ಸೋಮವಾರ, ಏಪ್ರಿಲ್ 26, 2021

Chief Justice N V Ramana: ನ್ಯಾಯ ನಿಪುಣ ನ್ಯಾ.ರಮಣ

ಕಾನೂನು ಪಾಂಡಿತ್ಯ, ಸಮಚಿತ್ತ, ನ್ಯಾಯನಿಷ್ಠ ವ್ಯಕ್ತಿತ್ವದ ನ್ಯಾ. ಎನ್‌ ವಿ ರಮಣ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಹೌದು.


- ಮಲ್ಲಿಕಾರ್ಜುನ ತಿಪ್ಪಾರ

ನ್ಯಾಯ ಪರಿಪಾಲನೆಯಲ್ಲಿನೈಪುಣ್ಯತೆಯನ್ನು ಸಾಧಿಸಿರುವ, ಅಪಾರ ಕಾನೂನು ಪಾಂಡಿತ್ಯವನ್ನು ಹೊಂದಿರುವ ನ್ಯಾ. ಎನ್‌ ವಿ ರಮಣ ಅವರು ದೇಶದ ಅಗ್ರ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಬಹುಶಃ ಈ ಘನ ಹುದ್ದೆಗೆ ರಮಣ ಅವರು ಪ್ರತಿಶತ ಸಮರ್ಥನೀಯ ವ್ಯಕ್ತಿಯಾಗಿದ್ದಾಧಿರೆಂಬುದು ಕಾನೂನು ವಲಯದಲ್ಲಿಕೇಳಿ ಬರುತ್ತಿರುವ ಮೆಚ್ಚುಗೆ ಮಾತು. 

ಪತ್ರಿಕೆಯಲ್ಲಿ‘ಸುದ್ದಿ’ ಬರೆಯುತ್ತಿದ್ದ ರಮಣ ಅವರು ‘ತೀರ್ಪು’ ಬರೆಯುವವರೆಗೂ ತಲುಪಿದ ಜೀವನದ ಪಯಣವೂ ಸಾಕಷ್ಟು ರೋಚಕ ಹಾಗೂ ಸೂಧಿರ್ತಿದಾಯಕ. ರೈತನ ಮಗನೊಬ್ಬ ಇಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆಂದರೆ ಅದು ಈ ದೇಶದ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ; ಸಂವಿಧಾನ ಒದಗಿಸಿದ ಅವಕಾಶ. 

ಸದಾ ಶಾಂತಚಿತ್ತರಾಗಿರುವ ರಮಣ ನ್ಯಾಯ ಪರಿಪಾಲನೆಯಲ್ಲಿಮಾತ್ರ ಕಠೋರ. ನ್ಯಾಯದ ಹಾದಿಯಲ್ಲಿಎಷ್ಟೇ ಎಡರು ತೊಡರುಗಳು ಎದುರಾದರೂ ಅವರು ಎದೆಗುಂದಿದ ಪ್ರಕರಣವಿಲ್ಲ. ಸತ್ಯವನ್ನು ಯಾವುದೇ ಅಂಜಿಕೆ ಇಲ್ಲದೇ ಹೇಳಿದ್ದಾರೆ ಮತ್ತು ನಾಗರಿಕ ಹಕ್ಕುಗಳನ್ನು ಸಂರಕ್ಷಿಸಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ; ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಕೇಂದ್ರ ಸರಕಾರ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್‌ ಸೇವೆಯನ್ನು ಬಂದ್‌ ಮಾಡಿತ್ತು. ಸರಕಾರದ ನಿಷೇಧ ವರ್ಷಗಟ್ಟಲೆ ಮುಂದುವರಿಯಿತು ಮತ್ತು ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಾಗ, ಅದರ ವಿಚಾರಣೆ ನಡೆಸಿದ್ದು ಇದೇ ನ್ಯಾ. ಎನ್‌.ವಿ.ರಮಣ ನೇತೃತ್ವದ ಪೀಠ. ‘‘ಈ ಪ್ರಕರಣದಲ್ಲಿ ಅನಿರ್ದಿಷ್ಟಾವಧಿಗೆ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದು ಕಾನೂನುಬಾಹಿರವಾಗುತ್ತದೆ,’’ ಎಂದು ಹೇಳಿ, ಸಂವಿಧಾನದಡಿಯಲ್ಲಿ ಇಂಟರ್ನೆಟ್‌ ಸೇವೆಯೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿದೆ. ಹಾಗಾಗಿ, ಇಂಟರ್ನೆಟ್‌ ಕೂಡ ಮೂಲಭೂತ ಹಕ್ಕು ಎಂದು ಪೀಠ ಹೇಳಿತು ಮತ್ತು ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್‌ ಸೇವೆ ಮರು ಆರಂಭಿಸಲು ಆದೇಶಿಸಿತು. 

ಇದೇ ರೀತಿಯ ಹಲವು ಐತಿಹಾಸಿಕ ತೀರ್ಪುಗಳನ್ನು ಅವರು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕಚೇರಿಯನ್ನು ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ವ್ಯಾಪ್ತಿಗೆ ತರುವಲ್ಲಿ ಇವರು ನೀಡಿದ ತೀರ್ಪು ಕಾರಣ. ಉದ್ಯಮಿ ಹಾಗೂ ಆರ್‌ಟಿಐ ಕಾರ್ಯಕರ್ತ ಸುಭಾಶ್‌ಚಂದ್ರ ಅಗರ್ವಾಲ್‌ ಅವರು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಆಸ್ತಿ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ(ಸಿಪಿಐಒ) ಆರ್‌ಟಿಐನಡಿ ಕೇಳಿಕೊಂಡಿದ್ದರು. ಆದರೆ, ಗೌಪ್ಯ ಮಾಹಿತಿ ಎಂಬ ಕಾರಣ ನೀಡಿ, ಈ ಅರ್ಜಿಯನ್ನು ಸಿಪಿಐಒ ವಜಾ ಮಾಡಿದರು. ಈ ಪ್ರಕರಣ ಕಡೆಗೆ ಸುಪ್ರೀಂ ಕೋರ್ಟ್‌ನ ಸಂವಿಧಾನಪೀಠಕ್ಕೆ ವರ್ಗವಾಗಿ, ಸುಪ್ರೀಂ ಕೋರ್ಟ್‌ ಕೂಡ ಸಾರ್ವಜನಿಕ ಕಚೇರಿಯಾಗಿರುವು­ದರಿಂದ 2005ರ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಐತಿಹಾಸಿಕ ತೀರ್ಪು ಹೊರ ಬಿತ್ತು. ಈ ತೀರ್ಪಿನ ಹಿಂದೆ ನ್ಯಾ.ರಮಣ ಅವರ ಮಹತ್ತರ ಕಾಣಿಕೆ ಇದೆ. ಈ ತೀರ್ಪಿನೊಂದಿಗೆ ಹಾಲಿ ನ್ಯಾಯಮೂರ್ತಿ­ಗಳು ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸಬೇಕಾಯಿತು. 

ವಾಣಿಜ್ಯ ವ್ಯಾಜ್ಯಗಳನ್ನು ಬಗೆಹರಿಸುವಲ್ಲೂರಮಣರ ಕಾನೂನು ಪಾಂಡಿತ್ಯ ನೆರವಿಗೆ ಬಂದಿದೆ. ಅನೇಕ ಪ್ರಕರಣಗಳಲ್ಲಿ ಮೈಲುಗಲ್ಲುತೀರ್ಪುಗಳನ್ನು ನೀಡಿದ್ದಾರೆ. ಇದಕ್ಕೆ ವಿದ್ಯಾ ದ್ರೋಲಿಯಾ, ಅಲ್ಕನೋ ವರ್ಸಸ್‌ ಸಲೇಮ್‌ ಪ್ರಕರಣಗಳ ತೀರ್ಪನ್ನು ಉದಾಹರಣೆಯಾಗಿ ನೀಡಬಹುದು. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದ ಹಲವು ಪ್ರಕರಣಗಳಲ್ಲಿ ಅವರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಅನರ್ಹ ಪ್ರಕರಣದಲ್ಲಿ, ಸ್ಪೀಕರ್‌ ನೀಡಿದ ತೀರ್ಮಾನವನ್ನು ಎತ್ತಿ ಹಿಡಿದಿದ್ದರು. 2019ರಲ್ಲಿ ಮಹಾರಾಷ್ಟ್ರದಲ್ಲಿಸರಕಾರ ರಚನೆ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ವೇಳೆ, ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ ಸಂವಿಧಾನಬದ್ಧ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದ್ದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗುವ ಮುಂಚೆ ರಮಣ, ಆಂಧ್ರಪ್ರದೇಶ ಹೈಕೋರ್ಟ್‌, ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ, ಆಂಧ್ರಪ್ರದೇಶ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್‌ ನಲ್ಲಿ ವಕೀಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ಮಾಡುವಾಗ ಸಾಂವಿಧಾನಿಕ, ಅಪರಾಧ, ಸೇವೆ ಮತ್ತು ಅಂತಾರಾಜ್ಯ ಕಾನೂನುಗಳ ವಿಷಯತಜ್ಞತೆಯನ್ನು ಸಾಧಿಸಿದ್ದರು. ಜೊತೆಗೆ ಸಿವಿಲ್‌, ಕ್ರಿಮಿನಲ್‌, ಲೇಬರ್‌, ಸವೀಸ್, ಚುನಾವಣಾ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಹಲವು ಕೇಸ್‌ಗಳಲ್ಲಿ ಕೇಂದ್ರ ಸರಕಾರ, ರೇಲ್ವೆಯನ್ನು ಪ್ರತಿನಿಧಿಸಿದ್ದಾರೆ. ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ವಕೀಲಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದ ಅವರನ್ನು 2000 ಜೂನ್‌ 27ರಂದು ಆಂಧ್ರಪ್ರದೇಶದ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಮಾರ್ಚ್‌ 10ರಿಂದ 2013 ಮೇ 20ರವರೆಗೂ ಆಂಧ್ರಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದಾರೆ. ಬಳಿಕ ಅವರನ್ನು 2013 ಸೆಪ್ಟೆಂಬರ್‌ 2ರಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು. ಇದಾದ ಒಂದೇ ವರ್ಷದಲ್ಲಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ 2014 ಫೆಬ್ರವರಿ 17ರಂದು ನೇಮಕಗೊಂಡರು. 

ಅಪಾರ ಕಾನೂನು ಪಾಂಡಿತ್ಯ ಮತ್ತು ಸಮಚಿತ್ತ, ದೃಢ ನಿಲುವು ಹೊಂದಿದ ವ್ಯಕ್ತಿಯೊಬ್ಬರು ಮುಖ್ಯ ನ್ಯಾಯಮೂರ್ತಿ ಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಆಗಿತ್ತು. ಕಾನೂನು ಪ್ರೀತಿಸುವಷ್ಟೇ ಕಲೆ ಮತ್ತು ಸಾಹಿತ್ಯವನ್ನೂ ಇಷ್ಟ ಪಡುತ್ತಾರೆ. 

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಹಳ್ಳಿಯ ಕೃಷಿಕ ಕುಟುಂಬದಲ್ಲಿ ಎನ್‌ ವಿ ರಮಣ ಅವರು 1957 ಆಗಸ್ಟ್‌ 27ರಂದು ಜನಿಸಿದರು. ಇವರ ತಂದೆ ಗಣಪತಿ ರಾವ್‌ ಮತ್ತು ತಾಯಿ ಸರೋಜನಿ ದೇವಿ ಕೃಷಿಕರು. ಬಿಎಸ್‌ಸಿ ಪದವಿ ಪಡೆದ ನಂತರ ಕಾನೂನು ಪದವಿ ಸಂಪಾದಿಸಿದರು. 1975ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿಧಿದಾಗ ರಮಣ ಅವರು ಒಂದು ಶೈಕ್ಷ ಣಿಕ ವರ್ಷವನ್ನು ತ್ಯಜಿಸಬೇಕಾದ ಪರಿಸ್ಥಿತಿ ಉಂಟಾಯಿತು. ಬಳಿಕ ಅವರು, ಎರಡು ವರ್ಷಗಳ ಕಾಲ ತೆಲುಗು ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ, ನಂತರ ಕಾನೂನು ಪದವಿಯನ್ನು ಪಡೆದುಕೊಂಡು ವಕೀಲಿಕೆ ಆರಂಭಿಸಿದರು. ಪೊನ್ನಾವರಮ್‌ ಹಳ್ಳಿಯಿಂದ ವಕೀಲಿಕೆ ಆರಂಭಿಸಿದ ಮೊದಲಿಗರು ಇವರು. 

ವಿದ್ಯಾರ್ಥಿಯಾಗಿದ್ದಾಗಲೇ ರೈತರು, ಕಾರ್ಮಿಕರು ಮತ್ತು ಇತರ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿದ್ದರು. ನಾಗರಿಕರ ಹಕ್ಕುಗಳ ಪರವಾಗಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ಅವರಲ್ಲಿ ಸಾಮಾಜಿಕ ಬದ್ಧತೆ ಮೈಗೂಡಿರುವುದನ್ನು ನಾವು ಕಾಣಬಹುದು ಮತ್ತು ಅದು ಅವರ ತೀರ್ಪುಗಳಲ್ಲಿ ಪ್ರತಿಫಲನವಾಗಿದೆ. ಸರಳ ಜೀವನವನ್ನು ಮೈಗೂಡಿಸಿಕೊಂಡಿ­ರುವ ನ್ಯಾ.ರಮಣ ನೈತಿಕವಾಗಿ ಯಾವುದಾದರೂ ವಿಷಯ ಸರಿ ಅಲ್ಲಎಂದು ತೋರಿದರೆ ಅದನ್ನು ಟೀಕಿಸುವುದರಲ್ಲಿಎಂದೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ನಮ್ಮ ದೇಶದ ಶಿಕ್ಷ ಣ ವ್ಯವಸ್ಥೆಗೆ ಬಗ್ಗೆ ಮಾಡಿದ ಟೀಕೆಯನ್ನು ಉದಾಹರಿಸಬಹುದು. 

ಇಷ್ಟೆಲ್ಲ ಹೆಗ್ಗಳಿಕೆಯ ಮಧ್ಯೆಯೂ ಅವರು ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಆಂಧ್ರಪ್ರದೇಶದ ಸಿಎಂ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು, ಸುಪ್ರೀಂ ಕೋರ್ಟ್‌ನ ಸಿಜೆಐಗೆ ಪತ್ರ ಬರೆದು ರಮಣ ಹಾಗೂ ಅವರ ಸಂಬಂಧಿಕರು ಅಮರಾವತಿಯ ಭೂಸ್ವಾಧೀನದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಜತೆಗೆ ತಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾ­ರೆಂದು ಆರೋಪಿಸಿದ್ದರು. ಈ ಪತ್ರ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. 

63 ವರ್ಷದ ನ್ಯಾ. ರಮಣ ಅವರು, ಏಪ್ರಿಲ್‌ 24ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದು, ಅವರ ಅಧಿಕಾರಾವಧಿ 2022 ಆಗಸ್ಟ್‌ 26ಕ್ಕೆ ಕೊನೆಗೊಳ್ಳಲಿದೆ. ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಮಾತ್ರವಲ್ಲದೆ ಅವರು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರೂ ಆಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಅವರ ಮುಂದೆ ಸಾಕಷ್ಟು ಸವಾಲುಗಳಂತೂ ಇದ್ದೇ ಇವೆ.




ಕಾಮೆಂಟ್‌ಗಳಿಲ್ಲ: