ಸೋಮವಾರ, ಫೆಬ್ರವರಿ 24, 2020

Joaquin Phoenix: ಅದ್ಭುತ ನಟ, ಹೃದಯವಂತ ವಾಕಿನ್‌

ಮಲ್ಲಿಕಾರ್ಜುನ ತಿಪ್ಪಾರ
''ಹಸುವಿಗೆ ಕೃತಕ ಗರ್ಭಧಾರಣೆ ಮಾಡಲು ಮತ್ತು ಅದರ ಕರುವಿಗೆ ಸ್ವಾಭಾವಿಕವಾಗಿ ದಕ್ಕಬೇಕಿದ್ದನ್ನು ಕಸಿದುಕೊಳ್ಳುವ ಹಕ್ಕು ನಮಗಿದೆ ಎಂದು ನಾವು ಭಾವಿಸಿಕೊಳ್ಳುತ್ತಿದ್ದೇವೆ. ಹಸುವಿನ ಬೇಗುದಿಯ ಕೂಗಿಗೆ ಯಾವುದೂ ಸಮಾಧಾನ ತರಲಾರದು. ಅದರ ಕರುವಿಗೆ ಮಾತ್ರವೇ ಸಿಗಬೇಕಾದ ಹಾಲನ್ನು ನಾವು ನಮ್ಮ ಕಾಫಿ ಮತ್ತು ಊಟಕ್ಕೆ ಬಳಸಿಕೊಳ್ಳುತ್ತಿದ್ದೇವೆ...''










ಜೋಕರ್‌' ಎಂಬ ವಿಶಿಷ್ಟ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ 'ಆಸ್ಕರ್‌' ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ನಟ ವಾಕಿನ್‌ ಫಿನಿಕ್ಸ್‌ ಅವರ ಅಂತರಾಳದ ಮಾತುಗಳು ಇವು. ಆಸ್ಕರ್‌ ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿಆಡಿದ ಈ ಮಾತುಗಳಿಗೆ ಇಡೀ ಜಗತ್ತೇ ತಲೆದೂಗುತ್ತಿದೆ. ವಾಕಿನ್‌ ಅವರ ಸ್ಫೂರ್ತಿದಾಯಕ ಮಾತುಗಳಿಗೆ ಮಾರುಹೋಗಿ ಸುಮಾರಷ್ಟು ಜನರು ವೆಗಾನ್‌(ಸಂಪೂರ್ಣ ಸಸ್ಯಾಹಾರಿ)ಗಳಾಗುತ್ತಿದ್ದಾರೆ. ಒಬ್ಬ ಸೆಲಿಬ್ರಿಟಿ ನಟನೊಬ್ಬನ ಪ್ರಾಮಾಣಿಕ ಕಾಳಜಿಗೆ ಸಲ್ಲುತ್ತಿರುವ ಗೌರವ ಇದು.

ಬಹಳಷ್ಟು ನಟ- ನಟಿಯರು ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವುದು ಅತಿ ವಿರಳ. ಆದರೆ, ವಾಕಿನ್‌ ಫಿನಿಕ್ಸ್‌ನಂಥ ನಟರು ತಮಗೆ ಸರಿ ಅನ್ನಿಸಿದ್ದನ್ನು ನಿರ್ಭೀತಿಯಿಂದ ಮಾಡುತ್ತಾರೆ. ಹಾಗಾಗಿಯೇ ಆಸ್ಕರ್‌ನಂಥ ಬಹುದೊಡ್ಡ ವೇದಿಕೆಯಲ್ಲಿಗೋ ರಕ್ಷಣೆಯ ಆ್ಯಕ್ಟಿವಿಸಮ್‌ ಬಗ್ಗೆ ಮಾತನಾಡುತ್ತಾರೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿದನದ ಮಾಂಸ ಆಹಾರ ಸಂಸ್ಕೃತಿಯ ಭಾಗವಾಗಿದೆ. ಹಾಗಾಗಿ, ಆಸ್ಕರ್‌ ವೇದಿಕೆಯಲ್ಲಿಗೋರಕ್ಷಣೆಯ ಬಗ್ಗೆ ಮಾತನಾಡಿರುವ ಫಿನಿಕ್ಸ್‌ ಅವರ ಮಾತುಗಳಿಗೆ ಹೆಚ್ಚು ಮಹತ್ವವಿದೆ. ಫಿನಿಕ್ಸ್‌ ಅವರ ಗೋ ಕಾಳಜಿಗೆ ಉದಾಹರಣೆ ಎಂಬಂತೆ, ಆಸ್ಕರ್‌ ಸ್ವೀಕರಿಸಿದ ಎರಡು ದಿನಗಳ ಬಳಿಕ ಅವರು ಹಸು ಮತ್ತು ಅದರ ಕರುವನ್ನು ರಕ್ಷಿಸಿ ಸುದ್ದಿಯಾದರು!

ಚಿಕ್ಕ ವಯಸ್ಸಿನಿಂದಲೇ ವೆಗಾನ್‌ ಆಗಿರುವ ವಾಕಿನ್‌ ಫಿನಿಕ್ಸ್‌ ಹಾಲಿವುಡ್‌ನಲ್ಲಿಬಹುದೊಡ್ಡ ಹೆಸರು. ಒಂದೆರಡು ಬಾರಿ ಆಸ್ಕರ್‌ ಪ್ರಶಸ್ತಿ ಕಣದಲ್ಲಿದ್ದರೂ ಸಂದಿರಲಿಲ್ಲ. ಆದರೆ, ಜೋಕರ್‌ ಸಿನಿಮಾ ಅವರ ಆ ಕೊರತೆಯನ್ನು ನೀಗಿಸಿದೆ. ಅವರು ಎಷ್ಟು ದೊಡ್ಡ ನಟರೋ, ಎಷ್ಟು ಸಹಜ ಅಭಿನಯ ನೀಡುತ್ತಾರೋ ಅಷ್ಟೇ ಅಂತಃಕರಣಿ; ನಿಸರ್ಗ ಪ್ರೇಮಿ. ಸಾಮಾಜಿಕ ಕಾರ್ಯಕರ್ತ. ಆಫ್ರಿಕಾದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಉದಾರಿ. ನಿಗರ್ವಿ ಮತ್ತು ಸೀದಾ ಸಾದಾ ವ್ಯಕ್ತಿ.

ವಾಕಿನ್‌ ಫಿನಿಕ್ಸ್‌ ಅವರ ಪೂರ್ತಿ ಹೆಸರು ವಾಕಿನ್‌ ರಫೇಲ್‌ ಫಿನಿಕ್ಸ್‌. 1974ರ ಅಕ್ಟೋಬರ್‌ 28ರಂದು ಪೋರ್ಟರಿಕೊ ಎಂಬ ಕೆರೆಬಿಯನ್‌ ದ್ವೀಪದ ಸ್ಯಾನ್‌ ಜುವಾನ್‌ನ ರಿಯೊ ಪಿಡ್ರಾಸ್‌ನಲ್ಲಿಜನಿಸಿದರು. ಪೋರ್ಟರಿಕೊ ದ್ವೀಪ ಅಮೆರಿಕ ನಿಯಂತ್ರಿತ ಪ್ರದೇಶ. ತಾಯಿ ಅರ್ಲಿನ್‌ ಫಿನಿಕ್ಸ್‌. ತಂದೆ ಜಾನ್‌ ಲೀ ಬಾಟಮ್‌. ಈ ದಂಪತಿಯ ಐದು ಮಕ್ಕಳ ಪೈಕಿ ವಾಕಿನ್‌ ಮೂರನೆಯವರು. ರೇನ್‌, ಸಮ್ಮರ್‌ ಮತ್ತು ಲಿಬರ್ಟಿ ಸಹೋದರಿಯರು ಮತ್ತು ರಿವರ್‌ ಸಹೋದರ. ವಿಶೇಷ ಎಂದರೆ ಇಷ್ಟೂ ಜನರು ಸಿನಿಮಾ ರಂಗದಲ್ಲಿದ್ದಾರೆ. ನಟ, ನಟಿಯರು. 'ಚಿಲ್ಡ್ರನ್‌ ಆಫ್‌ ಗಾಡ್‌' ಎಂಬ ಪಂಥವನ್ನು ಅನುಸರಿಸುತ್ತಿದ್ದ ಇವರ ತಂದೆ ತಾಯಿ ದಕ್ಷಿಣ ಅಮೆರಿಕ ತುಂಬ ಪ್ರವಾಸ ಮಾಡಿ, ಪ್ರಚಾರ ಮಾಡಲು ಪ್ರಯತ್ನಿಸಿದರು. ಆದರೆ, ಮುಂದೆ ಭಿನ್ನಾಭಿಪ್ರಾಯದಿಂದಾಗಿ ಈ ಪಂಥವನ್ನು ತೊರೆದು 1977ರಲ್ಲಿಅಮೆರಿಕಕ್ಕೆ ಮರಳಿದಾಗ ಫಿನಿಕ್ಸ್‌ಗೆ ಮೂರು ವರ್ಷ. ಫಿನಿಕ್ಸ್‌ ಸಹೋದರ ಮತ್ತು ಸಹೋದರಿಯರ ಹೆಸರು ಗಮನಿಸಿದರೆ ನಿಮಗೆ ನಿಸರ್ಗದ ಛಾಯೆ ಎದ್ದು ಕಾಣುತ್ತದೆ. ಬಹುಶಃ ಇದೇ ಮುಂದೆ ಫಿನಿಕ್ಸ್‌ ಕೂಡ ನಿಸರ್ಗಪ್ರೇಮಿಯಾಗಲು ಪ್ರೇರಣೆಯಾಯಿತೇನೊ?

ಬಾಲ್ಯ ಕಲಾವಿದನಾಗಿ ಫಿನಿಕ್ಸ್‌ ಸಹೋದರ ರಿವರ್‌ ಮತ್ತು ಸಿಸ್ಟರ್‌ ಸಮ್ಮರ್‌ ಜೊತೆಗೂಡಿ ನಟನೆಗಿಳಿದರು. ಸ್ಪೇಸ್‌ಕ್ಯಾಂಪ್‌(1986)ನಲ್ಲಿವಾಕಿನ್‌ಗೆ ಪ್ರಮುಖ ಪಾತ್ರ ದೊರೆಯಿತು. 1995ರ ತನಕ ಫಿನಿಕ್ಸ್‌ ಅವರ ಬೆಳ್ಳಿತೆರೆ ಹೆಸರು ಲೀಫ್‌ ಫಿನಿಕ್ಸ್‌ ಎಂದಿತ್ತು. 'ಟು ಡೈ ಫಾರ್‌'(1995) ಸಿನಿಮಾದಲ್ಲಿಅವರ ಮೂಲ ಹೆಸರು ಕಾಣಿಸಿಕೊಂಡಿತು. ವಿಶೇಷ ಎಂದರೆ, 'ಟು ಡೈ ಫಾರ್‌' ಚಿತ್ರವು ಫಿನಿಕ್ಸ್‌ ಅವರ ಸಿನಿಮಾ ಬದುಕಿಗೆ ಗಟ್ಟಿ ಅಡಿಪಾಯ ಹಾಕಿತು. ಈ ಕಾಮಿಡಿ-ಡ್ರಾಮಾ ಫಿಲ್ಮ್‌ನಲ್ಲಿಫಿನಿಕ್ಸ್‌ ನಿರ್ವಹಿಸಿದ ಪಾತ್ರಕ್ಕೆ ಅಪಾರ ಮೆಚ್ಚುಗೆ ದೊರೆಯಿತು. ಬಳಿಕ ಅವರು ಪಿರಿಯಾಡಿಕಲ್‌ ಚಿತ್ರ 'ಕ್ವಿಲ್ಸ್‌'(2000)ನಲ್ಲಿಕಾಣಿಸಿಕೊಂಡರು. ಇದೇ ಅವಧಿಯಲ್ಲಿತೆರೆ ಕಂಡ ಐತಿಹಾಸಿಕ ಕಥಾವಸ್ತು ಹೊಂದಿದ್ದ 'ಗ್ಲಾಡಿಯೇಟರ್‌' ಕೂಡ ಫಿನಿಕ್ಸ್‌ಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಈ ಚಿತ್ರದ 'ಕೊಮೆಡೊಸ್‌' ಪಾತ್ರ ಎಷ್ಟು ಪ್ರಭಾವ ಬೀರಿತು ಎಂದರೆ, ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಆಸ್ಕರ್‌ಗೆ ನಾಮಿನೇಟ್‌ ಆದರು. 2005ರಲ್ಲಿತೆರೆಕಂಡ 'ವಾಕ್‌ ದಿ ಲೈನ್‌' ಸಿನಿಮಾದಲ್ಲಿನಿರ್ವಹಿಸಿದ ಮ್ಯೂಸಿಯನ್‌ ಜಾನಿ ಕ್ಯಾಶ್‌ ಪಾತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತಲ್ಲದೇ ಆಸ್ಕರ್‌ನ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್‌ ಆದರು. ಕುಡುಕ ಯೋಧನ ಪಾತ್ರ ನಿರ್ವಹಣೆಯ 'ದಿ ಮಾಸ್ಟರ್‌'(2012), 'ದಿ ವಿಲೇಜ್‌'(2004), ಐತಿಹಾಸಿಕ ಕಥಾವಸ್ತು ಹೊಂದಿದ 'ಹೊಟೇಲ್‌ ರವಂಡಾ'(2004), ರೋಮಾಂಟಿಕ್‌ ಡ್ರಾಮಾ 'ಹರ್‌'(2013), ಅಪರಾಧ ವಿಡಂಬನಾತ್ಮಕ ಕಥಾವಸ್ತುವಿರುವ 'ಇನ್‌ಹೆರೆಂಟ್‌ ವೈಸ್‌'(2014), ಸೈಕಾಲಜಿಕಲ್‌ ಥ್ರಿಲ್ಲರ್‌ 'ಯು ವೇರ್‌ ನೆವರ್‌ ರಿಯಲೀ ಹಿಯರ್‌'(2017) ಚಿತ್ರಗಳು ವಾಕಿನ್‌ ಫಿನಿಕ್ಸ್‌ಗೆ ಹಾಲಿವುಡ್‌ನಲ್ಲಿಗಟ್ಟಿ ಸ್ಥಾನ ಒದಗಿಸಿದವು. 2019ರಲ್ಲಿತೆರೆ ಕಂಡ 'ಜೋಕರ್‌' ಸಿನಿಮಾದ ಪಾತ್ರ ಫಿನಿಕ್ಸ್‌ಗೆ ಆಸ್ಕರ್‌ ತಂದುಕೊಟ್ಟಿತು. ಆ ಚಿತ್ರದಲ್ಲಿಫಿನಿಕ್ಸ್‌ ಅಭಿನಯಕ್ಕೆ ಮನಸೋಲದವರೇ ಇಲ್ಲ.

ವಾಕಿನ್‌ ಫಿನಿಕ್ಸ್‌ ಕೇವಲ ನಟನೆಯಲ್ಲಿತಮ್ಮನ್ನು ತೊಡಗಿಸಿಕೊಂಡಿಲ್ಲ. ಮ್ಯೂಸಿಕ್‌ ವಿಡಿಯೊಗಳಿಗೆ ನಿರ್ದೇಶನ ಮಾಡಿದ್ದಾರೆ, ಅನೇಕ ಸಿನಿಮಾ ಮತ್ತು ಟಿವಿ ಶೋ ನಿರ್ಮಾಣ ಮಾಡಿದ್ದಾರೆ. 'ವಾಕ್‌ ದಿ ಲೈನ್‌' ಚಿತ್ರದ ಸಂಗೀತ ರೆಕಾರ್ಡಿಂಗ್‌ಗಾಗಿ ಅವರಿಗೆ ಗ್ರ್ಯಾಮಿ ಅವಾರ್ಡ್‌ ಕೂಡ ಬಂದಿದೆ. ಅವರಿಗೆ ಎರಡು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳೂ ಬಂದಿವೆ.

ಫಿನಿಕ್ಸ್‌ ಮಾನವೀಯ ಸಂಘಟನೆಗಳಲ್ಲಿತೊಡಗಿಸಿಕೊಂಡಿದ್ದಾರೆ. ಅನೇಕ ಸೇವಾ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌, ದಿ ಆರ್ಟ್‌ ಆಫ್‌ ಎಲಿಸಿಯಮ್‌, ಹಾರ್ಟ್‌, ಪೀಸ್‌ ಅಲಾಯನ್ಸ್‌ ಸೇರಿದಂತೆ ಅನೇಕ ಸಂಘಟನೆಗಳಿಗೆ ನೆರವು ನೀಡಿದ್ದಾರೆ; ಅವುಗಳ ಕೆಲಸಕಾರ್ಯಗಳಲ್ಲಿತೊಡಗಿಸಿಕೊಂಡಿದ್ದಾರೆ. 'ದಿ ಲಂಚ್‌ಬಾಕ್ಸ್‌ ಫಂಡ್‌' ಎಂಬ ಸರಕಾರೇತರ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯು ದಕ್ಷಿಣ ಆಫ್ರಿಕಾದ ಸೊವೆಟೊ ನಗರದ ಶಾಲಾ ಮಕ್ಕಳಿಗೆ ನಿತ್ಯ ಊಟ ಪೂರೈಸುತ್ತದೆ. ವಿಶೇಷ ಎಂದರೆ, ಫಿನಿಕ್ಸ್‌ ಅವರ ಮಾಜಿ ಪ್ರೇಯಸಿ ದಕ್ಷಿಣಾ ಆಫ್ರಿಕಾದ ಮಾಡೆಲ್‌ ತೋಪಾಜ್‌ ಪೇಜ್‌-ಗ್ರೀನ್‌ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇಷ್ಟಲ್ಲದೆ, ವೆಗನಿಸಮ್‌ ಪ್ರಚುರ ಪಡಿಸುವುದಕ್ಕಾಗಿ ಫಿನಿಕ್ಸ್‌ ಅನೇಕ ಪ್ರಾಣಿದಯಾ ಸಂಘಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಫೆನ್ಸ್‌ ಆಫ್‌ ಆ್ಯನಿಮಲ್ಸ್‌, ಪೆಟಾ ಸದಸ್ಯರಾಗಿದ್ದಾರೆ. ಪ್ರಾಣಿ ಚರ್ಮದಿಂದ ಮಾಡಿದ ಬಟ್ಟೆಗಳನ್ನು ಸಿನಿಮಾದಲ್ಲೂ ತೊಡುವುದಿಲ್ಲ!

ಕಾಮೆಂಟ್‌ಗಳಿಲ್ಲ: