ಸೋಮವಾರ, ಏಪ್ರಿಲ್ 26, 2021

Next Super star of Indian Cricket: 'ದೈವದತ್ತ' ಕ್ರಿಕೆಟ್‌ ಪ್ರತಿಭೆ

ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿಮಿಂಚುತ್ತಿರುವ ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಭಾರತೀಯ ಕ್ರಿಕೆಟ್‌ ತಂಡದ ಕದವನ್ನು ತಟ್ಟುತ್ತಿದ್ದಾರೆ. 


- ಮಲ್ಲಿಕಾರ್ಜುನ ತಿಪ್ಪಾರ

ದೇವದತ್‌ ಪಡಿಕ್ಕಲ್‌ ಅದ್ಭುತ ಪ್ರತಿಭೆ ಎನ್ನುವುದರಲ್ಲಿಅನುಮಾನವೇ ಇಲ್ಲ. ಭವಿಷ್ಯದ ಆಟಗಾರರಲ್ಲಿಅವರೂ ಒಬ್ಬರು.
- ವಿರಾಟ್‌ ಕೊಹ್ಲಿ ಭಾರತೀಯ ಕ್ರಿಕೆಟ್‌ ತಂಡದ ನಾಯಕ

ದೇವದತ್‌ ಪಡಿಕ್ಕಲ್‌ ಪ್ರಥಮ ದರ್ಜೆ ಹಾಗೂ ರಣಜಿ ಕ್ರಿಕೆಟ್‌ನಲ್ಲಿರನ್‌ ರಾಶಿಗಳನ್ನೇ ಗುಡ್ಡೆ ಹಾಕಿದ್ದಾರೆ. ಅವರಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯ‌ಕ್ಕೆ ಅನುಗುಣವಾಗಿ ಮುಂಬರುವ ದಿನಗಳಲ್ಲಿಕ್ರಿಕೆಟ್‌ನ ಯಾವುದಾದರೂ ಮಾದರಿಯಲ್ಲಿಭಾರತೀಯ ತಂಡವನ್ನು ಪ್ರತಿನಿಧಿಸಿದರೆ ಅಚ್ಚರಿಪಡಬೇಕಾಗಿಲ್ಲ.
- ಸುನೀಲ್‌ ಗವಾಸ್ಕರ್‌ ಮಾಜಿ ಕ್ರಿಕೆಟಿಗ

ಭಾರತೀಯ ಕ್ರಿಕೆಟ್‌ನ ಈ ಇಬ್ಬರು ದಿಗ್ಗಜರ ಮಾತುಗಳೇ ಕರ್ನಾಟಕದ ಪ್ರತಿಭಾವಂತ ದೇವದತ್‌ ಪಡಿಕ್ಕಲ್‌ ಕ್ರಿಕೆಟ್‌ ಬದುಕಿನ ಮುನ್ನುಡಿಗಳಾಗಿವೆ. ಕಳೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನಲ್ಲಿತನ್ನ ಬ್ಯಾಂಟಿಂಗ್‌ ಸ್ಥಿರ ಪ್ರದರ್ಶನದ ಮೂಲಕ ಕ್ರಿಕೆಟ್‌ ಪಂಡಿತರು, ಅಭಿಮಾನಿಗಳ ಗಮನ ಸೆಳೆದಿದ್ದ ದೇವದತ್‌, ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ‘ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸ್ಟಾರ್‌’ ಎಂಬುದನ್ನು ನಿರೂಪಿಸುತ್ತಿದ್ದಾರೆ. 

21 ವರ್ಷದ ಈ ಎಡಗೈ ಬ್ಯಾಟ್ಸ್‌ಮನ್‌ ಪಡಿಕ್ಕಲ್‌ ಆಟ ನೋಡುವುದೇ ಚೆಂದ. ಆಧುನಿಕ ಚುಟುಕು ಕ್ರಿಕೆಟ್‌ಗೆ ಬೇಕಾಗಿರುವ ಆಕ್ರಮಣಶೀಲತೆ ಮತ್ತು ತಾಂತ್ರಿಕವಾಗಿಯೂ ಪರಿಪೂರ್ಣ ಎನಿಸುವಂಥ ಆಟವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. 6.3 ಅಡಿ ಎತ್ತರದ ದೇವದತ್‌, ಈಗ ಐಪಿಎಲ್‌ನಲ್ಲಿಆಡುತ್ತಿರುವ ವೈಭವವನ್ನು ನೋಡಿದರೆ, ಶೀಘ್ರವೇ ಭಾರತೀಯ ರಾಷ್ಟ್ರೀಯ ಕ್ರಿಕೆಟ್‌ ತಂಡದ ಬಾಗಿಲನ್ನು ತಟ್ಟದೇ ಇರಲಾರರು. ಆಯ್ಕೆಗಾರರಿಗೂ ಪಡಿಕ್ಕಲ್‌ ಅವರನ್ನು ಬಿಟ್ಟುಕೊಡಲು ಸಾಧ್ಯವಾಗದೇ ಇರಬಹುದು. ಸದ್ಯದ ಮಟ್ಟಿಗೆ, ಕ್ರಿಕೆಟ್‌ನ ಮೂರೂ ಫಾಮ್ರ್ಯಾಟ್‌ಗಳಲ್ಲಿ ಆರಂಭಿಕ ಸ್ಥಾನದಲ್ಲಿ ಘಟಾನುಘಟಿ ಕ್ರಿಕೆಟರ್ಸ್‌ ಇದ್ದಾರೆ. ಜೊತೆಗೆ, ಬೆಂಚ್‌ ಸ್ಟ್ರೆಂಥ್‌ ಕೂಡ ಬಲಿಷ್ಠವಾಗಿದೆ. ಹಾಗಿದ್ದೂ, ಪಡಿಕ್ಕಲ್‌ ತೋರುತ್ತಿರುವ ಗಮನಾರ್ಹ ಪ್ರದರ್ಶನವು ಅವರನ್ನು ಭಾರತೀಯ ಕ್ರಿಕೆಟ್‌ ತಂಡಕ್ಕೆ ಕರೆತರಬಹುದು. 

‘ಟೀಮ್‌ ಫಸ್ಟ್‌’ ಎಂಬ ಮನೋಭಾವ ಕೂಡ ಪಡಿಕ್ಕಲ್‌ ಅವರಲ್ಲಿ ಇರುವುದನ್ನು ನಾವು ಈ ಸೀಸನ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ನೋಡಿದೆವು. ಐಪಿಎಲ್‌ ವೃತ್ತಿಜೀವನದ ಮೊದಲನೇ ಶತಕ ಗಳಿಸುವ ಅವಕಾಶ ಸಿಕ್ಕರೂ, ಆಟ ಬೇಗನೆ ಮುಗಿಸುವಂತೆ ನಾಯಕ ವಿರಾಟ್‌ ಕೊಹ್ಲಿ ಅವರಲ್ಲಿ ಕೇಳಿಕೊಂಡಿದ್ದರಂತೆ ದೇವದತ್‌. ‘‘ನಾನು ಶತಕ ಗಳಿಸುವುದಕ್ಕಿಂತ ತಂಡ ಗೆಲ್ಲುವುದು ಮುಖ್ಯ,’’ ಎಂದು ದೇವದತ್‌ ಬಳಿಕ ಹೇಳಿದ್ದರು. ಇದು ಅವರಲ್ಲಿರುವ ಟೀಮ್‌ ಫಸ್ಟ್‌ ಎಂಬ ಮನೋಭಾವವನ್ನು ಸಾರಿ ಹೇಳುತ್ತದೆ. ವೃತ್ತಿಪರ ಕ್ರಿಕೆಟರ್‌ನಲ್ಲಿರಬೇಕಾದ ಗುಣವಿದು.

ಐಪಿಎಲ್‌ನಲ್ಲಿ ಮಿಂಚುತ್ತಿರುವ ದೇವದತ್‌ ಪಡಿಕ್ಕಲ್‌, ಕರ್ನಾಟಕದ ಪರವಾಗಿ ರಣಜಿ, ಲಿಸ್ಟ್‌ ಎ ಕ್ರಿಕೆಟ್‌ ಆಡುತ್ತಿದ್ದಾರೆ. ಕರ್ನಾಟಕ ಪ್ರೀಮಿಯಲ್‌ ಲೀಗ್‌(ಕೆಪಿಎಲ್‌)ನ ಬಳ್ಳಾರಿ ಟಸ್ಕರ್‌ ಪರವಾಗಿ 2017ರಲ್ಲಿಆಡಿದ್ದಾರೆ. 2019ರಲ್ಲಿಬೆಂಗಳೂರು ರಾಯಲ್‌ ಚಾಲೆಂಜರ್ಸ್‌(ಆರ್‌ಸಿಬಿ) ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. 2020ರ ಐಪಿಎಲ್‌ ಟೂರ್ನಿಯಲ್ಲಿಆರ್‌ಸಿಬಿ ಪರವಾಗಿ ಓಪನಿಂಗ್‌ ಸ್ಥಾನಕ್ಕೆ ಲಗ್ಗೆ ಹಾಕಿದ ಪಡಿಕ್ಕಲ್‌ ಮೊದಲ ಮೂರು ಪಂದ್ಯಗಳಲ್ಲಿ50 ಪ್ಲಸ್‌ ರನ್‌ ಗಳಿಸಿ ದಾಖಲೆ ಬರೆದರು. ಭಾರತೀಯ ಕ್ರಿಕೆಟ್‌ ತಂಡದ ನಾಯಕ ಕೊಹ್ಲಿಯಂಥ ಆಟಗಾರರ ಜತೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುವುದು ಯಾವುದೇ ಆಟಗಾರನಿಗೆ ದೊರೆಯುವ ಅದೃಷ್ಟವೇ ಸರಿ. ಅಂಥದ್ದರಲ್ಲಿ ಪಡಿಕ್ಕಲ್‌ಗೆ ಕೊಹ್ಲಿಜತೆ ಇನ್ನಿಂಗ್ಸ್‌ ಕೂಡ ಆರಂಭಿಸುವ ಅವಕಾಶ ದೊರೆತಿರುವುದು ಅವರಲ್ಲಿರುವ ಪರಿಪೂರ್ಣ ಕ್ರಿಕೆಟ್‌ ಅನ್ನು ಹೊರ ತರಲು ಸಾಧ್ಯವಾಯಿತು. ಕೊಹ್ಲಿಗಿಂತಲೂ ಪಡಿಕ್ಕಲ್‌ಗೆ ದೊಡ್ಡ ಮೆಂಟರ್‌ ಸಿಗಲು ಸಾಧ್ಯವೆ? ಈ ದೃಷ್ಟಿಯಲ್ಲಿ ನೋಡಿದರೆ ದೇವದತ್‌ ಅದೃಷ್ಟವಂತ.

ಪಡಿಕ್ಕಲ್‌ ಮೊದಲ ಸೀಸನ್‌ನಲ್ಲಿ ಆರ್‌ಸಿಬಿ ಪರ 15 ಪಂದ್ಯ ಆಡಿದ್ದಾರೆ. 124 ಸ್ಟ್ರೈಕ್‌ ರೇಟ್‌ನಲ್ಲಿ, 31.53 ಸರಾಸರಿಯಲ್ಲಿ 473 ರನ್‌ ಕಲೆ ಹಾಕಿದ್ದಾರೆ. ಯುವ ಕ್ರಿಕೆಟರ್‌ ತಂಡಕ್ಕೆ ಪದಾರ್ಪಣೆ ಮಾಡಿದ ಟೂರ್ನಿಯಲ್ಲಿ ಇಷ್ಟೊಂದು ಸರಾಸರಿ ಮತ್ತು ಸ್ಟ್ರೈಕ್‌ ರೇಟ್‌ನಲ್ಲಿರನ್‌ ಗಳಿಸುವುದೇನೂ ಸುಲಭವಲ್ಲ. ಆ ಆವೃತ್ತಿಯಲ್ಲಿ ಆರ್‌ಸಿಬಿ ಪರ ಪಡಿಕ್ಕಲ್‌ ಗರಿಷ್ಠ ಸ್ಕೋರರ್‌ ಆಗಿದ್ದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು 50 ರನ್‌ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಡಿಕ್ಕಲ್‌ಗೆ ಕೊರೊನಾ ಸೋಂಕು ತಗುಲಿದ್ದರಿಂದ ಈಗ ನಡೆಯುತ್ತಿರುವ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಪರ ಆಡಲು ಸಾಧ್ಯವಾಗಲಿಲ್ಲ. ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಅಂಗಣಕ್ಕೆ ಇಳಿದ ಪಡಿಕ್ಕಲ್‌ ತಮ್ಮ ನೈಜಸಾಮರ್ಥ್ಯ‌ ಪ್ರದರ್ಶಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಅವರ ಆಟವಂತೂ ಹಬ್ಬವಾಗಿತ್ತು. 

ಕೇರಳದ ಎಡಪ್ಪಾಳ್‌ ಎಂಬಲ್ಲಿ2000 ಜುಲೈ 7ರಂದು ದೇವದತ್‌ ಜನಿಸಿದರು. ತಂದೆ ಬಾಬು ಕುನ್ನಥ್‌ ಮತ್ತು ತಾಯಿ ಅಂಬಿಲಿ ಪಡಿಕ್ಕಲ್‌ ಅವರು ಬೆಂಗಳೂರಿಗೆ ತಮ್ಮ ನೆಲೆಯನ್ನು ಬದಲಾಯಿಸುವ ಮುನ್ನ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರು. 11ನೇ ವಯಸ್ಸಿನಲ್ಲಿ ದೇವದತ್‌ ಕ್ರಿಕೆಟ್‌ ಅನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಾಸ ಆರಂಭಿಸಿದರು. ಕರ್ನಾಟಕ ಇನ್ಸ್‌ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನಲ್ಲಿ 2014ರಿಂದ ತರಬೇತಿ ಪಡೆಯಲಾರಂಭಿಸಿದರು. ಅಂಡರ್‌ 16 ಮತ್ತು ಅಂಡರ್‌ 19 ಕ್ರಿಕೆಟ್‌ ವಿಭಾಗದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. 

2018-19ರ ಸಾಲಿನಲ್ಲಿ ಕರ್ನಾಟಕದ ಪರವಾಗಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಕಣ್ಣಿಗೆ ಬಿದ್ದ ದೇವದತ್‌ ಐಪಿಎಲ್‌ನಲ್ಲಿ ಆಡಲು ವೇದಿಕೆ ಸೃಷ್ಟಿಸಿಕೊಂಡರು. 2019ರ ಸೆ.26ರಂದು ಕರ್ನಾಟಕ ಪರವಾಗಿ ಲಿಸ್ಟ್‌ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವಿಜಯ ಹಜಾರೆ ಪಂದ್ಯಾವಳಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್‌ ಗಳಿಸಿದರು. ಈ ಟೂರ್ನಿಯಲ್ಲಿ 11 ಪಂದ್ಯಗಳಿಂದ 609 ರನ್‌ ಗಳಿಸಿ ಎಲ್ಲರ ಗಮನ ಸೆಳೆದರು. 2019ರ ಅಕ್ಟೋಬರ್‌ನಲ್ಲಿ ಭಾರತೀಯ ಎ ತಂಡದ ಸದಸ್ಯರಾದರು. 2019ರ ನವೆಂಬರ್‌ನಲ್ಲಿದೇಶಿ ಟ್ವೆಂಟಿ20ಗೂ ಅಡಿಯಿಟ್ಟರೂ. 2019-20ರ ಸಾಲಿನ ಮಸ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿಕರ್ನಾಟಕವನ್ನು ಪ್ರತಿನಿಧಿಸಿದ್ದರು. ಮುಂದೆ 2021ರ ಸಾಲಿನ ಸಯ್ಯದ್‌ ಮಸ್ತಾಕ್‌ ಅಲಿ ಟ್ರೂಫಿ ಟೂರ್ನಿಗೆ ಕರ್ನಾಟಕ ತಂಡದ ಭಾಗವಾದರು.

ಗೌತಮ್‌ ಗಂಭೀರ್‌ ಅವರನ್ನು ಮೆಚ್ಚುವ ಪಡಿಕ್ಕಲ್‌ ಸದ್ಯ 15 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 34.88ರ ಸರಾಸರಿಯಲ್ಲಿ907 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಹತ್ತು ಅರ್ಧ ಶತಕಗಳು ಸೇರಿವೆ. ಇನ್ನು 20 ಲಿಸ್ಟ್‌ ಎ ಕ್ರಿಕೆಟ್‌ ಪಂದ್ಯಗಳನ್ನಾಡಿರುವ ದೇವದತ್‌, 86.68ರ ಸರಾಸರಿಯಲ್ಲಿ1387 ರನ್‌ ಗಳಿಸಿದ್ದಾರೆ. ಇದರಲ್ಲಿ 6 ಶತಕ ಮತ್ತು 8 ಅರ್ಧ ಶತಕಗಳಿವೆ. 36 ಟ್ವೆಂಟಿ20 ಪಂದ್ಯಗಳನ್ನಾಡಿ, 45.41 ಸರಾಸರಿಯಲ್ಲಿ 1408 ರನ್‌ ಪೇರಿಸಿದ್ದಾರೆ. ತುಂಬ ಕಡಿಮೆ ಅವಧಿಯಲ್ಲಿಸಾಕಷ್ಟು ರನ್‌ ಗಳಿಸುವ ಮೂಲಕ ಕ್ರಿಕೆಟ್‌ ಪಂಡಿತರ ಮನಸ್ಸು ಗೆದ್ದಿದ್ದಾರೆ. 

ಐಪಿಎಲ್‌ನ ಪ್ರದರ್ಶನವಂತೂ ಅವರನ್ನು ಸ್ಟಾರ್‌ ಪಟ್ಟಕ್ಕೇರಿಸಿದೆ. ಶೀಘ್ರವೇ ಭಾರತೀಯ ಕ್ರಿಕೆಟ್‌ ತಂಡವನ್ನು ದೇವದತ್‌ ಪ್ರತಿನಿಧಿಸಬಹುದು ಎಂಬ ಭವಿಷ್ಯವನ್ನು ಬಹುತೇಕರು ನುಡಿಯುತ್ತಿದ್ದಾರೆ. ಜಿ.ಆರ್‌.ವಿಶ್ವನಾಥ, ರಾಹುಲ್‌ ದ್ರಾವಿಡ್‌ ಮತ್ತು ಕೆ.ಎಲ್‌ ರಾಹುಲ್‌  ಅವರಂಥ  ಬ್ಯಾಟ್ಸಮನ್‌ಗಳನ್ನು ನೀಡಿರುವ ಕರ್ನಾಟಕದಿಂದ ಮತ್ತೊಬ್ಬ ಪ್ರತಿಭಾನ್ವಿತ ಬ್ಯಾಟ್ಸಮನ್‌ ಆಗಿ ದೇವದತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುವ ದಿನಗಳು ದೂರವಿಲ್ಲ. ದೇವದತ್‌ಗೆ ಈಗಿನ್ನೂ 21 ವರ್ಷ. ಅವರ ಮುಂದೆ ಬೇಕಾದಷ್ಟು ಕ್ರಿಕೆಟ್‌ ಜೀವನವಿದೆ.


ಈ ಲೇಖನವು ವಿಜಯ ಕರ್ನಾಟಕದ 2021ರ ಮೇ 25ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


 

ಕಾಮೆಂಟ್‌ಗಳಿಲ್ಲ: