54 ವರ್ಷದ ವಾಂಗ್‌ಚುಕ್ ಪ್ರತಿಭೆಯ ಖನಿ, ಹಲವು ಸಾಧನೆಗಳ ಸಾರಥಿ, ಬಾಯ್ಕಾಟ್ ಚೀನಾ ಅಭಿಯಾನಕ್ಕೆ ವೇಗ ನೀಡಿದ ರೂವಾರಿ.
- ಮಲ್ಲಿಕಾರ್ಜುನ
ತಿಪ್ಪಾರ
ಗಲ್ವಾನ್ ಕಣಿವೆಯಲ್ಲಿ ಚೀನಾ ಅಟ್ಟಹಾಸಕ್ಕೆ ನಮ್ಮ ಯೋಧರು ಹುತಾತ್ಮರಾದರಲ್ಲಅದೇ
ಕ್ಷಣ ದೇಶದಲ್ಲೊಂದು ‘ಬಾಯ್ಕಾಟ್ ಚೀನಾ’
ಆಂದೋಲನ ಇದ್ದಕ್ಕಿಂತ ವೇಗ ಪಡೆದುಕೊಂಡಿತು. ಅದರ ಹಿಂದಿನ
ಶಕ್ತಿಯೇ ಈ ಸೋನಮ್ ವಾಂಗ್‌ಚುಕ್.
‘ಚೀನಾ ಕೋ ಜವಾಬ್’ ಸರಣಿ ವಿಡಿಯೋಗಳನ್ನು ಹರಿಬಿಟ್ಟ ಈ
ಲಡಾಖಿ ವ್ಯಕ್ತಿಯ ಹಿನ್ನೆಲೆಯನ್ನು ತಿಳಿದರೆ ವ್ಯಕ್ತಿಯೊಬ್ಬ ಇಷ್ಟೆಲ್ಲ ಕೆಲಸಗಳನ್ನು ಮಾಡಬಹುದೇ,
ಇಷ್ಟೊಂದು ಪ್ರತಿಭಾನ್ವಿತರಾಗಿರಲು ಸಾಧ್ಯವೇ ಎಂಬ ಅನುಮಾನ ಬರುವುದು ಗ್ಯಾರಂಟಿ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ರಾಜಕುಮಾರ್
ಹಿರಾನಿ ನಿರ್ದೇಶನದ ‘ತ್ರಿ ಈಡಿಯಟ್ಸ್’ ಚಿತ್ರ ನೆನಪಿದೆಯಲ್ಲ. ಅದರಲ್ಲಿ ಅಮೀರ್ ಖಾನ್ ನಿರ್ವಹಿಸಿದ್ದ ‘ಪುನ್ಷುಕ್
ವಾಂಗ್ಡು/ರಂಚೋಡದಾಸ್ ಶ್ಯಾಮಲದಾಸ್
ಚಾಂಚಡ್’ ಪಾತ್ರವಿದೆಯಲ್ಲ, ಅದಕ್ಕೆ ಈ ಸೋನಮ್ ವಾಂಗುಚುಕ್ ಅವರೇ
ಸ್ಫೂರ್ತಿ! ವಾಂಗ್‌ಚುಕ್ ಅವರ ಪ್ರತಿಭೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಮೆಕ್ಯಾನಿಕಲ್
ಎಂಜಿನಿಯರ್, ಮಾತುಗಾರ, ಶಿಕ್ಷ
ಣ ತಜ್ಞ, ಸಂಶೋಧಕ, ಸುಧಾರಕ, ಪತ್ರಕರ್ತ, ರಾಜಕಾರಣಿ ಹೀಗೆ ಇನ್ನೂ ಏನೇನೋ.
ಟಿಬೆಟಿಯನ್ನರು, ಉಯಿಗೂರ್ ಮುಸ್ಲಿಮರ ವಿರುದ್ಧ
ಮಾನವ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ಕೇವಲ
ಸೇನಾ ಬಲ ಮಾತ್ರವೇ ಸಾಕಾಗುವುದಿಲ್ಲ. ಭಾರತೀಯರು ‘ವಾಲೆಟ್ ಪವರ್’ ಬಳಸಬೇಕು ಮತ್ತು ಚೀನಾ
ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೇ ಅದಕ್ಕೆ
ಸಂಬಂಧಿಸಿದಂತೆ ಸರಣಿ ವಿಡಿಯೋಗಳನ್ನು ಹರಿಯಬಿಟ್ಟರು. ಚೀನಾ ವಸ್ತುಗಳ ಬಹಿಷ್ಕಾರ
ಯಾಕೆ ಅಗತ್ಯ ಅನ್ನುವುದನ್ನು ಎಷ್ಟು ಸೊಗಸಾಗಿ ಹೇಳಿದರಂದರೆ, ರಾತ್ರೋರಾತ್ರಿ
ವಿಡಿಯೋಗಳು ವೈರಲ್ ಆದವು. ಬಹುತೇಕ ಎಲ್ಲಮಾಧ್ಯಮಗಳು
ಅವರ ವಿಚಾರವನ್ನು ಪ್ರಚಾರ ಮಾಡಿದವು. ಪರಿಣಾಮ ದೇಶದಲ್ಲಿಚೀನಾ ಬಾಯ್ಕಾಟ್
ಅಭಿಯಾನಕ್ಕೆ ಹೆಚ್ಚಿನ ಬಲ ಬಂದು, ಕೇಂದ್ರ ಸರಕಾರ ಮೊದಲ
ಹಂತದಲ್ಲಿ ಚೀನಾ ಮೂಲದ 59 ಆ್ಯಪ್ಗಳನ್ನು ನಿಷೇಧಿಸಿತು.
ಚೀನಾ ಬಾಯ್ಕಾಟ್ ಅಭಿಯಾನಕ್ಕೆ ಒಂದು ದಿಕ್ಕು,
ಶಕ್ತಿ ತೋರಿಸಿದ್ದು ಈ ವಾಂಗ್‌ಚುಕ್ ಎಂಬುದರಲ್ಲಿ ಅನುಮಾನವಿಲ್ಲ. ಪ್ರತಿಭೆಯ ಗಣಿಯೇ ಆಗಿರುವ ವಾಂಗ್ಚುಕ್, ಲಡಾಖ್, ಸಿಕ್ಕಿಮ್,
ನೇಪಾಳದಲ್ಲಿಶೈಕ್ಷ ಣಿಕ ಕ್ಷೇತ್ರದ ಸುಧಾರಕರಾಗಿ ದುಡಿಯುತ್ತಿದ್ದಾರೆ.
ಲಡಾಖ್‌ನ ಲೇಹ್ ಜಿಲ್ಲೆಯ ಅಲ್ಚಿ
ಸಮೀಪದ ಉಲೆಟೊಕ್ಪೊ ಎಂಬಲ್ಲಿ1966ರಲ್ಲಿವಾಂಗ್‌ಚುಕ್ ಜನಿಸಿದರು. ಈ ಊರು ಮತ್ತು ಸಮೀಪದ
ಊರುಗಳಲ್ಲಿಯಾವುದೇ ಶಾಲೆಗಳು ಇರಲಿಲ್ಲ. ಹಾಗಾಗಿ ವಾಂಗ್ಚುಕ್ 9 ವರ್ಷ ಆಗೋವರೆಗೂ ಯಾವುದೇ ಶಾಲೆಗೆ ಹೋಗಲಿಲ್ಲ.
ಬದಲಿಗೆ ಅವರ ತಾಯಿ ಮನೆಯಲ್ಲೇ ಮೂಲ ಪಾಠಗಳನ್ನು ಹೇಳಿಕೊಟ್ಟರು. ಇದಕ್ಕೆ ಅವರಿಗೆ ಖೇದವೇನೂ ಇಲ್ಲ. ಬದಲಿಗೆ, ಇದು ಅದೃಷ್ಟ ಎನ್ನುತ್ತಾರೆ. ಯಾಕೆಂದರೆ, ತಮ್ಮದಲ್ಲದ ಭಾಷೆಯಲ್ಲಿಒತ್ತಾಯಪೂರ್ವಕವಾಗಿ ಕಲಿಯುವುದು ತಪ್ಪಿಸಲು ಸಾಧ್ಯವಾಯಿತು.
ಲಡಾಖಿ ಭಾಷೆಯಲ್ಲಿಮೂಲ ಪಾಠ ಕೇಳುವುದು ಅವಕಾಶ ಸೃಷ್ಟಿಯಾಯಿತು.
ವಾಂಗ್‌ಚುಕ್ ಅವರ ತಂದೆ ಸೋನಮ್
ವಂಗ್ಯಾಲ್ ಅವರು ರಾಜಕಾರಣಿ ಮತ್ತು ಕಾಶ್ಮೀರದಲ್ಲಿಸಚಿವರಾಗಿದ್ದರು.
ವಾಂಗ್ಚುಕ್ಗೆ 9 ವರ್ಷ ಆದಾಗ ಅವರು ತಮ್ಮ ನೆಲೆಯನ್ನು ಶ್ರೀನಗರಕ್ಕೆ ಬದಲಿಸಿದರು. ಅಲ್ಲಿಅವರನ್ನು ಸ್ಕೂಲ್ಗೆ ಸೇರಿಸಲಾಯಿತು. ಇತರರಿಗಿಂತ ಭಿನ್ನವಾಗಿ ಕಾಣುತ್ತಿದ್ದ ವಾಂಗ್ಚುಕ್ಗೆ ಅಲ್ಲಿನ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ಇದರಿಂದಾಗಿ ದಡ್ಡ
ವಿದ್ಯಾರ್ಥಿ ಎಂದು ಪರಿಗಣಿತರಾದರು. ಶ್ರೀನಗರ ಶಾಲೆಯ ದಿನಗಳನ್ನು ಅವರು
ತಮ್ಮ ಜೀವನದ ಅತ್ಯಂತ ಕರಾಳ ದಿನಗಳೆಂದು ಹೇಳಿಕೊಂಡಿದ್ದಾರೆ. ಕೊನೆಗೆ
1977ರಲ್ಲಿದಿಲ್ಲಿಗೆ ಬಂದ ವಾಂಗ್ಚುಕ್, ವಿಶೇಷ ಕೇಂದ್ರೀಯ ವಿದ್ಯಾಲಯವನ್ನು ಸೇರಿಕೊಂಡರು. ಆ ನಂತರ,
1987ರಲ್ಲಿನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಶ್ರೀನಗರದಿಂದ
ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿಬಿ ಟೆಕ್
ಪದವಿ ಪಡೆದರು. ಎಂಜಿನಿಯರಿಂಗ್ನಲ್ಲಿವಿಷಯಗಳ ಆಯ್ಕೆ ಸಂಬಂಧ ತಂದೆ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿ ತಮ್ಮ ಅಧ್ಯಯನ ವೆಚ್ಚವನ್ನು
ತಾವೇ ಭರಿಸಿಕೊಂಡರು. ಫ್ರಾನ್ಸ್ಗೆ ತೆರಳಿ ಎರಡು
ವರ್ಷ ಗ್ರೆನೋಬಲ್‌ನಲ್ಲಿರುವ ಕ್ಯಾಟರ್ ಸ್ಕೂಲ್
ಆಫ್ ಆರ್ಕಿಟೆಕ್ಚರ್‌ನಲ್ಲಿಅರ್ಥೆನ್
ಆರ್ಕಿಟೆಕ್ಚರ್(ಮಣ್ಣಿನ ವಾಸ್ತುಶಿಲ್ಪ)ನಲ್ಲಿಉನ್ನತ ಅಧ್ಯಯನ ಕೈಗೊಂಡು ಭಾರತಕ್ಕೆ ಮರಳಿದರು.
ಇದಕ್ಕೂ ಮೊದಲು ಅಂದರೆ 1988ರಲ್ಲಿವಾಂಗ್‌ಚುಕ್
ತನ್ನ ಸಹೋದರ ಮತ್ತು ಐವರ ಜತೆಗೂಡಿ ಸ್ಟೂಡೆಂಟ್ಸ್ ಎಜ್ಯುಕೇಷನಲ್ ಆ್ಯಂಡ್ ಕಲ್ಚರಲ್
ಮೂವ್‌ಮೆಂಟ್ ಆಫ್
ಲಡಾಖ್(ಎಸ್‌ಇಸಿಎಂಒಎಲ್)
ಆರಂಭಿಸಿದರು. ಶೈಕ್ಷ ಣಿಕ ಸುಧಾರಣೆಯೇ ಇದರ ಗುರಿಯಾಗಿತ್ತು.
ಸಸೊಧೀಲ್ ಸರಕಾರಿ ಹೈಸ್ಕೂಲನ್ನು ತಮ್ಮ ಸುಧಾರಣಾ ಪ್ರಯೋಗ
ಶಾಲೆಯಾಗಿ ಬಳಸಿಕೊಂಡು, ಆಪರೇಷನ್ ನ್ಯೂ ಹೋಪ್
ಆರಂಭಿಸಿದರು. ಇದಕ್ಕೆ ಸರಕಾರದ ಶಿಕ್ಷ ಣ ಇಲಾಖೆಯ ಸಹಯೋಗವೂ
ಇತ್ತು. ಲಡಾಖ್ನ ಏಕೈಕ ಮ್ಯಾಗಜಿನ್
‘ಲಡಾಖ್ಸ್ ಮೆಲಾಂಗ್’ ಆರಂಭಿಸಿ
1993ರಿಂದ 2005ರವರೆಗೂ ಅದರ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಹಿಲ್ ಕೌನ್ಸಿಲ್ ಗವರ್ನಮೆಂಟ್‌ನಲ್ಲಿಶಿಕ್ಷ ಣ ಸಲಹೆಗಾರರಾಗಿದ್ದರು. 2002ರಲ್ಲಿಲಡಾಕ್
ವಾಲ್ಯುಂಟರಿ ನೆಟ್ವರ್ಕ್(ಎಲ್ವಿಎನ್) ಎನ್ಜಿಒ ಆರಂಭಿಸಿದರು.
ವಿಜನ್ ಡಾಕ್ಯುಮೆಂಟ್ ಲಡಾಖ್‌ನ-2025ರ ಕರಡು ಸಮಿತಿಯ ಸದಸ್ಯರಾಗಿದ್ದರು. ಹಾಗೆಯೇ, 2004ರಲ್ಲಿಹಿಲ್ ಗವರ್ನಮೆಂಟ್‌ನ ಶಿಕ್ಷ ಣ ಮತ್ತು ಪ್ರವಾಸೋದ್ಯಮ ನೀತಿ ನಿರೂಪಣೆಯಲ್ಲಿಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.
2005ರಲ್ಲಿಅಂದಿನ ಡಾ.ಮನಮೋಹನ್ ಸಿಂಗ್ ಸರಕಾರವು ಇವರನ್ನು ನ್ಯಾಷನಲ್ ಗೌವರ್ನಿಂಗ್ ಕೌನ್ಸಿಲ್ ಫಾರ್
ಎಲೆನಂಟರಿ ಎಜ್ಯುಕೇಷನ್‌ನ ಸಮತಿಯ ಸದಸ್ಯರನ್ನಾಗಿ ನೇಮಕ
ಮಾಡಿತು.
ವಾಂಗ್‌ಚುಕ್ ಅವರ ಮತ್ತೊಂದು ಗಮನಾರ್ಹ
ಸಾಧನೆ ಎಂದರೆ ‘ಐಸ್ ಸ್ತೂಪ’ ಅಂದರೆ ಹಿಮದ ಸ್ತೂಪ. ಚಳಿಗಾಲದಲ್ಲಿವ್ಯರ್ಥವಾಗಿ ಹರಿದು ಹೋಗುವ
ಹಳ್ಳಗಳ ನೀರನ್ನು ಕೃತಕವಾಗಿ ಹಿಮದ ಗಡ್ಡೆಗಳನ್ನಾಗಿ ಪರಿವರ್ತಿಸುವುದು ಮತ್ತು ಬೇಸಿಗೆ ಕಾಲದಲ್ಲಿಈ
ಹಿಮದ ಸ್ತೂಪಗಳು ಕರಗಿ ರೈತರಿಗೆ ನೀರಿನ ಮೂಲವನ್ನು ಒದಗಿಸುತ್ತವೆ. ಇದಕ್ಕೆ
ಸಂಬಂಧಿಸಿದ ಮಾದರಿಯನ್ನು ವಾಂಗ್‌ಚುಕ್ ಸಿದ್ಧಪಡಿಸಿದ್ದರು.
ಈ ಹಿಮದ ಸ್ತೂಪಗಳು ಲಡಾಖ್ನ ರೈತರಿಗೆ ತುಂಬ ನೆರವಾಗಿವೆ.
2014ರ ಬಳಿಕ ಜಮ್ಮು ಮತ್ತು ಕಾಶ್ಮೀರ ಸರಕಾರದ ಅನೇಕ ಸಮಿತಿಗಳಲ್ಲಿವಾಂಗ್‌ಚುಕ್ ಕೆಲಸ ಮಾಡಿದ್ದಾರೆ.
ರಾಜ್ಯದ ಶಿಕ್ಷ ಣ ನೀತಿ ಸೇರಿದಂತೆ ಅನೇಕ ನೀತಿ ನಿರೂಪಣೆಗಳಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ.
2015ರಿಂದ ಹಿಮಾಲಯನ್ ಇನ್ಸ್‌ಟ್ಯೂಟ್ ಆಫ್ ಅಲ್ಟರ್ನೇಟಿವ್ಸ್
ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವಲ್ಲಿನಿರತರಾಗಿದ್ದಾರೆ. ಇದೇ ವೇಳೆ, ಹೋಮ್ ಸ್ಟೇ ಮಾದರಿಯಲ್ಲಿಫಾರ್ಮ್‌ಸ್ಟೇ ಎಂಬ ಹೊಸ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಲಡಾಖ್ಗೆ ಆಗಮಿಸುವ ಪ್ರವಾಸಿಗರು ಹೊಟೇಲ್ಗಳಲ್ಲಿಉಳಿಯುವ ಬದಲಿಗೆ ಸ್ಥಳೀಯ
ಕುಟುಂಬಗಳಲ್ಲಿಉಳಿದುಕೊಳ್ಳುವ ಕಲ್ಪನೆಯೇ ಫಾರ್ಮ್ಸ್ಟೇ. ಇದರಿಂದ ಸ್ಥಳೀಯರಿಗೆ ಉದ್ಯೋಗವೂ ಸೃಷ್ಟಿಯಾಗುತ್ತಿದೆ.
ಪ್ರತಿ ಕ್ಷ ಣವನ್ನು ವ್ಯರ್ಥ ಮಾಡದೇ ತೊಡಗಿಸಿಕೊಂಡಿರುವ ವಾಂಗ್‌ಚುಕ್ ಅವರ ವಿಶ್ರಾಮರಹಿತ ಜೀವನವೇ ನಮಗೆ ಸೂಧಿರ್ತಿಯಾಗುತ್ತದೆ.
ಅವರ ಈ ವಿಶಿಷ್ಟ ಕಾರ್ಯಶೈಲಿ, ಹೊಸ ಹೊಸ ಹೊಳಹುಗಳು ಮತ್ತು
ಅವುಗಳನ್ನು ಅನುಷ್ಠಾಗೊಳಿಸುವ ಛಾತಿಯಿಂದಾಗಿ ಎಲ್ಲರಕ್ಕಿಂತ ಭಿನ್ನವಾಗಿ ನಿಲ್ಲುತ್ತಾರೆ.
ಅದಕ್ಕೆ ಪ್ರತಿಫಲವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ವಾಂಗ್‌ಚುಕ್ ಅವರನ್ನು ಹುಡುಕಿಕೊಂಡು ಬಂದಿವೆ. 2018ರಲ್ಲಿರಾಮನ್ ಮ್ಯಾಗ್ಸಸೆ ಅವಾರ್ಡ್, ಗ್ಲೋಬಲ್ ಅವಾರ್ಡ್ ಫಾರ್
ಸಸ್ಟೇನೇಬಲ್ ಆರ್ಕಿಟೆಕ್ಚರ್(2017), ಇಂಟರ್‌ನ್ಯಾಷನಲ್ ಟೆರ್ರಾ ಅವಾರ್ಡ್
ಫಾರ್ ಬೆಸ್ಟ್ ಅರ್ಥ್
ಬಿಲ್ಡಿಂಗ್(2016), ಯುನೆಸ್ಕೋ ಚೇರ್ ಅರ್ಥೇನ್ ಆರ್ಕಿಟೆಕ್ಚರ್(2014), ಸ್ಯಾಂಚುರಿ ಏಷ್ಯಾದ ಗ್ರೀನ್ ಟೀಚರ್ ಅವಾರ್ಡ್(2004)... ಹೀಗೆಯೇ ಅವರು ಪಡೆದುಕೊಂಡಿರುವ ಪ್ರಶಸ್ತಿಗಳ
ಪಟ್ಟಿ ಬೆಳೆಯುತ್ತದೆ.
ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಂಡಿರುವ ವಾಂಗ್‌ಚುಕ್
ಅವರು, ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರ ವಿಭಜಿಸಿ
ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದಾಗ ಅದನ್ನು
ಸ್ವಾಗತಿಸಿದ ಮೊದಲಿಗರಲ್ಲಿಇವರು ಒಬ್ಬರು. ತನ್ನದೇ ಸ್ವತಂತ್ರ ಸಂಸ್ಕೃತಿ,
ಭಾಷೆ ಹೊಂದಿರುವ ಲಡಾಕ್ಗೆ ಮಾನ್ಯತೆ ತಂದುಕೊಡಬೇಕೆಂಬುದು
ಅವರ ಹಂಬಲವಾಗಿದೆ.
(ಈ ಲೇಖನವು ವಿಜಯ ಕರ್ನಾಟಕದ ಜುಲೈ12, 2020ರ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ