1967ರಲ್ಲಿ ನಡೆದ ಚುನಾವಣೆಯು ಹಲವು ದೃಷ್ಟಿಗಳಿಂದ ಮಹತ್ವ ಪಡೆದುಕೊಂಡಿದೆ. ಈ ಚುನಾವಣೆಯ ಹೊತ್ತಿಗೆ ಲೋಕಸಭೆಸ್ಥಾನಗಳು 520ಕ್ಕೆ ಏರಿಕೆಯಾಗಿದವು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡವು. ನೆಹರು ಯುಗ ಮುಗಿದು ಇಂದಿರಾ ಯುಗಕ್ಕೆ ಬುನಾದಿ ಹಾಕಿದ ಚುನಾವಣೆ ಇದು. ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್, ಶೇ.40ರಷ್ಟು ಮತ ಪಡೆದ 283 ಸ್ಥಾನಗಳನ್ನು ಗೆದ್ದುಕೊಂಡು ಸಿಂಪಲ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಆದರೆ, ಈ ಹಿಂದಿನ ಮೂರು ಚುನಾವಣೆಗಳಿಗೆ ಹೋಲಿಸಿದರೆ, ಅದ್ಭುತ ಗೆಲವು ಏನಲ್ಲ. ಈ ಚುನಾವಣೆಯಲ್ಲೂ ರಾಜ್ಯಸಭೆಯ 13 ಸದಸ್ಯರು ಕೆಳಮನೆಗೆ ಆಯ್ಕೆಯಾದರು. ವಿಶೇಷ ಎಂದರೆ, ರಾಜಗೋಪಾಲಚಾರಿ ಅವರ ಸ್ವತಂತ್ರ ಪಾರ್ಟಿ ಕಾಂಗ್ರೆಸ್ ನಂತರ ಅತಿ ದೊಡ್ಡ ಪಕ್ಷ ವಾಯಿತು. ಅದು ಒಟ್ಟು 44 ಸ್ಥಾನ ಗೆದ್ದುಕೊಂಡಿತು. 35 ಸ್ಥಾನಗಳೊಂದಿಗೆ ಬಿಜೆಎಸ್ ಮೂರನೇ ಸ್ಥಾನದಲ್ಲಿ ಉಳಿಯಿತು. ಗುಜರಾತ್, ಮದ್ರಾಸ್, ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ದಿಲ್ಲಿಯಲ್ಲಿ ಕಾಂಗ್ರೆಸ್ ಭಾರಿ ಸೋಲು ಎದುರಾಯಿತು. ಅಂದಿನ ರಾಜಕಾರಣದಲ್ಲಿ ಕಾಂಗ್ರೆಸ್‌ನದ್ದು ದೊಡ್ಡಣ್ಣ ಆ್ಯಟಿಟ್ಯೂಡ್. ಆದರೆ, ನೆಹರು ಮತ್ತು ಶಾಸ್ತ್ರಿ ಸಾವಿನ ನಂತರ ಕಾಂಗ್ರೆಸ್‌ನೊಳಗಿದ್ದ ಏಕತೆ ಮಾಯವಾಗಿ, ಒಳಜಗಳ ಶುರುವಾದವು. ಆದರೂ ಅದೆಲ್ಲವನ್ನೂ ಸಂಭಾಳಿಸುವಲ್ಲಿ ಇಂದಿರಾ ಯಶಸ್ವಿಯಾದರು. ಇದೇ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಕೂಡ ಗಣನೀಯವಾಗಿ ಇಳಿಜಾರಿನಲ್ಲಿತ್ತು. ಪಂಚವಾರ್ಷಿಕ ಯೋಜನೆ ಮೂಲಕ ಶೇ.5.6ರಷ್ಟು ಜಿಡಿಪಿ ಸಾಧಿಸುವ ಗುರಿ ಇತ್ತು. ವಾಸ್ತವದಲ್ಲಿ ಗುರಿಸಾಧನೆಯಾಗಿದ್ದು ಕೇವಲ ಶೇ.2.4 ಅಷ್ಟೆ. ಆಡಳಿತಾತ್ಮಕ ಮತ್ತು ರಾಜಕೀಯ ವೈಫಲ್ಯಗಳ ಒಟ್ಟು ಪರಿಣಾಮ ಮುಂದಿನ ಐದು ವರ್ಷಗಳಲ್ಲಿ ಕಾಣಬೇಕಾಯಿತು. ನಾಲ್ಕನೇ ಲೋಕಸಭೆಯ ಮತ್ತೊಂದು ವಿಶೇಷ ಎಂದರೆ, ಇಬ್ಬರು ಸ್ಪೀಕರ್‌ಗಳನ್ನು ಕಂಡಿತು. 1967ರಿಂದ 1969ರವರೆಗೆ ನೀಲಂ ಸಂಜೀವ್ ರೆಡ್ಡಿ ಹಾಗೂ 1969ರಿಂದ 71ವರೆಗೆ ಜಿ.ಎಸ್.ಧಿಲ್ಲೋನ್ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ತೊರೆದಿದ್ದರಿಂದ ಸಂಜೀವ್ ರೆಡ್ಡಿ ಅವರು ಸ್ಪೀಕರ್ ಹುದ್ದೆಯನ್ನು ಬಿಟ್ಟುಕೊಡಬೇಕಾಯಿತು.
- ತಿಪ್ಪಾರ
ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ
- ತಿಪ್ಪಾರ
ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ