ಮಂಗಳವಾರ, ಮಾರ್ಚ್ 17, 2020

Chan Kin-man is a Hong Kong Gandhi- ಹಾಂಕಾಂಗ್ ಗಾಂಧಿ ಚಾನ್

- ಮಲ್ಲಿಕಾರ್ಜುನ ತಿಪ್ಪಾರ
ಹನ್ನೊಂದು ತಿಂಗಳು ಜೈಲುವಾಸ ಪೂರೈಸಿ ಇದೀಗ ಬಿಡುಗಡೆಯಾಗಿರುವ ಹಾಂಕಾಂಗ್‌ನ ಪ್ರಜಾಪ್ರಭುತ್ವವಾದಿ ಹೋರಾಟಗಾರ, ಸಮಾಜಶಾಸ್ತ್ರ ಪ್ರಾಧ್ಯಾಪಕ ಚಾನ್‌ ಕಿ ಮ್ಯಾನ್‌ ಬಗ್ಗೆ ತಿಳಿದುಕೊಳ್ಳುವ ಮೊದಲು 'ಅಕ್ಯುಪಾಯ್‌ ಮೂವ್‌ ವೆಂಟ್‌' ಬಗ್ಗೆ ತಿಳಿದುಕೊಳ್ಳಬೇಕು. ಆಗಲೇ 'ಹಾಂಕಾಂಗ್‌ ಗಾಂಧಿ' ಚಾನ್‌ ಅವರ ವ್ಯಕ್ತಿತ್ವ ಅರಿವಾಗುತ್ತದೆ.

'ಒಂದು ದೇಶ, ಎರಡು ವ್ಯವಸ್ಥೆ' ಸೂತ್ರದಡಿ ಹಾಂಕಾಂಗ್‌ 1997ರಲ್ಲಿಬ್ರಿಟಿಷ್‌ ಮುಷ್ಟಿಯಿಂದ ಚೀನಾದ ಪಾಲಾಯಿತು. ಈ ಸೂತ್ರದಡಿ ಚೀನಾದಲ್ಲಿರುವ ಎಲ್ಲಹಕ್ಕುಗಳು, ಸ್ವಾತಂತ್ರ್ಯ ಹಾಂಕಾಂಗ್‌ನಲ್ಲಿರುವವರಿಗೂ ಅನ್ವಯವಾಗಬೇಕು. ಆದರೆ, ಪ್ರಜಾಪ್ರಭುತ್ವ ಪರ ಹೋರಾಟಗಾರರ ಪ್ರಕಾರ, ಚೀನಾ ಸರಕಾರ ಹಾಂಕಾಂಗ್‌ ಮೇಲೆ ತನ್ನ ಹಿಡಿತ ಬಿಗಿಗೊಳಿಸಿ, ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಹಾಗಾಗಿ, ಹಾಂಕಾಂಗ್‌ನಲ್ಲಿಪ್ರಜಾಪ್ರಭುತ್ವ ವ್ಯವಸ್ಥೆ ಬರಬೇಕು. ಈ ಹಿನ್ನೆಲೆಯಲ್ಲಿ'ಸಾರ್ವತ್ರಿಕ ಮತದಾನ ಹಕ್ಕು'(ಭಾರತದಲ್ಲೂಇದೇ ಮಾದರಿ ಇದೆ) ಜಾರಿಗೋಸ್ಕರ 'ಅಕ್ಯುಪಾಯ್‌ ಸೆಂಟ್ರಲ್‌ ವಿತ್‌ ಲವ್‌ ಆ್ಯಂಡ್‌ ಪೀಸ್‌' ಅಭಿಯಾನದಿಂದ 2014ರಲ್ಲಿಅಸಹಕಾರ ಚಳವಳಿಗೆ ಕರೆ ನೀಡಲಾಯಿತು. 79 ದಿನ ನಿರಂತರ ಚಳವಳಿ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಚೀನಾ ಸರಕಾರಕ್ಕೆ ಚುರುಕು ಮುಟ್ಟಿಸಿದರು. ಹಾಂಕಾಂಗ್‌ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಈ ಚಳವಳಿಯನ್ನು ಜಗತ್ತು 'ಅಂಬ್ರೆಲಾ ಮೂಮೆಂಟ್‌' ಎಂದು ಗುರುತಿಸಿತು(ಪ್ರತಿಭಟನಾಕಾರರು ಪೊಲೀಸರ ಟಿಯರ್‌ ಗ್ಯಾಸ್‌ ಮತ್ತು ಜಲಪ್ರಯೋಗ ತಪ್ಪಿಸಿಕೊಳ್ಳಲು ಕೊಡೆಗಳನ್ನು ಬಳಸುತ್ತಿದ್ದರು).

ಇಡೀ ಜಗತ್ತೇ ಹಾಂಕಾಂಗ್‌ನತ್ತ ತಿರುಗಿ ನೋಡುವಂತೆ ಮಾಡಿದ ಅಕ್ಯುಪಾಯ್‌ ಅಭಿಯಾನದ ಸಹ ಸಂಸ್ಥಾಪಕನೇ ಈ 'ಚಾನ್‌ ಕಿನ್‌-ಮ್ಯಾನ್‌'. ಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌(ಸಿಯುಎಚ್‌ಕೆ)ನ ಸೋಷಿಯಾಲಜಿ ಪ್ರೊಫೆಸರ್‌ ಆಗಿದ್ದ ಚಾನ್‌, ರೆವರೆಂಡ್‌ ಚು ಯಿಯು-ಮಿಂಗ್‌ ಮತ್ತು ಸಿಯುಎಚ್‌ಕೆ ಕಾನೂನು ಪ್ರಾಧ್ಯಾಪಕ ಬೆನ್ನಿ ತೈ ಯಿಯು-ಟಿಂಗ್‌ ಅವರ ಜೊತೆಗೂಡಿ ಈ ಅಭಿಯಾನವನ್ನು ಆರಂಭಿಸಿ, ವಿದ್ಯಾರ್ಥಿಗಳಲ್ಲಿಪ್ರಜಾಪ್ರಭುತ್ವದ ಮಹತ್ವವನ್ನು ಅರುಹಿದರು. ಇದರ ಫಲವಾಗಿಯೇ ಚೀನಾದ ಆಕ್ರಮಣಕಾರಿ ನೀತಿಗಳ ವಿರುದ್ಧ ಹಾಂಕಾಂಗ್‌ ಜನಸಾಮಾನ್ಯರು ಪ್ರತಿರೋಧ ದಾಖಲಿಸುವ ಮಟ್ಟಿಗೆ ಮನಸ್ಸುಗಳು ಬದಲಾದವು.

ಚಾನ್‌ ವಿರುದ್ಧ ಹಾಂಕಾಂಗ್‌ ನಗರವನ್ನು ಸ್ತಬ್ಧಗೊಳಿಸಿ ಚೀನಾ ಸರಕಾರದ ವಿರುದ್ಧ ಸಾರ್ವಜನಿಕರನ್ನು ಎತ್ತಿಕಟ್ಟಿ, ಗದ್ದಲ ಎಬ್ಬಿಸಿದ ಆರೋಪ ಮಾಡಲಾಗಿತ್ತು. ಹಾಂಕಾಂಗ್‌ ನ್ಯಾಯಾಲಯ ಇವರಿಗೆ 16 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚುನಾವಣೆಗೆ ಸಾರ್ವತ್ರಿಕ ಮತದಾನದ ಹಕ್ಕು ನೀಡಬೇಕೆಂದು ಚಳವಳಿ ಆರಂಭಿಸಿದ ಈ ಚಾನ್‌, ವಿದ್ಯಾರ್ಥಿ ಜೀವನದಿಂದಲೂ ಸಾಮಾಜಿಕ ಕಾರ್ಯಕರ್ತರನಾಗಿ ಗುರುತಿಸಿಕೊಂಡವರು. ಸಮುದಾಯ ಅಭ್ಯುದಯಕ್ಕೆ ಹೋರಾಟ ಮಾಡಿದವರು. ಸ್ವತಃ ಅವರೇ ಸಾಮಾಜಿಕ ಸ್ತರಗಳಲ್ಲಿಅನ್ಯಾಯಗಳನ್ನು ಅನುಭವಿಸಿದವರಾದ್ದರಿಂದ ಅದನ್ನು ಹೋಗಲಾಡಿಸಲು ಸಾಂಸ್ಥಿಕ ಹಂತಗಳಲ್ಲಿಸುಧಾರಣೆ ಅಗತ್ಯ ಎಂದು ಪ್ರತಿಪಾದಿಸಿದರು. ಇದೆಲ್ಲದರ ಒಟ್ಟು ಫಲವೇ ಅಕ್ಯುಪಾಯ್‌ ಅಭಿಯಾನ ಎಂದು ಹೇಳಬಹುದು.

1993ರಿಂದ ಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌ನಲ್ಲಿಅಧ್ಯಾಪನ ವೃತ್ತಿ ಕೈಗೊಂಡ ಚಾನ್‌, ಕಳೆದ ವರ್ಷವಷ್ಟೇ ನಿವೃತ್ತಿಯಾಗಿದ್ದಾರೆ. ಅಧ್ಯಾಪನ ವೃತ್ತಿಯನ್ನು ಪ್ರೀತಿಸುವ ಚಾನ್‌ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರು. ಅದೇ ಕಾರಣಕ್ಕೆ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳ ಸಂಘಟನೆಗಳಿಂದಲೂ ಅನೇಕ ಸಂದರ್ಭಗಳಲ್ಲಿಅತ್ಯುತ್ತಮ ಪ್ರಾಧ್ಯಾಪಕ ಎಂಬ ಗೌರವ ಪಡೆದುಕೊಂಡಿದ್ದಾರೆ. ಚೀನಿ ಸಮುದಾಯಗಳಲ್ಲಿಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜಗಳ ಅಭಿವೃದ್ಧಿಗೆ ಅವರು ತೋರಿದ ಆಸಕ್ತಿ ಮತ್ತು ಸಂಶೋಧನೆ ಅವರನ್ನು ಮೇಲ್ಮಟ್ಟದಲ್ಲಿಕಾಣುವಂತೆ ಮಾಡಿದೆ. ಚೀನಾ ಮತ್ತು ಹಾಂಕಾಂಗ್‌ ಸರಕಾರಗಳಲ್ಲಿಅನೇಕ ಹುದ್ದೆಗಳನ್ನು ನಿರ್ವಹಿಸಿದ ಅವರು ಹಲವಾರು ಸರಕಾರೇತರ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಸದ್ಯ ಅವರು ಹಾಂಕಾಂಗ್‌ ಸಿವಿಲ್‌ ಎಜುಕೇಷನ್‌ ಫೌಂಡೇಷನ್‌ ನಿರ್ದೇಶಕ ಹಾಗೂ ಹಾಂಕಾಂಗ್‌ ಡೆಮಾಕ್ರಟಿಕ್‌ ಡೆವಲಪ್‌ಮೆಂಟ್‌ ನೆಟ್ವರ್ಕ್ನ ಕಾರ್ಯಕಾರಿ ಮಂಡಳಿಯ ಸದಸ್ಯ. ಘ್ಕಿ

1976ರಲ್ಲಿಚಾನ್‌ ಅವರು, ಕಾನ್ಕರ್ಡಿಯಾ ಲೂಥರಿನ್‌ ಮಿಡ್ಲ್‌ಸ್ಕೂಲ್‌ನಲ್ಲಿಆರಂಭಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬಳಿಕ 19983ರಲ್ಲಿಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌ನಿಂದ ಸೋಷಿಯಾಲಜಿ ವಿಷಯದಲ್ಲಿಬ್ಯಾಚುಲರ್‌ ಆಫ್‌ ಸೈನ್ಸ್‌ ಪದವಿ ಪಡೆದುಕೊಂಡರು. ಯಾಲೆ ವಿವಿಯಲ್ಲಿಉನ್ನತ ಅಧ್ಯಯನ ಕೈಗೊಂಡ ಚಾನ್‌ 1990ರಲ್ಲಿಮಾಸ್ಟರ್‌ ಆಫ್‌ ಆರ್ಟ್ಸ್, 1991ರಲ್ಲಿಮಾಸ್ಟರ್‌ ಆಫ್‌ ಫಿಲಾಸಫಿ ಹಾಗೂ 1995ರಲ್ಲಿಸೋಷಿಯಾಲಜಿಯಲ್ಲಿಡಾಕ್ಟರೇಟ್‌ ಪದವಿ ಗಳಿಸಿಕೊಂಡರು. ಸಿಯುಎಚ್‌ಕೆ ವಿವಿಯಲ್ಲಿಅಧ್ಯಯನ ಮಾಡುತ್ತಿದ್ದಾಗಲೇ ವಿದ್ಯಾರ್ಥಿ ಚಳವಳಿಗಳಲ್ಲಿಸಕ್ರಿಯವಾಗಿ ಪಾಲ್ಗೊಂಡರು. ಅದೇ ವಿವಿಯ ವಿದ್ಯಾರ್ಥಿ ಸಂಘಟನೆಯಲ್ಲಿಕೆಲಸ ಮಾಡಿದರು. ಪದವಿ ಪಡೆದ ಬಳಿಕ ಸಮುದಾಯದ ಕೆಲಸಗಳಲ್ಲಿತೊಡಗಿಸಿಕೊಂಡರು. ಯಾಲೆ ವಿವಿಯಲ್ಲಿಹೆಚ್ಚಿನ ವಿದ್ಯಾಭ್ಯಾಸ ಮಾಡಿ ಮರಳಿದ ಬಳಿಕ ತಾವು ಕಲಿತ ವಿವಿಯಲ್ಲೇ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸ ತೊಡಗಿದರು. ಜೊತೆಗೆ ಏಷ್ಯಾ ಫೆಸಿಫಿಕ್‌ ಸ್ಟಡೀಸ್‌, ಸೆಂಟರ್‌ ಫಾರ್‌ ಸಿವಿಲ್‌ ಸೊಸೈಟಿ ಸ್ಟಡೀಸ್‌ನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಹಲವು ವಿವಿಗಳಿಗೆ ಸಂದರ್ಶಕ ಉಪನ್ಯಾಸಕರಾಗಿಯೂ ಗುರುತಿಸಿಕೊಂಡಿದ್ದರು. ಘ್ಕಿ

ಸದಾ ಸಮುದಾಯ ಅಭ್ಯುದಯದ ಬಗ್ಗೆ ಚಿಂತನೆ ನಡೆಸುತ್ತಿದ್ದ ಚಾನ್‌ ಅವರಿಗೆ ಸಿಯುಎಚ್‌ಕೆ ಕಾನೂನು ಪ್ರಾಧ್ಯಾಪಕ ಬೆನ್ನಿ ತೈ ಮತ್ತು ರೆವರೆಂಡ್‌ ಚು ಯಿಯು-ಮಿಂಗ್‌ ಅವರ ಸಹಚರ್ಯ ದೊರೆಯಿತು. ಈ ಮೂವರ ಚಿಂತನಾ ಫಲವಾಗಿಯೇ ಅಕ್ಯುಪಾಯ್‌ ಅಭಿಯಾನ ಆರಂಭವಾಯಿತು.

ಪ್ರತ್ಯೇಕ ವ್ಯವಸ್ಥೆ ಹೊಂದಿದ್ದರೂ ಹಾಂಕಾಂಗ್‌ ಚೀನಾದ ಕಪಿಮುಷ್ಟಿಯಲ್ಲೇ ಇದೆ. ಚೀನಾ ತನ್ನ ವಾಗ್ದಾನ ಮರೆತ ಪರಿಣಾಮವೇ ಹಾಂಕಾಂಗ್‌ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ದಾರಿ ತುಳಿಯುತ್ತಿರುವುದು. ಇದಕ್ಕೆ ಚಾನ್‌ನಂಥ ಪ್ರಾಧ್ಯಾಪಕರು ದಾರಿದೀಪಗಳಾಗಿದ್ದಾರೆ. 2014ರಲ್ಲಿನಡೆದ ಅಂಬ್ರೆಲಾ ಮೂಮೆಂಟ್‌ ನೇತೃತ್ವ ವಹಿಸಿದ್ದ ಚಾನ್‌, ಮಹಾತ್ಮ ಗಾಂಧಿ ಮಾರ್ಗವನ್ನೇ ಆಯ್ದುಕೊಂಡರು. ತಮ್ಮ ಬೆಂಬಲಿಗರು ಸಾವಿರಾರು ವಿದ್ಯಾರ್ಥಿಗಳೊಂದಿಗೆ ಹಾಂಕಾಂಗ್‌ನಲ್ಲಿಬೀದಿಯಲ್ಲೇ ಕುಳಿತುಕೊಂಡು ಪ್ರತಿಭಟಿಸಿದರು. ಮೊದ ಮೊದಲು ಚೀನಾ ಸರಕಾರ ನಿರ್ಲಕ್ಷಿಸಿತಾದರೂ ಬೆಂಬಲ ಹೆಚ್ಚಾಗುತ್ತಿದ್ದಂತೆ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿತು. ಅಷ್ಟೊತ್ತಿಗಾಗಲೇ ಹಾಂಕಾಂಗ್‌ನಲ್ಲಿನ ಬೆಳವಣಿಗಳು ಇಡೀ ಜಗತ್ತಿನ ಗಮನ ಸೆಳೆದಿದ್ದವು.

ಇದೀಗ ಚಾನ್‌ ಸೆರೆಮನೆಯಿಂದ ಹೊರ ಬಂದಿದ್ದಾರೆ. ಮತ್ತೆ ಹೋರಾಟಕ್ಕೆ ಹುರುಪು ಬರುವುದರಲ್ಲಿಸಂಶಯವೇ ಇಲ್ಲ. ''ಜೈಲಿನಲ್ಲಿಜೀವನ ಕಷ್ಟವಿತ್ತು. ಆದರೆ, ಅದಕ್ಕೆ ನಾನು ಪಶ್ಚಾತ್ತಾಪ ಪಡಲಾರೆ. ಯಾಕೆಂದರೆ, ಪ್ರಜಾಪ್ರಭುತ್ವ ಪಡೆಯಲು ನಾನು ತೆರುತ್ತಿರುವ ಬೆಲೆ ಇದು. ನಮಗೆ ಸಾರ್ವತ್ರಿಕ ಮತದಾನ ಹಕ್ಕು ಬೇಕೇ ಬೇಕು,'' ಎಂದು ಚಾನ್‌ ಹೇಳಿದ್ದಾರೆ. ಅದರರ್ಥ ಹಾಂಕಾಂಗ್‌ನಲ್ಲಿಮತ್ತೆ ಗಾಂಧಿ ಮಾದರಿಯ ಹೋರಾಟ, ಪ್ರತಿಭಟನೆಗಳನ್ನು ನಾವು ಚಾನ್‌ ನೇತೃತ್ವದಲ್ಲಿನಿರೀಕ್ಷಿಸಬಹುದು.

(ಈ ಲೇಖನವು ವಿಜಯ ಕರ್ನಾಟಕದ 2020ರ ಮಾರ್ಚ್ 15ರ ಸಂಚಿಕೆಯ ವ್ಯಕ್ತಿಗತ ಕಾಲಂನಲ್ಲಿ ಪ್ರಕಟವಾಗಿದೆ)

ಕಾಮೆಂಟ್‌ಗಳಿಲ್ಲ: