೀಳಿಗೆ ಬಿದ್ದಿದ್ದೀರಿ ಎಂದರ್ಥ. ಅದನ್ನೇ ಮತ್ತೊಂದು ರೀತಿ ಹೇಳುವುದಾದರೆ, ಸ್ಮಾರ್ಟ್ ಫೋನ್ಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದೀರಿ, ಅದಕ್ಕೆ ದಾಸರಾಗಿದ್ದೀರಿ, ಅದೊಂದು ರೀತಿಯಲ್ಲಿಚಟ ಆಗಿದೆ!
ನಮ್ಮ ಯಾವುದೇ ನಡವಳಿಕೆ, ಹವ್ಯಾಸ, ಚಟುವಟಿಕೆಗಳು ಯಾವಾಗ ಚಟಗಳಾಗಿ ಬದಲಾಗುತ್ತವೆಯೋ ಆಗ ಅವುಗಳಿಂದ ಅಪಾಯವೇ ಹೆಚ್ಚು. ಸ್ಮಾರ್ಟ್ ಫೋನ್ ಕೂಡ ಹಾಗೆಯೇ, ಅದು ನಮ್ಮ ಅಗತ್ಯವನ್ನು ಪೂರೈಸುವ ಸಾಧನ. ಎಷ್ಟು ಅಗತ್ಯವಿದೆಯೋ ಅಷ್ಟೇ ಬಳಸಬೇಕು. ಆದರೆ, ನಾವೆಲ್ಲಅದನ್ನು ಅನಗತ್ಯವಾಗಿ, ಅಗತ್ಯ ಮೀರಿ ಬಳಸುತ್ತಿರುವ ಪರಿಣಾಮ ಅದಕ್ಕೆ ಅಡಿಕ್ಟ್ ಆಗಿದ್ದೇವೆ. ಇದರಿಂದ ಹೊರ ಬರಲು ಈ ಟಿಟ್ಸ್ ಟ್ರೈ ಮಾಡಿ.
1. ಯಾವಾಗ ಬಳಸಿಕೊಳ್ಳಬೇಕು
ಫೋನ್ ಅನ್ನು ಯಾವಾಗ ಬಳಸಿಕೊಳ್ಳಬೇಕೆಂದು ನೀವೇ ನಿರ್ಧರಿಸಿಕೊಳ್ಳಿ. ದಿನದ ಇಂತಿಂಥ ಸಮಯದಲ್ಲಿಮಾತ್ರವೇ ಬಳಸಿ. ಉಳಿದ ಸಮಯದಲ್ಲಿಅದರಿಂದ ದೂರವಿರಿ. ಕಚೇರಿಯಲ್ಲಿಮಾತ್ರವೇ ನಿಮಗೆ ಫೋನ್ ಅಗತ್ಯ ಹೆಚ್ಚಿದ್ದರೆ ಅಲ್ಲಿಮಾತ್ರವೇ ಬಳಕೆ ಇರಲಿ. ಮನೆಯಲ್ಲಿಅದರಿಂದ ದೂರವಿರಿ.
2.ಒಂದಿಷ್ಟು ಗಂಟೆ ಸ್ವಿಚ್ಡ್ ಆಫ್ ಮಾಡಿ
ದಿನದಲ್ಲಿನಿಮಗೆ ಅಗತ್ಯವಿಲ್ಲದ ಸಮಯವನ್ನು ಗುರುತಿಸಿಕೊಂಡು ಆ ಸಮಯದಲ್ಲಿಫೋನ್ ಸ್ವಿಚ್ಡ್ ಆಫ್ ಮಾಡುವುದನ್ನು ರೂಢಿಸಿಕೊಳ್ಳಿ. ಹಾಗೆಯೇ, ಕಾರು ಚಾಲನೆ ಮಾಡುವಾಗ, ಜಿಮ್ ಮಾಡುವಾಗ, ಊಟ ಮಾಡುವಾಗ ಅಥವಾ ಮಕ್ಕಳೊಂದಿಗೆ ಆಟ ಆಡುವಾಗ ಫೋನ್ ಮುಟ್ಟಲು ಹೋಗಬೇಡಿ. ನಿಮ್ಮ ಬಾತ್ ರೂಮ್ಗೆ ಫೋನ್ ನಿಷೇಧಿಸಿ.
3.ಹಾಸಿಗೆಗೆ ಫೋನ್ ಬರಕೂಡದು
ಹೌದು, ಬಹಳಷ್ಟು ಜನ ಮಲಗುವ ಮುನ್ನ ಸುಮಾರು ಹೊತ್ತು ಸ್ಮಾರ್ಟ್ ಫೋನ್ ಬಳಸುತ್ತಾರೆ. ಇದೊಂದು ದುರಭ್ಯಾಸ. ನಿಮ್ಮ ನಿದ್ದೆ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಫೋನ್ ಹೊರಸೂಸುವ ನೀಲಿ ಕಿರಣಗಳು ನಿದ್ದೆಯನ್ನು ಹಾಳು ಮಾಡುತ್ತವೆ. ಫೋನ್ನಲ್ಲಿಇ-ಬುಕ್ ಓದುವ ಬದಲು ರಿಯಲ್ ಪುಸ್ತಕಗಳನ್ನೇ ಓದಿ.
4.ಪರ್ಯಾಯ ಹುಡುಕಿಕೊಳ್ಳಿ
ಒಂದೊಮ್ಮೆ ನಿಮಗೆ ಬೋರ್ ಆಗುತ್ತಿದೆ, ಒಂಟಿತನ ಎನಿಸುತ್ತಿದೆ ಎಂದು ಫೋನ್ ಕೈಗೆತ್ತಿಕೊಳ್ಳಬೇಡಿ. ಬದಲಿಗೆ ಪರ್ಯಾಯ ದಾರಿ ಹುಡುಕಿಕೊಳ್ಳಿ. ಹೆಲ್ತ್ ಆಕ್ಟಿವಿಟಿ ಮಾಡಿ. ಮ್ಯೂಸಿಕ್ ಸಿಸ್ಟಮ್ನಲ್ಲಿಸಂಗೀತ ಆಲಿಸಿ; ಆಡಿ; ಹಾಡಿ. ಫೋನ್ ಬಿಟ್ಟು ಬೇರೆ ಏನಾದರೂ ಮಾಡಿಯಷ್ಟೆ.
5.ಸೋಷಿಯಲ್ ಮೀಡಿಯಾ ಆ್ಯಪ್ ತೆಗೆಯಿರಿ
ಸ್ಮಾರ್ಟ್ ಫೋನ್ನಲ್ಲಿನಾವು ಹೆಚ್ಚಿನ ಸಮಯವನ್ನು ಸೋಷಿಯಲ್ ಮೀಡಿಯಾಗಳಲ್ಲೇ ಕಳೆಯುತ್ತೇವೆ. ಇದರಿಂದಾಗಿ ನಮ್ಮ ಜೀವನ ಅಸಮತೋಲನವಾಗುತ್ತಿದೆ. ಹಾಗಾಗಿ, ಸೋಷಿಯಲ್ ಮೀಡಿಯಾ ಆ್ಯಪ್ಗಳಿಂದ ಹೊರಬನ್ನಿ. ಇಲ್ಲವೇ ಎಷ್ಟು ಅಗತ್ಯವಿದೆಯೋ ಅಷ್ಟೇ ಬಳಸಿ. ಇಡೀ ದಿನ ಅಲ್ಲೇ ಇರಬೇಡಿ. ಸೋಷಿಯಲ್ ಮೀಡಿಯಾ ಆಚೆಯೂ ಲೈಫ್ ಇದೆ.
6. ಪದೇ ಪದೆ ಚೆಕ್ ಮಾಡಬೇಡಿ
ಪದೇಪದೆ ಸ್ಮಾರ್ಟ್ ಫೋನ್ ಕೈಗೆತ್ತಿಕೊಂಡು ಮೆಸೆಜ್ ಬಂದಿದೆಯಾ, ಸೋಷಿಯಲ್ ಮೀಡಿಯಾ ನೋಟಿಫಿಕೇಷನ್ ಬಂದಿದೆಯಾ, ಮೇಲ್ಗಳು ಬಂದಿದೆಯಾ ಅಂತಾ ಚೆಕ್ ಮಾಡೋದು ಹೆಚ್ಚುತ್ತಿದೆ. ಈ ಪ್ರವೃತ್ತಿಯೇ ಮುಂದೆ ಚಟವಾಗಿ ಬಿಡುತ್ತದೆ. ಹಾಗಾಗಿ, ಪದೇಪದೆ ಸ್ಮಾರ್ಟ್ ಫೋನ್ ಚೆಕ್ ಮಾಡಲು ಹೋಗಬೇಡಿ.
7. ಥಿಯೇಟರ್ನಲ್ಲಿಸಿನಿಮಾ ನೋಡಿ
ಇತ್ತೀಚಿನ ದಿನಗಳಲ್ಲಿಬಹಳಷ್ಟು ಮಂದಿ ಸ್ಮಾರ್ಟ್ ಫೋನ್ನಲ್ಲಿಸಿನಿಮಾ ನೋಡಲು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರಿಂದಾಗಿಯೇ ಹೆಚ್ಚಿನ ಸಮಯವನ್ನು ಅವರು ಸ್ಮಾರ್ಟ್ ಫೋನ್ಗಳಲ್ಲಿಕಳೆಯುತ್ತಿದ್ದಾರೆ. ಇದರಿಂದ ಹೊರ ಬರಲು ಚಿತ್ರಮಂದಿರಗಳಲ್ಲಿಸಿನಿಮಾ ನೋಡಿ ಅಥವಾ ವಾರಕ್ಕೆ ನಿರ್ದಿಷ್ಟ ಸಮಯವನ್ನು ಇದಕ್ಕಾಗಿಯೇ ಮೀಸಲಿಡಿ.
-
ಮೂರೂ ಮಾದರಿಯ ಕ್ರಿಕೆಟ್ನಲ್ಲಿಭಾರತೀಯ ಕ್ರಿಕೆಟ್ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್ನಲ್ಲಿಸಿಎಸ್ಕೆ ತಂಡದ ನಾಯಕ. - ಮಲ್ಲಿಕಾರ್ಜುನ ತಿಪ್ಪಾ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..! ಅರೆ ಏನು ಇದು.....