ಭಾನುವಾರ, ಫೆಬ್ರವರಿ 14, 2021

Ghulam Nabi Azad is a Man of Integrity: 'ಆಜಾದ್‌' ಭಾರತದ 'ಬದ್ಧತೆ'ಯ ನಾಯಕ

 ಕಾಂಗ್ರೆಸ್‌ನ ಬಿಕ್ಕಟ್ಟುಗಳಿಗೆ ಪರಿಹಾರ ಸೂಚಿಸುತ್ತಿದ್ದ ಚಾಣಾಕ್ಷ ರಾಜಕಾರಣಿ



- ಮಲ್ಲಿಕಾರ್ಜುನ ತಿಪ್ಪಾರ
ಮೊದಲು ಈ ಘಟನೆ ಓದಿ... ಅದು ರಾಜಮಾತೆ ಸಿಂಧಿಯಾ ಪ್ರತಿಪಕ್ಷ ದ ಉಪ ನಾಯಕಿ­ಯಾಗಿದ್ದ ಸಮಯ. ಸದನದಲ್ಲಿ ಒಮ್ಮೆ ಗುಲಾಂ ನಬಿ ಆಜಾದ್‌ ವಿರುದ್ಧ ಗಂಭೀರ ಆರೋಪ ಮಾಡಿದರು. ಆಗ ಎದ್ದು ನಿಂತ ಆಜಾದ್‌, ‘‘ನಾನು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಇದರ ತನಿಖೆಗೆ ಸಮಿತಿ ರಚಿಸುವಂತೆ ಕೇಳಿಕೊಳ್ಳುತ್ತೇನೆ. ಸಮಿತಿಯ ನೇತೃತ್ವವನ್ನು ವಾಜಪೇಯಿ ವಹಿಸಿಕೊಳ್ಳಲಿ. ಎಲ್‌.ಕೆ.ಆಡ್ವಾಣಿ ಮತ್ತು ನೀವು(ರಾಜಮಾತಾ) ಸಮಿತಿಯ ಸದಸ್ಯರಾಗಿ. ಹದಿನೈದು ದಿನದಲ್ಲಿ ವರದಿ ನೀಡಲಿ ಮತ್ತು ಅವರು ನೀಡುವ ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿದ್ದೇನೆ,’’ ಎಂದರು. ಆಗ ಎದ್ದು ನಿಂತ ವಾಜಪೇಯಿ ಸದನದ ಜೊತೆಗೆ ಆಜಾದ್‌ ಅವರಿಗೂ ಕ್ಷ ಮೆ ಕೋರಿ, ‘‘ಅವರ ಬಗ್ಗೆ(ಆಜಾದ್‌) ರಾಜಮಾತಾ ಸಿಂಧಿಯಾಗೆ ಗೊತ್ತಿಲ್ಲ; ನನಗೆ ಅವ­ರೇನು ಎಂಬುದು ಗೊತ್ತು,’’ ಎಂದು ಹೇಳಿ ವಿಷಯವನ್ನು ತಣ್ಣಗಾಗಿಸಿದರು.

ಗುಲಾಂ ನಬಿ ಆಜಾದ್‌ ತಮ್ಮ ರಾಜಕೀಯ ಜೀವನದು­ದ್ದಕ್ಕೂ ಅಂಥದೊಂದು ‘ಪ್ರಾಮಾಣಿಕತೆ’ ಮತ್ತು ‘ಬದ್ಧತೆ’ಯನ್ನು ಕಾಯ್ದು­ಕೊಂಡು ಬಂದಿದ್ದಾರೆ. ಭಾರತೀಯ ರಾಜಕಾರಣದಲ್ಲಿ ಅಜಾತಶತ್ರು ರಾಜಕಾರಣಿಗಳು ವಿರಳ. ಈ ವಿರಳರ ಸಾಲಿನಲ್ಲಿ ಕಾಂಗ್ರೆಸ್‌ನ ಈ ಹಿರಿಯ ನಾಯಕ ನಿಲ್ಲುತ್ತಾರೆ. ನಾಲ್ಕೈದು ದಶಕ ಭಾರತದ ರಾಜಕಾರಣದ ಹಲವು ಪಲ್ಲಟಗಳಿಗೆ ಸಾಕ್ಷಿಯಾದ ಆಜಾದ್‌, ರಾಜ್ಯ­ಸಭೆಯಿಂದ ನಿವೃತ್ತರಾಗುತ್ತಿದ್ದಾರೆ. ಬಿಜೆಪಿ ಸೇರಿ ಹಲವು ಪಕ್ಷ ಗಳು ಅವರ ಮುತ್ಸದ್ದಿತನ, ಬದ್ಧತೆಯನ್ನು ಬಾಯಿತುಂಬ ಕೊಂಡಾಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರಂತೂ, ಆಜಾದ್‌ ಬಗ್ಗೆ ವಿದಾಯ ಭಾಷಣ ಮಾಡುವಾಗ ಗದ್ಗದಿತರಾದರು. ಮೋದಿ ಅವರು ಆಜಾದ್‌ರನ್ನು ಹೊಗಳಿದ ರೀತಿಯನ್ನು ಹಲವರು, ಹಲವು ರೀತಿ­ಯಲ್ಲೇ ಅರ್ಥೈಯಿಸುತ್ತಿದ್ದಾರೆ. ಕೆಲವರು ಆಜಾದ್‌ ಬಿಜೆಪಿ ತೆಕ್ಕೆಗೆ ಜಾರ­ಬಹುದು; ಬಿಜೆಪಿಗೂ ಕಾಶ್ಮೀರದಲ್ಲಿ ವಿಶ್ವಸನೀಯ, ಮುತ್ಸದ್ದಿಯ ಮುಖ­ವೊಂದು ಆಜಾದ್‌ ರೂಪದಲ್ಲಿ ಸಿಗಬಹುದು ಎಂದು ವಿಶ್ಲೇಷಿಸುತ್ತಿದ್ದಾರೆ. ಆದರೆ, ಅವರು ಬಿಜೆಪಿ ಸೇರುವುದನ್ನು ಒಂದೇ ಏಟಿಗೆ ಹೊಡೆದು ಹಾಕಿದ್ದಾರೆ. ಸಂದರ್ಶನದಲ್ಲಿ, ‘‘ಯಾವಾಗ ಕಾಶ್ಮೀರದಲ್ಲಿ ಕಪ್ಪು ಹಿಮ ಬೀಳುತ್ತದೆಯೋ ಆ ದಿನ ಬಿಜೆಪಿ ಸೇರುತ್ತೇನೆ,’’ ಎಂದು ಸ್ಪಷ್ಪಪಡಿಸಿದ್ದಾರೆ. ಅದರರ್ಥ ಬಿಜೆಪಿ ಮಾತ್ರವಲ್ಲದೇ ಬೇರೆ ಯಾವುದೇ ಪಕ್ಷ ಕ್ಕೂ ಸೇರುವುದಿಲ್ಲಎಂದು ಖಡಕ್ಕಾಗಿ ಹೇಳಿದ್ದಾರೆ. 

ಮೋದಿ ಅವರ ಶ್ಲಾಘನೆ ಹಿಂದಿನ ಕಾರಣವನ್ನು ಬಿಚ್ಚಿಟ್ಟಿ­ದ್ದಾರೆ. 90ರಿಂದಲೂ ಮೋದಿ ಮತ್ತು ನಬಿ ಸ್ನೇಹಿತರು. ಇಬ್ಬರು ತಮ್ಮ ಪಕ್ಷ ದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾಗ ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. ಆ ಸಮಯದಲ್ಲಿ ‘ಚಹ ಪೇ ಚರ್ಚಾ’ ನಡೆಯುತ್ತಿತ್ತು. ಬಳಿಕ ಇಬ್ಬರು ಮುಖ್ಯಮಂತ್ರಿಗಳಾದರು. ಪ್ರಧಾನಿ, ಗೃಹ ಸಚಿವರ ಸಭೆಗಳಿಗೆ ಹೋದಾಗ ಭೇಟಿಯಾಗುತ್ತಿದ್ದರು. ಹೀಗೆ ಅವರಿಬ್ಬರ ನಡುವಿನ ಸ್ನೇಹ ಈ ಕ್ಷ ಣದವರೆಗೂ ಜಾರಿಯಲ್ಲಿದೆ. ಕಾಶ್ಮೀರದಲ್ಲಿ 2006ರಲ್ಲಿ ಗುಜರಾತ್‌ನ ಪ್ರವಾಸಿಗರ ಬಸ್‌ ಮೇಲೆ ದಾಳಿ ನಡೆಯಿತು. ಈ ವಿಷಯವನ್ನು ಅಂದು ಸಿಎಂ ಆಗಿದ್ದ ಮೋದಿಗೆ ತಿಳಿಸುವಾಗ ಆಜಾದ್‌ ಅತ್ತಿದ್ದರಂತೆ. ರಾಜ್ಯಸಭೆಯಲ್ಲಿ ಮೋದಿ ಮಾತ­ನಾಡಿದ ಆ ಕ್ಷ ಣವೇ ಅವರಿಬ್ಬರನ್ನು ಭಾವುಕರನ್ನಾಗಿಸಿತು.

ಅದೇನೇ ಇರಲಿ. ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟುಗಳು ಸಂಭವಿಸಿ­ದಾಗ, ಅದನ್ನು ಪರಿಹರಿಸುವ ತಂಡದ ಮುಂಚೂಣಿಯಲ್ಲಿ ಆಜಾದ್‌ ಇರುತ್ತಿದ್ದರು. ಆ ಮೂಲಕ ಅವರೊಬ್ಬ ‘ಟ್ರಬಲ್‌ ಶೂಟರ್‌’ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಇಂದಿರಾ ಗಾಂಧಿ ಅವರಿಂದ ಹಿಡಿದು ಸೋನಿಯಾ ಗಾಂಧಿ ತನಕ ಕಾಂಗ್ರೆಸ್‌ನ ಪ್ರಮುಖ­ರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ತಾವೊಬ್ಬ ಗಾಂಧಿ ಕುಟುಂಬದ ನಿಷ್ಠ ಎಂಬು­ದನ್ನು ಸಾಬೀತುಪಡಿಸಿದ್ದಾರೆ. ಹಾಗಂತ, ಪಕ್ಷ  ವಿಭಿನ್ನ ದಾರಿಯಲ್ಲಿ ಸಾಗುತ್ತಿ­ದ್ದಾಗ, ವೈಫಲ್ಯ ಸುಳಿಯಲ್ಲಿ ಸಿಲುಕಿದಾಗ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ-‘ಜಿ23’. ಪಕ್ಷ ದ ನಾಯಕತ್ವವನ್ನು ವಿಮರ್ಶೆಗೊಳಪಡಿಸುವ ಸಂಬಂಧ ಪತ್ರ ಬರೆದ 23 ನಾಯಕರ ಪೈಕಿ ಇವರು ಒಬ್ಬರು. ಮತ್ತೊಂದು ಅರ್ಥದಲ್ಲಿ‘ಜಿ23’ಯ ‘ಅನಧಿಕೃತ’ ವಕ್ತಾರರು.

ಮೇಲಿಂದ ಮೇಲೆ ಚುನಾವಣೆಯನ್ನು ಕಾಂಗ್ರೆಸ್‌ ಸೋಲುತ್ತಿರುವಾಗ ಪಕ್ಷ ದ ತಳಮಟ್ಟದ ನಾಯಕತ್ವದಿಂದ ಹಿಡಿದು ಉನ್ನತ ಮಟ್ಟದ ನಾಯಕತ್ವವರೆಗೂ ಬದಲಾವಣೆ ಅಗತ್ಯ ಎಂಬುದು ಅವರ ವಾದವಾಗಿತ್ತು. ಈ ವಿಚಾರಗಳು ಕಾಂಗ್ರೆಸ್‌ನ ಹಲವು ನಾಯಕರಿಗೆ ಹಿಡಿಸದೇ ಹೋದವು. ಆದರೆ, ಆಜಾದ್‌ ತಾವು ಹೇಳಬೇಕಿದ್ದ ಸತ್ಯವನ್ನು ಹೇಳಿಯೇ ಬಿಟ್ಟಿದ್ದಾರೆ.  ವಿಮರ್ಶೆಗೊಳಪಡಿಸುವ ಕೆಲಸವನ್ನು ಪಕ್ಷ ದ ನಾಯಕತ್ವ ಮಾಡಬೇಕಷ್ಟೇ. ನಾಲ್ಕೈದು ದಶಕಗಳ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಸಂಸತ್ತಿನಲ್ಲಿಪ್ರತಿಪಕ್ಷ ದ ನಾಯಕನಾಗಿ, ಪಕ್ಷ ದ ಹಲವು ಹುದ್ದೆ ನಿರ್ವಹಿಸಿ, ಹಲವು ರಾಜ್ಯಗಳ ಉಸ್ತುವಾರಿಯಾಗಿ ಅಗಾಧ ಅನುಭವದ ಮೂಟೆ ಆಜಾದ್‌ ಅವರ ಬೆನ್ನಮೇಲಿದೆ.

ಕಾಶ್ಮೀರದ ದೋಡಾ ಜಿಲ್ಲೆಯ ಸೋತಿ ಎಂಬ ಹಳ್ಳಿಯಲ್ಲಿ1949 ಮಾರ್ಚ್‌ 7ರಂದು ಗುಲಾ ನಂಬಿ ಆಜಾದ್‌ ಜನಿಸಿದರು. ರಹಮತುಲ್ಲಾಹ ಬಟ್ಟ ಮತ್ತು ಬಸಾ ಬೇಗಂ ತಂದೆ-ತಾಯಿ. ಹುಟ್ಟಿದೂರಿನಲ್ಲಿಪ್ರಾಥಮಿಕ ಶಿಕ್ಷ ಣ ಮುಗಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜಮ್ಮುಗೆ ತೆರಳಿ, ಜಿಜಿಎಂ ಸೈನ್ಸ್‌ ಕಾಲೇಜಿನಿಂದ ಡಿಗ್ರಿ ಪಡೆದುಕೊಂಡರು ಆಜಾದ್‌. ಶ್ರೀನಗರದ ಕಾಶ್ಮೀರ ವಿವಿಯಿಂದ 1972ರಲ್ಲಿಪ್ರಾಣಿಶಾಸ್ತ್ರದಲ್ಲಿ ಮಾಸ್ಟರ್‌ ಡಿಗ್ರಿ ಸಂಪಾದಿಸಿದರು.

1973ರಲ್ಲಿ ಭಲೆಸ್ಸಾ ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಆಯ್ಕೆಯಾ­ಗುವ ಮೂಲಕ ರಾಜಕೀಯ ಜೀವನಕ್ಕೆ ಅಡಿ ಇಟ್ಟರು. ಎರಡು ವರ್ಷದ ಬಳಿಕ ಜಮ್ಮು-ಕಾಶ್ಮೀರ ರಾಜ್ಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ರಾಗಿ ಆಯ್ಕೆಯಾ­ದರು. 1980ರಲ್ಲಿಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷ ರಾಗಿ ಆಯ್ಕೆ ಯಾದ ಬಳಿಕ ಅವರ ರಾಜಕೀಯ ರಥ ಎಲ್ಲೂನಿಲ್ಲದೇ ಓಡಲಾರಂಭಿಸಿತು. ಹಾಗೆ ನೋಡಿದರೆ,  ಭಾರತದ ರಾಜಕಾರಣದಲ್ಲಿ ಸಕ್ರಿಯವಾಗಿ ಗುರುತಿಸಿ­ಕೊಳ್ಳಲು ಇಂದಿರಾ ಗಾಂಧಿ ಅವರು ಕಾರಣ. ಆಜಾದ್‌ ಅವರಲ್ಲಿ ನಾಯ­ಕತ್ವ, ಸಂಘಟನಾ ಶಕ್ತಿ ಮತ್ತು ಬದ್ಧತೆಯನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಿದರು. ಮುಂದೆ ರಾಜೀವ್‌ ಗಾಂಧಿ ಅವರ ಕಾಲದಲ್ಲಿ ಅವರಿಗೆ ಪ್ರಾಧಾನ್ಯತೆ ಸಿಗುತ್ತಾ ಹೋಯಿತು.  

1980ರಲ್ಲಿ ಮಹಾರಾಷ್ಟ್ರದ ವಶಿಮ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆ­ಯಾಗುವ ಮೂಲಕ ಲೋಕಸಭೆಯನ್ನು ಪ್ರವೇಶಿಸಿದರು. 1982ರಲ್ಲಿ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯದ ಉಪಸಚಿವರಾಗಿ ಸರಕಾರದಲ್ಲೂ ಪಾಲ್ಗೊಂಡರು. 1984ರಲ್ಲಿ ಮತ್ತೆ ಲೋಕಸಭೆ ಆಯ್ಕೆಯಾದರು. 1990ರಿಂದ 96ರವರೆಗೂ ರಾಜ್ಯಸಭೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದರು. ಪಿ.ವಿ.ನರಸಿಂಹರಾವ್‌ ಸರಕಾರದಲ್ಲಿ ಸಂಸದೀಯ ವ್ಯವಹಾರಗಳು ಹಾಗೂ ನಾಗರಿಕ ವಿಮಾನಯಾನ ಸಚಿವಾಲ­ಯಗಳನ್ನು ನಿರ್ವಹಿಸಿದರು. ಆ ನಂತರ ಅವರು ಜಮ್ಮು-ಕಾಶ್ಮೀರದಿಂದ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಇದರ ಮಧ್ಯೆಯೇ 2005ರಲ್ಲಿ ಕಾಶ್ಮೀರ ಮುಖ್ಯಮಂತ್ರಿಯಾದರು. ಆದರೆ, ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಪಿಪಿ) ತನ್ನ ಬೆಂಬಲ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಅವರು ಸಿಎಂ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು.

ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ­-2ನೇ ಅವಧಿಯಲ್ಲಿ ಆಜಾದ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ನ್ಯಾಷನಲ್‌ ರೂರಲ್‌ ಹೆಲ್ತ್‌ ಮಿಷನ್‌ ವಿಸ್ತರಿಸಿ ಯಶಸ್ವಿಯಾ­ದರು. ಬಳಿಕ ನ್ಯಾಷನಲ್‌ ಅರ್ಬನ್‌ ಹೆಲ್ತ್‌ ಮಿಷನ್‌ ಆರಂಭಿಸಿ, ನಗರ ಪ್ರದೇಶಗಳಲ್ಲಿನ ಕೊಳಗೇರಿ ಮತ್ತು ಬಡವರಿಗೆ ಆರೋಗ್ಯ ಸೇವೆ ಸಿಗುವ ಹಾಗೆ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕೊರತೆ­ಯಿಂದಾಗಿ ಟಿವಿ ಮನರಂಜನೆ ಸಿಗುವುದಿಲ್ಲ. ಪರಿಣಾಮ­ವಾಗಿ ‘ಜನಸಂಖ್ಯೆ’ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದರು. ಮದುವೆಗೆ ನಿಗದಿ ಪಡಿಸಲಾಗಿರುವ ವಯೋಮಿತಿಯನ್ನು 25 ಮತ್ತು 30ಕ್ಕೆ ಹೆಚ್ಚಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣ ಮಾಡಬಹುದು ಎಂಬುದು ಅವರ ವಾದ.

2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸೋತು ಸುಣ್ಣವಾಗಿ, ಅಧಿಕಾರವಂಚಿತವಾಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ದ ನಾಯಕನ ಜವಾಬ್ದಾರಿ ಗುಲಾಂ ಹೆಗಲೇರಿತು. ಅಲ್ಲಿಂದ ನಿವೃತ್ತಿಯಾಗೋವರೆಗೂ ಆ ಸ್ಥಾನವನ್ನು ದಕ್ಷ ತೆಯಿಂದ ನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಆಜಾದ್‌ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುತ್ತಾರೋ, ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೋ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಆದರೆ, ಅವರ ಸೇವೆ ದೊರೆಯದೇ ಹೋದರೆ ಅದು ಕಾಂಗ್ರೆಸ್‌ ಪಕ್ಷ ಕ್ಕೆ ಹಾನಿಯೇ ಹೊರತು ಅವರಿಗಲ್ಲ. ಜೊತೆಗೆ, ಅವರು ಸ್ವತಂತ್ರ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೋರಾಟದ ‘ಮುಖ’ ವಾಗುವ ಸಾಧ್ಯತೆಗಳಿವೆ.


 

(ಈ ಲೇಖನವು ವಿಜಯ ಕರ್ನಾಟಕದ 2020ರ ಫೆಬ್ರವರಿ 14ರ ಸಂಚಿಕೆಯ ವಕ್ತಿಗತದಲ್ಲಿ ಪ್ರಕಟವಾಗಿದೆ)

ಕಾಮೆಂಟ್‌ಗಳಿಲ್ಲ: