ಭಾನುವಾರ, ಸೆಪ್ಟೆಂಬರ್ 6, 2020

Kangana Ranaut: ಕಂಗನಾ ಅಂದ್ರೆ ಸುಮ್ನೇನಾ?

 

ಯಾವುದೇ ಘಟನೆ ಅಥವಾ ಪ್ರಕರಣದ ವಿರುದ್ಧ ದಿಕ್ಕಿನಲ್ಲಿಯೋಚಿಸಿ, ಅದನ್ನು ಅಷ್ಟೇ ದೊಡ್ಡ ದನಿಯಲ್ಲಿಹೇಳಿ, ಒಪ್ಪಿಸುವ ಛಾತಿ ನಟಿ ಕಂಗನಾಗೆ ಇದೆ.



- ಮಲ್ಲಿಕಾರ್ಜುನ ತಿಪ್ಪಾರ
ಕಂಗನಾ ರಣಾವತ್‌ ಎಂಬ ಫಿಯರ್‌ಲೆಸ್‌ ಮತ್ತು ಫಿಲ್ಟರ್‌ಲೆಸ್‌ ಆಗಿ ಮಾತನಾಡುವ ನಟಿ ಕಳೆದ ಎರಡ್ಮೂರು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ನ ಭರವಸೆಯ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಜೂನ್‌ 14ರಂದು ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ, ಅದೊಂದು ಕೊಲೆ, ಮಾನಸಿಕ ಒತ್ತಡ ಮತ್ತು ಸ್ವಜನಪಕ್ಷಪಾತಕ್ಕೆ ಬೇಸತ್ತು ಆತ್ಮಹತ್ಯೆ ಎಂಬಂಥ ಕತೆಗಳನ್ನು ನಾವು ದಿನಾ ಟಿವಿಗಳಲ್ಲಿನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ''ಸುಶಾಂತನದ್ದು ಆತ್ಮಹತ್ಯೆಯಲ್ಲ; ಅದೊಂದು ವ್ಯವಸ್ಥಿತ ಕೊಲೆ. ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತವೇ ಇದಕ್ಕೆ ಕಾರಣ,'' ಎಂದು 'ಕ್ವೀನ್‌' ನಟಿ ಕಂಗನಾ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿಹೇಳಿದಳೋ ಆಗ ಸುಶಾಂತ್‌ ಪ್ರಕರಣ ಮತ್ತೊಂದು ದಿಕ್ಕಿಗೆ ಹೊರಳಿತು. ಅವಳ ಈ ಹೇಳಿಕೆಯನ್ನೇ ಇಟ್ಟುಕೊಂಡು ಕೆಲವು ಟಿವಿ ಚಾನೆಲ್‌ಗಳೂ ದಿನದ 24 ಗಂಟೆ ಅದೇ ಸುದ್ದಿ ಬಿತ್ತರಿಸಿ, ಸುಶಾಂತ್‌ ಕುಟುಂಬದ ಸದಸ್ಯರ ಒತ್ತಡ ಹಾಗೂ ಮುಂಬಯಿ ಮತ್ತು ಬಿಹಾರ ಪೊಲೀಸರ ನಡುವಿನ ಒಟ್ಟಾರೆ ಜಟಾಪಟಿಯ ಪರಿಣಾಮ ಸುಪ್ರೀಂ ಕೋರ್ಟ್‌ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು.

ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ವಹಿಸುವ ಪ್ರಕ್ರಿಯೆಯಲ್ಲಿಕಂಗನಾ ರಣಾವತಳ ಪಾತ್ರ ಎಷ್ಟಿದೆಯೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ಅದಕ್ಕೊಂದು ಕಿಡಿ ಹೊತ್ತಿಸುವ ಪಾತ್ರವನ್ನಂತೂ ಕಂಗನಾ ಪರಿಣಾಮಕಾರಿಯಾಗಿ ನಿಭಾಯಿಸಿದರು! ಸುಶಾಂತ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಮುಂದುವರಿಸಿದಂತೆ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಡ್ರಗ್‌ ಜಾಲ ಕೂಡ ಬೆಳಕಿಗೆ ಬಂತು. ಇಲ್ಲೂ, ಕಂಗನಾ ದೊಡ್ಡದಾಗಿ ಕೂಗು ಹಾಕಿದಳು; ಬಾಲಿವುಡ್‌ನಲ್ಲಿದೊಡ್ಡ ಮಾಫಿಯಾ ಇದೆ ಎಂದು ಟಿವಿ ಚಾನೆಲ್‌ನಲ್ಲಿಕೂತು ಅಪ್ಪಣೆ ಹೊರಡಿಸಿದಳು. ಬಾಲಿವುಡ್‌ನಲ್ಲಿಆಳವಾಗಿ ಬೇರು ಬಿಟ್ಟಿರುವ ಸ್ವಜನಪಕ್ಷಪಾತದ ಬಗ್ಗೆ ತನ್ನ ಮಾತಿನ ಬಾಣಗಳನ್ನು ಚಿತ್ರರಂಗದಲ್ಲಿತನಗೆ ಆಗದವರನ್ನು ಕೇಂದ್ರೀಕರಿಸಿ ಗುರಿಯಿಟ್ಟಳು. ಸುಶಾಂತ್‌ ಕುಟುಂಬದ ಪರ ವಕೀಲರೂ ಮಾಧ್ಯಮಗಳ ಮುಂದೆ ಬಂದು ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದರು. ಕಂಗನಾ, ಸುಶಾಂತ್‌ ಹೆಸರಿನಲ್ಲಿತನಗೆ ಆಗದವರ ವಿರುದ್ಧ ಆರೋಪ ಮಾಡುತ್ತಿದ್ದಾಳೆ ಎಂದು ಹೇಳಿದರು.

ಯಾವುದೇ ಘಟನೆ ಅಥವಾ ಪ್ರಕರಣದ ವಿರುದ್ಧ ದಿಕ್ಕಿನಲ್ಲಿಯೋಚಿಸಿ, ಅದನ್ನು ಅಷ್ಟೇ ದೊಡ್ಡ ದನಿಯಲ್ಲಿಹೇಳಿ, ಒಪ್ಪಿಸುವ ಛಾತಿ ಕಂಗನಾಗೆ ಇದೆ. ಇದೇ ಕಾರಣಕ್ಕೆ ಅನೇಕ ವಿವಾದಗಳನ್ನು ಮೈಮೇಲೆ ಹಲವು ಬಾರಿ ಎಳೆದುಕೊಡಿದ್ದಾಳೆ. ಸಹ ನಟಿಯರಾದ ತಾಪ್ಸಿ ಪನ್ನು, ಸ್ವರಾ ಭಾಸ್ಕರ್‌ ವಿರುದ್ಧ ಟೀಕೆಗಳು, ಹೃತಿಕ್‌ ರೋಷನ್‌ ಮತ್ತು ತನ್ನ ನಡುವಿನ ಸಂಬಂಧವನ್ನು ಬೀದಿ ರಂಪ ಮಾಡಿದ್ದು, ಆಮೀರ್‌ ಖಾನ್‌ ಸೇರಿದಂತೆ ದೊಡ್ಡ ನಟರ ಜತೆ ನಟಿಸಲಾರೆ ಎಂಬ ಅಹಮ್ಮಿನ ಹೇಳಿಕೆಗಳು, ತಾನೂಬ್ಬ ಅಪ್ರತಿಮ ರಾಷ್ಟ್ರವಾದಿ ಎಂಬುದನ್ನು ತೋರಿಸಿಕೊಳ್ಳುವುದಕ್ಕಾಗಿ ನ್ಯಾಷನಲ್‌-ಆ್ಯಂಟಿ ನ್ಯಾಷನಲ್‌ ವಿಷಯದಲ್ಲಿಖ್ಯಾತ ನಿರ್ದೇಶಕ ಮಣಿರತ್ನಮ್‌ ಸೇರಿದಂತೆ ಹಲವರ ವಿರುದ್ಧ ಕಿಡಿ ಕಾರಿದ್ದು, ನಾಸಿರುದ್ದೀನ್‌ ಷಾ ವಿರುದ್ಧ ಕೆಂಡ ಕಾರಿದ್ದು, ಲೇಟೆಸ್ಟ್‌ ಆಗಿ, ಮುಂಬಯಿಯನ್ನು ತಾಲಿಬಾನ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ಗೆ ಹೋಲಿಕೆ ಮಾಡಿದ್ದು... ಹೀಗೆ ಕಂಗನಾಳ ವಿವಾದ ಸರಮಾಲೆ ಸಾಗುತ್ತಲೇ ಇರುತ್ತದೆ.

ಅಭಿನಯದಲ್ಲಿಮೂರು ರಾಷ್ಟ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್‌ ಅವಾರ್ಡುಗಳನ್ನು ಗೆದ್ದುಕೊಂಡಿರುವ 33 ವರ್ಷದ ಈ ಕಂಗನಾಗೆ ದೇಶದ ನಾಲ್ಕೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಶ್ರೀ ಕೂಡ ಸಂದಿದೆ. ಕಂಗನಾ ಬಾಲ್ಯದಿಂದಲೂ ಬಂಡಾಯ ಮತ್ತು ಪಟ್ಟುಬಿಡದ ಸ್ವಭಾವವನ್ನು ಬೆಳೆಸಿಕೊಂಡಿದ್ದಾಳೆ. ''ನನ್ನ ತಂದೆ ತಮ್ಮನಿಗೆ ಪ್ಲಾಸ್ಟಿಕ್‌ ಗನ್‌ ಕೊಡಿಸಿದಾಗ ಮಾತ್ರ ನನಗೆ ಒಂದು ಗೊಂಬೆಯನ್ನು ಕೊಡಿಸುತ್ತಿದ್ದರು. ನಾನು ಈ ತಾರತಮ್ಯವನ್ನು ಪ್ರಶ್ನಿಸುತ್ತಿದ್ದೆ,'' ಎಂದು ಕಂಗನಾ ಒಮ್ಮೆ ಹೇಳಿಕೊಂಡಿದ್ದರು.

1987ರ ಮಾರ್ಚ್ 23ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ಪಟ್ಟಣ ಭಂಬ್ಲಾ(ಈಗ ಸೂರಜ್‌ಪುರ) ರಜಪೂತ ಕುಟುಂಬದಲ್ಲಿಕಂಗನಾ ಜನಿಸಿದಳು. ತಾಯಿ ಆಶಾ ರಣಾವತ್‌ ಸ್ಕೂಲ್‌ ಟೀಚರ್‌ ಮತ್ತು ತಂದೆ ಅಮರದೀಪ್‌ ರಣಾವತ್‌ ಬಿಸಿನೆಸ್‌ಮನ್‌. ಹಿರಿಯ ಸಹೋದರಿ ರಂಗೋಲಿ ಚಾಂಡೆಲ್‌, 2014ರಿಂದ ಕಂಗನಾಗೆ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಅಕ್ಷತ್‌ ಎಂಬ ಸಹೋದರನಿದ್ದಾನೆ. ಕಂಗನಾಳ ಮುತ್ತಜ್ಜ ಸರ್ಜು ಸಿಂಗ್‌ ರಣಾವತ್‌ ಶಾಸಕರಾಗಿದ್ದರು ಮತ್ತು ಅಜ್ಜ ಭಾರತೀಯ ಆಡಳಿತ ಸೇವೆಯಲ್ಲಿಅಧಿಕಾರಿಯಾಗಿದ್ದರು. ಭಂಬ್ಲಾದಲ್ಲಿರುವ ಬಂಗ್ಲೆಯಲ್ಲಿವಾಸವಿದ್ದ ಅವಿಭಕ್ತ ಕುಟುಂಬದಲ್ಲಿಕಂಗನಾ ಬಾಲ್ಯವನ್ನು ಕಳೆದರು.

ಚಂಡೀಗಢದ ಡಿಎವಿ ಸ್ಕೂಲ್‌ನಲ್ಲಿಕಂಗನಾ ದಾಖಲಾದಳು. ವಿಜ್ಞಾನ ಆಕೆಯ ಅಧ್ಯಯನದ ಮುಖ್ಯ ವಿಷಯವಾಗಿತ್ತು. ತಂದೆ-ತಾಯಿಗೆ ಕಂಗನಾ ವೈದ್ಯಳಾಗಬೇಕೆಂಬ ಆಸೆ. ಕಂಗನಾ ಕೂಡ ಆ ನಿಟ್ಟಿನಲ್ಲಿಪ್ರಯತ್ನಿಸಿದ್ದಳು. ಆದರೆ, 12ನೇ ಕ್ಲಾಸ್‌ನ ಯುನಿಟ್‌ ಟೆಸ್ಟ್‌ನಲ್ಲಿಕಂಗನಾ ಕೆಮೆಸ್ಟ್ರಿ ಪರೀಕ್ಷೆಯಲ್ಲಿಫೇಲ್‌ ಆದಳು. ಈ ಫಲಿತಾಂಶವು ಕಂಗನಾಗೆ ತನ್ನ ಆದ್ಯತೆ ಕುರಿತು ಮತ್ತೊಮ್ಮೆ ಯೋಚಿಸುವಂತೆ ಮಾಡಿತು. ಹಾಗಾಗಿ, ಆಲ್‌ ಇಂಡಿಯಾ ಪ್ರಿ ಮೆಡಿಕಲ್‌ ಟೆಸ್ಟ್‌ಗೆ ಸಿದ್ಧತೆ ನಡೆಸಿದ್ದರೂ ಪರೀಕ್ಷೆಗೆ ಹಾಜರಾಗಲಿಲ್ಲ. ಸ್ವಾತಂತ್ರ್ಯ ಹಾಗೂ ಅವಕಾಶವನ್ನು ಪಡೆದುಕೊಳ್ಳುವುದಕ್ಕಾಗಿಯೇ ಹಿಮಾಚಲ ಪ್ರದೇಶದಿಂದ ದಿಲ್ಲಿಗೆ ಬಂದಳು. ಆಗ ಕಂಗನಾಗೆ 16 ವರ್ಷ. ವೈದ್ಯಕೀಯ ಶಿಕ್ಷಣ ಪಡೆಯಲು ನಿರಾಕರಿಸಿದ ಪರಿಣಾಮ ತಂದೆ-ತಾಯಿಯೊಂದಿಗೆ ಜಗಳವಾಗಿತ್ತು ಮತ್ತು ಕಂಗನಾಳ ಮುಂದಿನ ಯಾವುದೇ ಕೆಲಸಕ್ಕೆ ತಂದೆಯಿಂದ ಸಹಾಯ ಸಿಗಲಿಲ್ಲ. ದಿಲ್ಲಿಗೆ ಬಂದ ಕಂಗನಾಗೆ, ತನ್ನ ಕರಿಯರ್‌ ಆಯ್ಕೆ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಎಲೈಟ್‌ ಮಾಡೆಲಿಂಗ್‌ ಏಜೆನ್ಸಿ ಕಂಗನಾಳ ಸೌಂದರ್ಯಕ್ಕೆ ಮಾರುಹೋಗಿ ಮಾಡೆಲಿಂಗ್‌ಗೆ ಇಳಿಯುವಂತೆ ಹೇಳಿತು. ಕೆಲವು ಮಾಡೆಲಿಂಗ್‌ ಪ್ರಾಜೆಕ್ಟ್ನಲ್ಲಿಪಾಲ್ಗೊಂಡರೂ ಸೃಜನಶೀಲತೆಗೆ ಅವಕಾಶವಿಲ್ಲಎಂಬುದು ಗೊತ್ತಾಗುತ್ತಿದ್ದಂತೆ ಮಾಡೆಲಿಂಗ್‌ ಕೈ ಬಿಟ್ಟಳು. ಅಭಿನಯದತ್ತ ಗಮನ ಕೇಂದ್ರೀಕರಿಸಿದ ಕಂಗನಾ ಅಸ್ಮಿತಾ ಥಿಯೇಟರ್‌ ಗ್ರೂಪ್‌ ಸೇರಿದರು. ರಂಗ ನಿರ್ದೇಶಕ ಅರವಿಂದ ಗೌರ್‌, ಕಂಗನಾಗೆ ನಟನೆಯ ಪಟ್ಟುಗಳನ್ನು ಹೇಳಿಕೊಟ್ಟರು. ಕನ್ನಡಿಗ ಗಿರೀಶ್‌ ಕಾರ್ನಾಡ ಅವರ 'ತಲೆದಂಡ' ಸೇರಿದಂತೆ ಹಲವು ನಾಟಕಗಳಲ್ಲಿಅಭಿನಯಿಸಿ ಸಾಮರ್ಥ್ಯವನ್ನು ಸಾಬೀತುಪಡಿಸಿದಳು. ಒಮ್ಮೆ ನಾಟಕವೊಂದರ ಪುರುಷ ಪಾತ್ರಧಾರಿಯೊಬ್ಬರು ನಾಪತ್ತೆಯಾದರು. ಆಗ ಕಂಗನಾ ಆ ಪುರುಷನ ಮತ್ತು ತನ್ನ ಮೂಲ ಪಾತ್ರವನ್ನು ನಿರ್ವಹಿಸಿ ಬಹುಮೆಚ್ಚುಗೆಯನ್ನು ಪಡೆದುಕೊಂಡಳು. ಈ ಘಟನೆಯಿಂದ ಪ್ರೇರಣೆ ಪಡೆದು ತನ್ನ ಕರ್ಮಭೂಮಿಯನ್ನು ದಿಲ್ಲಿಯಿಂದ ಮುಂಬಯಿಗೆ ಸ್ಥಳಾಂತರಿಸಿ, ಅಲ್ಲಿಆಶಾ ಚಂದ್ರ ಅವರ ನಾಟಕ ಶಾಲೆಯಲ್ಲಿಮತ್ತೆ ನಾಲ್ಕು ತಿಂಗಳ ತರಬೇತಿ ಪಡೆದುಕೊಂಡಳು.

ಬಾಲಿವುಡ್‌ನ ಸಂಘರ್ಷದ ದಿನಗಳಲ್ಲಿಸಾಕಷ್ಟು ಕಷ್ಟಗಳನ್ನು ಕಂಡಿದ್ದಾಳೆ ಕಂಗನಾ. ಈ ಅವಧಿಯಲ್ಲಿತಂದೆಯ ಆರ್ಥಿಕ ನೆರವನ್ನು ತಿರಸ್ಕರಿಸಿದ ಪರಿಣಾಮ ಕೆಲವೊಮ್ಮೆ ಕೇವಲ ಬ್ರೆಡ್‌ ಮತ್ತು ಉಪ್ಪಿನಕಾಯಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತಂತೆ. ಫಿಲ್ಮ್‌ ಕರಿಯರ್‌ ಆಯ್ಕೆಗೆ ಸಂಬಂಧಿಕರಿಂದಲೂ ವಿರೋಧವಿತ್ತು. 2007ರಲ್ಲಿ'ಲೈಫ್‌ ಇನ್‌ ಮೆಟ್ರೊ' ಚಿತ್ರ ಬಿಡುಗಡೆ ನಂತರ ಕುಟುಂಬ ಹಾಗೂ ಸಂಬಂಧಿಕರು ಕಂಗನಾ ಜೊತೆಗೆ ಸಂವಹನ ಬೆಳೆಸಿದರು.

ಮಹೇಶ್‌ ಭಟ್‌(ಕಂಗನಾ ಇವರ ವಿರುದ್ಧವೇ ಸ್ವಜನಪಕ್ಷಪಾತದ ಆರೋಪ ಮಾಡುತ್ತಿದ್ದಾರೆ) ನಿರ್ಮಾಣ ಮತ್ತು ಅನುರಾಗ್‌ ಬಸು ನಿರ್ದೇಶನದ 'ಗ್ಯಾಂಗಸ್ಟರ್‌' ಚಿತ್ರದ ಮೂಲಕ ಕಂಗನಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 2004ರಿಂದ ಆರಂಭವಾದ ಸಿನಿ ಬದುಕಿನಲ್ಲಿಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ವೋ ಲಮ್ಹೆ(2006), ಲೈಫ್‌ ಇನ್‌ ಮೆಟ್ರೊ(2007), ಫ್ಯಾಷನ್‌(2008) ಚಿತ್ರಗಳ ಪೈಕಿ ಕೊನೆಯ ಎರಡು ಚಿತ್ರಗಳ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. 2009ರಲ್ಲಿತೆರೆಕಂಡ ರಾಝ್‌: ದಿ ಮಿಸ್ಟರಿ ಕಂಟಿನ್ಯೂಸ್‌, ತನು ವೆಡ್ಸ್‌ ಮನು(2011), ಕ್ರಿಶ್‌ 3(2023) ಮತ್ತು 2014ರಲ್ಲಿಬಿಡುಗಡೆಯಾದ 'ಕ್ವೀನ್‌' ಚಿತ್ರ ಕಂಗನಾಳಿಗೆ ಬಾಲಿವುಡ್‌ನ ಕ್ವೀನ್‌ ಕೀರ್ತಿಗೆ ಭಾಜನವಾಗುವಂತೆ ಮಾಡಿತು. ಇದರ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಬಂತು. 'ಮಣಿಕರ್ಣಿಕಾ' ಚಿತ್ರದಲ್ಲಿಅಭಿನಯದೊಂದಿಗೆ ನಿರ್ದೇಶನ ಕೂಡ ಮಾಡಿದರು.

ಸಿನಿ ಜಗತ್ತಿನಲ್ಲಿತನ್ನದೇ ಛಾಪು ಮೂಡಿಸಿದ ಬಳಿಕ ಸಾರ್ವಜನಿಕವಾಗಿ ಹಲವು ವಿಷಯಗಳ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯಲಿಲ್ಲ. ಆಕೆಯನ್ನು ಇಷ್ಟಪಡೋರಿಗೆ ಕಂಗನಾ ಕ್ರುಸೆಡರ್‌ ರೀತಿಯಲ್ಲೂ, ದ್ವೇಷಿಸುವವರಿಗೆ ಬಲಪಂಥೀಯ ಪ್ರಪಗಾಂಡಿಸ್ಟ್‌ ರೀತಿಯಲ್ಲೂ, ಉಪೇಕ್ಷಿಸುವವರಿಗೆ ಬಾಲಿವುಡ್‌ನ ಮ್ಯಾಡ್‌ ಕ್ವೀನ್‌ ರೀತಿಯಲ್ಲೂಕಾಣಿಸುತ್ತಾಳೆ. ಆಕೆಯನ್ನು ನೀವು ಇಷ್ಟಪಡಬಹುದು; ಇಷ್ಟಪಡದಿರಬಹುದು. ಆದರೆ, ಖಂಡಿತವಾಗಿಯೂ ಕಡೆಗಣಿಸಲಾರಿರಿ.

ಕಾಮೆಂಟ್‌ಗಳಿಲ್ಲ: