ಸೋಮವಾರ, ಮಾರ್ಚ್ 22, 2021

Did You Addicted to Smartphone: ನೀವು ಸ್ಮಾರ್ಟ್‌‌ಫೋನ್‌ಗೆ ಅಡಿಕ್ಟ್ ಆಗಿದ್ದೀರಾ?

- ಮಲ್ಲಿಕಾರ್ಜುನ ತಿಪ್ಪಾರ
ಸ್ಮಾರ್ಟ್‌ ಫೋನ್‌ ಬಳಸೋಕೆ ಶುರು ಮಾಡಿದ ಮೇಲೆ ಓದುವುದಕ್ಕೆ ಆಗುತ್ತಿಲ್ಲ? ನಿದ್ದೆ ಸರಿಯಾಗಿ ಮಾಡಲು ಆಗುತ್ತಿಲ್ಲವೇ? ಟಾಯ್ಲೆಟ್‌ಗೆ ಹೋಗಬೇಕಾದರೂ ಸ್ಮಾರ್ಟ್‌ ಫೋನ್‌ ಕೈಯಲ್ಲೇ ಇರುತ್ತದೆಯೇ? ಮೂರೂ ಹೊತ್ತು ಮೊಬೈಲ್‌ನಲ್ಲೇ ಮುಳುಗಿರ್ತಿಯಾ ಅಂತಾ ಬೈತಿರ್ತಾರೆ ಅಂತ ಅನಿಸುತ್ತಿದೆಯಾ? 

ಹೌದು, ಎಂದಾದರೆ ಖಂಡಿತವಾಗಿಯೂ ನೀವು ಸ್ಮಾರ್ಟ್‌ ಫೋನ್‌ ಗೀಳಿಗೆ ಬಿದ್ದಿದ್ದೀರಿ ಎಂದರ್ಥ. ಅದನ್ನೇ ಮತ್ತೊಂದು ರೀತಿ ಹೇಳುವುದಾದರೆ, ಸ್ಮಾರ್ಟ್‌ ಫೋನ್‌ಗೆ ಸಿಕ್ಕಾಪಟ್ಟೆ ಅಡಿಕ್ಟ್  ಆಗಿದ್ದೀರಿ, ಅದಕ್ಕೆ ದಾಸರಾಗಿದ್ದೀರಿ, ಅದೊಂದು ರೀತಿಯಲ್ಲಿಚಟ ಆಗಿದೆ!

ನಮ್ಮ ಯಾವುದೇ ನಡವಳಿಕೆ, ಹವ್ಯಾಸ, ಚಟುವಟಿಕೆಗಳು ಯಾವಾಗ ಚಟಗಳಾಗಿ ಬದಲಾಗುತ್ತವೆಯೋ ಆಗ ಅವುಗಳಿಂದ ಅಪಾಯವೇ  ಹೆಚ್ಚು. ಸ್ಮಾರ್ಟ್‌ ಫೋನ್‌ ಕೂಡ ಹಾಗೆಯೇ, ಅದು ನಮ್ಮ ಅಗತ್ಯವನ್ನು ಪೂರೈಸುವ ಸಾಧನ. ಎಷ್ಟು ಅಗತ್ಯವಿದೆಯೋ ಅಷ್ಟೇ ಬಳಸಬೇಕು. ಆದರೆ, ನಾವೆಲ್ಲಅದನ್ನು ಅನಗತ್ಯವಾಗಿ, ಅಗತ್ಯ ಮೀರಿ ಬಳಸುತ್ತಿರುವ ಪರಿಣಾಮ ಅದಕ್ಕೆ ಅಡಿಕ್ಟ್ ಆಗಿದ್ದೇವೆ. ಇದರಿಂದ ಹೊರ ಬರಲು ಈ ಟಿಟ್ಸ್‌ ಟ್ರೈ ಮಾಡಿ.

1. ಯಾವಾಗ ಬಳಸಿಕೊಳ್ಳಬೇಕು
ಫೋನ್‌ ಅನ್ನು ಯಾವಾಗ ಬಳಸಿಕೊಳ್ಳಬೇಕೆಂದು ನೀವೇ ನಿರ್ಧರಿಸಿಕೊಳ್ಳಿ. ದಿನದ ಇಂತಿಂಥ ಸಮಯದಲ್ಲಿಮಾತ್ರವೇ ಬಳಸಿ. ಉಳಿದ ಸಮಯದಲ್ಲಿಅದರಿಂದ ದೂರವಿರಿ. ಕಚೇರಿಯಲ್ಲಿಮಾತ್ರವೇ ನಿಮಗೆ ಫೋನ್‌ ಅಗತ್ಯ ಹೆಚ್ಚಿದ್ದರೆ ಅಲ್ಲಿಮಾತ್ರವೇ ಬಳಕೆ ಇರಲಿ. ಮನೆಯಲ್ಲಿಅದರಿಂದ ದೂರವಿರಿ.

2.ಒಂದಿಷ್ಟು ಗಂಟೆ ಸ್ವಿಚ್ಡ್‌ ಆಫ್‌ ಮಾಡಿ
ದಿನದಲ್ಲಿನಿಮಗೆ ಅಗತ್ಯವಿಲ್ಲದ ಸಮಯವನ್ನು ಗುರುತಿಸಿಕೊಂಡು ಆ ಸಮಯದಲ್ಲಿಫೋನ್‌ ಸ್ವಿಚ್ಡ್‌ ಆಫ್‌ ಮಾಡುವುದನ್ನು ರೂಢಿಸಿಕೊಳ್ಳಿ. ಹಾಗೆಯೇ, ಕಾರು ಚಾಲನೆ ಮಾಡುವಾಗ, ಜಿಮ್‌ ಮಾಡುವಾಗ, ಊಟ ಮಾಡುವಾಗ ಅಥವಾ ಮಕ್ಕಳೊಂದಿಗೆ ಆಟ ಆಡುವಾಗ ಫೋನ್‌ ಮುಟ್ಟಲು ಹೋಗಬೇಡಿ. ನಿಮ್ಮ ಬಾತ್‌ ರೂಮ್‌ಗೆ ಫೋನ್‌ ನಿಷೇಧಿಸಿ.

3.ಹಾಸಿಗೆಗೆ ಫೋನ್‌ ಬರಕೂಡದು
ಹೌದು, ಬಹಳಷ್ಟು ಜನ ಮಲಗುವ ಮುನ್ನ ಸುಮಾರು ಹೊತ್ತು ಸ್ಮಾರ್ಟ್‌ ಫೋನ್‌ ಬಳಸುತ್ತಾರೆ. ಇದೊಂದು ದುರಭ್ಯಾಸ. ನಿಮ್ಮ ನಿದ್ದೆ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಫೋನ್‌ ಹೊರಸೂಸುವ ನೀಲಿ ಕಿರಣಗಳು ನಿದ್ದೆಯನ್ನು ಹಾಳು ಮಾಡುತ್ತವೆ. ಫೋನ್‌ನಲ್ಲಿಇ-ಬುಕ್‌ ಓದುವ ಬದಲು ರಿಯಲ್‌ ಪುಸ್ತಕಗಳನ್ನೇ ಓದಿ. 

4.ಪರ್ಯಾಯ ಹುಡುಕಿಕೊಳ್ಳಿ
ಒಂದೊಮ್ಮೆ ನಿಮಗೆ ಬೋರ್‌ ಆಗುತ್ತಿದೆ, ಒಂಟಿತನ ಎನಿಸುತ್ತಿದೆ ಎಂದು ಫೋನ್‌ ಕೈಗೆತ್ತಿಕೊಳ್ಳಬೇಡಿ. ಬದಲಿಗೆ ಪರ್ಯಾಯ ದಾರಿ ಹುಡುಕಿಕೊಳ್ಳಿ. ಹೆಲ್ತ್  ಆಕ್ಟಿವಿಟಿ ಮಾಡಿ. ಮ್ಯೂಸಿಕ್‌ ಸಿಸ್ಟಮ್‌ನಲ್ಲಿಸಂಗೀತ ಆಲಿಸಿ; ಆಡಿ; ಹಾಡಿ. ಫೋನ್‌ ಬಿಟ್ಟು ಬೇರೆ ಏನಾದರೂ ಮಾಡಿಯಷ್ಟೆ.

5.ಸೋಷಿಯಲ್‌ ಮೀಡಿಯಾ ಆ್ಯಪ್‌ ತೆಗೆಯಿರಿ
ಸ್ಮಾರ್ಟ್‌ ಫೋನ್‌ನಲ್ಲಿನಾವು ಹೆಚ್ಚಿನ ಸಮಯವನ್ನು ಸೋಷಿಯಲ್‌ ಮೀಡಿಯಾಗಳಲ್ಲೇ ಕಳೆಯುತ್ತೇವೆ. ಇದರಿಂದಾಗಿ ನಮ್ಮ ಜೀವನ ಅಸಮತೋಲನವಾಗುತ್ತಿದೆ. ಹಾಗಾಗಿ, ಸೋಷಿಯಲ್‌ ಮೀಡಿಯಾ ಆ್ಯಪ್‌ಗಳಿಂದ ಹೊರಬನ್ನಿ. ಇಲ್ಲವೇ ಎಷ್ಟು ಅಗತ್ಯವಿದೆಯೋ ಅಷ್ಟೇ  ಬಳಸಿ. ಇಡೀ ದಿನ ಅಲ್ಲೇ ಇರಬೇಡಿ. ಸೋಷಿಯಲ್‌ ಮೀಡಿಯಾ ಆಚೆಯೂ ಲೈಫ್‌ ಇದೆ.

6. ಪದೇ ಪದೆ ಚೆಕ್‌ ಮಾಡಬೇಡಿ
ಪದೇಪದೆ ಸ್ಮಾರ್ಟ್‌ ಫೋನ್‌ ಕೈಗೆತ್ತಿಕೊಂಡು ಮೆಸೆಜ್‌ ಬಂದಿದೆಯಾ, ಸೋಷಿಯಲ್‌ ಮೀಡಿಯಾ ನೋಟಿಫಿಕೇಷನ್‌ ಬಂದಿದೆಯಾ, ಮೇಲ್‌ಗಳು ಬಂದಿದೆಯಾ ಅಂತಾ ಚೆಕ್‌ ಮಾಡೋದು ಹೆಚ್ಚುತ್ತಿದೆ. ಈ ಪ್ರವೃತ್ತಿಯೇ ಮುಂದೆ ಚಟವಾಗಿ ಬಿಡುತ್ತದೆ. ಹಾಗಾಗಿ, ಪದೇಪದೆ ಸ್ಮಾರ್ಟ್‌ ಫೋನ್‌ ಚೆಕ್‌ ಮಾಡಲು ಹೋಗಬೇಡಿ.

7. ಥಿಯೇಟರ್‌ನಲ್ಲಿಸಿನಿಮಾ ನೋಡಿ
ಇತ್ತೀಚಿನ ದಿನಗಳಲ್ಲಿಬಹಳಷ್ಟು ಮಂದಿ ಸ್ಮಾರ್ಟ್‌ ಫೋನ್‌ನಲ್ಲಿಸಿನಿಮಾ ನೋಡಲು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರಿಂದಾಗಿಯೇ ಹೆಚ್ಚಿನ ಸಮಯವನ್ನು ಅವರು ಸ್ಮಾರ್ಟ್‌ ಫೋನ್‌ಗಳಲ್ಲಿಕಳೆಯುತ್ತಿದ್ದಾರೆ. ಇದರಿಂದ ಹೊರ ಬರಲು ಚಿತ್ರಮಂದಿರಗಳಲ್ಲಿಸಿನಿಮಾ ನೋಡಿ  ಅಥವಾ ವಾರಕ್ಕೆ ನಿರ್ದಿಷ್ಟ ಸಮಯವನ್ನು ಇದಕ್ಕಾಗಿಯೇ ಮೀಸಲಿಡಿ.

ಈ ಲೇಖನವು ವಿಜಯ ಕರ್ನಾಟಕದ 2021ರ ಮಾರ್ಚ್ 22ರ ಸಂಚಿಕೆಯಲ್ಲಿ ಪ್ರಕಟವಾಗಿದೆ.




 

ಕಾಮೆಂಟ್‌ಗಳಿಲ್ಲ: