ನವಜೋತ್ ಸಿಧು ಜೊತೆಗಿನ ಒಳಜಗಳದಲ್ಲಿ ಕೈಸೋತ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
- ಮಲ್ಲಿಕಾರ್ಜುನ ತಿಪ್ಪಾರ
‘‘ಇನ್ನು ನಾನು ಅವಮಾನ ಸಹಿಸಲಾರೆ,’’ ಎನ್ನುತ್ತಲೇ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್ ಕಾಂಗ್ರೆಸ್‌ನ ನೂತನ ಅಧ್ಯಕ್ಷ , ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹಾಗೂ ಅಮರೀಂದರ್ ಸಿಂಗ್ ನಡುವಿನ ಕಿತ್ತಾಟ ಒಂದು ಹಂತಕ್ಕೆ ತಲುಪಿದೆ.
ಅನುಮಾನವೇ ಬೇಡ; ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ ಕಾಂಗ್ರೆಸ್‌ನ ದಿಗ್ಗಜ ಧುರೀಣ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಬೇರುಮಟ್ಟದಿಂದ ಸಂಘಟಿಸಿ, ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಕೊಡುಗೆ ಅನನ್ಯ, ಅನುಪಮ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿ ಆಯ್ಕೆಯ ಮೊದಲ ಆದ್ಯತೆಯಾಗುತ್ತಿದ್ದರು. ಪರಿಣಾಮ ಎರಡು ಬಾರಿ ಸಿಎಂ ಆಗಿದ್ದಾರೆ. ಪಂಜಾಬ್ ಕಾಂಗ್ರೆಸ್ ಮೇಲೆ ಬಿಗಿ ಹಿಡಿತ ಹೊಂದಿದ್ದ ‘ಕ್ಯಾಪ್ಟನ್’ ವಿರುದ್ಧವೇ ಶಾಸಕರು, ಕೆಲವು ನಾಯಕರು ಬಂಡೆದ್ದ ಪರಿಣಾಮ, ಕಳೆದ ಎರಡ್ಮೂರು ವರ್ಷದಲ್ಲಿ ಪಂಜಾಬ್ ಕಾಂಗ್ರೆಸ್ ಬೀದಿ ಜಗಳವನ್ನು ಇಡೀ ರಾಷ್ಟ್ರವೇ ನೋಡಿದೆ. ಹಾಗೆ ನೋಡಿದರೆ, 2017ರಲ್ಲಿ ಪ್ರಚಂಡ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತಲ್ಲ, ಆಗಲೇ ಈ ಬಂಡಾಯದ ಕಿಚ್ಚು ಶುರವಾಗಿದ್ದು! ಹೇಗೆಂದರೆ, ಬಿಜೆಪಿಯಿಂದ ವಲಸೆ ಬಂದು ಕಾಂಗ್ರೆಸ್ ಸೇರಿದ್ದ ಮಾಜಿ ಕ್ರಿಕೆಟಿಗ ‘ಸಿಕ್ಸರ್’ ಸಿಧು, ಉಪಮುಖ್ಯಮಂತ್ರಿಯ ಹುದ್ದೆಗೆ ಹಕ್ಕು ಚಲಾಯಿಸಿದ್ದರು.
ಆದರೆ, ಅಂದಿನ ಸನ್ನಿವೇಶದಲ್ಲಿ ಅಮರೀಂದರ್ ಸಿಂಗ್ ಏರಿದ್ದ ಎತ್ತರಕ್ಕೆ ದಿಲ್ಲಿ ವರಿಷ್ಠ ಮಂಡಳಿ ಎದುರಾಡುವ ಮಾತೇ ಇರಲಿಲ್ಲ, ಪರಿಣಾಮ ಸಿಧು ಡಿಸಿಎಂ ಸ್ಥಾನದಿಂದ ವಂಚಿತರಾಗಿ, ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ, ಅವರೊಳಗಿನ ಮಹತ್ವಾಕಾಂಕ್ಷಿ ಸಿಧು ತೃಪ್ತನಾಗಲಿಲ್ಲ. ಸ್ವಲ್ಪ ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕ್ಯಾಪ್ಟನ್ ವಿರುದ್ಧ ಬಂಡಾಯ ಸಾರಿದರು. ಇಷ್ಟೇ ಆದರೆ ಪರ್ವಾಗಿರಲಿಲ್ಲ. ಸಿಎಂ ಆಗಿದ್ದ ಅಮರೀಂದರ್ ಅವರು ನಿಧಾನವಾಗಿ ಪಕ್ಷ ದ ಮೇಲಿನ ಹಿಡಿತ ಕಳೆದುಕೊಳ್ಳುವುದಕ್ಕೂ, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುವುದಕ್ಕೂ, ಸಿಧು ಅತೃಪ್ತ ಶಾಸಕರ ನಾಯಕನಾಗಿ ಹೊರಹೊಮ್ಮುವುದಕ್ಕೂ ಸರಿಹೋಗಿದೆ. ಹಲವು ಬಾರಿ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಪಂಜಾಬ್ ಬಿಕ್ಕಟ್ಟನ್ನು ಶಮನ ಮಾಡಿದರು, ಅದು ತಾತ್ಕಾಲಿಕವಾಗಿತ್ತಷ್ಟೇ. ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಿದ ಮೇಲೆ ಒಳಜಗಳ ಮತ್ತಷ್ಟು ಬಿಗಡಾಯಿಸಿತು.
ಅಮರೀಂದರ್ ರಾಜೀನಾಮೆಯು ಪಂಜಾಬ್ ಕಾಂಗ್ರೆಸ್‌ನ ಒಳಜಗಳದ ಫಲಿತಾಂಶವಾದರೂ ಅದಕ್ಕೆ ಸಾಕಷ್ಟು ಆಯಾಮಗಳಿವೆ. 2017ರ ಚುನಾವಣೆ ವೇಳೆಗೆ ಪ್ರಶ್ನಾತೀತ ನಾಯಕರಾಗಿದ್ದ ಅಮರೀಂದರ್ ಸಿಂಗ್ 2022ರ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯತೆಯಲ್ಲಿ ಕುಸಿದಿದ್ದಾರೆ. ‘ಜನರ ಮಹಾರಾಜ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಕೊನೆ ಕೊನೆಗೆ ಜನರಿಗೆ ಸಿಗುವುದೇ ಕಷ್ಟವಾಗಿತ್ತು. ಅಮರೀಂದರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಸಿಗಲಾರದು ಎಂಬ ಸಮೀಕ್ಷೆಯೂ ಅವರು ನಿರ್ಗಮನಕ್ಕೆ ಕಾರಣವಾಯಿತು. ಅವರ ನೆರಳಾಗಿದ್ದ ಬಹಳಷ್ಟು ಶಾಸಕರು ಪಾಳಯ ಬದಲಿಸಿದ್ದಾರೆ ಎನ್ನುತ್ತಾರೆ ಪಂಜಾಬ್ ರಾಜಕಾರಣ ಬಲ್ಲ ವಿಶ್ಲೇಷಕರು.
‘ಸೇನೆ ಇಲ್ಲದ ವಯೋವೃದ್ಧ ಸೇನಾನಿ’ಯಾಗಿರುವ ಅಮರೀಂದರ್ ಸಿಂಗ್ ವ್ಯಕ್ತಿತ್ವ ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಯೋಧ, ಸೇನಾ ಇತಿಹಾಸಿಕಾರ, ಶೆಫ್, ತೋಟಗಾರ, ಬರಹಗಾರ.. ಹೀಗೆ ನಾನು ಮುಖಗಳಿವೆ. ಅವರು ಅಪರೂಪದ ರಾಜಕೀಯ ನಾಯಕರು. ರಾಯಲ್ ಫ್ಯಾಮಿಲಿಯ ಅಮರೀಂದರ್ ರಾಜಕಾರಣಕ್ಕೆ ಬಂದಿದ್ದು, ತಮ್ಮ ಶಾಲಾ ದಿನಗಳ ಸ್ನೇಹಿತ ರಾಜೀವ್ ಗಾಂಧಿಯ ಒತ್ತಾಸೆಯಿಂದಾಗಿ. 1942 ಮಾರ್ಚ್ 11ರಂದು ಪಟಿಯಾಲಾದ ರಾಜಮನೆತನದಲ್ಲಿ ಜನಿಸಿದರು. ತಂದೆ ಮಹಾರಾಜ ಸರ್ ಯಾದವೀಂದ್ರ ಸಿಂಗ್ ಮತ್ತು ತಾಯಿ ಮಹಾರಾಣಿ ಮೊಹೀಂದರ್ ಕೌರ್. ಶಿಮ್ಲಾದ ಲೊರೆಟೋ ಕಾನ್ವೆಂಟ್, ಸನಾವರ್‌ದ ಲಾವರೆನ್ಸ್ ಸ್ಕೂಲ್‌ನಲ್ಲಿ ಆರಂಭದ ಶಿಕ್ಷ ಣ ಪಡೆದು, ಡೆಹ್ರಾಡೂನ್‌ನ ದಿ ಡೂನ್ ಸ್ಕೂಲ್‌ಗೆ ಸೇರಿದರು. ಅಮರೀಂದರ್ ಅವರ ಪತ್ನಿ ಪ್ರಣೀತ್ ಕೌರ್. ರಣೀಂದರ್ ಸಿಂಗ್ ಮತ್ತು ಜೈ ಇಂದೇರ್ ಕೌರ್ ಮಕ್ಕಳು. ಪತ್ನಿ ಪ್ರಣೀತ್ ಕೌರ್ ಅವರು ಸಂಸದೆಯಾಗಿದ್ದರು ಮತ್ತು 2009ರಿಂದ ಅಕ್ಟೋಬರ್ 2012ರವರೆಗೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಮರೀಂದರ್ ಅವರ ಸಹೋದರಿ ಹೇಮಿಂದರ್ ಕೌರ್ ಮಾಜಿ ವಿದೇಶಾಂಗ ಸಚಿವರಾಗಿದ್ದ ಕೆ. ನಟ್ವರ್ ಸಿಂಗ್ ಅವರ ಪತ್ನಿ. ಹಾಗೆಯೇ, ಶಿರೋಮಣಿ ಅಕಾಲಿ ದಳ(ಎ)ದ ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮನ್ ಕೂಡ ಇವರ ಸಂಬಂಧಿ. ಅಮರೀಂದರ್ ಸಿಂಗ್ ಅವರ ಒಟ್ಟು ಫ್ಯಾಮಿಲಿ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.
ರಾಜಕಾರಣಕ್ಕೆ ಕಾಲಿಡುವ ಮುನ್ನ ಅಮರೀಂದರ್ ಅವರು, ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. 1963ರಿಂದ 1966ವರೆಗೆ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಮಿಲಿಟರಿ ಅಕಾಡೆಮಿ ಪದವೀಧರರೂ ಹೌದು. ಅವರ ಸೇನೆಯಲ್ಲಿ ಸಿಖ್ ರೆಜಿಮಂಟ್‌ನಲ್ಲಿದ್ದರು. 1965ರ ಇಂಡೋ-ಪಾಕ್ ಯುದ್ಧದಲ್ಲಿಸಕ್ರಿಯವಾಗಿ ಪಾಲ್ಗೊಂಡ ಹಿರಿಮೆ ಅವರಿಗಿದೆ. ರಾಜೀವ್ ಗಾಂಧಿಯ ಒತ್ತಾಸೆಯ ಮೇರೆಗೆ ಅವರು ಕಾಂಗ್ರೆಸ್ ಸೇರ್ಪಡೆಯಾಗಿ 1980ರಲ್ಲಿಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ಆದರೆ, ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ವಿರೋಧಿಸಿ ತಮ್ಮ ಲೋಕಸಭಾ ಸದಸ್ಯತ್ವ ಹಾಗೂ ಕಾಂಗ್ರೆಸ್ ಪಾರ್ಟಿಗೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ ಶಿರೋಮಣಿ ಅಕಾಲಿ ದಳ ಸೇರ್ಪಡೆಯಾಗಿ ತಲವಂಡಿ ಸಾಬೋ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಸಚಿವರೂ ಆದರು. ಕೃಷಿ, ಅರಣ್ಯ, ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಗಳನ್ನು ನಿರ್ವಹಣೆ ಮಾಡಿ ಅನುಭವ ಪಡೆದುಕೊಂಡರು.
ಆದರೆ, ಅಕಾಲಿದಳದಲ್ಲೂ ತುಂಬ ದಿನಗಳ ಕಾಲ ಅಮರೀಂದರ್ ಉಳಿಯಲಿಲ್ಲ. 1992ರಲ್ಲಿ ಆ ಪಕ್ಷ ವನ್ನು ತೊರೆದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಪ್ಯಾಂಥಿಕ್) ಸ್ಥಾಪಿಸಿದರು. ಆದರೆ, ವಿಧಾಸಭೆ ಚುನಾವಣೆಯಲ್ಲಿ ಹೀನಾಯವಾಗಿ ಅವರ ಪಕ್ಷ ಸೋಲು ಕಂಡಿತು. ಸ್ವತಃ ಅಮರೀಂದರ್ ಅವರು ಕೇವಲ 856 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಪರಿಣಾಮ ತಮ್ಮ ಪಕ್ಷ ವನ್ನು ಅವರು 1998ರಲ್ಲಿಕಾಂಗ್ರೆಸ್ ಜತೆ ವಿಲೀನಗೊಳಿಸಿದರು. ಆಗ ಕಾಂಗ್ರೆಸ್ ನಾಯಕತ್ವ ಸೋನಿಯಾ ಗಾಂಧಿ ಹೆಗಲಿಗೇರಿತ್ತು. 1998ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಆದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವ ಹೊಣೆಗಾರಿಕೆ ಅವರನ್ನು ಮುಂಚೂಣಿಯ ನಾಯಕನನ್ನಾಗಿ ಮಾಡಿತು. 1999ರಿಂದ 2002, 2010ರಿಂದ 2013 ಮತ್ತು 2015ರಿಂದ 2017, ಹೀಗೆ ಮೂರು ಬೇರೆ ಬೇರೆ ಅವಧಿಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರದ ಮೊಗಸಾಲೆಗೆ ತರುವಲ್ಲಿ ಯಶಸ್ವಿಯಾಗಿ, 2002ರಿಂದ 2007ರವರೆ ಮೊದಲ ಬಾರಿಗೆ ಪಂಜಾಬ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅಮರೀಂದರ್ 2013ರಿಂದಲೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಆದರೆ, ಪಂಜಾಬ್‌ನಲ್ಲಿ ಮೋದಿ ಅಲೆಯ ನಡುವೆಯೂ ಅರುಣ್ ಜೇಟ್ಲಿ ಅವರನ್ನು ಸೋಲಿಸುವಲ್ಲಿ ಅಮರೀಂದರ್ ಯಶಸ್ವಿಯಾಗಿದ್ದರು. ಪಟಿಯಾಲ ನಗರ ಮೂರು ಬಾರಿ, ಸಮನಾ ಹಾಗೂ ತಲ್ವಾಂಡಿ ಸಾಬೋ ವಿಧಾನಸಭೆ ಕ್ಷೇತ್ರಗಳನ್ನು ತಲಾ ಒಂದು ಬಾರಿ ಪ್ರತಿನಿಧಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್ ನಾಯಕತ್ವ ಇವರನ್ನು ಮತ್ತೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಿತು. ಪರಿಣಾಮ 2017ರಲ್ಲಿ ಎಲೆಕ್ಷ ನ್‌ನಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿ ಮತ್ತೆ ಅಧಿಕಾರಕ್ಕೇರಿತು. ಅಮರೀಂದರ್ ಸಿಂಗ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು.
ಪಂಜಾಬ್‌ನಲ್ಲಿ ತಾವೊಬ್ಬ ನಿರ್ಣಾಯಕ ನಾಯಕ ಎಂಬುದನ್ನು ಕಾಲಕಾಲಕ್ಕೆ ಅವರು ಸಾಬೀತುಪಡಿಸುತ್ತಾ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕತ್ವದ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡಲು ಅವರು ಯಾವತ್ತೂ ಹಿಂಜರಿದಿಲ್ಲ. ಈಗ ಕಾಲ ಬದಲಾಗಿದೆ; ಪಂಜಾಬ್‌ನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. 79 ವರ್ಷದ ಅಮರೀಂದರ್ ಅವರಿಗೀಗ ಮೊದಲಿದ್ದ ಚಾರ್ಮ್ ಇಲ್ಲ ಎಂಬುದನ್ನು ಅರಿತ ಹಲವು ಶಾಸಕರು, ನಾಯಕರು ಅವರ ವಿರುದ್ಧವೇ ನಿಂತು ಕಾಳಗ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವರು ನೀಡಿರುವ ರಾಜೀನಾಮೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟ. ಆರೇಳು ತಿಂಗಳು ಕಳೆದರೂ ಸಾಕು, ಎಲ್ಲವೂ ನಿಚ್ಚಳವಾಗಲಿದೆ.