ಸೋಮವಾರ, ಡಿಸೆಂಬರ್ 9, 2019

DuckDuckGo: ಗೂಗಲ್‌ಗೆ ಸ್ಪರ್ಧೆ ಒಡ್ಡಲಿದೆಯೇ ಡಕ್‌ಡಕ್‌ಗೋ?

- ಮಲ್ಲಿಕಾರ್ಜುನ ತಿಪ್ಪಾರ

ಮೊನ್ನೆ ಮೊನ್ನೆಯಷ್ಟೇ ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ ಅವರು, ''ಡಕ್‌ಡಕ್‌ಗೋ ನನಗೆ ತುಂಬ ಇಷ್ಟವಾಗಿದ್ದು, ಅದನ್ನೇ ನನ್ನ ಡಿಫಾಲ್ಟ್‌ ಸರ್ಚ್ ಎಂಜಿನ್‌ ಆಗಿ ಬದಲಿಸಿಕೊಂಡಿರುವೆ,'' ಎಂದು ಟ್ವೀಟ್‌ ಮಾಡಿದ್ದು ದೊಡ್ಡ ಸುದ್ದಿಗೆ ಕಾರಣವಾಯಿತು. ತಂತ್ರಜ್ಞಾನ ಮಾರುಕಟ್ಟೆಯಲ್ಲಿಗೂಗಲ್‌ ಸರ್ಚ್ ಎಂಜಿನ್‌ ಏಕಸ್ವಾಮ್ಯವನ್ನು ಹೊಂದಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಡಕ್‌ಡಕ್‌ಗೋ ಕೂಡ ಸದ್ದು ಮಾಡುತ್ತಿದೆ. ಹಾಗಂತ, ಸಿಕ್ಕಾಪಟ್ಟೆ ಸ್ಪರ್ಧೆ ನೀಡುತ್ತಿದೆ ಎಂದರ್ಥವಲ್ಲ. ಗೂಗಲ್‌ ಸರ್ಚ್ ಎಂಜಿನ್‌ ಬಳಕೆಯಲ್ಲಿಶೇ. 81.5ರಷ್ಟು ಪಾಲು ಹೊಂದಿದ್ದರೆ, ಡಕ್‌ಡಕ್‌ಗೋ ಪಾಲು ಕೇವಲ ಶೇ. 0.28 ಮಾತ್ರ. ಆದರೆ, ಅದರ ವಿಶ್ವಾಸರ್ಹತೆ ಹೆಚ್ಚಾಗುತ್ತಿದೆ ಎಂದರೆ ತಪ್ಪಲ್ಲ.

ಗೂಗಲ್‌ ಸರ್ಚ್ ಎಂಜಿನ್‌ ನಮ್ಮ ಬದುಕಿನ ಭಾಗವೇ ಆಗಿದ್ದರೂ, ಅದು ನಮ್ಮ ಖಾಸಗಿತನಕ್ಕೆ ಕನ್ನ ಹಾಕಿದೆ, ನಮ್ಮ ನಡವಳಿಕೆ ಮೇಲೆ ಸದಾ ಕಣ್ಣಿಟ್ಟಿರುತ್ತದೆ, ಬಳಕೆದಾರರ ಎಲ್ಲ ಚಟುವಟಿಕೆಗಳನ್ನು ಬೆನ್ನಟ್ಟಿ ಅದರ ಅನ್ವಯ ಜಾಹೀರಾತುಗಳನ್ನು ಪೂರೈಸುತ್ತಿದೆ... ಹೀಗೆ ನಾನಾ ಕಾರಣಗಳಿಂದ ಬಳಕೆದಾರರಿಗೆ ಒಂದಿಷ್ಟು ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂಬ ಆರೋಪಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದ್ದು, ಅದಕ್ಕಾಗಿ ಯುರೋಪ್‌ ಕೋರ್ಟ್‌ಗಳ ಕಟೆಕಟೆಯಲ್ಲಿ ನಿಂತಿದೆ. ಇಂಥ ಹೊತ್ತಿನಲ್ಲಿ ಟ್ವಿಟರ್‌ ದೈತ್ಯ ಕಂಪನಿಯೊಬ್ಬರು ಸಿಇಒ ತಮ್ಮ ಡಿಫಾಲ್ಟ್‌ ಸರ್ಚ್ ಎಂಜಿನ್‌ ಡಕ್‌ಡಕ್‌ಗೋ ಎಂದು ಹೇಳಿದ್ದಾರೆಂದರೆ ಅದಕ್ಕೆ ಮಹತ್ವ ಬಂದೇ ಬರುತ್ತದೆ.


ಕೃತಿಕ ಬುದ್ಧಿಮತ್ತೆ(ಎಐ) ಆಧರಿತ ಡಿಜಿಟಲ್‌ ಸೇವೆಗಳು ನಮ್ಮನ್ನು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಯಾವ ಮಾಹಿತಿಯೂ ರಹಸ್ಯವಾಗಿ ಉಳಿಯುವುದಿಲ್ಲ. ಎಷ್ಟೇ ಕಠಿಣ ಪಾಸ್‌ವರ್ಡ್ ನಮ್ಮ ಮಾಹಿತಿ ಪರರ ಪಾಲಾಗುವುದನ್ನು ತಡೆಯಲಾರದು. ಮಾಹಿತಿ ತಂತ್ರಜ್ಞಾನ ಎಂಬ ಬಟಾ ಬಯಲಿನಲ್ಲಿನಿಂತಿರುವ ನಾವು, ನಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಎದೆಯುಬ್ಬಿಸಿಕೊಂಡಿದ್ದೇವೆ. ಆನ್‌ಲೈನ್‌ನಲ್ಲಿನ ನಮ್ಮ ಪ್ರತಿ ಚಟುವಟಿಕೆಯೂ ನಮ್ಮನ್ನು ಬೆತ್ತಲಾಗಿಸುತ್ತದೆ! ಖಾಸಗಿ ಮಾಹಿತಿಯನ್ನು ಕಾಪಾಡಿಕೊಳ್ಳುವ ವಾಗ್ದಾನಗಳನ್ನು ಎಲ್ಲಸಂಸ್ಥೆಗಳು ನೀಡುತ್ತವೆ. ಆದರೆ, ಅದೇನೂ ಪರಮ ಸತ್ಯವಲ್ಲ.

ಹೀಗಿದ್ದೂ ಡಕ್‌ಡಕ್‌ಗೋ ಮಾತ್ರ ತಾನು ಬಳಕೆದಾರರ ಖಾಸಗಿ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಿದೆ. ಗೂಗಲ್‌ನಂತೆ ಡಕ್‌ಡಕ್‌ಗೋ, ಬಳಕೆದಾರರ ಚಟುವಟಿಕೆ ಮೇಲೆ ನಿಗಾ ವಹಿಸುವುದು, ಐಪಿ ಅಡ್ರೆಸ್‌ಗಳನ್ನು ಪಡೆಯುವುದು ಮತ್ತು ಆನ್‌ಲೈನ್‌ ನಡುವಳಿಕೆಯ ಆಧಾರದ ಮೇಲೆ ಜಾಹೀರಾತುಗಳನ್ನು ಫುಶ್‌ ಮಾಡುವುದಾಗಲಿ ಮಾಡುವುದಿಲ್ಲಎಂಬುದು ಬಳಕೆದಾರರ ಅಂಬೋಣ. ಹಾಗಾಗಿ, ನಿಧಾನವಾಗಿ ಗೂಗಲ್‌ ಸರ್ಚ್ ಎಂಜಿನ್‌ಗೆ ಡಕ್‌ಡಕ್‌ಗೋ ಪರ್ಯಾಯ ಎಂಬ ರೀತಿಯಲ್ಲಿ ಬಿಂಬಿತವಾಗುತ್ತದೆ. ಬಳಕೆಯ ಪ್ರಮಾಣದ ಗಮನಿಸಿದರೆ ಸದ್ಯಕ್ಕೆ ಹಾಗೇ ಹೇಳುವುದು ತಪ್ಪು. ಹಾಗಂತ, ತೀರಾ ಕಡೆಗಣಿಸುವಂತೆಯೂ ಇಲ್ಲ.

2019ರ ನವೆಂಬರ್‌ ಅಂಕಿ-ಸಂಖ್ಯೆಗಳನ್ವಯ ಡಕ್‌ಡಕ್‌ಗೋ ನಿತ್ಯ ಸರಾಸರಿ 4.8 ಕೋಟಿ ಬಳಕೆದಾರರನ್ನು ಹೊಂದಿದೆ. ಅತಿ ಹೆಚ್ಚು ವೀಕ್ಷಿಸಿದ ಆಧಾರದ ಮೇಲೆ ಶೋಧಗಳನ್ನು ಗೂಗಲ್‌ ನಿಮ್ಮ ಮುಂದಿಟ್ಟರೆ, ಡಕ್‌ಡಕ್‌ಗೋ ಅತಿ ಹೆಚ್ಚು ನಿಖರವಾದ ಶೋಧಗಳನ್ನು ಬಳಕೆದಾರರಿಗೆ ನೀಡುತ್ತದೆ. ಹಾಗಂತ ಅದು ಹೇಳಿಕೊಂಡಿದೆ. ಇದು ತಕ್ಕಮಟ್ಟಿಗೂ ನಿಜವೂ ಹೌದು. ಡಕ್‌ಡಕ್‌ಗೋ ಸರ್ಚ್ಎಂಜಿನ್‌ನಲ್ಲಿ ನಿಮಗೆ ಬೇಕಿರುವ ವಿಷಯವನ್ನು ಶೋಧಿಸಿದರೆ ಅಸಂಖ್ಯ ಮಾಹಿತಿ ನಿಮ್ಮ ಮುಂದೆ ಬಂದು ಬೀಳುವುದಿಲ್ಲ.

ಗ್ರೇಟರ್‌ ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾದ ಪಾವೊಲಿಯಲ್ಲಿ ಡಕ್‌ಡಕ್‌ಗೋ ಕಚೇರಿಯನ್ನು ಹೊಂದಿದ್ದು, ಬೆರಳೆಣಿಕೆ ಉದ್ಯೋಗಿಗಳನ್ನು ಹೊಂದಿದೆ. 11 ವರ್ಷಗಳ ಹಿಂದೆ ಗೆಬ್ರೀಯಲ್‌ ವಿನ್‌ಬರ್ಗ್‌ ಎಂಬುವವರು ಇದನ್ನು ಹುಟ್ಟುಹಾಕಿದರು. 2011 ಫೆಬ್ರವರಿ 22ರಂದು ಡಿಡಿಜಿ.ಜಿಜಿ(ddg.gg) ಡೊಮೈನ್‌ ನೇಮ್‌ ಅಡಿ ಕಂಪನಿ ನೋಂದಣಿಯಾಗಿದೆ. 2018ರಲ್ಲಿ ಡಕ್‌.ಕಾಂ(duck.com) ಸ್ವಾಧೀನ ಪಡಿಸಿಕೊಂಡ ಬಳಿಕ ಡಕ್‌ಡಕ್‌ಗೋ.ಕಾಂ(https://duckduckgo.com/) ಎಂದು ಬದಲಾಯಿತು. ಇನ್ಸ್‌ಟಂಟ್‌ ಆನ್ಸರ್ಸ್‌, ಟಾರ್‌ ಅಕ್ಸೆಸ್‌, ವಾಟ್ಸ್‌ ಸರ್ಚ್, ಬ್ಯಾಂಗ್ಸ್‌ ಇವುಗ ಡಕ್‌ಡಕ್‌ಗೋ ಸರ್ಚ್ ಎಂಜಿನ್‌ನ ವಿಶೇಷತೆಗಳಾಗಿವೆ.

ವೈಯಕ್ತಿಕ ಮಾಹಿತಿ ಸಂಗ್ರಹವಿಲ್ಲಡಕ್‌ಡಕ್‌ ಗೋ ಡಿಫಾಲ್ಟ್‌ ಆಗಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲಅಥವಾ ಹಂಚಿಕೆ ಮಾಡುವುದಿಲ್ಲ. ಇದು ತಮ್ಮ ಪ್ರೈವೇಸಿ ಪಾಲಿಸಿಯಾಗಿದೆ ಎನ್ನುತ್ತಾರೆ ಡಕ್‌ಡಕ್‌ಗೋ ಹಿಂದಿನ ರೂವಾರಿ ಗೆಬ್ರೀಯಲ್‌ ವಿನ್‌ಬರ್ಗ್‌ ಅವರು.

ಪ್ರಮುಖ ಸರ್ಚ್ ಎಂಜಿನ್‌ಗಳುಗೂಗಲ್‌, ಯಾಹೂ, ಬಿಂಗ್‌, ಯಾಂಡೆಕ್ಸ್‌.

ಈ ಲೇಖನವು ವಿಜಯ ಕರ್ನಾಟಕದ 2019ರ ಡಿಸೆಂಬರ್ 12ರ ಸಂಚಿಕೆಯಲ್ಲಿ ಪ್ರಕಟವಾಗಿದೆ

ಕಾಮೆಂಟ್‌ಗಳಿಲ್ಲ: