ಫಾಲ್ಗುಣಿ ನಾಯರ್ 50ನೇ ವಯಸ್ಸಿನಲ್ಲಿ ಆರಂಭಿಸಿದ ‘ನೈಕಾ’ ಈಗ ಲಕ್ಷ ಕೋಟಿ ರೂ. ವೌಲ್ಯದ ಕಂಪನಿ. ಉದ್ಯಮದ ಹಿನ್ನೆಲೆ ಇಲ್ಲದೇ ಅವರು ಯಶಸ್ವಿ ಉದ್ಯಮಿಯಾದ ಕತೆ ಇದು.
-ಮಲ್ಲಿಕಾರ್ಜುನ ತಿಪ್ಪಾರ
ಉದ್ಯೋಗದಲ್ಲಿದ್ದವರಿಗೆ 50 ವರ್ಷ
ವಯಸ್ಸು ಎಂದರೆ ನಿವೃತ್ತಿಯ ಹತ್ತಿರದಲ್ಲಿರುತ್ತಾರೆ, ಮನೆಯಲ್ಲಿದ್ದವರಾದರೆ
ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಕಾಲ ಕಳೆಯಲು ಮನಸ್ಸನ್ನು ಸಜ್ಜುಗೊಳಿಸುವ ಕಾಲ. ಅಂಥ ವಯಸ್ಸಿನಲ್ಲಿ ಸ್ಟಾರ್ಟ್ಅಪ್ ಆರಂಭಿಸಿ, ಅಲ್ಪ ಕಾಲದಲ್ಲೇ ‘ಯೂನಿಕಾರ್ನ್’ ಕಂಪನಿ
ಅಂದರೆ ಒಂದು ಶತಕೋಟಿ ಡಾಲರ್ ವೌಲ್ಯದ ಉದ್ಯಮವಾಗಿ ಬೆಳೆಸುವುದೆಂದರೆ ಸಾಮಾನ್ಯದ ಮಾತಲ್ಲಘಿ.
ಈ ಅಸಾಮಾನ್ಯ ಸಾ‘ನೆಯನ್ನು ಸಾಮಾನ್ಯ ಮಹಿಳೆಯೊಬ್ಬಳು ಮಾಡಿದ್ದಾರೆ.
ಸೆಲ್ ಮೇಡ್ ಬಿಸಿನೆಸ್ ವುಮನ್ ‘ಫಾಲ್ಗುಣಿ’
ಆ ಯಶಸ್ವಿ ಉದ್ಯಮಿ. ನೈಕಾ(www.nykaa.com) ಎಂಬ ಇ- ಕಾಮರ್ಸ್ ತಾಣವನ್ನು ಸ್ಥಾಪಿಸಿ, ಅದನ್ನೀಗ ಬಹುದೊಡ್ಡ ಕಂಪನಿಯಾಗಿ ಬೆಳೆಸಿದ್ದಾರೆ. ನೈಕಾ ಇತ್ತೀಚೆಗಷ್ಟೇ
ಷೇರುಪೇಟೆಯನ್ನು ಪ್ರವೇಶಿಸುತ್ತಿದ್ದಂತೆ ಅದರ ವೌಲ್ಯ ದಿಢೀರ್ನೇ ಏರಿಕೆಯಾಗಿದ್ದು,
ಫಾಲ್ಗುಣಿ ದೇಶದ ಟಾಪ್ 20 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡರು.
‘ನೈಕಾ’ ಪ್ರವರ್ತಕ ಕಂಪನಿ ಎ್ಎಸ್ಎನ್ ಇ-ಕಾಮರ್ಸ್ ತಲಾ 1125 ರೂ.ವೌಲ್ಯದ ಷೇರು ಬಿಡುಗಡೆ ಮಾಡಿತ್ತು. ಈ ಷೇರಿನ ದರ ಏಕ್ದಮ್
2,001 ರೂ.ಗೆ ಏರಿಕೆಯಾಗಿ, ಒಂದೇ
ದಿನದಲ್ಲಿ ಕಂಪನಿಯ ವೌಲ್ಯ ದುಪ್ಪಟ್ಟಾಯಿತು. ಇದರ ಪರಿಣಾಮ ಕಂಪನಿಯ ಒಟ್ಟು
ಮಾರುಕಟ್ಟೆ ವೌಲ್ಯವು 1.04 ಲಕ್ಷ ಕೋಟಿ ರೂ.ದಾಟಿತು.
‘ನೈಕಾ’ ಫಾಲ್ಗುಣಿ ನಾಯರ್ ಲಕ್ಷ ಕೋಟಿ ರೂಪಾಯಿ ವೌಲ್ಯದ
ಕಂಪನಿಯ ಒಡತಿಯಾದರು!
ಉದ್ಯಮದ ಯಾವುದೇ ಹಿನ್ನೆಲೆಯಿಲ್ಲದೆ
ಕೇವಲ ಒಂಬತ್ತು ವರ್ಷದಲ್ಲೇ ಕಂಪನಿಯೊಂದನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವುದು ಹುಡುಗಾಟದ ಮಾತನೇಲ್ಲ. ಆದರೆ,
59 ವರ್ಷದ ಫಾಲ್ಗುಣಿ ಅಂಥ ಸಾಧನೆ ಮಾಡಿದ್ದಾರೆ. ಫಾಲ್ಗುಣಿ
ಅವರೀಗ ಯಶಸ್ಸಿನ ಗಣಿ; ಭಾರತೀಯ ಮಹಿಳೆಯರಿಗೆ, ಅದರಲ್ಲೂ ಬಿಸಿನೆಸ್, ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರಿಗೆ
ಸ್ಫೂರ್ತಿಯ ಖನಿ! ಗುಜರಾತಿಗಳಿಗೆ
ವ್ಯಾಪಾರ ಸಹಜ. ಯಾಕೆ ಈ ಮಾತು ಹೇಳಬೇಕಾಯಿತು ಎಂದರೆ, ಫಾಲ್ಗುಣಿ ನಾಯರ್ ಕೂಡ ಗುಜರಾತಿ. ಆದರೆ, ಹುಟ್ಟಿ ಬೆಳೆದಿದ್ದು ಎಲ್ಲ ಮಹಾರಾಷ್ಟ್ರದಲ್ಲಿ. 1963ರ ಜನವರಿ
19ರಂದು ಮುಂಬಯಿಯಲ್ಲಿ ಗುಜರಾತಿ ಕುಟುಂಬದಲ್ಲಿ ಫಾಲ್ಗುಣಿ ಜನಿಸಿದರು. ಇವರ ತಂದೆ ಸ್ವಂತ ಮತ್ತು ಚಿಕ್ಕ ಬಿಯರಿಂಗ್ಸ್ ಕಂಪನಿಯನ್ನು ಹೊಂದಿದ್ದರು. ಮುಂಬಯಿಯ ದಿ ನ್ಯೂ ಎರಾ ಸ್ಕೂಲ್ನಲ್ಲಿ ತಮ್ಮ ಪ್ರಾಥಮಿಕ ಹಾಗೂ
ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿದ ಬಳಿಕ, ಕಾಮರ್ಸ್ ಪದವಿಯನ್ನು ಪಡೆದುಕೊಂಡರು.
ಬಳಿಕ ಐಐಎಂ ಅಹಮದಾಬಾದ್ ಸಂಸ್ಥೆಯಿಂದ ತಮ್ಮ ಸ್ನಾತಕ ಶಿಕ್ಷಣವನ್ನು ಪಡೆದುಕೊಂಡರು.
ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಂತೆ ಸಂಜಯ್ ನಾಯರ್ ಅವರನ್ನು ವರಿಸಿದರು.
ಅಂಚಿತ್ ನಾಯರ್ ಮತ್ತು ಅದ್ವಿತಾ ನಾಯರ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಎಲ್ಲರಂತೆ, ಫಾಲ್ಗುಣಿ
ಅವರೂ ವಿದ್ಯಾಭ್ಯಾಸ ಪೂರ್ತಿಯಾದ ಬಳಿಕ ಉದ್ಯೋಗಕ್ಕೆ ಸೇರಿಕೊಂಡರು. ಕೋಟಕ್
ಮಹೀಂದ್ರಾ ಬ್ಯಾಂಕ್ ಸೇರಿದ ಅವರು 18 ವರ್ಷಗಳ ಕಾಲ ದುಡಿದರು. ಈ ಬ್ಯಾಂಕಿನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್ನಿಂದ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಮ್ಯಾನೇಜಿಂಗ್ ಡೈರೆಕ್ಟರ್ವರೆಗೂ ಉನ್ನತಿಯನ್ನು ಪಡೆದುಕೊಂಡರು. ಬಹುಶಃ ಬೇರೆ ಯಾರೇ ಆದರೂ
ಅಷ್ಟು ಉನ್ನತ ಹುದ್ದೆಗೆ ತಲುಪಿದ ಮೇಲೆ ಮತ್ಯಾವುದೇ ಯೋಚನೆ ಮಾಡದೇ, ನಿವೃತ್ತಿಯವರೆಗೂ
ಕೆಲಸ ಮಾಡುತ್ತಿದ್ದರು. ಆದರೆ, ಫಾಲ್ಗುಣಿ ಅವರಿಗೆ
ಮಾತ್ರ ಏನಾದರೂ ಭಿನ್ನವಾದ ಕೆಲಸವನ್ನು ಮಾಡಬೇಕು, ಹೊಸತನ್ನು ಸಾಸಬೇಕೆಂಬ
ತುಡಿತ ಸದಾ ಕಾಲ ಇತ್ತು. ಈ ಕನಸು ಅವರನ್ನು ನಿದ್ದೆ ಮಾಡಲು ಬಿಡುತ್ತಿರಲಿಲ್ಲ. ತನ್ನದೇ ಆದ ಹೆಗ್ಗರುತನ್ನು ಛಾಪಿಸುವ ಹಪಾಹಪಿ
ಅವರಲ್ಲಿ ಹೆಡೆಯಾಡುತ್ತಿತ್ತು. ಆದರೆ, ಅಷ್ಟೊತ್ತಿಗಾಗಲೇ
50 ವರ್ಷಗಳು ಸರಿದು ಹೋಗಿದ್ದವು. ಈ ಹಂತದಲ್ಲಿ ಕಂಪನಿಯೊಂದನ್ನು
ಆರಂಭಿಸುವುದು ಸರಳವೇನೂ ಆಗಿರಲಿಲ್ಲ. ಅದಕ್ಕೆ ಬೇಕಾದ ಹಣಕಾಸು ನೆರವು ಆಗಲೀ,
ಫ್ಯಾಮಿಲಿ ಹಿನ್ನೆಲೆಯಾಗಲೀ ಏನೂ ಇಲ್ಲ. ಆದರೆ ಧೈರ್ಯ,
ಛಲ, ಪ್ರಾಮಾಣಿಕ ಪ್ರಯತ್ನಗಳೆಂಬ ‘ಬಂಡವಾಳ’ ಮಾತ್ರ
ಹೇರಳವಾಗಿತ್ತು! ಕೊನೆಗೆ ತಮ್ಮ ಕನಸು ಬೆನ್ನು ಹತ್ತಿ 2012ರಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ನೌಕರಿಯನ್ನು ತ್ಯಜಿಸಿದರು. ಧೈರ್ಯದಿಂದ ಮುನ್ನುಗ್ಗಿ, ಎಫ್ಎಸ್ಎನ್
ಇ ಕಾಮರ್ಸ್ ವೆಂಚರ್ ಪ್ರೈವೆಟ್ ಲಿ. ಆರಂಭಿಸಿದರು. ಈ ಕಂಪನಿಯಡಿ ಸೌಂದರ್ಯ, ವೆಲ್ನೆಸ್
ಮತ್ತು ಫ್ಯಾಷನ್ ಸಂಬಂಧಿ ವಸ್ತುಗಳ ಮಾರಾಟ ಇ-ಕಾಮರ್ಸ್ ತಾಣ ‘ನೈಕಾ’ ತೆರೆದರು. ಆ ನಂತರ ಮತ್ತೆ ಅವರು
ಹಿಂದಿರುಗಿ ನೋಡಲೇ ಇಲ್ಲ. ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯದ ನೈಕಾ ಮೂಲಕ
ತಮ್ಮ ಹೆಗ್ಗರುತು ಮೂಡಿಸಲು ಅವರು ಯಶಸ್ವಿಯಾದರು. ಚಿಕ್ಕದಾಗಿ ಆರಂಭವಾಗಿದ್ದ
ಇ-ಕಾಮರ್ಸ್ ತಾಣ ಇದೀಗ ಹೆಮ್ಮರವಾಗಿ ಬೆಳೆದಿದೆ. ಅದರ ಮಾರುಕಟ್ಟೆ ವೌಲ್ಯ ಲಕ್ಷ ಕೋಟಿ ರೂಪಾಯಿ ಮೀರಿದೆ; 2000ಕ್ಕೂ
ಅಧಿಕ ಜನರಿಗೆ ಉದ್ಯೋಗ ನೀಡಿದೆ. ಮಾರುಕಟ್ಟೆ ವೌಲ್ಯದಲ್ಲಿ ನೈಕಾ ಇದೀಗ ಕೋಲ್
ಇಂಡಿಯಾ, ಗೋದ್ರೇಜಾ ಕಂಪನಿಗಳನ್ನು ಮೀರಿಸಿದೆ. ದೇಶದ 20 ಶ್ರೀಮಂತರ ಪಟ್ಟಿಯಲ್ಲಿ ಫಾಲ್ಗುಣಿ 17ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯ ಅಗ್ರಸ್ಥಾನದಲ್ಲಿ ಮುಖೇಶ್
ಅಂಬಾನಿ, ಗೌತಮ್ ಅದಾನಿಯಂಥವರಿದ್ದಾರೆ. ಮತ್ತೊಂದು
ಗಮನಿಸಬೇಕಾದ ಸಂಗತಿ ಏನೆಂದರೆ; ಟಾಪ್ ಸ್ಟಾರ್ಟ್ಅಪ್ ಐಪಿಒಗಳ ಪಟ್ಟಿಯಲ್ಲಿ ಫಾಲ್ಗುಣಿ ಪ್ರಥಮ ಸ್ಥಾನದಲ್ಲಿದ್ದಾರೆ. ಯಾಕೆಂದರೆ, ನೈಕಾದಲ್ಲಿ ಇವರದ್ದೇ ಶೇ.53ರಷ್ಟು ಷೇರಿದೆ. ನಂತರದ ಸ್ಥಾನದಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್
ಶೇಖರ್ ಶರ್ಮಾ, ರೆಮಾಟೊದ ದೀಪೇಂದ್ರ ಗೋಯಲ್ನಂಥವರಿದ್ದಾರೆ.
ಯಶಸ್ಸಿನ ತುದಿಯನ್ನು ತಲುಪಿರುವ
ಫಾಲ್ಗುಣಿ ನಾಯರ್ ತಮ್ಮ ತಂದೆಯಿಂದ ಸಾಕಷ್ಟು ಪ್ರಭಾವಿತರಾದರೆ,
ಉದ್ಯಮಿ ಉದಯ್ ಕೋಟಕ್ ಮತ್ತು ಪತಿ ಸಂಜಯ್ ನಾಯರ್ರಿಂದ
ಸ್ಫೂರ್ತಿ ಪಡೆದುಕೊಂಡಿದ್ದಾರೆ. ‘ಕರ್ಮಣ್ಯೇವಾಕಾರಸ್ತೇ ಮಾ ಫಲೇಷು ಕದಾಚನ’
ಎಂಬಂತೆ ತಮ್ಮ ಕೆಲಸವನ್ನು ತಾವು ಮಾಡುತ್ತಾ ಹೊರಟಿದ್ದಾರೆ, ಫಲಾಫಲ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾವುದೇ ಸಕ್ಸೆಸ್ ಆಗಲೀ
ಶಾರ್ಟ್ಕಟ್ನಲ್ಲಿ ಬರುವಂಥದ್ದಲ್ಲ.
ಅದಕ್ಕಾಗಿ ತನುಮನಧನವೆನ್ನಲ್ಲ ಅರ್ಪಿಸಬೇಕಾಗುತ್ತದೆ. ಅರ್ಪಣೆ,
ಸಮರ್ಪಣೆಗಳಿದ್ದಾಗ ಮಾತ್ರವೇ ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯ ಎಂಬುದಕ್ಕೆ
ಫಾಲ್ಗುಣಿ ಈಗ ಉದಾಹರಣೆಯಾಗಿದ್ದಾರೆ.
ಈಗಿನದ್ದು ಮೈಕ್ರೋಬ್ಲಾಗಿಂಗ್
ಜಮಾನಾ. ಬಹುತೇಕ ಉದ್ದಿಮೆದಾರರು ಟ್ವಿಟರ್, ಫೇಸ್‌ಬುಕ್ನಂಥ ಸೋಷಿಯಲ್ ಮೀಡಿಯಾಗಳಲ್ಲಿದ್ದಾರೆ. ಆದರೆ, ಫಾಲ್ಗುಣಿ ಅವರು ಇದಕ್ಕೆ ಅಪವಾದ. ನೈಕಾ ಕಂಪನಿ ಶುರು ಮಾಡಿದಾಗಿನಿಂದ
ಈ ಒಂಬತ್ತು ವರ್ಷಗಳಲ್ಲಿ ಅವರು ಒಮ್ಮೆ ಮಾತ್ರ ಟ್ವೀಟ್ ಮಾಡಿದ್ದಾರಂತೆ! ಸೋಷಿಯಲ್ ಮೀಡಿಯಾದಲ್ಲಿ ವ್ಯಸ್ತವಾಗುವುದೆಂದರೆ ಸಾಕಷ್ಟು ಸಮಯ ಮತ್ತು ಪ್ರಯತ್ನ ಬೇಕಾಗುತ್ತದೆ
ಎಂಬುದು ಅವರ ಈ ನಿರ್ಧಾರಕ್ಕೆ ಕಾರಣ.
ಯಾವುದೇ ಉದ್ಯಮಶೀಲತೆಯೊಂದು ಯಶಸ್ಸು ಗಳಿಸಬೇಕಾದರೆ ಸಾಕಷ್ಟು ಉತ್ಸಾಹ, ಕಠಿಣ ಪರಿಶ್ರಮ, ದೃಢತೆ ಮತ್ತು ಸಮಯವನ್ನು ಬೇಡುತ್ತದೆ ಎಂಬುದು ಅವರು ಖಚಿತ ನುಡಿಗಳಾಗಿವೆ. ‘‘ನಾನು ನೈಕಾವನ್ನು 50ನೇ ವಯಸ್ಸಿನಲ್ಲಿ ಆರಂಭಿಸಿದೆ. ಈ ‘ನೈಕಾ’ ಪಯಣವು ಪ್ರತಿಯೊಬ್ಬ ಹುಡುಗಿಯ ತನ್ನ ಬದುಕಿನಲ್ಲಿ ತಾನೇ ‘ನಾಯಕಿ’ಯಾಗಲು ಪ್ರೇರಣೆ ನೀಡಲಿ ಎಂಬುದು ನನ್ನ ಆಶಯ,’’ ಎಂದು ಹೇಳಿಕೊಂಡಿದ್ದರು. ಅನುಮಾನವೇ ಬೇಡ. ನೈಕಾ ಹಾಗೂ ಫಾಲ್ಗುಣಿ ನಾಯರ್ ಅವರ ಯಶಸ್ಸಿನ ಪಯಣವು ಮುಂಬರುವ ಅಸಂಖ್ಯ ಮಹಿಳೆಯರಿಗೆ ಸ್ಫೂರ್ತಿ ನೀಡಲಿದೆ. ಸಮರ್ಪಣೆಯಿಂದ, ಪ್ರಾಮಾಣಿಕ ಪ್ರಯತ್ನದಿಂದ ಮುನ್ನಡೆದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಯಶಸ್ಸಿನ ಮಾದರಿಯನ್ನು ನಮ್ಮ ಮುಂದೆ ಫಾಲ್ಗುಣಿ ಕಡೆದು ನಿಲ್ಲಿಸಿದ್ದಾರೆ.