ಸೋಮವಾರ, ಆಗಸ್ಟ್ 31, 2020

Abe Shinzo: ಭಾರತದ ಗೆಳೆಯ ಶಿಂಜೊ ಎಂದೆಂದೂ ಜತೆಯಾಗಿರಿ

ಜಪಾನ್‌ನ ಜನಪ್ರಿಯ ಪ್ರಧಾನಿ ಅಬೆ ಶಿಂಜೊ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯಕ್ಕೆ ಹೊಸ ರೂಪ ನೀಡಿ, ಉಭಯ ರಾಷ್ಟ್ರಗಳ ಜನರ ಪ್ರೀತಿಗೆ ಶಿಂಜೊ ಪಾತ್ರರಾಗಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ


ಬಹುಶಃ ಭಾರತೀಯರಿಗೆ 'ಅಬೆ ಶಿಂಜೊ' ಹೆಸರು ಗೊತ್ತಿರುವಷ್ಟು ಜಪಾನ್‌ನ ಇನ್ನಾವುದೇ ಪ್ರಧಾನಿ ಅಥವಾ ನಾಯಕರ ಹೆಸರು ಪರಿಚಿತವಿಲ್ಲ. ಭಾರತದೆಡೆಗೆ ಅವರು ಹೊಂದಿರುವ ಕಾಳಜಿ ಮತ್ತು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಅವರು ತುಡಿಯುತ್ತಿದ್ದ ರೀತಿಯೇ ಭಾರತೀಯರ ಮೆಚ್ಚುಗೆಗೆ ಕಾರಣವಾಗಿತ್ತು. ವಿಶೇಷವಾಗಿ ಪ್ರಧಾನಿ ಮೋದಿ ಮತ್ತು ಪ್ರಧಾನಿ ಅಬೆ ನಡುವಿನ ಗೆಳೆತನ ಅಂತಾರಾಷ್ಟ್ರೀಯವಾಗಿ ಖ್ಯಾತಿಯಾಗಿತ್ತು.

ಜಪಾನ್‌ನ 'ಆಕ್ರಮಣಕಾರಿ'(Hawkish PM) ಹಾಗೂ ಸುದೀರ್ಘ ಕಾಲದ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ಅಬೆ ತಮ್ಮ ಹುದ್ದೆಯನ್ನು ತೊರೆಯುತ್ತಿದ್ದಾರೆ. ಕರುಳು ಉರಿಯೂತ ಕಾಯಿಲೆಯಿಂದ ಜರ್ಜರಿತವಾಗಿರುವ ಅಬೆ, ತಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲಎಂದು ಗೊತ್ತಾಗುತ್ತಿದ್ದಂತೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಈ ಹಿಂದೆಯೂ ಇದೇ ಕಾಯಿಲೆ ಕಾರಣಕ್ಕಾಗಿಯೇ ಅವರು ಪ್ರಧಾನಿ ಪಟ್ಟ ತೊರೆದು, ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಆದರೆ, ಈ ಬಾರಿ ಅವರು ರಾಜಕಾರಣದಿಂದ ವಿಮುಖರಾಗುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಹಾಗಾಗಿ, ಜಪಾನ್‌ ಪ್ರಧಾನಿ ಹುದ್ದೆಗೆ ಎಲ್‌ಡಿಪಿ(ಲಿಬರಲ್‌ ಡೆಮಾಕ್ರಾಟಿಕ್‌ ಪಾರ್ಟಿ)ಯಲ್ಲಿಹುಡುಕಾಟ ಶುರುವಾಗಿದೆ.

''ಅಧಿಕಾರಾವಧಿ ಪೂರ್ಣಗೊಳ್ಳಲು ಒಂದು ವರ್ಷ ಬಾಕಿ ಇರುವಾಗಲೇ ಮತ್ತು ಕೊರೊನಾ ಸಮಸ್ಯೆ ಮಧ್ಯೆಯೇ, ವಿವಿಧ ಕಾರ್ಯನೀತಿಗಳು ಜಾರಿ ಹಂತದಲ್ಲಿರುವಾಗಲೇ ಹುದ್ದೆ ತೊರೆಯುತ್ತಿರುವುದಕ್ಕೆ ನಾನು ಜಪಾನ್‌ ಜನರ ಕ್ಷಮೆ ಕೋರುತ್ತೇನೆ,'' ಎಂದು ಅಬೆ ಶಿಂಜೊ ತಮ್ಮ ನಿರ್ಧಾರ ಪ್ರಕಟಿಸುವಾಗ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕಕ್ಕೆ ಎಲ್ಲದೇಶಗಳು ತಲ್ಲಣಗೊಂಡಿವೆ. ಇದಕ್ಕೆ ಜಪಾನ್‌ ಕೂಡ ಹೊರತಾಗಿಲ್ಲ. ಇಂಥ ಸಂದರ್ಭದಲ್ಲಿಯಾವುದೇ ದೇಶದ ನಾಯಕತ್ವ ಬದಲಾವಣೆ ಜಾಣತನದ ನಿರ್ಧಾರವಲ್ಲ.


ಅಬೆ ಶಿಂಜೊ 'ದಿ ಪ್ರಿನ್ಸ್‌' ಎಂಬ ಖ್ಯಾತಿ ಪಡೆದಿದ್ದಾರೆ. ಜಪಾನಿಗರು ಅವರನ್ನು ಹಾಗೆ ಕರೆಯುತ್ತಾರೆ; ಅವರು ಇದ್ದದ್ದು ಹಾಗೆಯೇ. ಶಿಂಜೊ ಅವರಿಗೆ ರಾಜಕೀಯ ಹೊಸದೇನಲ್ಲ. ಅವರದ್ದು ರಾಜಕೀಯ ಕುಟುಂಬ. ಜಪಾನ್‌ನ ಟೊಕಿಯೊದಲ್ಲಿ1954ರ ಸೆಪ್ಟೆಂಬರ್‌ 12ರಂದು ಅಬೆ ಶಿಂಜೊ ದೇಶದ ಪ್ರಮುಖ ರಾಜಕೀಯ ಮನೆತನದಲ್ಲಿಜನಿಸಿದರು. ಶಿಂಜೊ ಅಜ್ಜ ನೊಬುಸ್ಕೆ ಕಿಶಿ(ತಾಯಿಯ ತಂದೆ) ಅವರು 1957ರಿಂದ 1960ರವರೆಗೂ ಜಪಾನ್‌ನ ಪ್ರಧಾನಿಯಾಗಿದ್ದರು. ಮುತ್ತಜ್ಜ ವಿಸ್ಕೌಂಟ್‌ ಯೋಶಿಮಾಸಾ ಒಶಿಮಾ ಅವರು ಇಂಪಿರೀಯಲ್‌ ಜಪಾನ್‌ ಸೇನೆಯಲ್ಲಿಜನರಲ್‌ ಆಗಿದ್ದರು. ಶಿಂಜೊ ಅವರ ತಂದೆ ಶಿಂಚೊರೊ ಅವರು ಪೆಸಿಫಿಕ್‌ ಯುದ್ಧ ವೇಳೆ ಪೈಲಟ್‌ ಆಗಿದ್ದರು. ಆ ಬಳಿಕ ಜಪಾನ್‌ನ ವಿದೇಶಾಂಗ ಸಚಿವರೂ ಆಗಿದ್ದರು. ಅಂದರೆ, ಅಬೆ ಶಿಂಜೊ ಅವರಿಗೆ ರಾಜಕೀಯ ರಕ್ತಗತವಾಗಿ ಬಂದಿರುವಂಥದ್ದು ಮತ್ತು ಸಹಜವಾಗಿಯೇ ಅವರು ಜಪಾನ್‌ನ ಉನ್ನತ ಸ್ಥಾನಕ್ಕೇರಲು ಇದು ಪ್ರಭಾವ ಬೀರಿದೆ. ಜನರೂ ಶಿಂಜೊ ಕುಟುಂಬದ ಮೇಲೆ ಅಪರಿಮಿತ ವಿಶ್ವಾಸವನ್ನು ಹೊಂದಿದ್ದಾರೆ. ಈಗಲೂ, ಜಪಾನ್‌ನ ಅತ್ಯಂತ ಜನಪ್ರಿಯ ನಾಯಕರೆಂದರೆ ಅಬೆ ಶಿಂಜೊ ಮಾತ್ರ.

ಅಬೆ ಅವರು ಸೈಕಾಯ್‌ ಪ್ರಾಥಮಿಕ ಶಾಲೆ, ಜ್ಯೂನಿಯರ್‌ ಮತ್ತು ಮಾಧ್ಯಮಿಕ ಶಾಲೆಯಲ್ಲಿಶಿಕ್ಷಣ ಪಡೆದರು. 1977ರಲ್ಲಿಸೈಕಾಯ್‌ ವಿಶ್ವವಿದ್ಯಾಲಯದಲ್ಲಿಸಾರ್ವಜನಿಕ ಆಡಳಿತ ಅಧ್ಯಯನ ಮಾಡಿದರು. ಜೊತೆಗೆ ಪಾಲಿಟಿಕಲ್‌ ಸೈನ್ಸ್‌ ವಿಷಯದಲ್ಲಿಪದವಿ ಸಂಪಾದಿಸಿದರು. ಬಳಿಕ ಅಮೆರಿಕಕ್ಕೆ ತೆರಳಿ ಸದರ್ನ್‌ ಕ್ಯಾಲಿಫೋರ್ನಿಯಾದ ಸ್ಕೂಲ್‌ ಆಫ್‌ ಪಬ್ಲಿಕ್‌ ಪಾಲಿಸಿಯಲ್ಲಿಸಾರ್ವಜನಿಕ ನೀತಿಗಳಿಗೆ ಸಂಬಂಧಿಸಿದಂತೆ ಅಧ್ಯಯನ ಕೈಗೊಂಡರು. 1979ರಲ್ಲಿಕೋಬೆ ಸ್ಟೀಲ್‌ನಲ್ಲಿಕೆಲಸ ಆರಂಭಿಸಿದರು. ಶೀಘ್ರವೇ ತಮ್ಮ ಆದ್ಯತೆ ಮತ್ತು ಆಸಕ್ತಿಗಳನ್ನು ಗುರುತಿಸಿಕೊಂಡ ಅಬೆ ಕೆಲಸ ತೊರೆದು 1982ರಲ್ಲಿರಾಜಕಾರಣಕ್ಕೆ ಧುಮುಕಿದರು. ಮೊದಲಿಗೆ ಅವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯಕಾರಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ, ಜಪಾನ್‌ ಪ್ರಮುಖ ರಾಜಕೀಯ ಪಕ್ಷ ಎಲ್‌ಡಿಪಿ ಜನರಲ್‌ ಕೌನ್ಸಿಲ್‌ನ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಮತ್ತು ಎಲ್‌ಡಿಪಿ ಸೆಕ್ರೆಟರಿ-ಜನರಲ್‌ಗೆ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

1991ರಲ್ಲಿತಮ್ಮ ತಂದೆಯ ಮರಣದ ನಂತರ 1993ರಲ್ಲಿಶಿಂಜೊ ಅವರು ಯಮಗುಶಿ ಪ್ರಾಂತ್ಯದ ಮೊದಲ ಜಿಲ್ಲೆಗೆ ಆಯ್ಕೆಯಾದರು. ಎಸ್‌ಎನ್‌ಟಿವಿ ಬಹು ಸದಸ್ಯರ ಜಿಲ್ಲೆಯಲ್ಲಿಚುನಾಯಿತರಾದ ನಾಲ್ಕು ಪ್ರತಿನಿಧಿಗಳಲ್ಲಿಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದರು. 1999ರಲ್ಲಿಅವರು ಸಾಮಾಜಿಕ ವ್ಯವಹಾರಗಳ ವಿಭಾಗದ ನಿರ್ದೇಶಕರಾದರು. 2000-2003ರ ವರೆಗೆ ಯೋಶಿರೆ ಮೋರಿ ಮತ್ತು ಜುನಿಚಿರೆ ಕೊಯಿಜುಮಿ ಸಂಪುಟದಲ್ಲಿಡೆಪ್ಯುಟಿ ಚೀಫ್‌ ಕ್ಯಾಬಿನೆಟ್‌ ಕಾರ್ಯದರ್ಶಿಯಾಗಿದ್ದರು. ನಂತರ ಅವರನ್ನು ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಆ ಬಳಿಕ ಅವರು ತಿರುಗಿ ನೋಡಲಿಲ್ಲ.

2006ರ ಏಪ್ರಿಲ್‌ 23ರಂದು ಅಬೆ ಅವರನ್ನು ಆಡಳಿತ ಪಕ್ಷ ಎಲ್‌ಡಿಪಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅದೇ ವರ್ಷ ಜುಲೈ 14ರಂದು ಜಪಾನ್‌ನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆಗ ಅವರಿಗೆ 52 ವರ್ಷ. 1941ರ ಬಳಿಕ ಜಪಾನ್‌ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಗರಿಮೆಗೆ ಪಾತ್ರರಾದರು. ಈಗ ಬಾಧಿಸುತ್ತಿರುವ ಕರುಳು ಊರಿಯೂತ ಕಾಯಿಲೆ 2007ರಲ್ಲೂಅಬೆ ಅವರನ್ನು ತೀವ್ರವಾಗಿ ಬಾಧಿಸಿತು. ಅದೇ ಕಾರಣಕ್ಕಾಗಿ ಅವರು ಆಗಲೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಶೀಘ್ರವೇ ಅದರಿಂದ ಗುಣಮುಖರಾಗಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರು ಎಂಟ್ರಿ ಕೊಟ್ಟಿದ್ದರು. 2012ರಲ್ಲಿಮತ್ತೆ ಅಬೆ ಜಪಾನ್‌ನ ಪ್ರಧಾನಿಯಾದರು. 2014 ಮತ್ತು 2017ರಲ್ಲಿಮರು ಆಯ್ಕೆಯಾದರು. ಇಷ್ಟೂ ವರ್ಷಗಳಲ್ಲಿಜಪಾನ್‌ನಲ್ಲಿಅಬೆ ಅತ್ಯಂತ ಜನಪ್ರಿಯ ಪ್ರಧಾನಿಯಾಗಿಯೇ ಗುರುತಿಸಿಕೊಂಡರು. ತಮ್ಮದೇ ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿ(ಅಬೆನಾಮಿಕ್ಸ್‌)ಗಳಿಂದಾಗಿ ಮನೆ ಮಾತಾದರು.

ಅಬೆ ಶಿಂಜೊ ಅವರ ಬಗ್ಗೆ ಮಾತನಾಡುವಾಗ ಭಾರತ ಮತ್ತು ಜಪಾನ್‌ ನಡುವಿನ ಸಂಬಂಧ ವೃದ್ಧಿಯ ಬಗ್ಗೆ ಹೇಳಲೇಬೇಕಾಗುತ್ತದೆ. ಯಾಕೆಂದರೆ, ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಈ ಅವಧಿಯಲ್ಲಿಹೊಸ ಭಾಷ್ಯವನ್ನೇ ಬರೆಯಲಾಗಿದೆ. ಜಪಾನ್‌ ಭಾರತದ ಸಹಜ ಮಿತ್ರ ರಾಷ್ಟ್ರವಾಗಿದ್ದರೂ, ಶಿಂಜೊ ಆಡಳಿತದಲ್ಲಿಈ ಮಿತ್ರತ್ವವನ್ನು ಮತ್ತೊಂದು ಹಂತಕ್ಕೆ ಹೋಯಿತು.

ಪ್ರಧಾನಿಯಾಗಿದ್ದ 2006-07ರ ಅವಧಿಯಲ್ಲಿಅಬೆ ಭಾರತಕ್ಕೆ ಭೇಟಿ ನೀಡಿ, ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಎರಡನೇ ಬಾರಿ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ಬಳಿಕ ಭಾರತಕ್ಕೆ 2014 ಜನವರಿ, 2015 ಡಿಸೆಂಬರ್‌ ಮತ್ತು 2017ರ ಸೆಪ್ಟೆಂಬರ್‌ನಲ್ಲಿಭೇಟಿ ನೀಡಿದರು. 2014ರ ಗಣರಾಜ್ಯೋತ್ಸವದಲ್ಲಿಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಪಾನ್‌ನ ಮೊದಲ ಪ್ರಧಾನಿ ಎನಿಸಿಕೊಂಡರು. ಪ್ರಧಾನಿಯಾಗಿ ಅವರು, ಯುಪಿಎ ಆಡಳಿತ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಆಡಳಿತಾವಧಿಯಲ್ಲಿಭಾರತಕ್ಕೆ ಬಹು ನೆರವಾಗಿದ್ದಾರೆ. ಮೋದಿ ಕಾಲದಲ್ಲಿಈ ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆದುಕೊಂಡಿತು ಎಂದು ಹೇಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರು, ನೆರೆ ಹೊರೆ ರಾಷ್ಟ್ರಗಳ ಬಳಿಕ ಮೊದಲಿಗೆ ಭೇಟಿ ನೀಡಿದ್ದು ಜಪಾನ್‌ಗೆ. ಅಂದರೆ, ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದನ್ನು ಅದು ಸಾಂಕೇತಿಸುತ್ತದೆ. ಈ ವೇಳೆ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಮೋದಿ ಮತ್ತು ಅಬೆ ಒಪ್ಪಿಗೆ ಸೂಚಿಸಿದ್ದರು. ನಾಗರಿಕ ಅಣು ಇಂಧನ, ಕರಾವಳಿ ಭದ್ರತೆ, ಬುಲೆಟ್‌ ಟ್ರೇನ್‌ ಪ್ರಾಜೆಕ್ಟ್ , ಇಂಡೋ-ಪೆಸಿಫಿಕ್‌ ಸ್ಟ್ರ್ಯಾಟಜಿ ಸೇರಿದಂತೆ ಅನೇಕ ಯೋಜನೆಗಳು ಸಾಕಾರಗೊಂಡವು. ಆ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಹೊಸ ಮಜಲಿನತ್ತ ಸಾಗಿದವು. ಇದಕ್ಕೆ ಅಬೆ ಶಿಂಜೊ ಅವರ ಕಾಣಿಕೆ ಅಪಾರ ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಅಬೆ ರಾಜೀನಾಮೆ ನೀಡಿದ್ದರೂ ಮುಂದಿನ ಪ್ರಧಾನಿ ಆಯ್ಕೆಯ ತನಕ, ಅವರ ಬಳಿಯೇ ಆಡಳಿತ ಇರಲಿದೆ. ಜಪಾನ್‌ ಜನಪದೀಯ ಗೀತೆಗಳನ್ನು ಹಾಡುವ ಅಬೆ ಅವರಿಗೆ, ಐಸ್‌ಕ್ರೀಮ್‌ ಮತ್ತು ಕಲ್ಲಂಗಡಿ ಹಣ್ಣು ತುಂಬ ಇಷ್ಟ. ಸೆಪ್ಟೆಂಬರ್‌ 21ಕ್ಕೆ 65 ವರ್ಷ ಪೂರೈಸಲಿರುವ ಅಬೆ ಆದಷ್ಟು ಬೇಗ ಅನಾರೋಗ್ಯದಿಂದ ಗುಣಮುಖರಾಗಿ, ಮತ್ತೆ ಜಪಾನ್‌ನ ರಾಜಕಾರಣದಲ್ಲಿ ಮತ್ತೆ ಮಿಂಚಲಿ.

ಕಾಮೆಂಟ್‌ಗಳಿಲ್ಲ: