ಸೋಮವಾರ, ಡಿಸೆಂಬರ್ 9, 2019

Safety Apps: ಮಹಿಳೆಯರ ಫೋನ್‌ನಲ್ಲಿ ಇರಲೇಬೇಕಾದ ಆ್ಯಪ್ಸ್

'ಮಧ್ಯರಾತ್ರಿಯಲ್ಲಿ ಮಹಿಳೆಯೊಬ್ಬಳು ಸುರಕ್ಷಿತವಾಗಿ ಸಂಚರಿಸಿದಾಗಲೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕ ಹಾಗೆ' ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಆದರೆ, ಇತ್ತೀಚಿನ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಗಮನಿಸಿದರೆ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲಎಂದು ಹೇಳಬೇಕು. ಯಾಕೆಂದರೆ, ಇತ್ತೀಚೆಗಷ್ಟೇ ಬೆಳಕಿಗೆ ಬಂದ ತೆಲಂಗಾಣದ 'ದಿಶಾ ಅತ್ಯಾಚಾರ' ಪ್ರಕರಣವು ಇಡೀ ದೇಶದಲ್ಲಿಆಕ್ರೋಶಕ್ಕೆ ಕಾರಣವಾಗಿದೆ. 2012ರಲ್ಲಿ ದಿಲ್ಲಿಯಲ್ಲಿ ನಡೆದ 'ನಿರ್ಭಯಾ ಪ್ರಕರಣ'ವಂತೂ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ವಸ್ತುಸ್ಥಿತಿ ಹೀಗಿದ್ದಾಗಲೂ, ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರು ತಮ್ಮನ್ನು ತಾವು ತಕ್ಕಮಟ್ಟಿಗಾದರೂ ಸುರಕ್ಷಿತವಾಗಿಟ್ಟುಕೊಳ್ಳಬಹುದು. ಸ್ಮಾರ್ಟ್‌ಫೋನ್‌ ದಿನಮಾನದಲ್ಲಿ ಬದುಕುತ್ತಿರುವ ನಮಗೆ ತಂತ್ರಜ್ಞಾನ ಲಾಭ ಅಗಾಧವಾಗಿದೆ. ವಿಶೇಷವಾಗಿ ಮಹಿಳೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಆ್ಯಪ್‌ಗಳು ಕಾರ್ಯಾಚರಿಸುತ್ತಿವೆ. ವಿಷಮ ಸ್ಥಿತಿಯಲ್ಲಿಅಲರ್ಟ್‌ ರವಾನಿಸುವ, ಅಸುರಕ್ಷಿತ ಪ್ರದೇಶಗಳನ್ನು ಎಚ್ಚರಿಕೆ ನೀಡುವುದು ಸೇರಿದಂತೆ ಅನೇಕ ಫೀಚರ್‌ಗಳನ್ನು ಒಳಗೊಂಡ ಆ್ಯಪ್‌ಗಳಿವೆ. ಅಂಥ ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸುರಕ್ಷಾ ಆ್ಯಪ್‌ (Suraksha)
ಈ ಆ್ಯಪ್‌ನಲ್ಲಿ ಬಳಕೆದಾರರು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸ್ನೇಹಿತರು, ಪೋಷಕರ ಮೊಬೈಲ್‌ ನಂಬರ್‌ಗಳನ್ನು ಸೇರಿಸಬಹುದು. ತುರ್ತು ಸಂದರ್ಭದಲ್ಲಿ ಆ್ಯಪ್‌ ತರೆದು ಪವರ್‌ ಬಟನ್‌ ಅನ್ನು ಒತ್ತಿ ಹಿಡಿದರೆ ಪೊಲೀಸ್‌ ಸಹಾಯವಾಣಿಗೆ ಕರೆ ಹೋಗುತ್ತದೆ. ಇಷ್ಟು ಮಾತ್ರವಲ್ಲದೇ, ಬಳಕೆದಾರರು ಇರುವ ಪ್ರದೇಶದ ಸ್ಥಳ ಗುರುತು, ಆಡಿಯೊ ಮತ್ತು ವಿಡಿಯೊ ಕೂಡ ರವಾನೆಯಾಗುತ್ತದೆ. ಜತೆಗೆ, ಸೂಚಿಸಲಾದ ತುರ್ತು ನಂಬರ್‌ಗಳಿಗೂ ಕರೆ ಕೂಡ ಹೋಗುತ್ತದೆ. ಇದರಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಮಹಿಳಾ ಬಳಕೆದಾರರು ನೆರವು ಪಡೆಯಲು ಸಾಧ್ಯವಾಗುತ್ತದೆ. ಅಂದ ಹಾಗೆ ಈ ಆ್ಯಪ್‌ ಅನ್ನು ಬೆಂಗಳೂರು ಪೊಲೀಸರು ಅಭಿವೃದ್ಧಿಪಡಿಸಿದ್ದಾರೆ.

ಎಸ್‌ಒಎಸ್‌(SOS Stay Safe)

ಯಾವುದೇ ರೀತಿಯ ಕಷ್ಟದಲ್ಲಿ ಸಿಲುಕಿದಾಗ ಸಹಾಯಕ್ಕಾಗಿ ಮತ್ತೊಬ್ಬರ ನೆರವು ಪಡೆಯಲು ಈ ಆ್ಯಪ್‌ ಅವಕಾಶ ಕಲ್ಪಿಸಿಕೊಡುತ್ತದೆ. ಇಂಥ ಸಂದರ್ಭದಲ್ಲಿಈ ಆ್ಯಪ್‌ ಬಳಕೆದಾರರ ಗೆಳೆಯರು, ಕುಟುಂಬದ ಸದಸ್ಯರಿಗೆ ತ್ವರಿತ ಗತಿಯಲ್ಲಿಸಂದೇಶವನ್ನು ರವಾನಿಸುತ್ತದೆ. ಬಳಕೆದಾರರು ತಮ್ಮ ಕೈಯಲ್ಲಿರುವ ಉಪಕರಣವನ್ನು ಅಲುಗಾಡಿಸಿದರೆ ಸಾಕು ಎಸ್‌ಒಎಸ್‌ ಸಂದೇಶ ಹೋಗುತ್ತದೆ. ಲೈಂಗಿಕ ಕಿರುಕುಳ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಈ ಆ್ಯಪ್‌ನ ನೆರವು ಪಡೆಯಬಹುದು.

​ಸ್ಮಾರ್ಟ್‌ 24x7(Smart 24x7)'
ಈ ಆ್ಯಪ್‌ನಲ್ಲಿರುವ ಪ್ಯಾನಿಕ್‌ ಬಟನ್‌ ಪ್ರೆಸ್‌ ಮಾಡಿದರೆ ಪೊಲೀಸರಿಗೆ ಕರೆ ಹೋಗುತ್ತದೆ. ಹಾಗೆಯೇ ಈ ಮೊದಲೇ ಬಳಕೆದಾರರು ಸೆಟ್‌ ಮಾಡಿದ ಫೋನ್‌ ನಂಬರ್‌ಗಳಿಗೂ ಕರೆ ಮಾಡುವ ಅವಕಾಶವನ್ನು ಈ ಆ್ಯಪ್‌ ಒದಗಿಸುತ್ತದೆ. ಒಂದು ವೇಳೆ, ಜಿಪಿಆರ್‌ಎಸ್‌ ಕಾರ್ಯನಿರ್ವಹಿಸದಿದ್ದ ಪಕ್ಷದಲ್ಲಿ ಲೊಕೇಷನ್‌ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ಈ ಆ್ಯಪ್‌ ಕಳುಹಿಸುತ್ತದೆ. ಟ್ರ್ಯಾಕಿಂಗ್‌, ಕಸ್ಟಮ್‌ ಕೇರ್‌ ಮತ್ತು ಚಾಟ್‌ ಸೇರಿದಂತೆ ಇನ್ನೂ ಅನೇಕ ಫೀಚರ್‌ಗಳಿವೆ. ತುರ್ತು ಸಂದರ್ಭದಲ್ಲಿ ಬಳಕೆದಾರರಿರುವ ಜಾಗದ ಆಡಿಯೊ-ವಿಡಿಯೊವನ್ನು ದಾಖಲಿಸಿಕೊಳ್ಳುತ್ತದೆ.

ಮೈ ಸೇಫ್ಟಿಪಿನ್‌(My Safetipin)

ಮ್ಯಾಪ್‌ ಬೇಸ್ಡ್‌ ಸೇಫ್ಟಿ ಆ್ಯಪ್‌ ತುಂಬ ಉಪಯುಕ್ತವಾಗಿದೆ. ಈ ಆ್ಯಪ್‌ ವಿಶೇಷ ಏನೆಂದರೆ, ನೀವಿರುವ ಸ್ಥಳದ ಸುರಕ್ಷತೆಯ ಶ್ರೇಯಾಂಕವನ್ನು ಸೂಚಿಸುತ್ತದೆ. ಆ್ಯಪ್‌ ನಕ್ಷೆಯಲ್ಲಿರುವ ಪಿನ್‌ ಸ್ಥಳದ ಸುರಕ್ಷತೆಯ ಶ್ರೇಯಾಂಕವನ್ನು ಒದಗಿಸುತ್ತದೆ. ಅಸುರಕ್ಷಿತ ಪ್ರದೇಶವಾಗಿದ್ದರೆ ಪಿನ್‌ ಕೆಂಪು ಬಣ್ಣದ್ದಾಗಿರುತ್ತದೆ. ಸುರಕ್ಷಿತ ಪ್ರದೇಶವಾಗಿದ್ದರೆ ಅದು ಹಸಿರು ಬಣ್ಣದ್ದಾಗಿರುತ್ತದೆ. ಕಡಿಮೆ ಸುರಕ್ಷತೆಯ ಪ್ರದೇಶವನ್ನು ಅಂಬರ್‌(ತುಸು ಹಳದಿ) ಪಿನ್‌ ಸೂಚಿಸುತ್ತದೆ. ನೀವಿರುವ ಪ್ರದೇಶದಲ್ಲಿನ ಸಾರ್ವಜನಿಕ ಸಾರಿಗೆ, ಅಲ್ಲಿರುವ ಪೊಲೀಸ್‌ ಠಾಣೆ, ಫಾರ್ಮಸಿ ಅಥವಾ ಹತ್ತಿರದ ಎಟಿಎಂ, ಜನಸಂದಣಿ ಪ್ರದೇಶ ಮಾಹಿತಿ ನೀಡುವುದು ಮಾತ್ರವಲ್ಲದೆ, ರಿಯಲ್‌ ಟೈಮ್‌ ಲೊಕೇಷನ್‌ ವಿವರವನ್ನು ಜಿಪಿಎಸ್‌ ಟ್ರ್ಯಾಕಿಂಗ್‌ ಮೂಲಕ ನಿಮ್ಮ ಹತ್ತಿರದವರೆಗೆ ರವಾನಿಸುತ್ತದೆ. ಉಳಿದ ಬಳಕೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ನಿಮಗೆ ಅಸುರಕ್ಷಿತ ಎನಿಸಿದ ಪ್ರದೇಶವನ್ನೂ ಮ್ಯಾಪ್‌ನಲ್ಲಿ ಪಿನ್‌ ಮಾಡಬಹುದು.

ರೆಸ್ಕೂಯರ್‌ (Rescuer)

ಬಳಕೆದಾರರು ಈ ಆ್ಯಪ್‌ನಲ್ಲಿರುವ ಎಮರ್ಜೆನ್ಸಿ ಟ್ಯಾಬ್‌ ಪ್ರೆಸ್‌ ಮಾಡಿದರೆ ತಕ್ಷಣವೇ ಗೂಗೂಲ್‌ ಲೊಕೇಷನ್‌ ಸಹಿತ ಸಂದೇಶವನ್ನು ಬಳಕೆದಾರರ ಕಾಂಟಾಕ್ಟ್ ಲಿಸ್ಟ್‌ ಮತ್ತು ಫೇಸ್‌ಬುಕ್‌ ಫ್ರೆಂಡ್‌ ಲಿಸ್ಟ್‌ನಲ್ಲಿರುವ ಐವರಿಗೆ ಸಂದೇಶವನ್ನು ಕಳುಹಿಸುತ್ತದೆ. ಹಾಗೆಯೇ, ತುರ್ತು ಸಂದರ್ಭದಲ್ಲಿ ಇಬ್ಬರಿಕೆ ಕರೆ ಮಾಡುವ ಆಯ್ಕೆಯನ್ನು ಹೊಂದಿದೆ.

ನಿರ್ಭಯ(Nirbhaya)

ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಆ್ಯಪ್‌ ಅನ್ನು ರೂಪಿಸಲಾಗಿದೆ. ಬಳಕೆದಾರರು ದಾಖಲಿಸಿದ ಫೋನ್‌ ನಂಬರ್‌ಗಳಿಗೆ ಅಲರ್ಟ್‌ ರವಾನಿಸುವ ಕೆಲಸವನ್ನು ಇದು ಮಾಡುತ್ತದೆ. ಅಸುರಕ್ಷಿತ ಪ್ರದೇಶದ ಬಗ್ಗೆಯೂ ಇದು ಮಾಹಿತಿ ನೀಡುತ್ತದೆ. ಬಳೆಕದಾರರು ಅಂಥ ಪ್ರದೇಶಕ್ಕೆ ಹೋದಾಗ ಈ ಮಾಹಿತಿಯನ್ನು ನೀಡುತ್ತದೆ.

ಸಿಟಿಜನ್‌ಕಾಪ್‌ (CitizenCop)

ಈ ಆ್ಯಪ್‌ ಬಳಸಿಕೊಂಡು ನೀವಿರುವ ಸ್ಥಳಲ್ಲಿ ನಡೆಯುವ ಕ್ರಿಮಿನಲ್‌ ಕೆಲಸಗಳು ಅಥವಾ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ರಿಪೋರ್ಟ್‌ ಮಾಡಬಹುದು. ಮತ್ತು ನಿಮ್ಮ ಹೆಸರನ್ನು ಗುಪ್ತವಾಗಿಡಲಾಗುತ್ತದೆ. ಈ ಆ್ಯಪ್‌ನಲ್ಲಿ ಲಕ್ಷಣ್‌ರೇಖಾ ಎಂಬ ಫೀಚರ್‌ ಇದ್ದು, ಅದನ್ನು ಮಹಿಳೆಯರು ತುರ್ತು ಸಂದರ್ಭದಲ್ಲಿ ಬಳಸಬಹುದು. ಟ್ರ್ಯಾಕಿಂಗ್‌, ಎಮರ್ಜೆನ್ಸಿ ಕರೆ, ಎಸ್‌ಒಎಸ್‌ ಎಚ್ಚರಿಕೆಗಳನ್ನು ರವಾನಿಸುತ್ತದೆ.

​ಚಿಲ್ಲಾ(Chilla)

ತುರ್ತು ಸಂದರ್ಭದಲ್ಲಿ ಮಹಿಳೆಯರು ತಮ್ಮ ಫೋನ್‌ ಅನ್ನು ಬಳಸಲು ಸಾಧ್ಯವಾಗದಿದ್ದಾಗ, ಜೋರಾಗಿ ಕೂಗುವ ಮೂಲಕ ಈ ಚಿಲ್ಲಾ ಆ್ಯಪ್‌ ಸಕ್ರಿಯಗೊಳಿಸಬಹುದು. ಆಗ ಈ ಆ್ಯಪ್‌ ಪೋಷಕರಿಗೆ ತುರ್ತು ಸಂದೇಶವನ್ನು ರವಾನಿಸುತ್ತದೆ. ಇದರ ಹೊರತಾಗಿಯೂ, ಈ ಮೊದಲೇ ಸೆಟ್‌ ಮಾಡಿದ ಫೋನ್‌ ನಂಬರ್‌ಗಳಿಗೂ ಸಂದೇಶಗಳನ್ನು ಕಳುಹಿಸುತ್ತದೆ. ಇದಕ್ಕಾಗಿ ನೀವು ಪವರ್‌ ಬಟನ್‌ ಅನ್ನು 5 ನಿಮಿಷದವರೆಗೆ ಒತ್ತಿ ಹಿಡಿಯಬೇಕು.


ಕಾಮೆಂಟ್‌ಗಳಿಲ್ಲ: