- ಮಲ್ಲಿಕಾರ್ಜುನ ತಿಪ್ಪಾರ
ಕನ್ನಡದ ಚಿತ್ರಗಳಿಗೆ ಅದ್ಧೂರಿತನ, ಆ್ಯಕ್ಷ ನ್ ಸಿನಿಮಾಗಳಿಗೆ ಹೊಸ ಖದರ್ ತಂದುಕೊಟ್ಟವರು ನಿರ್ಮಾಪಕ ‘ಕೋಟಿ’ ರಾಮು. ಅವರ ಬ್ಯಾನರ್‌ನ ಸಿನಿಮಾಗಳೆಂದರೆ ಫುಲ್ ಆ್ಯಕ್ಷ ನ್, ಸ್ವಲ್ಪ ಸೆಂಟಿಮೆಂಟ್ ಜತೆಗೆ ಮನರಂಜನೆ ಗ್ಯಾರಂಟಿ. ಇದಕ್ಕೆ ವರ್ಷದ ಕೊನೆಯಲ್ಲಿಬಿಡುಗಡೆಯಾಗಿರುವ ‘ಅರ್ಜುನ್ ಗೌಡ’ ಸಿನಿಮಾ ಹೊರತಲ್ಲ. ಚಿತ್ರ ಅದ್ಧೂರಿಯಾಗಿದೆ. ಆದರೆ, ಪ್ರೇಕ್ಷ ಕರ ಮನಸ್ಸಿಗೆ ಎಷ್ಟು ನಾಟಲಿದೆ ಎಂಬುದು ನಿಗೂಢ!
ನಿರ್ದೇಶಕರು ‘ಅರ್ಜನ್ ಗೌಡ’ ಚಿತ್ರದ ಆರಂಭದಲ್ಲಿಪತ್ರಕರ್ತೆ ಗೌರಿ ಲಂಕೇಶ್, ವಿದ್ವಾಂಸ ಎಂ. ಎಂ. ಕಲಬುರ್ಗಿ ಹತ್ಯೆಗಳೇ ತಮ್ಮ ಸಿನಿಮಾಕ್ಕೆ ಸೂಧಿರ್ತಿ ಎಂದು ಹೇಳಿಸುತ್ತಾರೆ. ಆದರೆ, ಸಿನಿಮಾ ಮುಗಿದರೂ ಆ ಸೂಧಿರ್ತಿ ಏನೆಂಬುದು ಗೊತ್ತಾಗುವುದಿಲ್ಲ! ಪ್ರೀತಿ, ಸಮಾಜ, ದುಷ್ಟಶಕ್ತಿಗಳು, ಮಾಧ್ಯಮ... ಹೀಗೆ ಎಲ್ಲವನ್ನೂ ಹೇಳಲು ಹೋಗಿ, ಯಾವುದನ್ನೂ ಪ್ರೇಕ್ಷ ಕರ ಮನಸ್ಸಿಗೆ ಪೂರ್ತಿಯಾಗಿ ದಾಟಿಸುವಲ್ಲಿಚಿತ್ರ ಯಶಸ್ವಿಯಾಗುವುದಿಲ್ಲ. ಹಾಗಾಗಿಯೇ, ಚಿತ್ರ ನೋಡಿ ಹೊರ ಬಂದಾಗ ನಿಮಗೆ ಮನಸ್ಸು ಭಾರವೂ ಆಗುವುದಿಲ್ಲ, ಹಗುರವೂ ಆಗುವುದಿಲ್ಲ.
ಚಿತ್ರದ ನಾಯಕ ಅರ್ಜುನ್ ಗೌಡ (ಪ್ರಜ್ವಲ್ ದೇವರಾಜ್) ಸುದ್ದಿವಾಹಿನಿಯ ಒಡತಿ ಜಾನಕಿ (ಸ್ಪರ್ಶ ರೇಖಾ) ಅವರ ಏಕೈಕ ಪುತ್ರ. ಆಗಾಗ ಅಮ್ಮ-ಮಗನ ಮಧ್ಯೆ ಜನರೇಷನ್ ಗ್ಯಾಪ್ ಜಗಳ. ದೊಡ್ಡ ಉದ್ಯಮಿ (ರಾಜ್ ದೀಪಕ್ ಶೆಟ್ಟಿ) ಮಗಳು ಜಾಹ್ನವಿ (ಪ್ರಿಯಾಂಕಾ ತಿಮ್ಮೇಶ್) ಮತ್ತು ಅರ್ಜುನ್ ಮಧ್ಯೆ ಅಮರ ಪ್ರೇಮ. ಜಾಹ್ನವಿ ತಂದೆ ಒಪ್ಪಲ್ಲ. ಹಲವು ತಿರುವು ಘಟಿಸಿ ಜಾಹ್ನವಿ ಮದುವೆ ಎನ್‌ಆರ್‌ಐಯೊಂದಿಗೆ ಆಗುತ್ತದೆ. ಇದೇ ದುಃಖದಲ್ಲಿಮನೆ ತೊರೆದ ಅರ್ಜುನ್ ಗೌಡ ಮಂಗಳೂರು ಸೇರುತ್ತಾನೆ; ಲೋಕಲ್ ಗೂಂಡಾಗಳು ಜತೆಯಾಗುತ್ತಾರೆ. ಮಗನಿಗೆ ಹೀಗೆ ಆಯ್ತಲ್ಲಅಂತ ತಾಯಿ ಉದ್ಯಮಿಯ ವ್ಯಾಪಾರವನ್ನು ತನ್ನ ವರದಿಗಾರರಿಂದ ಜಾಲಾಡಿದಾಗ ಸಮಾಜಘಾತಕಶಕ್ತಿ ಖಳನಾಯಕ(ರಾಹುಲ್ ದೇವ್) ಅವರ ಜತೆ ಉದ್ಯಮಿಯ ಸಂಪರ್ಕವಿರುವುದು ಗೊತ್ತಾಗುತ್ತದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವಿಲನ್, ಜಾನಕಿಯನ್ನು ಕೊಲ್ಲಲು ಕರಾವಳಿಯ ಡಾನ್‌ಗೆ ಹೇಳುತ್ತಾನೆ. ಜಾನಕಿಯನ್ನು ಯಾರು ಕೊಲ್ಲುತ್ತಾರೆ? ಆ ಸುಪಾರಿ ಕಿಲ್ಲರ್ಸ್ ಯಾರು? ಕೊಲೆ ಯತ್ನ ಕೇಸ್‌ನಲ್ಲಿಅರ್ಜುನ್ ಗೌಡ ಯಾಕೆ ಜೈಲು ಪಾಲಾಗುತ್ತಾನೆ? ಕೊನೆಗೆ ಜಾಹ್ನವಿ ಏನಾದಳು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಸಿನಿಮಾ ನೋಡಬೇಕು.
ಪ್ರಜ್ವಲ್ ದೇವರಾಜ್ ಹಾಗೂ ‘ಸ್ಪರ್ಶ’ ರೇಖಾ ಅವರು ತಮಗೆ ವಹಿಸಿರುವ ಕೆಲಸವನ್ನು ನೀಟ್ ಆಗಿ ಮಾಡಿದ್ದಾರೆ. ಫೈಟಿಂಗ್ ದೃಶ್ಯಗಳಲ್ಲಿಪ್ರಜ್ವಲ್ ಪವರ್‌ಫುಲ್ ಆಗಿ ಕಾಣಿಸುತ್ತಾರೆ. ಸಿನಿಮಾದಲ್ಲಿಹಾಸ್ಯನಟ ಸಾಧು ಕೋಕಿಲ ಹಾಗೂ ಕಾಮಿಡಿ ಕಿಲಾಡಿಯಂಥ ನಟರಿದ್ದೂ ಪ್ರೇಕ್ಷ ಕರು ನಗದಿದ್ದರೆ ಅದು ಯಾರ ತಪ್ಪು? ಖಳನಾಯಕ ರಾಹುಲ್ ದೇವ್‌ಗೆ ಹೆಚ್ಚು ಕೆಲಸವಿಲ್ಲ.
ಧರ್ಮೇಶ್ ವಿಶ್ ಅವರ ಸಂಗೀತ ಮಾತ್ರ ತಲೆ ಗಿಂವ್ ಅನ್ನುವ ಹಾಗಿದೆ! ಕ್ಯಾಮೆರಾ ವರ್ಕ್ ಓಕೆ. ಸಂಭಾಷಣೆ ಅಲ್ಲಲ್ಲಿಹರಿತವಾಗಿದೆ. ಅರ್ಜುನ್ ಗೌಡರದ್ದು ಮಧ್ಯಂತರವರೆಗೆ ‘ಸುದೀರ್ಘ’ ಪಯಣ. ಸೆಕೆಂಡ್ ಹಾಫ್ ಕೂಡ ಹೆಚ್ಚು ಕಡಿಮೆ ಹಾಗೆಯೇ. ಇಷ್ಟಾಗಿಯೂ ಆ್ಯಕ್ಷ ನ್ ಪ್ರಿಯರಿಗೆ ಸಿನಿಮಾ ಇಷ್ಟವಾಗಬಹುದು.
ಚಿತ್ರ: ಅರ್ಜುನ್ ಗೌಡ
ನಿರ್ದೇಶನ: ಶಂಕರ್. ನಿರ್ಮಾಪಕ: ರಾಮು.
ತಾರಾಗಣ: ಪ್ರಜ್ವಲ್ ದೇವರಾಜ್, ಪ್ರಿಯಾಂಕ ತಿಮ್ಮೇಶ್, ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧು ಕೋಕಿಲ ಮತ್ತಿತರರು.
(ಈ ಲೇಖನವು ವಿಜಯ ಕರ್ನಾಟಕ ಜ.1, 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ