- ಮಲ್ಲಿಕಾರ್ಜುನ ತಿಪ್ಪಾರ
ಟಿಕ್ ಟಾಕ್ ಎಂಬ ಕಿರು ಅವಧಿಯ ವಿಡಿಯೊ ಆ್ಯಪ್ ಹುಟ್ಟು ಹಾಕಿದ ಉತ್ಕರ್ಷ ಅಗಾಧ. ಅತಿ ಕಡಿಮೆ ಅವಧಿಯಲ್ಲೇ ಇದಕ್ಕೆ ಜಗತ್ತಿನಾದ್ಯಂತ 50 ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರಿದ್ದಾರೆ. ಭಾರತದಲ್ಲೂ ಟಿಕ್ ಟಾಕ್ 12 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಅಂಕಿ ಸಂಖ್ಯೆಗಳೇ ಟಿಕ್ ಟಾಕ್ ಜನಪ್ರಿಯತೆಯನ್ನು ಸೂಚಿಸುತ್ತದೆ. ಇದೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ, ಇಂಟರ್ನೆಟ್‌ನ ದೈತ್ಯ ಕಂಪನಿಗಳಾದ ಗೂಗಲ್ ಮತ್ತು ಫೇಸ್‌ಬುಕ್ ಕೂಡ ಇದೀಗ, ಟಿಕ್ ಟಾಕ್ ಮಾದರಿಯ ಆ್ಯಪ್‌ಗಳನ್ನು ಹೊಂದಲು ಪ್ರಯತ್ನಿಸುತ್ತಿವೆ.
ನೋಕಿಯಾ ಉದಾಹರಣೆ
ಸ್ಪರ್ಧಾತ್ಮಕ ಜಗತ್ತಿನಲ್ಲಿನಿತ್ಯದ ಹೊಸ ಆವಿಷ್ಕಾರಗಳಿಗೆ ಒಗ್ಗಿಕೊಳ್ಳದೇ ಹೋದರೆ ಮಾರುಕಟ್ಟೆಯಿಂದಲೇ ಕಣ್ಮರೆಯಾಗುವ ಅಪಾಯಗಳಿರುತ್ತವೆ. ಇದಕ್ಕೆ ಬೆಸ್ಟ್ ಉದಾಹರಣೆ ಎಂದರೆ- ನೋಕಿಯಾ. ಒಂದು ಕಾಲದಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿದ್ದ ನೋಕಿಯಾ, ಸ್ಮಾರ್ಟ್‌ಫೋನ್‌ಗಳ ಜಮಾನದಲ್ಲಿ ಹಿಂದೆ ಬಿತ್ತು. ಅದರರ್ಥ ಭವಿಷ್ಯದ ದಿನಗಳನ್ನು ಊಹಿಸುವಲ್ಲಿ ವಿಫಲವಾಗಿದ್ದೇ ಇದಕ್ಕೆ ಕಾರಣ.
ಟ್ಯಾಂಗಿ ಸೃಷ್ಟಿ
ಇದೇ ಮಾತನ್ನು ಟಿಕ್ ಟಾಕ್ ವಿಷಯದಲ್ಲೂ ಹೇಳಬಹುದು. ಈಗೇನಿದ್ದರೂ ಕಿರು ಅವಧಿಯ ವಿಡಿಯೊ ಆ್ಯಪ್‌ಗಳದ್ದೇ ಕಾರುಬಾರು. ಇದಕ್ಕೆ ಒಂದು ನಿರ್ದಿಷ್ಟ ದಿಕ್ಕು ತೋರಿಸಿದ್ದು ಟಿಕ್ ಟಾಕ್. ಈಗ ಅದೇ ಹಾದಿಯನ್ನು ಗೂಗಲ್ ಕೂಡ ತುಳಿಯುತ್ತಿದೆ. ಯೂಟ್ಯೂಬ್‌ನಂಥ ಜನಪ್ರಿಯ ವಿಡಿಯೋ ವೇದಿಕೆ ಇದ್ದರೂ ಗೂಗಲ್ ಇದೀಗ ಟ್ಯಾಂಗಿ(Tangi) ಕಿರು ಅವಧಿಯ ವಿಡಿಯೊ ಆ್ಯಪ್ ಬಿಡುಗಡೆ ಮಾಡಿದೆ. ಸದ್ಯ ಇದು ಪ್ರಯೋಗಾತ್ಮಕ ಆ್ಯಪ್ ಆಗಿದ್ದು, ಟ್ಯಾಂಗಿ ಎಂಬ ಪದವನ್ನು The Words TeAch aNd Glveನಿಂದ ಸೃಷ್ಟಿಸಲಾಗಿದೆ. ಈ ಹೊಸ ಮಾದರಿಯ ಆ್ಯಪ್‌ನಲ್ಲಿ ಬಳಕೆದಾರರು 60 ಸೆಕೆಂಡ್‌ಗಳ ಅವಧಿಯ ವಿಡಿಯೋ ಅಪ್‌ಲೋಡ್ ಮಾಡಬಹುದು. ಇಲ್ಲೂಆರ್ಟ್, ಡಿಐವೈ(ಡೂ ಇಟ್ ಯುವರ್‌ಸೆಲ್ಫ್), ಕುಕಿಂಗ್, ಫ್ಯಾಷನ್, ಬ್ಯೂಟಿ, ಲೈಫ್‌ಸ್ಟೈಲ್ ಸೇರಿ ನಾನಾ ವಿಧದ ವಿಭಾಗಗಳಿವೆ.
ಐಒಎಸ್‌ನಲ್ಲಿ ಮಾತ್ರ ಲಭ್ಯ
ಸದ್ಯಕ್ಕೆ ಈ ಆ್ಯಪ್ ಐಒಎಸ್‌ನಲ್ಲಿ ಮಾತ್ರ ಲಭ್ಯವಿದ್ದು, ಆ್ಯಂಡ್ರಾಯ್ಡ್ ಬಳಕೆದಾರರಿಗೆ ದೊರೆಯುವುದಿಲ್ಲ. ಅವರು ಇನ್ನೊಂದಿಷ್ಟ ದಿನ ಕಾಯಬೇಕಾಗಬಹುದು. ಆದರೆ, ವೆಬ್‌ನಲ್ಲಿ ನೀವು ಬಳಸಬಹುದು. ಗೂಗಲ್ ಈಗಾಗಲೇ ಯೂಟ್ಯೂಬ್ ವಿಡಿಯೋ ವೇದಿಕೆಯ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೀಗಿದ್ದೂ, ಕಿರು ಅವಧಿಯ ವಿಡಿಯೋ ವೇದಿಕೆಯು ಯೂಟ್ಯೂಬ್‌ಗೆ ಪ್ರತಿಸ್ಪರ್ಧಿಯೊಂದನ್ನು ಹುಟ್ಟು ಹಾಕುತ್ತಿದೆಯಾ ಅಥವಾ ಟಿಕ್ ಟಾಕ್‌ನಂಥ ಆ್ಯಪ್‌ಗಳಿಗೆ ಸ್ಪರ್ಧೆ ನೀಡುತ್ತದೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಜೊತೆಗೆ ಈ ಹೊಸ ಆ್ಯಪ್ ಬಳಕೆದಾರರನ್ನು ಸೆಳೆಯಲು ವಿಫಲವಾಗಬಹುದು. ಯಾಕೆಂದರೆ, ಇದು ಕೇವಲ ಕಿರು ಅವಧಿ ವಿಡಿಯೋಗೆ ಅವಕಾಶ ಕಲ್ಪಿಸುವುದರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುವುದಿಲ್ಲ. ಹಾಗಾಗಿ ಬಳಕೆದಾರರು ಯೂಟ್ಯೂಬ್‌ಗೆ ಮೊರೆ ಹೋಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಸೃಜನಾತ್ಮಕತೆಗೆ ಒತ್ತು
ಟ್ಯಾಂಗಿ ಆ್ಯಪ್‌ನ ಮುಖ್ಯ ಉದ್ದೇಶವೇ ಬಳಕೆದಾರರಲ್ಲಿನ ಸೃಜನಾತ್ಮಕತೆಗೆ ವೇದಿಕೆಯನ್ನು ಒದಗಿಸುವುದು ಆಗಿದೆ. ನಾವು ಕೇವಲ ಡಿಐವೈ ಮತ್ತು ಸೃಜನಶೀಲ ಕಟೆಂಟ್ ಬಗ್ಗೆ ಗಮನ ಕೇಂದ್ರೀಕರಿಸಿದ್ದೇವೆ. ಒಂದು ನಿಮಿಷದ ವಿಡಿಯೋ ಅಪ್ಲೋಡ್ ಮಾಡಲು ನಾವು ಅವಕಾಶ ಕಲ್ಪಿಸಿಕೊಡುತ್ತಿದ್ದೇವೆ ಎಂದು ಟ್ಯಾಂಗಿ ಸಂಸ್ಥಾಪಕ ಕೊಕೊ ಮಾವೊ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಆ್ಯಪ್ ಇನ್ನೊಂದು ವಿಶೇಷ ಏನೆಂದರೆ, ಇದರಲ್ಲಿರುವ ಟ್ರೈ ಇಟ್ ವಿಭಾಗದಲ್ಲಿ ಬಳಕೆದಾರರು ಅಲ್ಲಿರುವ ವಿಡಿಯೊಗಳನ್ನು ಮರು ಸೃಷ್ಟಿಸಬಹುದು ಮತ್ತು ಅವುಗಳನ್ನು ಶೇರ್ ಮಾಡಿಕೊಳ್ಳಬಹುದು. ಇದರಿಂದ ಬಹಳಷ್ಟು ಬಳಕೆದಾರರನ್ನು ತಲುಪಲು ಸಾಧ್ಯವಾಗಲಿದೆ
ಟಿಕ್ ಟಾಕ್‌ಗೆ ಪೈಪೋಟಿ
ಈ ಮೊದಲೇ ಹೇಳಿದಂತೆ ಟಿಕ್ ಟಾಕ್‌ಗೆ ಪೈಪೋಟಿ ನೀಡಲು ಅನೇಕ ಕಂಪನಿಗಳು ಕಿರು ಅವಧಿಯ ವಿಡಿಯೋ ಆ್ಯಪ್‌ಗಳನ್ನು ಪರಿಚಯಿಸುತ್ತಿವೆ. ಕೆಲವು ದಿನಗಳ ಹಿಂದೆ ಫೇಸ್ ಬುಕ್ ಕೂಡ ಲ್ಯಾಸ್ಸೊ ಆ್ಯಪ್ ಬಿಡುಗಡೆ ಮಾಡಿದೆ. ಆದರೆ, ಇದು ಇನ್ನೂ ಭಾರತ ಗ್ರಾಹಕರಿಗೆ ಲಭ್ಯವಾಗಿಲ್ಲ. ಹಾಗೆಯೇ ಟ್ಯಾಂಗಿ ಕೂಡ. ಇನ್ನೂ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ಕೂಡ ರೀಲ್ಸ್ ಎಂಬ ಆಪ್ ಬಿಡುಗಡೆ ಮಾಡಿದ್ದನ್ನು ನಾವು ಗಮನಿಸಬಹುದು. ಈ ಬೆಳವಣಿಗೆಗಳು ಏನು ಹೇಳುತ್ತಿವೆ ಎಂದರೆ, ವಿಡಿಯೋ ಫ್ಲಾಟ್‌ಫಾರ್ಮ್ ಈಗಿನ ಟ್ರೆಂಡ್ ಆಗಿವೆ. ವಿಡಿಯೋ ಕಂಟೆಂಟ್‌ಗೆ ಈಗ ಎಲ್ಲಕ್ಕಿಂತ ಹೆಚ್ಚಿನ ಬೇಡಿಕೆ ಇದ್ದು, ಬಹುತೇಕ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಈ ರೀತಿಯ ವೇದಿಕೆಗಳನ್ನು ಸೃಷ್ಟಿಸಿಕೊಂಡು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತವೆ.