ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆ ಮೂಲಕ ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿ ತೋರಿಸಿದ, ಆ ನೆಪದಲ್ಲಿಅದನ್ನು ಗಟ್ಟಿಗೊಳಿಸಲು ಕಾರಣರಾದ ಬೂಟಾ ಸಿಂಗ್ ಅವರನ್ನು ನೆನಪಿಟ್ಟುಕೊಳ್ಳಲೇಬೇಕು.
- ಮಲ್ಲಿಕಾರ್ಜುನ ತಿಪ್ಪಾರ
ಏಳು ವರ್ಷದ ಬಾಲಕನೊಬ್ಬನಿಗೆ ಆತನ ಚಿಕ್ಕಪ್ಪ, ಕಣಜದ ಗೂಡು ತೋರಿಸಿ ಅದರಲ್ಲಿಜೇನು ಇದೆ ಎಂದು ಹೇಳುತ್ತಾರೆ. ಆ ಬಾಲಕ, ಹಿಂದೆ ಮುಂದೆ ಯೋಚಿಸದೇ ಮರ ಏರಿ, ನಿರ್ದಯವಾಗಿ ಈ ಕಣಜದ ಗೂಡನ್ನು ಕೆಡವುತ್ತಾನೆ. ಗೂಡಿನಲ್ಲಿದ್ದ ಕಣಜದ ಹಾರುಹುಳಗಳು ಬೆನ್ನ ಹತ್ತಿದ್ದರಿಂದ ಮರ ಮೇಲಿಂದ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ.
ಆ ಬಾಲಕನೇ ಮುಂದೆ ‘ನಿರ್ದಯಿ’ ರಾಜಕಾರಣಿಯಾಗಿ ರೂಪುಗೊಂಡ ಬೂಟಾ ಸಿಂಗ್. ಅವರ ಈ ಸ್ವಭಾವದ ಪರಿಣಾಮಗಳು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಕಾಲದಲ್ಲಿಢಾಳಾಗಿ ಎದ್ದು ಕಂಡಿತು. ಇಂದಿರಾ ಮತ್ತು ರಾಜೀವ್ ಅವರ ‘ಪರಮ ನಿಷ್ಠ’ರಾಗಿದ್ದ ಬೂಟಾ, ಅವರ ಎಲ್ಲಕಾರ್ಯಗಳನ್ನು ಯಾವುದನ್ನೂ ಲೆಕ್ಕಿಸದೇ ಮಾಡಿ ಬಿಡುತ್ತಿದ್ದರು. ಪರಿಣಾಮವಾಗಿ ಅವರನ್ನು ಮಾಧ್ಯಮಗಳು ಅತ್ಯಂತ ವಿವಾದಿತ ರಾಜಕಾರಣಿ, ರಾಜೀವ್ ಬಂಟ ಎಂದು ಇಂದಿಗೂ ಗುರುತಿಸುತ್ತವೆ. ಅಂಥ ಬೂಟಾ ಸಿಂಗ್ ಅವರು, ಕಾಂಗ್ರೆಸ್‌ಗೆ ಏನೆಲ್ಲಮಾಡಿದೆ. ತನ್ನ ನಿಷ್ಠೆಯನ್ನು ಯಾರೂ ಪರಿಗಣಿ ಸಲೇ ಇಲ್ಲಎಂಬ ಕೊರಗಿನಲ್ಲೇ 86ನೇ ವಯಸ್ಸಿನಲ್ಲಿಕೊನೆಯುಸಿರೆಳೆದಿದ್ದಾರೆ.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅಕ್ಷ ರಶಃ ಅವರು ಕ್ಯಾಬಿನೆಟ್‌ನಲ್ಲಿಎರಡನೇ ಸ್ಥಾನದಲ್ಲಿದ್ದರು. ಇತರ ಎಲ್ಲಸಚಿವರಿಗಿಂತಲೂ ರಾಜೀವ್ ಅವರನ್ನು ಬಹಳ ಸಲೀಸಾಗಿ ಭೇಟಿಯಾಗುತ್ತಿದ್ದರು. ದೇಶದ ಗೃಹ ಮಂತ್ರಿಯಾಗಿದ್ದಾಗ ರಾಜ್ಯ ಸರಕಾರಗಳನ್ನು ಕಣ್ಣು ಮಿಟುಕಿಸುವಷ್ಟರಲ್ಲಿಕೆಡವಿ ಬಿಡುತ್ತಿದ್ದರು. ಅಂಥ ನಿರ್ದಯಿ ರಾಜಕಾರಣಿ ಬೂಟಾ ಸಿಂಗ್.
ರಾಜೀವ್ ಕಾಲದಲ್ಲಿಕಾಂಗ್ರೆಸ್‌ನ ದಲಿತ ಹಾಗೂ ಏಕೈಕ ಸಿಖ್ ಮುಖವಾಗಿದ್ದ ಬೂಟಾ ಸಿಂಗ್ ರಾಜಕಾರಣದ ಹಿನ್ನೆಲೆಯಲ್ಲಿಬೆಳೆದು ಬಂದವರಲ್ಲ. ಪಂಜಾಬ್‌ನ ಜಲಂಧರ್ ಜಿಲ್ಲೆಯ ಮುಸ್ತಫಾಪುರದಲ್ಲಿ1934 ಮಾರ್ಚ್ 21ರಂದು ಬೂಟಾ ಸಿಂಗ್ ಜನಿಸಿದರು. ಬೂಟಾ ಅವರದ್ದು ಸಾಧಾರಣ ಹಿನ್ನೆಲೆಯ ಕುಟುಂಬ. ಲಿಯಾಲ್‌ಪುರ ಖಾಲ್ಸಾ ಕಾಲೇಜ್‌ನಿಂದ ಬಿ.ಎ(ಆನರ್ಸ್) ಮತ್ತು ಬಾಂಬೆಯ ಗುರು ನಾನಾಕ್ ಖಾಲ್ಸಾ ಕಾಲೇಜ್‌ನಲ್ಲಿಎಂಎ ಪದವಿ ಪಡೆದುಕೊಂಡರು. ಬಳಿಕ ಬುಂದೇಲ್‌ಖಂಡ್ ವಿವಿಯಲ್ಲಿಪಿಎಚ್‌ಡಿ ಮಾಡಿದರು. 1964ರಲ್ಲಿಮಂಜಿತ್ ಕೌರ್ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಬೂಟಾ ಸಿಂಗ್ ಅವರು ರಾಜಕಾರಣಕ್ಕೆ ಪ್ರವೇಶ ಪಡೆಯುವ ಮುಂಚೆ ಪತ್ರಕರ್ತರಾಗಿದ್ದರು. ಅಕಾಲಿ ದಳದ ಮೂಲಕ ರಾಜಕಾರಣ ಆರಂಭಿಸಿ ಕಾಂಗ್ರೆಸ್‌ನಲ್ಲಿಉತ್ತುಂಗಕ್ಕೇರಿ, ಬಿಜೆಪಿಯಲ್ಲೂಸ್ವಲ್ಪ ಕಾಲ ಇದ್ದು ಮತ್ತೆ ಕಾಂಗ್ರೆಸ್‌ಗೆ ಮರಳಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.
ಬೂಟಾ ಅವರು ಅಕಾಲಿದಳ ಸೇರುವ ಮುಂಚೆ ಮಾರ್ಕ್ಸ್ ವಿಚಾರಗಳಿಗೆ ಮಾರು ಹೋಗಿದ್ದರು. ಬಾಂಬೆಯ ಖಾಲ್ಸಾ ಕಾಲೇಜ್‌ನಲ್ಲಿಇತಿಹಾಸ ಓದುತ್ತಿದ್ದಾಗ ಅವರು ಬೊಲ್ಶೆವಿಕ್ ಸಾಹಿತ್ಯದ ಕಟ್ಟಾ ಓದುಗರು. ‘ಫೂಲ್‌ವಾರಿ’ ಮ್ಯಾಗ್‌ಜಿನ್‌ನಲ್ಲಿಪ್ರೂಫ್‌ರೀಡರ್ ಆಗಿ ಕೆಲಸ ಮಾಡುತ್ತಿದ್ದಾಗ, 1953ರಲ್ಲಿಜೋಸೆಫ್ ಸ್ಟಾಲಿನ್ ನಿಧನದ ಸುದ್ದಿ ತಿಳಿದಾಗ ಕಣ್ಣೀರಿಟ್ಟಿದ್ದರು. ಅಂದರೆ, ಮಾರ್ಕ್ಸ್‌ವಾದ ಅವರನ್ನು ಅಷ್ಟೊಂದು ಆವರಿಸಿಕೊಂಡಿತ್ತು. ‘ಅಕಾಲಿ ಪತ್ರಿಕಾ’ದಲ್ಲಿಉಪ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. 1962ರಲ್ಲಿಅಕಾಲಿ ದಳ ಬೂಟಾ ಅವರನ್ನು ರೋಪರ್ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಕಣಕ್ಕಿಳಿಸಿತು. ಮುಂದೆ ಅಕಾಲಿ ಇಬ್ಭಾಗ ಆದಾಗ ಅವರು ತಾರಾ ಸಿಂಗ್ ಅವರೊಂದಿಗೆ ಹೆಜ್ಜೆ ಹಾಕಿದರಾದರೂ ಅವರೊಂದಿಗೆ ಬಹಳ ದಿನ ನಿಲ್ಲಲಿಲ್ಲ. ಇಂದಿರಾ ಅವರ ಪರಿಚಯವಾದ ಮೇಲೆ ಕಾಂಗ್ರೆಸ್ ಸೇರಿದರು. ಆನಂತರ ನಡೆದಿದ್ದೆಲ್ಲಇತಿಹಾಸ.
ಇಂದಿರಾ ಗಾಂಧಿ ಅವರು ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆ ಕೈಗೊಂಡಾಗ ಅದರ ಎಲ್ಲನಿರ್ವಹಣೆ ಮಾಡಿವರು ಇದೇ ಬೂಟಾ ಸಿಂಗ್. ಸಚಿವರಾಗಿ ‘ಗೋಲ್ಡನ್ ಟೆಂಪಲ್’ನ ಪುನರ್ ನಿರ್ಮಾಣವನ್ನು ನೋಡಿಕೊಂಡರು. ಆದರೆ, ಸಿಖ್ ಧಾರ್ಮಿಕ ಗುರುಗಳು ಇವರನ್ನು ‘ಧರ್ಮಭ್ರಷ್ಟ’ ಎಂದು ಘೋಷಿಸಿದರು. ಬೂಟಾ ಸಿಂಗ್ ಆ ಬಳಿಕ ಸ್ವರ್ಣಮಂದಿರದಲ್ಲಿಭಕ್ತರ ಚಪ್ಪಲಿ ಕ್ಲೀನ್ ಮಾಡಿ ಪ್ರಾಯಶ್ಚಿತ್ತ ಕೂಡ ಮಾಡಿಕೊಂಡರೆನ್ನಿ.
ರಾಜೀವ್ ಗಾಂಧಿ ಅವಧಿಯಲ್ಲಿಬೂಟಾ ಸಿಂಗ್ ರಾಜಕಾರಣಿಯಾಗಿ, ಆಡಳಿತಗಾರನಾಗಿ ಗ್ರಾಫ್ ಏರುಗತಿಯಲ್ಲಿತ್ತು; ಜೊತೆಗೆ ವಿವಾದಗಳೂ. ರಾಜೀವ್ ಸಂಪುಟದಲ್ಲಿಪಿ.ವಿ.ನರಸಿಂಹ ರಾವ್ ಮತ್ತು ಪಿ ಶಿವಶಂಕರ್ ಅವರಂಥ ಹಿರಿಯರಿದ್ದರೂ ಬೂಟಾ ಸಿಂಗ್ ಅಕ್ಷ ರಶಃ ರಾಜೀವ್ ನಂತರದ ಸ್ಥಾನದಲ್ಲಿವಿರಾಜಮಾನರಾದರು. ರಾಜೀವ್ ಅವರ ಬಂಟ ಎಂದೇ ಖ್ಯಾತರಾದರು. ಈ ಅವಧಿಯಲ್ಲಿಅವರು ಪ್ರತಿಕ್ಷ ಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿಪ್ರಮುಖ ಪಾತ್ರ ವಹಿಸಿದರು. 1988ರಲ್ಲಿಜಾನಕಿ ರಾಮಚಂದ್ರನ್ ಸರಕಾರ ವಜಾಗೊಳಿಸಿದರು. ಕಾಂಗ್ರೆಸ್‌ನ ಅನೇಕ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ದೂರ ಸರಿಸುವ ಕಾರ್ಯವನ್ನು ಬೂಟಾ ನಿರ್ದಯಿಯಾಗಿ ಮಾಡಿದರು. ರಾಜಸ್ಥಾನದಲ್ಲಿಹರಿದೇವ್ ಜೋಶಿ, ಮಧ್ಯ ಪ್ರದೇಶದಲ್ಲಿಮೋತಿಲಾಲ್ ವೋರಾ ಇದಕ್ಕೆ ಉದಾಹಣೆಯಾಗಿ ನೀಡಬಹುದು. ರಾಜೀವ್ ಗಾಂಧಿ 1989ರಲ್ಲಿಅಯೋಧ್ಯೆಯ ವಿವಾದಿತ ಜಾಗದಲ್ಲಿರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅದರ ಹಿಂದೆ ಬೂಟಾ ಸಿಂಗ್ ಇದ್ದರು ಎಂದು ಇಂದಿಗೂ ಕಾಂಗ್ರೆಸ್‌ನವರು ಮಾತನಾಡಿಕೊಳ್ಳುತ್ತಾರೆ.
1985ರಿಂದ 89ರ ಅವಧಿಯಲ್ಲಿಕೇಂದ್ರ ಗೃಹ ಸಚಿವರಾಗಿ ಬೂಟಾ ಸಿಂಗ್, ಅನೇಕ ರಾಜ್ಯ ಸರಕಾರಗಳನ್ನು ಉರುಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿದರು. ‘‘ಬೂಟಾ ಸಿಂಗ್‌ಜೀ, ನಿಮ್ಮ ಕೃಪಾಣ್(ಕತ್ತಿ) ಒಳಗಿಡಿ,’’ ಎಂದು ರಾಜೀವ್ ಅವರು ಹೇಳಿಧಿದ್ದರಂತೆ. ಅಷ್ಟೊತ್ತಿಗೆ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ತ್ರಿಪುರಾ, ರಾಜಸ್ಥಾನ, ಬಿಹಾರ ಮತ್ತಿತರ ರಾಜ್ಯ ಸರಕಾರಗಳನ್ನು ಬುಡಮೇಲು ಮಾಡಿಯಾಗಿತ್ತು. ಬಿಹಾರದ ರಾಜ್ಯಪಾಲರಾಗಿದ್ದಾಗ ಅವರ ನಡೆದುಕೊಂಡ ರೀತಿ ಸುಪ್ರೀಂ ಕೋರ್ಟ್ ತೀಕ್ಷ ್ಣ ಟೀಕೆಗೂ ಗುರಿಯಾಗಿತ್ತು. 2005ರಲ್ಲಿಜೆಡಿಎಯು-ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡುವ ಬದಲು ಅಸೆಂಬ್ಲಿಯನ್ನೇ ವಿಸರ್ಜಿಸಿ ಬಿಟ್ಟಿದ್ದರು. ಕೇಂದ್ರ ಸಂಪುಟಕ್ಕೆ ತಪ್ಪು ಮಾಹಿತಿ, ಸಂಸದೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್ ತಪರಾಕಿ ಹಾಕಿತ್ತು. ಇದು ಬಹಳ ಚರ್ಚೆ ಕಾರಣವಾಗಿತ್ತು. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಜೀವ್ ಬಳಿಕ ಕಾಂಗ್ರೆಸ್‌ನಲ್ಲಾದ ಬದಲಾವಣೆಗಳು ಬೂಟಾ ಸಿಂಗ್ ಅವರನ್ನು ತೆರೆಮರೆಗೆ ಸರಿಯುವಂತೆ ಮಾಡಿದವು. ಆಗ ಅವರು ಬಿಜೆಪಿ ಸೇರಿ ವಾಜಪೇಯಿ ಸರಕಾರದಲ್ಲಿಸಚಿವರೂ ಆದರು. ಆದರೆ, ಜೆಎಂಎಂ ಲಂಚ ಪ್ರಕರಣದಲ್ಲಿಕೋರ್ಟ್ ಬೂಟಾ ಅವರ ವಿರುದ್ಧ ದೋಷಾರೋಪಣೆ ಮಾಡಿದ ಹಿನ್ನೆಲೆಯಲ್ಲಿಅವರನ್ನು ವಾಜಪೇಯಿ ಅವರು ಸಂಪುಟದಿಂದ ಕೈ ಬಿಟ್ಟ ಬಳಿಕ ಮತ್ತೆ ಮರಳಿ ಕಾಂಗ್ರೆಸ್ ಗೂಡು ಸೇರಿಕೊಂಡರು. ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆಯ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಮತ್ತು ಅದನ್ನು ಗಟ್ಟಿಗೊಳಿಸಲು ಪರೋಕ್ಷ ವಾಗಿ ಕಾರಣರಾದ ಬೂಟಾ ಸಿಂಗ್ ಅವರನ್ನು ನೆನಪಿಟ್ಟುಕೊಳ್ಳಲೇಬೇಕು!
ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿಬೂಟಾ ಸಿಂಗ್ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಷ್ಟೇ ವೇಗವಾಗಿ ಅವುಗಳಿಂದ ಹೊರಗೆ ಬರುವ ಕಲೆಯ ಅವರಿಗೆ ಗೊತ್ತಿತ್ತು. ಹಾಗಾಗಿಯೇ ಎಂಥದ್ದೇ ವಿವಾದಗಳು ಎದುರಾದರೂ ಎಲ್ಲವನ್ನು ನುಂಗಿಬಿಡುವ ಧಿಮಾಕು ಅವರಲ್ಲಿತ್ತು. ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಬೂಟಾ ಸಿಂಗ್, ಕೇಂದ್ರ ಗೃಹ, ರೈಲ್ವೆ, ವಾಣಿಜ್ಯ, ಬಂದರು ಮತ್ತು ಹೆದ್ದಾರಿ, ಸಂಸದೀಯ ವ್ಯವಹಾರ, ಕ್ರೀಡೆ, ಹೌಸಿಂಗ್, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನಾಗರಿಕ ಪೂರೈಕೆ-ಗ್ರಾಹಕ ವ್ಯವಹಾರ, ಸಂವಹನ ಸೇರಿ ಹಲವು ಇಲಾಖೆಗಳನ್ನು ನಿರ್ವಹಿಸಿದ ಕಸುಬುದಾರರು. ತೀರಾ ಇತ್ತೀಚೆಗೆ ಅಂದರೆ, 2007ರಿಂದ 10ರವರೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿಅನೇಕ ಜನೋಪಕಾರಿ ಕೆಲಸ ಮಾಡಿದ್ದರೂ ಜನರು ಅವುಗಳನ್ನು ನೆನಪಿನಲ್ಲಿಟ್ಟುಕೊಂಡಿಲ್ಲ. ಯಾಕೆಂದರೆ, ಬೂಟಾ ಸಿಂಗ್ ಈಗಲೂ, ಇಂದಿರಾ ಅವರ ನೆಚ್ಚಿಗ ಮತ್ತು ರಾಜೀವ್ ಅವರ ಭಂಟ. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ವಿವಾದಿತ ರಾಜಕಾರಣಿ ಎಂಬುದು ನಿರ್ವಿವಾದ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿ ಪಕ್ಷ ಸಂಘಟನೆಯಲ್ಲಿಅಮೂಲ್ಯ ಕೊಡುಗೆ ನೀಡಿದ್ದ ಬೂಟಾ ಸಿಂಗ್ ಅವರಿಗೆ ಕೊನೆಯ ದಿನಗಳಲ್ಲಿತಮ್ಮ ನಿಷ್ಠೆಯನ್ನು ಯಾರೂ ಪರಿಗಣಿಸುತ್ತಿಲ್ಲಎಂಬ ಚಿಂತೆ ಕಾಡುತ್ತಿತ್ತು. ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು.