ಜನತಾ ಪಾರ್ಟಿ ಹೇಗೆ ಅನೇಕ ಹೊಸ ಪ್ರಾದೇಶಿಕ ಪಕ್ಷ ಗಳ ಹುಟ್ಟಿಗೆ ಕಾರಣವಾಯಿತೋ, ಹಾಗೆಯೇ ಕಾಂಗ್ರೆಸ್ ಕೂಡ ಅನೇಕ ಪಕ್ಷ ಗಳ ಅಸ್ತಿತ್ವಕ್ಕೆ ದಾರಿ ಮಾಡಿಕೊಟ್ಟಿದೆ. ನಾಯಕತ್ವ ಕಾರಣದಿಂದಾಗಿ ಅನೇಕ ಕಾಂಗ್ರೆಸ್ ನಾಯಕರು ತಮ್ಮದೇ ಆದ ಪಕ್ಷ ವನ್ನು ಸಂಘಟಿಸಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಮಮತಾ ಬ್ಯಾನರ್ಜಿ ಅವರೂ ಪ್ರಮುಖರು. 26 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ದುಡಿದಿದ್ದ ಅವರು, 1998 ಜನವರಿ 1ರಂದು ತಮ್ಮದೇ ಆದ ತೃಣಮೂಲ ಕಾಂಗ್ರೆಸ್ ಪಕ್ಷ ವನ್ನು ಆರಂಭಿಸಿದರು. 'ಮಾ ಮಾತಿ ಮಾನೂಷ್'(ಜನನಿ, ಜನ್ಮಭೂಮಿ ಮತ್ತು ಜನರು) ಎಂಬದು ತೃಣಮೂಲ ಪಕ್ಷ ದ ಧ್ಯೇಯವಾಕ್ಯ ಮತ್ತು ಜನಪ್ರಿಯ ಘೋಷಣೆಯೂ ಹೌದು. 2014ರ ಲೋಕಸಭೆಯ ಚುನಾವಣೆಯಲ್ಲಿ ಶೇ.6ರಷ್ಟು ಮತ ಪಡೆದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಈ ಪಕ್ಷ ಕ್ಕೆ ರಾಷ್ಟ್ರೀಯ ಪಕ್ಷ ದ ಮಾನ್ಯತೆ ಹೊಂದಿದೆ. 30 ವರ್ಷಗಳ ಕಾಲ ಎಡ ಪಕ್ಷ ಗಳು ಪಶಿಮ ಬಂಗಾಳದಲ್ಲಿ ಹೊಂದಿದ್ದ ಹಿಡಿತವನ್ನು ಸಡಿಲಿಸಿದ್ದೇ ಈ ಮಮತಾ ಬ್ಯಾನರ್ಜಿ. ಹೋರಾಟದಿಂದಲೇ ತೃಣಮೂಲ ಕಾಂಗೆÜ್ರಸ್ ಅನ್ನು ಅಧಿಕಾರದ ಪಡಸಾಲೆಗೆ ತಂದು ನಿಲ್ಲಿಸಿದರು. ಸಜವಾಗಿಯೇ, ಅವರು ಮುಖ್ಯಮಂತ್ರಿಯೂ ಆದರು. ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ಮೇಲೆ ಪ್ರಭುತ್ವ ಸಾಧಿಸಲು ಪ್ರತಿ ಪಕ್ಷ ವೂ ಹಾತೊರೆಯುತ್ತಿದೆ. ಯಾರು ಹೆಚ್ಚು ಸೀಟುಗಳನ್ನು ಗೆಲ್ಲುತ್ತಾರೋ ಅವರು ಸಜವಾಗಿ ಕೇಂದ್ರ ರಾಜಕಾರಣದಲ್ಲಿ ಪ್ರಭಾವವನ್ನು ಗಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಕೂಟದ ಚರ್ಚೆ ಬಂದಾಗಲೆಲ್ಲ, ಮಮತಾ ಬ್ಯಾನರ್ಜಿ ಅವರು ಹೆಸರು ಮುಂಚೂಣಿಯಲ್ಲಿರುತ್ತದೆ ಮತ್ತು ಅವರು ಪ್ರಧಾನಿ ಹುದ್ದೆಯ ಆಕಾಂಕ್ಷಿಯೂ ಹೌದು. ಪಶ್ಚಿಮ ಬಂಗಾಳ, ತ್ರಿಪುರಾ, ಮಣಿಪುರ, ಜಾರ್ಖಂಡ್ ಮತ್ತು ಅಸ್ಸಾಮ್‌ನಲ್ಲಿ ತನ್ನ ಪ್ರಭಾವ ಹೊಂದಿರುವ ತೃಣಮೂಲ ಕಾಂಗ್ರೆಸ್ ಲೋಕಸಭೆಯಲ್ಲಿ ಒಟ್ಟು 34 ಸಂಸದರನ್ನು ಹೊಂದಿದ್ದು, ರಾಜ್ಯಸಭೆಯಲ್ಲಿ 13 ಪ್ರತಿನಿಧಿಗಳಿದ್ದಾರೆ. 295 ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್ 213 ಶಾಸಕರನ್ನು ಹೊಂದಿದೆ. 2011ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಮಿತ್ರ ಪಕ್ಷ ಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬಂತು. 2016ರ ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಜಯ ಗಳಿಸಿತು.
ಗುರುವಾರ, ಮಾರ್ಚ್ 7, 2019
ಕಾಂಗ್ರೆಸೇತರ ಮೊದಲ ಸರಕಾರ ರಚನೆ
ಭಾರತೀಯ ರಾಜಕಾರಣದಲ್ಲಿ ಏಕಮೇವಾದ್ವಿತೀಯವಾಗಿ ಮೆರೆಯುತ್ತಿದ್ದ ಕಾಂಗ್ರೆಸ್‌ಗೆ ಬಲವಾದ ಪೆಟ್ಟು ನೀಡಿದ ಚುನಾವಣೆ ಇದು. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷ ಗಳೆಲ್ಲವೂ ಒಗ್ಗೂಡಿ, ಕಾಂಗ್ರೆಸ್ ಅನ್ನು ಹೀನಾಯವಾಗಿ ಸೋಲಿಸಿದವು. ವಾಸ್ತವದಲ್ಲಿ 1975ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ, ಚುನಾವಣೆಯನ್ನು ಎರಡು ವರ್ಷದವರೆಗೂ ಮುಂದೂಡಿದರು. ಕರಾಳ ತುರ್ತು ಪರಿಸ್ಥಿತಿಯನ್ನು ಅನುಭವಿಸಿದ್ದ ಜನ 1977ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ, ಅದರ ಗರ್ವವನ್ನು ತೊಡೆದು ಹಾಕಿದರು. ಈ ಚುನಾವಣೆಯಲ್ಲಿ ಜನತಾ ಪಾರ್ಟಿ ನೇತೃತ್ವದಲ್ಲಿ ಸಿಪಿಎಂ, ಎಸ್‌ಎಡಿ, ಪಿಡಬ್ಲ್ಯೂಪಿಐ, ಆರ್‌ಎಸ್‌ಪಿ, ಎಐಎಫ್‌ಬಿ, ಆರ್‌ಪಿಐ, ಡಿಎಂಕೆ ಕೂಟ ರಚಿಸಿಕೊಂಡವು. ಇನ್ನು ಕಾಂಗ್ರೆಸ್ ನೇತೃತ್ವದ ಕೂಟದಲ್ಲಿ ಎಐಎಡಿಎಂಕೆ, ಸಿಪಿಐ, ಮುಸ್ಲಿಮ್ ಲೀಗ್, ಕೇರಳ ಕಾಂಗ್ರೆಸ್ ಇದ್ದವು. ಜನತಾ ಪಾರ್ಟಿ ಒಟ್ಟು 298 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 153 ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಯಿತು. ಜನತಾ ಪರಿವಾರದ ನಾಯಕರಾಗಿ ಮೊರಾರ್ಜಿ ದೇಸಾಯಿಅವರನ್ನು ಆಯ್ಕೆ ಮಾಡಲಾಯಿತು. ಅವರು ಕಾಂಗ್ರೆಸೇತರ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ವಿಶೇಷ ಎಂದರೆ, ಈ ಚುನಾವಣೆ ನಡೆದಿದ್ದೇ ಡೆಮಾಕ್ರಷಿ ಅಥವಾ ಡಿಕ್ಟಟರ್‌ಶಿಫ್(ಜನತಂತ್ರ ಅಥವಾ ಸರ್ವಾಧಿಕಾರ) ಎಂಬ ಸೈದ್ಧಾಂತಿಕ ನೆಲೆಯಲ್ಲಿ. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ಒಂದಾಗಿ ಸರಕಾರ ರಚಿಸಿದ್ದ ಜನತಾ ಪರಿವಾರ, 1979ರಲ್ಲಿ ಒಡೆದ ಮನೆಯಾಯಿತು. ಇದರಿಂದ ಅನಿವಾರ್ಯವಾಗಿ ಮೊರಾರ್ಜಿ ದೇಸಾಯಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಬಳಿಕ ಕಾಂಗ್ರೆಸ್ ಬೆಂಬಲದೊಂದಿಗೆ ಚರಣ್ ಸಿಂಗ್ ಅವರು ಪ್ರಧಾನಿಯಾದರು! ಸರ್ವಾಧಿಕಾರ, ಪ್ರಜಾತಂತ್ರ, ಸಂವಿಧಾನ ರಕ್ಷ ಣೆ ಹೆಸರಿನಲ್ಲಿ ನಡೆದ ಈ ಚುನಾವಣೆಯ ಅನೇಕ ಅವಕಾಶಗಳನ್ನು ಸೃಷ್ಟಿಸಿತು. ಆದರೆ, ಅಂಥ ಅವಕಾಶಗಳನ್ನು ಬಳಸಿಕೊಳ್ಳಲು ನಾಯಕರು ಮಾತ್ರ ವಿಫಲರಾದರು. ಕಾಂಗ್ರೆಸ್‌ಗೆ ಪರ್ಯಾಯ ರಾಜಕಾರಣ ಕನಸು ಕಾಣುವಂತೆ ಮಾಡಿದ್ದ ಜನತಾ ಪಾರ್ಟಿ ಅಧಿಕಾರಕ್ಕೆ ಕಚ್ಚಾಡಿಕೊಂಡಿದ್ದು ರಾಜಕೀಯ ಪ್ರಮಾದ ಎಂಬುದು ಮುಂಬರುವ ದಿನಗಳಲ್ಲಿ ಎಲ್ಲ ಭಾರತೀಯರ ಅನುಭವಕ್ಕೆ ಬಂತು. ವಿಶೇಷ ಎಂದರೆ, ತುರ್ತು ಪರಿಸ್ಥಿತಿ ವಿರೋಧಿಸಿ ಮತ ನೀಡಿದ್ದ ಭಾರತೀಯರು ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ನೀಡಿ ಮತ್ತೆ ಅಧಿಕಾರಕ್ಕೆ ತಂದರು. - ತಿಪ್ಪಾರ
ಈ ಲೇಖನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಕ್ಲಿಕ್ ಮಾಡಿ.
ಮಂಗಳವಾರ, ಮಾರ್ಚ್ 5, 2019
ಬಹುಜನರ ಅಭ್ಯುದಯ ಬಿಎಸ್ಪಿಯ ಧ್ಯೇಯ
ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ)ಗೆ ರಾಷ್ಟ್ರೀಯ ಪಕ್ಷ ದ ಮಾನ್ಯತೆ ಇದ್ದರೂ ಉತ್ತರ ಪ್ರದೇಶದಲ್ಲೆ ಹೆಚ್ಚು ಅಸ್ತಿತ್ವವನ್ನು ಹೊಂದಿದೆ. ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಂದರ್ಭ ಎದುರಾದಗಲೆಲ್ಲ ಅದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ದೇಶದ ತಳಮಟ್ಟದ ಸಮುದಾಯ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕಾನ್ಶಿ ರಾಮ್ ಅವರು 1984ರಲ್ಲಿ ಬಿಎಸ್‌ಪಿಯನ್ನು ಹುಟ್ಟು ಹಾಕಿದರು. ಬಹುಜನ ಅಂದರೆ ಬಹುಸಂಖ್ಯಾತರು ಎಂದರ್ಥ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರನ್ನು 'ಬಹುಜನ' ವ್ಯಾಪ್ತಿಯೊಳಗೆ ಸೇರಿದೆ. ಈ ವರ್ಗದ ಜನರ ಸಾಮಾಜಿಕ ಬದಲಾವಣೆ ಮತ್ತು ಆರ್ಥಿಕ ವಿಮೋಚನೆಯ ಬಿಎಸ್‌ಪಿ ಗುರಿ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಒಂದೂ ಸೀಟು ಗೆಲ್ಲದಿದ್ದರೂ ಮತಗಳಿಕೆಯ ಪ್ರಮಾಣದಲ್ಲಿ ದೇಶದ ಮೂರನೇ ಅತಿದೊಡ್ಡ ಪಕ್ಷ ವಾಗಿ ಹೊರಹೊಮ್ಮಿತ್ತು. ಜ್ಯೋತಿರಾವ್ ಫುಲೆ, ಅಂಬೇಡ್ಕರ್, ನಾರಾಯಣಗುರು, ಪೆರಿಯಾರ್ ಇ ವಿ ರಾಮಸ್ವಾಮಿ, ಛತ್ರಪತಿ ಶಾಹುಜಿ ಮಹಾರಾಜ ಅವರ ಸಿದ್ಧಾವಂತನ್ನು ಬಿಎಸ್‌ಪಿ ತನ್ನ ವಿಚಾಧಾರೆಯನ್ನಾಗಿಸಿಕೊಂಡಿದೆ. ಕಾನ್ಶಿ ರಾಮ್ ಅವರು ಬಿಎಸ್‌ಪಿಯನ್ನು ಬಹುಜನರ ಪಕ್ಷ ವಾಗಿ ರೂಪಿಸುವಲ್ಲಿ ಮಹತ್ತರ ಕಾಣಿಕೆಯನ್ನು ನೀಡಿದರು. ನಂತರ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಯಾವತಿಯನ್ನು 2001ರಲ್ಲಿ ನೇಮಕ ಮಾಡಿದರು. 2017ರ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಶೇ.22ರಷ್ಟು ಮತದೊಂದಿಗೆ 19 ಸ್ಥಾನಗಳನ್ನು ಗೆದ್ದಿತ್ತು. ಬಿಎಸ್‌ಪಿಗೆ ಪ್ರತ್ಯೇಕವಾದ ವಿದ್ಯಾರ್ಥಿ ವಿಭಾಗವಿಲ್ಲ. ಮಾಯಾವತಿಅವರು ಬಿಎಸ್‌ಪಿ ಸದ್ಯದ ವರ್ಚಸ್ವಿ ನಾಯಕಿ. ಮಾಯಾವತಿ ನಾಲ್ಕು ಬಾರಿ(1995, 1997 ಮತ್ತು 2000 - 2003, 2007-2012) ಬಿಎಸ್‌ಪಿಯನ್ನು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿ, ಮುಖ್ಯಮಂತ್ರಿಯೂ ಆದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಮಾಯಾವತಿ ಬೆಳವಣಿಗೆಯನ್ನು 'ಮಿರಾಕಲ್ ಆಫ್ ಡೆಮಾಕ್ರಷಿ'(ಪ್ರಜಾಪ್ರಭುತ್ವದ ಪವಾಡ) ಎಂದು ಬಣ್ಣಿಸಿದ್ದರು. ತಮ್ಮ ಕಾರ್ಯಕರ್ತರಿಂದ ಬೇಹನ್‌ಜೀ ಎಂದು ಕರೆಯಿಸಿಕೊಳ್ಳುವ ಮಾಯಾವತಿ ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಹೌದು. ಪ್ರಸಕ್ತ ಚುನಾವಣೆಯಲ್ಲಿ ಅವರು ಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿದೆ. ಆನೆಯು ಬಿಎಸ್‌ಪಿಯ ಚುನಾವಣಾ ಗುರುತು.
ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ
ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ
ಹೊಸ ರಾಜಕಾರಣ ಬಿತ್ತಿದ 5ನೇ ಚುನಾವಣೆ
ಭಾರತೀಯ ರಾಜಕಾರಣದಲ್ಲಿ 1971ರ ಚುನಾವಣೆ ಭಾರೀ ಬದಲಾವಣೆಗೆ ಕಾರಣವಾಯಿತು. ಇಂದಿರಾ ಗಾಂಧಿ ಮೂರನೇ ಅವಧಿಗೆ ಪ್ರಧಾನಿಯಾದರೆ, ಅವಧಿ ಪೂರ್ಣಗೊಂಡರೂ ಚುನಾವಣೆ ನಡೆಸದೇ ತುರ್ತುಪರಿಸ್ಥಿತಿ ಹೇರಿ, ಹೊಸ ರಾಜಕೀಯ ಮನ್ವಂತರಕ್ಕೆ ಹಾದಿ ತೋರಿಸಿದರು; ಹೊಸ ನಾಯಕರು ಉದಯಿಸಿದರು. ರಾಜಕಾರಣದ ಹೊಸ ಸಮೀಕರಣವನ್ನು ಮುಂದಿನ ವರ್ಷಗಳಲ್ಲಿ ಕಾಣಬೇಕಾಯಿತು. ನಾಲ್ಕನೇ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕಾಂಗ್ರೆಸ್, 5ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿತು. ಈ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಒಡೆದ ಮನೆಯಾಗಿ, ಮೊರಾರ್ಜಿ ದೇಸಾಯಿನೇತೃತ್ವದ ಕಾಂಗ್ರೆಸ್ ಕೂಡ ಸ್ಪರ್ಧೆಯೊಡ್ಡಿತ್ತು. ಇಂದಿರಾ ನೇತೃತ್ವದ ಕಾಂಗ್ರೆಸ್ 518 ಕ್ಷೇತ್ರಗಳ ಪೈಕಿ 352 ಕ್ಷೇತ್ರಗಳನ್ನು ಗೆದ್ದುಕೊಂಡಿತು. ದೇಸಾಯಿ ನೇತೃತ್ವದ ಕಾಂಗ್ರೆಸ್ ಕೇವಲ 16 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಸಿಪಿಎಂ 25, ಸಿಪಿಐ 23 ಹಾಗೂ ಜನಸಂಘ 22, ಡಿಎಂಕೆ 23 ಸ್ಥಾನಗಳನ್ನು ಗೆದ್ದುಕೊಂಡವು. ಸ್ವತಂತ್ರಪಾರ್ಟಿ ಮಾತ್ರ ಇನ್ನಿಲ್ಲದಂತೆ ನೆಲಕಚ್ಚಿತು. ಈ ಹಿಂದಿನ ಅವಧಿಯಲ್ಲಿ ಇಂದಿರಾ ಗಾಂಧಿ ಮತ್ತು ಮೊರಾರ್ಜಿ ದೇಸಾಯಿ ಮಧ್ಯೆ ಕಾಂಗ್ರೆಸ್ ಒಡೆದು ಹೋಗಿತ್ತು. ಇಂದಿರಾ ಅವರನ್ನು ಪಕ್ಷ ದಿಂದ ಹೊರ ಹಾಕಲಾಗಿತ್ತು. ಆದರೆ, ಬಹುತೇಕ ಸಂಸದರು ಮತ್ತು ಕಾರ್ಯಕರ್ತರು ಇಂದಿರಾಗೆ ಸಪೋರ್ಟ್ ಮಾಡಿದ್ದರು. ಹಾಗಾಗಿ, ಚುನಾವಣಾ ಆಯೋಗ ಕೂಡ ಇಂದಿರಾ ಕಾಂಗ್ರೆಸ್‌ಗೆ ಮಾನ್ಯತೆ ನೀಡಿತ್ತು. ಇಂದಿರಾ ವಿರೋಧಿಸಿದ್ದ 31 ಸಂಸದರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(ಆರ್ಗನೈಷನ್) ಅಡಿ ಗುರುತಿಸಿಕೊಂಡಿದ್ದರು. ಈ ಒಳ ಜಗಳದ ಹೊರತಾಗಿಯೂ, ಇಂದಿರಾ ಪ್ರಭಾವಳಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಮತ್ತೊಂದೆಡೆ, ಕಾಂಗ್ರೆಸ್(ಒ) ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಸ್ವತಂತ್ರ ಪಾರ್ಟಿ, ಬಿಜೆಎಸ್ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕಣಕ್ಕಿಳಿದರು ಇಂದಿರಾಳನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಆದರೆ, 1975ರಲ್ಲಿ ಇಂದಿರಾ ಗಾಂಧಿ ವಿಧಿಸಿದ ತುರ್ತು ಪರಿಸ್ಥಿತಿ ಭಾರತೀಯ ರಾಜಕಾರಣದ ವರಸೆಯನ್ನು ಬದಲಿಸಿದವು. ತುರ್ತು ಪರಿಸ್ಥಿತಿ ಹಿಂದೆಗೆದ ನಂತರ ನಡೆದ ಚುನಾವಣೆಯಲ್ಲಿ ಅದ ಪ್ರಭಾವ ಎದ್ದು ಕಾಣಿತು.
- ತಿಪ್ಪಾರ
ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ.
- ತಿಪ್ಪಾರ
ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ.
ಸೋಮವಾರ, ಮಾರ್ಚ್ 4, 2019
ಇಬ್ಬರು ಸ್ಪೀಕರ್ ಕಂಡ ನಾಲ್ಕನೇ ಲೋಕಸಭೆ
1967ರಲ್ಲಿ ನಡೆದ ಚುನಾವಣೆಯು ಹಲವು ದೃಷ್ಟಿಗಳಿಂದ ಮಹತ್ವ ಪಡೆದುಕೊಂಡಿದೆ. ಈ ಚುನಾವಣೆಯ ಹೊತ್ತಿಗೆ ಲೋಕಸಭೆಸ್ಥಾನಗಳು 520ಕ್ಕೆ ಏರಿಕೆಯಾಗಿದವು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡವು. ನೆಹರು ಯುಗ ಮುಗಿದು ಇಂದಿರಾ ಯುಗಕ್ಕೆ ಬುನಾದಿ ಹಾಕಿದ ಚುನಾವಣೆ ಇದು. ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್, ಶೇ.40ರಷ್ಟು ಮತ ಪಡೆದ 283 ಸ್ಥಾನಗಳನ್ನು ಗೆದ್ದುಕೊಂಡು ಸಿಂಪಲ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಆದರೆ, ಈ ಹಿಂದಿನ ಮೂರು ಚುನಾವಣೆಗಳಿಗೆ ಹೋಲಿಸಿದರೆ, ಅದ್ಭುತ ಗೆಲವು ಏನಲ್ಲ. ಈ ಚುನಾವಣೆಯಲ್ಲೂ ರಾಜ್ಯಸಭೆಯ 13 ಸದಸ್ಯರು ಕೆಳಮನೆಗೆ ಆಯ್ಕೆಯಾದರು. ವಿಶೇಷ ಎಂದರೆ, ರಾಜಗೋಪಾಲಚಾರಿ ಅವರ ಸ್ವತಂತ್ರ ಪಾರ್ಟಿ ಕಾಂಗ್ರೆಸ್ ನಂತರ ಅತಿ ದೊಡ್ಡ ಪಕ್ಷ ವಾಯಿತು. ಅದು ಒಟ್ಟು 44 ಸ್ಥಾನ ಗೆದ್ದುಕೊಂಡಿತು. 35 ಸ್ಥಾನಗಳೊಂದಿಗೆ ಬಿಜೆಎಸ್ ಮೂರನೇ ಸ್ಥಾನದಲ್ಲಿ ಉಳಿಯಿತು. ಗುಜರಾತ್, ಮದ್ರಾಸ್, ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ದಿಲ್ಲಿಯಲ್ಲಿ ಕಾಂಗ್ರೆಸ್ ಭಾರಿ ಸೋಲು ಎದುರಾಯಿತು. ಅಂದಿನ ರಾಜಕಾರಣದಲ್ಲಿ ಕಾಂಗ್ರೆಸ್‌ನದ್ದು ದೊಡ್ಡಣ್ಣ ಆ್ಯಟಿಟ್ಯೂಡ್. ಆದರೆ, ನೆಹರು ಮತ್ತು ಶಾಸ್ತ್ರಿ ಸಾವಿನ ನಂತರ ಕಾಂಗ್ರೆಸ್‌ನೊಳಗಿದ್ದ ಏಕತೆ ಮಾಯವಾಗಿ, ಒಳಜಗಳ ಶುರುವಾದವು. ಆದರೂ ಅದೆಲ್ಲವನ್ನೂ ಸಂಭಾಳಿಸುವಲ್ಲಿ ಇಂದಿರಾ ಯಶಸ್ವಿಯಾದರು. ಇದೇ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಕೂಡ ಗಣನೀಯವಾಗಿ ಇಳಿಜಾರಿನಲ್ಲಿತ್ತು. ಪಂಚವಾರ್ಷಿಕ ಯೋಜನೆ ಮೂಲಕ ಶೇ.5.6ರಷ್ಟು ಜಿಡಿಪಿ ಸಾಧಿಸುವ ಗುರಿ ಇತ್ತು. ವಾಸ್ತವದಲ್ಲಿ ಗುರಿಸಾಧನೆಯಾಗಿದ್ದು ಕೇವಲ ಶೇ.2.4 ಅಷ್ಟೆ. ಆಡಳಿತಾತ್ಮಕ ಮತ್ತು ರಾಜಕೀಯ ವೈಫಲ್ಯಗಳ ಒಟ್ಟು ಪರಿಣಾಮ ಮುಂದಿನ ಐದು ವರ್ಷಗಳಲ್ಲಿ ಕಾಣಬೇಕಾಯಿತು. ನಾಲ್ಕನೇ ಲೋಕಸಭೆಯ ಮತ್ತೊಂದು ವಿಶೇಷ ಎಂದರೆ, ಇಬ್ಬರು ಸ್ಪೀಕರ್‌ಗಳನ್ನು ಕಂಡಿತು. 1967ರಿಂದ 1969ರವರೆಗೆ ನೀಲಂ ಸಂಜೀವ್ ರೆಡ್ಡಿ ಹಾಗೂ 1969ರಿಂದ 71ವರೆಗೆ ಜಿ.ಎಸ್.ಧಿಲ್ಲೋನ್ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ತೊರೆದಿದ್ದರಿಂದ ಸಂಜೀವ್ ರೆಡ್ಡಿ ಅವರು ಸ್ಪೀಕರ್ ಹುದ್ದೆಯನ್ನು ಬಿಟ್ಟುಕೊಡಬೇಕಾಯಿತು.
- ತಿಪ್ಪಾರ
ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ
- ತಿಪ್ಪಾರ
ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ
ಎಸ್‌ಪಿ ಜನತಾ ಪರಿವಾರದ ಮತ್ತೊಂದು ಟಿಸಿಲು
ಕಾಂಗ್ರೆಸ್ ಮತ್ತು ಬಿಜೆಪಿಯ ಹೊರತಾಗಿ ಸದ್ದು ಮಾಡುವ ಪ್ರಾದೇಶಿಕ ಪಕ್ಷ ಗಳ ಪೈಕಿ ಸಮಾಜವಾದಿ ಪಾರ್ಟಿ(ಎಸ್‌ಪಿ)ಯೂ ಒಂದು. ಉತ್ತರ ಪ್ರದೇಶದಲ್ಲಿ ಬುನಾದಿ ಹೊಂದಿರುವ ಎಸ್‌ಪಿ, ತನ್ನನ್ನು ತಾನು ಪ್ರಜಾಸತ್ತಾತ್ಮಕ ಸಮಾಜವಾದಿ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಭಾರತದ ರಾಜಕಾರಣದಲ್ಲಿ ಉತ್ತರ ಪ್ರದೇಶಕ್ಕೆ ವಿಶೇಷ ಸ್ಥಾನವಿದೆ. ಯಾಕೆಂದರೆ, ಈ ರಾಜ್ಯವೊಂದೇ 80 ಸೀಟುಗಳನ್ನು ತನ್ನ ಮಡಿಲೊಳಗೆ ಇಟ್ಟುಕೊಂಡಿದೆ. ಹಾಗಾಗಿ, ತಮ್ಮದೇ ಆದ ಅಸ್ತಿತ್ವ ಹೊಂದಿರು ಎಸ್‌ಪಿ, ಬಿಎಸ್‌ಪಿ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳು ರಚನೆಯಾದಾಗಲೆಲ್ಲ ಪ್ರಮುಖ ಪಾತ್ರ ನಿರ್ವಹಿಸಿವೆ. 2019ರ ಚುನಾವಣೆಯಲ್ಲೂ ಉಭಯ ಪಕ್ಷ ಗಳು ಮೈತ್ರಿಯೊಂದಿಗೆ ಕಣಕ್ಕಿಳಿಯುತ್ತಿರುವುದು ಇದಕ್ಕೆ ಸಾಕ್ಷಿ. ಜಯಪ್ರಕಾಶ್ ನಾರಾಯಣ್ ಅವರ ಚಳವಳಿಯಿಂದ ಉದಯಿಸಿದ್ದ ಜನತಾ ಪಾರ್ಟಿ ಮೂರು ವರ್ಷದ ಅಧಿಕಾರದ ಬಳಿಕ ಛಿದ್ರವಾಗಿ ಹೋಯಿತು. ಆಗ ಅನೇಕ ಪಕ್ಷ ಗಳು ತಲೆ ಎತ್ತಿದವು. ಆ ಪೈಕಿ ಎಸ್‌ಪಿಯೂ ಒಂದು. ತಮ್ಮ ಕಾರ್ಯಕರ್ತರಿಂದ ಪ್ರೀತಿಯಿಂದ 'ನೇತಾಜಿ' ಎಂದು ಕರೆಯಿಸಿಕೊಳ್ಳುವ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದಲ್ಲಿ ಪಕ್ಷ ವನ್ನು ಸಂಘಟಿಸಿ ಅದನ್ನು ಅಧಿಕಾರದವರೆಗೂ ಕೊಂಡೊಯ್ದರು. ನಾಲ್ಕು ಬಾರಿ ಬೇರೆ ಪಕ್ಷ ಗಳ ನೆರವಿನೊಂದಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೂ ಬಂದರು. ಹಾಗೆಯೇ, ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ನೇತೃತ್ವದ ಕೇಂದ್ರ ಸರಕಾರದಲ್ಲೂ ಎಸ್‌ಪಿ ಪ್ರಮುಖ ಪಾತ್ರ ನಿರ್ವಹಿಸಿತ್ತು. 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ ಎಸ್‌ಪಿ, ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಈ ಬಾರಿಯೂ ನೇತಾಜಿ ಸಿಎಂ ಆಗುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಮುಲಾಯಂ ಸಿಂಗ್ ಅವರು ತಮ್ಮ ಪುತ್ರ ಅಖಿಲೇಶ್ ಸಿಂಗ್ ಯಾದವರ್ ಅವರಿಗೆ ಪಟ್ಟ ಕಟ್ಟಿ ಮುಖ್ಯಮಂತ್ರಿ ಮಾಡಿದರು. ಅಂದ ಹಾಗೆ, ಮೊದಲ ಬಾರಿಗೆ ಎಸ್‌ಪಿ ಐದು ವರ್ಷಗಳ ಪೂರ್ತಿ ಉತ್ತರ ಪ್ರದೇಶದಲ್ಲಿ ಅಧಿಕಾರ ಚಲಾಯಿಸಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಎಸ್‌ಪಿಯೊಳಗೇ ದೊಡ್ಡ ಮಟ್ಟದ ಕೋಲಾಹಲ ಕೂಡ ನಡೆಯಿತು. ಸೈದ್ಧಾಂತಿಕವಾಗಿ ಎಸ್‌ಪಿ ಜಾತ್ಯತೀತ, ಸಮಾಜವಾದ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಎಸ್‌ಪಿ ಚುನಾವಣಾ ಗುರುತು ಸೈಕಲ್. ಅಖಿಲೇಶ್ ಸಿಂಗ್ ಯಾದವ್ ಈಗ ಪಕ್ಷ ವನ್ನು ಮುನ್ನಡೆಸುತ್ತಿದ್ದಾರೆ.
ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
ಎಡ ರಾಜಕಾರಣದ ಮುಂಚೂಣಿ ಪಕ್ಷ ಸಿಪಿಐ
ಕಮ್ಯುನಿಸ್ಟ್ ಪಾರ್ಟಿ ಇಂಡಿಯಾ(ಸಿಪಿಐ) ಭಾರತೀಯ ರಾಜಕಾರಣದಲ್ಲಿ ತನ್ನದೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಾರತದಲ್ಲಿ ಸಿಪಿಐ ಯಾವಾಗ ಆರಂಭವಾಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ 1925 ಡಿಸೆಂಬರ್ 26ರಂದು ಹೇಳಲಾಗುತ್ತದೆ. ಹಾಗೆಯೇ ಪ್ರತಿ ವರ್ಷ 26ರಂದು ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯಪೂರ್ವದಿಂದಲೂ ಎಡಪಕ್ಷ ಗಳು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದ್ದರೂ ಅವುಗಳ ಪ್ರಾಮುಖ್ಯತೆ ಸ್ವಾತಂತ್ರ್ಯದ ನಂತರವೇ ಹೆಚ್ಚು ಎದ್ದು ಕಂಡಿತು. ಎಡಪಂಥೀಯ ವಿಚಾರಧಾರೆ ನಮ್ಮ ನೆಲದ್ದಲ್ಲ. ಹಾಗಾಗಿ, ಚೀನಾ ಮತ್ತು ಸೋವಿಯತ್ ರಷ್ಯಾ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯವು ಭಾರತದಲ್ಲಿನ ಎಡಪಕ್ಷ ದ ಮೇಲೂ ಪರಿಣಾಮ ಬೀರಿ, 1964ರಲ್ಲಿ ಸಿಪಿಐ ಇಬ್ಭಾಗವಾಯಿತು. ಸಿಪಿಐ(ಮಾರ್ಕ್ಸ್‌ವಾದ) ಪ್ರತ್ಯೇಕವಾಗಿ ಪಕ್ಷ ದ ಸ್ಥಾನಮಾನ ಪಡೆದುಕೊಂಡಿತು. ಎಸ್.ಸುಧಾಕರ ರೆಡ್ಡಿ ಸಿಪಿಐನ ಪ್ರಸಕ್ತ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಎಡಪಕ್ಷ ಗಳ ಜತೆ ಸಿಪಿಐ ಅಧಿಕಾರದಲ್ಲಿತ್ತು. ಕೇರಳದಲ್ಲಿ 19, ಪಶ್ಚಿಮ ಬಂಗಾಳದಲ್ಲಿ ಒಬ್ಬರು ವಿಧಾನಸಭೆ ಸದಸ್ಯರಿದ್ದಾರೆ. ಲೋಕಸಭೆಯಲ್ಲಿ ಒಬ್ಬ ಹಾಗೂ ರಾಜ್ಯಸಭೆಯಲ್ಲಿ ಇಬ್ಬರು ಪ್ರತಿನಿಧಿಗಳಿದ್ದಾರೆ.ಘ್ಕಿ ಆರಂಭಿಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ನಂತರ ಅತ್ಯುತ್ತಮ ಪ್ರದರ್ಶನ ತೋರಿದ ಪಕ್ಷ ಎಂದರೆ ಸಿಪಿಐ ಮಾತ್ರ. ಭಾರತದಲ್ಲೂ ಈಗಲೂ ಕಮ್ಯುನಿಸ್ಟ್ ಪಾರ್ಟಿಗೆ ಫಾಲೋ ಮಾಡುವ ಅಸಂಖ್ಯೆ ಜನರಿದ್ದಾರೆ. ಆದರೆ, ಅವರನ್ನು ಮುನ್ನಡೆಸಬಲ್ಲ ಸರ್ವ ಒಪ್ಪಿಗೆಯಾಗಬಲ್ಲ ನಾಯಕತ್ವದ ಕೊರತೆ ಇದೆ. ಇಡೀ ದೇಶವನ್ನು ಪ್ರಭಾವಿಸಬಲ್ಲ ನಾಯಕರು ಎಡಪಕ್ಷ ಗಳಿಂದ ಹೊರಬೀಳಲಿಲ್ಲ. ಹಾಗಾಗಿ, ಸಿಪಿಐ 1960ರ ದಶಕದ ನಂತರ, ಮೇಲ್ಮುಖದ ಬೆಳವಣಿಗೆಯನ್ನು ಕಾಣಲೇ ಇಲ್ಲ. ಸಿಪಿಐನಿಂದ ಛಿದ್ರವಾಗಿ ಹೊರಹೋಗಿದ್ದ ಸಿಪಿಎಂ ತುಸು ಬೆಳವಣಿಗೆಯನ್ನು ಕಂಡಿತಾದರೂ ಅದು ಕೂಡ ಇತ್ತೀಚಿನ ವರ್ಷಗಳಲ್ಲಿ ನೆಲಕಚ್ಚುತ್ತಾ ಬಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾದ ರಾಜಕಾರಣವನ್ನು ಕಟ್ಟಿ ಬೆಳೆಸುವ ಸಾಮರ್ಥ್ಯ ಇದ್ದರೂ ಅದನ್ನು ಹೊಣೆ ಹೊತ್ತು ಕೊಳ್ಳುವ ನಾಯಕರಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ಮ ಮಾಡಿ
https://vijaykarnataka.indiatimes.com/elections/lok-sabha/news/a-history-of-communist-party-of-india-cpi/articleshow/68232805.cms
ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ಮ ಮಾಡಿ
https://vijaykarnataka.indiatimes.com/elections/lok-sabha/news/a-history-of-communist-party-of-india-cpi/articleshow/68232805.cms
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
ಮೂರೂ ಮಾದರಿಯ ಕ್ರಿಕೆಟ್ನಲ್ಲಿಭಾರತೀಯ ಕ್ರಿಕೆಟ್ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್ನಲ್ಲಿಸಿಎಸ್ಕೆ ತಂಡದ ನಾಯಕ. - ಮಲ್ಲಿಕಾರ್ಜುನ ತಿಪ್ಪಾ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..! ಅರೆ ಏನು ಇದು.....