ಮಂಗಳವಾರ, ಮಾರ್ಚ್ 3, 2020

How To Apply Dark Mode Theme To Twitter?: ಟ್ವಿಟರ್‌ಗೆ ಡಾರ್ಕ್ ಮೋಡ್ ಥಿಮ್‌ಗೆ ಅನ್ವಯಿಸುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ಇತ್ತೀಚಿನ ದಿನಗಳಲ್ಲಿ ಡಾರ್ಕ್‌ಮೋಡ್ ತುಂಬ ಜನಪ್ರಿಯವಾಗುತ್ತಿದೆ. ಬಹುತೇಕ ಎಲ್ಲಆ್ಯಪ್‌ಗಳು, ವೆಬ್‌ಸೈಟ್‌ಗಳು ಡಾರ್ಕ್‌ಮೋಡ್‌ಗೆ ಬದಲಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಪೈಕಿ ಟ್ವಿಟರ್‌ ಡಾರ್ಕ್‌ಮೋಡ್ ಅಳವಡಿಕೆ ವಿಷಯದಲ್ಲಿ ತನ್ನೆಲ್ಲ ಸ್ಪರ್ಧಿಗಳಿಗಿಂತಲೂ ಮುಂದೆ ಇದೆ. ಫೇಸ್‌ಬುಕ್‌ ಹಾಗೂ ವಾಟ್ಸಪ್‌ಗಳು ಇನ್ನೂ ಬೀಟಾ ವರ್ಷನ್‌ನಲ್ಲಿ ಡಾರ್ಕ್‌ಮೋಡ್ ಪರೀಕ್ಷಿಸುತ್ತಿವೆ.

ಕಣ್ಣು, ಬ್ಯಾಟರಿ ಉಳಿತಾಯಕ್ಕೆ ಅನುಕೂಲ

ಮೈಕ್ರೊ ಬ್ಲಾಗಿಂಗ್‌ನಲ್ಲಿ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ಈ ಟ್ವಿಟರ್‌, ಡಾರ್ಕ್‌ಮೋಡ್ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಆಧರಿತ ಫೋನ್‌ಗಳಲ್ಲೂ ಡಾರ್ಕ್‌ಮೋಡ್ ಲಭ್ಯವಿದೆ. ಮೊಬೈಲ್‌ ಅಥವಾ ಡೆಸ್ಕ್‌ಟಾಪ್‌ನಲ್ಲಿ ಡಾರ್ಕ್‌ಮೋಡ್ ಬಳಸುವುದರಿಂದ ಸಾಕಷ್ಟ ಲಾಭಗಳಿವೆ. ಬ್ರೈಟ್‌ನೆಸ್‌ ಡಿಸ್‌ಪ್ಲೇ ಅತಿಯಾದ ಬಳಕೆಯಿಂದ ನಮ್ಮ ಕಣ್ಣಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ದೃಢವಾಗಿದೆ. ಡಾರ್ಕ್‌ಮೋಡ್ ಅಳವಡಿಸಿಕೊಂಡಿದ್ದರೆ ಸ್ಕ್ರೀನ್‌ನಿಂದ ಹೊರಡುವ ಕಿರಣಗಳು ನಿಮ್ಮ ಕಣ್ಣಿಗೆ ತೊಂದರೆಯುಂಟು ಮಾಡಲಾರವು. ಇನ್ನು ಬ್ಯಾಟರಿ ಚಾರ್ಜಿಂಗ್‌ ದೃಷ್ಟಿಯಿಂದಲೂ ಡಾರ್ಕ್‌ಮೋಡ್ ಅಗತ್ಯ. ಶೇ. 50ರಷ್ಟು ಬ್ಯಾಟರಿ ಉಳಿತಾಯವಾಗಬಲ್ಲದು. ಜೊತೆಗೆ ಡಾರ್ಕ್‌ಮೋಡ್‌ನಿಂದ ಒಂದು ವಿಶಿಷ್ಟ ಸೌಂದರ್ಯ ನಿಮ್ಮ ಸ್ಮಾರ್ಟ್‌ಫೋನ್‌ಗೆ ಲಭ್ಯವಾಗುತ್ತದೆ. ಬಹಳಷ್ಟು ಜನರಿಗೆ ಟ್ವಿಟರ್‌ ಅನ್ನು ಡಾರ್ಕ್‌ಮೋಡ್‌ಗೆ ಹೇಗೆ ಬದಲಿಸಬೇಕು ಎಂಬುದು ಗೊತ್ತಿರುವುದಿಲ್ಲ. ಆ ಹಿನ್ನೆಯಲ್ಲಿ ಆ್ಯಂಡ್ರಾಯ್ಡ್‌ ಆಧರಿತ ಫೋನ್‌ಗಳಲ್ಲಿ ಟ್ವಿಟರ್‌ ಅನ್ನು ಡಾರ್ಕ್‌ಮೋಡ್‌ಗೆ ಬದಲಿಸುವ ಬಗ್ಗೆ ಇಲ್ಲಿದೆ ಮಾಹಿತಿ.




ಸಕ್ರಿಯಗೊಳಿಸುವುದು ಹೇಗೆ?

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಟ್ವಿಟರ್‌ ಆ್ಯಪ್‌ ಓಪನ್‌ ಮಾಡಿ. ಇದಾದ ಮೇಲೆ, ಮೊಬೈಲ್‌ ಸ್ಕ್ರೀನ್‌ನ ಎಡ ಭಾಗದ ಮೇಲ್ತುದಿಯಲ್ಲಿಕಾಣುವ ನಿಮ್ಮ ಪ್ರೊಫೈಲ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ, ಆ್ಯಪ್‌ನ ಕೆಳಭಾಗದ ಎಡ ಮತ್ತು ಬಲ ಭಾಗದ ತುದಿಯಲ್ಲಿಎರಡು ಐಕಾನ್‌ಗಳನ್ನು ಕಾಣಬಹುದು. ಎಡ ಭಾಗದ ಐಕಾನ್‌ 'ಬಲ್ಬ್' ರೀತಿಯಲ್ಲಿದೆ. ಬಲಭಾಗದಲ್ಲಿ ನಾಲ್ಕು ಸ್ಕ್ವೇರ್‌ ಮಾರ್ಕಿನ ಐಕಾನ್‌ ಕಾಣಬಹುದು. ಎಡ ಭಾಗದ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ತಕ್ಷಣವೇ ಡಾರ್ಕ್‌ಮೋಡ್‌ಗೆ ಬದಲಾಗುತ್ತದೆ ನಿಮ್ಮ ಟ್ವಿಟರ್‌ ಆ್ಯಪ್‌. ಅದೇ ರೀತಿ, ಮೊದಲಿನ ರೀತಿಯಾಗಿ ಬ್ರೈಟ್‌ನೆಸ್‌ ಡಿಸ್‌ಪ್ಲೇ ಬೇಕಿದ್ದರೆ ಅದೇ ಐಕಾನ್‌ ಮೇಲೆ ಮತ್ತೆ ಟ್ಯಾಪ್‌ ಮಾಡಿ ಆಗ ಮೊದಲಿನಂತಾಗುತ್ತದೆ.ಟ

ಸೆಟ್ಟಿಂಗ್ಸ್‌ ಬದಲಾವಣೆ ಹೇಗೆ?

ಟ್ವಿಟರ್‌ ಆ್ಯಪ್‌ನ ಮೇಲ್ಭಾಗದ ಎಡ ತುದಿಯಲ್ಲಿರುವ ನಿಮ್ಮ ಪ್ರೊಫೈಲ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ಅಲ್ಲಿಅನೇಕ ಆಪ್ಷನ್‌ಗಳ ಕಾಣಬಹುದು. ಇವುಗಳ ಪೈಕಿ ಕೊನೆಯಲ್ಲಿರುವ 'ಸೆಟ್ಟಿಂಗ್‌ ಮತ್ತು ಪ್ರೈವೆಸಿ' ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಆ ಬಳಿಕ ಜನರಲ್‌ ವಿಭಾಗದಲ್ಲಿರುವ 'ಡಿಸ್‌ಪ್ಲೇ ಆ್ಯಂಡ್‌ ಸೌಂಡ್‌ ಆಪ್ಷನ್‌' ಮೇಲೆ ಟ್ಯಾಪ್‌ ಮಾಡಿದಾಗ, ಮೀಡಿಯಾ, ಡಿಸ್‌ಪ್ಲೇ ಮತ್ತು ಸೌಂಡ್‌ ಸೇರಿದಂತೆ ಇತರೆ ವಿಭಾಗಗಳನ್ನು ಕಾಣಬಹುದು. 'ಡಿಸ್‌ಪ್ಲೇ' ವಿಭಾಗದಲ್ಲಿ'ಡಾರ್ಕ್‌ಮೋಡ್‌' ಇರುವುದನ್ನು ಗಮನಿಸಿ. ಇದರ ಮೇಲೆ ಕ್ಲಿಕ್‌ ಮಾಡಿದಾಗ ಬರುವ ಪಾಪ್‌ ಅಪ್‌ನಲ್ಲಿಆಫ್‌, ಆನ್‌ ಮತ್ತು 'ಆಟೊಮೆಟಿಕ್‌ ಅಟ್‌ ಸನ್‌ಸೆಟ್‌' ಎಂಬ ಆಯ್ಕೆಗಳು ಕಾಣಸಿಗುತ್ತವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಪ್ಷನ್‌ ಆಯ್ಕೆ ಮಾಡಿಕೊಳ್ಳಬಹುದು. ಡಾರ್ಕ್‌ಮೋಡ್‌ ಆಯ್ಕೆಯು ನಿಮಗೆ ಡಾರ್ಕ್‌ಮೋಡ್‌ ಅನ್ನು ಸ್ವಯಂ ಆಗಿ ಸೂರ್ಯೋದಯ ಬಳಿಕ ಸಕ್ರಿಯಗೊಳಿಸುವ ಆಯ್ಕೆಯನ್ನು ನೀಡುತ್ತದೆ. ನಿಮಗೆ ರಾತ್ರಿಯ ವೇಳೆ ಮಾತ್ರವೇ ಟ್ವಿಟರ್‌ ಡಾರ್ಕ್‌ಮೋಡ್‌ನಲ್ಲಿದ್ದರೆ ಚೆನ್ನ ಎನಿಸಿದರೆ ಈ ಆಟೊಮೆಟಿಕ್‌ ಆಪ್ಷನ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಡಿಮ್‌ ಮತ್ತು ಲೈಟ್ಸ್‌ ಔಟ್

ಡಿಸ್‌ಪ್ಲೇ ವಿಭಾಗದಲ್ಲಿನೀವು 'ಡಾರ್ಕ್‌ಮೋಡ್‌ ಅಪೀಯರನ್ಸ್‌' ಎಂಬ ಆಪ್ಷನ್‌ ಅನ್ನು ಗಮನಿಸಬಹುದು. ಡಾರ್ಕ್‌ಮೋಡ್‌ ಆಯ್ಕೆ ಕೆಳಭಾಗದಲ್ಲೇ ಇದೆ. ಒಂದು ವೇಳೆ ನೀವು 'ಡಾರ್ಕ್‌ಮೋಡ್‌ ಅಪೀಯರನ್ಸ್‌' ಮೇಲೆ ಟ್ಯಾಪ್‌ ಮಾಡಿದರೆ, 'ಡಿಮ್‌' ಮತ್ತು 'ಲೈಟ್ಸ್‌ ಔಟ್‌' ಆಪ್ಷನ್‌ಗಳಿರುವುದನ್ನು ಕಾಣುತ್ತೀರಿ. ಡಿಮ್‌ ಡಿಫಾಲ್ಟ್‌ ಆಪ್ಷನ್‌ ಆಗಿದ್ದು, ಟ್ವಿಟರ್‌ ಡಾರ್ಕ್ ನ್ಯಾವಿ ಬಣ್ಣವನ್ನು ಹಿನ್ನೆಲೆಯಾಗಿ ಒದಗಿಸುತ್ತದೆ. ಒಂದು ವೇಳೆ, ನೀವು ಲೈಟ್ಸ್‌ ಔಟ್‌ ಆಪ್ಷನ್‌ ಆಯ್ಕೆ ಮಾಡಿಕೊಂಡರೆ, ಟ್ವಿಟರ್‌ ಪೇಜ್‌ನ ಹಿನ್ನೆಲೆ ಸಂಪೂರ್ಣವಾಗಿ ಕಪ್ಪಾಗಿ ಬದಲಾಗುತ್ತದೆ. ವಿಶೇಷವಾಗಿ ಅಮೋಲಿಡ್ ಡಿಸ್‌ಪ್ಲೇಗಳಲ್ಲಿಈ ಆಪ್ಷನ್‌ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಕಾಮೆಂಟ್‌ಗಳಿಲ್ಲ: