ಸೋಮವಾರ, ಡಿಸೆಂಬರ್ 16, 2019

How did Google Assistant works: ರಿಯಲ್‌ ಟೈಮ್‌ ದುಭಾಷಿ ಹೇಗೆ ಕೆಲಸ ಮಾಡುತ್ತದೆ?

- ಮಲ್ಲಿಕಾರ್ಜುನ ತಿಪ್ಪಾರ

ಗೂಗಲ್‌ ಹೊರ ತಂದಿರುವ ಅನೇಕ ಉತ್ಪನ್ನಗಳಲ್ಲಿ'ಗೂಗಲ್‌ ಅಸಿಸ್ಟೆಂಟ್‌' ಭಿನ್ನವಾಗಿದ್ದು, ಅತ್ಯುಪಯುಕ್ತ ಮತ್ತು ಬಳಕೆದಾರರ ಸ್ನೇಹಿಯಾಗಿದೆ. ಐಫೋನ್‌ನಲ್ಲಿ ಸಿರಿ, ವಿಂಡೋಸ್‌ ಫೋನ್‌ನಲ್ಲಿ ಕೋರ್ಟನಾ, ಅಮೆಜಾನ್‌ನ ಅಲೆಕ್ಸಾ ರೀತಿಯಲ್ಲೇ ಗೂಗಲ್‌ನ ಈ 'ಗೂಗಲ್‌ ಅಸಿಸ್ಟೆಂಟ್‌' ಕೆಲಸ ಮಾಡುತ್ತದೆ. ಈ ಉತ್ಪನ್ನ ಮೊದಲಿಗೆ ಆರಂಭವಾದಾಗ ಗೂಗಲ್‌ನ ಪ್ರಾಡಕ್ಟ್‌ಗಳಾದ ಪಿಕ್ಸೆಲ್‌ ಫೋನ್‌ ಅಥವಾ ಗೂಗಲ್‌ ಹೋಮ್‌ ಗ್ಯಾಜೆಟ್‌ಗಳಿಗೆ ಮಾತ್ರ ಸಿಮೀತವಾಗಿತ್ತು. ಆದರೆ, ಇದೀಗ ಎಲ್ಲಆ್ಯಂಡ್ರಾಯ್ಡ್‌ ಹಾಗೂ ಐಒಎಸ್‌ ಆಧರಿತ ಫೋನ್‌, ಡಿವೈಸ್‌ಗಳಿಗೂ ಇದು ಸಪೋರ್ಟ್‌ ಮಾಡುತ್ತದೆ.

ಆರಂಭದಲ್ಲಿ ಗೂಗಲ್‌ ಅಸಿಸ್ಟೆಂಟ್‌ ಇಂಗ್ಲಿಷ್‌ನಲ್ಲಿ ಮಾತ್ರ ಸೇವೆಯನ್ನು ಒದಗಿಸುತ್ತಿತ್ತು. ಆನಂತರ ಜಗತ್ತಿನ ಅನೇಕ ಭಾಷೆಗಳಲ್ಲಿ ಸೇವೆಯನ್ನು ನೀಡಲಾರಂಭಿಸಿತು. ಇದರಲ್ಲಿ ನಮ್ಮ ಕೆಲವು ಭಾರತೀಯ ಭಾಷೆಗಳೂ ಸೇರಿವೆ. ಇದೆಲ್ಲವೂ ಗೊತ್ತಿರುವ ಸಂಗತಿಯೇ. ಆದರೆ, ಹೊಸ ವಿಷಯ ಏನೆಂದರೆ, ಗೂಗಲ್‌ ಅಸಿಸ್ಟೆಂಟ್‌ ಇನ್ನು ಮುಂದೆ 'ರಿಯಲ್‌ ಟೈಮ್‌ನಲ್ಲಿ ಭಾಷಾಂತರ ಮಾಡಲಿದೆ'! ಅರ್ಥಾತ್‌ ಅದು ದುಭಾಷಿ ರೀತಿಯಲ್ಲಿಕೆಲಸ ಮಾಡಲಿದೆ.


ಹೌದು, ಇದು ನಿಜ. ಇದಕ್ಕಾಗಿ ಗೂಗಲ್‌, ಅಸಿಸ್ಟೆಂಟ್‌ಗೆ 'ಇಂಟರ್‌ಪ್ರೆಟರ್‌ ಮೋಡ್‌' ಪರಿಚಯಿಸಿದೆ. ಇದು ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಆಧರಿತ ಸಾಧನಗಳಿಗೆ ಸಪೋರ್ಟ್‌ ಮಾಡಲಿದೆ. 2019ರ ಜನವರಿಯಲ್ಲೇ ಈ ಬಗ್ಗೆ ಗೂಗಲ್‌ ಘೋಷಣೆ ಮಾಡಿ, ಗೂಗಲ್‌ ಹೋಮ್‌ ಸ್ಪೀಕರ್‌, ಸ್ಮಾರ್ಟ್‌ ಡಿಸ್‌ಪ್ಲೇಸ್‌ ಸೇರಿದಂತೆ ಇನ್ನಿತ ಸಾಧನಗಳಿಗೆ ಪರಿಚಯಿಸಿತ್ತು. ಇದೀಗ ಈ ಫೀಚರ್‌ ಜಾಗತಿಕವಾಗಿ ಎಲ್ಲ ಫೋನ್‌ ಬಳಕೆದಾರರಿಗೆ ವಿಸ್ತರಿಸಲಾಗಿದೆ.

ವಿಮಾನಗಳು, ಸ್ಥಳೀಯ ರೆಸ್ಟೊರೆಂಟ್‌ಗಳ ಶೋಧ ಸೇರಿದಂತೆ ಇನ್ನಿತರ ಮಾಹಿತಿಗಾಗಿ ಪ್ರವಾಸಿಗರು ಗೂಗಲ್‌ ಅಸಿಸ್ಟೆಂಟ್‌ ನೆರವು ಪಡೆಯುತ್ತಿದ್ದಾರೆ. ಪ್ರಯಾಣದ ವೇಳೆ ಇನ್ನೂ ಹೆಚ್ಚಿನ ನೆರವು ನೀಡುವ ನಿಟ್ಟಿನಲ್ಲಿಅಸಿಸ್ಟೆಂಟ್‌ ಇದೀಗ ರಿಯಲ್‌ ಟೈಮ್‌ ಭಾಷಾಂತರ ಫೀಚರ್‌ ಇಂಟರ್‌ಪ್ರಿಟರ್‌ ಮೋಡ್‌ನೊಂದಿಗೆ ನಿಮ್ಮ ಮುಂದೆ ಬಂದಿದೆ. ಜಗತ್ತಿನಾದ್ಯಂತದ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಫೋನ್‌ಗಳಲ್ಲಿನ ಅಸಿಸ್ಟೆಂಟ್‌ಗಳಿಗೆ ಇದು ಲಭ್ಯವಾಗಲಿದೆ ಎಂದು ಗೂಗಲ್‌ ತನ್ನ ಬ್ಲಾಗ್‌ನಲ್ಲಿತಿಳಿಸಿದೆ.

ಕನ್ನಡ ಸಹಿತ 44 ಭಾಷೆಗೆ ಬೆಂಬಲ

ಪ್ರಯಾಣದ ವೇಳೆ ವಿದೇಶಿ ಭಾಷೆಯಲ್ಲಿ ಮಾತನಾಡುವವರಿದ್ದರೆ ನೀವು ನಿಮ್ಮ ಫೋನ್‌ನಲ್ಲಿರುವ ಈ ಫೀಚರ್‌ ಅನ್ನು ಬಳಸಿಕೊಂಡು ಅವರೊಂದಿಗೆ ಮಾತನಾಡಬಹುದು. ಉದಾಹರಣೆಗೆ, ''ಹೇ ಗೂಗಲ್‌, ಬಿ ಮೈ ಫ್ರೆಂಚ್‌ ಟ್ರಾನ್ಸ್‌ಲೇಟರ್‌,'' ಎಂದು ಹೇಳಿದರೆ, ಆ ಭಾಷೆಯಲ್ಲಿನೀವು ಮತ್ತೊಬ್ಬರೊಂದಿಗೆ ಸಂವಹನ ಮಾಡಬಹುದು. ಗೂಗಲ್‌ ಹೇಳುವಂತೆ ಗೂಗಲ್‌ ಅಸಿಸ್ಟೆಂಟ್‌ ಇಂಟರ್‌ಪ್ರೆಟರ್‌ ಜಗತ್ತಿನ 44 ಭಾಷೆಗಳಿಗೆ ಸಪೋರ್ಟ್‌ ಮಾಡಲಿದೆ. ಈ ಪಟ್ಟಿಯಲ್ಲಿ ಕನ್ನಡವೂ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಯಾವೆಲ್ಲ ಭಾಷೆಗಳಿವೆ?

ಅರೆಬಿಕ್‌, ಬಂಗಾಲಿ, ಬರ್ಮೀಸ್‌, ಕಾಂಬೋಡಿಯನ್‌, ಜೆಕ್‌, ಡ್ಯಾನಿಷ್‌, ಡಚ್‌, ಇಂಗ್ಲಿಷ್‌, ಇಸ್ಟೋನಿಯನ್‌, ಫಿಲಿಪಿನೊ, ಫ್ರೆಂಚ್‌, ಜರ್ಮನ್‌, ಗ್ರೀಕ್‌, ಗುಜರಾತಿ, ಹಿಂದಿ, ಹಂಗೇರಿಯನ್‌, ಇಂಡೋನೇಷಿಯನ್‌, ಇಟಾಲಿಯನ್‌, ಜಾಪನೀಸ್‌, ಕೊರಿಯನ್‌, ಮಲಯಾಳಂ, ಮರಾಠಿ, ನೇಪಾಳಿ, ಮ್ಯಾಂಡ್ರಿಯನ್‌, ನಾರ್ವೇಯಿನ್‌, ಪೋರ್ಚುಗೀಸ್‌, ರೋಮಾನಿಯನ್‌, ರಷ್ಯನ್‌, ಸಿಂಹಳಿ, ಸ್ಪ್ಯಾನಿಶ್‌, ಸ್ವೀಡಿಶ್‌, ತಮಿಳು, ತೆಲುಗು, ತುರ್ಕಿಷ್‌, ಉಕ್ರೇನಿಯನ್‌, ಉರ್ದು ಇತ್ಯಾದಿ ಭಾಷೆಗಳಲ್ಲಿಗೂಗಲ್‌ ಅಸಿಸ್ಟೆಂಟ್‌ ಇಂಟರ್‌ಪ್ರೆಟರ್‌ ಸೇವೆ ಲಭ್ಯವಿದೆ. ಸಂಭಾಷಣೆ ಮೇಲೆ ಹೆಚ್ಚು ನಿಯಂತ್ರಣ ಸಾಧಿಸುವುದಕ್ಕಾಗಿ ಇದು ನಿಮಗೆ ಮ್ಯಾನುವಲ್‌ ಮೋಡ್‌ ಕೂಡ ಒದಗಿಸುತ್ತದೆ. ಹಾಗೆಯೇ, ಕೀ ಬೋರ್ಡ್‌ ಮೋಡ್‌ನಿಂದಾಗಿ ನೀವು ಟೈಪಿಸಿಯೂ ಭಾಷಾಂತರ ಮಾಡಬಹುದು. ಈ ಮೋಡ್‌ಗಳನ್ನು ಬಳಸುವಾಗ ನೀವು ಇಂಟರ್‌ಪ್ರೆಟರ್‌ ಮೋಡ್‌ ಅಥವಾ ವಾಯ್ಸ್ ಕಮಾಂಡ್‌ ಅನ್ನು ಟ್ರಿಗರ್‌ ಬಟನ್‌ ಮೇಲೆ ಟ್ಯಾಪ್‌ ಮಾಡುವ ಮೂಲಕ ಸ್ವಿಚ್‌ ಆಫ್‌ ಮಾಡಬಹುದು.


ಏನಿದು ಗೂಗಲ್‌ ಅಸಿಸ್ಟೆಂಟ್‌?

ಇದು ಗೂಗಲ್‌ನ ಅತಿ ಜನಪ್ರಿಯ ಉತ್ಪನ್ನವಾಗಿದ್ದು, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌(ಕೃತಕ ಬುದ್ಧಿಮತ್ತೆ) ಆಧರಿತ ವರ್ಚುವಲ್‌ ಸೇವೆಯಾಗಿದೆ. ಮೊಬೈಲ್‌ ಮತ್ತು ಸ್ಮಾರ್ಟ್‌ ಹೋಮ್‌ ಗ್ಯಾಜೆಟ್‌ಗಳಲ್ಲಿಈ ಸೇವೆ ದೊರೆಯುತ್ತದೆ. ಈ ಹಿಂದಿನ ಗೂಗಲ್‌ ನೌ ಏಕಮುಖವಾಗಿ ಸಂಭಾಷಣೆಗೆ ಅನುವು ಮಾಡಿಕೊಡುತ್ತಿತ್ತು. ಆದರೆ, ಗೂಗಲ್‌ ಅಸಿಸ್ಟೆಂಟ್‌ ದ್ವಿಮುಖ ಸಂಭಾಷಣೆಗೆ ಬೆಂಬಲ ನೀಡುತ್ತದೆ. ಗೂಗಲ್‌ನ ಮೆಸೇಜಿಂಗ್‌ ಆ್ಯಪ್‌ 'ಅಲ್ಲೋ' ಭಾಗವಾಗಿ ಈ ಅಸಿಸ್ಟೆಂಟ್‌ ಸೇವೆ 2016ರಲ್ಲಿಆರಂಭವಾಯಿತು. 2017ರಲ್ಲಿ ಆ್ಯಂಡ್ರಾಯ್ಡ್‌ ಸಾಧನಗಳಿಗೂ ವಿಸ್ತರಣೆಯಾಯಿತು. 2017ರಲ್ಲಿ ಅಂದಾಜು 40 ಕೋಟಿ ಬಳಕೆದಾರರು ಗೂಗಲ್‌ ಅಸಿಸ್ಟೆಂಟ್‌ ಇನ್ಸ್‌ಟಾಲ್‌ ಮಾಡಿಕೊಂಡಿದ್ದಾರೆ.

Finland PM Sanna Marin- 'ಸನ್ನ' ವಯಸ್ಸಿಗೇ ಪ್ರಧಾನಿ!

ಸಲಿಂಗ ಕುಟುಂಬದ ಹಿನ್ನೆಲೆ ಹೊಂದಿರುವ ಸನ್ನಾ ಮರಿನ್‌ ತಮ್ಮ ಆರಂಭದ ದಿನಗಳಲ್ಲಿಬೇಕರಿಯಲ್ಲಿಕೆಲಸ ಮಾಡುತ್ತಿದ್ದರು...


- ಮಲ್ಲಿಕಾರ್ಜುನ ತಿಪ್ಪಾರ
ಡಿಸೆಂಬರ್‌ ಹತ್ತಕ್ಕಿಂತ ಮೊದಲು 'ಸನ್ನಾ ಮರಿನ್‌' ಎಂಬ ಯುವತಿಯ ಬಗ್ಗೆ ಫಿನ್ಲೆಂಡ್‌ ಬಿಟ್ಟು ಹೊರ ಜಗತ್ತಿಗೆ ಅಷ್ಟೇನೂ ಗೊತ್ತಿರಲಿಲ್ಲ. ಆದರೆ, 34 ವರ್ಷ ವಯಸ್ಸಿನಲ್ಲೇ ಫಿನ್ಲೆಂಡ್‌ನ ಪ್ರಧಾನಿ ಹುದ್ದೆಗೇರಿರುವ ಈ ಯುವತಿಯ ಬಗ್ಗೆ ಈ ಇಡೀ ಜಗತ್ತೇ ಈಗ ಮಾತನಾಡುತ್ತಿದೆ. ತೀರಾ ಚಿಕ್ಕ ವಯಸ್ಸಿಗೇ ಪ್ರಧಾನಿ ಹುದ್ದೆಗೇರಿದರು ಎಂಬ ಕಾರಣಕ್ಕಲ್ಲ; ಬದಲಿಗೆ ಅವರಲ್ಲಿರುವ ನಾಯಕತ್ವ, ಬದ್ಧತೆಗಾಗಿ. ಹಾಗೆಯೇ, ಸದ್ಯ ಸೇವೆ ಸಲ್ಲಿಸುತ್ತಿರುವ ಪ್ರಧಾನಿಗಳ ಪೈಕಿ ಇವರೇ ಅತ್ಯಂತ ಕಿರಿಯ ಪ್ರಧಾನಿ. ಸನ್ನಾ ನಂತರದ ಕಿರಿಯ ಸ್ಥಾನದ ಪ್ರಧಾನಿಗಳ ಸಾಲಿನಲ್ಲಿನ್ಯೂಜಿಲೆಂಡ್‌ನ ಪ್ರಧಾನಿ ಜಸಿಂದಾ ಆರ್ಡೇನ್‌(39) ಮತ್ತು ಉಕ್ರೇನಿಯನ್‌ ಪ್ರಧಾನಿ ಒಲೆಕ್ಸಿಯ ಹಂಚರಕ್‌(35) ಇದ್ದಾರೆ.

ಸಂಸದೀಯ ಜನಪ್ರತಿನಿಧಿ ಪ್ರಜಾಪ್ರಭುತ್ವ ಹೊಂದಿರುವ ಫಿನ್ಲೆಂಡ್‌ನಲ್ಲಿಮೊದಲಿನಿಂದಲೂ ಮಹಿಳೆಯರು ರಾಜಕಾರಣದಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಹುಶಃ ಜಗತ್ತಿನಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗೆ ಅನಿಯಂತ್ರಿತ ಸ್ವಾತಂತ್ರ್ಯ ಹಾಗೂ ಮತದಾನದ ಹಕ್ಕು ನೀಡಿದ ಕೀರ್ತಿ ಫಿನ್ಲೆಂಡ್‌ಗೆ ಸಲ್ಲುತ್ತದೆ. ಅದರ ಪರಿಣಾಮವೇ ಈ ವರೆಗೆ ಮೂವರು ಮಹಿಳೆಯರು ಫಿನ್ಲೆಂಡ್‌ನ ಪ್ರಧಾನಿಯಾಗಲು ಸಾಧ್ಯವಾಗಿದೆ. ಈಗ ಪ್ರಧಾನಿಯಾಗಿರುವ ಸನ್ನಾ ಮರಿನ್‌ ನೇತೃತ್ವದ ಸರಕಾರದ ಸಂಪುಟದ ಒಟ್ಟು 14 ಸಚಿವರ ಪೈಕಿ 9 ಮಹಿಳೆಯರಿದ್ದಾರೆ! ಅದರರ್ಥ, ಫಿನ್ಲೆಂಡ್‌ ರಾಜಕೀಯದಲ್ಲಿಮಹಿಳೆ ಮತ್ತು ಪುರುಷರ ನಡುವಿನ ವ್ಯತ್ಯಾಸ ತೀರಾ ತೆಳುವು. ಹಾಗಾಗಿಯೇ, ಸನ್ನಾ ಮರಿನ್‌ನಂಥ ಯುವತಿ ಚಿಕ್ಕ ವಯಸ್ಸಿಗೇ ಪ್ರಧಾನಿಯಾಗಲು ಸಾಧ್ಯವಾಗುತ್ತದೆ.

ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿಯ ನಾಯಕಿ ಮತ್ತು ಪ್ರಧಾನಿಯಾಗಿದ್ದ ಆಂಟ್ಟಿ ರಿನ್ನಾ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ಪಕ್ಷದ ಕಣ್ಣಿಗೆ ಬಿದ್ದಿದ್ದೇ ಸಾರಿಗೆ ಸಚಿವೆಯಾಗಿದ್ದ ಈ ಸನ್ನಾ ಮರಿನ್‌. ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ಜತೆಗೆ ಇನ್ನೂ ನಾಲ್ಕು ಪಕ್ಷಗಳು ಸೇರಿ ರಚಿಸಿಕೊಂಡಿರುವ ಸರಕಾರದ ನೇತೃತ್ವವನ್ನು ಸನ್ನಾ ವಹಿಸಿದ್ದಾರೆ. ಚಿಕ್ಕ ವಯಸ್ಸಿಗೇ ರಾಜಕಾರಣದಲ್ಲಿಪಳಗಿರುವ ಸನ್ನಾ ಅವರ ಆರಂಭದ ದಿನಗಳೇನೂ ಅತ್ಯುತ್ತಮವಾಗಿರಲಿಲ್ಲ. ಕಾಲೇಜು ಶಿಕ್ಷಣ ಮುಗಿದ ಕೂಡಲೇ 2006ರಲ್ಲಿಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ಯುವ ವಿಭಾಗವನ್ನು ಸೇರಿ, 2010ರಿಂದ 2012ರವರೆಗೆ ಅದರ ಮೊದಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.


2008ರಲ್ಲಿನಡೆದ ಫಿನ್ನಿಷ್‌ ಮುನ್ಸಿಪಲ್‌ ಚುನಾವಣೆಗೆ ಸನ್ನಾ ಸ್ಪರ್ಧಿಸಿದ್ದರು. 'ಪ್ರಥಮ ಚುಂಬನಂ ದಂತ ಭಗ್ನಂ' ಎಂಬಂತೆ ಅವರಿಗೆ ಸೋಲು ಎದುರಾಯಿತು. ಮಧ್ಯೆ ಸ್ವಲ್ಪ ಬಿಡುವು ತೆಗೆದುಕೊಂಡು ಮತ್ತೆ 2012ರಿಂದ ರಾಜಕಾರಣದಲ್ಲಿಪೂರ್ಣ ಪ್ರಮಾಣದಲ್ಲಿಸನ್ನಾ ಸಕ್ರಿಯರಾದರು. 27ನೇ ವಯಸ್ಸಿನಲ್ಲೇ ಟ್ಯಾಂಪೇರ್‌ ಸಿಟಿ ಕೌನ್ಸಿಲ್‌ಗೆ ಆಯ್ಕೆಯಾದರು. ಇದು ಅವರ ರಾಜಕೀಯ ಜೀವನಕ್ಕೆ ಬಹುದೊಡ್ಡ ತಿರುವು ನೀಡಿತ್ತು. ಅಷ್ಟೇ ಅಲ್ಲದೆ, ಅವರು ಇಲ್ಲಿಂದ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಅವರ ರಾಜಕೀಯ ಪಯಣವು ಪ್ರಧಾನಿಯ ಹುದ್ದೆಯವರೆಗೆ ಟಾಪ್‌ ಗೇರ್‌ನಲ್ಲಿಓಡಿತು. 2013ರಿಂದ 2017ರ ವರೆಗೂ ಸಿಟಿ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು. 2017ರಲ್ಲಿಪುನಃ ಆಯ್ಕೆಯಾದರು. ಆ ಮೇಲೆ ಟ್ಯಾಂಪೇರ್‌ ಪ್ರಾದೇಶಿಕ ಅಸೆಂಬ್ಲಿಯ ಸದಸ್ಯರಾಗಿದ್ದರು. ಇದೇ ಸಮಯದಲ್ಲಿ2013-16ವರೆಗೆ ಪಿರ್ಕಾನ್ಮಾ ರಿಜನಲ್‌ ಕೌನ್ಸಿಲ್‌ನ ಮೇಂಬರ್‌ ಕೂಡ ಆಗಿದ್ದರು.

30ನೇ ವರ್ಷದಲ್ಲಿಅಂದರೆ, 2014ರಲ್ಲಿಸನ್ನಾ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿಯ ಎರಡನೇ ಡೆಪ್ಯುಟಿ ಚೇರ್ಮನ್ನರಾಗಿ ಆಯ್ಕೆಯಾದರು. 2015ರಲ್ಲಿಪಿರ್ಕಾನ್ಮಾ ಪ್ರದೇಶದ ಪ್ರತಿನಿಧಿಯಾಗಿ ಫಿನ್ಲೆಂಡ್‌ ಸಂಸತ್ತಿಗೆ ಅಡಿಯಿಟ್ಟರು. ನಾಲ್ಕು ವರ್ಷಗಳ ಬಳಿಕ ಪುನಃ ಆಯ್ಕೆಗೊಂಡ ಸನ್ನಾ, 2019ರ ಜೂನ್‌ 6ರಂದು ಸಾರಿಗೆ ಮತ್ತು ಸಂವಹನ ಇಲಾಖೆಯ ಸಚಿವೆಯಾಗಿ ನೇಮಕಗೊಂಡರು.

ಹಂತ ಹಂತವಾಗಿ ರಾಜಕೀಯದಲ್ಲಿಮೇಲೇರಿದ ಸನ್ನಾ ಮರಿನ್‌ಗೆ ಚಿಕ್ಕ ವಯಸ್ಸಿಗೇ ದೇಶದ ಪ್ರಧಾನಿಯಾಗಬಹುದೆಂಬ ಸಣ್ಣ ಸುಳಿವು ಕೂಡ ಆರಂಭದ ದಿನಗಳಲ್ಲಿಇರಲಿಲ್ಲವೇನೋ? ಆದರೆ, ಅವರ ಬದ್ಧತೆ ಮತ್ತು ದೇಶದೆಡೆಗಿನ ಕಾಳಜಿ, ಸಮ್ಮಿಶ್ರ ಸರಕಾರವನ್ನು ಕರೆದೊಯ್ಯುವ ಛಾತಿ ಅವರನ್ನು ಇಂದು ದೇಶದ ಉನ್ನತ ಹುದ್ದೆಯವರೆಗೂ ಕರೆ ತಂದಿದೆ. ಸನ್ನಾಗಿಂತ ಮೊದಲ ಪ್ರಧಾನಿಯಾಗಿದ್ದ ರಿನ್ನಾ ಅವರು ಪೋಸ್ಟಲ್‌ ಮುಷ್ಕರವನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಸನ್ನಾ ಮರಿನ್‌ ಅವರಿಗೇನೂ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲ; ಶ್ರೀಮಂತರೂ ಅಲ್ಲ. 1985 ನವೆಂಬರ್‌ 16ರಂದು ಸನ್ನಾ ಮರಿನ್‌ ಅವರು ಹೆಲ್ಸಿಂಕಿಯಲ್ಲಿಜನಸಿದರು. ತಂದೆ ಕುಡುಕನಾಗಿದ್ದ. ಹೀಗಾಗಿ ತಂದೆ-ತಾಯಿಗಳಿಬ್ಬರು ಸನ್ನಾ ತೀರಾ ಚಿಕ್ಕವಳಿದ್ದಾಗಲೇ ಬೇರೆ ಬೇರೆಯಾದರು. ಆಗ ಇಡೀ ಕುಟುಂಬ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿತ್ತು. ತಾಯಿ ಮತ್ತು ತಾಯಿಯ ಗೆಳತಿ(ಸಂಗಾತಿ)ಯ ಪೋಷಕತ್ವದಲ್ಲಿಸನ್ನಾ ಬೆಳೆದರು. ಸನ್ನಾ ಅವರದ್ದು ರೇನ್‌ಬೋ ಫ್ಯಾಮಿಲಿ(ಎಲ್‌ಜಿಬಿಟಿ ಕಮ್ಯುನಿಟಿ). ತಮ್ಮ ಈ ಕುಟುಂಬದ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶವಿರಲಿಲ್ಲ. ಫಿನ್ಲೆಂಡ್‌ ಸಮಾಜದಲ್ಲಿಸಲಿಂಗ ಕುಟುಂಬಗಳು ನಿಷಿದ್ಧವಾಗಿವೆ. ಇಂಥ ಸಾಮಾಜಿಕ ಪರಿಸ್ಥಿತಿಯಲ್ಲಿಸನ್ನಾ ಅವರ ಮೇಲಾದ ಪರಿಣಾಮ ಬಗ್ಗೆ ನಾವು ಊಹಿಸಬಹುದು.

ಮಗುವಾಗಿ ತಾವು ಎದುರಿಸಿದ ಆ ದಿನಗಳನ್ನು ಅವರದ್ದೇ ಮಾತಿನಲ್ಲಿಹೇಳುವುದಾದರೆ, ಅವರಿಗೆ ಅದು ಸಂಪೂರ್ಣ ನಿಶ್ಶಬ್ಧ ರೀತಿಯ ಅನುಭವ. ಇದು ಅವರಿಗೆ ಅಸಮರ್ಥತೆಯ ಭಾವನೆಯನ್ನು ತಂದುಕೊಡುತ್ತಿತ್ತು. ಅವರನ್ನು ಒಂದು ಕುಟುಂಬ ರೀತಿಯಲ್ಲಿಅಥವಾ ಇನ್ನುಳಿದವರ ಜತೆ ಸರಿಸಮಾನವಾಗಿ ನೋಡುವ ಸ್ಥಿತಿಯಲ್ಲಿಫಿನ್ಲೆಂಡ್‌ ಸಮಾಜ ಇಲ್ಲ. ಆದರೆ, ಇದಾವುದೂ ಸನ್ನಾ ಅವರ ಆತ್ಮವಿಶ್ವಾಸವನ್ನು ಕುಂದಿಸಲಿಲ್ಲ. ತಮಗೆ ಬೇಕಾದದ್ದನ್ನು ಸಾಧಿಸುವ ಛಲಕ್ಕೆ ಅಡ್ಡಿಯಾಗಲಿಲ್ಲ.

ತಮ್ಮ ಆರಂಭದ ದಿನಗಳನ್ನು ಬಹುತೇಕ ಅವರು ಬೇಕರಿಯಲ್ಲಿಕೆಲಸ ಮಾಡುತ್ತಾ ಕಳೆದರು. ವಿಶೇಷ ಎಂದರೆ, ಅವರ ಕುಟುಂಬದಲ್ಲಿವಿಶ್ವವಿದ್ಯಾಲಯ ಮೆಟ್ಟಿಲು ತುಳಿದ ಮೊದಲ ವ್ಯಕ್ತಿ ಇವರು. ಸನ್ನಾ ಅವರ ಪ್ರತಿ ಸಾಹಸಕ್ಕೂ ತಾಯಿಯಿಂದ ಬೆಂಬಲ ದೊರೆಯುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ರಾಜಕಾರಣದ ಆಚೆಯೂ ಕೌಟುಂಬಿಕ ಜೀವನಕ್ಕೆ ಹೆಚ್ಚು ಮಹತ್ವ ನೀಡುವ ಸನ್ನಾ, ಮಾರ್ಕೋಸ್‌ ರಾಯ್ಕೊನೆನ್‌ ಎಂಬವರನ್ನು ವಿವಾಹವಾಗಿದ್ದು, 2018ರ ಜನವರಿಯಲ್ಲಿಅವರು ಎಮ್ಮಾ ಎಂಬ ಹೆಣ್ಣು ಮಗುವಿನ ತಾಯಿಯಾದರು. ಮಗುವಿಗೆ ಈಗ 22 ತಿಂಗಳು. ಸೋಷಿಯಲ್‌ ಮೀಡಿಯಾದಲ್ಲಿಗರ್ಭಿಣಿಯಾದಾಗಿನಿಂದ ಹಿಡಿದು ತಾಯಿಯಾಗುವವರೆಗಿನ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಆ ಮೂಲಕ ವೃತ್ತಿನಿರತ ತಾಯಿಯಾಗುವ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಯುನಿವರ್ಸಿಟಿ ಆಫ್‌ ಟ್ಯಾಂಪೇರ್‌ನಿಂದ ಪದವಿ ಪಡೆದಿರುವ ಸನ್ನಾ ಫಿನ್ನಿಷ್‌, ಇಂಗ್ಲಿಷ್‌ ಮತ್ತು ಸ್ವೀಡಿಷ್‌ ಭಾಷೆಗಳಲ್ಲಿಸರಾಗವಾಗಿ ಮಾತನಾಡುತ್ತಾರೆ. ಹೊರಾಂಗಣ ಚಟುವಟಿಕೆಗಳೆಂದರೆ ತುಂಬ ಇಷ್ಟ. ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಸನ್ನಾ ಎದುರು ಆಡಳಿತವೇನೂ ಸುಲಭವಾಗಿಲ್ಲ. ಪೋಸ್ಟಲ್‌ ಮುಷ್ಕರದಿಂದಾಗಿ ಮುನಿಸಿಕೊಂಡಿರುವ ಮೈತ್ರಿ ಪಕ್ಷಗಳನ್ನು ಒಂದೇ ದಿಕ್ಕಿನಡಿ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಇದೆ. ಸರಕಾರದ ಬಗ್ಗೆ ಜನರು ಕಳೆದುಕೊಂಡಿರುವ ವಿಶ್ವಾಸವನ್ನು ಮತ್ತೆ ಗಳಿಸುವ ದಾರಿ ಕೂಡ ಅಷ್ಟು ಸುಲಭವಾಗಿಲ್ಲ. ಹಾಗಾಗಿ, ತೀರಾ ಚಿಕ್ಕ ವಯಸ್ಸಿಗೇ ಪ್ರಧಾನಿಯಾಗಿರುವ ಸನ್ನಾ ಇದೆಲ್ಲವನ್ನೂ ನಿಭಾಯಿಸಬಲ್ಲರೇ ಎಂಬ ಪ್ರಶ್ನೆಗೆ ಅವರು ಆತ್ಮವಿಶ್ವಾಸದಿಂದಲೇ, ''ನನ್ನ ವಯಸ್ಸು ಅಥವಾ ಲಿಂಗದ ಬಗ್ಗೆ ಎಂದೂ ಯೋಚಿಸುವುದಿಲ್ಲ,'' ಎನ್ನುತ್ತಾರೆ. ಅಂದರೆ, ರಾಜಕಾರಣವೇ ಇರಲಿ, ಆಡಳಿತ ರಂಗವೇ ಇರಲಿ ನೀವು ಹೇಗೆ ವರ್ತಿಸುತ್ತೀರಿ, ನಿಮ್ಮ ಸಾಮರ್ಥ್ಯವನ್ನು ಹೇಗೆ ಪ್ರತಿಷ್ಠಾಪಿಸುತ್ತೀರಿ ಎಂಬುದಷ್ಟೇ ಮಹತ್ವದ್ದಾಗಿರುತ್ತದೆ. ಬಾಕಿ ಎಲ್ಲವೂ ನಗಣ್ಯ ಎಂಬುದನ್ನು ಅವರ ಮಾತುಗಳು ಧ್ವನಿಸುತ್ತವೆ.

ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಭಿನ್ನವಾಗಿರುವ ಫಿನ್ಲೆಂಡ್‌ ದೇಶದ ಚುಕ್ಕಾಣಿ ಹಿಡಿದಿರುವ ಸನ್ನಾ ಮರಿನ್‌, ಜಗತ್ತಿನ ಯುವತಿಯರಿಗೆ ಹೊಸ ರೋಲ್‌ ಮಾಡೆಲ್‌ ಅಂದರೆ ತಪ್ಪಲ್ಲ.

ಸೋಮವಾರ, ಡಿಸೆಂಬರ್ 9, 2019

Safety Apps: ಮಹಿಳೆಯರ ಫೋನ್‌ನಲ್ಲಿ ಇರಲೇಬೇಕಾದ ಆ್ಯಪ್ಸ್

'ಮಧ್ಯರಾತ್ರಿಯಲ್ಲಿ ಮಹಿಳೆಯೊಬ್ಬಳು ಸುರಕ್ಷಿತವಾಗಿ ಸಂಚರಿಸಿದಾಗಲೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕ ಹಾಗೆ' ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಆದರೆ, ಇತ್ತೀಚಿನ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಗಮನಿಸಿದರೆ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲಎಂದು ಹೇಳಬೇಕು. ಯಾಕೆಂದರೆ, ಇತ್ತೀಚೆಗಷ್ಟೇ ಬೆಳಕಿಗೆ ಬಂದ ತೆಲಂಗಾಣದ 'ದಿಶಾ ಅತ್ಯಾಚಾರ' ಪ್ರಕರಣವು ಇಡೀ ದೇಶದಲ್ಲಿಆಕ್ರೋಶಕ್ಕೆ ಕಾರಣವಾಗಿದೆ. 2012ರಲ್ಲಿ ದಿಲ್ಲಿಯಲ್ಲಿ ನಡೆದ 'ನಿರ್ಭಯಾ ಪ್ರಕರಣ'ವಂತೂ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ವಸ್ತುಸ್ಥಿತಿ ಹೀಗಿದ್ದಾಗಲೂ, ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರು ತಮ್ಮನ್ನು ತಾವು ತಕ್ಕಮಟ್ಟಿಗಾದರೂ ಸುರಕ್ಷಿತವಾಗಿಟ್ಟುಕೊಳ್ಳಬಹುದು. ಸ್ಮಾರ್ಟ್‌ಫೋನ್‌ ದಿನಮಾನದಲ್ಲಿ ಬದುಕುತ್ತಿರುವ ನಮಗೆ ತಂತ್ರಜ್ಞಾನ ಲಾಭ ಅಗಾಧವಾಗಿದೆ. ವಿಶೇಷವಾಗಿ ಮಹಿಳೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಆ್ಯಪ್‌ಗಳು ಕಾರ್ಯಾಚರಿಸುತ್ತಿವೆ. ವಿಷಮ ಸ್ಥಿತಿಯಲ್ಲಿಅಲರ್ಟ್‌ ರವಾನಿಸುವ, ಅಸುರಕ್ಷಿತ ಪ್ರದೇಶಗಳನ್ನು ಎಚ್ಚರಿಕೆ ನೀಡುವುದು ಸೇರಿದಂತೆ ಅನೇಕ ಫೀಚರ್‌ಗಳನ್ನು ಒಳಗೊಂಡ ಆ್ಯಪ್‌ಗಳಿವೆ. ಅಂಥ ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸುರಕ್ಷಾ ಆ್ಯಪ್‌ (Suraksha)
ಈ ಆ್ಯಪ್‌ನಲ್ಲಿ ಬಳಕೆದಾರರು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸ್ನೇಹಿತರು, ಪೋಷಕರ ಮೊಬೈಲ್‌ ನಂಬರ್‌ಗಳನ್ನು ಸೇರಿಸಬಹುದು. ತುರ್ತು ಸಂದರ್ಭದಲ್ಲಿ ಆ್ಯಪ್‌ ತರೆದು ಪವರ್‌ ಬಟನ್‌ ಅನ್ನು ಒತ್ತಿ ಹಿಡಿದರೆ ಪೊಲೀಸ್‌ ಸಹಾಯವಾಣಿಗೆ ಕರೆ ಹೋಗುತ್ತದೆ. ಇಷ್ಟು ಮಾತ್ರವಲ್ಲದೇ, ಬಳಕೆದಾರರು ಇರುವ ಪ್ರದೇಶದ ಸ್ಥಳ ಗುರುತು, ಆಡಿಯೊ ಮತ್ತು ವಿಡಿಯೊ ಕೂಡ ರವಾನೆಯಾಗುತ್ತದೆ. ಜತೆಗೆ, ಸೂಚಿಸಲಾದ ತುರ್ತು ನಂಬರ್‌ಗಳಿಗೂ ಕರೆ ಕೂಡ ಹೋಗುತ್ತದೆ. ಇದರಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಮಹಿಳಾ ಬಳಕೆದಾರರು ನೆರವು ಪಡೆಯಲು ಸಾಧ್ಯವಾಗುತ್ತದೆ. ಅಂದ ಹಾಗೆ ಈ ಆ್ಯಪ್‌ ಅನ್ನು ಬೆಂಗಳೂರು ಪೊಲೀಸರು ಅಭಿವೃದ್ಧಿಪಡಿಸಿದ್ದಾರೆ.

ಎಸ್‌ಒಎಸ್‌(SOS Stay Safe)

ಯಾವುದೇ ರೀತಿಯ ಕಷ್ಟದಲ್ಲಿ ಸಿಲುಕಿದಾಗ ಸಹಾಯಕ್ಕಾಗಿ ಮತ್ತೊಬ್ಬರ ನೆರವು ಪಡೆಯಲು ಈ ಆ್ಯಪ್‌ ಅವಕಾಶ ಕಲ್ಪಿಸಿಕೊಡುತ್ತದೆ. ಇಂಥ ಸಂದರ್ಭದಲ್ಲಿಈ ಆ್ಯಪ್‌ ಬಳಕೆದಾರರ ಗೆಳೆಯರು, ಕುಟುಂಬದ ಸದಸ್ಯರಿಗೆ ತ್ವರಿತ ಗತಿಯಲ್ಲಿಸಂದೇಶವನ್ನು ರವಾನಿಸುತ್ತದೆ. ಬಳಕೆದಾರರು ತಮ್ಮ ಕೈಯಲ್ಲಿರುವ ಉಪಕರಣವನ್ನು ಅಲುಗಾಡಿಸಿದರೆ ಸಾಕು ಎಸ್‌ಒಎಸ್‌ ಸಂದೇಶ ಹೋಗುತ್ತದೆ. ಲೈಂಗಿಕ ಕಿರುಕುಳ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಈ ಆ್ಯಪ್‌ನ ನೆರವು ಪಡೆಯಬಹುದು.

​ಸ್ಮಾರ್ಟ್‌ 24x7(Smart 24x7)'
ಈ ಆ್ಯಪ್‌ನಲ್ಲಿರುವ ಪ್ಯಾನಿಕ್‌ ಬಟನ್‌ ಪ್ರೆಸ್‌ ಮಾಡಿದರೆ ಪೊಲೀಸರಿಗೆ ಕರೆ ಹೋಗುತ್ತದೆ. ಹಾಗೆಯೇ ಈ ಮೊದಲೇ ಬಳಕೆದಾರರು ಸೆಟ್‌ ಮಾಡಿದ ಫೋನ್‌ ನಂಬರ್‌ಗಳಿಗೂ ಕರೆ ಮಾಡುವ ಅವಕಾಶವನ್ನು ಈ ಆ್ಯಪ್‌ ಒದಗಿಸುತ್ತದೆ. ಒಂದು ವೇಳೆ, ಜಿಪಿಆರ್‌ಎಸ್‌ ಕಾರ್ಯನಿರ್ವಹಿಸದಿದ್ದ ಪಕ್ಷದಲ್ಲಿ ಲೊಕೇಷನ್‌ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ಈ ಆ್ಯಪ್‌ ಕಳುಹಿಸುತ್ತದೆ. ಟ್ರ್ಯಾಕಿಂಗ್‌, ಕಸ್ಟಮ್‌ ಕೇರ್‌ ಮತ್ತು ಚಾಟ್‌ ಸೇರಿದಂತೆ ಇನ್ನೂ ಅನೇಕ ಫೀಚರ್‌ಗಳಿವೆ. ತುರ್ತು ಸಂದರ್ಭದಲ್ಲಿ ಬಳಕೆದಾರರಿರುವ ಜಾಗದ ಆಡಿಯೊ-ವಿಡಿಯೊವನ್ನು ದಾಖಲಿಸಿಕೊಳ್ಳುತ್ತದೆ.

ಮೈ ಸೇಫ್ಟಿಪಿನ್‌(My Safetipin)

ಮ್ಯಾಪ್‌ ಬೇಸ್ಡ್‌ ಸೇಫ್ಟಿ ಆ್ಯಪ್‌ ತುಂಬ ಉಪಯುಕ್ತವಾಗಿದೆ. ಈ ಆ್ಯಪ್‌ ವಿಶೇಷ ಏನೆಂದರೆ, ನೀವಿರುವ ಸ್ಥಳದ ಸುರಕ್ಷತೆಯ ಶ್ರೇಯಾಂಕವನ್ನು ಸೂಚಿಸುತ್ತದೆ. ಆ್ಯಪ್‌ ನಕ್ಷೆಯಲ್ಲಿರುವ ಪಿನ್‌ ಸ್ಥಳದ ಸುರಕ್ಷತೆಯ ಶ್ರೇಯಾಂಕವನ್ನು ಒದಗಿಸುತ್ತದೆ. ಅಸುರಕ್ಷಿತ ಪ್ರದೇಶವಾಗಿದ್ದರೆ ಪಿನ್‌ ಕೆಂಪು ಬಣ್ಣದ್ದಾಗಿರುತ್ತದೆ. ಸುರಕ್ಷಿತ ಪ್ರದೇಶವಾಗಿದ್ದರೆ ಅದು ಹಸಿರು ಬಣ್ಣದ್ದಾಗಿರುತ್ತದೆ. ಕಡಿಮೆ ಸುರಕ್ಷತೆಯ ಪ್ರದೇಶವನ್ನು ಅಂಬರ್‌(ತುಸು ಹಳದಿ) ಪಿನ್‌ ಸೂಚಿಸುತ್ತದೆ. ನೀವಿರುವ ಪ್ರದೇಶದಲ್ಲಿನ ಸಾರ್ವಜನಿಕ ಸಾರಿಗೆ, ಅಲ್ಲಿರುವ ಪೊಲೀಸ್‌ ಠಾಣೆ, ಫಾರ್ಮಸಿ ಅಥವಾ ಹತ್ತಿರದ ಎಟಿಎಂ, ಜನಸಂದಣಿ ಪ್ರದೇಶ ಮಾಹಿತಿ ನೀಡುವುದು ಮಾತ್ರವಲ್ಲದೆ, ರಿಯಲ್‌ ಟೈಮ್‌ ಲೊಕೇಷನ್‌ ವಿವರವನ್ನು ಜಿಪಿಎಸ್‌ ಟ್ರ್ಯಾಕಿಂಗ್‌ ಮೂಲಕ ನಿಮ್ಮ ಹತ್ತಿರದವರೆಗೆ ರವಾನಿಸುತ್ತದೆ. ಉಳಿದ ಬಳಕೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ನಿಮಗೆ ಅಸುರಕ್ಷಿತ ಎನಿಸಿದ ಪ್ರದೇಶವನ್ನೂ ಮ್ಯಾಪ್‌ನಲ್ಲಿ ಪಿನ್‌ ಮಾಡಬಹುದು.

ರೆಸ್ಕೂಯರ್‌ (Rescuer)

ಬಳಕೆದಾರರು ಈ ಆ್ಯಪ್‌ನಲ್ಲಿರುವ ಎಮರ್ಜೆನ್ಸಿ ಟ್ಯಾಬ್‌ ಪ್ರೆಸ್‌ ಮಾಡಿದರೆ ತಕ್ಷಣವೇ ಗೂಗೂಲ್‌ ಲೊಕೇಷನ್‌ ಸಹಿತ ಸಂದೇಶವನ್ನು ಬಳಕೆದಾರರ ಕಾಂಟಾಕ್ಟ್ ಲಿಸ್ಟ್‌ ಮತ್ತು ಫೇಸ್‌ಬುಕ್‌ ಫ್ರೆಂಡ್‌ ಲಿಸ್ಟ್‌ನಲ್ಲಿರುವ ಐವರಿಗೆ ಸಂದೇಶವನ್ನು ಕಳುಹಿಸುತ್ತದೆ. ಹಾಗೆಯೇ, ತುರ್ತು ಸಂದರ್ಭದಲ್ಲಿ ಇಬ್ಬರಿಕೆ ಕರೆ ಮಾಡುವ ಆಯ್ಕೆಯನ್ನು ಹೊಂದಿದೆ.

ನಿರ್ಭಯ(Nirbhaya)

ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಆ್ಯಪ್‌ ಅನ್ನು ರೂಪಿಸಲಾಗಿದೆ. ಬಳಕೆದಾರರು ದಾಖಲಿಸಿದ ಫೋನ್‌ ನಂಬರ್‌ಗಳಿಗೆ ಅಲರ್ಟ್‌ ರವಾನಿಸುವ ಕೆಲಸವನ್ನು ಇದು ಮಾಡುತ್ತದೆ. ಅಸುರಕ್ಷಿತ ಪ್ರದೇಶದ ಬಗ್ಗೆಯೂ ಇದು ಮಾಹಿತಿ ನೀಡುತ್ತದೆ. ಬಳೆಕದಾರರು ಅಂಥ ಪ್ರದೇಶಕ್ಕೆ ಹೋದಾಗ ಈ ಮಾಹಿತಿಯನ್ನು ನೀಡುತ್ತದೆ.

ಸಿಟಿಜನ್‌ಕಾಪ್‌ (CitizenCop)

ಈ ಆ್ಯಪ್‌ ಬಳಸಿಕೊಂಡು ನೀವಿರುವ ಸ್ಥಳಲ್ಲಿ ನಡೆಯುವ ಕ್ರಿಮಿನಲ್‌ ಕೆಲಸಗಳು ಅಥವಾ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ರಿಪೋರ್ಟ್‌ ಮಾಡಬಹುದು. ಮತ್ತು ನಿಮ್ಮ ಹೆಸರನ್ನು ಗುಪ್ತವಾಗಿಡಲಾಗುತ್ತದೆ. ಈ ಆ್ಯಪ್‌ನಲ್ಲಿ ಲಕ್ಷಣ್‌ರೇಖಾ ಎಂಬ ಫೀಚರ್‌ ಇದ್ದು, ಅದನ್ನು ಮಹಿಳೆಯರು ತುರ್ತು ಸಂದರ್ಭದಲ್ಲಿ ಬಳಸಬಹುದು. ಟ್ರ್ಯಾಕಿಂಗ್‌, ಎಮರ್ಜೆನ್ಸಿ ಕರೆ, ಎಸ್‌ಒಎಸ್‌ ಎಚ್ಚರಿಕೆಗಳನ್ನು ರವಾನಿಸುತ್ತದೆ.

​ಚಿಲ್ಲಾ(Chilla)

ತುರ್ತು ಸಂದರ್ಭದಲ್ಲಿ ಮಹಿಳೆಯರು ತಮ್ಮ ಫೋನ್‌ ಅನ್ನು ಬಳಸಲು ಸಾಧ್ಯವಾಗದಿದ್ದಾಗ, ಜೋರಾಗಿ ಕೂಗುವ ಮೂಲಕ ಈ ಚಿಲ್ಲಾ ಆ್ಯಪ್‌ ಸಕ್ರಿಯಗೊಳಿಸಬಹುದು. ಆಗ ಈ ಆ್ಯಪ್‌ ಪೋಷಕರಿಗೆ ತುರ್ತು ಸಂದೇಶವನ್ನು ರವಾನಿಸುತ್ತದೆ. ಇದರ ಹೊರತಾಗಿಯೂ, ಈ ಮೊದಲೇ ಸೆಟ್‌ ಮಾಡಿದ ಫೋನ್‌ ನಂಬರ್‌ಗಳಿಗೂ ಸಂದೇಶಗಳನ್ನು ಕಳುಹಿಸುತ್ತದೆ. ಇದಕ್ಕಾಗಿ ನೀವು ಪವರ್‌ ಬಟನ್‌ ಅನ್ನು 5 ನಿಮಿಷದವರೆಗೆ ಒತ್ತಿ ಹಿಡಿಯಬೇಕು.


DuckDuckGo: ಗೂಗಲ್‌ಗೆ ಸ್ಪರ್ಧೆ ಒಡ್ಡಲಿದೆಯೇ ಡಕ್‌ಡಕ್‌ಗೋ?

- ಮಲ್ಲಿಕಾರ್ಜುನ ತಿಪ್ಪಾರ

ಮೊನ್ನೆ ಮೊನ್ನೆಯಷ್ಟೇ ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ ಅವರು, ''ಡಕ್‌ಡಕ್‌ಗೋ ನನಗೆ ತುಂಬ ಇಷ್ಟವಾಗಿದ್ದು, ಅದನ್ನೇ ನನ್ನ ಡಿಫಾಲ್ಟ್‌ ಸರ್ಚ್ ಎಂಜಿನ್‌ ಆಗಿ ಬದಲಿಸಿಕೊಂಡಿರುವೆ,'' ಎಂದು ಟ್ವೀಟ್‌ ಮಾಡಿದ್ದು ದೊಡ್ಡ ಸುದ್ದಿಗೆ ಕಾರಣವಾಯಿತು. ತಂತ್ರಜ್ಞಾನ ಮಾರುಕಟ್ಟೆಯಲ್ಲಿಗೂಗಲ್‌ ಸರ್ಚ್ ಎಂಜಿನ್‌ ಏಕಸ್ವಾಮ್ಯವನ್ನು ಹೊಂದಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಡಕ್‌ಡಕ್‌ಗೋ ಕೂಡ ಸದ್ದು ಮಾಡುತ್ತಿದೆ. ಹಾಗಂತ, ಸಿಕ್ಕಾಪಟ್ಟೆ ಸ್ಪರ್ಧೆ ನೀಡುತ್ತಿದೆ ಎಂದರ್ಥವಲ್ಲ. ಗೂಗಲ್‌ ಸರ್ಚ್ ಎಂಜಿನ್‌ ಬಳಕೆಯಲ್ಲಿಶೇ. 81.5ರಷ್ಟು ಪಾಲು ಹೊಂದಿದ್ದರೆ, ಡಕ್‌ಡಕ್‌ಗೋ ಪಾಲು ಕೇವಲ ಶೇ. 0.28 ಮಾತ್ರ. ಆದರೆ, ಅದರ ವಿಶ್ವಾಸರ್ಹತೆ ಹೆಚ್ಚಾಗುತ್ತಿದೆ ಎಂದರೆ ತಪ್ಪಲ್ಲ.

ಗೂಗಲ್‌ ಸರ್ಚ್ ಎಂಜಿನ್‌ ನಮ್ಮ ಬದುಕಿನ ಭಾಗವೇ ಆಗಿದ್ದರೂ, ಅದು ನಮ್ಮ ಖಾಸಗಿತನಕ್ಕೆ ಕನ್ನ ಹಾಕಿದೆ, ನಮ್ಮ ನಡವಳಿಕೆ ಮೇಲೆ ಸದಾ ಕಣ್ಣಿಟ್ಟಿರುತ್ತದೆ, ಬಳಕೆದಾರರ ಎಲ್ಲ ಚಟುವಟಿಕೆಗಳನ್ನು ಬೆನ್ನಟ್ಟಿ ಅದರ ಅನ್ವಯ ಜಾಹೀರಾತುಗಳನ್ನು ಪೂರೈಸುತ್ತಿದೆ... ಹೀಗೆ ನಾನಾ ಕಾರಣಗಳಿಂದ ಬಳಕೆದಾರರಿಗೆ ಒಂದಿಷ್ಟು ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂಬ ಆರೋಪಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದ್ದು, ಅದಕ್ಕಾಗಿ ಯುರೋಪ್‌ ಕೋರ್ಟ್‌ಗಳ ಕಟೆಕಟೆಯಲ್ಲಿ ನಿಂತಿದೆ. ಇಂಥ ಹೊತ್ತಿನಲ್ಲಿ ಟ್ವಿಟರ್‌ ದೈತ್ಯ ಕಂಪನಿಯೊಬ್ಬರು ಸಿಇಒ ತಮ್ಮ ಡಿಫಾಲ್ಟ್‌ ಸರ್ಚ್ ಎಂಜಿನ್‌ ಡಕ್‌ಡಕ್‌ಗೋ ಎಂದು ಹೇಳಿದ್ದಾರೆಂದರೆ ಅದಕ್ಕೆ ಮಹತ್ವ ಬಂದೇ ಬರುತ್ತದೆ.


ಕೃತಿಕ ಬುದ್ಧಿಮತ್ತೆ(ಎಐ) ಆಧರಿತ ಡಿಜಿಟಲ್‌ ಸೇವೆಗಳು ನಮ್ಮನ್ನು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಯಾವ ಮಾಹಿತಿಯೂ ರಹಸ್ಯವಾಗಿ ಉಳಿಯುವುದಿಲ್ಲ. ಎಷ್ಟೇ ಕಠಿಣ ಪಾಸ್‌ವರ್ಡ್ ನಮ್ಮ ಮಾಹಿತಿ ಪರರ ಪಾಲಾಗುವುದನ್ನು ತಡೆಯಲಾರದು. ಮಾಹಿತಿ ತಂತ್ರಜ್ಞಾನ ಎಂಬ ಬಟಾ ಬಯಲಿನಲ್ಲಿನಿಂತಿರುವ ನಾವು, ನಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಎದೆಯುಬ್ಬಿಸಿಕೊಂಡಿದ್ದೇವೆ. ಆನ್‌ಲೈನ್‌ನಲ್ಲಿನ ನಮ್ಮ ಪ್ರತಿ ಚಟುವಟಿಕೆಯೂ ನಮ್ಮನ್ನು ಬೆತ್ತಲಾಗಿಸುತ್ತದೆ! ಖಾಸಗಿ ಮಾಹಿತಿಯನ್ನು ಕಾಪಾಡಿಕೊಳ್ಳುವ ವಾಗ್ದಾನಗಳನ್ನು ಎಲ್ಲಸಂಸ್ಥೆಗಳು ನೀಡುತ್ತವೆ. ಆದರೆ, ಅದೇನೂ ಪರಮ ಸತ್ಯವಲ್ಲ.

ಹೀಗಿದ್ದೂ ಡಕ್‌ಡಕ್‌ಗೋ ಮಾತ್ರ ತಾನು ಬಳಕೆದಾರರ ಖಾಸಗಿ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಿದೆ. ಗೂಗಲ್‌ನಂತೆ ಡಕ್‌ಡಕ್‌ಗೋ, ಬಳಕೆದಾರರ ಚಟುವಟಿಕೆ ಮೇಲೆ ನಿಗಾ ವಹಿಸುವುದು, ಐಪಿ ಅಡ್ರೆಸ್‌ಗಳನ್ನು ಪಡೆಯುವುದು ಮತ್ತು ಆನ್‌ಲೈನ್‌ ನಡುವಳಿಕೆಯ ಆಧಾರದ ಮೇಲೆ ಜಾಹೀರಾತುಗಳನ್ನು ಫುಶ್‌ ಮಾಡುವುದಾಗಲಿ ಮಾಡುವುದಿಲ್ಲಎಂಬುದು ಬಳಕೆದಾರರ ಅಂಬೋಣ. ಹಾಗಾಗಿ, ನಿಧಾನವಾಗಿ ಗೂಗಲ್‌ ಸರ್ಚ್ ಎಂಜಿನ್‌ಗೆ ಡಕ್‌ಡಕ್‌ಗೋ ಪರ್ಯಾಯ ಎಂಬ ರೀತಿಯಲ್ಲಿ ಬಿಂಬಿತವಾಗುತ್ತದೆ. ಬಳಕೆಯ ಪ್ರಮಾಣದ ಗಮನಿಸಿದರೆ ಸದ್ಯಕ್ಕೆ ಹಾಗೇ ಹೇಳುವುದು ತಪ್ಪು. ಹಾಗಂತ, ತೀರಾ ಕಡೆಗಣಿಸುವಂತೆಯೂ ಇಲ್ಲ.

2019ರ ನವೆಂಬರ್‌ ಅಂಕಿ-ಸಂಖ್ಯೆಗಳನ್ವಯ ಡಕ್‌ಡಕ್‌ಗೋ ನಿತ್ಯ ಸರಾಸರಿ 4.8 ಕೋಟಿ ಬಳಕೆದಾರರನ್ನು ಹೊಂದಿದೆ. ಅತಿ ಹೆಚ್ಚು ವೀಕ್ಷಿಸಿದ ಆಧಾರದ ಮೇಲೆ ಶೋಧಗಳನ್ನು ಗೂಗಲ್‌ ನಿಮ್ಮ ಮುಂದಿಟ್ಟರೆ, ಡಕ್‌ಡಕ್‌ಗೋ ಅತಿ ಹೆಚ್ಚು ನಿಖರವಾದ ಶೋಧಗಳನ್ನು ಬಳಕೆದಾರರಿಗೆ ನೀಡುತ್ತದೆ. ಹಾಗಂತ ಅದು ಹೇಳಿಕೊಂಡಿದೆ. ಇದು ತಕ್ಕಮಟ್ಟಿಗೂ ನಿಜವೂ ಹೌದು. ಡಕ್‌ಡಕ್‌ಗೋ ಸರ್ಚ್ಎಂಜಿನ್‌ನಲ್ಲಿ ನಿಮಗೆ ಬೇಕಿರುವ ವಿಷಯವನ್ನು ಶೋಧಿಸಿದರೆ ಅಸಂಖ್ಯ ಮಾಹಿತಿ ನಿಮ್ಮ ಮುಂದೆ ಬಂದು ಬೀಳುವುದಿಲ್ಲ.

ಗ್ರೇಟರ್‌ ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾದ ಪಾವೊಲಿಯಲ್ಲಿ ಡಕ್‌ಡಕ್‌ಗೋ ಕಚೇರಿಯನ್ನು ಹೊಂದಿದ್ದು, ಬೆರಳೆಣಿಕೆ ಉದ್ಯೋಗಿಗಳನ್ನು ಹೊಂದಿದೆ. 11 ವರ್ಷಗಳ ಹಿಂದೆ ಗೆಬ್ರೀಯಲ್‌ ವಿನ್‌ಬರ್ಗ್‌ ಎಂಬುವವರು ಇದನ್ನು ಹುಟ್ಟುಹಾಕಿದರು. 2011 ಫೆಬ್ರವರಿ 22ರಂದು ಡಿಡಿಜಿ.ಜಿಜಿ(ddg.gg) ಡೊಮೈನ್‌ ನೇಮ್‌ ಅಡಿ ಕಂಪನಿ ನೋಂದಣಿಯಾಗಿದೆ. 2018ರಲ್ಲಿ ಡಕ್‌.ಕಾಂ(duck.com) ಸ್ವಾಧೀನ ಪಡಿಸಿಕೊಂಡ ಬಳಿಕ ಡಕ್‌ಡಕ್‌ಗೋ.ಕಾಂ(https://duckduckgo.com/) ಎಂದು ಬದಲಾಯಿತು. ಇನ್ಸ್‌ಟಂಟ್‌ ಆನ್ಸರ್ಸ್‌, ಟಾರ್‌ ಅಕ್ಸೆಸ್‌, ವಾಟ್ಸ್‌ ಸರ್ಚ್, ಬ್ಯಾಂಗ್ಸ್‌ ಇವುಗ ಡಕ್‌ಡಕ್‌ಗೋ ಸರ್ಚ್ ಎಂಜಿನ್‌ನ ವಿಶೇಷತೆಗಳಾಗಿವೆ.

ವೈಯಕ್ತಿಕ ಮಾಹಿತಿ ಸಂಗ್ರಹವಿಲ್ಲಡಕ್‌ಡಕ್‌ ಗೋ ಡಿಫಾಲ್ಟ್‌ ಆಗಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲಅಥವಾ ಹಂಚಿಕೆ ಮಾಡುವುದಿಲ್ಲ. ಇದು ತಮ್ಮ ಪ್ರೈವೇಸಿ ಪಾಲಿಸಿಯಾಗಿದೆ ಎನ್ನುತ್ತಾರೆ ಡಕ್‌ಡಕ್‌ಗೋ ಹಿಂದಿನ ರೂವಾರಿ ಗೆಬ್ರೀಯಲ್‌ ವಿನ್‌ಬರ್ಗ್‌ ಅವರು.

ಪ್ರಮುಖ ಸರ್ಚ್ ಎಂಜಿನ್‌ಗಳುಗೂಗಲ್‌, ಯಾಹೂ, ಬಿಂಗ್‌, ಯಾಂಡೆಕ್ಸ್‌.

ಈ ಲೇಖನವು ವಿಜಯ ಕರ್ನಾಟಕದ 2019ರ ಡಿಸೆಂಬರ್ 12ರ ಸಂಚಿಕೆಯಲ್ಲಿ ಪ್ರಕಟವಾಗಿದೆ

ಸೋಮವಾರ, ಡಿಸೆಂಬರ್ 2, 2019

Farmer Apps: ರೈತೋಪಯೋಗಿ ಆ್ಯಪ್‌ಗಳು

- ಮಲ್ಲಿಕಾರ್ಜುನ ತಿಪ್ಪಾರ

ಅಸ್ಥಿರತೆಗೆ ಇನ್ನೊಂದು ಹೆಸರೇ ಕೃಷಿ. ಈ ಕ್ಷೇತ್ರದಲ್ಲಿರುವಷ್ಟು ಅಸ್ಥಿರತೆ, ಆತಂಕ ಮತ್ತ್ಯಾವ ಕ್ಷೇತ್ರದಲ್ಲೂ ಇಲ್ಲ. ಸರಕಾರದ ನೀತಿಗಳು, ದಲ್ಲಾಳಿಗಳು, ಮಾರುಕಟ್ಟೆಯಲ್ಲಿನ ಲೋಪಗಳಿಂದಾಗಿ ಇಂದಿಗೂ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಈರುಳ್ಳಿ ಬೆಲೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ನೂರು ರೂ. ದಾಟಿದ್ದರೂ ರೈತರಿಗೇನೂ ಬಂಪರ್ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳೇ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರೈತರು ಲಭ್ಯ ಇರುವ ತಂತ್ರಜ್ಞಾನ ಬಳಸಿಕೊಂಡು ತಮ್ಮ ಉತ್ಪನ್ನಗಳನ್ನು ಸೂಕ್ತ ಸಮಯದಲ್ಲಿ ಮಾರಾಟ ಮಾಡಿ ಲಾಭ ಗಳಿಸಬಹುದು. ಇದರ ಜತೆಗೆ, ಹವಾಮಾನ, ರಸಗೊಬ್ಬರ, ಬೆಳೆಗಳ ಬಗ್ಗೆ ಪೂರ್ಣವಾದ ಮಾಹಿತಿ ಇದ್ದರೆ ಅತ್ಯುತ್ತಮ ಕೃಷಿ ಸಾಧ್ಯ. ಹಾಗಾಗಿ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಆ್ಯಪ್‌ಗಳಿವೆ. ಕೆಲವೊಂದು ಆ್ಯಪ್‌ಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಿಡುಗಡೆ ಮಾಡಿದ್ದರೆ, ಮತ್ತೊಂದಿಷ್ಟು ಆ್ಯಪ್‌ಗಳನ್ನು ಕೃಷಿ ಸಂಬಂಧಿಸಿದ ಸಂಸ್ಥೆಗಳು ನಿರ್ವಹಣೆ ಮಾಡುತ್ತಿವೆ. ರೈತರು ಈ ಆ್ಯಪ್‌ಗಳ ಮಾಹಿತಿಯನ್ನು ಬಳಸಿಕೊಂಡು ಅತ್ಯುತ್ತಮ ಕೃಷಿ ಮಾಡಬಹುದು, ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಪಡೆದುಕೊಳ್ಳಬಹುದು. ಅಂಥ ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ. ಕ್ರಾಪ್ ಇನ್ಶೂರೆನ್ಸ್(Crop Insurance)
ಹೆಸರು ಸೂಚಿಸುವಂತೆ ಇದು ಬೆಳೆ ವಿಮೆಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಆ್ಯಪ್‌. ಅಧಿಸೂಚಿತ ಬೆಳೆಗಳ ಇನ್ಶೂರೆನ್ಸ್ ಪ್ರಿಮೀಯಂ ಅನ್ನು ಲೆಕ್ಕ ಹಾಕಲು ಈ ಆಪ್ ನೆರವಾಗುತ್ತದೆ. ಕಟ್-ಆಫ್ ಡೇಟ್ಸ್ ಮತ್ತು ಬೆಳೆ ಹಾಗೂ ಸ್ಥಳದ ಬಗ್ಗೆ ಕಂಪನಿ ಸಂಪರ್ಕದ  ಬಗ್ಗೆ ಮಾಹಿತಿ ನೀಡುತ್ತದೆ. 

 ಕಿಸಾನ್ ಸುವಿಧಾ(Kisan Suvidha)
ಈ ಆ್ಯಪ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಚಾಲನೆ ನೀಡಿದರು.  ಪ್ರಸಕ್ತ ಹವಾಮಾನ ಮತ್ತು ಮುಂದಿನ ಐದು ದಿನಗಳ ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ. ಹತ್ತಿರದ ಪಟ್ಟಣಗಳಲ್ಲಿರುವ ಧಾರಣಿ, ರಸಗೊಬ್ಬರು, ಬೀಜ, ಯಂತ್ರೋಪಕರಣಗಳ ಮಾಹಿತಿ ನೀಡುತ್ತದೆ. ದೇಶದ  ನಾನಾ ಭಾಷೆಗಳಲ್ಲಿ ಈ ಆ್ಯಪ್‌ ಮಾಹಿತಿಯನ್ನು ನೀಡುತ್ತದೆ.

ಅಗ್ರಿ ಮಾರ್ಕೆಟ್(Agri Market)
ಕ್ರಾಪ್ ಇನ್ಶೂರೆನ್ಸ್ ಆ್ಯಪ್‌ ಜತೆಗೆ ಅಗ್ರಿ ಮಾರ್ಕೆಟ್ ಆಪ್ ಅನ್ನು ಭಾರತ ಸರಕಾರ ಬಿಡುಗಡೆ ಮಾಡಿತ್ತು. ಬೆಳೆಗಳ ಧಾರಣಿ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುವ ಉದ್ದೇಶದಿಂದಲೇ ಈ ಆಪ್ ಅಭಿವೃದ್ಧಿಪಡಿಸಲಾಗಿದೆ. ರೈತರು ತಮ್ಮ ಸುತ್ತಲಿನ ಅಂದರೆ 50 ಕಿ.ಮೀ. ವ್ಯಾಪ್ತಿಯ ಮಾರುಕಟ್ಟೆಯಲ್ಲಿರುವ ಬೆಳೆಗಳ ಧಾರಣಿಯನ್ನು ಈ ಆ್ಯಪ್‌ ಬಳಸಿಕೊಂಡು ತಿಳಿದುಕೊಳ್ಳಬಹುದು. 

ಉಳವಾನ್(Uzhavan)
ಈ ಆ್ಯಪ್‌ನಿಂದ ರೈತರು 9 ರೀತಿಯ ಸೇವೆಗಳನ್ನು ಪಡೆಯಬಹುದಾಗಿದೆ. ಬೆಳೆ ವಿಮೆ, ಕೃಷಿ ಸಬ್ಸಿಡಿ, ಕೃಷಿ ಉಪಕರಣಗಳು ಮತ್ತು ಸಂಬಂಧಿಸಿದ ಮೂಲಭೂತ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್‌ ಒದಗಿಸುತ್ತದೆ. ಹಾಗೆಯೇ, ಮುಂದಿನ ನಾಲ್ಕು ದಿನಗಳವರೆಗಿನ ಹವಾಮಾನ ಮಾಹಿತಿಯನ್ನು ಈ ಆ್ಯಪ್‌ ಒದಗಿಸುತ್ತದೆ.

ಪುಸಕೃಷಿ(Pusa Krishi)
ಭಾರತೀಯ ಕೃಷಿ ಸಂಸೋಧನಾ ಸಂಸ್ಥೆ(ಐಎಆರ್‌ಐ) ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು ಮತ್ತು ರೈತರಿಗೆ ನೆರವಾಗುವ ಇತರೆ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.  ಎಐಆರ್‌ಐ ಅಭಿವೃದ್ಧಿಪಡಿಸಿರುವ ನಾನಾ ಮಾದರಿಯ ಬೆಳೆಗಳು, ಸಂಪನ್ಮೂಲಗಳ ರಕ್ಷಣೆ, ಸುಧಾರಿತ ಕೃಷಿ ಪದ್ಧತಿಗಳು, ಕೃಷಿ ಯಂತ್ರೋಪಕರಣಗಳು ಬಗ್ಗೆ ಮಾಹಿತಿ ಒದಗಿಸುತ್ತದೆ.

ಸ್ಪ್ರೇ ಗೈಡ್(Spray Guide)
ಕ್ರಿಮಿನಾಶಕ ಹಾಗೂ ಇತರ ರಾಸಾಯನಿಕ ದ್ರಾವಣಗಳನ್ನು ಬೆಳೆಗಳಿಗೆ ಸಿಂಪಡಿಸುವುದು ಕೃಷಿಯ ಒಂದು ಭಾಗವಾಗಿದೆ. ಆದರೆ, ಈ ದ್ರಾವಣಗಳನ್ನು ಹೇಗೆ, ಎಷ್ಟು ಪ್ರಮಾಣದಲ್ಲಿ ಬೆರೆಸಬೇಕು ಎಂಬ ಮಾಹಿತಿ ಬಹಳಷ್ಟು ರೈತರಿಗೆ ಇರುವುದಿಲ್ಲ. ಈ ಮಾಹಿತಿಯ ಕೊರತೆಯನ್ನು ಈ ಆ್ಯಪ್‌ ನೀಗಿಸುತ್ತದೆ. ನೀವು ಮಾಡಿದ ಪ್ರಯೋಗಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇತರ ರೈತರೊಂದಿಗೆ ಹಂಚಿಕೊಳ್ಳಬಹುದು. 

 ಮಷಿನರಿ ಗೈಡ್(Machinery Guide)
ಹೆಸರೇ ಸೂಚಿಸುವಂತೆ ಇದು ಕೃಷಿ ಉಪಕರಣಗಳಿಗೆ ಸಂಬಂಧಿಸಿದ ಆ್ಯಪ್‌.  ಮಣ್ಣು ಸಾಗುವಳಿ, ಬಿತ್ತನೆ, ಗೊಬ್ಬರ, ನಾಟಿ, ಫಲೀಕರಣ, ಕೀಟ ನಿಯಂತ್ರಣ, ವಿಂಗಡಣೆ, ಕೊಯ್ಲು, ನೀರಾವರಿ ಮುಂತಾದ ವಿವಿಧ ಉದ್ದೇಶಗಳಿಗಾಗಿ ಕೃಷಿ ಉಪಕರಣಗಳನ್ನು ಬಳಸಲು ರೈತರಿಗೆ ಈ ಆ್ಯಪ್‌ ನೆರವು ನೀಡುತ್ತದೆ.

ಸಿಸಿಮೊಬೈಲ್ ಆ್ಯಪ್ (CCMobile App)
ಈ ಆಪ್ ಕೂಡ ರೈತರ ಅಭ್ಯುದಯದ ಧ್ಯೇಯದೊಂದಿಗೆ ಆರಂಭವಾಗಿದೆ. ತಾಪಮಾನ, ತೇವಾಂಶ, ಗಾಳಿಯ ವೇಗ ಸೇರಿದಂತೆ ಇತರೆ ಮಾಪನಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ಆಪ್ ಬೆಳೆಗಳೊಂದಿಗೆ ರೈತರನ್ನು ಬೆಸೆಯುತ್ತದೆ. ಆ್ಯಪ್‌ ಒದಗಿಸುವ ಮಾಪನ ಮಾಹಿತಿಯನ್ನು ರೈತರು ವಾರ, ಪಾಕ್ಷಿಕ ಅಥವಾ ತಿಂಗಳಿಗೊಮ್ಮೆ ಹೋಲಿಕೆ ಮಾಡಿಕೊಳ್ಳಬಹುದು. ಜತೆಗೆ ಬೆಳೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು. ಎಸ್‌ಎಂಎಸ್ ಅಥವಾ ಇ ಮೇಲ್ ಮೂಲಕ ಅಲರ್ಟ್‌ ಪಡೆಯಬಹುದು. 

ಇಫ್ಕೊ ಕಿಸಾನ್ (IFFCO Kisan)
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿ.(ಐಎಫ್‌ಎಫ್‌ಸಿಒ) ಈ ಆ್ಯಪ್‌ ಅನ್ನು ನಿರ್ವಹಣೆ ಮಾಡುತ್ತದೆ. ಬೆಳೆಗಳು, ಕೃಷಿ ಋತುಮಾನಗಳು, ಕೃಷಿ ಕ್ಷೇತ್ರ ಸಿದ್ಧತೆ, ನೀರು ನಿರ್ವಹಣೆ, ರೋಗ ನಿಯಂತ್ರಣ, ಕೃಷಿ ಪೂರ್ವ ಸಿದ್ಧತೆಗಳು ಸೇರಿದಂತೆ ಇತರೆ ಎಲ್ಲ ಮಾಹಿತಿಯನ್ನು ಬಳಕೆದಾರರು ಕೃಷಿ ತಜ್ಞರು, ವಿಜ್ಞಾನಿಗಳಿಂದ ಪಡೆಯಲು ಈ ಆ್ಯಪ್‌ ನೆರವು ನೀಡುತ್ತದೆ.

ಎಜಿ ಮೊಬೈಲ್(Ag Mobile)
ರೈತರಿಗೆ ಮತ್ತು ಕೃಷಿ ವೃತ್ತಿಪರರಿಗೆ ಸರಕು ಮಾರುಕಟ್ಟೆ ಮಾಹಿತಿಯನ್ನು ಒದಗಿಸುವ ಮತ್ತು ಕೃಷಿ ಸುದ್ದಿಗಳನ್ನು ಬಿತ್ತರಿಸಲು ಅನುವಾಗುವಂತೆ ಈ ಆ್ಯಪ್‌ ವಿನ್ಯಾಸಗೊಳಿಸಲಾಗಿದೆ. ರೈತರು ಸರಕು ಮಾರುಕಟ್ಟೆಯ ಮಾಹಿತಿ ಸೇರಿದಂತೆ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನೂ ಇವೆ ಆ್ಯಪ್‌ಗಳು
ಇಂಡಿಯಾ ಸ್ಯಾಟಲೈಟ್ ವೆದರ್, ಅಗ್ರಿಕಲ್ಚರಲ್ ಬಿಸಿನೆಸ್, ಖೇತಿ ಬಾಡಿ, ಐಸಿಎಆರ್ ಅಪ್ಡೇಟ್ಸ್, ಫಾರ್ಮರ್ಸ್ ಇಂಡಿಯಾ ಪೋರ್ಟಲ್, ಮಾಡರ್ನ್ ಖೇತಿ, ಫರ್ಟಿಲೈಸರ್ ಕ್ಯಾಲ್ಕುಲೆಟರ್, ಅಗ್ರಿ ಲೈವ್, ಅಗ್ರಿ ಆ್ಯಪ್, ಕೃಷಿ ಮಿತ್ರ, ಅಗ್ರಿಕಲ್ಚರ್ ಡಿಕ್ಷನರಿ, ಕಿಸಾನ್ ಯೋಜನಾ ಇತ್ಯಾದಿ.

ಈ ಲೇಖನವು ವಿಜಯ ಕರ್ನಾಟಕದ 2019ರ ಡಿಸೆಂಬರ್ 2ರ ಸಂಚಿಕೆಯಲ್ಲಿ ಪ್ರಕಟವಾಗಿದೆ

ಸೋಮವಾರ, ನವೆಂಬರ್ 25, 2019

Ajit Pawar: ಮಹಾರಾಷ್ಟ್ರ ರಾಜಕಾರಣದ ದಾದಾ

Google Adsense: ಹಣ ಸಂಪಾದಿಸುವುದು ಹೇಗೆ?

-ಮಲ್ಲಿಕಾರ್ಜುನ ತಿಪ್ಪಾರ


ನಮ್ಮ ಊಹೆ, ತರ್ಕ ಮೀರಿ ತಂತ್ರಜ್ಞಾನ ನಮ್ಮನ್ನು ಆವರಿಸಿಕೊಂಡಿದೆ. ತಂತ್ರಜ್ಞಾನ ಸಾಧನಗಳಿಲ್ಲದೆ ನಮ್ಮ ಜೀವನ ದುಸ್ತರವಾಗಿಬಿಡುತ್ತದೆ. ಅಷ್ಟರ ಮಟ್ಟಿಗೆ ನಾವು ಗ್ಯಾಜೆಟ್‌ಗಳ ಗುಲಾಮರಾಗಿದ್ದೇವೆ. ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳ ಬಳಕೆಯು ಖರ್ಚಿನ ಬಾಬತ್ತೂ ಹೌದು. ನಿಮಗೆ ಅತ್ಯುತ್ತಮ ಸೇವೆ ಬೇಕು ಎಂದಾದರೆ ಹೆಚ್ಚೆಚ್ಚು ಹಣ ನೀಡಬೇಕಾಗುತ್ತದೆ. ಆದರೆ, ಇದೇ ಗ್ಯಾಜೆಟ್‌ ಅಥವಾ ತಂತ್ರಜ್ಞಾನ ಇಟ್ಟುಕೊಂಡು ನೀವು ಹಣ ಸಂಪಾದಿಸಬಹುದು ಗೊತ್ತಾ? ನಮ್ಮ ಬಹುತೇಕ ವರ್ಚುವಲ್‌ ಅವಶ್ಯಕತೆಗಳನ್ನು ಗೂಗಲ್‌ ಸರ್ಚ್ ಎಂಜಿನ್‌ ಪೂರೈಸುತ್ತಿದೆ ಅಲ್ಲವೇ, ಅದೇ ಸರ್ಚ್ ಎಂಜಿನ್‌ ನಿಮಗೆ ಹಣ ಗಳಿಸುವ ದಾರಿಯನ್ನು ಕೂಡ ತೋರಿಸುತ್ತದೆ. ಇದಕ್ಕೆ ನಿಮ್ಮಲ್ಲಿರುವ ಪ್ರತಿಭೆ ಮತ್ತು ಕಠಿಣ ಪರಿಶ್ರಮ ಇದ್ದರೆ ಸಾಕು. ಆನ್‌ಲೈನ್‌ನಲ್ಲಿ ಹಣ ಗಳಿಸುವುದಕ್ಕೆ ಗೂಗಲ್‌ ಒದಗಿಸುವ ಟೂಲ್‌ ನಿಮ್ಮ ನೆರವಿಗೆ ಬರುತ್ತದೆ.

ಗೂಗಲ್‌ ಆ್ಯಡ್‌ ಸೆನ್ಸ್‌ ಗೂಗಲ್‌ ಕಂಪನಿಯ ಆನ್‌ಲೈನ್‌ ಜಾಹೀರಾತು ನೆಟ್ವರ್ಕ್ ಆಗಿದೆ. ವೆಬ್‌ ಮಾಸ್ಟರ್‌ ಮೂಲಕ ಹಣ ಗಳಿಸುವುದಕ್ಕಾಗಿ ಗೂಗಲ್‌ ಆ್ಯಡ್‌ ಸೆನ್ಸ್‌ ಅತಿದೊಡ್ಡ ಆನ್‌ಲೈನ್‌ ಪಬ್ಲಿಷರ್‌ ನೆಟ್ವರ್ಕ್ ಎಂದು ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿಆನ್‌ಲೈನ್‌ ಮೂಲಕ ಹಣ ಸಂಪಾದನೆ ಮಾಡುವುದು ಹೆಚ್ಚು ಜನಪ್ರಿಯವಾಗುತ್ತಿದೆ. ಬಹಳಷ್ಟು ಪ್ರತಿಭಾನ್ವಿತರು ತಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಹಾಗಂತ, ಆನ್‌ಲೈನ್‌ನಲ್ಲಿ ಹಣ ಗಳಿಸುವುದು ತುಂಬಾ ಸರಳವಾದ ಅಥವಾ ಸುಲಭ ಮಾರ್ಗ ಎಂದೇನೂ ಭಾವಿಸಬೇಕಿಲ್ಲ.

ಗೂಗಲ್‌ ಯಾಕೆ ದುಡ್ಡು ಕೊಡುತ್ತದೆ?ಹೌದು ಗೂಗಲ್‌ ಯಾಕೆ ಹಣ ನೀಡುತ್ತದೆಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಲಿಕ್ಕೂ ಸಾಕು. ಆದರೆ, ಇದರಲ್ಲೇನೂ ಅಂಥ ನಿಗೂಢ ರಹಸ್ಯವೇನೂ ಇಲ್ಲ. ಇದರಲ್ಲಿಎರಡು ವಿಧಾನಗಳಿವೆ. ಮೊದಲನೆಯದು- ಆ್ಯಡ್‌ ವರ್ಡ್ಸ್. ಇದರಲ್ಲಿ ಜಾಹೀರಾತುದಾರರು ತಮ್ಮ ಪ್ರಾಡಕ್ಟ್ ಗಳನ್ನು ಪ್ರಮೋಟ್‌ ಮಾಡಲು ಮುಂದಾಗುತ್ತಾರೆ. ಎರಡನೆಯದು- ಆ್ಯಡ್‌ ಸೆನ್ಸ್‌. ಗೂಗಲ್‌ ಆ್ಯಡ್‌ ಸೆನ್ಸ್‌ ಎಂಬ ಪೋ›ಗ್ರಾಮ್‌ ಮೂಲಕ ಪಬ್ಲಿಷರ್‌ ಸೈಟ್‌ಗಳಲ್ಲಿ ಜಾಹೀರಾತುಗಳು ಪ್ರಕಟಗೊಳ್ಳುತ್ತವೆ ಮತ್ತು ಆ ಮೂಲಕ ಪಬ್ಲಿಷರ್ಸ್‌ ಹಣ ಗಳಿಸಲು ಅವಕಾಶ ಸೃಷ್ಟಿಯಾಗುತ್ತದೆ.

ಆ್ಯಡ್‌ ಸೆನ್ಸ್‌ ಹೇಗೆ ಕೆಲಸ ಮಾಡುತ್ತದೆ?
ನಾವು ಈ ಆ್ಯಡ್‌ ಸೆನ್ಸ್‌ ಫೀಚರ್‌ ಅನ್ನು ವೆಬ್‌ ಸೈಟ್‌, ಬ್ಲಾಗ್ಸ್‌, ಫೋರಮ್ಸ್, ಮೊಬೈಲ್‌ ಯೂಟ್ಯೂಬ್‌, ಸರ್ಚ್ ಎಂಜಿನ್‌ ಇತ್ಯಾದಿಗಳಲ್ಲಿಬಳಸಬಹುದಾಗಿದೆ. ಗೂಗಲ್‌ ಆ್ಯಡ್‌ ಸೆನ್ಸ್‌ ಸಿಪಿಸಿ ಆಧರಿತ ಪಬ್ಲಿಷರ್‌ ನೆಟ್ವರ್ಕ್ ಆಗಿದೆ. ಸಿಪಿಸಿ ಎಂದರೆ- ಕಾಸ್ಟ್‌ ಪರ್‌ ಕ್ಲಿಕ್‌ ಅಂತ ಅರ್ಥ. ನಿಮ್ಮ ವೆಬ್‌ ಪೇಜ್‌ನಲ್ಲಿ ಕಾಣಿಸಿಕೊಳ್ಳುವ ಜಾಹೀರಾತು ಮೇಲೆ ಎಷ್ಟು ಕ್ಲಿಕ್‌ಗಳಾಗುತ್ತವೆ ಎಂಬುದರ ಮೇಲೆ ಆ್ಯಡ್‌ ಸೆನ್ಸ್‌ ಹಣ ದೊರೆಯುವಂತೆ ಮಾಡುತ್ತದೆ. ಗೂಗಲ್‌ ಸಿಪಿಸಿ ರೇಟ್‌ ವೆಬ್‌ ಸೈಟಿನಿಂದ ವೆಬ್‌ ಸೈಟಿಗೆ, ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲವೆಬ್‌ಸೈಟ್‌ಗಳು, ಜನಪ್ರಿಯ ಬ್ಲಾಗರ್‌ಗಳು ಮತ್ತು ಯುಟ್ಯೂಬ್‌ ಚಾನೆಲಿಗರು ಈ ಆ್ಯಡ್‌ ಸೆನ್ಸ್‌ ಬಳಸುತ್ತಾರೆ.

ಗೂಗಲ್‌ ಯಾಕೆ ಹಣ ನೀಡುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟವೇನಲ್ಲ. ಜಗತ್ತಿನಲ್ಲೇ ಗೂಗಲ್‌ ಅತ್ಯಂತ ಉತ್ಕೃಷ್ಟ ವೆಬ್‌ ಬೇಸ್ಡ್‌ ಕಂಪನಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಗೂಗಲ್‌ನಿಂದ ಸರ್ಚ್ ಎಂಜಿನ್‌, ಜಿಮೇಲ್‌, ಯೂಟ್ಯೂಬ್‌, ಬ್ಲಾಗರ್‌, ಮ್ಯಾಫ್ಸ್‌, ಡ್ರೈವ್ಸ್, ಪಿಕಾಸಾ ಮತ್ತಿತರ ಸೇವೆಗಳು ದೊರೆಯುತ್ತವೆ. ಮತ್ತು ಇವುಗಳನ್ನು ಜಗತ್ತಿನಾದ್ಯಂತ ಬಹಳಷ್ಟು ಜನರು ಬಳಸುತ್ತಾರೆ ಕೂಡ. ಹಾಗಾಗಿ ಎಲ್ಲ ಬ್ರಾಂಡ್‌ಗಳು, ಕಂಪನಿಗಳು ತಮ್ಮ ಪ್ರಾಡಕ್ಟ್‌ಗಳನ್ನು ಗೂಗಲ್‌ ಮೂಲಕ ಪ್ರಮೋಟ್‌ ಮಾಡಲು ಮುಂದಾಗುತ್ತಾರೆ. ಇದಕ್ಕಾಗಿಯೇ ಗೂಗಲ್‌ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅಸಂಖ್ಯ ಜಾಹೀರಾತುದಾರರಿಗೆ ಸಮಾನ ಅವಕಾಶ ಕಲ್ಪಿಸುವ ಕೆಲಸವನ್ನು ಈ ಆ್ಯಡ್‌ ಸೆನ್ಸ್‌ ಮಾಡುತ್ತದೆ.

ಹಾಗೆಯೇ, ಉತ್ಕೃಷ್ಟ ವೆಬ್‌ ಸೈಟ್‌ಗಳು, ಬ್ಲಾಗ್‌ಗಳು, ಯೂಟ್ಯೂಬ್‌ ಚಾನೆಲ್‌ಗಳಿಗೆ ಅವಕಾಶವನ್ನು ಕಲ್ಪಿಸುತ್ತದೆ. ಒಟ್ಟಾರೆ ಹೇಳಬೇಕೆಂದರೆ, ಈ ಗೂಗಲ್‌ ಆ್ಯಡ್‌ ಸೆನ್ಸ್‌ ಜಾಹೀರಾತುದಾರರು ಮತ್ತು ಪಬ್ಲಿಷರ್ಸ್‌ ನಡುವೆ ಮೂರನೇ ಪಾರ್ಟಿಯಾಗಿ ಕೆಲಸ ಮಾಡುತ್ತದೆ.

ಅಳವಡಿಸಿಕೊಳ್ಳುವುದು ಹೇಗೆ?ನಿಮ್ಮ ಬ್ಲಾಗ್‌ ಅಥವಾ ವೆಬ್‌ಸೈಟ್‌ಗೆ ಆ್ಯಡ್‌ ಸೆನ್ಸ್‌ ಅಳವಡಿಸಿಕೊಳ್ಳಲು ಮಾಡಬೇಕಾದದ್ದು ಇಷ್ಟೇ. (ಜಿಮೇಲ್ ಆ್ಯಡ್‌ಸೆನ್ಸ್)  www.google.com/adsense/start ಹೋಗಿ ನಿಮ್ಮ ಯುಟ್ಯೂಬ್‌ ಚಾನೆಲ್‌ ಅಥವಾ ವೆಬ್‌ ಸೈಟ್‌ ಯುಆರ್‌ಎಲ್‌ ಸೇರಿಸಿ. ಬಳಿಕ ಅಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ, ಅಪ್ಲಿಕೇಷನ್‌ ಸಬ್ಮಿಟ್‌ ಮಾಡಿ. ಒಂದೊಮ್ಮೆ ಬ್ಲಾಗ್‌ಗಳಿಗೆ ಆ್ಯಡ್‌ ಸೆನ್ಸ್‌ ಸೇರಿಸಬೇಕಿದ್ದರೆ, ಬ್ಲಾಗರ್‌ ಡ್ಯಾಶ್‌ ಬೋರ್ಡ್‌ಗೆ ಹೋಗಿ ಮತ್ತು ಅಲ್ಲಿರುವ ಆ್ಯಡ್‌ ಸೆನ್ಸ್‌ ಮೂಲಕ ನೇರವಾಗಿ ಸೈನ್‌ಅಪ್‌ ಆಗಿ. ಇಷ್ಟು ಮಾಡಿದರೆ ನಿಮಗೆ ಜಾಹೀರಾತು ಪ್ರದರ್ಶನವಾಗುತ್ತದೆ ಎಂದರ್ಥವಲ್ಲ. ಗೂಗಲ್‌ ಟೀಮ್‌ ಎಲ್ಲವನ್ನೂ ಪರೀಕ್ಷಿಸಿ ಓಕೆ ಮಾಡಿದ ಬಳಿಕವಷ್ಟೇ ಅದು ಕೆಲಸ ಮಾಡುತ್ತದೆ ಮತ್ತು ನಿಮಗೆ ಹಣ ದೊರೆಯುತ್ತದೆ.

ಈ ಲೇಖನವು ವಿಜಯ ಕರ್ನಾಟಕದ ಟೆಕ್ ನೌ ಪುಟದಲ್ಲಿ 2019ರ ನವೆಂಬರ್ 25ರ ಸಂಚಿಕೆಯಲ್ಲಿ ಪ್ರಕಟವಾಗಿದೆ.