ಕಾರ್ಮಿಕ
ಚಳವಳಿಯ ಅಗ್ರಮಾನ್ಯ ನಾಯಕರಾಗಿ, ಸಮಾಜವಾದಿ ಚಿಂತಕರಾಗಿ ಜಾರ್ಜ್ ಫರ್ನಾಂಡಿಸ್ ಅವರು ಏರಿದ ಎತ್ತರ
ಅಷ್ಟಿಷ್ಟಲ್ಲ. ರಾಜಕಾರಣಿಗಳಿಗೆ ಅವರು ರೋಲ್ ಮಾಡೆಲ್. ಜೂನ್ 3 ಜಾರ್ಜ್ ಫರ್ನಾಂಡಿಸ್ ಹುಟ್ಟಿದ
ದಿನ. ಅವರ ನೆನಪಿನಲ್ಲಿ...
- ಮಲ್ಲಿಕಾರ್ಜುನ ತಿಪ್ಪಾರ
ಹೋರಾಟದ
ಮೂಲಕವೇ ರಾಜಕೀಯ ಏಳ್ಗೆ ಕಂಡು,
ಜನ ಮತ್ತು ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಿದವರು ಜಾರ್ಜ್
ಫರ್ನಾಂಡಿಸ್. ಅವರನ್ನು ಕೇವಲ ರಾಜಕಾರಣಿ ಎಂಬ ಒಂದೇ ಪದದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಹೋರಾಟಗಾರ,
ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಸಮತಾವಾದಿ, ಅತ್ಯುತ್ತಮ ವಾಗ್ಮಿ... ಹೀಗೆ ಏನೆಲ್ಲ ವಿಶೇಷಣಗಳನ್ನು
ಅವರಿಗೆ ಧಾರಾಳವಾಗಿ ನೀಡಬಹುದು. ಅವರು ಎಂದೂ ತಾವು ನಂಬಿದ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಿಲ್ಲ. ರಾಜಕೀಯದಲ್ಲಿ
ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು; ಯಾವುದಕ್ಕೂ ರಾಜಿಯಾಗಲಿಲ್ಲ. ಅಧಿಕಾರ
ಸುಖ ಅವರನ್ನು ಆಲಸಿಯಾಗಿ ಮಾಡಲಿಲ್ಲ; ಗರ್ವಿಷ್ಠರನ್ನಾಗಿಸಲಿಲ್ಲ. ಅಧಿಕಾರ
ಬರುವ ಮುಂಚೆ ಹೇಗಿದ್ದರೋ, ಕುರ್ಚಿಯಲ್ಲಿ ಕುಳಿತಾಗಲೂ ಹಾಗೆಯೇ ಇದ್ದರು.
ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು.
ಅವರ
ಉಡುಗೆ ತೊಡುಗೆ ಸಿಂಪಲ್. ಒಂದು ಖಾದಿ ಪ್ಯಾಂಟ್;
ಇಸ್ತ್ರಿಯಾಗದ ಖಾದಿ ಜುಬ್ಬಾ, ಇಷ್ಟೆ ಅವರ ತೊಡುಗೆ. ಬಿಳಿ
ಕೂದಲು ತುಂಬಿದ ತಲೆ, ಮುಖಕ್ಕೊಂದು ಅಗಲವಾದ ಕನ್ನಡಕ ಅವರ ಒಟ್ಟು ವ್ಯಕ್ತಿತ್ವಕ್ಕೆ
ಒಂದು ಗಂಭೀರತೆಯನ್ನು ತಂದುಕೊಟ್ಟಿತ್ತು. ಆದರೆ, ಅವರ ಜೀವನ ಮಾತ್ರ ಸರಳವಾಗಿರಲಿಲ್ಲ.
ಮೂಲತಃ ಕರ್ನಾಟಕದವರಾದರೂ ಇಡೀ ಭಾರತವೇ ಅವರ ಹೋರಾಟದ ಅಂಗಣವಾಗಿತ್ತು. ಅವರು ಕಾಲಿಟ್ಟ ಕಡೆ ಹೋರಾಟದ
ಹೆಜ್ಜೆಗಳು ಮೂಡುತ್ತಿದ್ದವು. ಮಂಗಳೂರು, ಬೆಂಗಳೂರು, ಮುಂಬಯಿ, ಬಿಹಾರ, ದಿಲ್ಲಿ... ಹೀಗೆ
ಅವರ ಕಾರ್ಯಕ್ಷೇತ್ರ ಹರಡಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯಾವಾಗಲೂ ಚಿಂತನೆಗಳಿರುತ್ತಿದ್ದವು.
ಕಾರ್ಮಿಕರ ಶ್ರೇಯೋಭಿವೃದ್ಧಿಯೇ ಮೂಲಮಂತ್ರವಾಗಿತ್ತು. ಅವರ ಹಿತರಕ್ಷ ಣೆಗೆ ಎಂಥ ಹೋರಾಟಕ್ಕೂ ಅಣಿಯಾಗುತ್ತಿದ್ದರು.
ಒಮ್ಮೆ ಅವರ ಮುಷ್ಕರ ಕರೆಗೆ ಇಡೀ ದೇಶವೇ ಸ್ತಬ್ಧವಾಗಿತ್ತು; ಅಂಥ ಧೀಃಶಕ್ತಿ
ಅವರಲ್ಲಿತ್ತು. ಆದರೆ, ಅವರ ಕೊನೆಯ ದಿನಗಳು ಮಾತ್ರ ಯಾತನಾಮಯವಾಗಿದ್ದವು
ಎಂಬುದು ಅವರನ್ನು ಇಷ್ಟಪಡೋರಿಗೆ ಅರಗಿಸಿಕೊಳ್ಳಲಾಗದ ಸಂಗತಿ.
ಕನ್ನಡದ
ಕುವರ
ಜಾರ್ಜ್ ಫರ್ನಾಂಡಿಸ್ ಕನ್ನಡದವರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕರಾವಳಿಯ ಮಂಗಳೂರಿನವರು.
1930 ಜೂನ್ 3ರಂದು ಮಂಗಳೂರಿನ ಕ್ಯಾಥೋಲಿಕ್ ಕುಟುಂಬದಲ್ಲಿ
ಜನಿಸಿದರು. ತಂದೆ ಜೋಸೆಫ್ ಫರ್ನಾಂಡಿಸ್,
ತಾಯಿ ಅಲಿಶಾ ಮಾರ್ಥಾ ಫರ್ನಾಂಡಿಸ್. ಇವರಿಗೆ ಆರು ಮಕ್ಕಳು. ಜಾರ್ಜ್ ಹಿರಿಯರು.
ಕುಟುಂಬದಲ್ಲಿ ಜಾರ್ಜ್ ಅವರನ್ನು ಪ್ರೀತಿಯಿಂದ ಎಲ್ಲರೂ ಜರ್ರಿ ಎಂದು ಕರೆಯುತ್ತಿದ್ದರು. ಜೋಸೆಫ್
ಅವರದ್ದು ಕ್ರಿಶ್ಚಿಯನ್ ಸಂಪ್ರದಾಯಸ್ಥ ಕುಟುಂಬ. ಹಾಗಾಗಿ, ಹಿರಿಯ ಮಗ ಪಾದ್ರಿಯಾಗಲಿ
ಎಂದು ಅವರನ್ನು ಪಾದ್ರಿ ತರಬೇತಿಗೆ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಆದರೆ ಜಾರ್ಜ್ ಪಾದ್ರಿಯಾಗಲಿಲ್ಲ.
ಬೆಂಗಳೂರು ಬಿಟ್ಟು ಸೀದಾ ಮುಂಬೈ(ಅಂದಿನ ಬಾಂಬೆ)ಗೆ ತೆರಳಿದರು. ಆಗ ಅವರಿಗೆ ಕೇವಲ 19 ವರ್ಷ.
ಮುಂಬೈನ ಬೀದಿಗಳಲ್ಲಿ ಅಲೆಯುತ್ತಿದ್ದ ಜಾರ್ಜ್‌ಗೆ ಪರಿಚಯದವರು ಯಾರೂ ಇರಲಿಲ್ಲ. ಎಷ್ಟೋ ಸಾರಿ ಅವರು
ಸಮುದ್ರ ತೀರ ಮತ್ತು ರಸ್ತೆಗಳಲ್ಲಿ ಮಲಗುತ್ತಿದ್ದರು. ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಸಿಗುವವರೆಗೂ
ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು. ಮುಂಬೈಯಲ್ಲಿ ಅವರದ್ದು ಅಕ್ಷರಶಃ ಕಷ್ಟದ ಜೀವನವೇ ಆಗಿತ್ತು.
|
ಜಾರ್ಜ್ ಫರ್ನಾಂಡಿಸ್ (ಚಿತ್ರ ಕೃಪೆ-ಇಂಟರ್ನೆಟ್) |
ಲೋಹಿಯಾ
ಮತ್ತು ಡಿಮೆಲ್ಲೊ ಸಂಪರ್ಕ
ಮುಂಬೈ ಜೀವನದಲ್ಲಿ ಹೋರಾಟ ಬದುಕು ನಡೆಸುತ್ತಿರುವಾಗಲೇ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಮತ್ತು
ಹಿರಿಯ ಕಾರ್ಮಿಕ ಮುಖಂಡ ಡಿ'ಮೆಲ್ಲೊ ಅವರ ಸಂಪರ್ಕ ಜಾರ್ಜ್‌ಗೆ ದೊರಕಿತು. ಇಲ್ಲಿಂದಲೇ ಜಾರ್ಜ್ ಅವರ ಹೋರಾಟದ ಮಜಲುಗಳು
ಆರಂಭವಾದವು. ಅದು ಕಾರ್ಮಿಕ ಚಳವಳಿಕ ಉಚ್ಛ್ರಾಯ ಕಾಲ. ಹಾಗಾಗಿ, ನಿಧಾನವಾಗಿ
ಕಾರ್ಮಿಕ ಚಳವಳಿಯಲ್ಲಿ ಜಾರ್ಜ್ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಅಲ್ಲಿಂದ ಅವರು 1961
ರಲ್ಲಿ
ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್‌ಗೆ ಸ್ಪರ್ಧಿಸಿ ಆಯ್ಕೆಯಾದರು. ಹೋರಾಟದ ಜತೆಗೆ ರಾಜಕೀಯ ಜೀವನವನ್ನು
ಆರಂಭಿಸಿದರು.
ಜಾರ್ಜ್
ದಿ ಜೈಂಟ್ ಕಿಲ್ಲರ್!
ಕಾರ್ಪೊರೇಷನ್‌ಗೆ ಆಯ್ಕೆಯಾದ ಆರು ವರ್ಷದ ಬಳಿಕ ಜಾರ್ಜ್ ಲೋಕಸಭೆ ಸ್ಪರ್ಧೆಗೆ ಮುಂದಾದರು. ದಕ್ಷಿಣ
ಮುಂಬೈ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದರು. ಅವರ ಎದುರಾಳಿ, ಮಹಾರಾಷ್ಟ್ರದ ಅಂದಿನ ಪ್ರಖ್ಯಾತ
ಕಾಂಗ್ರೆಸ್ ನಾಯಕ ಎಸ್.ಕೆ.ಪಾಟೀಲ್. ಈ ಚುನಾವಣೆಯಲ್ಲಿ ಜಾರ್ಜ್ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ, ಫಲಿತಾಂಶ ಪ್ರಕಟವಾದಾಗ ಮಾತ್ರ ಎಲ್ಲರಿಗೂ ಆಶ್ಚರ್ಯವಾಗಿತ್ತು. ಪ್ರಭಾವಿ
ಪಾಟೀಲ್‌ರನ್ನು ಸೋಲಿಸಿ ಜಾರ್ಜ್ ಆಯ್ಕೆಯಾಗಿದ್ದರು. ಅಲ್ಲಿಂದಲೇ ಅವರಿಗೆ The Giant
Killer ಎಂಬ ಹೆಸರು ಬಂತು. ಇಲ್ಲಿಂದ ಅವರು ರಾಜಕೀಯದಲ್ಲಿ ಹಿಂದಿರುಗಿ ನೋಡಲಿಲ್ಲ.
ಹೋರಾಟದ ಜತೆಗೆ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರಿದರು.
ಭೂಗತ
ನಾಯಕ
1974ರ
ಹೊತ್ತಿಗೆ ದೇಶದಲ್ಲಿ ಜಾರ್ಜ್ ಜನಪ್ರಿಯ ಹೆಸರಾಗಿತ್ತು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ
ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಅದು ಎಷ್ಟು ಪರಿಣಾಮಕಾರಿ ಕರೆಯಾಗಿತ್ತು ಎಂದರೆ, ಇಡೀ ದೇಶ ಅಕ್ಷ ರಶಃ ಸ್ತಬ್ಧವಾಗಿತ್ತು.
ಈ ಮುಷ್ಕರಕ್ಕೆ ದೇಶದ ಎಲ್ಲ ಉದ್ಯಮ ವಲಯಗಳಿಂದ ಬೆಂಬಲ ದೊರಕಿತ್ತು. ಮೂರು ವಾರಗಳ ಈ ಮುಷ್ಕರ ಅಂದಿನ
ಪ್ರಧಾನಿ ಇಂದಿರಾ ಗಾಂಧಿಯಲ್ಲೂ ಅಭದ್ರತೆ ಹುಟ್ಟು ಹಾಕಿತ್ತು ಎಂದರೆ ಅದರ ಪರಿಣಾವನ್ನು ಯಾರಾದರೂ ಊಹಿಸಬಹುದು.
ಇದೇ ಸಂದರ್ಭದಲ್ಲಿ 'ಲೋಕ ನಾಯಕ' ಜಯಪ್ರಕಾಶ್
ನಾರಾಯಣ್ ಅವರ ಮೂವ್‌ಮೆಂಟ್ ಫಾರ್ ಚೇಂಜ್ ಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು.
ಆಂತರಿಕವಾಗಿ ಹೆಚ್ಚುತ್ತಿದ್ದ ಸರಕಾರ ವಿರೋಧಿ ಧೋರಣೆ ಮತ್ತೊಂದೆಡೆ ಕೋರ್ಟ್‌ನಲ್ಲಾದ ಹಿನ್ನಡೆಯನ್ನು
ಅರಗಿಸಿಕೊಳ್ಳಲಾಗದ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
ಪ್ರತಿಪಕ್ಷ ನಾಯಕರು ಜೈಲು ಪಾಲಾದರು. ಆಗ ಜಾರ್ಜ್ ಮತ್ತು ಅವರ ಜತೆಗಿದ್ದವರು ಭೂಗತರಾದರು. ಈ ಸಂದರ್ಭದಲ್ಲಿ
ಬರೋಡಾದಿಂದ ಡೈನಮೈಟ್ ತಂದು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸುವ ಯೋಜನೆ ಜಾರ್ಜ್ ಅವರದ್ದಾಗಿತ್ತು.
ಆದರೆ, ಕೋಲ್ಕತಾ(ಅಂದಿನ
ಕಲ್ಕತ್ತಾ)ದಲ್ಲಿ ಸೆರೆ ಸಿಕ್ಕರು. ಡೈನಮೈಟ್ ಕದ್ದ ಆರೋಪವನ್ನು ಜಾರ್ಜ್ ಮೇಲೆ ಹಾಕಿ ಅವರನ್ನು 9 ತಿಂಗಳು
ಕಾಲ ತಿಹಾರ್ ಜೈಲಿನಲ್ಲಿ ಇಡಲಾಯಿತು. ಈ ಪ್ರಕರಣವೇ ಮುಂದೆ 'ಬರೋಡಾ ಡೈನಮೈಟ್' ಎಂದು
ಪ್ರಖ್ಯಾತವಾಯಿತು. ಜೈಲಿನಲ್ಲಿದ್ದುಕೊಂಡೇ ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ,
ಮೂರು ಲಕ್ಷ ಮತಗಳ ಅಂತರದಿಂದ ಗೆದ್ದರು. ಜಾರ್ಜ್ ಅವರನ್ನು ಬಂಧಿಸಿದ ಕ್ಷ ಣದಲ್ಲಿ
ಅವರ ಕೋಳ ತೊಟ್ಟ ಕೈ ಮೇಲತ್ತಿದ ಫೋಟೋ ಈ ಗೆಲುವಿನಲ್ಲಿ ಭಾರಿ ಪ್ರಭಾವ ಬೀರಿತ್ತು!
ಸಚಿವರಾದರು
ಜಾರ್ಜ್
ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. ಇದೇ ಮೊದಲ ಬಾರಿಗೆ
ಮೊರಾರ್ಜಿ ದೇಸಾಯಿ ನೇತೃತ್ವದ ಪ್ರಥಮ ಕಾಂಗ್ರೆಸ್ಸೇತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು.
ತುರ್ತು ಪರಿಸ್ಥಿತಿಯಲ್ಲಿ ಜೈಲುಪಾಲಾಗಿದ್ದ ನಾಯಕರೆಲ್ಲ ಬಿಡುಗಡೆಗೊಂಡರು. ಜಾರ್ಜ್ ಅವರು ದೇಸಾಯಿ
ಸಂಪುಟದಲ್ಲಿ ಕೈಗಾರಿಕಾ ಸಚಿವರಾದರು. ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕ ಐಬಿಎಂ
ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ ಫಲವಾಗಿ ಅವರೆಡೂ ಕಂಪನಿಗಳು ಭಾರತದಿಂದ ಕಾಲು
ಕೀಳಬೇಕಾಯಿತು. ಮುಂದೆ ಜನತಾ ದಳ ನಾಯಕ ವಿ.ಪಿ. ಸಿಂಗ್ ನೇತೃತ್ವದ ಸರಕಾರದಲ್ಲಿ ರೇಲ್ವೆ ಸಚಿವರಾಗಿ
ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಕೊಂಕಣ ರೇಲ್ವೆ
ಯೋಜನೆ ಅನುಷ್ಠಾನಗೊಳಿಸಿದರು.
ಬಿಜೆಪಿಯ
ಸಖ್ಯ
ಜೆಪಿ ಚಳವಳಿಯಲ್ಲಿ ಉದಯಿಸಿದ ನಾಯಕರ ಜನತಾ ಪರಿವಾರ ದಿಕ್ಕಾಪಾಲಾದ ಸಂದರ್ಭ ಅದು.
ರಾಜಕೀಯ ಅನಿವಾರ್ಯತೆ ಮತ್ತು ಕಾಂಗ್ರೆಸ್ ವಿರೋಧಿ ನೀತಿಯ ಪ್ರಮುಖ ಧ್ಯೇಯದಿಂದಾಗಿ ಜಾರ್ಜ್ ಅವರು
ಅನಿವಾರ್ಯವಾಗಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ
ಜತೆ ಕೈ ಜೋಡಿಸಬೇಕಾಯಿತು. ವಿಶೇಷ ಎಂದರೆ, ಆರ್‌ಎಸ್‌ಎಸ್ ನೀತಿಯನ್ನು ಜಾರ್ಜ್
ಟೀಕಿಸುತ್ತಿದ್ದರು. ಹಾಗಿದ್ದೂ ಅವರು ಬಿಜೆಪಿ ಜತೆ ಹೆಜ್ಜೆ ಹಾಕಬೇಕಾಯಿತು. ಜತೆಗೆ ಬಿಜೆಪಿ ನೇತೃತ್ವದ
ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್-ಎನ್‌ಡಿಎ ಸಂಚಾಲಕರಾದರು. ಯಾರೂ ನಿರೀಕ್ಷಿಸದ ರೀತಿಯಲ್ಲಿ 1998ರಲ್ಲಿ
ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆಗ ಜಾರ್ಜ್ ಅವರಿಗೆ ರಕ್ಷಣಾ ಸಚಿವ ಸ್ಥಾನ ತಾನಾಗಿಯೇ
ಒಲಿದು ಬಂತು. ವಿಪರ್ಯಾಸ ಎಂದರೆ,
ಜಾರ್ಜ್ ತಮ್ಮ ಬದುಕಿನುದ್ದಕ್ಕೂ ಅಣ್ವಸ್ತ್ರಗಳನ್ನು ವಿರೋಧಿಸುತ್ತಲೇ ಬಂದಿದ್ದರು.
ಆದರೆ, ಅದೇ ಜಾರ್ಜ್ ಅವರು ಅಣ್ವಸ್ತ್ರ ಪರೀಕ್ಷೆಯಲ್ಲಿ ವಾಜಪೇಯಿ ಜತೆ ಪಾಲುದಾರರಾದರು!
ಬೆನ್ನತ್ತಿದ
ವಿವಾದಗಳು
ಜಾರ್ಜ್ ಅವರು ರಕ್ಷಣಾ ಸಚಿವರಾಗಿದ್ದಾಗಲೇ ಬಾರಾಕ್ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಬೆನ್ನು
ಹತ್ತಿದವು. ಇದಕ್ಕಾಗಿ ಅವರು ರಕ್ಷಣಾ ಸಚಿವ ಸ್ಥಾನವನ್ನು ತೊರೆಯಬೇಕಾಯಿತು. ಮುಂದೆ ತನಿಖೆ ವೇಳೆ ಜಾರ್ಜ್
ಅವರು ನಿರ್ದೋಷಿ ಎಂದು ಸಾಬೀತಾದ ಮೇಲೆ ಮತ್ತೆ ರಕ್ಷ ಣಾ ಸಚಿವರಾದರು. ಆದರೆ, ಕಾರ್ಗಿಲ್ ಯುದ್ಧದ ವೇಳೆ ಖರೀದಿಸಲಾದ
ಶವಪೆಟ್ಟಿಗೆಗಳ ಹಗರಣ ಮತ್ತೆ ಜಾರ್ಜ್ ತಲೆಯೇರಿತು. ತೀರಾ ಇತ್ತೀಚೆಗಷ್ಟೇ ಈ ಹಗರಣದಲ್ಲೂ ಜಾರ್ಜ್
ಅವರು ನಿರ್ದೋಷಿ ಎಂದು ಸಾಬೀತಾಯಿತಾದರೂ, ಅದನ್ನು ಕೇಳಿ ಸಂತೋಷ ಪಡುವ ಸ್ಥಿತಿಯಲ್ಲಿ
ಜಾರ್ಜ್ ಇರಲಿಲ್ಲ. ಸಾಮಾನ್ಯವಾಗಿ ಭಾರತದ ಮಗ್ಗಲು ಮುಳ್ಳು ಪಾಕಿಸ್ತಾನ ಎಂದು ಬಹುತೇಕ ರಾಜಕಾರಣಿಗಳು
ಹೇಳುತ್ತಾರೆ. ಆದರೆ, ಜಾರ್ಜ್ ಮಾತ್ರ ಭಾರತದ ನಂ.1ವೈರಿ ಪಾಕಿಸ್ತಾನವಲ್ಲ
ಚೀನಾ ಎಂದು ಬಹಿರಂಗವಾಗಿ ಹೇಳುವ ಮೂಲಕ ಭಾರಿ ಸಂಚಲನಕ್ಕೆ ಕಾರಣವಾಗಿದ್ದರು.
ನೇಪಥ್ಯಕ್ಕೆ
ಜಾರಿದ ಜಾರ್ಜ್
2004
ರಲ್ಲಿ
ವಾಜಪೇಯಿ ನೇತೃತ್ವದ ಎನ್‌ಡಿಎ ಮರಳಿ ಅಧಿಕಾರ ಹಿಡಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ
ಎನ್‌ಡಿಎ ಸೋಲು ಕಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂತು. ಈ ಅವಧಿಯಲ್ಲಿ ದೇಶದ ಇಬ್ಬರು
ಪ್ರಮುಖ ನಾಯಕರು ನೇಪಥ್ಯಕ್ಕೆ ಜಾರುವಂತಾಯಿತು. ಒಬ್ಬರು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ,
ಮತ್ತೊಬ್ಬರು ಜಾರ್ಜ್. ನಂತರ ಅವರಿಗೆ ಅಲ್ಜೈಮರ್ ಕಾಯಿಲೆ ಉಲ್ಬಣಗೊಂಡು ಸಂಪೂರ್ಣವಾಗಿ
ಸಾರ್ವಜನಿಕ ಜೀವನದಿಂದ ಮರೆಯಾಗಬೇಕಾಯಿತು.
ಮರಳಿ
ಬಾರದ ಲೋಕಕ್ಕೆ
ಜಾರ್ಜ್ ಅದ್ಭುತ ಮಾತುಗಾರರು. ಅವರು ಭಾಷಣಕ್ಕೆ ನಿಂತರೆ ಇಡೀ ಜನಸಮೂಹ ತದೇಕ ಚಿತ್ತದಿಂದ ಆಲಿಸುತ್ತಿತ್ತು.
ಸಂಸತ್ತಿನಲ್ಲಿ ಮಾತನಾಡಲು ಆರಂಭಿಸಿದರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಕೊಂಕಣಿ, ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ,
ತುಳು, ತಮಿಳು, ಉರ್ದು ಸೇರಿದಂತೆ
10 ಭಾಷೆಗಳಲ್ಲಿ ಜಾರ್ಜ್ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರಖರ ಸಮಾಜವಾದಿಯಾಗಿದ್ದ
ಜಾರ್ಜ್ ತುಂಬ ದಿನಗಳ ಕಾಲ ಅನಾರೋಗ್ಯಪೀಡಿತರಾಗಿ ಕೊನೆಯ ದಿನಗಳನ್ನು ಅತ್ಯಂತ ಯಾತನೆಯಲ್ಲಿ ಕಳೆದರು.
2019ರ ಜನವರಿ
29ರಂದು ಇಹಲೋಕ ತ್ಯಜಿಸಿದರು.
ವಿಯೆಟ್ನಾಮಿಯಾಗಿ
ಹುಟ್ಟುವೆ!
''ಒಂದು
ವೇಳೆ ಪುನರ್ಜನ್ಮ ಎಂಬುದಿದ್ದರೆ ನಾನು ವಿಯೆಟ್ನಾಮಿಯಾಗಿ(ವಿಯೆಟ್ನಾಮ್ ಪ್ರಜೆ) ಹುಟ್ಟುವೆ,'' ಎಂದು ಜಾರ್ಜ್ ಒಮ್ಮೆ ಹೇಳಿದ್ದರು.
ಒಂದುವರೆ ದಶಕದ ಹಿಂದೆ ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಬಯಕೆಯನ್ನು ಅವರು ಹೊರಹಾಕಿದ್ದರು.
''ವಿಯೆಟ್ನಾಮಿ ಜನರು ತಮ್ಮ ಬದ್ಧತೆಯನ್ನು ಪೂರೈಸಲು ಸಾಯಲು ಸಿದ್ಧರಾಗಿರುತ್ತಾರೆ.
ಅಂಥ ಶಿಸ್ತು ಅವರಲ್ಲಿರುತ್ತದೆ. ನಾನು ವಿಯೆಟ್ನಾಮ್‌ನ ಅಭಿಮಾನಿ,'' ಎಂದು
ಹೇಳಿದ್ದರು.