ಶುಕ್ರವಾರ, ಡಿಸೆಂಬರ್ 5, 2014

ಜಯಂತಿಗಳಿಗೆ ವ್ಯಾಖ್ಯಾನ, ಇದ್ಯಾವ ಮೋದಿ ವಿಧಾನ?

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಾಕಿರುವ ಇತ್ತೀಚಿನ ಟ್ರೆಂಡ್ ಎಂದರೆ ಮಹಾಪುರುಷರ ಜಯಂತಿ ಹಾಗೂ ನಿರ್ಣಾಯಕ ಇಸ್ವಿಗಳೊಂದಿಗೆ ಅಭಿಯಾನವೊಂದನ್ನು ತಳುಕು ಹಾಕುತ್ತಿರುವುದು. ಗಾಂಧಿ ಜಯಂತಿ ಸ್ವಚ್ಛ ಭಾರತದ ಬದಟಛಿತೆಗಿರಲಿ ಎಂದು ಬ್ರಾಂಡ್ ಮಾಡಿದ್ದಾರೆ. ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಮರಳಿದ ೧೯೧೫ರ ಇಸ್ವಿ ಇಟ್ಟುಕೊಂಡು, ೨೦೧೫ರಲ್ಲಿ ಅದಕ್ಕೆ ನೂರು ವರ್ಷಗಳಾಗುತ್ತವೆ ಎನ್ನುತ್ತ ತಾಯ್ನೆಲದಿಂದ ದೂರವಿರುವ ಅನಿವಾಸಿಗಳ ಒಳಗೊಳ್ಳುವಿಕೆಗೆ ಏನೋ ಯೋಜನೆ ಹರವಿಡುತ್ತಾರೆ. ಜೆಪಿ ಜನ್ಮ ದಿನಾಚರಣೆಯಂದು ಸಂಸದರ ಗ್ರಾಮ ದತ್ತು ಯೋಜನೆಗೆ ಚಾಲನೆ ಕೊಡುತ್ತಾರೆ. ಬಿಜೆಪಿ ಸರ್ಕಾರವೆಂದರೆ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಹೀಗೆ ಕೆಲ ಮಹನೀಯರನ್ನಷ್ಟೇ ಸಡಗರದಿಂದ ನೆನಪಿಸಿಕೊಂಡೀತು ಎಂದುಕೊಂಡಿದ್ದ ರಾಜಕೀಯ ವಿರೋಧಿಗಳಿಗೆ ಹಾಗೂ ಮೋದಿಯ ಕಟ್ಟರ್ ಬೆಂಬಲಿಗರಿಗೆ ಸಮಾನ ರೀತಿಯಲ್ಲಿ ಆಶ್ಚರ್ಯ ಹುಟ್ಟಿಸಿರುವ ಈ ಹೊಸ ಐಡಿಯಾದ ಜಾಯಮಾನ ಏನಿದ್ದಿರಬಹುದು?


----



ಮೊದಲಿಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ, ನಂತರ ಮಹಾತ್ಮ ಗಾಂಧಿ ಜಯಂತಿ, ಜೆಪಿ ಜನ್ಮದಿನಾಚರಣೆ
ಇದೀಗ ನೆಹರು ಮತ್ತು ಇಂದಿರಾ ಗಾಂಧಿ ಜಯಂತಿ!
ಏನೆಂದರೆ, ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು ನಾಲ್ಕೈದು ತಿಂಗಳಲ್ಲಿ ಈ ಜಯಂತಿಗಳಿಗೆಲ್ಲ ಹೇಗೆ ಟ್ವಿಸ್ಟ್ ಕೊಡುತ್ತಿದ್ದಾರೆ ನೋಡಿ. ಶಿಕ್ಷಕರ ದಿನಾಚರಣೆಯಲ್ಲಿ ಇಡೀ ದೇಶಾದ್ಯಂತ ಮಕ್ಕಳ ಜತೆ ಸಂವಾದ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರೆ, ಮಹಾತ್ಮ ಗಾಂಧಿ ಜಯಂತಿಯಂದು ತಮ್ಮ ‘ಸ್ವಚ್ಛ ಭಾರತ ಆಂದೋಲನ’ಕ್ಕೆ ಗುರಿಯಾಗಿಸಿಕೊಂಡರು. ಒಂದು ಪೀಳಿಗೆಯನ್ನು ಬಹುವಾಗಿ ಕಾಡಿದ ಮತ್ತು ಪ್ರೇರೇಪಿಸಿದ ಜಯಪ್ರಕಾಶ್ ನಾರಾಯಣ್
ಅವರ ಜಯಂತಿಯಂದು ‘ಸಂಸದ ಆದರ್ಶ ಗ್ರಾಮ ಯೋಜನೆ’ ಪ್ರಕಟಿಸುವ ಮೂಲಕ ಅವರ ಜನ್ಮ ದಿನಾಚರಣೆಗೂ ಹೊಸ
ಆಯಾಮ ಕೊಟ್ಟರು. ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು, ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಜಯಂತಿಯನ್ನು ಸ್ವಚ್ಛ ಭಾರತ ಆಂದೋಲನ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲು ಅವರು ಹಿಂಜರಿಯುತ್ತಿಲ್ಲ ಎಂಬುದು! ಇದು ಕಾಂಗ್ರೆಸಿಗರಿಗೆ ಆಶ್ಚರ್ಯ ತರುವುದು ಸಹಜವಾದರೂ ಸ್ವತಃ ಬಿಜೆಪಿಯವರಿಗೆ ಮೋದಿಯ
ನಡೆ ಹುಬ್ಬೇರಿಸುವಂತೆ ಮಾಡಿದೆ. ಮೋದಿ ಎಲ್ಲ ರಾಷ್ಟ್ರೀಯ ನಾಯಕರ ಜಯಂತಿಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಆದರೆ
ಅದು ಒಳ್ಳೆಯ ಕೆಲಸಕ್ಕಾಗಿ ಎನ್ನುವುದಕ್ಕಾಗಿ ಅವರ ಈ ನಡೆಗೆ ಸ್ವಾಗತವೂ ದೊರೆಯುತ್ತಿದೆ.
ಅದೇನೆ ಇರಲಿ. ಮೋದಿಯ ಎಷ್ಟೇ ಪ್ರಬಲ ವಿರೋಧಿಗಳಾದರೂ ಸದ್ಯದ ಮಟ್ಟಿಗೆ ಮೋದಿ ಸಾಗುತ್ತಿರುವ ದಿಕ್ಕು ಮತ್ತು ಅವರು ಕೈಗೊಳ್ಳುತ್ತಿರುವ ನಿರ್ಣಯಗಳ ಬಗ್ಗೆ ತೀವ್ರ ಅಭಿಮಾನ ವ್ಯಕ್ತಪಡಿಸದಿದ್ದರೂ, ಪ್ರಬಲ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂಬುದಂತೂ ನಿಜ. ನಾವು ಇಷ್ಟು ದಿನ ಎಲ್ಲ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ ಮತ್ತು ಪುಣ್ಯ ತಿಥಿಗಳನ್ನು ಆಚರಿಸಿಕೊಂಡು ಬರುತ್ತಿರುವುದನ್ನು ನೋಡಿದ್ದೇವೆ. ಅದು ತುಂಬಾ ಕ್ಲೀಷೆ ಮತ್ತು ರೂಟಿನ್ ಆಗಿರುವಂಥದ್ದಾಗಿತ್ತು. ಸರ್ಕಾರಿ ನೌಕರರಿಗೆ ಮತ್ತೊಂದು ರಜೆ. ನಾಯಕರಿಗೆ ಒಂದೆಡೆ ಸೇರಿ ಒಂದಿಷ್ಟು ಮಾತುಕತೆಯಾಡಲು ಸಿಗುವ ವೇಳೆ. ಇವಿಷ್ಟು ಬಿಟ್ಟು ಬೇರೇನು ಇತ್ತು ಹೇಳಿ? ಆದರೆ, ಮೋದಿ ಮಾತ್ರ ಜನ್ಮ ದಿನಾಚರಣೆಯ ನೆಪದಲ್ಲಿ ದೇಶಕ್ಕೆ ಒಂದಿಷ್ಟು ಉಪಯೋಗವಾಗುವ ಕೆಲಸ ಮಾಡಲು ಶ್ರೀಸಾಮಾನ್ಯನಿಂದ ಹಿಡಿದು ಎಲ್ಲರೂ ಒಳಗೊಳ್ಳುವಂತೆ ಮಾಡುತ್ತಿದ್ದಾರೆ! ಹಾಗಾಗಿಯೇ ಇದನ್ನು ಮೋದಿ ಅವರ ‘ಜಯಂತಿ ರಾಜಕೀಯ ನಡೆ’ ಎಂದು ವಿಶ್ಲೇಷಿಸಬಹುದೇನೋ?
ಇತ್ತೀಚಿನ ದಿನಗಳಲ್ಲಿ ಎಲ್ಲ ರಾಷ್ಟ್ರೀಯ ನಾಯಕರನ್ನು ಕೆಲವು ಪಕ್ಷಗಳು, ಕೆಲವು ಜಾತಿಗಳು, ಸಮುದಾಯಗಳಿಗೆ ತಮಗೇ ಸಂಬಂಧಿಸಿದ್ದವರು ಎಂಬಂತೆ ವರ್ತಿಸುತ್ತಿವೆ. ಈ ಮಿಥ್ ಅನ್ನು ತೊಡೆದು ಹಾಕಿ, ರಾಷ್ಟ್ರೀಯ ನಾಯಕರು ಯಾರೇ ಆಗಿರಲಿ
ಅವರು ದೇಶದ ಹೆಮ್ಮೆ ಎಂಬ ಪ್ರಜ್ಞೆಯನ್ನು ನಾಜೂಕಾಗಿ ಬಿತ್ತುತ್ತಿದ್ದಾರೆ. ಹಾಗೆ ನೋಡಿದರೆ ಅವರಿಗೂ ಈ ಅನಿವಾರ್ಯತೆ
ಇದೆ. ಒಂದೂ ಕಾಲು ಶತಮಾನ ಇತಿಹಾಸವಿರುವ ಕಾಂಗ್ರೆಸ್ ಗೆ ಸಹಜವಾಗಿಯೇ ನಾಯಕರನ್ನು ಆರಾಧಿಸುವ, ಅವರನ್ನು
ವೈಭವೀಕರಿಸುವ ಅಗಾಧ ಸಾಧ್ಯತೆಗಳಿವೆ. ಅಂಥ ಸಾಧ್ಯತೆಗಳು ಬಿಜೆಪಿಗೆ ಇಲ್ಲ. ದೀನ್ ದಯಾಳ್ ಉಪಾಧ್ಯಾಯ, ಶ್ಯಾಮ್
ಪ್ರಸಾದ್ ಮುಖರ್ಜಿ, ವೀರ ಸಾವರ್ಕರ್ ಇವರನ್ನೆಲ್ಲ ಒಂದು ಹಂತದವರೆಗೆ ರಿಬ್ರಾಂಡ್ ಮಾಡಬಹುದಾದರೂ ಅಲ್ಲಿ ಸೈದಾಟಛಿಂತಿಕ ಚರ್ಚೆಗಳ ಗದ್ದಲವೇ ಹೆಚ್ಚಾಗಿಬಿಡುವ ಅಪಾಯವಿದೆ. ಬಹುಶಃ ಈ ಕಾರಣದಲ್ಲೇ ಮೋದಿ ‘ಎಲ್ಲರನ್ನೂ, ಎಲ್ಲ ವಿಚಾರಧಾರೆಯವರನ್ನೂ ಒಳಗೊಳ್ಳಬಲ್ಲ’ ವ್ಯಕ್ತಿತ್ವಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಇದಕ್ಕೆ ವಿರೋಧಿ ಪಾಳೆಯಕ್ಕಿಂತ ಹೆಚ್ಚಾಗಿ, ಸ್ವಪರಿವಾರದವರ ಪ್ರತಿಕ್ರಿಯೆಗಳು ಹೇಗೆ ಬರಬಹುದು ಎಂಬ ಆಧಾರದಲ್ಲಿಯೇ ಮೋದಿಯವರ ಮುಂದಿನ ‘ಬ್ರಾಂಡಿಂಗ್’ ನೆರವೇರಲಿದೆ.
ಈ ಬ್ರಾಂಡ್ ದರ್ಬಾರ್‌ನಲ್ಲಿ ಮೋದಿ ಚಾಕಚಕ್ಯತೆಯನ್ನು ಗಮನಿಸಬೇಕು. ಒಂದು ವ್ಯಕ್ತಿ ಇಲ್ಲವೇ ವಸ್ತು ಹಲವು ಅಂಶಗಳನ್ನು ಪ್ರತಿನಿಧಿಸುವಂಥದ್ದು. ಅದರಲ್ಲಿ ಕೆಲವು ತಕರಾರಿಗೆ- ವಿವಾದಗಳಿಗೆ ಕಾರಣವಾಗಿದ್ದಿರಬಹುದು. ಆದರೆ ಅದನ್ನೇ ಮುಂದಿರಿಸಿಕೊಂಡು ಆ ವ್ಯಕ್ತಿ-ವಸ್ತುವನ್ನೇ ದೂರ ಮಾಡಿ, ಆ ಮೂಲಕ ಪರೋಕ್ಷವಾಗಿ ಆ ವ್ಯಕ್ತಿ-ವಿಷಯಗಳಲ್ಲಿ ಆಸಕ್ತಿ ಇರುವ ಜನಸಮೂಹದಿಂದಲೂ ದೂರವಾಗಿಬಿಡುವುದು ಬುದಿಟಛಿವಂತಿಕೆ ಅಲ್ಲ ಎಂಬುದನ್ನು ಗುಜರಾತ್‌ನ ವ್ಯಾಪಾರಿ
ಮಿದುಳು ಅರ್ಥಮಾಡಿಕೊಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಹಾಗಾಗಿಯೇ ಸೈದಾಟಛಿಂತಿಕವಾಗಿ ಗಾಂಧೀಜಿಯವರನ್ನು ಆರ್
ಎಸ್‌ಎಸ್ ಹಲವು ವಿಚಾರಗಳಲ್ಲಿ ವಿರೋಧಿಸಿಕೊಂಡು ಬಂದಿದ್ದರೂ ಅದೇ ಗಾಂಧಿಯವರ ಜನ್ಮದಿನವನ್ನು ಒಂದಂಶಕ್ಕೆ
ಬ್ರಾಂಡ್ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಗಾಂಧೀಜಿಯವರನ್ನು ಸೆಕ್ಯುಲರ್- ಕಮ್ಯುನಲ್ ಚರ್ಚೆಯ
ಚೌಕಟ್ಟಿನಲ್ಲಿಟ್ಟು ಜನ್ಮೇಪಿ ಪರ-ವಿರೋಧ ಮಾಡಿಕೊಂಡಿರಬಹುದು. ಆದರೆ ಸ್ವಚ್ಛತೆ, ಗ್ರಾಮ ಸ್ವರಾಜ್ಯ ಇಂಥ ಕಲ್ಪನೆಗಳೆಲ್ಲ ಕಮ್ಯುನಿಸ್ಟರಿಗೂ ಕೇಸರಿ ಪಡೆಯವರಿಗೂ ಒಟ್ಟೊಟ್ಟಿಗೇ ಒಪ್ಪಿತವಾಗಬಲ್ಲ ಅಂಶ. ಬೇರೆ ಚೌಕಾಶಿ ಏಕೆ, ಗಾಂಧಿ ಎಂದರೆ ಸ್ವಚ್ಛತೆಗೆ ಆದರ್ಶ ಎಂದಿಟ್ಟುಕೊಳ್ಳೋಣ ಎಂಬ ಸರಳ ಸಂದೇಶ ತಲುಪಿಸಿರುವ ಮೋದಿ ಸೆಕ್ಯುಲರ್- ಕಮ್ಯುನಲ್ ಡಿಬೇಟ್‌ನ ಚಕ್ರವ್ಯೆಹದಿಂದ ಹೊರಬಂದು ನಕ್ಕಿದ್ದಾರೆ!
ಮುಂದಿನ ದಿನಗಳಲ್ಲಿ ಮೋದಿ ಇನ್ನಷ್ಟು ಇತಿಹಾಸ ಪುರುಷರನ್ನು ಬ್ರಾಂಡ್ ದರ್ಬಾರಿಗೆ ಸೇರಿಸಿಕೊಂಡಾರು. ಸೈದಾಟಛಿಂತಿಕವಾಗಿ ವಿರೋಧಿ ಗುಂಪಿನಲ್ಲಿರುವ ಇತಿಹಾಸ ಪುರುಷರೂ ಜಯಂತಿ ಸಂಭ್ರಮದ ಪರಿಧಿಗೆ ಬರಬಹುದೇನೋ? ಆದರೆ ಒಂದಂತೂ ನಿಶ್ಚಿತ. ಅಂಥ ಯಾವುದೇ ವ್ಯಕ್ತಿಗಳನ್ನು ಬ್ರಾಂಡ್ ಮಾಡುವಾಗ, ಅವರಲ್ಲಿನ ಯಾವ ವಿಚಾರ ತನ್ನ ಮಾತೃಸಂಸ್ಥೆಯ ವಿಚಾರಗಳಿಗೆ ಸರಿಹೊಂದುವುದೋ, ಅದನ್ನಷ್ಟೇ ವೈಭವೀಕರಿಸುವಕೆಲಸವನ್ನಂತೂಮಾಡಿಯೇ
ಮಾಡುತ್ತಾರೆ.
ಈಗಾಗಿರುವ ಕೆಲವು ಜಯಂತಿಗಳ ಆಚರಣೆಯನ್ನು ಮುಂದಿಟ್ಟುಕೊಂಡು ನೋಡಿದರೆ ಮೋದಿ ಮುಂದೆ ಇನ್ನೂ ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ನಾಯಕರ ಜನ್ಮದಿನಾಚರಣೆಗಳನ್ನು ಮತ್ತಷ್ಟು ವೈವಿಧ್ಯದಿಂದ ಆಚರಿಸುವ
ಸಾಧ್ಯತೆಗಳಿವೆ. ಹಾಗೆಂದು ಇವು ಕೇವಲ ಉದಾತ್ತತೆ ಪ್ರತೀಕ ಮಾತ್ರವೇ? ಇಲ್ಲ. ದೀರ್ಘಾವಧಿಯಲ್ಲಿ ಬಿಜೆಪಿಗೆ ಲಾಭ ತರಬಲ್ಲ
ಸಾಧನವನ್ನಾಗಿಯೂ ಇದನ್ನು ಬಳಸಿಕೊಳ್ಳಬಹುದು. ಪ್ರಾದೇಶಿಕವಾಗಿ ತಳ ಊರುವುದಕ್ಕೆ, ಆ ಪ್ರದೇಶದ ಜನರನ್ನು
ತಮ್ಮವರನ್ನಾಗಿಸಿಕೊಳ್ಳುವುದಕ್ಕೆ ಇರುವ ಉತ್ತಮ ಮಾರ್ಗ ಎಂದರೆ ಸ್ಥಳೀಯ ಐಕಾನ್‌ಗಳನ್ನು ಗೌರವಿಸುವುದು. ಉದಾಹರಣೆಗೆ ಕೇರಳದಲ್ಲಿ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಅಭಿಯಾನವೊಂದಕ್ಕೆ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡರೆ ಸಹಜವಾಗಿಯೇ ಬಿಜೆಪಿಗೂ ಸ್ವಲ್ಪಮಟ್ಟದ ಶಹಭಾಸ್‌ಗಿರಿ, ಮೆಚ್ಚುಗೆಗಳು
ಸಂದಾಯವಾಗುತ್ತವೆ. ಹೀಗೆ ಬೇರೆ ಬೇರೆ ವಿಚಾರ ಲಹರಿಯವರನ್ನುಸೀಮಿತ ಚೌಕಟ್ಟಿನಲ್ಲಿಯೇ ತನ್ನವರೆಂದು ಸ್ವೀಕರಿಸಿ, ಅವರ ಜನ್ಮದಿನಗಳಿಗೆ ಅಭಿಯಾನದ ರೂಪ ಕೊಟ್ಟರೂ ಅಷ್ಟರಮಟ್ಟಿಗೆ ಬಿಜೆಪಿಗೆ ಆ ಪ್ರಾದೇಶಿಕ ನೆಲೆಗಳಲ್ಲಿ ಒದಗಬಹುದಾದ ಸ್ವೀಕೃತ ಮನೋಭಾವವೂ ರೂಪುಗೊಳ್ಳುತ್ತದೆ. ಅಂಬೇಡ್ಕರ್, ರವಿಂದ್ರನಾಥ್ ಠಾಗೋರ್, ಜ್ಯೋತಿ ಬಸು, ಸ್ವಾಮಿ ವಿವೇಕಾನಂದ, ಮದರ್ ತೆರೆಸಾ, ಡಾ. ಎಪಿಜೆ ಅಬ್ದುಲ್ ಕಲಾಂ, ಇಂದಿರಾ ಗಾಂಧಿ, ನೆಹರು, ಜೆ.ಎನ್. ಟಾಟಾ, ಗುರು ನಾನಕ್, ಅಬ್ದುಲ್ ಗಫಾರ್ ಖಾನ್, ಬಸವ, ಬುದಟಛಿ, ಕಬೀರ್... ಹೀಗೆ ನಾನಾ ಮೇರು ವ್ಯಕ್ತಿಗಳ ದಿನಾಚರಣೆಯನ್ನು ಅವರ ವ್ಯಕ್ತಿತ್ವದ ಒಂದು ಭಾಗವನ್ನು ಸಮಗ್ರಗೊಳಿಸಿ ರಾಷ್ಟ್ರೀಯ ಹಿತಾಸಕ್ತಿಗೆ ಅನುವಾಗುವಂತೆ ಕಾರ್ಯಕ್ರಮ ರೂಪಿಸಿಕೊಳ್ಳಲು ಮುಂದಾಗಬಹುದು. ಆಗ ಸಹಜವಾಗಿಯೇ ಜನರಲ್ಲೂ ಮೋದಿಯ ಭಿನ್ನತೆಗೆ ಒಂದಿಷ್ಟು ಮೆಚ್ಚುಗೆ ವ್ಯಕ್ತವಾಗಿ ಅದು ಅವರ ಪ್ರತಿನಿಧಿಸುವ ಪಕ್ಷಕ್ಕೂ ಒಳ್ಳೆ ಯ ಮೈಲೆಜ್ ತಂದುಕೊಡಬಲ್ಲದು. ಅದಾಗಲೇ, ಸ್ವತಃ ಶ್ರಮವರಿಯದ ವರ್ಕೊಹಾಲಿಕ್ ಎಂಬ ಇಮೇಜ್ ಪಡೆದುಕೊಂಡಿರುವ ಮೋದಿ, ಆ ವರ್ಚಸ್ಸಿಗೆ ದೀರ್ಘಾವಧಿಯಲ್ಲಿ ನ್ಯಾಯ ದೊರಕಿಸಬೇಕೆಂದರೆ ಅವರೊಂದಿಗಿನ
ಸಂಸದರೂ ಕೆಲಸ ಮಾಡಬೇಕು ತಾನೇ?
ಒಂದಂಶದ ನಿರ್ದಿಷ್ಟ ಉದ್ದೇಶವನ್ನು ಹೊತ್ತ ಮಹಾಪುರುಷರ ಜನ್ಮದಿ ಾಚರಣೆಗಳು ವಾಸ್ತವದಲ್ಲಿ ಸಂಸದರ ಮೇಲೆ ಜವಾಬ್ದಾರಿಯೊಂದನ್ನು ಹೊರೆಸುತ್ತವೆ. ಉದಾಹರಣೆಗೆ, ಮುಂದಿನ ವರ್ಷ ಜಯಪ್ರಕಾಶ ನಾರಾಯಣರ ಜನ್ಮದಿನಾಚರಣೆ ಬರುತ್ತಲೇ ಮಾಧ್ಯಮವು, ಸಂಸದರು ದತ್ತು ತೆಗೆದುಕೊಂಡ ಗ್ರಾಮಗಳ ಸ್ಥಿತಿ ಸುಧಾರಿಸಿದೆಯೇ ಇಲ್ಲವೇ ಎಂಬ ವರದಿ- ವಿಶ್ಲೇಷಣೆಗಳಿಗೆ ಗಮನ ಕೊಡುತ್ತದೆ. ಈ ಬಗೆಯಲ್ಲಿ ಕೆಲವು ಕೆಲಸಗಳನ್ನು ಮಾಡಲೇಬೇಕಾದ ಒತ್ತಡವನ್ನು, ನೆಪ ಹೇಳಲಿಕ್ಕಾಗದ ಪರಿಸ್ಥಿತಿಯನ್ನು ಮೋದಿ ತಮ್ಮ ಸಹೋದ್ಯೋ ಗಿಗಳ ಪಾಲಿಗೆ ನಿರ್ಮಿಸುವ ಬುದಿಟಛಿವಂತ ನಡೆ ಇಟ್ಟಿದ್ದಾರಾ?
ಮೋದಿ ಅವರ ರಾಷ್ಟ್ರೀಯ ನಾಯಕರ ಜನ್ಮದಿನಾಚರಣೆ ಕಾರ್ಯಸೂಚಿಗಳು ಇನ್ನಷ್ಟು ಪ್ರಭಾವಶಾಲಿಯಾಗಬೇಕಾದರೆ
ಅದು ಆ ವರ್ಷಕ್ಕೆ ಮಾತ್ರ ಸೀಮಿತವಾಗಬಾರದು. ಜೆಪಿ ಜಯಂತಿಯಂದು ಘೋಷಿಸಿದ ‘ಸಂಸದ ಆದರ್ಶ ಗ್ರಾಮ
ಯೋಜನೆ’ ಮುಂದಿನ ವರ್ಷ ಬರುವಷ್ಟರಲ್ಲಿ ಮತ್ತೊಂದು ಯೋಜನೆಗೆ ವೇದಿಕೆಯಾಗಬಾರದು. ಈಗ ಆರಂಭಿಸಿದ
ಪ್ರಯತ್ನ ಮುಂದುವರಿಯುತ್ತಲೇ ಇದ್ದರೆ ಅದಕ್ಕೊಂದು ಸಂಪೂರ್ಣತೆ ದಕ್ಕುತ್ತದೆ ಮತ್ತು ಅದು ವಿಸ್ತಾರಗೊಳ್ಳುತ್ತದೆ.
ಯಾಕೆಂದರೆ, ಈ ಹಿಂದಿನ ಸರ್ಕಾರಗಳು ತುಂಬಾ ಉತ್ಸಾಹದಲ್ಲಿ ಯೋಜನೆಗಳನ್ನು ಪ್ರಕಟಿಸುತ್ತಿದ್ದವು ಮತ್ತು ಅಷ್ಟೇ
ಉದಾಸೀನತೆಯಿಂದ ಮರೆಯುತ್ತಿದ್ದವು. ಈ ಪ್ರಕ್ರಿಯೆ ಮತ್ತೆ ಪುನಾರ್ವತನೆಯಾಗುತ್ತಿತ್ತೇ ಹೊರತು ಯೋಜನೆ ಫಲಪ್ರದ
ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮೋದಿ ಅವರು ಅದೇ ರೀತಿ ನಡೆದು ಕೊಂಡರೆ ಅವರು ಈ ಹೊಸ ಪ್ರಯತ್ನಕ್ಕೆ ಅರ್ಥವೇ
ಇರುವುದಿಲ್ಲ. ಹತ್ತರೊಳಗೆ ಹನ್ನೊಂದಾಗುತ್ತದಷ್ಟೇ.
ಚುನಾವಣೆ ವೇಳೆ ಪಕ್ಕಾ ಒಂದು ಪಕ್ಷದ ವಕ್ತಾರ ಹಾಗೂ ಅದು ಸಾರುವ ಸಿದಾಟಛಿಂತದ ಪ್ರಬಲ ಪ್ರತಿಪಾದಕರಂತೆ
ಕಾಣುತ್ತಿದ್ದ ಮೋದಿ, ಪ್ರಧಾನಿಯಾದ ಮೇಲೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತುಗಳನ್ನಾಡುತ್ತಿದ್ದಾರೆ. ಇದು
ಅವರನ್ನು ವಿರೋಧಿಸುತ್ತ ಬಂದಿದ್ದ ಕೆಲವರಲ್ಲೂ ಒಂದಿಷ್ಟು ಸಹಾನುಭೂತಿಗೆ ಕಾರಣವಾಗಿದೆ. ಆದರೆ, ಒಬ್ಬ ವ್ಯಕ್ತಿಯ
ಅಧಿಕಾರ ವಿಶ್ಲೇಷಣೆಗೆ ಐದಾರು ತಿಂಗಳು ತುಂಬಾ ಚಿಕ್ಕದುಇನ್ನೂ ಒಂದಿಷ್ಟು ಸಮಯ ಕೊಟ್ಟು ನೋಡಿದರೆ ಅವರ
ನಿಜವಾದ ಕಾರ್ಯಸೂಚಿ ಗೋಚರವಾಗಬಹುದು. ಆದರೆ, ಸದ್ಯದ ಮಟ್ಟಿಗೆ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ
ಕ್ಲೀಷೆಯನ್ನು ತೊಡೆದು ಹಾಕಿ ಅದಕ್ಕೊಂದು ನವ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಅದಕ್ಕಾದರೂ ನಾವು ಅವರನ್ನು ಮೆಚ್ಚಲೇಬೇಕು.

(ಈ ಲೇಖನ ಕನ್ನಡಪ್ರಭದ 2014ರ ಅಕ್ಟೋಬರ್ 15 ಸಂಚಿಕೆಯಲ್ಲಿ ಪ್ರಕಟವಾಗಿದೆ)

ಕಾಮೆಂಟ್‌ಗಳಿಲ್ಲ: