ಭಾರತದ ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್ ಬಜಾಜ್, ಅಜ್ಜನಿಂದ ಬಂದ ಬಜಾಜ್ ಆಟೊ ಕಂಪನಿಯನ್ನು ಉತ್ತುಂಗಕ್ಕೇರಿಸಿದವರು.
1970
‘ಬಲಾಢ್ಯ ನಾಯಕಿ’ ಪ್ರಧಾನಿ ಇಂದಿರಾ ಗಾಂಧಿ ಅವರು ‘ಲೈಸೆನ್ಸ್ ರಾಜ್’ ಹೆಸರಿನಲ್ಲಿಉತ್ಪಾದನಾ ವಲಯವನ್ನು ಅನಗತ್ಯ ನಿಯಂತ್ರಣಕ್ಕೊಳಪಡಿಸಿದ್ದರು. ಈ ವ್ಯವಸ್ಥೆಯ ಪರಿಣಾಮ ಖರೀದಿದಾರರು ಸ್ಕೂಟರ್ ಬುಕ್ ಮಾಡಿ, ಅದನ್ನು ಖರೀದಿಸಲು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಆಗ ರಾಹುಲ್ ಬಜಾಜ್ ಅವರು ಸಂದರ್ಶನವೊಂದರಲ್ಲಿ, ‘‘ಹೆಚ್ಚಿನ ಭಾರತೀಯರಿಗೆ ಅಗತ್ಯವಿರುವ ಸರಕುಗಳ ಉತ್ಪಾದನೆಗಾಗಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ ಹೋಗಲು ಸಿದ್ಧ,’’ ಎಂದು ಹೇಳಿದ್ದರು.
2019
‘ವಿಕ’ ಸೋದರ ಪತ್ರಿಕೆ ‘ದಿ ಎಕನಾಮಿಕ್ ಟೈಮ್ಸ್’ ಪತ್ರಿಕೆಯ ಇಟಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿಮಾತನಾಡಿದ್ದ ರಾಹುಲ್ ಬಜಾಜ್, ‘‘ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿಯಾರನ್ನು ಬೇಕಾದರೂ ನಾವು ಟೀಕಿಸಲು ಅವಕಾಶವಿತ್ತು. ಆದರೆ, ಈಗ ಅಂಥ ವಾತಾವರಣ ಇಲ್ಲ. ಉದ್ಯಮದಲ್ಲಿಅನೇಕರಿಗೆ ಈ ಭಾವನೆ ಇದೆ. ಉದ್ಯಮದ ಗೆಳೆಯರ ಮನಸ್ಸಿನಲ್ಲಿಯೂ ಅನೇಕ ವಿಷಯಗಳಿವೆ. ಆದರೆ, ಯಾರೂ ಮಾತನಾಡುತ್ತಿಲ್ಲ. ಆದರೆ, ನಾನು ಮಾತನಾಡುತ್ತೇನೆ,’’ ಎಂದಿದ್ದರು. ವಿಶೇಷ ಎಂದರೆ, ಇದೇ ಕಾರ್ಯಕ್ರಮದಲ್ಲಿಗೃಹ ಸಚಿವ ಅಮಿತ್ ಶಾ ಕೂಡ ಇದ್ದರು!
***
ಮೇಲಿನ ಈ ಎರಡೂ ಘಟನೆಗಳು, ಶನಿವಾರ ನಿಧನರಾದ ಉದ್ಯಮಿ ರಾಹುಲ್ ಬಜಾಜ್ ಅವರ ವ್ಯಕಿತ್ವವನ್ನು ಪರಿಚಯಿಸುತ್ತವೆ. ಉದ್ಯಮ ಹಿತಾಸಕ್ತಿಗಳ ಹೊರತಾಗಿಯೂ ಅವರು ವ್ಯವಸ್ಥೆಯ ವಿರುದ್ಧ ಮಾತಾಡಬೇಕಾದ ಅಗತ್ಯ ಎನಿಸಿದರೆ ಯಾರಿಗೂ ಹೆದರದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಇಷ್ಟಪಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉದ್ಯಮ ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲೂಬಜಾಜ್ ಕುಟುಂಬ ಪಾಲ್ಗೊಂಡಿದೆ, ಅಜ್ಜ ಜಮನ್‌ಲಾಲ್ ಬಜಾಜ್, ಚಿಕ್ಕಪ್ಪ ರಾಮಕೃಷ್ಣ ಬಜಾಜ್ ಅವರು ಹೋರಾಟದಲ್ಲಿಪಾಲ್ಗೊಂಡು, ಜೈಲುವಾಸ ಅನುಭವಿಸಿದ್ದರು. ಬಜಾಜ್ ಕುಟುಂಬದ ಹಿನ್ನೆಲೆ ಮತ್ತು ರಾಹುಲ್ ಬಜಾಜ್ ಅವರನ್ನು ತುಲನೆ ಮಾಡಿದಾಗ ಸಾರ್ವಜನಿಕವಾಗಿ ಅವರು ತೋರಿದ ಧೈರ್ಯ ಮತ್ತು ಉದ್ಯಮದಲ್ಲಿಅವರು ಅಳವಡಿಸಿಕೊಂಡ ಬಂದ ನೀತಿಗಳ ಸೂಧಿರ್ತಿಮೂಲದ ಪರಿಚಯವಾಗುತ್ತದೆ.
ರಾಹುಲ್ ತಮ್ಮ ಗೆಳೆಯರ ಬಳಗ, ಉದ್ಯಮದ ಸ್ನೇಹಿತರ ವಲಯದಲ್ಲಿಮೊದಲಿನಿಂದಲೂ, ‘ಬಾರ್ನ್ ಆ್ಯಂಟಿ ಎಸ್ಟಾಬ್ಲಿಷ್‌ಮೆಂಟ್’ ಮತ್ತು ‘ಫಿಯರ್‌ಲೆಸ್’ ಎಂದು ಗುರುತಿಸಿಕೊಂಡಿದ್ದರು. ಈ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ ಕೂಡ. ಉದ್ಯಮಿಯಾಗಿ ಬಜಾಜ್ ಗ್ರೂಪ್ ಕಂಪನಿಗಳನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುವಲ್ಲಿಅವರ ಕಾಣಿಕೆ ಮರೆಯುವಂತಿಲ್ಲ. ಆಟೊ, ಹಣಕಾಸು, ಸಾರ್ಜನಿಕ ಸೇವೆಯಲ್ಲಿಅವರು ತೋರಿದ ಅಪ್ರತಿಮ ಸಾಧನೆಗಳ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿಅಲ್ಪ ಕಾಣಿಕೆ ದೊರೆತಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ.
ರಾಹುಲ್ ಬಜಾಜ್ 1938 ಜೂನ್ 10ರಂದು ಪಶ್ಚಿಮ ಬಂಗಾಳದ ಕೊಲ್ಕೊತಾದಲ್ಲಿಜನಿಸಿದರು. ತಂದೆ ಕಮಲನಯನ ಬಜಾಜ್, ಇವರು ಉದ್ಯಮಿ ಜತೆಗೆ ರಾಜಕಾರಣಿಯೂ ಹೌದು. ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಹುಲ್, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಜಮನ್‌ಲಾಲ್ ಬಜಾಜ್ ಅವರ ಮೊಮ್ಮಗ. 1958ರಲ್ಲಿದಿಲ್ಲಿಯ ಸೇಂಟ್ ಸ್ಟೀಫನ್ ಕಾಲೇಜಿನಿಂದ ಪದವಿ ಪಡೆದ ರಾಹುಲ್, ಬಾಂಬೆ ವಿಶ್ವವಿದ್ಯಾಲಯದಲ್ಲಿಕಾನೂನು ಅಧ್ಯಯನ ಮಾಡಿದರು. ಅಲ್ಲಿಂದ ಅಮೆರಿಕಕ್ಕೆ ತೆರಳಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿಎಂಬಿಎಂ ಮಾಡಿದರು.
1965ರಲ್ಲಿಎಂಬಿಎ ಪದವಿ ಪಡೆದು ಭಾರತಕ್ಕೆ ಮರಳಿದ ರಾಹುಲ್ ಮೊದಲಿಗೆ ಕಂಪನಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಸೇರಿಕೊಂಡು, ಮಾರ್ಕೆಟಿಂಗ್, ಅಕೌಂಟ್ಸ್, ಪರ್ಚೇಸ್ ಮತ್ತು ಆಡಿಟ್‌ಗಳಂಥ ಪ್ರಮುಖ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ಆಗ ಬಜಾಜ್‌ನ ಆಟೊ ಸಿಇಒ ಆಗಿದ್ದ ನಾವಲ್ ಕೆ ಫಿರೋದಿಯಾ ಅವರ ಮಾರ್ಗದರ್ಶನದಲ್ಲಿಉದ್ಯಮ, ವ್ಯಾಪಾರದ ಪಟ್ಟುಗಳನ್ನು ಕಲಿತರು. 1972ರಲ್ಲಿರಾಹುಲ್ ತಂದೆ ಕಮಲನಯನ ಬಜಾಜ್ ನಿಧನರಾದರು. ಇದಕ್ಕೂ ಮೊದಲೇ ಸಿಇಒ ಆಗಿದ್ದ ಫಿರೋದಿಯಾ ಕೂಡ ಕಂಪನಿ ತೊರೆದಿದ್ದರು. ಹಾಗಾಗಿ, ರಾಹುಲ್ ಅವರನ್ನೇ ಬಜಾಜ್ ಆಟೊ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ವ್ಯವಹಾರ ಚತುರ ಮತ್ತು ಮಹತ್ವಾಕಾಂಕ್ಷಿಯಾಗಿದ್ದ ರಾಹುಲ್, ಸಣ್ಣ ಆಟೊ ಕಂಪನಿ ಎನಿಸಿಕೊಂಡಿದ್ದ ಬಜಾಜ್‌ನ್ನು ಜಗತ್ತಿನ ಬೃಹತ್ ಕಂಪನಿಗಳಲ್ಲಿಒಂದಾಗಿಸಿದರು. ಅವರ ನಾಯಕತ್ವದಲ್ಲಿಬಜಾಜ್ ಗ್ರೂಪ್ ಯಶಸ್ಸಿನ ಉತ್ತುಂಗ ತಲುಪಿತು. ಒಂದೇ ದಶಕದಲ್ಲಿಶತಕೋಟಿ ವ್ಯವಹಾರ ಮಾಡುವ ಕಂಪನಿಯಾಗಿ ಬೆಳೆಯಿತು. ಬಜಾಜ್ ಆಟೊ ಬೆಳವಣಿಗೆಯಲ್ಲಿಚೇತಕ್ ಸ್ಕೂಟರ್ ಮತ್ತು ಪಲ್ಸರ್ ಮೋಟರ್ ಸೈಕಲ್ ಸಕ್ಸೆಸ್ ಬಹಳ ಪಾತ್ರ ನಿರ್ವಹಿಸಿದೆ. ಈಗಿನ ಕಾಲದ ಬಹಳ ಮಂದಿಗೆ ಗೊತ್ತಿಲ್ಲ, ಬಜಾಜ್ ಚೇತಕ್ ಸ್ಕೂಟರ್ ಬುಕ್ ಮಾಡಿ, ಅದನ್ನು ಖರೀದಿಸಲು ಐದಾರು ವರ್ಷ ಕಾಯಬೇಕಾದ ಪರಿಸ್ಥಿತಿ ಇತ್ತು. ಅಷ್ಟರ ಮಟ್ಟಿಗೆ ಬೇಡಿಕೆ ಸೃಷ್ಟಿಯಾಗಿತ್ತು. ‘ಹಮಾರಾ ಬಜಾಜ್’ ನಿಜಾರ್ಥದಲ್ಲಿಭಾರತದ ಸ್ಕೂಟರೇ ಆಗಿತ್ತು ಎಂದು ವಿಶ್ಲೇಷಿಸಬಹುದು. ಭಾರತವು ಉದಾರೀಕರಣಕ್ಕೆ ಹೊರಳುತ್ತಿದ್ದ ಕಷ್ಟದ ಅವಧಿಯಲ್ಲಿ ಕಂಪನಿ ಈ ಮಟ್ಟಿಗೆ ಯಶಸ್ಸು ಸಾಧಿಸಿತು. ಇದಕ್ಕೆ ರಾಹುಲ್ ಬಜಾಜ್ ತೋರಿದ ನಾಯಕತ್ವ, ಪ್ರಾವೀಣ್ಯ ಮತ್ತು ಸಾಮರ್ಥ್ಯವೇ ಕಾರಣ.
ಜಮನ್‌ಲಾಲ್ ಬಜಾಜ್ 1926ರಲ್ಲಿಸ್ಥಾಪಿಸಿದ ಬಜಾಜ್ ಕಂಪನಿ ಇಂದು ಜಗತ್ತಿನ ದೈತ್ಯ ಕಂಪನಿಗಳಲ್ಲಿಒಂದಾಗಿದೆ, 60 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದೆ ಎಂದರೆ ಅದಕ್ಕೆ ರಾಹುಲ್ ಕೊಡುಗೆ ಸಾಕಷ್ಟಿದೆ. ರಾಹುಲ್ 2008ರಲ್ಲಿ ಕಂಪನಿಯನ್ನು ಮೂರು ವಿಭಾಗಗಳಾಗಿ ಅಂದರೆ, ಬಜಾಜ್ ಆಟೊ, ಫೈನಾನ್ಸ್ ಕಂಪನಿ ಬಜಾಜ್ ಫಿನ್‌ಸರ್ವ್ ಮತ್ತು ಹೋಲ್ಡಿಂಗ್ ಕಂಪನಿಯಾಗಿ ವಿಂಗಡಿಸಿದರು. ಅವರ ನೇತೃತ್ವದಲ್ಲಿಬಜಾಜ್ ಆಟೋ ಉತ್ತುಂಗ ತಲುಪಿದ್ದು ಎಷ್ಟು ನಿಜವೋ ಅಷ್ಟೇ ಸಂಕಟವನ್ನು ಎದುರಿಸಿದೆ ಎನ್ನಬಹುದು. 2001ರಲ್ಲಿಅಂದರೆ, ಉದಾರೀಕರಣದ ಬಳಿಕ ಮಾರುಕಟ್ಟೆಯಲ್ಲಿಕಂಪನಿಯ ವಾಹನಗಳ ಮಾರಾಟ ತೀವ್ರ ಕುಸಿತ ಕಂಡಿತ್ತು. ಹೋಂಡಾ, ಸುಜುಕಿ, ಯಮಹಾದಂಥ ಕಂಪನಿಗಳು ಹೊಸ ಹೊಸ ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸಿ ಭಾರತೀಯ ಮಾರುಕಟ್ಟೆಯ ಒಟ್ಟು ಚಿತ್ರಣವನ್ನು ಬದಲಿಸಿದವು. ಇದರಿಂದ ಬಜಾಜ್ ಕೊಂಚ ವಿಚಲಿತವಾದಂತೆ ಕಂಡು ಬಂದಿತಾದರೂ, ಕಂಪನಿಯು ಪಲ್ಸರ್ ಮೋಟಾರ್ ಸೈಕಲ್ ಬಿಡುಗಡೆ ಮಾಡುವ ಮೂಲಕ ಎಲ್ಲನಿರೀಕ್ಷೆಗಳನ್ನು ಮೀರಿ ಯಶಸ್ಸು ಸಾಧಿಸಿತು. ಮುಂದಿನ 10ರಿಂದ 15 ವರ್ಷ ಪಲ್ಸರ್ ಅಕ್ಷ ರಶಃ ಮಾರುಕಟ್ಟೆ ಲೀಡರ್ ಆಗಿತ್ತು. ಬಜಾಜ್ ಕಂಪನಿಯ ಯಶಸ್ಸಿನಲ್ಲಿಚೇತಕ್ ಮತ್ತು ಪಲ್ಸರ್‌ಗಳು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳುವುದು ಇದೇ ಕಾರಣಕ್ಕೆ.
2005ರಲ್ಲಿರಾಹುಲ್ ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದು ಜವಾಬ್ದಾರಿಯನ್ನು ಹಿರಿಯ ಪುತ್ರ ರಾಜೀವ್ ಬಜಾಜ್‌ಗೆ ವಹಿಸಿದರು. ಆ ಬಳಿಕ 2006ರಿಂದ 2010ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದರು. 2016ರಲ್ಲಿಫೋರ್ಬ್ಸ್ ಪ್ರಕಟಿಸಿದ ಜಗತ್ತಿನ ಕೋಟ್ಯಧೀಶರ ಪಟ್ಟಿಯಲ್ಲಿರಾಹುಲ್ ಬಜಾಜ್ 722ನೇ ಸ್ಥಾನದಲ್ಲಿದ್ದರು. 1979-80 ಮತ್ತು 1999-2000 ಎರಡು ಅವಧಿಯಲ್ಲಿಸಿಐಐ(ಭಾರತೀಯ ಕೈಗಾರಿಕೆಗಳ ಒಕ್ಕೂಟ) ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಅನನ್ಯ ಕಾರ್ಯನಿರ್ವಹಣೆಗಾಗಿ 2017ರಲ್ಲಿಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಿಸಿಐ ಪ್ರೆಸಿಡೆಂಟ್ ಅವಾರ್ಡ್ ಪ್ರದಾನ ಮಾಡಿದ್ದರು. 2021ರ ಏಪ್ರಿಲ್‌ನಲ್ಲಿಬಜಾಜ್ ಆಟೋದ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು, ಸೋದರಸಂಬಂಧಿ ನೀರಜ್ ಬಜಾಜ್‌ಗೆ ಆ ಸ್ಥಾನ ಬಿಟ್ಟುಕೊಟ್ಟರು. ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿ ಸಮ್ಮಾನಗಳು ಅವರನ್ನು ಅರಸಿ ಬಂದಿವೆ.
ಉದ್ಯಮದಲ್ಲಿಅನನ್ಯ ಸಾಧನೆ ಮಾಡಿದ್ದ ರಾಹುಲ್ ಬಜಾಜ್ ಅವರ ವೈಯಕ್ತಿಕ ಆಸಕ್ತಿಗಳೂ ಅಷ್ಟೇ ಅನನ್ಯವಾಗಿದ್ದವು. ಕುರ್ತಾ ಅವರ ಅಚ್ಚುಮೆಚ್ಚಿನ ಉಡುಪಾಗಿತ್ತು. ಅವರ ಬಳಿ ಕುರ್ತಾಗಳ ದೊಡ್ಡ ಸಂಗ್ರಹವಿತ್ತು. ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್ ಬಜಾಜ್ ನಿರ್ಗಮನ ಖಂಡಿತವಾಗಿಯೂ ಭಾರತೀಯ ಉದ್ಯಮಕ್ಕೆ ಕಾಡಲಿದೆ.