ಭಾನುವಾರ, ಫೆಬ್ರವರಿ 28, 2021

Indian desi Twitter 'Koo': ಬನ್ನಿ... Kooಗು ಹಾಕೋಣ!

- ಮಲ್ಲಿಕಾರ್ಜುನ ತಿಪ್ಪಾರ
ದೇಶಿ ಟ್ವಿಟರ್‌’ ಎಂದೇ ಕರೆಯಿಸಿಕೊಳ್ಳುತ್ತಿರುವ  ಕೂ(Koo) ಎಂಬ ಮೈಕ್ರೊ ಬ್ಲಾಗಿಂಗ್‌ ಆ್ಯಪ್‌ಗೆ ಶುಕ್ರ ದೆಸೆ ಆರಂಭವಾಗಿದೆ. 

ರೈತ ಪ್ರತಿಭಟನೆ ಹಾಗೂ ‘ಕೆಂಪು ಕೋಟೆ ಹಿಂಸಾಚಾರ’ದ ಹಿನ್ನೆಲೆಯಲ್ಲಿಕೆಲವು ಟ್ವಿಟರ್‌ ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರ ಪಟ್ಟಿ ನೀಡಿತ್ತು. ನೀವು ಹೇಳಿದಂತೆ ಎಲ್ಲವನ್ನೂ ರದ್ದುಗೊಳಿಸಲು ಸಾಧ್ಯವಿಲ್ಲಎಂದು ಟ್ವಿಟರ್‌ ಹೇಳುತ್ತಿದ್ದಂತೆ, ದೇಶಿ ಮೈಕ್ರೊಬ್ಲಾಗಿಂಗ್‌ ‘ಕೂ’ನತ್ತ ಕೇಂದ್ರ ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕ್ರಿಕೆಟಿ ಗರು, ಗಣ್ಯರು, ಸಿನಿಮಾ ನಟ- ನಟಿಯರು ದಾಂಗುಡಿ ಇಟ್ಟರು.

ಅಷ್ಟೇ ಅಲ್ಲದೇ ದೇಶಿ ಆ್ಯಪ್‌ ಕೂ ಬೆಂಬಲಿಸವಂತೆ ಕರೆ ನೀಡಿದರು. ಕೇಂದ್ರ ಸರಕಾರದ ಬಹಳಷ್ಟು ಇಲಾಖೆಗಳು ಕೂ ಆ್ಯಪ್‌ನಲ್ಲಿ ಖಾತೆ ತೆರೆದವು. ಕಳೆದ ಕೆಲವು ದಿನಗಳಿಂದ ಕೂ ಡೌನ್‌ಲೋಡ್‌ಗಳಲ್ಲಿ10 ಪಟ್ಟು ಹೆಚ್ಚಳವಾಗಿದೆ. ಬಹುಶಃ ಈ ಪ್ರಮಾಣ ಇನ್ನೂ ಹೆಚ್ಚಾಗಬಹುದು. ಇದೀಗ ಎಲ್ಲರ ಬಾಯಲ್ಲೂಈ ಆ್ಯಪ್‌ನದ್ದೇ ‘ಕೂ’ಗು. 

ಏತನ್ಮಧ್ಯೆ, ಕೂ ಆ್ಯಪ್‌ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಫ್ರೆಂಚ್‌ ಹ್ಯಾಕರ್‌ರೊಬ್ಬರು ಆಪಾದಿಸಿದ್ದರು. ಇದನ್ನು ಕೂ ಆ್ಯಪ್‌ ಅಲ್ಲಗಳೆದಿದೆ. ಜೊತೆಗೆ, ಈ ಆ್ಯಪ್‌ನಲ್ಲಿ ಚೀನಿ ಹೂಡಿಕೆದಾರರು ಬಂಡವಾಳ ತೊಡಗಿಸಿದ್ದಾರೆ ಎಂಬ ಮಾತುಗಳಿದ್ದವು. ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಕೂ ಆ್ಯಪ್‌ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣನ್‌ 

ಅವರು, ‘‘ಭಾರತೀಯರೇ ಸ್ಥಾಪಿಸಿರುವ ಈ ಕಂಪನಿ ಭಾರತದಲ್ಲಿ ನೋಂದಣಿಯಾಗಿದೆ. ಈ ಮೊದಲು ಹೂಡಿಕೆ ಮಾಡಿದ್ದ ಚೀನಿ ಹೂಡಿಕೆದಾರರು ಶೀಘ್ರವೇ ಹೊರ ಬೀಳಲಿದ್ದಾರೆ. ಅಪ್ಪಟ ಭಾರತೀಯವಾಗಿರುವ 3one4 capital  ನೇತೃತ್ವದ ಸಂಸ್ಥೆ ಬೊಂಬಿನೇಟ್‌ ಟೆಕ್ನಾಲಜಿಸ್‌ಗೆ ಫಂಡ್‌ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಏನಿದು ಕೂ?
ಕೂ ಆ್ಯಪ್‌ ಕೂಡ ಟ್ವಿಟರ್‌ ರೀತಿಯ ಮೈಕ್ರೊಬ್ಲಾಗಿಂಗ್‌ ವೇದಿಕೆಯಾಗಿದೆ. ಬಳಕೆದಾರರು ಆಡಿಯೊ ಕ್ಲಿಪ್ಸ್ ‌ ಸೇರಿದಂತೆ ಮಲ್ಟಿಮೀಡಿಯಾ ಕಂಟೆಂಟ್‌ ಪೋಸ್ಟ್‌ ಮಾಡಬಹುದು. ಟ್ವಿಟರ್‌ ರೀತಿಯಲ್ಲಿ ನಿಗದಿತ ಪದಗಳೊಳಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಅಂದರೆ, 400 ಅಕ್ಷ ರಗಳ ಮಿತಿಯಲ್ಲಿ ಹೇಳಬೇಕಾಗುತ್ತದೆ. ಇಂಗ್ಲಿಷ್‌ ಮಾತ್ರವಲ್ಲದೇ, ಕನ್ನಡ ಸೇರಿದಂತೆ 6 ಭಾರತೀಯ ಭಾಷೆಗಳಿಗೆ ಸಪೋರ್ಟ್‌ ಮಾಡುತ್ತದೆ ಮತ್ತು ಇನ್ನಷ್ಟು ಸ್ಥಳೀಯ ಭಾಷೆಗಳಲ್ಲಿ ಸೇವೆ ದೊರೆಯಲಿದೆ. ಟ್ವಿಟರ್‌ ರೀತಿಯಲ್ಲೇ ಕೂ ಲೋಗೊ ಕೂಡ ಪಕ್ಷಿಯಾಗಿದ್ದು, ಹಳದಿ ಬಣ್ಣದಲ್ಲಿದೆ. ಹ್ಯಾಷ್‌ಟ್ಯಾಗ್‌(#) ಮತ್ತು ಮೆನ್ಷನ್‌(@)ಗಳಿಗೆ ಇದು ಅವಕಾಶ ಕಲ್ಪಿಸಿ ಕೊಡುತ್ತದೆ. ರಿ-ಟ್ವೀಟ್‌ ರೀತಿಯಲ್ಲಿ‘ರಿ-ಕೂ’ಗೂ ಅವಕಾಶವಿದೆ ಇಲ್ಲಿ. ಚಾಟ್‌ ಬದಲಿಗೆ ಡೈರೆಕ್ಟ್ ಮೆಸೆಜ್‌ ಮಾಡಬಹುದು. 

ಯಾವಾಗ ಆರಂಭವಾಯಿತು?
ಎಂಬಿಎ ಪದವೀಧರರಾದ ಅಪ್ರಮೇಯ ರಾಧಾಕೃಷ್ಣನ್‌ ಮತ್ತು ಮಾಯಾಂಕ್‌ ಬಿಡಾವತ್ಕಾ ಅವರ ಕೂ ಆ್ಯಪ್‌ ಸಂಸ್ಥಾಪಕರು. ಈ ಇಬ್ಬರು ವೋಕಲ್‌ ಸಂಸ್ಥಾಪಕರೂ ಹೌದು. ವೋಕಲ್‌ ಎಂಬುದು ಕೋರಾ ರೀತಿಯಲ್ಲಿ ಆಡಿಯೊ-ವಿಡಿಯೊ ನಾಲೆಡ್ಜ್‌ ಷೇರಿಂಗ್‌ ವೇದಿಕೆಯಾಗಿತ್ತು. 2020ರ ಮಾರ್ಚ್‌ ತಿಂಗಳಲ್ಲಿ ಕೂ ಆ್ಯಪ್‌ ಆರಂಭವಾಯಿತು ಮತ್ತು ಕೇಂದ್ರ ಸರಕಾರದ ಆತ್ಮನಿರ್ಭರ್‌ ಭಾರತ್‌ ಚಾಲೆಂಜ್‌ ಟೆಕ್‌ ಇನ್ನೋವೇಷನ್‌ ಗೆದ್ದುಕೊಂಡಿದೆ. ಬೆಂಗಳೂರಿನಲ್ಲೇ ಇದರ ಕಚೇರಿ ಇದೆ. 

ಹೇಗೆ ಡೌನ್‌ಲೋಡ್‌?
ಕೂ ಉಚಿತ ಆ್ಯಪ್‌ ಆಗಿದ್ದು, ಆಂಡ್ರಾಯ್ಡ್‌ ಮತ್ತು ಐಒಎಸ್‌ ವೇದಿಕೆಗಳಲ್ಲಿಲಭ್ಯವಿದೆ. Koo: Connect with Indians in Indian Languages ಶೀರ್ಷಿಕೆಯಡಿ ಪ್ಲೇ ಸ್ಟೋರ್‌ನಲ್ಲಿದ್ದರೆ, Koo: Connect with Top Indians ಹೆಸರಿನಡಿ ಐಒಎಸ್‌ನಲ್ಲಿ ದೊರೆಯುತ್ತದೆ. 

ಸುಧಾರಣೆ ಅಗತ್ಯ
ದೇಶಿ ಟ್ವಿಟರ್‌ ಎಂಬ ಹೆಗ್ಗಳಿಕೆಯನ್ನು ಪಡೆಯುತ್ತಿರುವ ಕೂ ಆ್ಯಪ್‌ ಇನ್ನೂ ಹಲವು ರೀತಿಯಲ್ಲಿ ಸುಧಾರಣೆ ಕಾಣಬೇಕಿದೆ ಎನ್ನುವುದು ಅದನ್ನು ಬಳಸುತ್ತಿರುವವರ ಅನೇಕರ ಅಭಿಪ್ರಾಯವಾಗಿದೆ. ಟ್ವಿಟರ್‌ ರೀತಿಯಲ್ಲಿ ಇದು ಬಳಕೆದಾರರ ಸ್ನೇಹಿಯಾಗಿಲ್ಲ ಎಂಬುದು ಸಾಮಾನ್ಯ ದೂರು. ಊಹೆಗೆ ನಿಲುಕದ ರೀತಿಯಲ್ಲಿ ಬಳಕೆದಾರರನ್ನು ಪಡೆಯುತ್ತಿರುವ ಕೂ ಮುಂಬರುವ ದಿನಗಳಲ್ಲಿ ಬಹುಶಃ ಈ ಎಲ್ಲಕುಂದು ಕೊರತೆಗಳನ್ನು ನೀಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಕಂಪನಿಯಾಗಿ ಬೆಳೆಯುವ ಎಲ್ಲ ಅರ್ಹತೆಗಳು ಮತ್ತು ಸಾಮರ್ಥ್ಯವಂತೂ ಇದ್ದೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.



ಭಾನುವಾರ, ಫೆಬ್ರವರಿ 14, 2021

Ghulam Nabi Azad is a Man of Integrity: 'ಆಜಾದ್‌' ಭಾರತದ 'ಬದ್ಧತೆ'ಯ ನಾಯಕ

 ಕಾಂಗ್ರೆಸ್‌ನ ಬಿಕ್ಕಟ್ಟುಗಳಿಗೆ ಪರಿಹಾರ ಸೂಚಿಸುತ್ತಿದ್ದ ಚಾಣಾಕ್ಷ ರಾಜಕಾರಣಿ



- ಮಲ್ಲಿಕಾರ್ಜುನ ತಿಪ್ಪಾರ
ಮೊದಲು ಈ ಘಟನೆ ಓದಿ... ಅದು ರಾಜಮಾತೆ ಸಿಂಧಿಯಾ ಪ್ರತಿಪಕ್ಷ ದ ಉಪ ನಾಯಕಿ­ಯಾಗಿದ್ದ ಸಮಯ. ಸದನದಲ್ಲಿ ಒಮ್ಮೆ ಗುಲಾಂ ನಬಿ ಆಜಾದ್‌ ವಿರುದ್ಧ ಗಂಭೀರ ಆರೋಪ ಮಾಡಿದರು. ಆಗ ಎದ್ದು ನಿಂತ ಆಜಾದ್‌, ‘‘ನಾನು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಇದರ ತನಿಖೆಗೆ ಸಮಿತಿ ರಚಿಸುವಂತೆ ಕೇಳಿಕೊಳ್ಳುತ್ತೇನೆ. ಸಮಿತಿಯ ನೇತೃತ್ವವನ್ನು ವಾಜಪೇಯಿ ವಹಿಸಿಕೊಳ್ಳಲಿ. ಎಲ್‌.ಕೆ.ಆಡ್ವಾಣಿ ಮತ್ತು ನೀವು(ರಾಜಮಾತಾ) ಸಮಿತಿಯ ಸದಸ್ಯರಾಗಿ. ಹದಿನೈದು ದಿನದಲ್ಲಿ ವರದಿ ನೀಡಲಿ ಮತ್ತು ಅವರು ನೀಡುವ ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿದ್ದೇನೆ,’’ ಎಂದರು. ಆಗ ಎದ್ದು ನಿಂತ ವಾಜಪೇಯಿ ಸದನದ ಜೊತೆಗೆ ಆಜಾದ್‌ ಅವರಿಗೂ ಕ್ಷ ಮೆ ಕೋರಿ, ‘‘ಅವರ ಬಗ್ಗೆ(ಆಜಾದ್‌) ರಾಜಮಾತಾ ಸಿಂಧಿಯಾಗೆ ಗೊತ್ತಿಲ್ಲ; ನನಗೆ ಅವ­ರೇನು ಎಂಬುದು ಗೊತ್ತು,’’ ಎಂದು ಹೇಳಿ ವಿಷಯವನ್ನು ತಣ್ಣಗಾಗಿಸಿದರು.

ಗುಲಾಂ ನಬಿ ಆಜಾದ್‌ ತಮ್ಮ ರಾಜಕೀಯ ಜೀವನದು­ದ್ದಕ್ಕೂ ಅಂಥದೊಂದು ‘ಪ್ರಾಮಾಣಿಕತೆ’ ಮತ್ತು ‘ಬದ್ಧತೆ’ಯನ್ನು ಕಾಯ್ದು­ಕೊಂಡು ಬಂದಿದ್ದಾರೆ. ಭಾರತೀಯ ರಾಜಕಾರಣದಲ್ಲಿ ಅಜಾತಶತ್ರು ರಾಜಕಾರಣಿಗಳು ವಿರಳ. ಈ ವಿರಳರ ಸಾಲಿನಲ್ಲಿ ಕಾಂಗ್ರೆಸ್‌ನ ಈ ಹಿರಿಯ ನಾಯಕ ನಿಲ್ಲುತ್ತಾರೆ. ನಾಲ್ಕೈದು ದಶಕ ಭಾರತದ ರಾಜಕಾರಣದ ಹಲವು ಪಲ್ಲಟಗಳಿಗೆ ಸಾಕ್ಷಿಯಾದ ಆಜಾದ್‌, ರಾಜ್ಯ­ಸಭೆಯಿಂದ ನಿವೃತ್ತರಾಗುತ್ತಿದ್ದಾರೆ. ಬಿಜೆಪಿ ಸೇರಿ ಹಲವು ಪಕ್ಷ ಗಳು ಅವರ ಮುತ್ಸದ್ದಿತನ, ಬದ್ಧತೆಯನ್ನು ಬಾಯಿತುಂಬ ಕೊಂಡಾಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರಂತೂ, ಆಜಾದ್‌ ಬಗ್ಗೆ ವಿದಾಯ ಭಾಷಣ ಮಾಡುವಾಗ ಗದ್ಗದಿತರಾದರು. ಮೋದಿ ಅವರು ಆಜಾದ್‌ರನ್ನು ಹೊಗಳಿದ ರೀತಿಯನ್ನು ಹಲವರು, ಹಲವು ರೀತಿ­ಯಲ್ಲೇ ಅರ್ಥೈಯಿಸುತ್ತಿದ್ದಾರೆ. ಕೆಲವರು ಆಜಾದ್‌ ಬಿಜೆಪಿ ತೆಕ್ಕೆಗೆ ಜಾರ­ಬಹುದು; ಬಿಜೆಪಿಗೂ ಕಾಶ್ಮೀರದಲ್ಲಿ ವಿಶ್ವಸನೀಯ, ಮುತ್ಸದ್ದಿಯ ಮುಖ­ವೊಂದು ಆಜಾದ್‌ ರೂಪದಲ್ಲಿ ಸಿಗಬಹುದು ಎಂದು ವಿಶ್ಲೇಷಿಸುತ್ತಿದ್ದಾರೆ. ಆದರೆ, ಅವರು ಬಿಜೆಪಿ ಸೇರುವುದನ್ನು ಒಂದೇ ಏಟಿಗೆ ಹೊಡೆದು ಹಾಕಿದ್ದಾರೆ. ಸಂದರ್ಶನದಲ್ಲಿ, ‘‘ಯಾವಾಗ ಕಾಶ್ಮೀರದಲ್ಲಿ ಕಪ್ಪು ಹಿಮ ಬೀಳುತ್ತದೆಯೋ ಆ ದಿನ ಬಿಜೆಪಿ ಸೇರುತ್ತೇನೆ,’’ ಎಂದು ಸ್ಪಷ್ಪಪಡಿಸಿದ್ದಾರೆ. ಅದರರ್ಥ ಬಿಜೆಪಿ ಮಾತ್ರವಲ್ಲದೇ ಬೇರೆ ಯಾವುದೇ ಪಕ್ಷ ಕ್ಕೂ ಸೇರುವುದಿಲ್ಲಎಂದು ಖಡಕ್ಕಾಗಿ ಹೇಳಿದ್ದಾರೆ. 

ಮೋದಿ ಅವರ ಶ್ಲಾಘನೆ ಹಿಂದಿನ ಕಾರಣವನ್ನು ಬಿಚ್ಚಿಟ್ಟಿ­ದ್ದಾರೆ. 90ರಿಂದಲೂ ಮೋದಿ ಮತ್ತು ನಬಿ ಸ್ನೇಹಿತರು. ಇಬ್ಬರು ತಮ್ಮ ಪಕ್ಷ ದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾಗ ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. ಆ ಸಮಯದಲ್ಲಿ ‘ಚಹ ಪೇ ಚರ್ಚಾ’ ನಡೆಯುತ್ತಿತ್ತು. ಬಳಿಕ ಇಬ್ಬರು ಮುಖ್ಯಮಂತ್ರಿಗಳಾದರು. ಪ್ರಧಾನಿ, ಗೃಹ ಸಚಿವರ ಸಭೆಗಳಿಗೆ ಹೋದಾಗ ಭೇಟಿಯಾಗುತ್ತಿದ್ದರು. ಹೀಗೆ ಅವರಿಬ್ಬರ ನಡುವಿನ ಸ್ನೇಹ ಈ ಕ್ಷ ಣದವರೆಗೂ ಜಾರಿಯಲ್ಲಿದೆ. ಕಾಶ್ಮೀರದಲ್ಲಿ 2006ರಲ್ಲಿ ಗುಜರಾತ್‌ನ ಪ್ರವಾಸಿಗರ ಬಸ್‌ ಮೇಲೆ ದಾಳಿ ನಡೆಯಿತು. ಈ ವಿಷಯವನ್ನು ಅಂದು ಸಿಎಂ ಆಗಿದ್ದ ಮೋದಿಗೆ ತಿಳಿಸುವಾಗ ಆಜಾದ್‌ ಅತ್ತಿದ್ದರಂತೆ. ರಾಜ್ಯಸಭೆಯಲ್ಲಿ ಮೋದಿ ಮಾತ­ನಾಡಿದ ಆ ಕ್ಷ ಣವೇ ಅವರಿಬ್ಬರನ್ನು ಭಾವುಕರನ್ನಾಗಿಸಿತು.

ಅದೇನೇ ಇರಲಿ. ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟುಗಳು ಸಂಭವಿಸಿ­ದಾಗ, ಅದನ್ನು ಪರಿಹರಿಸುವ ತಂಡದ ಮುಂಚೂಣಿಯಲ್ಲಿ ಆಜಾದ್‌ ಇರುತ್ತಿದ್ದರು. ಆ ಮೂಲಕ ಅವರೊಬ್ಬ ‘ಟ್ರಬಲ್‌ ಶೂಟರ್‌’ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಇಂದಿರಾ ಗಾಂಧಿ ಅವರಿಂದ ಹಿಡಿದು ಸೋನಿಯಾ ಗಾಂಧಿ ತನಕ ಕಾಂಗ್ರೆಸ್‌ನ ಪ್ರಮುಖ­ರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ತಾವೊಬ್ಬ ಗಾಂಧಿ ಕುಟುಂಬದ ನಿಷ್ಠ ಎಂಬು­ದನ್ನು ಸಾಬೀತುಪಡಿಸಿದ್ದಾರೆ. ಹಾಗಂತ, ಪಕ್ಷ  ವಿಭಿನ್ನ ದಾರಿಯಲ್ಲಿ ಸಾಗುತ್ತಿ­ದ್ದಾಗ, ವೈಫಲ್ಯ ಸುಳಿಯಲ್ಲಿ ಸಿಲುಕಿದಾಗ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ-‘ಜಿ23’. ಪಕ್ಷ ದ ನಾಯಕತ್ವವನ್ನು ವಿಮರ್ಶೆಗೊಳಪಡಿಸುವ ಸಂಬಂಧ ಪತ್ರ ಬರೆದ 23 ನಾಯಕರ ಪೈಕಿ ಇವರು ಒಬ್ಬರು. ಮತ್ತೊಂದು ಅರ್ಥದಲ್ಲಿ‘ಜಿ23’ಯ ‘ಅನಧಿಕೃತ’ ವಕ್ತಾರರು.

ಮೇಲಿಂದ ಮೇಲೆ ಚುನಾವಣೆಯನ್ನು ಕಾಂಗ್ರೆಸ್‌ ಸೋಲುತ್ತಿರುವಾಗ ಪಕ್ಷ ದ ತಳಮಟ್ಟದ ನಾಯಕತ್ವದಿಂದ ಹಿಡಿದು ಉನ್ನತ ಮಟ್ಟದ ನಾಯಕತ್ವವರೆಗೂ ಬದಲಾವಣೆ ಅಗತ್ಯ ಎಂಬುದು ಅವರ ವಾದವಾಗಿತ್ತು. ಈ ವಿಚಾರಗಳು ಕಾಂಗ್ರೆಸ್‌ನ ಹಲವು ನಾಯಕರಿಗೆ ಹಿಡಿಸದೇ ಹೋದವು. ಆದರೆ, ಆಜಾದ್‌ ತಾವು ಹೇಳಬೇಕಿದ್ದ ಸತ್ಯವನ್ನು ಹೇಳಿಯೇ ಬಿಟ್ಟಿದ್ದಾರೆ.  ವಿಮರ್ಶೆಗೊಳಪಡಿಸುವ ಕೆಲಸವನ್ನು ಪಕ್ಷ ದ ನಾಯಕತ್ವ ಮಾಡಬೇಕಷ್ಟೇ. ನಾಲ್ಕೈದು ದಶಕಗಳ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಸಂಸತ್ತಿನಲ್ಲಿಪ್ರತಿಪಕ್ಷ ದ ನಾಯಕನಾಗಿ, ಪಕ್ಷ ದ ಹಲವು ಹುದ್ದೆ ನಿರ್ವಹಿಸಿ, ಹಲವು ರಾಜ್ಯಗಳ ಉಸ್ತುವಾರಿಯಾಗಿ ಅಗಾಧ ಅನುಭವದ ಮೂಟೆ ಆಜಾದ್‌ ಅವರ ಬೆನ್ನಮೇಲಿದೆ.

ಕಾಶ್ಮೀರದ ದೋಡಾ ಜಿಲ್ಲೆಯ ಸೋತಿ ಎಂಬ ಹಳ್ಳಿಯಲ್ಲಿ1949 ಮಾರ್ಚ್‌ 7ರಂದು ಗುಲಾ ನಂಬಿ ಆಜಾದ್‌ ಜನಿಸಿದರು. ರಹಮತುಲ್ಲಾಹ ಬಟ್ಟ ಮತ್ತು ಬಸಾ ಬೇಗಂ ತಂದೆ-ತಾಯಿ. ಹುಟ್ಟಿದೂರಿನಲ್ಲಿಪ್ರಾಥಮಿಕ ಶಿಕ್ಷ ಣ ಮುಗಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜಮ್ಮುಗೆ ತೆರಳಿ, ಜಿಜಿಎಂ ಸೈನ್ಸ್‌ ಕಾಲೇಜಿನಿಂದ ಡಿಗ್ರಿ ಪಡೆದುಕೊಂಡರು ಆಜಾದ್‌. ಶ್ರೀನಗರದ ಕಾಶ್ಮೀರ ವಿವಿಯಿಂದ 1972ರಲ್ಲಿಪ್ರಾಣಿಶಾಸ್ತ್ರದಲ್ಲಿ ಮಾಸ್ಟರ್‌ ಡಿಗ್ರಿ ಸಂಪಾದಿಸಿದರು.

1973ರಲ್ಲಿ ಭಲೆಸ್ಸಾ ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಆಯ್ಕೆಯಾ­ಗುವ ಮೂಲಕ ರಾಜಕೀಯ ಜೀವನಕ್ಕೆ ಅಡಿ ಇಟ್ಟರು. ಎರಡು ವರ್ಷದ ಬಳಿಕ ಜಮ್ಮು-ಕಾಶ್ಮೀರ ರಾಜ್ಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ರಾಗಿ ಆಯ್ಕೆಯಾ­ದರು. 1980ರಲ್ಲಿಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷ ರಾಗಿ ಆಯ್ಕೆ ಯಾದ ಬಳಿಕ ಅವರ ರಾಜಕೀಯ ರಥ ಎಲ್ಲೂನಿಲ್ಲದೇ ಓಡಲಾರಂಭಿಸಿತು. ಹಾಗೆ ನೋಡಿದರೆ,  ಭಾರತದ ರಾಜಕಾರಣದಲ್ಲಿ ಸಕ್ರಿಯವಾಗಿ ಗುರುತಿಸಿ­ಕೊಳ್ಳಲು ಇಂದಿರಾ ಗಾಂಧಿ ಅವರು ಕಾರಣ. ಆಜಾದ್‌ ಅವರಲ್ಲಿ ನಾಯ­ಕತ್ವ, ಸಂಘಟನಾ ಶಕ್ತಿ ಮತ್ತು ಬದ್ಧತೆಯನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಿದರು. ಮುಂದೆ ರಾಜೀವ್‌ ಗಾಂಧಿ ಅವರ ಕಾಲದಲ್ಲಿ ಅವರಿಗೆ ಪ್ರಾಧಾನ್ಯತೆ ಸಿಗುತ್ತಾ ಹೋಯಿತು.  

1980ರಲ್ಲಿ ಮಹಾರಾಷ್ಟ್ರದ ವಶಿಮ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆ­ಯಾಗುವ ಮೂಲಕ ಲೋಕಸಭೆಯನ್ನು ಪ್ರವೇಶಿಸಿದರು. 1982ರಲ್ಲಿ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯದ ಉಪಸಚಿವರಾಗಿ ಸರಕಾರದಲ್ಲೂ ಪಾಲ್ಗೊಂಡರು. 1984ರಲ್ಲಿ ಮತ್ತೆ ಲೋಕಸಭೆ ಆಯ್ಕೆಯಾದರು. 1990ರಿಂದ 96ರವರೆಗೂ ರಾಜ್ಯಸಭೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದರು. ಪಿ.ವಿ.ನರಸಿಂಹರಾವ್‌ ಸರಕಾರದಲ್ಲಿ ಸಂಸದೀಯ ವ್ಯವಹಾರಗಳು ಹಾಗೂ ನಾಗರಿಕ ವಿಮಾನಯಾನ ಸಚಿವಾಲ­ಯಗಳನ್ನು ನಿರ್ವಹಿಸಿದರು. ಆ ನಂತರ ಅವರು ಜಮ್ಮು-ಕಾಶ್ಮೀರದಿಂದ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಇದರ ಮಧ್ಯೆಯೇ 2005ರಲ್ಲಿ ಕಾಶ್ಮೀರ ಮುಖ್ಯಮಂತ್ರಿಯಾದರು. ಆದರೆ, ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಪಿಪಿ) ತನ್ನ ಬೆಂಬಲ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಅವರು ಸಿಎಂ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು.

ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ­-2ನೇ ಅವಧಿಯಲ್ಲಿ ಆಜಾದ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ನ್ಯಾಷನಲ್‌ ರೂರಲ್‌ ಹೆಲ್ತ್‌ ಮಿಷನ್‌ ವಿಸ್ತರಿಸಿ ಯಶಸ್ವಿಯಾ­ದರು. ಬಳಿಕ ನ್ಯಾಷನಲ್‌ ಅರ್ಬನ್‌ ಹೆಲ್ತ್‌ ಮಿಷನ್‌ ಆರಂಭಿಸಿ, ನಗರ ಪ್ರದೇಶಗಳಲ್ಲಿನ ಕೊಳಗೇರಿ ಮತ್ತು ಬಡವರಿಗೆ ಆರೋಗ್ಯ ಸೇವೆ ಸಿಗುವ ಹಾಗೆ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕೊರತೆ­ಯಿಂದಾಗಿ ಟಿವಿ ಮನರಂಜನೆ ಸಿಗುವುದಿಲ್ಲ. ಪರಿಣಾಮ­ವಾಗಿ ‘ಜನಸಂಖ್ಯೆ’ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದರು. ಮದುವೆಗೆ ನಿಗದಿ ಪಡಿಸಲಾಗಿರುವ ವಯೋಮಿತಿಯನ್ನು 25 ಮತ್ತು 30ಕ್ಕೆ ಹೆಚ್ಚಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣ ಮಾಡಬಹುದು ಎಂಬುದು ಅವರ ವಾದ.

2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸೋತು ಸುಣ್ಣವಾಗಿ, ಅಧಿಕಾರವಂಚಿತವಾಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ದ ನಾಯಕನ ಜವಾಬ್ದಾರಿ ಗುಲಾಂ ಹೆಗಲೇರಿತು. ಅಲ್ಲಿಂದ ನಿವೃತ್ತಿಯಾಗೋವರೆಗೂ ಆ ಸ್ಥಾನವನ್ನು ದಕ್ಷ ತೆಯಿಂದ ನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಆಜಾದ್‌ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುತ್ತಾರೋ, ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೋ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಆದರೆ, ಅವರ ಸೇವೆ ದೊರೆಯದೇ ಹೋದರೆ ಅದು ಕಾಂಗ್ರೆಸ್‌ ಪಕ್ಷ ಕ್ಕೆ ಹಾನಿಯೇ ಹೊರತು ಅವರಿಗಲ್ಲ. ಜೊತೆಗೆ, ಅವರು ಸ್ವತಂತ್ರ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೋರಾಟದ ‘ಮುಖ’ ವಾಗುವ ಸಾಧ್ಯತೆಗಳಿವೆ.


 

(ಈ ಲೇಖನವು ವಿಜಯ ಕರ್ನಾಟಕದ 2020ರ ಫೆಬ್ರವರಿ 14ರ ಸಂಚಿಕೆಯ ವಕ್ತಿಗತದಲ್ಲಿ ಪ್ರಕಟವಾಗಿದೆ)

ಶುಕ್ರವಾರ, ಫೆಬ್ರವರಿ 12, 2021

How to create YouTube shorts?: ಯುಟೂಬ್ ಶಾರ್ಟ್ಸ್ ಕ್ರಿಯೇಟ್ ಮಾಡೋದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ಭಾರತವೂ ಸೇರಿದಂತೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿಚೀನಾ ಮೂಲದ ಟಿಕ್‌ಟಾಕ್‌ ಕಿರು ವಿಡಿಯೊ ಆ್ಯಪ್‌ ಮೇಲೆ ನಿಷೇಧ ಹೇರಿದ್ದರಿಂದ ಆ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಅನೇಕ ಆ್ಯಪ್‌ಗಳು ಚಾಲ್ತಿಯಲ್ಲಿವೆ. ಈ ವಿಷಯದಲ್ಲಿಗೂಗಲ್‌ ಒಡೆತನದ ಯುಟ್ಯೂಬ್‌ ಕೂಡ ಹಿಂದೆ ಬಿದ್ದಿಲ್ಲ.

ಕಳೆದ ಸೆಪ್ಟೆಂಬರ್‌ನಲ್ಲಿಯುಟ್ಯೂಬ್‌ ಘೋಷಣೆ­ಯೊಂದನ್ನು ಮಾಡಿ, ಟಿಕ್‌ ಟಾಕ್‌ ರೀತಿಯ ಸೇವೆ ಒದಗಿಸುವ ಶಾರ್ಟ್ಸ್ (ಖhಟ್ಟಠಿs) ಅನ್ನು ಭಾರತದಲ್ಲಿಆರಂಭಿಸುವುದಾಗಿ ಹೇಳಿತ್ತು. ಈ ಆ್ಯಪ್‌ ಇನ್ನೂ ಬೀಟಾ ವರ್ಷನ್‌ನಲ್ಲಿದೆ. ಹಾಗಿದ್ದೂ ಈ ನಾಲ್ಕು ತಿಂಗಳಲ್ಲಿಶಾರ್ಟ್ಸ್ ಸೇವೆಯು ಭಾರತೀಯ ಬಳಕೆದಾರರಲ್ಲಿ ಹೆಚ್ಚು ಜನಪ್ರಿಯವಾಗತೊಡಗಿದೆ.

ಬಹಳಷ್ಟು ಬಳಕೆದಾರರು ತಮ್ಮ ಫೋನ್‌ಗಳನ್ನು ಬಳಸಿಕೊಂಡು ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಹಾಗಾಗಿಯೇ ಕ್ರಿಯೇಟರ್‌ಗಳಿಗೆ ಹೆಚ್ಚಿನ ಟೂಲ್‌ಗಳನ್ನು ಒದಗಿಸಲು ನಾವು ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ. ಭಾರತದಲ್ಲಿಯುಟ್ಯೂಬ್‌ ಶಾರ್ಟ್ಸ್ ಟೆಸ್ಟಿಂಗ್‌ ಮಾಡುತ್ತಿದ್ದೇವೆ.  ಮುಂದಿನ ಜನರೇ­ಷನ್‌ ತಮ್ಮ ವಿಷಯಗಳನ್ನು ಯಾವುದೇ ಅಡೆತಡೆಗಳಿಲ್ಲದೇ ಅಪ್ಲೋಡ್‌ ಮಾಡಲು ನೆರವಾಗಲು ನಾವು ಉತ್ಸುಕರಾಗಿದ್ದೇವೆ. ಇಲ್ಲಿಯ­ವರೆಗೆ ನಮ್ಮ ಯುಟ್ಯೂಬ್‌ 

ಶಾರ್ಟ್ಸ್ನಲ್ಲಿ ದಾಖಲಾಗಿರುವ ವಿಡಿಯೊಗಳು ಜಗತ್ತಿನಾದ್ಯಂತ ಜನರಿಗೆ ನೆರವಾಗಿದ್ದು, ನಿತ್ಯ ಸುಮಾರು 35 ಲಕ್ಷ  ವ್ಯೂಗಳನ್ನು ಕಾಣುತ್ತಿವೆ ಎನ್ನುತ್ತಾರೆ ಯುಟ್ಯೂಬ್‌ ಸಿಇಒ ಸೂಸಾನ್‌ ವೋಜ್ಸಿಕಿ ಅವರು.

ಶಾರ್ಟ್ಸ್ ಹೀಗೆ ಕ್ರಿಯೇಟ್‌ ಮಾಡಿ
ಇಷ್ಟೊಂದು ಜನಪ್ರಿಯವಾಗುತ್ತಿರುವ ಯೂಟ್ಯೂಬ್‌ ಶಾರ್ಟ್ಸ್ ಬಗ್ಗೆ ಇನ್ನೂ ಬಹಳಷ್ಟು ಜನರಿಗೆ ಗೊತ್ತಿಲ್ಲ. 

ಯುಟ್ಯೂಬ್‌ನಲ್ಲಿ ಕಿರು ವಿಡಿಯೊವನ್ನು ಹೇಗೆ ಮಾಡುವುದು ಎಂಬ ಬಗ್ಗೆ  ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. ನೋ ಪ್ರಾಬ್ಲೆಂ, ನಾವೀಗ ನಿಮಗೆ ಯುಟ್ಯೂಬ್‌  ಶಾರ್ಟ್ಸ್ ಹೇಗೆ ಮಾಡುವುದು ಎಂಬುದನ್ನು ಇಲ್ಲಿಹಂತಹಂತವಾಗಿ ಹೇಳಿದ್ದೇವೆ.

ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿಯುಟ್ಯೂಬ್‌ಗೆ ಸೈನ್‌ ಇನ್‌ ಆಗಿ. ಬಳಿಕ ಕ್ರಿಯೇಟ್‌ ಮೇಲೆ ಟ್ಯಾಪ್‌ ಮಾಡಿ. ಮತ್ತೆ ಕ್ರಿಯೇಟ್‌ ಶಾರ್ಟ್‌ ಮೇಲೆ ಮೊಟಕಿ. ಆಗ ಕ್ಲಿಪ್‌ ರೆಕಾರ್ಡ್‌ ಮಾಡಲು, ಕ್ಯಾಪ್ಚರ್‌ ಬಟನ್‌ ಮೇಲೆ ಟ್ಯಾಪ್‌ ಮಾಡಿ ಮತ್ತು ಅದನ್ನು ಹೋಲ್ಡ… ಮಾಡಿಕೊಂಡಿರಿ. ಅಥವಾ ಸ್ಟಾರ್ಟ್‌ ಮೇಲೆ ಟ್ಯಾಪ್‌ ಮಾಡಿ ರೆಕಾರ್ಡಿಂಗ್‌ ಆರಂಭಿಸಿ ಮತ್ತು ರೆಕಾರ್ಡಿಂಗ್‌ ಮುಗಿದ ಮೇಲೆ ಮತ್ತೆ ಟ್ಯಾಪ್‌ ಮಾಡಿ ಆಗ ಅಂತ್ಯಗೊಳ್ಳುತ್ತದೆ.

ಇಷ್ಟಾದ ಮೇಲೆ, ನಿಮಗೆ ಈ ಹಿಂದಿನ ವಿಡಿಯೊ ಕ್ಲಿಪ್‌ ಏನಾದರೂ ತೆಗೆದು ಹಾಕುವುದಿದ್ದರೆ ಅಥವಾ  ಈಗಾಗಲೇ ತೆಗೆದು ಹಾಕಿರುವ ವಿಡಿಯೊವನ್ನು ಮತ್ತೆ ಸೇರಿಸುವು­ದಿದ್ದರೆ, ಅನ್‌ ಡು  ಮತ್ತು ರೀಡು ಮೇಲೆ ಟ್ಯಾಪ್‌ ಮಾಡಿದರೆ ನಿಮಗೆ ಬೇಕಿರುವ ಹಾಗೆ ಮಾಡಿಕೊಳ್ಳಬಹುದು. 

ಪ್ರಿವ್ಯೂ ವಿಡಿಯೊಗಾಗಿ ನೆಕ್ಸ್ಟ್‌  ಮೇಲೆ ಟ್ಯಾಪ್‌ ಮಾಡಿ. ನಿಮ್ಮ ವಿಡಿಯೊ ವಿವರ ದಾಖಲಿಸಲು ಮತ್ತೆ ನೆಕ್ಸ್ಟ್‌  ಮೇಲೆ ಟ್ಯಾಪ್‌ ಮಾಡಿ. ವಿಡಿಯೊಗೆ ಶೀರ್ಷಿಕೆ ಸೇರಿಸಲು  ಆ್ಯಡ್‌ ಎ ಟೈಟಲ್‌ ಮೇಲೆ ಕ್ಲಿಕ್‌ ಮಾಡಿ. ಗರಿಷ್ಠ 100 ಪದಗಳನ್ನು ಬರೆಯಲು ಅವಕಾಶ ಕಲ್ಪಿಸುತ್ತದೆ. ಒಂದು ವೇಳೆ ನೀವು ಮಾಡಿರುವ ವಿಡಿಯೊ ಮಕ್ಕಳಿಗೆ ಅಲ್ಲದಿದ್ದರೆ, ಯಾರು  ನಿಮ್ಮ ವಿಡಿಯೊವನ್ನು ನೋಡಬೇಕೆಂಬುದನ್ನು ದಾಖಲಿಸಲು ಸೆಲೆಕ್ಟ್  ಆಡಿಯನ್ಸ್‌ ಮೇಲೆ ಟ್ಯಾಪ್‌ ಮಾಡಿ. ಇಷ್ಟಾದ ಮೇಲೆ ಅಪ್ಲೋಡ್‌ ಮೇಲೆ ಟ್ಯಾಪ್‌ ಮಾಡಿದರೆ, ನಿಮ್ಮ ಶಾರ್ಟ್ಸ್ ವಿಡಿಯೊ ಲೈವ್‌ ಹೋಗುತ್ತದೆ. ಅಲ್ಲಿಗೆ ನಿಮ್ಮ ಕಿರು ವಿಡಿಯೊ ಬ್ಲಾಗಿಂಗ್‌ ಮುಕ್ತಾಯವಾಗುತ್ತದೆ.

ರಿಮೈಂಡ್‌ ಸೆಟ್‌ ಮಾಡುವುದು ಹೇಗೆ?
ನೀವು ಹೆಚ್ಚಾಗಿ ಯುಟ್ಯೂಬ್‌ ನೋಡುತ್ತಿದ್ದರೆ ರಾತ್ರಿ ಹೊತ್ತಲ್ಲಿಬೆಡ್‌ ಟೈಮ್‌ ರಿಮೈಂಡರ್‌ ಸೆಟ್‌ ಮಾಡಿಕೊಳ್ಳಬಹುದು. ಈ ಆಯ್ಕೆ ಆಂಡ್ರಾಯ್ಡ… ಮತ್ತು ಐಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಬೆಡ್‌ ಟೈಮ್‌ ರಿಮೈಂಡರ್‌ ಸೆಟ್‌ ಮಾಡಲು ಹೀಗೆ ಮಾಡಿ:  ಯೂಟ್ಯೂಬ್‌ ಆ್ಯಪ್‌ಗೆ  ಸೈನ್‌ ಇನ್‌ ಆಗಿ, ಸೆಟ್ಟಿಂಗ್ಸ್‌ಗೆ ಹೋಗಿ. ಅಲ್ಲಿಜನರಲ್‌ ಆಯ್ಕೆಗಳಲ್ಲಿರುವ ‘ರಿಮೈಂಡ್‌ ಮೀ ವೆನ್‌ ಇಟ್ಸ್‌ ಬೆಡ್‌ ಟೈಮ್‌’ ಆಯ್ಕೆ ಮಾಡಿಕೊಳ್ಳಿ. ರಿಮೈಂಡರ್‌ ಗಾಗಿ ಬಳಿಕ ಸಮಯ ಆರಂಭ ಮತ್ತು ಮುಕ್ತಾಯವನ್ನು ಸೆಟ್‌ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ವಿಡಿಯೊಗಳನ್ನು ವೀಕ್ಷಿಸುವುದರಲ್ಲಿತಲ್ಲೀನರಾಗಿದ್ದಾಗ ಈ ಆಯ್ಕೆಯು ನಿಮಗೆ  ಬೆಡ್‌ ಟೈಮ್‌ ರಿಮೈಂಡ್‌ ಮಾಡುತ್ತದೆ.



ಭಾನುವಾರ, ಜನವರಿ 31, 2021

Rakesh Tikait is carrying his father's movement legacy, ತಂದೆಗೆ ತಕ್ಕ ಮಗ ರಾಕೇಶ್ ಟಿಕಾಯತ್

೮೦ ಮತ್ತು ೯೦ರ ದಶಕದಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ಹೋರಾಟಕ್ಕೆ ಸರಕಾರಗಳು ನಡುಗುತ್ತಿದ್ದವು. ಅವರ ಕಿರಿಯ ಪುತ್ರ ರಾಕೇಶ್ ಟಿಕಾಯತ್ ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ.

 

- ಮಲ್ಲಿಕಾರ್ಜುನ ತಿಪ್ಪಾರ
ರಾಕೇಶ್ ಟಿಕಾಯತ್ ಎಂಬ ಹೆಸರು ಎರಡು ತಿಂಗಳ ಹಿಂದೆ ಬಹುಶಃ ಉತ್ತರ ಪ್ರದೇಶದ ಜನರನ್ನು ಬಿಟ್ಟು ದೇಶದ ಇತರ ಭಾಗಗಳಿಗೆ ತೀರಾ ಪರಿಚಿತವಾಗಿರಲಿಲ್ಲ. ಆದರೆ, ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ಹೋರಾಟದ ‘ಮುಖ’ವಾಗಿ ಅವರೀಗ ದೇಶಪೂರ್ತಿ ಜನಪ್ರಿಯ. ಅಣ್ಣಾ ಹಜಾರೆ ಚಳವಳಿಯ ಮೂಸೆಯಲ್ಲಿ ಅರವಿಂದ ಕೇಜ್ರಿವಾಲ್ ಎಂಬ ನಾಯಕ ಬೆಳಕಿಗೆ ಬಂದಂತೆ ಈ ರೈತ ಹೋರಾಟದ ಫಲವಾಗಿ, ಭಾರತ ಕಿಸಾನ್ ಯೂನಿಯನ್(ಬಿಕೆಯು)ನ ವಕ್ತಾರ ರಾಕೇಶ್ ಟಿಕಾಯತ್ ಅವರು ಪ್ರಭಾವಿ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ೪೦ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದುಗೂಡಿ ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ತಮ್ಮ ಹೆಗಲ ಮೇಲೇರಿಸಿಕೊಂಡು ಮುನ್ನಡೆಯುತ್ತಿದ್ದಾರೆ.

ರಾಕೇಶ್ ಟಿಕಾಯತ್ ಬಗ್ಗೆ ತಿಳಿದುಕೊಳ್ಳುವ ಮುಂಚೆ ಅವರ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಬಗ್ಗೆ ತಿಳಿದುಕೊಂಡರೆ ನಿಮಗೆ ಮತ್ತೊಂದು ಹೊಳಹು ದೊರೆತೀತು. ಅದು ೧೯೮೮ರ ಸಮಯ. ಮಹೇಂದ್ರ ಸಿಂಗ್ ಟಿಕಾಯತ್ ಅವರು ೫ ಲಕ್ಷ ರೈತರೊಂದಿಗೆ ದಿಲ್ಲಿಗೆ ನುಗ್ಗಿದ್ದರು. ಅಂದು ಪ್ರಚಂಡ ಬಹುಮತದೊಂದಿಗೆ ಪ್ರಧಾನಿಯಾಗಿದ್ದ–ವರು ರಾಜೀವ್ ಗಾಂಧಿ ಮತ್ತು ಗೃಹ ಮಂತ್ರಿಯಾಗಿದ್ದವರು ಇತ್ತೀಚೆಗಷ್ಟೇ ನಿಧನರಾದ ಬೂಟಾ ಸಿಂಗ್. ಅಂದು ಮತ್ತು ಇಂದಿನ ಹೋರಾಟಕ್ಕೆ ವ್ಯತ್ಯಾಸ ಏನೆಂದರೆ; ಅಂದಿನ ಸರಕಾರವು ರೈತರನ್ನು ದಿಲ್ಲಿಯ ಗಡಿಯಲ್ಲೇನೂ ತಡೆದಿರಲಿಲ್ಲ. ಬದಲಿಗೆ ನಗರದೊಳಗೆ ಬಿಟ್ಟುಕೊಂಡಿತ್ತು. ರೈತರೆಲ್ಲರೂ ದಿಲ್ಲಿಯ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೂ ಟೆಂಟ್‌ಗಳನ್ನು ಹಾಕಿ ಪ್ರತಿಭಟನೆ ನಡೆಸಿದ್ದರು. ದಿಲ್ಲಿಯ ಬೋಟ್ ಕ್ಲಬ್ ಲಾನ್‌ನಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ ಸರಕಾರವು ಅವರ ಬೇಡಿಕೆಗಳಿಗೆ ಮಣಿಯದೇ ಬೇರೆ ದಾರಿ ಇರಲಿಲ್ಲ. ಇದರ ಮಧ್ಯೆಯೂ ರೈತ ಹೋರಾಟವನ್ನು ತಡೆಯಲು ಬೂಟಾ ಸಿಂಗ್ ಪೊಲೀಸ್ ಬಲ ಪ್ರಯೋಗಿಸಿದರೂ ಮಹೇಂದ್ರ ಸಿಂಗ್ ಟಿಕಾಯತ್ ಹೆದರಲಿಲ್ಲ, ಬೆದರಲಿಲ್ಲ. ವಾರಗಳ ಕಾಲ ನಡೆದ ಹೋರಾಟದ ಬಳಿಕ ರಾಜೀವ್ ಗಾಂಧಿ ಸರಕಾರವು ರೈತರ ಬೇಡಿಕೆಗಳನ್ನು ಒಪ್ಪಿಕೊಂಡಿತು. ಕಬ್ಬಿಗೆ ಹೆಚ್ಚಿನ ಬೆಲೆ, ವಿದ್ಯುತ್ ಮತ್ತು ನೀರು ಶುಲ್ಕ ಮನ್ನಾ ಸೇರಿದಂತೆ ೩೫ ಬೇಡಿಕೆ ಈಡೇರಿಸಿಕೊಂಡೇ ಟಿಕಾಯತ್ ತಮ್ಮ ರೈತ ಸೇನೆಯೊಂದಿಗೆ ಮುಜಫರ್‌ನಗರಕ್ಕೆ ವಾಪಸಾಗಿದ್ದರು. ಅಂದಿನ ಹೋರಾಟದ ಬಗ್ಗೆ ಹಲವಾರು ಲೇಖನಗಳು ಸಾರ್ವಜನಿಕವಾಗಿ ಲಭ್ಯ ಇವೆ. ಅವುಗಳನ್ನು ಓದಿದರೆ ಅಂದಿನ ಹೋರಾಟದ ಸ್ವರೂಪ ಹಾಗೂ ಸರಕಾರದ ಸ್ಪಂದನದ ರೀತಿ ಅರಿವಾದೀತು.

ಈಗ ನಿಮಗೆ ರಾಕೇಶ್ ಟಿಕಾಯತ್ ಅವರ ಹೋರಾಟದ ಹಿನ್ನೆಲೆ ಸ್ವಲ್ಪವಾದರೂ ಅರಿವಾದೀತು. ಜನವರಿ ೨೬ರಂದು ‘ರೈತ ಗಣತಂತ್ರ ಪರೇಡ್’ ವೇಳೆ ಉಂಟಾದ ಹಿಂಸಾಚಾರ ಮತ್ತು ಕೆಂಪುಕೋಟೆ ಸಿಖ್ ಧ್ವಜಾರೋಹಣ ಪ್ರಕರಣ ಹಿನ್ನೆಲೆಯಲ್ಲಿ ರೈತ ಹೋರಾಟ ಸಂಪೂರ್ಣವಾಗಿ ಹಿನ್ನೆಲೆಗೆ ಸರಿಯಿತು ಎಂದು ಬಹುತೇಕ ಮಾಧ್ಯಮಗಳು ಷರಾ ಬರೆದಿದ್ದವು ಮತ್ತು ಕೇಂದ್ರ ಸರಕಾರದ ಉದ್ದೇಶವೂ ಈಡೇರಿತ್ತು! ಉತ್ತರ ಪ್ರದೇಶದ ಸರಕಾರವು ಘಾಜಿಪುರ್ ಬಾರ್ಡರ್‌ನಲ್ಲಿ ಬೀಡುಬಿಟ್ಟಿದ್ದ ರೈತರನ್ನು ಖಾಲಿ ಮಾಡಲು ಬಹುದೊಡ್ಡ ಪೊಲೀಸ್ ಪಡೆಯನ್ನು ಕಳುಹಿಸಿತ್ತು. ವಿದ್ಯುತ್ ಮತ್ತು ನೀರು ಪೂರೈಕೆಯನ್ನು ನಿಲ್ಲಿಸಿತ್ತುಘಿ. ಅಕ್ಷರಶಃ ರೈತರು ಘಾಜಿಪುರ್ ತೊರೆದು ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಆ ಕ್ಷಣದಲ್ಲಿ ರಾಕೇಶ್ ಟಿಕಾಯತ್ ಮಾಡಿದ ಭಾವನಾತ್ಮಕ ಭಾಷಣವು ಅವರೊಬ್ಬ ತಂದೆಯಂತೆಯೇ ಗಟ್ಟಿ ನಾಯಕ ಎಂಬುದನ್ನು ಸಾಬೀತುಪಡಿಸಿತು. ಈ ವೇಳೆ ಭಾವುಕರಾಗಿ ಕಣ್ಣೀರು ಸುರಿಸಿದ್ದು ಇಡೀ ರೈತ ಹೋರಾಟವನ್ನು ಮತ್ತೆ ಫ್ರಂಟ್‌ಫುಟ್‌ಗೆ ತಂದು ನಿಲ್ಲಿಸಿತು. ಟಿಕಾಯಿತ್ ಕಣ್ಣೀರಿನ ವಿಡಿಯೋ ಕ್ಲಿಪ್ ಕಾಳ್ಗಿಚ್ಚಿನಂತೆ ಹರಡಿ ಘಾಜಿಪುರ್‌ನಿಂದ ೧೫೦ ಕಿ.ಮೀ. ದೂರವಿರುವ ಮುಝಫರ್‌ನಗರದಿಂದ ರಾತ್ರೋರಾತ್ರಿ ರೈತರು ಟ್ರ್ಯಾಕ್ಟರ್ ಏರಿ ಘಾಜಿಪುರ್ ಬಾರ್ಡರ್‌ಗೆ ತಲುಪಿದರು. ಅತ್ತ ಸಿಂಘು ಬಾರ್ಡರ್ ಸೇರಿದಂತೆ ಎಲ್ಲ ಗಡಿಗಳಿಗೂ ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ ರೈತರು ಸಾಗರೋಪಾದಿಯಲ್ಲಿ ಬಂದು ಸೇರಲಾರಂಭಿಸಿದರು. ಗತ್ಯಂತರವಿಲ್ಲದೇ ಉತ್ತರ ಪ್ರದೇಶ ಸರಕಾರವು ಘಾಜಿಪುರ್ ಗಡಿಯಿಂದ ತನ್ನ ಪೊಲೀಸ್ ಪಡೆಯನ್ನು ವಾಪಸ್ ಕರೆಸಿಕೊಂಡಿತು. ರಾಕೇಶ್ ಟಿಕಾಯತ್ ಬಲಿಷ್ಠ ರೈತನಾಯಕನಾಗಿ ಬೆಳೆದು ನಿಂತರು. ಇನ್ನೇನು ಮುಗಿದೇ ಹೋಯಿತು ಎಂಬ ಸ್ಥಿತಿಗೆ ತಲುಪಿದ್ದ ರೈತ ಹೋರಾಟ ಹೊಸ ಹುರುಪಿನಿಂದ ಮತ್ತೆ ಮೈಕೊಡವಿಕೊಂಡು ಎದ್ದು ನಿಲ್ಲಲು ರಾಕೇಶ್ ಕಾರಣರಾದರು.

‘‘ಒಂದು ಹನಿ ಕಣ್ಣೀರು ಸರಕಾರಕ್ಕೆ ಗಂಡಾಂತರ ಸೃಷ್ಟಿಸಲಿದೆ. ಇನ್ನು ಕಣ್ಣುಗಳೇ ಕಡಲಾಗಿ ಉಕ್ಕುವುದನ್ನು ನೀವು ಕಂಡಿರಲಾರಿರಿ,’’ ಎಂಬ ಟಿಕಾಯತ್ ಅವರ ಮಾತುಗಳು ರೈತರ ಒಡಲಾಳದ ಕಿಚ್ಚನ್ನು ಹೊತ್ತಿಸಿದವು.

೧೯೬೯ರ ಜೂನ್ ೪ರಂದು ರಾಕೇಶ್ ಟಿಕಾಯತ್ ಅವರು ಮುಝಫರ್ ನಗರದ ಸಿಸೌಲಿ ಪಟ್ಟಣದಲ್ಲಿ ಜನಿಸಿದರು. ತಂದೆ ಮಹೇಂದ್ರ ಸಿಂಗ್ ಪಶ್ಚಿಮ ಉತ್ತರ ಪ್ರದೇಶದ ಪ್ರಭಾವಿ ರೈತ ನಾಯಕ ಮತ್ತು ಭಾರತ್ ಕಿಸಾನ್ ಯೂನಿಯನ್(ಬಿಕೆಯು) ಸಹ ಸಂಸ್ಥಾಪಕರು. ಟಿಕಾಯತ್ ಕುಟುಂಬವು ಬಿಲಿಯಾನ್ ಖಾಪ್‌ಗೆ ಸೇರಿದ್ದಾಗಿದೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿ ಕೃಷಿಕರಾಗಿರುವ ಜಾಟ್ ಸಮುದಾಯದಕ್ಕೆ ಸೇರಿದವರು ಇವರು. ಮೀರತ್ ವಿಶ್ವವಿದ್ಯಾಲಯದಿಂದ ರಾಕೇಶ್ ಎಂಎ ಪದವಿ ಪಡೆದಿದ್ದಾರೆ.

೨೦೧೧ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ನಿಧನದ ಬಳಿಕ ಅಣ್ಣ ನರೇಶ್ ಟಿಕಾಯತ್ ಯೂನಿಯನ್ ಅಧ್ಯಕ್ಷರಾದರು, ರಾಕೇಶ್ ಬಿಕೆಯುನ ವಕ್ತಾರರಾದರು. ರೈತ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮುಂಚೆ ರಾಕೇಶ್ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದರು. ಆ ಬಳಿಕ ಎಸ್‌ಐ ಕೂಡ ಆದರು. ೧೯೯೩ರಲ್ಲಿ ಮಹೇಂದ್ರ ಸಿಂಗ್ ಅವರು ಕೆಂಪುಕೋಟೆಯಲ್ಲಿ ಪ್ರತಿಭಟನೆ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ, ತಂದೆಯ ಜೊತೆ ಹೋರಾಟಕ್ಕೆ ಧುಮುಕಿದರು. ನಾಲ್ಕು ವರ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಬಳಿಕ ವಕ್ತಾರರಾಗಿ ನೇಮಕವಾದರು. ಅಲ್ಲಿಂದ ಟಿಕಾಯತ್ ಅವರ ರೈತಪರ ಹೋರಾಟ ಆರಂಭವಾಯಿತು. ಹಲವು ಬಾರಿ ರೈತರ ಪರವಾಗಿ ಹೋರಾಟ ಮಾಡಿ ೪೦ಕ್ಕೂ ಹೆಚ್ಚು ಬಾರಿ ಜೈಲುವಾಸ ಕಂಡಿದ್ದಾರೆ. ೨೦೧೮ರಲ್ಲಿ ಟಿಕಾಯತ್ ಸಂಘಟಿಸಿದ ಉತ್ತರಾಖಂಡದ ಹರಿದ್ವಾರದಿಂದ ದಿಲ್ಲಿಯವರೆಗೆ ನಡೆಸಿದ ಕಿಸಾನ್ ಕ್ರಾಂತಿ ಯಾತ್ರೆ ಗಮನ ಸೆಳೆಯಿತು.

೫೧ ವರ್ಷದ ಟಿಕಾಯತ್ ಸಂಘಟಿಸಿದ ಬಹುತೇಕ ರೈತ ಹೋರಾಟಗಳಲ್ಲಿ ಯಶಸ್ಸು ಕಂಡಿದ್ದಾರೆ. ರಾಜಕೀಯದಲ್ಲೂ ತಮ್ಮ ನಸೀಬು ಪರೀಕ್ಷಿಸಿದರಾದರೂ ಯಶಸ್ಸು ಸಿಕ್ಕಿಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ೨೦೦೭ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ಮತಗಳ ಲೆಕ್ಕದಲ್ಲಿ ಅವರು ಆರನೇ ಸ್ಥಾನದಲ್ಲಿದ್ದರು! ಇನ್ನು ೨೦೧೪ರ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಟಿಕೆಟ್ ಪಡೆದು ಅಮ್ರೋಹ ಕ್ಷೇತ್ರದಿಂದ ಸ್ಪರ‌್ಸಿ, ಕೇವಲ ಹತ್ತು ಸಾವಿರ ಒಳಗೆ ಮತಗಳನ್ನು ಪಡೆದರು. ರಾಜಕಾರಣದ ಸೋಲು ಅವರನ್ನೇನೂ ಧೃತಿಗೆಡಿಸಲಿಲ್ಲ. ಬದಲಿಗೆ ರೈತ ಹೋರಾಟದಲ್ಲಿ ಇನ್ನು ಹೆಚ್ಚಿಗೆ ತೊಡಗಿಸಿಕೊಳ್ಳುವಂತೆ ಮಾಡಿತು.

ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರೊಂದಿಗೆ ರಾಕೇಶ್ ಅವರದ್ಧು ಕಭೀ ಖುಷಿ ಕಭೀ ಗಮ್ ಸಂಬಂಧ. ಅವರೂ ಟಿಕಾಯತ್ ಬೆಂಬಲಕ್ಕೆ ನಿಂತಿದ್ದಾರೆ. ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ ಸಿಂಗ್ ಚೌಟಾಲಾ, ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ ಹನುಮಾನ್ ಬೇಣಿವಾಲಾ ಅವರು ಸಂಪೂರ್ಣವಾಗಿ ಟಿಕಾಯತ್ ಬೆಂಬಲಕ್ಕೆ ನಿಲ್ಲುವ ಮೂಲಕ ರೈತರ ಹೋರಾಟಕ್ಕೆ ಹೊಸ ತಿರುವು ದೊರೆಯಲಾರಂಭಿಸಿದೆ. ತಂದೆಯ ದಾರಿಯಲ್ಲೇ ಸಾಗುತ್ತಿರುವ ರಾಕೇಶ್ ಅವರ ಮೇಲೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಜೊತೆಗಿರುವ ೪೦ಕ್ಕೂ ಹೆಚ್ಚು ರೈತ ಸಂಘಟನೆಗಳ ನಡುವೆ ಸಮನ್ವಯ ಸಾಸುತ್ತಲೇ ರೈತ ಹೋರಾಟವನ್ನು ವಿಫಲಗೊಳಿಸುವ ಒಳಸಂಚುಗಳನ್ನು ಮೆಟ್ಟಿ ರೈತ ಹೋರಾಟವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅನೂಹ್ಯವಾಗಿ ವ್ಯಕ್ತವಾಗು ತ್ತಿರುವ ಬೆಂಬಲವನ್ನು ಹಿಡಿದಿಟ್ಟುಕೊಂಡು ಗಮ್ಯ ತಲುಪುವ ಸವಾಲು ಅವರ ಮುಂದಿದೆ. 




ಸೋಮವಾರ, ಜನವರಿ 25, 2021

How to enable Two Step Verification in Telegram? ಟೆಲಿಗ್ರಾಮ್‌ನಲ್ಲಿ ಟು ಸ್ಟೆಪ್‌ ವೆರಿಫಿಕೇಷನ್‌ ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ

ಫೇಸ್ಬುಕ್ಒಡೆತನದ ವಾಟ್ಸ್ಆ್ಯಪ್ಈಗಲೂ ಜಗತ್ತಿನ ಅತ್ಯಂತ ಜನಪ್ರಿಯ ಮೆಸೆಂಜರ್ಆ್ಯಪ್ಎನ್ನುವುದು ನಿರ್ವಿವಾದ. ಆದರೆ, ಯಾವಾಗ ವಾಟ್ಸ್ಆ್ಯಪ್ನಲ್ಲಿರುವ ಮಾಹಿತಿಯನ್ನು ಫೇಸ್ಬುಕ್ಜತೆ ಹಂಚಿಕೊಳ್ಳಬೇಕು ಎಂಬ ನೀತಿಯನ್ನು ತರುವುದಾಗಿ ಫೇಸ್ಬುಕ್ಹೇಳಿತೋ ಆಗ  ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪರಿಣಾಮ, ಫೇಸ್ಬುಕ್ವಾಟ್ಸ್ಆ್ಯಪ್ಪ್ರೈವೆಸಿ ಪಾಲಿಸಿಯನ್ನು ಒಂದಿಷ್ಟು ಕಾಲ ಮುಂದೂಡಿದೆ. ಏತನ್ಮಧ್ಯೆ, ಸಿಗ್ನಲ್ಮತ್ತು ಟೆಲಿಗ್ರಾಮ್ನಂಥ ಪರ್ಯಾಯ ಮೆಸೆಂಜರ್ಆ್ಯಪ್ಗಳ ಬಗ್ಗೆ ಜನರು ಹೆಚ್ಚೆಚ್ಚು ಮೋಹ ಬೆಳೆಸಿಕೊಳ್ಳುತ್ತಿದ್ದಾರೆಸದ್ಯ 56 ಲಕ್ಷ ಕ್ಕೂ ಅಧಿಕ ಟೆಲಿಗ್ರಾಮ್ಆ್ಯಪ್ಡೌನ್ಲೋಡ್ಆಗಿದ್ದರೆ, ಸಿಗ್ನಲ್ನ ಈ ಪ್ರಮಾಣ 75 ಲಕ್ಷ ಕ್ಕೇರಿಕೆಯಾಗಿದೆ. ಇದೆಲ್ಲವೂ ವಾಟ್ಸ್ಆ್ಯಪ್ಗೆ ಪರ್ಯಾಯವಾಗಿ ಜನರು ಕಂಡುಕೊಳ್ಳುತ್ತಿರುವ ಡಿಜಿಟಲ್ದಾರಿಗಳಾಗಿವೆ.

ವಾಟ್ಸ್ಆ್ಯಪ್ಪ್ರೈವೆಸಿ ಪಾಲಿಸಿ ಘೋಷಣೆ ಬಳಿಕ ಸಿಗ್ನಲ್ಮತ್ತು ಟೆಲಿಗ್ರಾಮ್ಗೆ ಸಿಕ್ಕಾಪಟ್ಟೆ ಬಳಕೆದಾರರು ಹೆಚ್ಚುತ್ತಿರುವ ಸಂಗತಿಗಳು ಈಗ ಗುಟ್ಟಾಗಿ ಉಳಿದಿಲ್ಲ. ಹಾಗೆಂದಮಾತ್ರಕ್ಕೆ ಈ ಎರಡೂ ಆ್ಯಪ್ಗಳು ಗರಿಷ್ಠ ಸುರಕ್ಷಿತವಾಗಿವೆಯೇ? ಖಂಡಿತ ಇಲ್ಲ. ಇಲ್ಲೂಒಂದಿಷ್ಟು ಆತಂಕಗಳಿವೆ. ಆದರೆ, ವಾಟ್ಸ್ಆ್ಯಪ್ನ ಹೊಸ ಪ್ರೈವೆಸಿ ಪಾಲಿಸಿಯಷ್ಟು (ಈಗ ಮುಂದೂಡಲಾಗಿದೆ) ಆತಂಕ­ಕಾರಿಯಲ್ಲ! ಇದು ಒಂದು ಬಾಜುವಿನ ಚರ್ಚೆ; ಮತ್ತೊಂದು ಬಾಜು ನೋಡುವುದಾದರೆ, ಟೆಲಿಗ್ರಾಮ್ಅನ್ನು ಅತ್ಯಂತ ಸುರಕ್ಷಿತವಾಗಿ ಬಳಸುವುದು ಹೇಗೆ ಪ್ರಶ್ನೆ ಮೂಡುತ್ತದೆ. ನಿಮ್ಮ ಮಾಹಿತಿಯನ್ನು ಬೇರೆಯವರು ನೋಡದಂತೆ ಅಥವಾ ನಿಮ್ಮ ಖಾತೆಯನ್ನು ಹೆಚ್ಚು ಸುರಕ್ಷಿತವಾಗಿಸಲು ಕಂಪನಿಯೇ ಒದಗಿಸುವ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆ ಪೈಕಿಟು ಸ್ಟೆಪ್ವೆರಿಫಿಕೇಷನ್‌  ಕೂಡ ಒಂದು.

ಟು ಸ್ಟೆಪ್ವೆರಿಫಿಕೇಷನ್ಹೇಗೆ?
ಮೊದಲಿಗೆ ಸ್ಮಾರ್ಟ್ಫೋನ್ನಲ್ಲಿಟೆಲಿಗ್ರಾಮ್ಆ್ಯಪ್ಓಪನ್ಮಾಡಿ. ಬಳಿಕ ಎಡಗಡೆ ಸ್ವೈಪ್ಮಾಡುವ ಮೂಲಕ ಮೆನು ಓಪನ್ಮಾಡಿ ಇಲ್ಲವೇ ಹೆಂಬರ್ಗರ್ಐಕಾನ್ಮೇಲೆ ಟ್ಯಾಪ್ಮಾಡಿ. ಆಗ ಸೆಟ್ಟಿಂಗ್ಸ್ಗೆ ಹೋಗುತ್ತೀರಿ. ಸೆಟ್ಟಿಂಗ್ಸ್ಮೆನುವಿನಲ್ಲಿಪ್ರೈವೆಸಿ ಮತ್ತು ಸೆಕ್ಯುರಿಟಿ ಆಪ್ಷನ್ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಟು ಸ್ಟೆಪ್ವೆರಿಫಿಕೇಷನ್ಆಯ್ಕೆ ಮೇಲೆ ಟ್ಯಾಪ್ಮಾಡಿ. ಪಾಸ್ವರ್ಡ್ಹಾಕಿದ ಬಳಿಕ ನೀವು ಪಾಸ್ವರ್ಡ್ಹಿಂಟ್ಮತ್ತು ರಿಕವರಿ ಇಮೇಲ್ಸೇರಿಸಬೇಕಾಗುತ್ತದೆ. ಇಷ್ಟಾದ ಮೇಲೆ, ಟೆಲಿಗ್ರಾಮ್ಕಳುಹಿಸುವ ಕೋಡ್ನಮೂದಿಸಿ. ಅಲ್ಲಿಗೆ ಟು ಸ್ಟೆಪ್ವೆರಿಫಿಕೇಷನ್ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಇದು ಟೆಲಿಗ್ರಾಮ್ನಲ್ಲಿ ಟು ಸ್ಟೆಪ್ವೆರಿಫಿಕೇಷನ್ಮಾಡಲು ಅನುಸರಿಸಬೇಕಾದ ಮಾದರಿ­ಯಾಗಿದೆ. ಟು ಸ್ಟೆಪ್ವೆರಿಫಿಕೇಷನ್ಸಕ್ರಿಯಗೊಂಡ ಮೇಲೆ, ಹೊಸ ಸಾಧನದಲ್ಲಿಟೆಲಿಗ್ರಾಮ್ಓಪನ್ಮಾಡಲು ಈ ಹಿಂದೆ ಟು ಸ್ಟೆಪ್ವೆರಿಫಿಕೇಷನ್ಗೆ ನೀಡಿದ ಪಾಸ್ವರ್ಡ್ಅನ್ನು ಹಾಕಬೇಕಾಗು­ತ್ತದೆ ಮತ್ತು ಎಸ್ಸೆಮ್ಮೆಸ್ಮೂಲಕ ಟೆಲಿಗ್ರಾಮ್ರವಾನಿಸುವ ಕೋಡ್ಅನ್ನು ಕೂಡ ಹಾಕಬೇಕು. ಆಗ ಮಾತ್ರವೇ ಟೆಲಿಗ್ರಾಮ್ನಿಮ್ಮ ಬಳಕೆಗೆ ತೆರೆದುಕೊಳ್ಳುತ್ತದೆ.

ಲಾಸ್ಟ್ಸೀನ್ಮುಚ್ಚಿಡುವುದು ಹೇಗೆ?
ಟೆಲಿಗ್ರಾಮ್ಆ್ಯಪ್ಓಪನ್ಮಾಡಿ, ಸ್ಕ್ರೀನ್ನ ಎಡಮೂಲೆಯಲ್ಲಿರುವ ಹೆಂಬರ್ಗರ್ಐಕಾನ್ಮೇಲೆ ಟ್ಯಾಪ್ಮಾಡಿ. ಆಗ ಸೆಟ್ಟಿಂಗ್ಸ್ಬಾಕ್ಸ್ನಲ್ಲಿರುವ ಪ್ರೈವೆಸಿ ಮತ್ತು ಸೆಕ್ಯುರಿಟಿ ಆಪ್ಷನ್ಮೇಲೆ ಟ್ಯಾಪ್ಮಾಡಿ. ಬಳಿಕ ಲಾಸ್ಟ್ಸೀನ್ಆಪ್ಷನ್ಮೇಲೆ ಟ್ಯಾಪ್ಮಾಡಿ. ಆಗ ಯಾರು ನಿಮ್ಮ ಲಾಸ್ಟ್ಸೀನ್ನೋಡಬಹುದು ಎಂಬುದಕ್ಕೆ ಆಯ್ಕೆಗಳು ಕಾಣುತ್ತವೆ. Every one to my contacts and Nobody ಪೈಕಿ ಲಾಸ್ಟ್ಸೀನ್ಕಾಣಿಸದಂತೆ ಮಾಡಲು ನೀವು ನೋಬಡಿ ಆಪ್ಷನ್ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸ್ಕ್ರೀನ್ನ ರೈಟ್ಸೈಡ್ನಲ್ಲಿರುವ ಚೆಕ್ಮಾರ್ಕ್ಮೇಲೆ ಟ್ಯಾಪ್ಮಾಡಿ. ಆಗ ಎದುರಾಗುವ ಪಾಪ್ಅಪ್ನಲ್ಲಿ ನೀವು ಯಾರೊಂದಿಗೆ ನಿಮ್ಮ ಲಾಸ್ಟ್ಸೀನ್ಟೈಮ್ನೋಡಲು ಅವಕಾಶ ಕಲ್ಪಿಸುವುದಿಲ್ಲವೋ ಅವರ ಲಾಸ್ಟ್ಸೀನ್

ಅನ್ನು ನೀವು ನೋಡಲು ಸಾಧ್ಯವಾಗುವುದಿಲ್ಲಎಂಬ ಸಂದೇಶವನ್ನು ಕಾಣಬಹುದು. ಇಷ್ಟಾದ ಬಳಿಕ ನೀವು ಎಂದು ಓಕೆ ಎಂದು ಒಪ್ಪಿಗೆ ಕೊಟ್ಟರೆ ಲಾಸ್ಟ್ಸೀನ್ಮುಚ್ಚಿಡುವ ಪ್ರಕ್ರಿಯೆ ಪೂರ್ಣಗೊಳಿಸಿದಂತಾಗುತ್ತದೆ. 




ಬುಧವಾರ, ಜನವರಿ 13, 2021

Is Signal more secure than Whatsapp?- ವಾಟ್ಸ್‌ಆ್ಯಪ್‌ಗಿಂತ ಸಿಗ್ನಲ್‌ ಹೇಗೆ ಬೆಸ್ಟು?

- ಮಲ್ಲಿಕಾರ್ಜುನ ತಿಪ್ಪಾರ
ಜಗತ್ತಿನ ನಂಬರ್‌ 1 ಶ್ರೀಮಂತ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್ಮಸ್ಕ್ಆ ಒಂದು ಟ್ವೀಟ್ಮಾಡ­ದಿದ್ದರೆ ಈ ಜಗತ್ತುಸಿಗ್ನಲ್‌’ ಎಂಬ ಆ್ಯಪ್ಹಿಂದೆ ಬೀಳುತ್ತಿರ­ಲಿಲ್ಲವೇನೋ? ವಾಟ್ಸ್ಆ್ಯಪ್ಹೊಸ ಪ್ರೈವೆಸಿ ನೀತಿಯನ್ನು ಜಾರಿಗೆ ತರಲು ಮುಂದಾಗುತ್ತಿದ್ದಂತೆ ಎಲಾನ್ಮಸ್ಕ್Use Signal ಅಂತಾ ಸಿಂಪಲ್ಆಗಿ ಮಾಡಿದ ಈ ಟ್ವೀಟ್ಸಿಗ್ನಲ್ಫೌಂಡೇಷನ್ನ ಸರ್ವರ್ ಕ್ರ್ಯಾಶ್ಆಗುವಂತೆ ಮಾಡಿತು! ಐದಾರು ದಿನಗಳಲ್ಲಿಸಿಗ್ನಲ್ಗೆ ಸೈನ್ಇನ್ಆಗುತ್ತಿರುವವರ ಸಂಖ್ಯೆಯಲ್ಲಿವಿಪರೀತ ಹೆಚ್ಚಳವಾಗಿದೆ. ಜಗತ್ತು ಈಗ ಸಿಗ್ನಲ್ಸಮೂಹ ಸನ್ನಿಗೆ ಒಳಗಾಗಿದೆ.

ಜಗತ್ತಿನಾದ್ಯಂತ ಪತ್ರಕರ್ತರು, ಕಾರ್ಯಕರ್ತರು, ವಕೀಲರು, ಸಂಶೋಧ­ಕರು, ರಾಜ­­ಕಾರ­ಣಿ­ಗಳು, ಸುರಕ್ಷತಾ ತಜ್ಞರು ಹೆಚ್ಚಾಗಿ ಈ ಸಿಗ್ನಲ್ಆ್ಯಪ್ಬಳಸು­­ತ್ತಿದ್ದರು. ಆದರೆ ಈಗ ಸಾಮಾ­ನ್ಯರೂ ಸಿಗ್ನಲ್ಗೆ ಅಡಿಯಿಡುತ್ತಿದ್ದಾರೆ. ಲಾಭ­ರಹಿತ ಸಂಸ್ಥೆಯಾಗಿರುವ ಸಿಗ್ನಲ್ಫೌಂಡೇ­­ಷನ್ಒಡೆತನದ ಸಿಗ್ನಲ್ಆ್ಯಪ್‌,  ಸುರ­­­­­­ಕ್ಷ­ತೆಯ ದೃಷ್ಟಿಯಿಂದ ಮಜಬೂತ್ಆಗಿದೆ. ನಿಮ್ಮ ಯಾವ ಮಾಹಿತಿಯೂ 3ನೇ ವ್ಯಕ್ತಿಯ ಪಾಲಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಡೇಟಾ ಯಾವುದೇ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದಿಲ್ಲ. ಹಾಗಾಗಿ, ಹೆಚ್ಚಿನವರು ಸಿಗ್ನಲ್ಮೇಲೆ ವಿಶ್ವಾಸ ಇಡುವಂತಾಗಿದೆ. ಹಾಗಾದರೆ, ಸಿಗ್ನಲ್ನಲ್ಲಿ ಏನಿದೆ, ವಾಟ್ಸ್ಆ್ಯಪ್ಗಿಂತಲೂ ಹೇಗೆ ಬೆಸ್ಟು?

ಲಾಭರಹಿತ ಸಂಸ್ಥೆಯ ಒಡೆತನ
ವಾಟ್ಸ್ಆ್ಯಪ್ಗಿಂತ ಸಿಗ್ನಲ್ಯಾಕೆ ಮುಖ್ಯವಾಗುತ್ತದೆ ಎಂದರೆ, ಈ ಆ್ಯಪ್ಯಾವುದೇ ದೊಡ್ಡ ಟೆಕ್ಕಂಪನಿಯದ್ದಲ್ಲ. ಬದಲಿಗೆ, ಲಾಭರಹಿತ ಸಿಗ್ನಲ್ಫೌಂಡೇಷನ್ಗೆ ಸೇರಿದೆ. ಹಾಗಾಗಿ, ಬಳಕೆದಾರರ ಡೇಟಾ­ವನ್ನು ಅದು ವಾಣಿಜ್ಯ ಕಾರಣಕ್ಕೆ ಬಳಸಿಕೊಳ್ಳಲಾರದು. ಜೊತೆಗೆ, ಈ ಆ್ಯಪ್ನಿಗೂಢ ಪಠ್ಯವನ್ನು ಯಾರೂ ಡಿಕೋಡ್ಮಾಡಲು ಆಗೋದಿಲ್ಲ. ಫೌಂಡೇಶನ್ಗೆ ಬರುವ ಡೊನೇಷನ್ಮತ್ತು ಬಳಕೆದಾರರು ನೀಡುವ ಹಣವೇ ಇವರಿಗೆ ಆಧಾರ.

ಎಲ್ಲ ಖುಲ್ಲಂ ಖುಲ್ಲಾ

ಸಿಗ್ನಲ್ಆ್ಯಪ್ಒಂದು ರೀತಿಯಲ್ಲಿ ತೆರೆದ ಪುಸ್ತಕ. ಇಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನೀವು ಈ ಆ್ಯಪ್ನ ಸೋರ್ಸ್ಕೋಡ್ನೋಡಬಹುದು. ಅದು ಸಾರ್ವಜನಿಕವಾಗಿ ಲಭ್ಯವಿದೆ. ಅಂದರೆ, ಜಗತ್ತಿನಾದ್ಯಂತ ತಜ್ಞರು ಈ ಕೋಡ್ನೋಡುವುದರಿಂದ ಏನಾದರೂ ಸಮಸ್ಯೆ ಎದುರಾದರೆ ಮೆಸೆಂಜರ್ ಮತ್ತು ವಾಟ್ಸ್ಆ್ಯಪ್ಗಿಂತಲೂ ಫಾಸ್ಟ್ಆಗಿ ಸರಿಪಡಿಸಲು ಸಾಧ್ಯವಾಗುತ್ತದೆ. ಮತ್ತು ಯಾವುದೂ ರಹಸ್ಯವಾಗಿ ಉಳಿಯುವುದಿಲ್ಲ. ಇದೇ ಮಾತನ್ನು ನೀವು ವಾಟ್ಸ್ಆ್ಯಪ್ಗೆ ಹೇಳುವಂತಿಲ್ಲ.

ಎಲ್ಲವೂ ನಿಗೂಢ ಲಿಪಿ
ನಿಮ್ಮ ಪ್ರೊಫೈಲ್ಫೋಟೊ, ನಿಮ್ಮ ಧ್ವನಿ, ವಿಡಿಯೋ ಕಾಲ್ಸ್‌, ಫೋಟೊ ಅಟ್ಯಾಚ್ಮೆಂಟ್ಸ್‌, ಸ್ಟಿಕರ್ಸ್‌, ಲೊಕೇಷನ್ಪಿನ್ಸ್‌. ಅಷ್ಟೇ ಯಾಕೆ ನೀವು ಕಳುಹಿಸುವ ಜಿಐಎಫ್ಕೂಡ ಎನ್ಕ್ರಿಪ್ಟೆಡ್ಆಗಿರುತ್ತದೆ. ಈ ವಿಷಯದಲ್ಲಿ ವಾಟ್ಸ್ಆ್ಯಪ್ಗಿಂತಲೂ ಸಿಗ್ನಲ್ಹೆಚ್ಚು ನಂಬಿಕೆಗೆ ಅರ್ಹವಾಗಿದೆ. ಬಳಕೆದಾರರ ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಸಿಗ್ನಲ್ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

ಎಲ್ಲವೂ ಸುರಕ್ಷಿತ
ಸಿಗ್ನಲ್ನ ಇನ್ನೊಂದು ಖಾಸಿಯತ್ಏನೆಂದರೆ, ಇಲ್ಲಿ ಎಲ್ಲವೂ ಸುರಕ್ಷಿತ. ನಿಮ್ಮ ಸುರಕ್ಷಿತ ಮೆಸೆಜ್ಗಳನ್ನು ಸಿಗ್ನಲ್ಕ್ಲೌಡ್ಗೆ ಕಳುಹಿಸು­ವುದಿಲ್ಲ. ಯಾಕೆಂದರೆ, ಈ ಕ್ಲೌಡ್ನಲ್ಲಿರುವ ಸಂದೇಶಗಳನ್ನು

ವಾಟ್ಸ್ಆ್ಯಪ್‌, ಗೂಗಲ್ಸೇರಿದಂತೆ ಯಾರು ಬೇಕಿದ್ದರೂ ಅವುಗಳನ್ನು ಓದಬಹುದು. ಬದಲಿಗೆ, ಇಂಥ ಬ್ಯಾಕ್ಅಪ್ಗಳನ್ನು ನಿಮ್ಮ ಫೋನ್ನ ಡೇಟಾಬೇಸ್ನಲ್ಲಿ ನಿಗೂಢಲಿಪಿ­ಯಲ್ಲಿ ಸಿಗ್ನಲ್ಸೇವ್ಮಾಡುತ್ತದೆ ಮತ್ತು ಅದನ್ನು ನೀವು ಮಾತ್ರ ನೋಡಲು ಸಾಧ್ಯವಾಗುತ್ತದೆ. ಇನ್ನೂ ಆಶ್ಚರ್ಯ ಎಂದರೆ, ಇದು ನಿಮ್ಮ ಫೋನ್ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನೂ ತನ್ನ ಸರ್ವರ್ನಲ್ಲಿ ಉಳಿಸಿಕೊಳ್ಳುವುದಿಲ್ಲ!

ಕಣ್ಮರೆಯಾಗುವ ಮೆಸೆಜ್
ಇದರಲ್ಲೇನು ವಿಶೇಷ ಎನ್ನಬೇಡಿ. ವಾಟ್ಸ್ಆ್ಯಪ್ನಲ್ಲಿ ಈ ಫೀಚರ್ಇದೆಯಲ್ಲ ಅನ್ನಬಹುದು. ಆದರೆ, ಈ ಫೀಚರ್ಸಿಗ್ನಲ್ನ ಅತ್ಯಂತ ಹಳೆಯ ಮತ್ತು ಅತ್ಯಂತ ಉಪಯುಕ್ತ ಫೀಚರ್ಆಗಿದೆ. ವಾಟ್ಸ್ಆ್ಯಪ್ನಲ್ಲಿ ಅದು ಇತ್ತೀಚೆಗಷ್ಟೇ ಬಂದಿದೆ. ಬಳಕೆದಾರರು ತಮ್ಮ ಸಂದೇಶಕ್ಕೆ ಹತ್ತು ಸೆಕೆಂಡ್ನಿಂದ ವಾರದವರೆಗೂ ಟೈಮರ್ಅಳವಡಿಸ­ಬಹುದು. ಆ ಬಳಿಕ ಅದು ಸ್ವಯಂ ಆಗಿ ಕಣ್ಮರೆಯಾಗುತ್ತದೆ. ಒಂದು ಬಾರಿ ವೀಕ್ಷಿಸಬಹುದಾದ ಮೀಡಿಯಾ ಮತ್ತು ಮೆಸೆಜ್ರಿಕ್ವೆಸ್ಟ್ಗಳು ವಾಟ್ಸ್ಆ್ಯಪ್ನಲ್ಲೂ ಇಲ್ಲ.

ಬೇರೆ ಆ್ಯಪ್ಗಳು ಕನ್ನ ಹಾಕುವಂಗಿಲ್ಲ
ಈ ಫೀಚರ್ ವಾಟ್ಸ್ಆ್ಯಪ್ಸೇರಿದಂತೆ ಸೇರಿದಂತೆ ಇತರ ಯಾವುದೇ ಪ್ರಮುಖ ಮೆಸೆಂಜರ್ಆ್ಯಪ್ಗಳಲ್ಲೂ ಇಲ್ಲ. ಸಿಗ್ನಲ್ನಲ್ಲಿ ಇನ್ಕಾಗ್ನಿಟೋ ಕೀಬೋರ್ಡ್ಆಪ್ಷನ್ಇದ್ದು, ಇದು ನೀವು ಏನನ್ನು ಟೈಪ್ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸುವುದಿಲ್ಲ. ಸ್ಕ್ರೀನ್ಸೆಕ್ಯುರಿಟಿ ಫೀಚರ್‌, ನಿಮ್ಮ ಸಿಗ್ನಲ್ಆ್ಯಪ್ನಲ್ಲಿರುವ ಮಾಹಿತಿಯನ್ನು ಕದ್ದು ನೋಡುವುದನ್ನು ತಪ್ಪಿಸುತ್ತದೆ. ಇದನ್ನು ಗಮನಿಸಿದರೆ ಜಗತ್ತಿನಲ್ಲೇ ಸಿಗ್ನಲ್ಅತ್ಯಂತ ಸೆಕ್ಯೂರ್ಆಗಿರುವ ಮೆಸೆಂಜರ್ಆ್ಯಪ್ಎನ್ನುವುದು ತಿಳಿಯು­ತ್ತದೆ. ಆದರೆ, ದುರದೃಷ್ಟವಶಾತ್ಈ ಆ್ಯಪ್ಬಗ್ಗೆ ಜಗತ್ತು ತೀರಾ ಇತ್ತೀಚಿನವರೆಗೂ ಅಪರಿಚಿತವಾಗಿರುವುದು ಚೋದ್ಯವೇ ಸರಿ!



ಸೋಮವಾರ, ಜನವರಿ 4, 2021

Former home minister Buta Singh: ನಿರ್ದಯ ನಡೆಯ ಬೂಟಾ ಸಿಂಗ್‌

ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆ ಮೂಲಕ ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿ ತೋರಿಸಿದ, ಆ ನೆಪದಲ್ಲಿಅದನ್ನು ಗಟ್ಟಿಗೊಳಿಸಲು ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು.


- ಮಲ್ಲಿಕಾರ್ಜುನ ತಿಪ್ಪಾರ

ಏಳು ವರ್ಷದ ಬಾಲಕನೊಬ್ಬನಿಗೆ ಆತನ ಚಿಕ್ಕಪ್ಪ, ಕಣಜದ ಗೂಡು ತೋರಿಸಿ ಅದರಲ್ಲಿಜೇನು ಇದೆ ಎಂದು ಹೇಳುತ್ತಾರೆ. ಆ ಬಾಲಕ, ಹಿಂದೆ ಮುಂದೆ ಯೋಚಿಸದೇ ಮರ ಏರಿ, ನಿರ್ದಯವಾಗಿ ಈ ಕಣಜದ ಗೂಡನ್ನು ಕೆಡವುತ್ತಾನೆ. ಗೂಡಿನಲ್ಲಿದ್ದ ಕಣಜದ ಹಾರುಹುಳಗಳು ಬೆನ್ನ ಹತ್ತಿದ್ದರಿಂದ ಮರ ಮೇಲಿಂದ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ. 

ಆ ಬಾಲಕನೇ ಮುಂದೆ ‘ನಿರ್ದಯಿ’ ರಾಜಕಾರಣಿಯಾಗಿ ರೂಪುಗೊಂಡ ಬೂಟಾ ಸಿಂಗ್‌. ಅವರ ಈ ಸ್ವಭಾವದ ಪರಿಣಾಮಗಳು ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಕಾಲದಲ್ಲಿಢಾಳಾಗಿ ಎದ್ದು ಕಂಡಿತು.  ಇಂದಿರಾ ಮತ್ತು ರಾಜೀವ್‌ ಅವರ ‘ಪರಮ ನಿಷ್ಠ’ರಾಗಿದ್ದ ಬೂಟಾ, ಅವರ ಎಲ್ಲಕಾರ್ಯಗಳನ್ನು ಯಾವುದನ್ನೂ ಲೆಕ್ಕಿಸದೇ ಮಾಡಿ ಬಿಡುತ್ತಿದ್ದರು. ಪರಿಣಾಮ­ವಾಗಿ ಅವರನ್ನು ಮಾಧ್ಯಮಗಳು ಅತ್ಯಂತ ವಿವಾದಿತ ರಾಜಕಾರಣಿ, ರಾಜೀವ್‌ ಬಂಟ ಎಂದು ಇಂದಿಗೂ ಗುರುತಿಸುತ್ತವೆ. ಅಂಥ ಬೂಟಾ ಸಿಂಗ್‌ ಅವರು, ಕಾಂಗ್ರೆಸ್‌ಗೆ ಏನೆಲ್ಲಮಾಡಿದೆ. ತನ್ನ ನಿಷ್ಠೆಯನ್ನು ಯಾರೂ ಪರಿಗಣಿ ಸಲೇ ಇಲ್ಲಎಂಬ ಕೊರಗಿನಲ್ಲೇ 86ನೇ ವಯಸ್ಸಿನಲ್ಲಿಕೊನೆಯುಸಿರೆಳೆದಿದ್ದಾರೆ. 

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಅಕ್ಷ ರಶಃ ಅವರು ಕ್ಯಾಬಿನೆಟ್‌ನಲ್ಲಿಎರಡನೇ ಸ್ಥಾನದಲ್ಲಿ­ದ್ದರು. ಇತರ ಎಲ್ಲಸಚಿವರಿಗಿಂತಲೂ ರಾಜೀವ್‌ ಅವರನ್ನು ಬಹಳ ಸಲೀಸಾಗಿ ಭೇಟಿಯಾಗುತ್ತಿದ್ದರು. ದೇಶದ ಗೃಹ ಮಂತ್ರಿಯಾಗಿದ್ದಾಗ ರಾಜ್ಯ ಸರಕಾರಗಳನ್ನು ಕಣ್ಣು ಮಿಟುಕಿಸುವಷ್ಟರಲ್ಲಿಕೆಡವಿ ಬಿಡುತ್ತಿದ್ದರು. ಅಂಥ ನಿರ್ದಯಿ ರಾಜಕಾರಣಿ ಬೂಟಾ ಸಿಂಗ್‌. 

ರಾಜೀವ್‌ ಕಾಲದಲ್ಲಿಕಾಂಗ್ರೆಸ್‌ನ ದಲಿತ ಹಾಗೂ ಏಕೈಕ ಸಿಖ್‌ ಮುಖವಾಗಿದ್ದ ಬೂಟಾ ಸಿಂಗ್‌ ರಾಜಕಾರಣದ ಹಿನ್ನೆಲೆಯಲ್ಲಿಬೆಳೆದು ಬಂದವರಲ್ಲ. ಪಂಜಾಬ್‌ನ ಜಲಂಧರ್‌ ಜಿಲ್ಲೆಯ ಮುಸ್ತಫಾಪುರದಲ್ಲಿ1934 ಮಾರ್ಚ್‌ 21ರಂದು ಬೂಟಾ ಸಿಂಗ್‌ ಜನಿಸಿದರು. ಬೂಟಾ ಅವರದ್ದು ಸಾಧಾರಣ ಹಿನ್ನೆಲೆಯ ಕುಟುಂಬ. ಲಿಯಾಲ್‌ಪುರ ಖಾಲ್ಸಾ ಕಾಲೇಜ್‌ನಿಂದ ಬಿ.ಎ(ಆನರ್ಸ್‌) ಮತ್ತು ಬಾಂಬೆಯ ಗುರು ನಾನಾಕ್‌ ಖಾಲ್ಸಾ ಕಾಲೇಜ್‌ನಲ್ಲಿಎಂಎ ಪದವಿ ಪಡೆದುಕೊಂಡರು. ಬಳಿಕ ಬುಂದೇಲ್‌ಖಂಡ್‌ ವಿವಿಯಲ್ಲಿಪಿಎಚ್‌ಡಿ ಮಾಡಿದರು. 1964ರಲ್ಲಿಮಂಜಿತ್‌ ಕೌರ್‌ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. 

ಬೂಟಾ ಸಿಂಗ್‌ ಅವರು ರಾಜಕಾರಣಕ್ಕೆ ಪ್ರವೇಶ ಪಡೆಯುವ ಮುಂಚೆ ಪತ್ರಕರ್ತರಾಗಿದ್ದರು. ಅಕಾಲಿ ದಳದ ಮೂಲಕ ರಾಜಕಾರಣ ಆರಂಭಿಸಿ ಕಾಂಗ್ರೆಸ್‌ನಲ್ಲಿಉತ್ತುಂಗಕ್ಕೇರಿ, ಬಿಜೆಪಿಯಲ್ಲೂಸ್ವಲ್ಪ ಕಾಲ ಇದ್ದು ಮತ್ತೆ ಕಾಂಗ್ರೆಸ್‌ಗೆ ಮರಳಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. 

ಬೂಟಾ ಅವರು ಅಕಾಲಿದಳ ಸೇರುವ ಮುಂಚೆ ಮಾರ್ಕ್ಸ್‌ ವಿಚಾರಗಳಿಗೆ ಮಾರು ಹೋಗಿದ್ದರು. ಬಾಂಬೆಯ ಖಾಲ್ಸಾ ಕಾಲೇಜ್‌ನಲ್ಲಿಇತಿಹಾಸ ಓದುತ್ತಿದ್ದಾಗ ಅವರು ಬೊಲ್ಶೆವಿಕ್‌ ಸಾಹಿತ್ಯದ ಕಟ್ಟಾ ಓದುಗರು. ‘ಫೂಲ್‌ವಾರಿ’ ಮ್ಯಾಗ್‌ಜಿನ್‌ನಲ್ಲಿಪ್ರೂಫ್‌ರೀಡರ್‌ ಆಗಿ ಕೆಲಸ ಮಾಡುತ್ತಿದ್ದಾಗ, 1953ರಲ್ಲಿಜೋಸೆಫ್‌ ಸ್ಟಾಲಿನ್‌ ನಿಧನದ ಸುದ್ದಿ ತಿಳಿದಾಗ ಕಣ್ಣೀರಿಟ್ಟಿದ್ದರು. ಅಂದರೆ, ಮಾರ್ಕ್ಸ್‌ವಾದ ಅವರನ್ನು ಅಷ್ಟೊಂದು ಆವರಿಸಿಕೊಂಡಿತ್ತು. ‘ಅಕಾಲಿ ಪತ್ರಿಕಾ’ದಲ್ಲಿಉಪ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. 1962ರಲ್ಲಿಅಕಾಲಿ ದಳ ಬೂಟಾ ಅವರನ್ನು ರೋಪರ್‌ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಕಣಕ್ಕಿಳಿಸಿತು. ಮುಂದೆ ಅಕಾಲಿ ಇಬ್ಭಾಗ ಆದಾಗ ಅವರು ತಾರಾ ಸಿಂಗ್‌ ಅವರೊಂದಿಗೆ ಹೆಜ್ಜೆ ಹಾಕಿದರಾದರೂ ಅವರೊಂದಿಗೆ ಬಹಳ ದಿನ ನಿಲ್ಲಲಿಲ್ಲ. ಇಂದಿರಾ ಅವರ ಪರಿಚಯವಾದ ಮೇಲೆ ಕಾಂಗ್ರೆಸ್‌ ಸೇರಿದರು. ಆನಂತರ ನಡೆದಿದ್ದೆಲ್ಲಇತಿಹಾಸ. 

ಇಂದಿರಾ ಗಾಂಧಿ ಅವರು ‘ಆಪರೇಷನ್‌ ಬ್ಲೂಸ್ಟಾರ್‌’ ಕಾರ್ಯಾಚರಣೆ ಕೈಗೊಂಡಾಗ ಅದರ ಎಲ್ಲನಿರ್ವಹಣೆ ಮಾಡಿವರು ಇದೇ ಬೂಟಾ ಸಿಂಗ್‌. ಸಚಿವರಾಗಿ ‘ಗೋಲ್ಡನ್‌ ಟೆಂಪಲ್‌’ನ ಪುನರ್‌ ನಿರ್ಮಾಣವನ್ನು ನೋಡಿಕೊಂಡರು. ಆದರೆ, ಸಿಖ್‌ ಧಾರ್ಮಿಕ ಗುರುಗಳು ಇವರನ್ನು ‘ಧರ್ಮಭ್ರಷ್ಟ’ ಎಂದು ಘೋಷಿಸಿದರು. ಬೂಟಾ ಸಿಂಗ್‌ ಆ ಬಳಿಕ ಸ್ವರ್ಣಮಂದಿರದಲ್ಲಿಭಕ್ತರ ಚಪ್ಪಲಿ ಕ್ಲೀನ್‌ ಮಾಡಿ ಪ್ರಾಯಶ್ಚಿತ್ತ ಕೂಡ ಮಾಡಿಕೊಂಡರೆನ್ನಿ. 

ರಾಜೀವ್‌ ಗಾಂಧಿ ಅವಧಿಯಲ್ಲಿಬೂಟಾ ಸಿಂಗ್‌ ರಾಜಕಾರಣಿಯಾಗಿ, ಆಡಳಿತಗಾರನಾಗಿ ಗ್ರಾಫ್‌ ಏರುಗತಿಯಲ್ಲಿತ್ತು; ಜೊತೆಗೆ ವಿವಾದಗಳೂ. ರಾಜೀವ್‌ ಸಂಪುಟದಲ್ಲಿಪಿ.ವಿ.ನರಸಿಂಹ ರಾವ್‌ ಮತ್ತು ಪಿ ಶಿವಶಂಕರ್‌ ಅವರಂಥ ಹಿರಿಯರಿದ್ದರೂ ಬೂಟಾ ಸಿಂಗ್‌ ಅಕ್ಷ ರಶಃ ರಾಜೀವ್‌ ನಂತರದ ಸ್ಥಾನದಲ್ಲಿವಿರಾಜಮಾನರಾದರು. ರಾಜೀವ್‌ ಅವರ ಬಂಟ ಎಂದೇ ಖ್ಯಾತರಾದರು. ಈ ಅವಧಿಯಲ್ಲಿಅವರು ಪ್ರತಿಕ್ಷ ಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿಪ್ರಮುಖ ಪಾತ್ರ ವಹಿಸಿದರು. 1988ರಲ್ಲಿಜಾನಕಿ ರಾಮಚಂದ್ರನ್‌ ಸರಕಾರ ವಜಾಗೊಳಿಸಿದರು. ಕಾಂಗ್ರೆಸ್‌ನ ಅನೇಕ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ದೂರ ಸರಿಸುವ ಕಾರ್ಯವನ್ನು ಬೂಟಾ ನಿರ್ದಯಿಯಾಗಿ ಮಾಡಿದರು. ರಾಜಸ್ಥಾನದಲ್ಲಿಹರಿದೇವ್‌ ಜೋಶಿ, ಮಧ್ಯ ಪ್ರದೇಶದಲ್ಲಿಮೋತಿಲಾಲ್‌ ವೋರಾ ಇದಕ್ಕೆ ಉದಾಹಣೆಯಾಗಿ ನೀಡಬಹುದು. ರಾಜೀವ್‌ ಗಾಂಧಿ 1989ರಲ್ಲಿಅಯೋಧ್ಯೆಯ ವಿವಾದಿತ ಜಾಗದಲ್ಲಿರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅದರ ಹಿಂದೆ ಬೂಟಾ ಸಿಂಗ್‌ ಇದ್ದರು ಎಂದು ಇಂದಿಗೂ ಕಾಂಗ್ರೆಸ್‌ನವರು ಮಾತನಾಡಿಕೊಳ್ಳುತ್ತಾರೆ. 

1985ರಿಂದ 89ರ ಅವಧಿಯಲ್ಲಿಕೇಂದ್ರ ಗೃಹ ಸಚಿವರಾಗಿ ಬೂಟಾ ಸಿಂಗ್‌, ಅನೇಕ ರಾಜ್ಯ ಸರಕಾರಗಳನ್ನು ಉರುಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿ­ದರು. ‘‘ಬೂಟಾ ಸಿಂಗ್‌ಜೀ, ನಿಮ್ಮ ಕೃಪಾಣ್‌(ಕತ್ತಿ) ಒಳಗಿಡಿ,’’ ಎಂದು ರಾಜೀವ್‌ ಅವರು ಹೇಳಿಧಿದ್ದರಂತೆ. ಅಷ್ಟೊತ್ತಿಗೆ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ತ್ರಿಪುರಾ, ರಾಜಸ್ಥಾನ, ಬಿಹಾರ ಮತ್ತಿತರ ರಾಜ್ಯ ಸರಕಾರಗಳನ್ನು ಬುಡಮೇಲು ಮಾಡಿಯಾಗಿತ್ತು. ಬಿಹಾರದ ರಾಜ್ಯಪಾಲರಾಗಿ­ದ್ದಾಗ ಅವರ ನಡೆದುಕೊಂಡ ರೀತಿ ಸುಪ್ರೀಂ ಕೋರ್ಟ್‌ ತೀಕ್ಷ ್ಣ ಟೀಕೆಗೂ ಗುರಿಯಾಗಿತ್ತು. 2005ರಲ್ಲಿಜೆಡಿಎಯು-­ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡುವ ಬದಲು ಅಸೆಂಬ್ಲಿಯನ್ನೇ ವಿಸರ್ಜಿಸಿ ಬಿಟ್ಟಿದ್ದರು. ಕೇಂದ್ರ ಸಂಪುಟಕ್ಕೆ ತಪ್ಪು ಮಾಹಿತಿ, ಸಂಸದೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್‌ ತಪರಾಕಿ ಹಾಕಿತ್ತು. ಇದು ಬಹಳ ಚರ್ಚೆ ಕಾರಣವಾಗಿತ್ತು. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 

ರಾಜೀವ್‌ ಬಳಿಕ ಕಾಂಗ್ರೆಸ್‌ನಲ್ಲಾದ ಬದಲಾ­ವಣೆಗಳು ಬೂಟಾ ಸಿಂಗ್‌ ಅವರನ್ನು ತೆರೆಮರೆಗೆ ಸರಿಯುವಂತೆ ಮಾಡಿದವು. ಆಗ ಅವರು ಬಿಜೆಪಿ ಸೇರಿ ವಾಜಪೇಯಿ ಸರಕಾರದಲ್ಲಿಸಚಿವರೂ ಆದರು. ಆದರೆ, ಜೆಎಂಎಂ ಲಂಚ ಪ್ರಕರಣದಲ್ಲಿಕೋರ್ಟ್‌ ಬೂಟಾ ಅವರ ವಿರುದ್ಧ ದೋಷಾರೋಪಣೆ ಮಾಡಿದ ಹಿನ್ನೆಲೆಯಲ್ಲಿಅವರನ್ನು ವಾಜಪೇಯಿ ಅವರು ಸಂಪುಟದಿಂದ ಕೈ ಬಿಟ್ಟ ಬಳಿಕ ಮತ್ತೆ ಮರಳಿ ಕಾಂಗ್ರೆಸ್‌ ಗೂಡು ಸೇರಿಕೊಂಡರು. ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆಯ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಲೋಪಗ­ಳನ್ನು ಎತ್ತಿ ತೋರಿಸಿದ್ದಕ್ಕಾಗಿ ಮತ್ತು ಅದನ್ನು ಗಟ್ಟಿಗೊಳಿಸಲು ಪರೋಕ್ಷ ವಾಗಿ ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು!

ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿಬೂಟಾ ಸಿಂಗ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಷ್ಟೇ ವೇಗವಾಗಿ ಅವುಗಳಿಂದ  ಹೊರಗೆ ಬರುವ ಕಲೆಯ ಅವರಿಗೆ ಗೊತ್ತಿತ್ತು. ಹಾಗಾಗಿಯೇ ಎಂಥದ್ದೇ ವಿವಾದಗಳು ಎದುರಾದರೂ ಎಲ್ಲವನ್ನು ನುಂಗಿಬಿಡುವ ಧಿಮಾಕು ಅವರಲ್ಲಿತ್ತು. ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಬೂಟಾ ಸಿಂಗ್‌, ಕೇಂದ್ರ ಗೃಹ, ರೈಲ್ವೆ, ವಾಣಿಜ್ಯ, ಬಂದರು ಮತ್ತು ಹೆದ್ದಾರಿ, ಸಂಸದೀಯ ವ್ಯವಹಾರ, ಕ್ರೀಡೆ, ಹೌಸಿಂಗ್‌, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನಾಗರಿಕ ಪೂರೈಕೆ-ಗ್ರಾಹಕ ವ್ಯವಹಾರ,  ಸಂವಹನ ಸೇರಿ ಹಲವು ಇಲಾಖೆಗಳನ್ನು ನಿರ್ವಹಿಸಿದ ಕಸುಬುದಾರರು. ತೀರಾ ಇತ್ತೀಚೆಗೆ ಅಂದರೆ, 2007ರಿಂದ 10ರವರೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿಅನೇಕ ಜನೋಪಕಾರಿ ಕೆಲಸ ಮಾಡಿದ್ದರೂ ಜನರು ಅವುಗಳನ್ನು ನೆನಪಿನಲ್ಲಿಟ್ಟುಕೊಂಡಿಲ್ಲ. ಯಾಕೆಂದರೆ, ಬೂಟಾ ಸಿಂಗ್‌ ಈಗಲೂ, ಇಂದಿರಾ ಅವರ ನೆಚ್ಚಿಗ ಮತ್ತು ರಾಜೀವ್‌ ಅವರ ಭಂಟ. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ವಿವಾದಿತ ರಾಜಕಾರಣಿ ಎಂಬುದು ನಿರ್ವಿವಾದ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿ ಪಕ್ಷ  ಸಂಘಟನೆಯಲ್ಲಿಅಮೂಲ್ಯ ಕೊಡುಗೆ ನೀಡಿದ್ದ ಬೂಟಾ ಸಿಂಗ್‌ ಅವರಿಗೆ ಕೊನೆಯ ದಿನಗಳಲ್ಲಿತಮ್ಮ ನಿಷ್ಠೆಯನ್ನು ಯಾರೂ ಪರಿಗಣಿಸುತ್ತಿಲ್ಲಎಂಬ ಚಿಂತೆ ಕಾಡುತ್ತಿತ್ತು. ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು. 



ಬುಧವಾರ, ಡಿಸೆಂಬರ್ 30, 2020

Jhumka Earring- ನೀನೇ ಗೆಲ್ಲುವೆ ಬಿಡು

ಹೇ ಜುಮುಕಿಯೇ, ಅವಳ ಕಿವಿಯಲ್ಲಿ ಓಲಾಡಲು ಲೈಸೆನ್ಸ್ ಯಾರು ಕೊಟ್ಟರು ನಿನಗೆ ?

ಅವಳು ಕೂದಲು
ತೀಡಿದಾಗೊಮ್ಮೆ
ಲೋಲಕವಾಗುವೆಯಲ್ಲ
ಅಣುಕಿಸುತ ನನ್ನ ?
ಅವಳ ಮುಂಗುರಳ
ಹೊಯ್ದಾಟಕ್ಕೂ
ನಿನ್ನ ಓಲಾಟಕ್ಕೂ
ಸ್ಪರ್ಧೆ ನಡೆದರೆ
ನೀನೇ ಗೆಲ್ಲುವೆ ಬಿಡು
~ ಮಲ್ಲಿಕಾರ್ಜುನ ತಿಪ್ಪಾರ



ಸೋಮವಾರ, ಡಿಸೆಂಬರ್ 28, 2020

How to use Whatsapp Payment- ವಾಟ್ಸಾಪ್‌ನಲ್ಲಿ ಹಣ ಕಳಿಸುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ

ಫೇಸ್ಬುಕ್ಒಡೆತನದ ವಾಟ್ಸ್ಆ್ಯಪ್ತನ್ನ ಪೇಮೆಂಟ್ಸೇವೆಯನ್ನು ಆರಂಭಿಸುವುದಾಗಿ  ಬಹಳ ದಿನ­ಗಳಿಂ­ದಲೂ ಹೇಳುತ್ತಲೇ ಬಂದಿತ್ತು. ಭಾರತ ಸರಕಾರ ಸೂಚಿಸಿರುವ ಎಲ್ಲಮಾರ್ಗದರ್ಶಿಗಳನ್ನು ಪೂರೈಸಲು ಒಂದಿಷ್ಟು ಸಮಯ ಬೇಕಾಯಿತು. ಬಳಿಕ ಬೀಟಾ ವರ್ಷನ್ನಲ್ಲಿಸ್ವಲ್ಪ ದಿನ ಪೇಮೆಂಟ್ಸೇವೆಯನ್ನು ಜಾರಿಗೆ ತಂದು, ಇದೀಗ ಭಾರತದ ಎಲ್ಲವಾಟ್ಸ್ಆ್ಯಪ್ಬಳಕೆದಾರರಿಗೆ ದೊರೆಯುತ್ತಿದೆ.

ಸಂಪೂರ್ಣ ಡಿಜಿಟಲೀಕರಣವಾಗುತ್ತ ಸಾಗುತ್ತಿರುವ ಭಾರತದ ಮಟ್ಟಿಗೆ ವಾಟ್ಸ್ಆ್ಯಪ್ನ ಈವಾಟ್ಸ್ಆ್ಯಪ್ಪೇಸೇವೆ ಒಂದು ಮೈಲುಗಲ್ಲಾಗಲಿದೆ. ಭಾರತದಲ್ಲಿವಾಟ್ಸ್ಆ್ಯಪ್ಬಳಕೆದಾರರ ಸಂಖ್ಯೆ 34 ಕೋಟಿ. ಇಷ್ಟು ಬೃಹತ್ಪ್ರಮಾಣದ ಬಳಕೆ­ದಾರ­ರನ್ನು ಹೊಂದಿರುವ ಕಾರಣಕ್ಕೆ ಇದೊಂದು ಕ್ರಾಂತಿಕಾರಿ ನಡೆ­ಯಾಗ­ಲಿದೆ ಎಂಬುದರಲ್ಲಿಯಾವುದೇ ಅನುಮಾನವಿಲ್ಲ. ಒಂದೂಮ್ಮೆ ಇಷ್ಟು ಬಳಕೆದಾರರು ಹಣ ವರ್ಗಾವಣೆ ಮತ್ತು ಸ್ವೀಕರಿಸಲು ವಾಟ್ಸ್‌­­­­ಆ್ಯಪ್ಪೇ ಬಳಸಿದರೆ ಅದು ಅತಿದೊಡ್ಡ ಜಾಲವಾಗಬಹುದು.

ಏನಿದು ವಾಟ್ಸ್ಆ್ಯಪ್ಪೇ?

ಇದೊಂದು ಯುಪಿಐ ಆಧರಿತ ಪೇಮೆಂಟ್ಸೇವೆ ನೀಡುವ ವ್ಯವಸ್ಥೆಯಾಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿಬೀಟಾ ವರ್ಷನ್ನಲ್ಲಿವಾಟ್ಸ್ಆ್ಯಪ್ಪೇ ಚಾಲನೆಗೊಂಡಿತ್ತು. ಈಗ ಅದು ಎಲ್ಲಬಳಕೆದಾರರಿಗೂ ಲಭ್ಯವಾಗುತ್ತಿದೆ. ವಾಟ್ಸ್ಆ್ಯಪ್ಪೇ ಬಳಸಿಕೊಂಡು ಬಳಕೆದಾರರು ತಮ್ಮ ಯುಪಿಐಸಕ್ರಿಯಗೊಂಡ  ಬ್ಯಾಂಕ್ಖಾತೆಗಳನ್ನು ಸಂಪ­­ರ್ಕಿಸ­­­ಬಹುದು ಮತ್ತು ಆ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು. ಎಚ್ಡಿಎಫ್ಸಿ, ಐಸಿಐಸಿಐ, ಸ್ಟೇಟ್ಬ್ಯಾಂಕ್ಆಫ್ಇಂಡಿಯಾ, ಆಕ್ಸಿಸ್ಬ್ಯಾಂಕ್‌, ಏರ್ಟೆಲ್ಪೇಮೆಂಟ್ಸ್ಬ್ಯಾಂಕ್ಸೇರಿದಂತೆ ಭಾರತದಲ್ಲಿರುವ ಬಹುತೇಕ ಬ್ಯಾಂಕ್ಗಳ ಸೇವೆಯನ್ನು ವಾಟ್ಸ್ಆ್ಯಪ್ಪೇ ಒದಗಿಸುತ್ತದೆ.

ಸೆಟ್ಅಪ್ಮಾಡುವುದು ಹೇಗೆ?
ನಿಮ್ಮ ಸ್ಮಾರ್ಟ್ಫೋನ್ನಲ್ಲಿವಾಟ್ಸ್ಆ್ಯಪ್ಇದೆ ಎಂದಾಕ್ಷ ಣ ಹಣವನ್ನು ವರ್ಗಾವಣೆ ಮಾಡಲು ಅಥವಾ ಸ್ವೀಕರಿಸಲು ಬರುವುದಿಲ್ಲ. ನಿಮ್ಮ ವಾಟ್ಸ್ಆ್ಯಪ್ನಂಬರ್ಯುಪಿಐ ಜೊತೆ ಸಂಪರ್ಕ ಹೊಂದಿದ್ದರೆ, ಅಂಥ ವಾಟ್ಸ್ಆ್ಯಪ್ಅಪ್ಡೇಟ್ಮಾಡಿ. ಆಗ ವಾಟ್ಸ್ಆ್ಯಪ್ಪೇಮೆಂಟ್ಆಪ್ಷನ್ನಿಮ್ಮ ಸೆಟ್ಟಿಂಗ್ಸ್ನಲ್ಲಿಕಾಣಿಸಿಕೊಳ್ಳುತ್ತದೆ. ಒಂದೊಮ್ಮೆ ಈ ಮೊದಲು ನೀವು ಯುಪಿಐ ಜತೆ ನಿಮ್ಮ ನಂಬರ್‌, ಖಾತೆ ಸಂಪರ್ಕಿಸಿಲ್ಲವಾದರೆ ಮೊದಲು ನೀವು ವಾಟ್ಸ್ಆ್ಯಪ್ನಲ್ಲಿಯುಪಿಐ ಅಕೌಂಟ್ಸೆಟ್ಅಪ್ಮಾಡಿಕೊಳ್ಳಬೇಕು. ಆ ಬಳಿಕ ನೀವು ಹಣವನ್ನು ಕಳುಹಿಸಲು ಇಲ್ಲವೇ ಸ್ವೀಕರಿಸಲು ಸಾಧ್ಯವಾಗುತ್ತದೆ.

ಬಳಸುವುದು ಹೇಗೆ?
ಮಜಾ ಏನ್ಗೊತ್ತಾ, ನೀವು ವಾಟ್ಸ್ಆ್ಯಪ್ನಿಂದ ಫೋಟೊ, ವಿಡಿಯೋಗಳನ್ನು ಕಳಿಸುವಷ್ಟು ಸಲೀಸಾಗಿಯೇ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು! ಚಾಟ್ಬಾರ್‌­­ನಲ್ಲಿರುವ ಷೇರ್ಫೈಲ್ಐಕಾನ್ಮೇಲೆ ಟ್ಯಾಪ್ ಮಾಡಿ ಮತ್ತು ಪೇಮೆಂಟ್ಸೆಲೆಕ್ಟ್ ಮಾಡುವುದರ  ಮೂಲಕವು ನೀವು ನೇರ­ವಾಗಿ ಹಣವನ್ನು ವರ್ಗಾವಣೆ  ಮಾಡ­ಬಹುದು. ಹಾಗೆಯೇ, ಪ್ರತ್ಯೇಕವಾಗಿ ಹಣ ವರ್ಗಾ­ವಣೆಗೋಸ್ಕರವೇ ಶಾರ್ಟ್ಕಟ್ಮೆನ್ಯುವಿನಲ್ಲಿಪೇಮೆಂಟ್ಸೆಕ್ಷ ನ್ಇದೆ. ಇಲ್ಲಿಬಳಕೆದಾರರು ಅಕೌಂಟ್ಡಿಟೇಲ್ಸ್‌, ವಹಿವಾಟು ಮತ್ತು ಹಣ ಕಳುಹಿಸಿದ ಮಾಹಿತಿ­ಯನ್ನು ತಿಳಿದುಕೊಳ್ಳಬಹುದು.

ಎಚ್ಚರ ಇರಲಿ
- ವಾಟ್ಸ್ಆ್ಯಪ್ಪೇಮೆಂಟ್ಸೇವೆ  ಎಷ್ಟು ಸರಳವಾಗಿದೆಯೋ ಅಷ್ಟೇ ಅಪಾಯಕಾರಿಯೂ ಆಗಬಹುದಾದ ಸಾಧ್ಯತೆ ಇದೆ. ಹಾಗಾಗಿ, ವಾಟ್ಸ್ಆ್ಯಪ್ಪೇ ಸೇವೆಯನ್ನು ಬಳಸುವ ಮುನ್ನ ಒಂದಿಷ್ಟು ಎಚ್ಚರಿಕೆಗಳನ್ನು ಬಳಕೆದಾರರು ವಹಿಸಲೇಬೇಕು.

- ಪೇಮೆಂಟ್ಸ್ಸಕ್ರಿಯಗೊಳಿಸುವ ಸಂಬಂಧ ವಾಟ್ಸ್ಆ್ಯಪ್ಎಂದಿಗೂ ದೂರವಾಣಿ ಕರೆ ಅಥವಾ ಸಂದೇಶಗಳನ್ನು ರವಾನಿಸುವುದಿಲ್ಲಎಂಬುದನ್ನು ನೆನಪಿಡಿ.

- ವಾಟ್ಸ್ಆ್ಯಪ್ಪೇಮೆಂಟ್ಸ್ಗೆ ಯಾವುದೇ ಅಧಿಕೃತ ಕಸ್ಟಮ್ಕೇರ್ನಂಬರ್ಇಲ್ಲ. ಹಾಗಾಗಿ, ಯಾರಾದರೂ ವಾಟ್ಸ್ಆ್ಯಪ್ಪೇ ಕಸ್ಟಮರ್ಕೇರ್ನಿಂದ ಕರೆ ಮಾಡಿದ್ದೇವೆ ಎಂದರೆ ನಂಬಲು ಹೋಗಬೇಡಿ. ಯಾಕೆಂದರೆ, ನಿಮ್ಮನ್ನು ಮೋಸಗೊಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

- ನಿಮ್ಮ ಡೆಬಿಟ್ಮತ್ತು ಕ್ರೆಡಿಟ್ಕಾರ್ಡ್ವಿವರ, ಒಟಿಪಿ ಅಥವಾ ಯುಪಿಐ ಪಿನ್ನಂಬರ್ಅನ್ನು ಯಾರೊಂದಿಗೂ ವಾಟ್ಸ್ಆ್ಯಪ್ಪೇಮೆಂಟ್ಗಾಗಿ ಹಂಚಿಕೊಳ್ಳಲು ಹೋಗಬೇಡಿ.

- ವಾಟ್ಸ್ಆ್ಯಪ್ನಲ್ಲಿನಿಮಗೆ ಕಳುಹಿಸಲಾಗುವ ಅಪರಿಚಿತ, ಸಂಶಾಯಸ್ಪದ ಲಿಂಕ್ಗಳನ್ನು ಕ್ಲಿಕ್ಮಾಡಲು ಹೋಗಲೇಬೇಡಿ.

- ವಾಟ್ಸ್ಆ್ಯಪ್ನಲ್ಲಿನಿಮಗೆ ಪರಿಚಿತರಾದವರಿಂದ ಮಾತ್ರವೇ ವಾಟ್ಸ್ಆ್ಯಪ್ಪೇ ರಿಕ್ವೆಸ್ಟ್ಗಳನ್ನು

ಸ್ವೀಕರಿಸಿ. ಅಪರಿಚಿತ ರಿಕ್ವೆಸ್ಟ್ಗಳನ್ನು ಸ್ವೀಕರಿಸಲು ಹೋಗಬೇಡಿ. ಖದೀಮರು ನಿಮ್ಮ ಖಾತೆಯಿಂದ ಹಣವನ್ನು ಲಪಟಾಯಿಸಬಹುದು. ಹುಷಾರಾಗಿರಿ.

 

(ಈ ಲೇಖನವು 2020 ಡಿಸೆಂಬರ್ 27ರ ವಿಜಯ ಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ)




ಶನಿವಾರ, ಡಿಸೆಂಬರ್ 26, 2020

Four Haiku: ನಾಲ್ಕು ಹಾಯ್ಕುಗಳು

ಕಡು ದುಃಖವೇ ಕಡು ಪ್ರೀತಿ

ಪ್ರೀತಿ ಕ್ಷಮೆಗೂ ಸಮ

ನಾನೀಗ ನಿನ್ನನ್ನು ಕ್ಷಮಿಸುತ್ತಿದ್ದೇನೆ

- ಘಾಡ್ ಶಹಬಂದರ್


ಮಳೆಬಿಲ್ಲು ಸ್ಥಿರವಾಗಿದೆ

ನೀನು ಈಗ ಇಲ್ಲೆ ಇರುವಂತೆ

ಈ ಕ್ಷಣದಲ್ಲಿ...

- Takahama Kyoshi


ನಾವು ಸತ್ತು ಹೋಗೋಣ್ವಾ?

ನನ್ನ ಕಿವಿಯಲ್ಲಿ ಪಿಸುಗುಟ್ಟಿದೆ

ಮಿಂಚು ಹುಳದ ಆ ರಾತ್ರಿಯಲಿ

- Suzuki Masajo


ನಮ್ಮ ನಡುವಿನ ಪ್ರೀತಿ

ಮಾತು ಮತ್ತು ಉಸಿರು, ನಿನ್ನನ್ನು ಪ್ರೀತಿಸುವುದು ಎಂದರೆ

ಉದ್ದನೆಯ ನದಿ ಹರಿದಂತೆ

- ಸೋನಿಯಾ ಸ್ಯಾಂಚ್



ಬುಧವಾರ, ಡಿಸೆಂಬರ್ 23, 2020

Poem: ಸೂಚನೆಯಾದರೂ ಏನು?

 ಹಗಲು ರಾತ್ರಿ ಒಂದಾಗುವ ಆ ಸಂಜೆಯ 

ನಸುಗೆಂಪಲ್ಲಿ ಹೊಳೆಯುವ ನಿನ್ನ 

ನಯನಗಳು ಕೆಣಕುತ್ತಿವೆ ಏನನ್ನೋ?


ಉಲಿಯುವ ಹಕ್ಕಿಗಳ ಸ್ವರ ಮೇಳ

ಹಿನ್ನೆಲೆಯಲ್ಲಿ ಏನೋ

ಸಂಕೇತಿಸುತ್ತಿವೆ ನಿನ್ನ ತುಟಿಗಳು?


ತಂಗಾಳಿ ಸೋಕಿ ನರ್ತಿಸುವ

ನಿನ್ನ ಮುಂಗುರುಳು ನೀಡುತ್ತಿರುವ

ಮುನ್ಸೂಚನೆಯಾದರೂ ಏನು?


ಹಗಲು ಸತ್ತು, ರಾತ್ರಿ ಹುಟ್ಟಿ

ತಿಂಗಳ ಬೆಳಕು ಚೆಲ್ಲಿ

ಬಳಿದುಕೊಳ್ಳುವುದಾದರೂ ಏನು?

- ಮಲ್ಲಿಕಾರ್ಜುನ ತಿಪ್ಪಾರ

ಸೋಮವಾರ, ಡಿಸೆಂಬರ್ 14, 2020

ಸೈಂಟಿಸ್ಟ್ ಸೂಪರ್‌ಹೀರೊ ಗೀತಾಂಜಲಿ

ಪ್ರತಿಷ್ಠತಟೈಮ್ಮ್ಯಾಗಜಿನ್ ನೀಡುತ್ತಿರುವಕಿಡ್ ಆ್ ದಿ ಇಯರ್ಗೌರವಕ್ಕೆ ಪಾತ್ರಳಾದ ಇಂಡಿಯನ್-ಅಮೆರಿಕನ್ ಬಾಲೆ ಗೀತಾಂಜಲಿ ರಾವ್, ಬಹುಮುಖ ಪ್ರತಿಭಾವಂತೆ.


- ಮಲ್ಲಿಕಾರ್ಜುನ ತಿಪ್ಪಾರ 

ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಎರಡು ಹೆಮ್ಮೆಯ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗುವ ಮೂಲಕ ಇತಿಹಾಸ ಸೃಷ್ಟಿಸಿದರೆ, ಪ್ರತಿಷ್ಠತಟೈಮ್ಮ್ಯಾಗಜಿನ್ ಇದೇ ಮೊದಲ ಬಾರಿಗೆ ನೀಡುತ್ತಿರುವಕಿಡ್ಸ್ ಆ್ ದಿ ಇಯರ್ಗೌರವಕ್ಕೆ ಇಂಡಿಯನ್-ಅಮೆರಿಕನ್ ಬಾಲೆ, 15ರ ಹರೆಯದಗೀತಾಂಜಲಿ ರಾವ್ಅವರನ್ನು ಆಯ್ಕೆ ಮಾಡಿದೆ. ಈ ಬಾಲೆ ಮಂಗಳೂರು ಮೂಲದವಳು ಎನ್ನುವುದು ಕನ್ನಡಿಗರಾಗಿ ನಮಗೆ ಮತ್ತೊಂದು ಹೆಮ್ಮೆಯ ಕೋಡು!

ಗೀತಾಂಜಲಿ ರಾವ್ ಪ್ರತಿಭೆ ಯಾವುದೇ ಒಂದಕ್ಕೆ ಸೀಮಿತವಾಗಿಲ್ಲ. ಆಕೆ ಸಂಶೋಧಕಿ, ವಿಜ್ಞಾನಿ, ಫೆನ್ಸರ್, ಡ್ಯಾನ್ಸರ್, ಸಿಂಗರ್, ಬೇಕರ್, ಟೆಡ್ ಸ್ಪೀಕರ್... ಹೀಗೆ ಪಟ್ಟಿ ಬೆಳೆಯುತ್ತದೆ. ಅಮೆರಿಕದ ಕೊಲೊರಡೊದ ಡೆನೆವರ್ನಲ್ಲಿ ವಾಸವಾಗಿರುವ ಗೀತಾಂಜಲಿಟೈಮ್ಸ್ಮುಖಪುಟದಲ್ಲಿ ರಾರಾಜಿಸುವ ಖುಷಿಯ ಕ್ಷಣ ಸಲೀಸಾಗಿ ಸಿಕ್ಕಿದ್ದಲ್ಲ. ಅಮೆರಿಕದ ಐದು ಸಾವಿರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಗೆದ್ದಿದ್ದಾಳೆ ಮತ್ತು ಈ ಗೌರವಕ್ಕೆ ಯಾವುದೇ ದೃಷ್ಟಿಯಿಂದ ನೋಡಿದರೂ ಆಕೆ ಸೂಕ್ತ ಆಯ್ಕೆಯೂ ಹೌದು.

ಹಾಲಿವುಡ್ನ ಖ್ಯಾತ ನಟಿ ಎಂಜೆಲಿನಾ ಜೋಲಿ ಅವರು ಗೀತಾಂಜಲಿ ರಾವ್ ಅವರನ್ನು ಸಂದರ್ಶಿಸಿದ್ದು, ಅದರಲ್ಲಿ ಆಕೆ ತನ್ನ ಗುರಿ, ಮುಂದಿನ ಯೋಜನೆಗಳು, ಹಲವು ಸಂಶೋಧನೆಗಳಿಗೆ ಕಾರಣವಾದ ಸಂಗತಿಗಳು, ಸ್ಫೂರ್ತಿ ನೀಡಿದ ನಾಯಕರು, ಸಾಗಬೇಕಿರುವ ದಾರಿ... ಹೀಗೆ ಮಾತುಗಳನ್ನು ಹರವಿಟ್ಟಿದ್ದಾಳೆ. ಗೀತಾಂಜಲಿಯ ಸಾಧನೆಗೆ ಆಕೆಯ ತಂದೆ ರಾಮ್ ರಾವ್ ಮತ್ತು ತಾಯಿ ಭಾರತಿ ಅವರ ಸಂಪೂರ್ಣ ಬೆಂಬಲವೂ ಇದೆ. ಯಾವುದೇ ಮಕ್ಕಳು ಹೊಸದಕ್ಕೆ ತುಡಿದಾಗ ಅದಕ್ಕೆ ಪೋಷಕರು ಅಗತ್ಯ ಬೆಂಬಲ ನೀಡಿದರೆ ಅದ್ಭುತ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಗೀತಾಂಜಲಿ ಉದಾಹರಣೆ.

ಚಿಕ್ಕ ವಯಸ್ಸಾದರೂ ಆಕೆಯಲ್ಲಿರುವ ವಿಚಾರ ಸ್ಪಷ್ಟತೆ, ನಿರ್ದಿಷ್ಟ ಗುರಿಯೆಡೆಗಿನ ಬದ್ಧತೆ ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ವಯಸ್ಸಿಗೆ ಮೀರಿದ ಯೋಚನಾ ಸರಣಿ ಹಾಗೂ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ತುಡಿತವೇ ಆಕೆಯ ಸಂಶೋಧನೆ, ಆವಿಷ್ಕಾರಗಳಿಗೆ ಕಾರಣವಾಗಿದೆ.

ಕುಡಿಯುವ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿದ್ದ ಸೀಸದ ಸಮಸ್ಯೆಯನ್ನು ಅಮೆರಿಕದ ಮಿಶಿಗನ್, ಫ್ಲಿಂಟ್ ವಾಸಿಗಳು ಎದುರಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಯೋಚಿಸಿದ ಗೀತಾಂಜಲಿ, ‘ಟೆಥಿಸ್ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದಳು. ಇದು ಕಾರ್ಬನ್ ನ್ಯಾನೋಟ್ಯೂಬ್ ಆಗಿದ್ದು, ನೀರಿನಲ್ಲಿರುವ ಸೀಸದ ಪ್ರಮಾಣ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚಿ, ಕುಡಿಯಲು ನೀರು ಯೋಗ್ಯವಾಗಿದೆಯೇ ಎಂಬುದನ್ನು ಸುರಕ್ಷಿತ, ಸ್ವಲ್ಪ ಕಲುಷಿತ ಮತ್ತು ಯೋಗ್ಯವಲ್ಲ ಎಂದು ವಿಂಗಡಿಸಿ ಮಾಹಿತಿಯನ್ನು ಸ್ಮಾರ್ಟ್ ೆನ್ನ ಆ್ಯಪ್ಗೆ ರವಾನಿಸುತ್ತದೆ. ಈ ಸಾಧನ ಆಕೆಗೆ 2017ರಲ್ಲಿ ಡಿಸ್ಕವರಿ ಎಜುಕೇಷನ್ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆಲ್ಲಲು ಅವಕಾಶ ಕಲ್ಪಿಸಿತು. ಕೈಂಡ್ಲೀ ಎನ್ನುವ ಆ್ಯಪ್ ಅನ್ನು ಗೀತಾಂಜಲಿ ಅಭಿವೃದ್ಧಿ ಪಡಿಸಿದ್ದಾಳೆ. ಕೃತಕ ಬುದ್ಧಿಮತ್ತೆ(ಎಐ) ಆಧರಿತ ಈ ಆ್ಯಪ್ ಸೈಬರ್ಬುಲ್ಲಿ ಚಟುವಟಿಕೆಯನ್ನು ಪತ್ತೆ ಹಚ್ಚುತ್ತದೆ. ಗೀತಾಂಜಲಿಯ ಮತ್ತೊಂದು ಅವಿಷ್ಕಾರವು ಹ್ಯೂಮನ್ ಜೆನೆಟಿಕ್ಸ್(ಮಾನವ ತಳಿಶಾಸ) ಸಂಬಂಧಿಸಿದ್ದು ಮತ್ತು ಮಾದಕ ವ್ಯಸನಿಯಾಗುವುದನ್ನು ಪತ್ತೆ ಹಚ್ಚುತ್ತದೆ.

ವಿಜ್ಞಾನ, ತಂತ್ರಜ್ಞಾನ, ಎಂಜನಿಯರಿಂಗ್, ಗಣಿತ—(ಸ್ಟೆಮ್)ನಲ್ಲಿ ಅಪಾರ ನಂಬಿಕೆ ಹೊಂದಿರುವ ಗೀತಾಂಜಲಿ, ಸ್ಟೆಮ್ ಸಂಸ್ಥೆಗಳಲ್ಲಿರುವ ಹುಡುಗಿಯರು, ಸ್ಕೂಲ್ ವಿದ್ಯಾರ್ಥಿಗಳು, ಶಾಂಘೈ ಇಂಟರ್ನ್ಯಾಘಿಷನಲ್ ಯುಥ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಗ್ರೂಪ್, ಲಂಡನ್ನ ರಾಯಲ್ ಅಕಾಡೆಮಿ ಆ್ ಎಂಜನಿಯರಿಂಗ್ ಸಂಸ್ಥೆಗಳಲ್ಲಿ ನಾವೀನ್ಯತಾ ಕಾರ್ಯಾಗಾರಗಳನ್ನು ಮಾಡುವುದನ್ನು ಇಷ್ಟಪಡುತ್ತಾಳೆ. ವಾರಾಂತ್ಯದಲ್ಲಿ ಈ ಕ್ಲಾಸುಗಳಿಗೆ ಜಗತ್ತಿನಾದ್ಯಂತ 28 ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹೈಸ್ಕೂಲು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ ಮತ್ತು ಗೀತಾಂಜಲಿ ತಾನು ಕಂಡುಕೊಂಡ ಪ್ರಕ್ರಿಯೆ ಹಾಗೂ ಸಾಧನಗಳ ಬಗ್ಗೆ ಮಾಹಿತಿ ನೀಡುತ್ತಾಳೆ.

‘‘ಪ್ರತಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಹೋಗಬಾರದು. ನಿಮ್ಮನ್ನು ಪ್ರಚೋದಿಸುವ ಸಮಸ್ಯೆಯೊಂದರ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಿ. ಒಂದು ವೇಳೆ ಇಷ್ಟೆಲ್ಲ ಮಾಡಲು ನನಗೆ ಸಾಧ್ಯವಾಗಿದ್ದರೆ, ಯಾರಾದರೂ ಇದನ್ನು ಮಾಡಬಹುದಲ್ಲವೇ,’’ ಎನ್ನುತ್ತಾ ಇತರರನ್ನು ಹುರಿದುಂಬಿಸುವ ಔದಾರ್ಯ ಗೀತಾಂಜಲಿಗಿದೆ. ‘‘ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದೀಯಲ್ಲನಿನಗೆ ಯಾರು ಸ್ಫೂರ್ತಿ?’’ ಎಂದು ಕೇಳಿದರೆ, ಮೇರಿ ಕ್ಯೂರಿ ತನ್ನ ಅತಿದೊಡ್ಡ ಸ್ಫೂರ್ತಿ ಎನ್ನುತ್ತಾಳೆ ಬಟ್ಟಲು ಕಂಗಳ ಗೀತಾಂಜಲಿ. ಜೊತೆಗೆ, ತಂದೆ ತಾಯಿ, ಭಾರತದಲ್ಲಿರುವ ಕುಟುಂಬದ ಸದಸ್ಯರ ಬೆಂಬಲವನ್ನು ಸ್ಮರಿಸುತ್ತಾಳೆ. ಫ್ರೆಂಚ್ ಪ್ರಾಧ್ಯಾಪಕ ಮತ್ತು ಮೈಕ್ರೋಬಯಾಲಜಿ, ಜೆನೆಟಿಕ್ಸ್ ಮತ್ತು ಬಯೋಕೆಮಿಸ್ಟ್ರಿ ಸಂಶೋಧಕ ಎಮ್ಯಾನುಯೆಲ್ ಮೇರಿ ಚಾರ್ಪೆಂಟಿಯರ್ ಮತ್ತು ಅಮೆರಿಕದ ಜೀವರಾಸಾಯನಿಕ ವಿಜ್ಞಾನಿ ಜೆನ್ನಿರ್ ಆನ್ ಡೌಡನಾ ಗೀತಾಂಜಲಿ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾರೆ.

ಜಗತ್ತಿನ ಹಲವು ಮಕ್ಕಳಿಗೆರೋಲ್ ಮಾಡೆಲ್ಆಗಿರುವ ಗೀತಾಂಜಲಿ ಭಾರತದ ಇಂದಿರಾ ಗಾಂಧಿ ಎಂದರೆ ಅಚ್ಚುಮೆಚ್ಚು ಮತ್ತು ಸ್ಫೂರ್ತಿಯ ಸೆಲೆ. ‘‘ಭಾರತದಲ್ಲಿ ನನಗೆ ಸ್ಫೂರ್ತಿದಾಯಕ ವ್ಯಕ್ತಿ ಎಂದರೆ ಇಂದಿರಾ ಗಾಂಧಿ. ಇಂದಿರಾ ಬರ್ತ್ಡೇ ದಿನವೇ ನನ್ನದು ಕೂಡ,’’ ಎನ್ನುತ್ತಾಳೆ ಗೀತಾಂಜಲಿ. ಇಂದಿರಾ ಅವರ ಕೆಲಸ, ತೋರಿದ ದಿಟ್ಟ ನಾಯಕತ್ವದ ಬಗ್ಗೆ ಅಪಾರ ಮೆಚ್ಚುಗೆ. ಅವರು ಸಾಗಿದ ದಾರಿಯಲ್ಲೇ ಸಾಗಿ, ಅವರಷ್ಟೇ ಶಕ್ತಿಶಾಲಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಇಂಗಿತ ಹೊರಹಾಕುತ್ತಾಳೆ. ಇಂದಿರಾ ಹೊರತುಪಡಿಸಿ, ನಟ ಶಾರುಖ್ ಖಾನ್ ಬಗ್ಗೆಯೂ ಗೀತಾಂಜಲಿಗೆ ಅಭಿಮಾನವಿದೆ. ತಾನು ಈವರೆಗೆ ಭೇಟಿ ಮಾಡಿದವರ ಪೈಕಿ ಅತ್ಯಂತ ನಿಸ್ವಾರ್ಥ ವ್ಯಕ್ತಿ ಎಂದುಕಿಂಗ್ ಖಾನ್ರನ್ನು ಶ್ಲಾಘಿಸುತ್ತಾಳೆ. ಶಾರುಖ್ ನಡೆಸಿಕೊಟ್ಟ ಟೆಡ್ ಟಾಕ್ನಲ್ಲೂ ಗೀತಾಂಜಲಿ ಮಾತನಾಡಿದ ಅನುಭವವನ್ನು ನೆನಪಿಸಿಕೊಳ್ಳುತ್ತಾಳೆ. ಹಾಲಿವುಡ್ನಲ್ಲೂ ಹೆಸರು ಮಾಡುತ್ತಿರುವ ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಗೀತಾಂಜಲಿಗೆ ಪ್ರೀತಿ ಇದೆ.

ಗೀತಾಂಜಲಿಯ ಆಸಕ್ತಿ ವಿಜ್ಞಾನ, ಸಂಶೋಧನೆಗೆ ಸೀಮಿತವಾಗಿಲ್ಲ. ಆಕೆಗೆ ನಾನಾ ಆಸಕ್ತಿ. ಪ್ರತಿಯೊಂದನ್ನು ಕುತೂಹಲದಿಂದ ನೋಡುವ ಬೆರಗು ಸ್ವಭಾವ ಅವಳದ್ದು. ಪ್ರತಿಯೊಂದರಲ್ಲೂ ಆಸಕ್ತಿ ತಾಳಿ ಅದನ್ನು ಒಲಿಸಿಕೊಳ್ಳುತ್ತಾಳೆ. ಪಿಯಾನೋ ವಾದನ, ಭಾರತೀಯ ನೃತ್ಯ, ಗಾಯನ, ಈಜು ಮತ್ತು ಫೆನ್ಸಿಂಗ್ ಗೀತಾಂಜಲಿಯ ಆಸಕ್ತಿಯ ಕ್ಷೇತ್ರಗಳು. ಒಂಭತ್ತು ವರ್ಷದವಳಿದ್ದಾಗಲೇ ಶಾಸೀಯ ಸಂಗೀತ ಅಭ್ಯಾಸ ಆರಂಭಿಸಿದಳು. ಕೋವಿಡ್ ಕ್ವಾರಂಟೈನ್ನಲ್ಲಿ ಸಮಯವನ್ನು ಹೊಸ ಕಲಿಕೆಗೆ ಸದುಪಯೋಗಪಡಿಸಿಕೊಂಡೆ ಎಂದು ಏಂಜೆಲೀನಾ ಜೋಲಿ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ. ಇದೇ ಸಮಯದಲ್ಲಿ ತಾನು ಹೇಗೆ ಬೇಕಿಂಗ್ ಕಲಿತೆ ಎಂಬುದನ್ನು ರಸವತ್ತಾಗಿ ವಿವರಿಸಿದ್ದಾಳೆ.

ತೀರಾ ಚಿಕ್ಕ ವಯಸ್ಸಿಗೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಗೀತಾಂಜಲಿ ಮುಂದೇನು ಮಾಡುತ್ತಾಳೆ ಎಂಬ ಪ್ರಶ್ನೆ ಸಹಜ. ನಯೀ ಬಾತ್ ಟೆಡ್ಟಾಕ್ನಲ್ಲಿ ತನ್ನ ಮುಂದಿರುವ ಗುರಿಯನ್ನು ಸೂಪರ್ ಹೀರೋಗಳೊಂದಿಗೆ ಸಮೀಕರಿಸಿ ವಿವರಿಸಿದ್ದಾಳೆ. ಕಾಮಿಕ್ ಅಥವಾ ಸಿನಿಮಾದಲ್ಲಿ ಸೂಪರ್ ಹೀರೋಗಳು ಎತ್ತರದ ಕಟ್ಟಡಗಳಿಂದ ಕಟ್ಟಡಕ್ಕೆ ನೆಗೆಯುತ್ತಾರೆ; ತಾಂತ್ರಿಕ ಗ್ಯಾಜೆಟ್ಗಳನ್ನು ಬಳಸುತ್ತಾರೆ; ಅತಿಮಾನುಷ ಶಕ್ತಿ ಹೊಂದಿರುತ್ತಾರೆ. ಆದರೆ, ಅವರ ಮುಖ್ಯ ಕೆಲಸ ಜೀವಗಳನ್ನುರಕ್ಷಿಸುವುದೇ ಆಗಿರುತ್ತದೆ. ವಿಜ್ಞಾನಿಗಳೂ ಹಾಗೆಯೇ. ವಿಜ್ಞಾನಿಗಳು ಯಾವಾಗಲೂ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ; ಜನರ ಸಂಕಟಕ್ಕೆ ನೆರವಾಗುತ್ತಾರೆ. ತಾನುಸೈಂಟಿಸ್ಟ್ ಸೂಪರ್ ಹೀರೊಆಗಬೇಕು. ನಿಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುತ್ತಾ, ಜೀವಗಳನ್ನು ರಕ್ಷಿಸಬೇಕು ಎನ್ನುವುದು ಆಕೆಯ ಆಂತರ್ಯದ ಮಾತುಗಳು. ಅವಳ ಮುಂದಿನ ಗುರಿ, ಯೋಜನೆಗಳೇನೆಂಬುದು ನಿಮಗೀಗ ಸ್ಪಷ್ಟವಾಗಿರಬೇಕು ಅಲ್ಲವೇ?

(ಈ ಲೇಖನ ವಿಜಯ ಕರ್ನಾಟಕದ 2020 ಡಿಸೆಂಬರ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ) 

ಭಾನುವಾರ, ಸೆಪ್ಟೆಂಬರ್ 6, 2020

Kangana Ranaut: ಕಂಗನಾ ಅಂದ್ರೆ ಸುಮ್ನೇನಾ?

 

ಯಾವುದೇ ಘಟನೆ ಅಥವಾ ಪ್ರಕರಣದ ವಿರುದ್ಧ ದಿಕ್ಕಿನಲ್ಲಿಯೋಚಿಸಿ, ಅದನ್ನು ಅಷ್ಟೇ ದೊಡ್ಡ ದನಿಯಲ್ಲಿಹೇಳಿ, ಒಪ್ಪಿಸುವ ಛಾತಿ ನಟಿ ಕಂಗನಾಗೆ ಇದೆ.



- ಮಲ್ಲಿಕಾರ್ಜುನ ತಿಪ್ಪಾರ
ಕಂಗನಾ ರಣಾವತ್‌ ಎಂಬ ಫಿಯರ್‌ಲೆಸ್‌ ಮತ್ತು ಫಿಲ್ಟರ್‌ಲೆಸ್‌ ಆಗಿ ಮಾತನಾಡುವ ನಟಿ ಕಳೆದ ಎರಡ್ಮೂರು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ನ ಭರವಸೆಯ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಜೂನ್‌ 14ರಂದು ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ, ಅದೊಂದು ಕೊಲೆ, ಮಾನಸಿಕ ಒತ್ತಡ ಮತ್ತು ಸ್ವಜನಪಕ್ಷಪಾತಕ್ಕೆ ಬೇಸತ್ತು ಆತ್ಮಹತ್ಯೆ ಎಂಬಂಥ ಕತೆಗಳನ್ನು ನಾವು ದಿನಾ ಟಿವಿಗಳಲ್ಲಿನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ''ಸುಶಾಂತನದ್ದು ಆತ್ಮಹತ್ಯೆಯಲ್ಲ; ಅದೊಂದು ವ್ಯವಸ್ಥಿತ ಕೊಲೆ. ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತವೇ ಇದಕ್ಕೆ ಕಾರಣ,'' ಎಂದು 'ಕ್ವೀನ್‌' ನಟಿ ಕಂಗನಾ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿಹೇಳಿದಳೋ ಆಗ ಸುಶಾಂತ್‌ ಪ್ರಕರಣ ಮತ್ತೊಂದು ದಿಕ್ಕಿಗೆ ಹೊರಳಿತು. ಅವಳ ಈ ಹೇಳಿಕೆಯನ್ನೇ ಇಟ್ಟುಕೊಂಡು ಕೆಲವು ಟಿವಿ ಚಾನೆಲ್‌ಗಳೂ ದಿನದ 24 ಗಂಟೆ ಅದೇ ಸುದ್ದಿ ಬಿತ್ತರಿಸಿ, ಸುಶಾಂತ್‌ ಕುಟುಂಬದ ಸದಸ್ಯರ ಒತ್ತಡ ಹಾಗೂ ಮುಂಬಯಿ ಮತ್ತು ಬಿಹಾರ ಪೊಲೀಸರ ನಡುವಿನ ಒಟ್ಟಾರೆ ಜಟಾಪಟಿಯ ಪರಿಣಾಮ ಸುಪ್ರೀಂ ಕೋರ್ಟ್‌ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು.

ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ವಹಿಸುವ ಪ್ರಕ್ರಿಯೆಯಲ್ಲಿಕಂಗನಾ ರಣಾವತಳ ಪಾತ್ರ ಎಷ್ಟಿದೆಯೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ಅದಕ್ಕೊಂದು ಕಿಡಿ ಹೊತ್ತಿಸುವ ಪಾತ್ರವನ್ನಂತೂ ಕಂಗನಾ ಪರಿಣಾಮಕಾರಿಯಾಗಿ ನಿಭಾಯಿಸಿದರು! ಸುಶಾಂತ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಮುಂದುವರಿಸಿದಂತೆ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಡ್ರಗ್‌ ಜಾಲ ಕೂಡ ಬೆಳಕಿಗೆ ಬಂತು. ಇಲ್ಲೂ, ಕಂಗನಾ ದೊಡ್ಡದಾಗಿ ಕೂಗು ಹಾಕಿದಳು; ಬಾಲಿವುಡ್‌ನಲ್ಲಿದೊಡ್ಡ ಮಾಫಿಯಾ ಇದೆ ಎಂದು ಟಿವಿ ಚಾನೆಲ್‌ನಲ್ಲಿಕೂತು ಅಪ್ಪಣೆ ಹೊರಡಿಸಿದಳು. ಬಾಲಿವುಡ್‌ನಲ್ಲಿಆಳವಾಗಿ ಬೇರು ಬಿಟ್ಟಿರುವ ಸ್ವಜನಪಕ್ಷಪಾತದ ಬಗ್ಗೆ ತನ್ನ ಮಾತಿನ ಬಾಣಗಳನ್ನು ಚಿತ್ರರಂಗದಲ್ಲಿತನಗೆ ಆಗದವರನ್ನು ಕೇಂದ್ರೀಕರಿಸಿ ಗುರಿಯಿಟ್ಟಳು. ಸುಶಾಂತ್‌ ಕುಟುಂಬದ ಪರ ವಕೀಲರೂ ಮಾಧ್ಯಮಗಳ ಮುಂದೆ ಬಂದು ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದರು. ಕಂಗನಾ, ಸುಶಾಂತ್‌ ಹೆಸರಿನಲ್ಲಿತನಗೆ ಆಗದವರ ವಿರುದ್ಧ ಆರೋಪ ಮಾಡುತ್ತಿದ್ದಾಳೆ ಎಂದು ಹೇಳಿದರು.

ಯಾವುದೇ ಘಟನೆ ಅಥವಾ ಪ್ರಕರಣದ ವಿರುದ್ಧ ದಿಕ್ಕಿನಲ್ಲಿಯೋಚಿಸಿ, ಅದನ್ನು ಅಷ್ಟೇ ದೊಡ್ಡ ದನಿಯಲ್ಲಿಹೇಳಿ, ಒಪ್ಪಿಸುವ ಛಾತಿ ಕಂಗನಾಗೆ ಇದೆ. ಇದೇ ಕಾರಣಕ್ಕೆ ಅನೇಕ ವಿವಾದಗಳನ್ನು ಮೈಮೇಲೆ ಹಲವು ಬಾರಿ ಎಳೆದುಕೊಡಿದ್ದಾಳೆ. ಸಹ ನಟಿಯರಾದ ತಾಪ್ಸಿ ಪನ್ನು, ಸ್ವರಾ ಭಾಸ್ಕರ್‌ ವಿರುದ್ಧ ಟೀಕೆಗಳು, ಹೃತಿಕ್‌ ರೋಷನ್‌ ಮತ್ತು ತನ್ನ ನಡುವಿನ ಸಂಬಂಧವನ್ನು ಬೀದಿ ರಂಪ ಮಾಡಿದ್ದು, ಆಮೀರ್‌ ಖಾನ್‌ ಸೇರಿದಂತೆ ದೊಡ್ಡ ನಟರ ಜತೆ ನಟಿಸಲಾರೆ ಎಂಬ ಅಹಮ್ಮಿನ ಹೇಳಿಕೆಗಳು, ತಾನೂಬ್ಬ ಅಪ್ರತಿಮ ರಾಷ್ಟ್ರವಾದಿ ಎಂಬುದನ್ನು ತೋರಿಸಿಕೊಳ್ಳುವುದಕ್ಕಾಗಿ ನ್ಯಾಷನಲ್‌-ಆ್ಯಂಟಿ ನ್ಯಾಷನಲ್‌ ವಿಷಯದಲ್ಲಿಖ್ಯಾತ ನಿರ್ದೇಶಕ ಮಣಿರತ್ನಮ್‌ ಸೇರಿದಂತೆ ಹಲವರ ವಿರುದ್ಧ ಕಿಡಿ ಕಾರಿದ್ದು, ನಾಸಿರುದ್ದೀನ್‌ ಷಾ ವಿರುದ್ಧ ಕೆಂಡ ಕಾರಿದ್ದು, ಲೇಟೆಸ್ಟ್‌ ಆಗಿ, ಮುಂಬಯಿಯನ್ನು ತಾಲಿಬಾನ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ಗೆ ಹೋಲಿಕೆ ಮಾಡಿದ್ದು... ಹೀಗೆ ಕಂಗನಾಳ ವಿವಾದ ಸರಮಾಲೆ ಸಾಗುತ್ತಲೇ ಇರುತ್ತದೆ.

ಅಭಿನಯದಲ್ಲಿಮೂರು ರಾಷ್ಟ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್‌ ಅವಾರ್ಡುಗಳನ್ನು ಗೆದ್ದುಕೊಂಡಿರುವ 33 ವರ್ಷದ ಈ ಕಂಗನಾಗೆ ದೇಶದ ನಾಲ್ಕೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಶ್ರೀ ಕೂಡ ಸಂದಿದೆ. ಕಂಗನಾ ಬಾಲ್ಯದಿಂದಲೂ ಬಂಡಾಯ ಮತ್ತು ಪಟ್ಟುಬಿಡದ ಸ್ವಭಾವವನ್ನು ಬೆಳೆಸಿಕೊಂಡಿದ್ದಾಳೆ. ''ನನ್ನ ತಂದೆ ತಮ್ಮನಿಗೆ ಪ್ಲಾಸ್ಟಿಕ್‌ ಗನ್‌ ಕೊಡಿಸಿದಾಗ ಮಾತ್ರ ನನಗೆ ಒಂದು ಗೊಂಬೆಯನ್ನು ಕೊಡಿಸುತ್ತಿದ್ದರು. ನಾನು ಈ ತಾರತಮ್ಯವನ್ನು ಪ್ರಶ್ನಿಸುತ್ತಿದ್ದೆ,'' ಎಂದು ಕಂಗನಾ ಒಮ್ಮೆ ಹೇಳಿಕೊಂಡಿದ್ದರು.

1987ರ ಮಾರ್ಚ್ 23ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ಪಟ್ಟಣ ಭಂಬ್ಲಾ(ಈಗ ಸೂರಜ್‌ಪುರ) ರಜಪೂತ ಕುಟುಂಬದಲ್ಲಿಕಂಗನಾ ಜನಿಸಿದಳು. ತಾಯಿ ಆಶಾ ರಣಾವತ್‌ ಸ್ಕೂಲ್‌ ಟೀಚರ್‌ ಮತ್ತು ತಂದೆ ಅಮರದೀಪ್‌ ರಣಾವತ್‌ ಬಿಸಿನೆಸ್‌ಮನ್‌. ಹಿರಿಯ ಸಹೋದರಿ ರಂಗೋಲಿ ಚಾಂಡೆಲ್‌, 2014ರಿಂದ ಕಂಗನಾಗೆ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಅಕ್ಷತ್‌ ಎಂಬ ಸಹೋದರನಿದ್ದಾನೆ. ಕಂಗನಾಳ ಮುತ್ತಜ್ಜ ಸರ್ಜು ಸಿಂಗ್‌ ರಣಾವತ್‌ ಶಾಸಕರಾಗಿದ್ದರು ಮತ್ತು ಅಜ್ಜ ಭಾರತೀಯ ಆಡಳಿತ ಸೇವೆಯಲ್ಲಿಅಧಿಕಾರಿಯಾಗಿದ್ದರು. ಭಂಬ್ಲಾದಲ್ಲಿರುವ ಬಂಗ್ಲೆಯಲ್ಲಿವಾಸವಿದ್ದ ಅವಿಭಕ್ತ ಕುಟುಂಬದಲ್ಲಿಕಂಗನಾ ಬಾಲ್ಯವನ್ನು ಕಳೆದರು.

ಚಂಡೀಗಢದ ಡಿಎವಿ ಸ್ಕೂಲ್‌ನಲ್ಲಿಕಂಗನಾ ದಾಖಲಾದಳು. ವಿಜ್ಞಾನ ಆಕೆಯ ಅಧ್ಯಯನದ ಮುಖ್ಯ ವಿಷಯವಾಗಿತ್ತು. ತಂದೆ-ತಾಯಿಗೆ ಕಂಗನಾ ವೈದ್ಯಳಾಗಬೇಕೆಂಬ ಆಸೆ. ಕಂಗನಾ ಕೂಡ ಆ ನಿಟ್ಟಿನಲ್ಲಿಪ್ರಯತ್ನಿಸಿದ್ದಳು. ಆದರೆ, 12ನೇ ಕ್ಲಾಸ್‌ನ ಯುನಿಟ್‌ ಟೆಸ್ಟ್‌ನಲ್ಲಿಕಂಗನಾ ಕೆಮೆಸ್ಟ್ರಿ ಪರೀಕ್ಷೆಯಲ್ಲಿಫೇಲ್‌ ಆದಳು. ಈ ಫಲಿತಾಂಶವು ಕಂಗನಾಗೆ ತನ್ನ ಆದ್ಯತೆ ಕುರಿತು ಮತ್ತೊಮ್ಮೆ ಯೋಚಿಸುವಂತೆ ಮಾಡಿತು. ಹಾಗಾಗಿ, ಆಲ್‌ ಇಂಡಿಯಾ ಪ್ರಿ ಮೆಡಿಕಲ್‌ ಟೆಸ್ಟ್‌ಗೆ ಸಿದ್ಧತೆ ನಡೆಸಿದ್ದರೂ ಪರೀಕ್ಷೆಗೆ ಹಾಜರಾಗಲಿಲ್ಲ. ಸ್ವಾತಂತ್ರ್ಯ ಹಾಗೂ ಅವಕಾಶವನ್ನು ಪಡೆದುಕೊಳ್ಳುವುದಕ್ಕಾಗಿಯೇ ಹಿಮಾಚಲ ಪ್ರದೇಶದಿಂದ ದಿಲ್ಲಿಗೆ ಬಂದಳು. ಆಗ ಕಂಗನಾಗೆ 16 ವರ್ಷ. ವೈದ್ಯಕೀಯ ಶಿಕ್ಷಣ ಪಡೆಯಲು ನಿರಾಕರಿಸಿದ ಪರಿಣಾಮ ತಂದೆ-ತಾಯಿಯೊಂದಿಗೆ ಜಗಳವಾಗಿತ್ತು ಮತ್ತು ಕಂಗನಾಳ ಮುಂದಿನ ಯಾವುದೇ ಕೆಲಸಕ್ಕೆ ತಂದೆಯಿಂದ ಸಹಾಯ ಸಿಗಲಿಲ್ಲ. ದಿಲ್ಲಿಗೆ ಬಂದ ಕಂಗನಾಗೆ, ತನ್ನ ಕರಿಯರ್‌ ಆಯ್ಕೆ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಎಲೈಟ್‌ ಮಾಡೆಲಿಂಗ್‌ ಏಜೆನ್ಸಿ ಕಂಗನಾಳ ಸೌಂದರ್ಯಕ್ಕೆ ಮಾರುಹೋಗಿ ಮಾಡೆಲಿಂಗ್‌ಗೆ ಇಳಿಯುವಂತೆ ಹೇಳಿತು. ಕೆಲವು ಮಾಡೆಲಿಂಗ್‌ ಪ್ರಾಜೆಕ್ಟ್ನಲ್ಲಿಪಾಲ್ಗೊಂಡರೂ ಸೃಜನಶೀಲತೆಗೆ ಅವಕಾಶವಿಲ್ಲಎಂಬುದು ಗೊತ್ತಾಗುತ್ತಿದ್ದಂತೆ ಮಾಡೆಲಿಂಗ್‌ ಕೈ ಬಿಟ್ಟಳು. ಅಭಿನಯದತ್ತ ಗಮನ ಕೇಂದ್ರೀಕರಿಸಿದ ಕಂಗನಾ ಅಸ್ಮಿತಾ ಥಿಯೇಟರ್‌ ಗ್ರೂಪ್‌ ಸೇರಿದರು. ರಂಗ ನಿರ್ದೇಶಕ ಅರವಿಂದ ಗೌರ್‌, ಕಂಗನಾಗೆ ನಟನೆಯ ಪಟ್ಟುಗಳನ್ನು ಹೇಳಿಕೊಟ್ಟರು. ಕನ್ನಡಿಗ ಗಿರೀಶ್‌ ಕಾರ್ನಾಡ ಅವರ 'ತಲೆದಂಡ' ಸೇರಿದಂತೆ ಹಲವು ನಾಟಕಗಳಲ್ಲಿಅಭಿನಯಿಸಿ ಸಾಮರ್ಥ್ಯವನ್ನು ಸಾಬೀತುಪಡಿಸಿದಳು. ಒಮ್ಮೆ ನಾಟಕವೊಂದರ ಪುರುಷ ಪಾತ್ರಧಾರಿಯೊಬ್ಬರು ನಾಪತ್ತೆಯಾದರು. ಆಗ ಕಂಗನಾ ಆ ಪುರುಷನ ಮತ್ತು ತನ್ನ ಮೂಲ ಪಾತ್ರವನ್ನು ನಿರ್ವಹಿಸಿ ಬಹುಮೆಚ್ಚುಗೆಯನ್ನು ಪಡೆದುಕೊಂಡಳು. ಈ ಘಟನೆಯಿಂದ ಪ್ರೇರಣೆ ಪಡೆದು ತನ್ನ ಕರ್ಮಭೂಮಿಯನ್ನು ದಿಲ್ಲಿಯಿಂದ ಮುಂಬಯಿಗೆ ಸ್ಥಳಾಂತರಿಸಿ, ಅಲ್ಲಿಆಶಾ ಚಂದ್ರ ಅವರ ನಾಟಕ ಶಾಲೆಯಲ್ಲಿಮತ್ತೆ ನಾಲ್ಕು ತಿಂಗಳ ತರಬೇತಿ ಪಡೆದುಕೊಂಡಳು.

ಬಾಲಿವುಡ್‌ನ ಸಂಘರ್ಷದ ದಿನಗಳಲ್ಲಿಸಾಕಷ್ಟು ಕಷ್ಟಗಳನ್ನು ಕಂಡಿದ್ದಾಳೆ ಕಂಗನಾ. ಈ ಅವಧಿಯಲ್ಲಿತಂದೆಯ ಆರ್ಥಿಕ ನೆರವನ್ನು ತಿರಸ್ಕರಿಸಿದ ಪರಿಣಾಮ ಕೆಲವೊಮ್ಮೆ ಕೇವಲ ಬ್ರೆಡ್‌ ಮತ್ತು ಉಪ್ಪಿನಕಾಯಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತಂತೆ. ಫಿಲ್ಮ್‌ ಕರಿಯರ್‌ ಆಯ್ಕೆಗೆ ಸಂಬಂಧಿಕರಿಂದಲೂ ವಿರೋಧವಿತ್ತು. 2007ರಲ್ಲಿ'ಲೈಫ್‌ ಇನ್‌ ಮೆಟ್ರೊ' ಚಿತ್ರ ಬಿಡುಗಡೆ ನಂತರ ಕುಟುಂಬ ಹಾಗೂ ಸಂಬಂಧಿಕರು ಕಂಗನಾ ಜೊತೆಗೆ ಸಂವಹನ ಬೆಳೆಸಿದರು.

ಮಹೇಶ್‌ ಭಟ್‌(ಕಂಗನಾ ಇವರ ವಿರುದ್ಧವೇ ಸ್ವಜನಪಕ್ಷಪಾತದ ಆರೋಪ ಮಾಡುತ್ತಿದ್ದಾರೆ) ನಿರ್ಮಾಣ ಮತ್ತು ಅನುರಾಗ್‌ ಬಸು ನಿರ್ದೇಶನದ 'ಗ್ಯಾಂಗಸ್ಟರ್‌' ಚಿತ್ರದ ಮೂಲಕ ಕಂಗನಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 2004ರಿಂದ ಆರಂಭವಾದ ಸಿನಿ ಬದುಕಿನಲ್ಲಿಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ವೋ ಲಮ್ಹೆ(2006), ಲೈಫ್‌ ಇನ್‌ ಮೆಟ್ರೊ(2007), ಫ್ಯಾಷನ್‌(2008) ಚಿತ್ರಗಳ ಪೈಕಿ ಕೊನೆಯ ಎರಡು ಚಿತ್ರಗಳ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. 2009ರಲ್ಲಿತೆರೆಕಂಡ ರಾಝ್‌: ದಿ ಮಿಸ್ಟರಿ ಕಂಟಿನ್ಯೂಸ್‌, ತನು ವೆಡ್ಸ್‌ ಮನು(2011), ಕ್ರಿಶ್‌ 3(2023) ಮತ್ತು 2014ರಲ್ಲಿಬಿಡುಗಡೆಯಾದ 'ಕ್ವೀನ್‌' ಚಿತ್ರ ಕಂಗನಾಳಿಗೆ ಬಾಲಿವುಡ್‌ನ ಕ್ವೀನ್‌ ಕೀರ್ತಿಗೆ ಭಾಜನವಾಗುವಂತೆ ಮಾಡಿತು. ಇದರ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಬಂತು. 'ಮಣಿಕರ್ಣಿಕಾ' ಚಿತ್ರದಲ್ಲಿಅಭಿನಯದೊಂದಿಗೆ ನಿರ್ದೇಶನ ಕೂಡ ಮಾಡಿದರು.

ಸಿನಿ ಜಗತ್ತಿನಲ್ಲಿತನ್ನದೇ ಛಾಪು ಮೂಡಿಸಿದ ಬಳಿಕ ಸಾರ್ವಜನಿಕವಾಗಿ ಹಲವು ವಿಷಯಗಳ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯಲಿಲ್ಲ. ಆಕೆಯನ್ನು ಇಷ್ಟಪಡೋರಿಗೆ ಕಂಗನಾ ಕ್ರುಸೆಡರ್‌ ರೀತಿಯಲ್ಲೂ, ದ್ವೇಷಿಸುವವರಿಗೆ ಬಲಪಂಥೀಯ ಪ್ರಪಗಾಂಡಿಸ್ಟ್‌ ರೀತಿಯಲ್ಲೂ, ಉಪೇಕ್ಷಿಸುವವರಿಗೆ ಬಾಲಿವುಡ್‌ನ ಮ್ಯಾಡ್‌ ಕ್ವೀನ್‌ ರೀತಿಯಲ್ಲೂಕಾಣಿಸುತ್ತಾಳೆ. ಆಕೆಯನ್ನು ನೀವು ಇಷ್ಟಪಡಬಹುದು; ಇಷ್ಟಪಡದಿರಬಹುದು. ಆದರೆ, ಖಂಡಿತವಾಗಿಯೂ ಕಡೆಗಣಿಸಲಾರಿರಿ.