ಭಾನುವಾರ, ಫೆಬ್ರವರಿ 28, 2021

Indian desi Twitter 'Koo': ಬನ್ನಿ... Kooಗು ಹಾಕೋಣ!

- ಮಲ್ಲಿಕಾರ್ಜುನ ತಿಪ್ಪಾರ
ದೇಶಿ ಟ್ವಿಟರ್‌’ ಎಂದೇ ಕರೆಯಿಸಿಕೊಳ್ಳುತ್ತಿರುವ  ಕೂ(Koo) ಎಂಬ ಮೈಕ್ರೊ ಬ್ಲಾಗಿಂಗ್‌ ಆ್ಯಪ್‌ಗೆ ಶುಕ್ರ ದೆಸೆ ಆರಂಭವಾಗಿದೆ. 

ರೈತ ಪ್ರತಿಭಟನೆ ಹಾಗೂ ‘ಕೆಂಪು ಕೋಟೆ ಹಿಂಸಾಚಾರ’ದ ಹಿನ್ನೆಲೆಯಲ್ಲಿಕೆಲವು ಟ್ವಿಟರ್‌ ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರ ಪಟ್ಟಿ ನೀಡಿತ್ತು. ನೀವು ಹೇಳಿದಂತೆ ಎಲ್ಲವನ್ನೂ ರದ್ದುಗೊಳಿಸಲು ಸಾಧ್ಯವಿಲ್ಲಎಂದು ಟ್ವಿಟರ್‌ ಹೇಳುತ್ತಿದ್ದಂತೆ, ದೇಶಿ ಮೈಕ್ರೊಬ್ಲಾಗಿಂಗ್‌ ‘ಕೂ’ನತ್ತ ಕೇಂದ್ರ ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕ್ರಿಕೆಟಿ ಗರು, ಗಣ್ಯರು, ಸಿನಿಮಾ ನಟ- ನಟಿಯರು ದಾಂಗುಡಿ ಇಟ್ಟರು.

ಅಷ್ಟೇ ಅಲ್ಲದೇ ದೇಶಿ ಆ್ಯಪ್‌ ಕೂ ಬೆಂಬಲಿಸವಂತೆ ಕರೆ ನೀಡಿದರು. ಕೇಂದ್ರ ಸರಕಾರದ ಬಹಳಷ್ಟು ಇಲಾಖೆಗಳು ಕೂ ಆ್ಯಪ್‌ನಲ್ಲಿ ಖಾತೆ ತೆರೆದವು. ಕಳೆದ ಕೆಲವು ದಿನಗಳಿಂದ ಕೂ ಡೌನ್‌ಲೋಡ್‌ಗಳಲ್ಲಿ10 ಪಟ್ಟು ಹೆಚ್ಚಳವಾಗಿದೆ. ಬಹುಶಃ ಈ ಪ್ರಮಾಣ ಇನ್ನೂ ಹೆಚ್ಚಾಗಬಹುದು. ಇದೀಗ ಎಲ್ಲರ ಬಾಯಲ್ಲೂಈ ಆ್ಯಪ್‌ನದ್ದೇ ‘ಕೂ’ಗು. 

ಏತನ್ಮಧ್ಯೆ, ಕೂ ಆ್ಯಪ್‌ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಫ್ರೆಂಚ್‌ ಹ್ಯಾಕರ್‌ರೊಬ್ಬರು ಆಪಾದಿಸಿದ್ದರು. ಇದನ್ನು ಕೂ ಆ್ಯಪ್‌ ಅಲ್ಲಗಳೆದಿದೆ. ಜೊತೆಗೆ, ಈ ಆ್ಯಪ್‌ನಲ್ಲಿ ಚೀನಿ ಹೂಡಿಕೆದಾರರು ಬಂಡವಾಳ ತೊಡಗಿಸಿದ್ದಾರೆ ಎಂಬ ಮಾತುಗಳಿದ್ದವು. ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಕೂ ಆ್ಯಪ್‌ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣನ್‌ 

ಅವರು, ‘‘ಭಾರತೀಯರೇ ಸ್ಥಾಪಿಸಿರುವ ಈ ಕಂಪನಿ ಭಾರತದಲ್ಲಿ ನೋಂದಣಿಯಾಗಿದೆ. ಈ ಮೊದಲು ಹೂಡಿಕೆ ಮಾಡಿದ್ದ ಚೀನಿ ಹೂಡಿಕೆದಾರರು ಶೀಘ್ರವೇ ಹೊರ ಬೀಳಲಿದ್ದಾರೆ. ಅಪ್ಪಟ ಭಾರತೀಯವಾಗಿರುವ 3one4 capital  ನೇತೃತ್ವದ ಸಂಸ್ಥೆ ಬೊಂಬಿನೇಟ್‌ ಟೆಕ್ನಾಲಜಿಸ್‌ಗೆ ಫಂಡ್‌ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಏನಿದು ಕೂ?
ಕೂ ಆ್ಯಪ್‌ ಕೂಡ ಟ್ವಿಟರ್‌ ರೀತಿಯ ಮೈಕ್ರೊಬ್ಲಾಗಿಂಗ್‌ ವೇದಿಕೆಯಾಗಿದೆ. ಬಳಕೆದಾರರು ಆಡಿಯೊ ಕ್ಲಿಪ್ಸ್ ‌ ಸೇರಿದಂತೆ ಮಲ್ಟಿಮೀಡಿಯಾ ಕಂಟೆಂಟ್‌ ಪೋಸ್ಟ್‌ ಮಾಡಬಹುದು. ಟ್ವಿಟರ್‌ ರೀತಿಯಲ್ಲಿ ನಿಗದಿತ ಪದಗಳೊಳಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಅಂದರೆ, 400 ಅಕ್ಷ ರಗಳ ಮಿತಿಯಲ್ಲಿ ಹೇಳಬೇಕಾಗುತ್ತದೆ. ಇಂಗ್ಲಿಷ್‌ ಮಾತ್ರವಲ್ಲದೇ, ಕನ್ನಡ ಸೇರಿದಂತೆ 6 ಭಾರತೀಯ ಭಾಷೆಗಳಿಗೆ ಸಪೋರ್ಟ್‌ ಮಾಡುತ್ತದೆ ಮತ್ತು ಇನ್ನಷ್ಟು ಸ್ಥಳೀಯ ಭಾಷೆಗಳಲ್ಲಿ ಸೇವೆ ದೊರೆಯಲಿದೆ. ಟ್ವಿಟರ್‌ ರೀತಿಯಲ್ಲೇ ಕೂ ಲೋಗೊ ಕೂಡ ಪಕ್ಷಿಯಾಗಿದ್ದು, ಹಳದಿ ಬಣ್ಣದಲ್ಲಿದೆ. ಹ್ಯಾಷ್‌ಟ್ಯಾಗ್‌(#) ಮತ್ತು ಮೆನ್ಷನ್‌(@)ಗಳಿಗೆ ಇದು ಅವಕಾಶ ಕಲ್ಪಿಸಿ ಕೊಡುತ್ತದೆ. ರಿ-ಟ್ವೀಟ್‌ ರೀತಿಯಲ್ಲಿ‘ರಿ-ಕೂ’ಗೂ ಅವಕಾಶವಿದೆ ಇಲ್ಲಿ. ಚಾಟ್‌ ಬದಲಿಗೆ ಡೈರೆಕ್ಟ್ ಮೆಸೆಜ್‌ ಮಾಡಬಹುದು. 

ಯಾವಾಗ ಆರಂಭವಾಯಿತು?
ಎಂಬಿಎ ಪದವೀಧರರಾದ ಅಪ್ರಮೇಯ ರಾಧಾಕೃಷ್ಣನ್‌ ಮತ್ತು ಮಾಯಾಂಕ್‌ ಬಿಡಾವತ್ಕಾ ಅವರ ಕೂ ಆ್ಯಪ್‌ ಸಂಸ್ಥಾಪಕರು. ಈ ಇಬ್ಬರು ವೋಕಲ್‌ ಸಂಸ್ಥಾಪಕರೂ ಹೌದು. ವೋಕಲ್‌ ಎಂಬುದು ಕೋರಾ ರೀತಿಯಲ್ಲಿ ಆಡಿಯೊ-ವಿಡಿಯೊ ನಾಲೆಡ್ಜ್‌ ಷೇರಿಂಗ್‌ ವೇದಿಕೆಯಾಗಿತ್ತು. 2020ರ ಮಾರ್ಚ್‌ ತಿಂಗಳಲ್ಲಿ ಕೂ ಆ್ಯಪ್‌ ಆರಂಭವಾಯಿತು ಮತ್ತು ಕೇಂದ್ರ ಸರಕಾರದ ಆತ್ಮನಿರ್ಭರ್‌ ಭಾರತ್‌ ಚಾಲೆಂಜ್‌ ಟೆಕ್‌ ಇನ್ನೋವೇಷನ್‌ ಗೆದ್ದುಕೊಂಡಿದೆ. ಬೆಂಗಳೂರಿನಲ್ಲೇ ಇದರ ಕಚೇರಿ ಇದೆ. 

ಹೇಗೆ ಡೌನ್‌ಲೋಡ್‌?
ಕೂ ಉಚಿತ ಆ್ಯಪ್‌ ಆಗಿದ್ದು, ಆಂಡ್ರಾಯ್ಡ್‌ ಮತ್ತು ಐಒಎಸ್‌ ವೇದಿಕೆಗಳಲ್ಲಿಲಭ್ಯವಿದೆ. Koo: Connect with Indians in Indian Languages ಶೀರ್ಷಿಕೆಯಡಿ ಪ್ಲೇ ಸ್ಟೋರ್‌ನಲ್ಲಿದ್ದರೆ, Koo: Connect with Top Indians ಹೆಸರಿನಡಿ ಐಒಎಸ್‌ನಲ್ಲಿ ದೊರೆಯುತ್ತದೆ. 

ಸುಧಾರಣೆ ಅಗತ್ಯ
ದೇಶಿ ಟ್ವಿಟರ್‌ ಎಂಬ ಹೆಗ್ಗಳಿಕೆಯನ್ನು ಪಡೆಯುತ್ತಿರುವ ಕೂ ಆ್ಯಪ್‌ ಇನ್ನೂ ಹಲವು ರೀತಿಯಲ್ಲಿ ಸುಧಾರಣೆ ಕಾಣಬೇಕಿದೆ ಎನ್ನುವುದು ಅದನ್ನು ಬಳಸುತ್ತಿರುವವರ ಅನೇಕರ ಅಭಿಪ್ರಾಯವಾಗಿದೆ. ಟ್ವಿಟರ್‌ ರೀತಿಯಲ್ಲಿ ಇದು ಬಳಕೆದಾರರ ಸ್ನೇಹಿಯಾಗಿಲ್ಲ ಎಂಬುದು ಸಾಮಾನ್ಯ ದೂರು. ಊಹೆಗೆ ನಿಲುಕದ ರೀತಿಯಲ್ಲಿ ಬಳಕೆದಾರರನ್ನು ಪಡೆಯುತ್ತಿರುವ ಕೂ ಮುಂಬರುವ ದಿನಗಳಲ್ಲಿ ಬಹುಶಃ ಈ ಎಲ್ಲಕುಂದು ಕೊರತೆಗಳನ್ನು ನೀಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಕಂಪನಿಯಾಗಿ ಬೆಳೆಯುವ ಎಲ್ಲ ಅರ್ಹತೆಗಳು ಮತ್ತು ಸಾಮರ್ಥ್ಯವಂತೂ ಇದ್ದೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.



ಕಾಮೆಂಟ್‌ಗಳಿಲ್ಲ: