ಗುರುವಾರ, ಜುಲೈ 16, 2020

Sonam Wangchuk ವ್ಹಾವ್‌... ವಾಂಗ್‌ಚುಕ್‌


54 ವರ್ಷದ ವಾಂಗ್ಚುಕ್ಪ್ರತಿಭೆಯ ಖನಿ, ಹಲವು ಸಾಧನೆಗಳ ಸಾರಥಿ, ಬಾಯ್ಕಾಟ್ಚೀನಾ ಅಭಿಯಾನಕ್ಕೆ ವೇಗ ನೀಡಿದ ರೂವಾರಿ.

- ಮಲ್ಲಿಕಾರ್ಜುನ ತಿಪ್ಪಾರ
ಗಲ್ವಾನ್ಕಣಿವೆಯಲ್ಲಿ ಚೀನಾ ಅಟ್ಟಹಾಸಕ್ಕೆ ನಮ್ಮ ಯೋಧರು ಹುತಾತ್ಮರಾದರಲ್ಲಅದೇ ಕ್ಷಣ ದೇಶದಲ್ಲೊಂದುಬಾಯ್ಕಾಟ್ಚೀನಾಆಂದೋಲನ ಇದ್ದಕ್ಕಿಂತ ವೇಗ ಪಡೆದುಕೊಂಡಿತು. ಅದರ ಹಿಂದಿನ ಶಕ್ತಿಯೇ ಈ ಸೋನಮ್ವಾಂಗ್ಚುಕ್‌. ‘ಚೀನಾ ಕೋ ಜವಾಬ್‌’ ಸರಣಿ ವಿಡಿಯೋಗಳನ್ನು ಹರಿಬಿಟ್ಟ ಈ ಲಡಾಖಿ ವ್ಯಕ್ತಿಯ ಹಿನ್ನೆಲೆಯನ್ನು ತಿಳಿದರೆ ವ್ಯಕ್ತಿಯೊಬ್ಬ ಇಷ್ಟೆಲ್ಲ ಕೆಲಸಗಳನ್ನು ಮಾಡಬಹುದೇ, ಇಷ್ಟೊಂದು ಪ್ರತಿಭಾನ್ವಿತರಾಗಿರಲು ಸಾಧ್ಯವೇ ಎಂಬ ಅನುಮಾನ ಬರುವುದು ಗ್ಯಾರಂಟಿ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ರಾಜಕುಮಾರ್ಹಿರಾನಿ ನಿರ್ದೇಶನದತ್ರಿ ಈಡಿಯಟ್ಸ್‌’ ಚಿತ್ರ ನೆನಪಿದೆಯಲ್ಲ. ಅದರಲ್ಲಿ ಅಮೀರ್ಖಾನ್ನಿರ್ವಹಿಸಿದ್ದಪುನ್ಷುಕ್ವಾಂಗ್ಡು/ರಂಚೋಡದಾಸ್ಶ್ಯಾಮಲದಾಸ್ಚಾಂಚಡ್‌’ ಪಾತ್ರವಿದೆಯಲ್ಲ, ಅದಕ್ಕೆ ಈ ಸೋನಮ್ವಾಂಗುಚುಕ್ಅವರೇ ಸ್ಫೂರ್ತಿ! ವಾಂಗ್ಚುಕ್ಅವರ ಪ್ರತಿಭೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಮೆಕ್ಯಾನಿಕಲ್ಎಂಜಿನಿಯರ್‌, ಮಾತುಗಾರ, ಶಿಕ್ಷ ಣ ತಜ್ಞ, ಸಂಶೋಧಕ, ಸುಧಾರಕ, ಪತ್ರಕರ್ತ, ರಾಜಕಾರಣಿ ಹೀಗೆ ಇನ್ನೂ ಏನೇನೋ.
ಟಿಬೆಟಿಯನ್ನರು, ಉಯಿಗೂರ್ಮುಸ್ಲಿಮರ ವಿರುದ್ಧ ಮಾನವ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ಕೇವಲ ಸೇನಾ ಬಲ ಮಾತ್ರವೇ ಸಾಕಾಗುವುದಿಲ್ಲ. ಭಾರತೀಯರುವಾಲೆಟ್ಪವರ್‌’ ಬಳಸಬೇಕು ಮತ್ತು ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ಸರಣಿ ವಿಡಿಯೋಗಳನ್ನು ಹರಿಯಬಿಟ್ಟರು. ಚೀನಾ ವಸ್ತುಗಳ ಬಹಿಷ್ಕಾರ ಯಾಕೆ ಅಗತ್ಯ ಅನ್ನುವುದನ್ನು ಎಷ್ಟು ಸೊಗಸಾಗಿ ಹೇಳಿದರಂದರೆ, ರಾತ್ರೋರಾತ್ರಿ ವಿಡಿಯೋಗಳು ವೈರಲ್ಆದವು. ಬಹುತೇಕ ಎಲ್ಲಮಾಧ್ಯಮಗಳು ಅವರ ವಿಚಾರವನ್ನು ಪ್ರಚಾರ ಮಾಡಿದವು. ಪರಿಣಾಮ ದೇಶದಲ್ಲಿಚೀನಾ ಬಾಯ್ಕಾಟ್ಅಭಿಯಾನಕ್ಕೆ ಹೆಚ್ಚಿನ ಬಲ ಬಂದು, ಕೇಂದ್ರ ಸರಕಾರ ಮೊದಲ ಹಂತದಲ್ಲಿ ಚೀನಾ ಮೂಲದ 59 ಆ್ಯಪ್ಗಳನ್ನು ನಿಷೇಧಿಸಿತು. ಚೀನಾ ಬಾಯ್ಕಾಟ್ಅಭಿಯಾನಕ್ಕೆ ಒಂದು ದಿಕ್ಕು, ಶಕ್ತಿ ತೋರಿಸಿದ್ದು ಈ ವಾಂಗ್ಚುಕ್ಎಂಬುದರಲ್ಲಿ ಅನುಮಾನವಿಲ್ಲ. ಪ್ರತಿಭೆಯ ಗಣಿಯೇ ಆಗಿರುವ ವಾಂಗ್ಚುಕ್‌, ಲಡಾಖ್‌, ಸಿಕ್ಕಿಮ್‌, ನೇಪಾಳದಲ್ಲಿಶೈಕ್ಷ ಣಿಕ ಕ್ಷೇತ್ರದ ಸುಧಾರಕರಾಗಿ ದುಡಿಯುತ್ತಿದ್ದಾರೆ.
ಲಡಾಖ್ನ ಲೇಹ್ಜಿಲ್ಲೆಯ ಅಲ್ಚಿ ಸಮೀಪದ ಉಲೆಟೊಕ್ಪೊ ಎಂಬಲ್ಲಿ1966ರಲ್ಲಿವಾಂಗ್ಚುಕ್ಜನಿಸಿದರು. ಈ ಊರು ಮತ್ತು ಸಮೀಪದ ಊರುಗಳಲ್ಲಿಯಾವುದೇ ಶಾಲೆಗಳು ಇರಲಿಲ್ಲ. ಹಾಗಾಗಿ ವಾಂಗ್ಚುಕ್‌ 9 ವರ್ಷ ಆಗೋವರೆಗೂ ಯಾವುದೇ ಶಾಲೆಗೆ ಹೋಗಲಿಲ್ಲ. ಬದಲಿಗೆ ಅವರ ತಾಯಿ ಮನೆಯಲ್ಲೇ ಮೂಲ ಪಾಠಗಳನ್ನು ಹೇಳಿಕೊಟ್ಟರು. ಇದಕ್ಕೆ ಅವರಿಗೆ ಖೇದವೇನೂ ಇಲ್ಲ. ಬದಲಿಗೆ, ಇದು ಅದೃಷ್ಟ ಎನ್ನುತ್ತಾರೆ. ಯಾಕೆಂದರೆ, ತಮ್ಮದಲ್ಲದ ಭಾಷೆಯಲ್ಲಿಒತ್ತಾಯಪೂರ್ವಕವಾಗಿ ಕಲಿಯುವುದು ತಪ್ಪಿಸಲು ಸಾಧ್ಯವಾಯಿತು. ಲಡಾಖಿ ಭಾಷೆಯಲ್ಲಿಮೂಲ ಪಾಠ ಕೇಳುವುದು ಅವಕಾಶ ಸೃಷ್ಟಿಯಾಯಿತು.
ವಾಂಗ್ಚುಕ್ಅವರ ತಂದೆ ಸೋನಮ್ವಂಗ್ಯಾಲ್ಅವರು ರಾಜಕಾರಣಿ ಮತ್ತು ಕಾಶ್ಮೀರದಲ್ಲಿಸಚಿವರಾಗಿದ್ದರು. ವಾಂಗ್ಚುಕ್ಗೆ 9 ವರ್ಷ ಆದಾಗ ಅವರು ತಮ್ಮ ನೆಲೆಯನ್ನು ಶ್ರೀನಗರಕ್ಕೆ ಬದಲಿಸಿದರು. ಅಲ್ಲಿಅವರನ್ನು ಸ್ಕೂಲ್ಗೆ ಸೇರಿಸಲಾಯಿತು. ಇತರರಿಗಿಂತ ಭಿನ್ನವಾಗಿ ಕಾಣುತ್ತಿದ್ದ ವಾಂಗ್ಚುಕ್ಗೆ ಅಲ್ಲಿನ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ಇದರಿಂದಾಗಿ ದಡ್ಡ ವಿದ್ಯಾರ್ಥಿ ಎಂದು ಪರಿಗಣಿತರಾದರು. ಶ್ರೀನಗರ ಶಾಲೆಯ ದಿನಗಳನ್ನು ಅವರು ತಮ್ಮ ಜೀವನದ ಅತ್ಯಂತ ಕರಾಳ ದಿನಗಳೆಂದು ಹೇಳಿಕೊಂಡಿದ್ದಾರೆ. ಕೊನೆಗೆ 1977ರಲ್ಲಿದಿಲ್ಲಿಗೆ ಬಂದ ವಾಂಗ್ಚುಕ್‌, ವಿಶೇಷ ಕೇಂದ್ರೀಯ ವಿದ್ಯಾಲಯವನ್ನು ಸೇರಿಕೊಂಡರು. ಆ ನಂತರ, 1987ರಲ್ಲಿನ್ಯಾಷನಲ್ಇನ್ಸ್ಟಿಟ್ಯೂಟ್ಆಫ್ಟೆಕ್ನಾಲಜಿ ಶ್ರೀನಗರದಿಂದ ಮೆಕ್ಯಾನಿಕಲ್ಎಂಜಿನಿಯರಿಂಗ್ನಲ್ಲಿಬಿ ಟೆಕ್ಪದವಿ ಪಡೆದರು. ಎಂಜಿನಿಯರಿಂಗ್ನಲ್ಲಿವಿಷಯಗಳ ಆಯ್ಕೆ ಸಂಬಂಧ ತಂದೆ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿ ತಮ್ಮ ಅಧ್ಯಯನ ವೆಚ್ಚವನ್ನು ತಾವೇ ಭರಿಸಿಕೊಂಡರು. ಫ್ರಾನ್ಸ್ಗೆ ತೆರಳಿ ಎರಡು ವರ್ಷ ಗ್ರೆನೋಬಲ್ನಲ್ಲಿರುವ ಕ್ಯಾಟರ್ಸ್ಕೂಲ್ಆಫ್ಆರ್ಕಿಟೆಕ್ಚರ್ನಲ್ಲಿಅರ್ಥೆನ್ಆರ್ಕಿಟೆಕ್ಚರ್‌(ಮಣ್ಣಿನ ವಾಸ್ತುಶಿಲ್ಪ)ನಲ್ಲಿಉನ್ನತ ಅಧ್ಯಯನ ಕೈಗೊಂಡು ಭಾರತಕ್ಕೆ ಮರಳಿದರು.
ಇದಕ್ಕೂ ಮೊದಲು ಅಂದರೆ 1988ರಲ್ಲಿವಾಂಗ್ಚುಕ್ತನ್ನ ಸಹೋದರ ಮತ್ತು ಐವರ ಜತೆಗೂಡಿ  ಸ್ಟೂಡೆಂಟ್ಸ್ಎಜ್ಯುಕೇಷನಲ್ಆ್ಯಂಡ್ಕಲ್ಚರಲ್ಮೂವ್ಮೆಂಟ್ಆಫ್ಲಡಾಖ್‌(ಎಸ್ಇಸಿಎಂಒಎಲ್‌) ಆರಂಭಿಸಿದರು. ಶೈಕ್ಷ ಣಿಕ ಸುಧಾರಣೆಯೇ ಇದರ ಗುರಿಯಾಗಿತ್ತು. ಸಸೊಧೀಲ್ಸರಕಾರಿ ಹೈಸ್ಕೂಲನ್ನು ತಮ್ಮ ಸುಧಾರಣಾ ಪ್ರಯೋಗ ಶಾಲೆಯಾಗಿ ಬಳಸಿಕೊಂಡು, ಆಪರೇಷನ್ನ್ಯೂ ಹೋಪ್ಆರಂಭಿಸಿದರು. ಇದಕ್ಕೆ ಸರಕಾರದ ಶಿಕ್ಷ ಣ ಇಲಾಖೆಯ ಸಹಯೋಗವೂ ಇತ್ತು. ಲಡಾಖ್ನ ಏಕೈಕ ಮ್ಯಾಗಜಿನ್‌ ‘ಲಡಾಖ್ಸ್ಮೆಲಾಂಗ್‌’ ಆರಂಭಿಸಿ 1993ರಿಂದ 2005ರವರೆಗೂ ಅದರ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಹಿಲ್ಕೌನ್ಸಿಲ್ಗವರ್ನಮೆಂಟ್ನಲ್ಲಿಶಿಕ್ಷ ಣ ಸಲಹೆಗಾರರಾಗಿದ್ದರು. 2002ರಲ್ಲಿಲಡಾಕ್ವಾಲ್ಯುಂಟರಿ ನೆಟ್ವರ್ಕ್‌(ಎಲ್ವಿಎನ್‌) ಎನ್ಜಿಒ ಆರಂಭಿಸಿದರು. ವಿಜನ್ಡಾಕ್ಯುಮೆಂಟ್ಲಡಾಖ್-2025ರ ಕರಡು ಸಮಿತಿಯ ಸದಸ್ಯರಾಗಿದ್ದರು. ಹಾಗೆಯೇ, 2004ರಲ್ಲಿಹಿಲ್ಗವರ್ನಮೆಂಟ್ನ ಶಿಕ್ಷ ಣ ಮತ್ತು ಪ್ರವಾಸೋದ್ಯಮ ನೀತಿ ನಿರೂಪಣೆಯಲ್ಲಿಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. 2005ರಲ್ಲಿಅಂದಿನ ಡಾ.ಮನಮೋಹನ್ಸಿಂಗ್ಸರಕಾರವು ಇವರನ್ನು ನ್ಯಾಷನಲ್ಗೌವರ್ನಿಂಗ್ಕೌನ್ಸಿಲ್ಫಾರ್ಎಲೆನಂಟರಿ ಎಜ್ಯುಕೇಷನ್ನ ಸಮತಿಯ ಸದಸ್ಯರನ್ನಾಗಿ ನೇಮಕ ಮಾಡಿತು.
ವಾಂಗ್ಚುಕ್ಅವರ ಮತ್ತೊಂದು ಗಮನಾರ್ಹ ಸಾಧನೆ ಎಂದರೆಐಸ್ಸ್ತೂಪಅಂದರೆ ಹಿಮದ ಸ್ತೂಪ. ಚಳಿಗಾಲದಲ್ಲಿವ್ಯರ್ಥವಾಗಿ ಹರಿದು ಹೋಗುವ ಹಳ್ಳಗಳ ನೀರನ್ನು ಕೃತಕವಾಗಿ ಹಿಮದ ಗಡ್ಡೆಗಳನ್ನಾಗಿ ಪರಿವರ್ತಿಸುವುದು ಮತ್ತು ಬೇಸಿಗೆ ಕಾಲದಲ್ಲಿಈ ಹಿಮದ ಸ್ತೂಪಗಳು ಕರಗಿ ರೈತರಿಗೆ ನೀರಿನ ಮೂಲವನ್ನು ಒದಗಿಸುತ್ತವೆ. ಇದಕ್ಕೆ ಸಂಬಂಧಿಸಿದ ಮಾದರಿಯನ್ನು ವಾಂಗ್ಚುಕ್ಸಿದ್ಧಪಡಿಸಿದ್ದರು. ಈ ಹಿಮದ ಸ್ತೂಪಗಳು ಲಡಾಖ್ನ ರೈತರಿಗೆ ತುಂಬ ನೆರವಾಗಿವೆ. 2014ರ ಬಳಿಕ ಜಮ್ಮು ಮತ್ತು ಕಾಶ್ಮೀರ ಸರಕಾರದ ಅನೇಕ ಸಮಿತಿಗಳಲ್ಲಿವಾಂಗ್ಚುಕ್ಕೆಲಸ ಮಾಡಿ­ದ್ದಾರೆ. ರಾಜ್ಯದ ಶಿಕ್ಷ ಣ ನೀತಿ ಸೇರಿದಂತೆ ಅನೇಕ ನೀತಿ ನಿರೂಪಣೆಗಳಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2015ರಿಂದ ಹಿಮಾಲಯನ್ಇನ್ಸ್ಟ್ಯೂಟ್ಆಫ್ಅಲ್ಟರ್ನೇಟಿವ್ಸ್ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವಲ್ಲಿನಿರತರಾಗಿದ್ದಾರೆ. ಇದೇ ವೇಳೆ, ಹೋಮ್ಸ್ಟೇ ಮಾದರಿಯಲ್ಲಿಫಾರ್ಮ್ಸ್ಟೇ ಎಂಬ ಹೊಸ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಲಡಾಖ್ಗೆ ಆಗಮಿಸುವ ಪ್ರವಾಸಿಗರು ಹೊಟೇಲ್ಗಳಲ್ಲಿಉಳಿಯುವ ಬದಲಿಗೆ ಸ್ಥಳೀಯ ಕುಟುಂಬಗಳಲ್ಲಿಉಳಿದುಕೊಳ್ಳುವ ಕಲ್ಪನೆಯೇ ಫಾರ್ಮ್ಸ್ಟೇ. ಇದರಿಂದ ಸ್ಥಳೀಯರಿಗೆ ಉದ್ಯೋಗವೂ ಸೃಷ್ಟಿಯಾಗುತ್ತಿದೆ.
ಪ್ರತಿ ಕ್ಷ ಣವನ್ನು ವ್ಯರ್ಥ ಮಾಡದೇ ತೊಡಗಿಸಿಕೊಂಡಿರುವ ವಾಂಗ್ಚುಕ್ಅವರ ವಿಶ್ರಾಮರಹಿತ ಜೀವನವೇ ನಮಗೆ ಸೂಧಿರ್ತಿಯಾಗುತ್ತದೆ. ಅವರ ಈ ವಿಶಿಷ್ಟ ಕಾರ್ಯಶೈಲಿ, ಹೊಸ ಹೊಸ ಹೊಳಹುಗಳು ಮತ್ತು ಅವುಗಳನ್ನು ಅನುಷ್ಠಾಗೊಳಿಸುವ ಛಾತಿಯಿಂದಾಗಿ ಎಲ್ಲರಕ್ಕಿಂತ ಭಿನ್ನವಾಗಿ ನಿಲ್ಲುತ್ತಾರೆ. ಅದಕ್ಕೆ ಪ್ರತಿಫಲವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ವಾಂಗ್ಚುಕ್ಅವರನ್ನು ಹುಡುಕಿಕೊಂಡು ಬಂದಿವೆ. 2018ರಲ್ಲಿರಾಮನ್ಮ್ಯಾಗ್ಸಸೆ ಅವಾರ್ಡ್‌, ಗ್ಲೋಬಲ್ಅವಾರ್ಡ್ಫಾರ್ಸಸ್ಟೇನೇಬಲ್ಆರ್ಕಿಟೆಕ್ಚರ್‌(2017), ಇಂಟರ್ನ್ಯಾಷನಲ್ಟೆರ್ರಾ ಅವಾರ್ಡ್ಫಾರ್ಬೆಸ್ಟ್ಅರ್ಥ್ಬಿಲ್ಡಿಂಗ್‌(2016), ಯುನೆಸ್ಕೋ ಚೇರ್ಅರ್ಥೇನ್ಆರ್ಕಿಟೆಕ್ಚರ್‌(2014), ಸ್ಯಾಂಚುರಿ ಏಷ್ಯಾದ ಗ್ರೀನ್ಟೀಚರ್ಅವಾರ್ಡ್‌(2004)... ಹೀಗೆಯೇ ಅವರು ಪಡೆದುಕೊಂಡಿರುವ ಪ್ರಶಸ್ತಿಗಳ ಪಟ್ಟಿ ಬೆಳೆಯುತ್ತದೆ.
ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಂಡಿರುವ ವಾಂಗ್ಚುಕ್ಅವರು, ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರ ವಿಭಜಿಸಿ ಲಡಾಖ್ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದಾಗ ಅದನ್ನು ಸ್ವಾಗತಿಸಿದ ಮೊದಲಿಗರಲ್ಲಿಇವರು ಒಬ್ಬರು. ತನ್ನದೇ ಸ್ವತಂತ್ರ ಸಂಸ್ಕೃತಿ, ಭಾಷೆ ಹೊಂದಿರುವ ಲಡಾಕ್ಗೆ ಮಾನ್ಯತೆ ತಂದುಕೊಡಬೇಕೆಂಬುದು ಅವರ ಹಂಬಲವಾಗಿದೆ.

(ಈ ಲೇಖನವು ವಿಜಯ ಕರ್ನಾಟಕದ ಜುಲೈ12, 2020ರ ಸಂಚಿಕೆಯಲ್ಲಿ ಪ್ರಕಟವಾಗಿದೆ)






ಸೋಮವಾರ, ಜೂನ್ 1, 2020

Actor Sonu Sood's Ghar Bhejo Initiative ಅಪರಂಜಿ ಹೃದಯದ ಸೋನು ಸೂದ್

ಮತ್ತೊಬ್ಬರಿಗೆ ಸಹಾಯ ಮಾಡುವುದೇ ಯಶಸ್ಸಿನ ಮಂತ್ರ ಎಂದು ಭಾವಿಸಿ ಅದರಂತೆ ನಡೆಯುತ್ತಿರುವ ನಟ ಸೋನು ಸೂದ್, ಲಾಕ್ಡೌನ್ ವೇಳೆ ಸಾವಿರಾರು ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ನೆರವಿನ ಹಸ್ತ ಚಾಚಿದ್ದಾರೆ. 
- ಮಲ್ಲಿಕಾರ್ಜುನ ತಿಪ್ಪಾರ
ಲಾಕ್‌ಡೌನ್‌ನ ವೇಳೆ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸಿದ್ಧವಾಗಿರುವ ಶ್ರಮಿಕ್ ರೈಲುಗಳ ವೆಚ್ಚವನ್ನು ಯಾರು ಭರಿಸಬೇಕು ಎಂದು ಸರಕಾರಗಳು ಕಚ್ಚಾಡುತ್ತಿರುವಾಗ, ಬಸ್ಗಳನ್ನು ರಾಜ್ಯದೊಳಗೆ ಬಿಡಬೇಕೋ ಬೇಡವೋ ಎಂದು ರಾಜಕಾರಣಿಗಳು ಪರಸ್ಪರ ಕೆಸರೆರಚಾಡುತ್ತಿರುವ ಸಂದರ್ಭದಲ್ಲೇ ಮುಂಬಯಿನಲ್ಲಿ‘ಖಳನಾಯಕ’ರೊಬ್ಬರು ಸದ್ದಿಲ್ಲದೇ ಬಸ್ಗಳ ಮೂಲಕ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿ ತಮ್ಮದು ‘ಶುದ್ಧ ಬಂಗಾರ’ದ ಹೃದಯ ಎಂಬುದನ್ನು ತೋರಿಸಿಕೊಟ್ಟರು!

ಅವರು ಯಾರೆಂದು ಗೊತ್ತಾಗಿರಬಹುದು. ನಿಮ್ಮ ಊಹೆ ನಿಜ. ಅವರು ‘ವಿಲನ್’ ಪಾತ್ರಗಳನ್ನು ನಿಭಾಯಿಸಿ ಪ್ರಖ್ಯಾತರಾಗಿರುವ ನಟ ‘ಸೋನು ಸೂದ್’.

ಲಾಕ್ಡೌನ್ ವೇಳೆ ಮುಂಬಯಿ ಮಹಾನಗರದಿಂದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಕರ್ನಾಟಕ, ಒಡಿಶಾ ಸೇರಿದಂತೆ ಅನೇಕ ರಾಜ್ಯಗಳಿಗೆ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿರುವ ಸುದ್ದಿಗಳು, ಚಿತ್ರಗಳು, ಕಾರ್ಮಿಕರ ಕಣ್ಣೀರಿನ ಕತೆಗಳು ಯಥೇಚ್ಛವಾಗಿ ಪ್ರಸಾರವಾದವು. ನಾವೆಲ್ಲರೂ ಅಯ್ಯೊ ಪಾಪ ಎಂದೆವಷ್ಟೇ, ಆದರೆ ಸೋನು ಸೂದ್ ಮಾತ್ರ ತಮ್ಮದೇ ಖರ್ಚಿನಲ್ಲಿಬಸ್ಗಳನ್ನು ಬಾಡಿಗೆ ಪಡೆದು ಕಾರ್ಮಿಕರನ್ನು ಅವರವರ ಹಳ್ಳಿಗಳಿಗೆ ತಲುಪಿಸುವ ‘ಘರ್ ಭೇಜೋ’(ಮನೆಗೆ ತಲುಪಿಸಿ) ಕಾರ್ಯಕ್ಕೆ ಮುಂದಾದರು. ಕಳೆದ ಮೂರ್ನಾಲ್ಕು ವಾರಗಳಲ್ಲಿಅಂದಾಜು 20 ಸಾವಿರ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸಿ, ಅವರ ಪ್ರೀತಿ ಹಾರೈಕೆಗಳಿಗೆ ಪಾತ್ರರಾಗಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೂದ್, ಕೇರಳದಲ್ಲಿಸಿಲುಕಿದ್ದ ಒಡಿಶಾದ 200ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ವಿಮಾನದಲ್ಲೇ ವಾಪಸ್ ರಾಜ್ಯಗಳಿಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಮಾನವೀಯ ಕಾರ್ಯದಲ್ಲೀಗ ಸೂದ್ ಜೊತೆ ಅವರ ಸ್ನೇಹ ಬಳಗವೂ ಸೇರಿಕೊಂಡಿದೆ. ವಲಸಿಗ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ಕಾರ್ಯವೂ ವಿಸ್ತಾರಗೊಂಡಿದೆ. ಅವರು ಆರಂಭಿಸಿರುವ ಸಹಾಯವಾಣಿಗೆ 50ರಿಂದ 60 ಸಾವಿರದಷ್ಟು ಕರೆಗಳು ಬರುತ್ತಿವೆ ಎಂದರೆ ಜನರು ಅವರ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿ.

ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ರಾಕ್ಷಸೀ ಕೃತ್ಯಗಳನ್ನು ಲೀಲಾಜಾಲವಾಗಿ ಮಾಡುವ ಸೂದ್, ಜೀವನದಲ್ಲಿನಿಜವಾದ ‘ಹೀರೋ’ ಆಗಿ ಹೊರಹೊಮ್ಮಿದ್ದಾರೆ. ಅವರ ಈ ಕಾರ್ಯಕ್ಕೆ ಅಗಾಧ ಪ್ರಶಂಸೆಯೂ ವ್ಯಕ್ತವಾಗಿದೆ. ದೇಶ, ವಿದೇಶದ ಮಾಧ್ಯಮಗಳಲ್ಲಿಅವರ ಕಾರ್ಯಕ್ಕೆ ಮನ್ನಣೆ ದೊರೆಯುತ್ತಿದೆ. ಕೆಲವರು  ಸೂದ್ ಅವರನ್ನು ಸುಷ್ಮಾ ಸ್ವರಾಜ್(ಯುದ್ಧಪೀಡಿತ ವಿದೇಶಗಳಲ್ಲಿಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆ ತರುವಲ್ಲಿಪ್ರಮುಖ ಪಾತ್ರ ನಿರ್ವಹಿಸಿದ್ದರು) ಅವರೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಅದೆಲ್ಲವನ್ನೂ ವಿನಮ್ರತೆಯಿಂದಲೇ ಸ್ವೀಕರಿಸುತ್ತಿದ್ದಾರೆ ಸೂದ್.

ಬಹಳಷ್ಟು ನಟ, ನಟಿಯರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಸುಮ್ಮನಿದ್ದಾರೆ. ಆದರೆ, ಸೂದ್ ಅವರು ಮಾತ್ರ ಯಾಕೆ ರೀತಿಯ ಕಾರ್ಯಾಚರಣೆಗಿಳಿದರು, ಅವರಿಗೆ ಅಂಥ ಪ್ರೇರಣೆಯಾಗಿದ್ದಾರರೂ ಏನು ಎಂದು ಹುಡುಕಿದರೆ, ಅವರದ್ದೇ ಮಾತುಗಳಲ್ಲಿಉತ್ತರ ಸಿಗುತ್ತದೆ. ‘‘ನಮ್ಮ ನಗರಗಳನ್ನು ಕಟ್ಟಿದ ಈ ವಲಸಿಗರು ಹೈವೇಗಳಲ್ಲಿ ತಮ್ಮ ಜೀವವನ್ನು ಅಪಾಯಕ್ಕಿಟ್ಟು ನಡೆದುಕೊಂಡು ಹೋಗುತ್ತಿದ್ದರು, ಅನೇಕರು ಈ ಪಯಣದ ಹಾದಿಯಲ್ಲಿ ಜೀವ ಬಿಟ್ಟಿದ್ದಾರೆ. ಆಗ ನನಗೆ ಅನಿಸಿತು, ಈ ವಲಸಿಗರಿಗೆ ಸಹಾಯವಾಗುವಂಥದ್ದು ಏನಾದರೂ ಮಾಡಬೇಕು. ಇದೇ ಈ ಕ್ಷ ಣಕ್ಕೆ ಬೇಕಾಗಿರುವುದು,’’ ಎಂದು ಭಾವಿಸಿದ ಸೂದ್ ‘ಘರ್ ಭೇಜೋ’ ಕಾರ್ಯಕ್ಕೆ ಚಾಲನೆ ನೀಡಿದರು. ಒಂದು ಒಳ್ಳೆಯ ಕಾರ್ಯಕ್ಕೆ ಹಲವರ ಕೈಗಳು ಗೊತ್ತಿಲ್ಲದೆಯೇ ಜೊತೆಯಾಗುತ್ತವೆ. ಸೂದ್ ಅವರ ವಿಷಯದಲ್ಲೂಅದು ನಿಜವಾಯಿತು.

47 ವರ್ಷದ ಸೂನು ಸೂದ್ ಕೂಡ 20 ವರ್ಷ ಹಿಂದೆ ಇದೇ ರೀತಿ ವಲಸಿಗರಾಗಿಯೇ ಮುಂಬಯಿಗೆ ಬಂದವರು. ಅದಕ್ಕೇ ಇರಬೇಕು, ವಲಸಿಗರ ನೋವು ಎಲ್ಲರಿಗಿಂತ ಮೊದಲು ಅವರಿಗೆ ತಟ್ಟಿದ್ದು.

ಪಂಜಾಬ್ನ ಮೋಗಾದಲ್ಲಿ1973ರ ಜುಲೈ 30ರಂದು ಸೋನು ಜನಿಸಿದರು. ತಂದೆ ಶಕ್ತಿ ಸಾಗರ್ ಸೂದ್, ತಾಯಿ ಸರೋಜಾ ಸೂದ್. ಮೋಗಾದಲ್ಲಿ ಆರಂಭಿಕ ಶಿಕ್ಷ ಣ ಪೂರೈಸಿದ ಸೋನು ನಾಗ್ಪುರದ ಯಶವಂತರಾವ್ ಚಹ್ವಾಣ್ ಎಂಜಿನಿಯರಿಂಗ್ ಕಾಲೇಜ್ನಿಂದ ಎಲೆಕ್ಟ್ರಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ. ಕಿಕ್ ಬಾಕ್ಸಿಂಗ್ ಮತ್ತು ಗಿಟಾರ್ ನುಡಿಸುವುದು ಅವರ ಹವ್ಯಾಸಗಳು. ಮಾಡೆಲಿಂಗ್ ಮತ್ತು ಸಿನಿಮಾ ಜಗತ್ತಿನೆಡೆಗೆ ಆಕರ್ಷಿತರಾಗಿ ಮುಂಬಯಿಗೆ ಪಯಣ ಬೆಳೆಸಿದರು. ಎಲ್ಲರಂತೆ ಆರಂಭಿಕ ದಿನಗಳಲ್ಲಿ ಸೋನು ಕೂಡ ಅವಕಾಶಕ್ಕಾಗಿ ಚಪ್ಪಲಿ ಸವೆಸಬೇಕಾಯಿತು. 1999ರಲ್ಲಿಅವರ ಕನಸು ಕೈಗೂಡಿತು. ತಮಿಳು ಸಿನಿಮಾ ‘ಕಲ್ಲಳಂಗರ್’ ಚಿತ್ರದ ಮೂಲಕ ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದರು. 2000ರಲ್ಲಿ‘ಹ್ಯಾಂಡ್ಸ್ ಅಪ್’ ಚಿತ್ರದ ಮೂಲಕ ತೆಲುಗು ಸಿನಿಮಾರಂಗಕ್ಕೂ ಪರಿಚಯವಾದರು. ಬಳಿಕ 2002ರಲ್ಲಿಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. 2011ರಲ್ಲಿತೆರೆಗೆ ಬಂದ ಸುದೀಪ್ ಅಭಿನಯದ ‘ವಿಷ್ಣುವರ್ಧನ್’ ಚಿತ್ರದ ಮೂಲಕ ಕನ್ನಡ ಸಿನಿರಸಿಕರಿಗೂ ಹತ್ತಿರವಾದರು. ಕಳೆದ ವರ್ಷ ತೆರೆ ಕಂಡ, ನಟ ದರ್ಶನ್ ಅಭಿಯನದ ‘ಕುರುಕ್ಷೇತ್ರ’ ಚಿತ್ರದಲ್ಲಿಅರ್ಜುನನ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡರು. ಈ 20 ವರ್ಷದ ಅವಧಿಯಲ್ಲಿಕನ್ನಡ, ಹಿಂದಿ ಸೇರಿದಂತೆ ಆರು ಭಾಷೆಗಳ 60ಕ್ಕೂ ಹೆಚ್ಚು ಚಿತ್ರಗಳಲ್ಲಿಅಭಿನಯಿಸಿದ್ದಾರೆ. ಏಷ್ಯಾದ ಬಹುದೊಡ್ಡ ನಟ ಜಾಕಿಚಾನ್ ಅವರೊಂದಿಗೆ ಬಹುಭಾಷಾ ಚಿತ್ರವಾದ ‘ಕುಂಗ್ ಫು ಯೋಗ’ದಲ್ಲಿತೆರೆ ಹಂಚಿಕೊಂಡಿದ್ದಾರೆ. ಆರು ಅಡಿ ಎತ್ತರದ ಅಜಾನುಬಾಹು ಸೋನು ಕಟ್ಟುಮಸ್ತಾದ ಶರೀರವನ್ನು ಹುರಿಗೊಳಿಸಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ದಬಾಂಗ್(2010) ಚಿತ್ರದ ಚೇದಿ ಸಿಂಗ್ ವಿಲನ್ ಪಾತ್ರ ಸೂದ್ ಅವರಿಗೆ ಹೊಸ ಐಡೆಂಟಿಟಿ ತಂದುಕೊಟ್ಟಿತು. ಯುವ, ಅಥಡು, ಆಶೀಕ್ ಬನಾಯಾ ಅಪ್ನೆ, ಜೋಧಾ ಅಕ್ಬರ್, ದೂಕುಡು, ಶೂಟ್ಔಟ್ ಎಟ್ ವಾಡಲಾ, ಹ್ಯಾಪಿ ನ್ಯೂ ಇಯರ್, ಕುಂಗ್ ಫು ಯೋಗ, ಸಿಂಬಾ, ವಿಷ್ಣುವರ್ಧನ ಚಿತ್ರಗಳು ಸೂದ್ ಅವರಿಗೆ ಹೆಸರು ತಂದುಕೊಟ್ಟವು. ತಮಿಳು, ತೆಲುಗು, ಹಿಂದಿ, ಕನ್ನಡ, ಪಂಜಾಬಿ ಮತ್ತು ಇಂಗ್ಲಿಷ್ ಸಿನಿಮಾಗಳಲ್ಲಿಅಭಿನಯಿಸಿದ್ದಾರೆ. 2016ರಲ್ಲಿತಂದೆಯ ಹೆಸರಿನಲ್ಲಿಚಿತ್ರ ನಿಮಾಣ ಸಂಸ್ಥೆಯನ್ನೂ ಆರಂಭಿಸಿದ್ದಾರೆ.

ಅರುಂಧತಿ(2009) ಚಿತ್ರದ ಅಭಿನಯಕ್ಕಾಗಿ ಆಂಧ್ರಪ್ರದೇಶ ರಾಜ್ಯ ನಂದಿ ಅತ್ಯುತ್ತಮ ವಿಲನ್ ಅವಾರ್ಡ್, ಇದೇ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಫಿಲಂ ಫೇರ್ ಅವಾರ್ಡ್ ಕೂಡ ಬಂದಿದೆ. ಇಷ್ಟು ಮಾತ್ರವಲ್ಲದೆ ಅಪ್ಸರಾ, ಐಐಎಫ್ಎ, ಎಸ್ಐಐಎಂಎ(ಸೈಮಾ) ಪ್ರಶಸ್ತಿಗಳು ಸೂದ್ ಅವರಿಗೆ ಸಂದಿವೆ.
ಬಹುತೇಕರು ಯಶಸ್ಸಿಗೆ ತಮ್ಮದೇ ಮಾನದಂಡ ಹುಡುಕಿಕೊಳ್ಳುತ್ತಾರೆ. ಇಲ್ಲವೇ ಜನರೇ ಅವರಿಗೊಂದು ಯಶಸ್ಸಿನ ಅಳತೆಗೋಲನ್ನು ಸಿದ್ಧಪಡಿಸುತ್ತಾರೆ. ಆದರೆ, ಸೂದ್ ಅವರ ದೃಷ್ಟಿಯಲ್ಲಿಯಶಸ್ಸು ಎನ್ನುವುದು ತುಂಬ ಭಿನ್ನವಾಗಿದೆ. ‘‘ಒಂದು ವೇಳೆ ನೀವು ಯಾರಿಗಾದರೂ ಸಹಾಯ ಮಾಡಲು ಸಾಧ್ಯವಾದರೆ ಮಾತ್ರ ಯಶಸ್ಸು ಸಾಧಿಸಿದ ಹಾಗೆ,’’ ಎನ್ನುತ್ತಾರೆ ಅವರು. ಇದು ಅವರ ತಂದೆ, ತಾಯಿ ಹೇಳಿಕೊಟ್ಟ ಯಶಸ್ಸಿನ ಸೂತ್ರ. ಬಹುಶಃ ಅದೇ ಕಾರಣಕ್ಕೆ ಅವರು ಯಾರೂ ನಿರೀಕ್ಷಿಸದ ರೀತಿಯಲ್ಲಿನೆರವಿನ ಹಸ್ತವನ್ನು ಚಾಚುತ್ತಿದ್ದಾರೆ.

ನಿಮಗೊಂದು ವಿಷಯ ಹೇಳಲೇಬೇಕು; ಲಾಕ್ಡೌನ್ ಸಂದರ್ಭದಲ್ಲಿಮಾತ್ರ ಸೂದ್ ನೆರವು ನೀಡುತ್ತಿಲ್ಲ. ಅವರ ನೆರವಿನ ಕಾರ್ಯಕ್ಕೆ ದೊಡ್ಡ ದಾಖಲೆಗಳೇ ಇವೆ. ಇದಕ್ಕೂ ಮೊದಲು ಅವರು, ಪಂಜಾಬ್ನಲ್ಲಿಮಾದಕ ದ್ರವ್ಯ ವಿರುದ್ಧ ಹೋರಾಟದಲ್ಲಿತೊಡಗಿಸಿಕೊಂಡಿದ್ದರು. 2016ರಲ್ಲಿತಮ್ಮ ತಾಯಿ ಸರೋಜ ಹೆಸರಲ್ಲಿಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರ ಸಹಾಯಕ್ಕೆ ಮುಂದಾದರು. ಇವರ ಜೊತೆಗೆ, ಬೇರೆ ರೀತಿಯಲ್ಲೂಅಂಗವಿಕಲವಾದವರಿಗೂ ಸೂದ್ ನೆರವು ನೀಡುತ್ತಾ ಬಂದಿದ್ದಾರೆ. ಅಂಗವಿಕಲ ವಿದ್ಯಾರ್ಥಿಗಳು ಬ್ಯಾಡ್ಮಿಂಟನ್ ಟೂರ್ನಿಯಲ್ಲಿಪಾಲ್ಗೊಳ್ಳಲು ಧನಸಹಾಯ ಮಾಡಿದ್ದಾರೆ. ತಮ್ಮ ತಂದೆಯ ಹೆಸರಲ್ಲಿ(ಶಕ್ತಿ ಅನ್ನದಾನಂ) ಮುಂಬಯಿನ ನಿರ್ಗತಿಕ ಒಂದೂವರೆ ಲಕ್ಷ  ಮಕ್ಕಳಿಗೆ ನಿತ್ಯ ಊಟವನ್ನು ನೀಡುತ್ತಿದ್ದಾರೆ. ಅವರ ಈ ಎಲ್ಲಕಾರ್ಯಕ್ಕೆ ಪತ್ನಿ ಸೋನಾಲಿ, ಮಕ್ಕಳಾದ ಅಯಾನ್ ಮತ್ತು ಇಶಾನ್ ಅವರ ಬೆಂಬಲ ಇದ್ದೇ ಇದೆ.  ಅಂದ ಹಾಗೆ, ಸೂದ್ ಅವರ ನೆರವಿನಿಂದ ತಮ್ಮ ಊರುಗಳನ್ನು ತಲುಪಿದವರ ಪಟ್ಟಿಯಲ್ಲಿಕನ್ನಡಿಗರು ಇದ್ದಾರೆ.



ಈ ಲೇಖನವು ವಿಜಯ ಕರ್ನಾಟಕದ 2020ರ ಮೇ 31ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಭಾನುವಾರ, ಮೇ 24, 2020

Benjamin Netanyahu Faces Trails: ಕಟಕಟೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು

ಇಸ್ರೇಲ್  ಜನರಿಂದ ಬೀಬಿ ಎಂದು ಕರೆಯಿಸಿಕೊಳ್ಳುವ ಬೆಂಜಮಿನ್ ನೆತನ್ಯಾಹು ಭ್ರಷ್ಟಾಚಾರ ಮತ್ತು ಆಡಳಿತ ದುರುಪಯೋಗಕ್ಕಾಗಿ ಕೋರ್ಟ್ ಕಟಕಟೆಯಲ್ಲಿದ್ದಾರೆ. ಮಧ್ಯಪ್ರಾಚ್ಯ ರಾಜಕಾರಣದ ಧಾಡಸಿ ನಾಯಕನ ಭವಿಷ್ಯಕ್ಕೆ ಮಂಕು  ಕವಿಯಲಿದೆಯೇ?


– ಮಲ್ಲಿಕಾರ್ಜುನ ತಿಪ್ಪಾರ

ಇಸ್ರೇಲ್‌ನ ಪ್ರಶ್ನಾತೀತ ನಾಯಕ, ಪ್ರಖರ ರಾಷ್ಟ್ರವಾದಿ ಬೆಂಜಮಿನ್‌ ನೆತನ್ಯಾಹು ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಕೋರ್ಟ್‌ಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯುವ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಭಾನುವಾರ ಅವರು ವಿಚಾರಣೆಗೆ ಹಾಜರಾಗಲಿದ್ದು, ಅದರೊಂದಿಗೆ ‘ಅಧಿಕಾರದಲ್ಲಿದ್ದಾ­ಗಲೇ ಕಟಕಟೆ ಏರಿದ ಮೊದಲ ಪ್ರಧಾನಿ’ ಎಂಬ ಕುಖ್ಯಾತಿಯೂ ನೆತನ್ಯಾಹು ಬೆನ್ನಿಗಂಟಿದೆ.

ಸುತ್ತ ವೈರಿ ರಾಷ್ಟ್ರಗಳ ಕೂಟವನ್ನೆ ಕಟ್ಟಿಕೊಂಡಿರುವ ಪುಟ್ಟ ದೇಶ ಇಸ್ರೇಲ್‌ನ ರಾಜಕಾರಣದಲ್ಲಿ ಬೆಂಜಮಿನ್‌ ನೆತನ್ಯಾಹು ಅವರದ್ದು ಮಹತ್ತರ ಪಾತ್ರ­ವಿದೆ. ದಶಕಗಳಿಂದ ಇಸ್ರೇಲ್‌ ರಾಜಕಾರಣದಲ್ಲಿ ಪ್ರಭಾವವನ್ನು ಹೊಂದಿ­ರುವ ನೆತನ್ಯಾಹು ಇದೀಗ, ಭ್ರಷ್ಟಾಚಾರ, ವಿಶ್ವಾಸದ್ರೋಹ ಸೇರಿ ಇನ್ನಿತರ ಆರೋಪಗಳಿಂದಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಹಾಗೆ ನೋಡಿದರೆ, ಈ ಕೊರೊನಾ ವೈರಸ್‌ ಪರಿಸ್ಥಿತಿ ಸೃಷ್ಟಿಯಾಗದಿದ್ದರೆ ಅವರು ಎರಡು ತಿಂಗಳ ಮೊದಲೇ ಕಟಕಟೆ ಏರಬೇಕಿತ್ತು.

ನೆತನ್ಯಾಹು ಅವರು ಮೂರು ರೀತಿಯ ಆರೋಪಗಳಿಂದಾಗಿ ವಿಚಾರಣೆ ಎದುರಿಸುತ್ತಿದ್ದಾರೆ. 1. ಅವರು ಬೆಝಕ್‌ ಟೆಲಿಕಾಂ ಇಸ್ರೇಲ್‌ ಕಂಪನಿಗೆ ಅಂದಾಜು 50 ಕೋಟಿ ಡಾಲರ್‌ ಲಾಭವಾಗುವಂತೆ ಶಾಸನಾತ್ಮಕ ಸಹಾಯ ಮಾಡಿದ್ದು. ಇದಕ್ಕೆ ಪ್ರತಿಯಾಗಿ, ಈ ಕಂಪನಿ ನಿಯಂತ್ರಣ ಹೊಂದಿರುವ ‘ವಲ್ಲಾ’ ನ್ಯೂಸ್‌ ವೆಬ್‌ಸೈಟ್‌ನಲ್ಲಿ ನೆತನ್ಯಾಹು ಹಾಗೂ ಅವರ ಪತ್ನಿ ಪರವಾಗಿರುವ ಸುದ್ದಿಗಳ ಪ್ರಸಾರ. 2. ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ 2 ಲಕ್ಷ ಡಾಲರ್‌ ಮೌಲ್ಯದ ಕಾಣಿಕೆಗಳನ್ನು ಇಸ್ರೇಲಿ ಮೂಲದ ಹಾಲಿವುಡ್‌ ನಿರ್ಮಾಪಕ ಅರ್ನಾನ್‌ ಮಿಲ್ಚನ್‌ ಹಾಗೂ ಆಸ್ಪ್ರೇಲಿಯನ್‌ ಬಿಸಿನೆಸ್‌ಮನ್‌ ಜೇಮ್ಸ್‌ ಪ್ಯಾಕರ್‌ ಅವರಿಂದ ಪಡೆದಿದ್ದಾರೆ. ಇದರಲ್ಲಿ ದುಬಾರಿ ಷಾಂಪೇನ್‌, ಸಿಗಾರ್‌ಗಳೂ ಸೇರಿವೆ. 3. ಅರ್ನಾನ್‌ ಮೋಜ್‌ ಒಡೆತನದ ‘ಯೆಡಿಯೂತ್‌ ಅಹ್ರನೋಥ್‌’ ಪತ್ರಿಕೆಯಲ್ಲಿ ತಮ್ಮ ಪರವಾಗಿ ಉತ್ತಮ ಸುದ್ದಿಗಳು ಪ್ರಕಟವಾಗುವಂತೆ ನೆತನ್ಯಾಹು ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ‘ಯೆಡಿಯೂತ್‌ ಅಹ್ರನೋಥ್‌’ನ ಎದುರಾಳಿ ಪತ್ರಿಕೆಗಳ ಬೆಳವಣಿಗೆಯನ್ನು ತಡೆಯುವ ವಾಗ್ದಾನ.

ಮೇಲ್ನೋಟಕ್ಕೆ ಇವೆಲ್ಲ ಸಾಮಾನ್ಯ ರಾಜಕಾರಣಿಯೊಬ್ಬ ತನ್ನ ಏಳಿಗೆಗೆ ಮಾಡಬಹುದಾದ ಪ್ರಕರಣಗಳು ಎನಿಸುತ್ತವೆ. ಆದರೆ, ಇಸ್ರೇಲ್‌ನಂಥ ರಾಷ್ಟ್ರದಲ್ಲಿ ಇದೆಲ್ಲವೂ ಅಷ್ಟು ಸಮ್ಮತವಾದಂತೆ ತೋರುವುದಿಲ್ಲ. ‘‘ಇದೆಲ್ಲ ನನ್ನ ಎದುರಾಳಿಗಳು ಹಾಗೂ ಪೊಲೀಸ್‌ ವ್ಯವಸ್ಥೆ ರೂಪಿಸಿರುವ ಷಡ್ಯಂತ್ರ,’’ ಎಂದು ನೆತನ್ಯಾಹು ಆರೋಪಿಸುತ್ತಿದ್ದಾರೆ. ಬಲಪಂಥೀಯ ನಾಯಕನಾಗಿ­ರುವುದಕ್ಕೆ ಇಂಥ ಆರೋಪಗಳನ್ನು ಎದುರಿಸಬೇಕಾಗಿದೆ ಎಂದು ಹೇಳುವ ಮೂಲಕ ಇಡೀ ಪ್ರಕರಣವನ್ನು ಸೈದ್ಧಾಂತಿಕ ಸಂಘರ್ಷಕ್ಕೆ ಪರಿವರ್ತಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ, ಒಂದೊಮ್ಮೆ ವಿಚಾರಣೆ ಪೂರ್ಣಗೊಂಡು ತಪ್ಪಿತಸ್ಥರು ಎಂದು ಸಾಬೀತಾದರೆ ಅವರ ರಾಜಕೀಯ ಜೀವನವೇ ಮುಗಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂದು ನೆತನ್ಯಾಹು ಕೋರ್ಟ್‌ ಕಟಕಟೆಯಲ್ಲಿ ನಿಂತಿರಬಹುದು. ಆದರೆ, ಇಂದಿನ ಶಕ್ತಿಶಾಲಿ ಇಸ್ರೇಲ್‌ನ ಹಿಂದೆ ನೆತನ್ಯಾಹು ಅವರ ಕಾರ್ಯಕ್ಷ ಮತೆಯೂ ಸಾಕಷ್ಟಿದೆ. ನಾಲ್ಕು ಬಾರಿ ಪ್ರಧಾನಿಯಾಗಿರುವ ಅವರಿಗೆ ಸೋಲು-ಗೆಲುವು ಹೊಸದಲ್ಲ. ಇಸ್ರೇಲಿಗಳಿಂದ ಪ್ರೀತಿಯಿಂದ ‘ಬೀಬಿ’ ಎಂದು ಕರೆಯಿಸಿಕೊಳ್ಳುವ ನೆತನ್ಯಾಹು ಜನಿಸಿದ್ದು 1949 ಅಕ್ಟೋಬರ್‌ 21ರಂದು ಟೆಲ್‌ ಅವಿವ್‌ನಲ್ಲಿ. ಇವರ ತಂದೆ ಇತಿಹಾಸತಜ್ಞ. ಅಮೆರಿಕದಲ್ಲಿ ಅವರಿಗೆ ಶೈಕ್ಷ ಣಿಕ ರಂಗದಲ್ಲಿ ಉನ್ನತ ಹುದ್ದೆ ದೊರೆತ ಹಿನ್ನೆಲೆಯಲ್ಲಿ ಅವರ ಕುಟುಂಬ 1963ರಲ್ಲಿ ಅಮೆರಿಕಕ್ಕೆ ವಲಸೆ ಹೋಯಿತು. 18ನೇ ವಯಸ್ಸಿಗೆ ನೆತನ್ಯಾಹು ಇಸ್ರೇಲಿಗೆ ಮರಳಿದರು. ಸೇನೆಯಲ್ಲಿ ಐದು ವರ್ಷ ಕಾಲ ಇದ್ದು, ಕಮಾಂಡೊ ಯುನಿಟ್‌ನಲ್ಲಿ ಕ್ಯಾಪ್ಟನ್‌ ಆಗಿದ್ದರು. 1968ರಲ್ಲಿ ನಡೆದ ಬೈರುತ್‌ ಏರ್‌ಪೋರ್ಟ್‌ ಕಾರ್ಯಾ­ಚರಣೆ ಮತ್ತು 1973ರಲ್ಲಿ ನಡೆದ ಮಧ್ಯ ಪ್ರಾಚ್ಯ ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬಳಿಕ ಅವರು ಮತ್ತೆ ಅಮೆರಿಕಕ್ಕೆ ವಾಪಸ್ಸಾದರು. ಆಗಲೇ ಅವರು ಅಮೆರಿಕದ ಮೆಸ್ಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ­(ಎಂಐಟಿ)ಯಿಂದ ಡಿಗ್ರಿ ಮತ್ತು ಮಾಸ್ಟರ್‌ ಡಿಗ್ರಿ ಪಡೆದುಕೊಂಡರು. 1976­ರಲ್ಲಿ ಬೆಂಜಮಿನ್‌ ಸಹೋದರ ಯೋನಾಥನ್‌ ಎಂಟೆಬ್ಬೆ ಕಾರ್ಯಾಚರಣೆ ವೇಳೆ ಹುತಾತ್ಮನಾದ. ಆಗ ಬೆಂಜಮಿನ್‌, ತಮ್ಮ ಸಹೋದರನ ನೆನಪಿಗಾಗಿ ಉಗ್ರ ವಿರೋಧಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಈ ಅವಧಿಯಲ್ಲಿ ಅಮೆರಿಕದಲ್ಲಿ ಇಸ್ರೇಲ್‌ ರಾಯಭಾರಿಯಾಗಿದ್ದ ಮೋಶೆ ಏರೆನ್ಸ್‌ ಅವರ ಕಣ್ಣಿಗೆ ಬಿದ್ದರು. ಮೋಶೆ ಅವರು ಬೆಂಜಮಿನ್‌ ಅವರನ್ನು ತಮ್ಮ ಡೆಪ್ಯುಟಿಯಾಗಿ ನೇಮಕ ಮಾಡಿಕೊಂಡರು. ಅಲ್ಲಿಂದಲೇ ನೆತನ್ಯಾಹು ಅವರ ಸಾರ್ವಜನಿಕ ಬದುಕು ಆರಂಭವಾ­ಯಿತು. ಅಮೆರಿಕದ ಶೈಲಿಯಲ್ಲಿ ಅತ್ಯದ್ಭುತವಾಗಿ ಇಂಗ್ಲಿಷ್‌ ಮಾತನಾಡಬಲ್ಲ ನೆತನ್ಯಾಹು, ಅಮೆರಿಕದ ದೂರದರ್ಶನಗಳಿಂದಾಗಿ ಮನೆ ಮಾತಾದರು. ಅವಕಾಶ ಸಿಕ್ಕಾಗಲೆಲ್ಲ ಇಸ್ರೇಲ್‌ ಪರವಾಗಿ ಪ್ರಬಲ ವಾದ ಮಂಡಿಸುತ್ತಿದ್ದರು. ಇದು ಅವರಿಗೆ ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ಶಾಶ್ವತ ಪ್ರತಿನಿಧಿಯಾಗುವ ಅವಕಾಶವನ್ನು ತಂದುಕೊಟ್ಟಿತು.

1988ರಲ್ಲಿ ಇಸ್ರೇಲ್‌ಗೆ ಮರಳಿ, ಇಸ್ರೇಲ್‌ನ ಸಂಸತ್ತಿಗೆ ಆಯ್ಕೆಯಾದರು. ರಾಜಕೀಯವಾಗಿ ನೆತನ್ಯಾಹು ಅವರು ಬಲಪಂಥೀಯವಾದಿ. 1992ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೆತನ್ಯಾಹು ಪ್ರತಿನಿಧಿಸುತ್ತಿದ್ದ ಲಿಕುಡ್‌ ಪಕ್ಷ ಸೋಲು ಕಂಡಿತು. ಆಗ ಇವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. 1996ರಲ್ಲಿ ಶಿಮೋನ್‌ ಪೆರೆಸ್‌ ಅವರನ್ನು ಸೋಲಿಸಿ ಪ್ರಧಾನಿಯಾಗಿ ಆಯ್ಕೆಯಾದರು. ಇಸ್ರೇಲ್‌ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2001ರಲ್ಲಿ ಏರಿಯಲ್‌ ಶೆರೋನ್‌ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ, ಹಣಕಾಸು ಸಚಿವರಾಗಿ ಕೆಲಸ ಮಾಡಿದರು. ಗಾಜಾ ಪಟ್ಟಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿ­ಕೊಳ್ಳುವುದನ್ನು ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2005ರಲ್ಲಿ ಇಸ್ರೇಲ್‌ ರಾಜಕಾರಣದಲ್ಲಿ ಧ್ರುವೀಕರಣ ಆರಂಭವಾಯಿತು. ಆಗ, ಶರೋನ್‌ ಅವರು ಲಿಕುಡ್‌ ಪಕ್ಷದಿಂದ ಹೊರಬಂದು ಕಡಿಮಾ ಪಕ್ಷ ಆರಂಭಿಸಿದರು. ಲಿಕುಡ್‌ ಪಕ್ಷದ ನಾಯಕತ್ವವನ್ನು ನೆತನ್ಯಾಹು ವಹಿಸಿ­ಕೊಂಡರು. 2009ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. ಆಗ ಇವರದ್ದು ಮೈನಾರಿಟಿ ಸರಕಾರ. 2012ರಲ್ಲಿ ಸಂಸತ್ತನ್ನು ವಿಸರ್ಜಿಸಿ ಅವಧಿಪೂರ್ವ ಚುನಾವಣೆಗೆ ಮುಂದಾದರು. ಇದೇ ವೇಳೆ, ಗಾಜಾ ಬಂಡುಕೋರರ ಮೇಲೆ ಉಗ್ರ ದಾಳಿಗೂ ಆದೇಶಿಸಿದರು. ಎಂಟು ದಿನ ನಡೆದ ಈ ಯುದ್ಧ ಇಸ್ರೇಲ್‌ನ ಅತ್ಯಂತ ಯಶಸ್ವಿ ಕಾರ್ಯಾಚರಣೆ ಎಂದು ದಾಖಲಾಯಿತು. 2013ರಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. 2014ರ ಜುಲೈ ಹೊತ್ತಿಗೆ ಎರಡು ರಾಷ್ಟ್ರಗಳ ಮಧ್ಯೆ ಹಿಂಸಾಚಾರ ಉಲ್ಬಣಗೊಂಡಿತು. 50 ದಿನ ಯುದ್ಧ ನಡೆಯಿತು. 2015ರ ಚುನಾವಣೆಯಲ್ಲಿ ಲಿಕುಡ್‌ ಪಕ್ಷ ಬಹುಮತದೊಂದಿಗೆ ನೆತನ್ಯಾಹು ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ನೆತನ್ಯಾಹು ದಾಖಲೆಯ ನಾಲ್ಕನೇ ಬಾರಿ ಪ್ರಧಾನಿಯಾದರು. ‘ಎಲ್ಲ ಬಣ್ಣ ಮಸಿ ನುಂಗಿತು’ ಎನ್ನುವ ಹಾಗೆ ಅವರೆಲ್ಲ ಪರಾಕ್ರಮಗಳನ್ನು ಭ್ರಷ್ಟಾ­ಚಾರ ಆರೋಪಗಳು, ಕ್ರಿಮಿನಲ್‌ ಪ್ರಕರಣಗಳು ನುಂಗಿ ಹಾಕುತ್ತಿವೆ.

ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ನಿಷ್ಣಾತವಾಗಿರುವ ನೆತ­ನ್ಯಾಹು ಅವರು ಕುತೂಹಲಿ, ವಿನಮ್ರ ಹಾಗೂ ನೆರವಾಗುವ ಗುಣವುಳ್ಳವರು. ಅವರಿಗಿರುವ ಸ್ನೇಹಶೀಲ ಗುಣವೂ ಅಂತಾರಾಷ್ಟ್ರೀಯವಾಗಿ ಅನೇಕ ನಾಯಕರನ್ನು ಇಸ್ರೇಲ್‌ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜಕಾರಣಿ, ಮುತ್ಸದ್ಧಿ, ಚಿಂತಕ, ಅತ್ಯುತ್ತಮ ಆಡಳಿತಗಾರರಾಗಿರುವ ನೆತನ್ಯಾಹುಗೆ ಮೂರು ಬಾರಿ ಮದುವೆಯಾಗಿದೆ. ಮೊದಲ ಹೆಂಡತಿಯ ಹೆಸರು ಮಿರಿಯಾಮ್‌ ವೀಜ್ಮನ್‌, ಎರಡನೇ ಹೆಂಡತಿ ಫ್ಲೇರ್‌ ಕೇಟ್ಸ್‌ ಮತ್ತು ಮೂರನೇ ಹೆಂಡತಿ ಸಾರಾ ಬೆನ್‌ ಆಟ್ರ್ಜಿ. ಮೊದಲ ಇಬ್ಬರಿಗೆ ಡಿವೋರ್ಸ್‌ ನೀಡಿದ್ದಾರೆ. ರಾಜಕೀಯ ಚಾಣಾಕ್ಷನಾಗಿರುವ ನೆತನ್ಯಾಹು ಅಷ್ಟೇ ಸಶಕ್ತ ಬರಹಗಾರರೂ ಹೌದು. ‘ಇಂಟರ್‌ನ್ಯಾಷನಲ್‌ ಟೆರರಿಸಮ್‌: ಚಾಲೆಂಜ್‌ ಆ್ಯಂಡ್‌ ರೆಸ್ಪಾನ್ಸ್‌’ ಸೇರಿ ನಾಲ್ಕು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.

2019ರ ಎಲೆಕ್ಷ ನ್‌ನಲ್ಲಿ ಪೂರ್ಣ ಬಹುಮತ ಬಾರದ್ದರಿಂದ ನೆತನ್ಯಾಹು ತಮ್ಮ ಎದುರಾಳಿ ಬೆನ್ನಿ ಗ್ಯಾಂಟ್ಜ್‌ ಜೊತೆಗೂಡಿ ಸರಕಾರ ರಚಿಸಿದ್ದರು. ಒಪ್ಪಂದದಂತೆ 18 ತಿಂಗಳ ಬಳಿಕ ಅಂದರೆ, 2020 ನವೆಂಬರ್‌ 17ಕ್ಕೆ ಬೆನ್ನಿ ಗ್ಯಾಂಟ್ಜ್‌ಗೆ ಪ್ರಧಾನಿ ಹುದ್ದೆ ಬಿಟ್ಟುಕೊಡಲಿದ್ದಾರೆ. ಆದರೆ, ಈಗಿನ ಬೆಳವಣಿಗೆಗೆಳು ಇಸ್ರೇಲನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಿವೆ ಕಾದು ನೋಡಬೇಕು.

ಭಾನುವಾರ, ಮೇ 17, 2020

Shailaja Teacher-Coronavirus Slayer ವೈರಸ್‌ಗೆ ತಕ್ಕ ಪಾಠ ಕಲಿಸಿದ ಟೀಚರ್

ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲೀಗ ಬಹುತೇಕ ಸೋಂಕು ಹತೋಟಿಗೆ ಬಂದಿದೆ. ಈ ಯಶಸ್ಸಿಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ದೂರದೃಷ್ಟಿ, ಮಾರ್ಗದರ್ಶನ ಮತ್ತು ಪ್ರಯತ್ನವೇ ಕಾರಣ.



- ಮಲ್ಲಿಕಾರ್ಜುನ ತಿಪ್ಪಾರ
ಕೆ.ಕೆ.ಶೈಲಜಾ ಅಂದರೆ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದೇ ‘ಶೈಲಜಾ ಟೀಚರ್’ ಎಂದರೆ ಸಾಕು, ಕೇರಳ ಮಾತ್ರವಲ್ಲ, ಇಡೀ ದೇಶದ ಜನರ ಕಣ್ಣು ಮುಂದೆ ಅವರ ಮುಖ ಸುಳಿಯುತ್ತದೆ. ಇಡೀ ಜಗತ್ತೇ ಕೊರೊನಾ ವಿರುದ್ಧ ಸೆಣೆಸಾಡುತ್ತಿರುವಾಗ ಕೇರಳದ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆಯಾಗಿರುವ ಶೈಲಜಾ ಟೀಚರ್ ಅವರು ಸದ್ದಿಲ್ಲದೇ ಕೊರೊನಾ ವೈರಸ್ ದೇವರ ನಾಡಿನಲ್ಲಿ ವ್ಯಾಪಕವಾಗಿ ಹರಡದಂತೆ ಮಾಡುವಲ್ಲಿಯಶಸ್ವಿಯಾಗಿದ್ದಾರೆ.

ಚೀನಾದಲ್ಲಿಕೊರೊನಾ ವೈರಸ್ ರುದ್ರನರ್ತನ ಮಾಡುತ್ತಿದ್ದಾಗಲೇ ತಮ್ಮ ರಾಜ್ಯಕ್ಕೂ ಕಾಲಿಟ್ಟರೆ ಏನೇನು ಮಾಡಬೇಕೆಂಬ ಎಲ್ಲಯೋಜನೆಗಳನ್ನು ಪಕ್ಕಾ ಮಾಡಿಕೊಂಡೇ ಇದ್ದರು 63 ವರ್ಷದ ಈ ಟೀಚರ್. ಅವರ ಎಣಿಕೆಯಂತೆ ಇಡೀ ದೇಶದಲ್ಲೇ ಪ್ರಥಮ ಕೊರೊನಾ ಸೋಂಕು  ಪತ್ತೆಯಾಗಿದ್ದು ಕೇರಳದಲ್ಲಿ! ಆದರೆ, ಈಗ ಬೇರೆ ಯಾವುದೇ ರಾಜ್ಯಕ್ಕಿಂತಲೂ ಅತ್ಯಂತ ಪರಿಣಾಮಕಾರಿಯಾಗಿ ಕೊರೊನಾಧಿವನ್ನು ನಿಯಂತ್ರಿಸಿದ ಕೀರ್ತಿ ಕೇರಳಕ್ಕೆ ಸಲ್ಲುತ್ತದೆ. ಇದರ ಹಿಂದೆ ಪಿಣರಾಯಿ ವಿಜಯನ್ ಸರಧಿಕಾರ, ಶೈಲಜಾ ಟೀಚರ್ ಮತ್ತು ಕೇರಳಿಗರಿದ್ದಾರೆ.

ಚೀನಾದಲ್ಲಿಕೊರೊನಾ ವೈರಸ್ ಭೀಕರತೆ ವರದಿಯಾಗುತ್ತಿದ್ದ ಜನವರಿಯ ದಿನಗಳವು. ಈ ಬಗ್ಗೆ ಮಾಹಿತಿ ಪಡೆದ ಶೈಲಜಾ ಟೀಚರ್ ಜನವರಿ 20ರಂದು ತಮ್ಮ ಅಧೀನ ಆರೋಗ್ಯ ಅಧಿಕಾರಿಗಳಿಗೆ ಕರೆ ಮಾಡಿ, ‘‘ಕೊರೊನಾ ವೈರಸ್ ನಮ್ಮಲ್ಲೂ(ಕೇರಳ) ಬರುತ್ತಾ?’’ ಎಂದು ಕೇಳುತ್ತಾರೆ. ಅದಕ್ಕೆ ಅಧಿಕಾರಿ, ‘‘ಖಂಡಿತ ಮೇಡಂ,’’ ಎಂದು ಹೇಳುತ್ತಾರೆ. ಇಷ್ಟು ಮಾಹಿತಿ ಗೊತ್ತಾಗುತ್ತಿದ್ದಂತೆ ಶೈಲಜಾ ಅವರು ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇದು ಶೈಲಜಾ ಅವರು ಸಂಭಾವ್ಯ ಸಮಸ್ಯೆಯೊಂದನ್ನು ಗುರುತಿಸಿ, ಅದರ ಪರಿಹಾರ ಕುರಿತು ಯೋಚಿಸಿದ ರೀತಿಗೆ ಉದಾಹರಣೆಯಷ್ಟೇ.
ಚೀನಾದ ವುಹಾನ್ ಸಿಟಿಯಲ್ಲಿಸಿಲುಕಿದ್ದ ವಿದ್ಯಾರ್ಥಿಗಳು ಸೇರಿದಂತೆ ಇತರ ದೇಶಗಳಲ್ಲಿರುವ ಕೇರಳಿಗರನ್ನು ಕರೆಯಿಸಿಕೊಳ್ಳುತ್ತದೆ ಕೇರಳ ಸರಕಾರ. ಜನವರಿ 30ರಂದು ವುಹಾನ್ನಿಂದ ಬಂದ ವಿದ್ಯಾರ್ಥಿಗಳ ಪೈಕಿ ಮೂವರಿಗೆ ಸೋಂಕು ಪತ್ತೆಯಾಗುತ್ತದೆ ಮತ್ತು ಇದು ದೇಶದ ಮೊದಲ ಕೊರೊನಾ ಕೇಸ್. ಇಷ್ಟೊತ್ತಿಗಾಗಲೇ ಚೀನಾದಲ್ಲಿವೈರಸ್ನ ವಿರಾಟ್ ರೂಪ ಗೋಚರಿಸಿತ್ತು. ಇದನ್ನು ಕಂಡ ಶೈಲಜಾ ಅವರು ವೈದ್ಯಕೀಯ ತಂಡಗಳನ್ನು ರಚನೆ ಮಾಡಿಕೊಂಡು ಸೋಂಕು ಹರಡುವುದನ್ನು ತಡೆಯುವ ಕೈಂಕರ್ಯಕ್ಕೆ ಮುಂದಾದರು. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಮಾರ್ಗದರ್ಶಿ ಪ್ರಕಾರ ಸೋಂಕು ತೀವ್ರವಾಗಿ ಹಬ್ಬುವುದನ್ನು ತಪ್ಪಿಸಲು ‘ಬ್ರೇಕ್ ದಿ ಚೈನ್’ಗೆ ಮುಂದಾದರು. ಕೇರಳದಲ್ಲಿಈ ಬಗ್ಗೆ ವ್ಯಾಪಕ ಪ್ರಚಾರ ಮಾಡಿ, ಸಾಮಾಜಿಕ ಅಂತರವನ್ನು ಜಾರಿಗೊಳಿಸಲಾಯಿತು. ಕೇಂದ್ರ ಸರಕಾರ ಹೇರಿದ ಲಾಕ್ಡೌನ್ ಕಾಲಾವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಸೋಂಕಿತರ ಕೇಸ್ ಹಿನ್ನಲೆ, ಅವರ ಪ್ರವಾಸದ ಇತಿಹಾಸವನ್ನು ಪತ್ತೆ ಹಚ್ಚಿ ಅವರು ಯಾರೊಂದಿಗೆ ಸಂಪರ್ಕ ಬಂದಿದ್ದಾರೋ ಅವರನ್ನೆಲ್ಲಕ್ವಾರಂಟೈನ್ ಮಾಡಲಾಯಿತು. ಹೀಗೆ ಸಾಧ್ಯವಿರುವ ಎಲ್ಲಪರಿಹಾರೋಪಾಯಗಳನ್ನು ಜಾರಿಗೆ ತರುವ ಮೂಲಕ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲಾಯಿತು.
ಕೊರೊನಾ ನಿಯಂತ್ರಣದ ಎಲ್ಲಕೆಲಸವನ್ನು ಶೈಲಜಾರೊಬ್ಬರೇ ಮಾಡಿದರಂತಲ್ಲ. ಅಧಿಕಾರಿಗಳ ತಂಡಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರು. ಅವರ ಯೋಜನೆಗಳಲ್ಲಿಸ್ಪಷ್ಟತೆ ಇತ್ತು. ಯಾಕೆಂದರೆ, 2018ರಲ್ಲಿ ಕೇರಳದಲ್ಲಿಕಾಣಿಸಿಕೊಂಡಿದ್ದ ‘ನಿಫಾ ವೈರಸ್’ ನಿರ್ವಹಣೆ ಮಾಡಿದ ಅನುಭವ ಈಗ ಹೆಚ್ಚು ಉಪಯೋಗಕ್ಕೆ ಬಂತು ಎನ್ನುತ್ತಾರೆ ರಾಜಕೀಯ ಪಂಡಿತರು. ಕ್ಯಾಲಿಕಟ್ನ ಹಳ್ಳಿಧಿಯೊಂದರಲ್ಲಿ ನಿಫಾ ಸೋಂಕು ಪತ್ತೆಧಿಯಾಗಿದ್ದಾಗ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದರು. ಆಗ, ಈ ಟೀಚರ್ ತಮ್ಮ ವೈದ್ಯಕೀಯ ತಂಡಗಳೊಂದಿಗೆ ಆ ಹಳ್ಳಿಗೆ ತೆರಳಿ, ನಿಫಾ ಗಾಳಿಯಿಂದ ಹರಡುವುದಿಲ್ಲ. ಅದು ಸಂಪರ್ಕದಿಂದ ಬರುವಂಥದ್ದು ಎಂದು ಮನವರಿಕೆ ಮಾಡಿಕೊಟ್ಟರು. ಆ ಮೂಲಕ ಹಳ್ಳಿಯ ಜನರಿಗೆ ಧೈರ್ಯ ತುಂಬಿದರು. ಹಳ್ಳಿಗರು ವೈದ್ಯಕೀಯ ತಂಡಗಳಿಗೆ ಸಹಕಾರ ನೀಡಿದ ಪರಿಣಾಮ ವ್ಯಾಪಕವಾಗಬಹುದಾಗಿದ್ದ ನಿಫಾ ವೈರಸ್ ಅನ್ನು ಆರಂಭದಲ್ಲಿ ಸಂಹರಿಸಿದರು. ಎರಡೆರಡು ವೈರಸ್ಗಳನ್ನು ಸಂಹರಿಸಿರುವ ಶೈಲಜಾ ಟೀಟರ್ಗೆ ಇದೀಗ ‘ಕೊರೊನಾವೈರಸ್ ಸ್ಲೇಯರ್’(corona virus slayer) ಎಂಬ ಮತ್ತೊಂದು ಅನ್ವರ್ಥಕ ಅಂಟಿಕೊಡಿದೆ. ‘ಸ್ಲೇಯರ್’ ಅಂದರೆ ‘ಹಂತಕ’ ಎಂಬರ್ಥವಿದೆ.

1956 ನವೆಂಬರ್ 20ರಂದು ಶೈಲಜಾ ಜನಿಸಿದರು. ತಂದೆ ಕೆ. ಕುಂದನ್ ಮತ್ತು ತಾಯಿ ಕೆ.ಕೆ.ಶಾಂತಾ. ಶೈಲಜಾ ಅವರ ಅಜ್ಜಿ ಅಸ್ಪೃಶ್ಯತೆ ನಿವಾರಣೆ ಹೋರಾಟದಲ್ಲಿತೊಡಗಿಸಿಕೊಂಡಿದ್ದರು. ಇವರ ಕುಟುಂಬಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿಪಾಲ್ಗೊಂಡ ಹಿನ್ನೆಲೆ ಇದೆ. ಕಣ್ಣೂರು ಜಿಲ್ಲೆಯ ಮಟ್ಟನೂಧಿರಿನ ಪಳಸಿರಾಜಾ ಎನ್ಎಸ್ಎಸ್ ಕಾಲೇಜಿನಿಂದ ವಿಜ್ಞಾನದಲ್ಲಿಪದವಿ ಪಡೆದ ನಂತರ 1980ರಲ್ಲಿವಿಶ್ವೇಶರಾಯ ಕಾಲೇಜು ಸೇರಿ, ಬಿಎಡ್ ಶಿಕ್ಷ ಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಅವರು ಎಡರಂಗ ಪಕ್ಷ ಗಳ ಸಂಘಟನೆಯಾದ ಎಸ್ಎಫ್ಐ ಸೇರಿ ಕೆಲಸ ಮಾಡಿದರು. ಅಲ್ಲಿಂದಲೇ ಅವರ ರಾಜಕೀಯ ಜೀವನಕ್ಕೆ ನಾಂದಿಯೂ ದೊರೆಯಿತು. ಮುಂದೆ ಶಿಕ್ಷ ಣ ಪೂರೈಸಿ ಏಳು ವರ್ಷ ಕಣ್ಣೂರಿನ ಶಿವಪುರಂ ಹೈಸ್ಕೂಲ್ನಲ್ಲಿವಿಜ್ಞಾನ ಶಿಕ್ಷ ಕಿಯಾಗಿ ಸೇವೆ ಸಲ್ಲಿಸಿದರು. ಶೈಲಜಾ ಅವರಿಗೆ ಅಲ್ಲಿದೊರೆತ ‘ಟೀಚರ್’ ಅನ್ವರ್ಥಕ ನಾಮ ಈಗಲೂ ಮುಂದುವರಿದಿದೆ. 2004ರಲ್ಲಿಶೈಲಜಾ ಅವರು ಸಿಪಿಎಂನ ಕೇಂದ್ರ ಸಮಿತಿ ಸದಸ್ಯರಾದರು. ಜೊತೆಗೆ, ಆಲ್ ಇಂಡಿಯಾ ಡೆಮಾಕ್ರಟಿಕ್ ವುಮನ್ಸ್ ಅಸೋಷಿಯೇಷನ್ ರಾಜ್ಯ ಕಾರ್ಯದರ್ಶಿಧಿಯಾಗಿ, ಇದೇ ಸಂಘಟನೆಯ ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಸದಾ ರಾಜಕೀಯ ಚಟುವಟಿಕೆಯಲ್ಲಿದ್ದರೂ ಅವರು ‘ಇಂಡಿಯನ್ ವರ್ಧಮಾನವಂ ಸ್ತ್ರೀಸಮ್ಮೋಹಮ್’ ಮತ್ತು ‘ಚೀನಾ- ರಾಷ್ಟ್ರಂ, ರಾಷ್ಟ್ರೀಯಂ, ಕಳಕಲ್’ ಎಂಬೆರಡು ಪುಸ್ತಕಗಳನ್ನು ಬರೆದಿದ್ದಾರೆ.
1996ರಲ್ಲಿಚುನಾವಣಾ ರಾಜಕೀಯಕ್ಕೆ ಧುಮುಕಿದ ಅವರು ಅದೇ ವರ್ಷ, ಕಣ್ಣೂರು ಜಿಲ್ಲೆಯ ಕೂತುಪರಂಬಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೇರಳ ವಿಧಾನಸಭೆಗೆ ಆಯ್ಕೆಯಾದರು. ಬಳಿಕ 2006ರಲ್ಲಿಪೆರವೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮತ್ತೆ 2016ರಲ್ಲಿತಮ್ಮ ಕೂತುಪರಂಬಾ ಕ್ಷೇತ್ರಕ್ಕೆ ಮರಳಿದರು ಮತ್ತು ಗೆದ್ದರು. ಪಿಣರಾಯಿ ವಿಜಯನ್ ಸರಕಾರದಲ್ಲಿರುವ ಇಬ್ಬರು ಮಹಿಳಾ ಸಚಿವೆಯರ ಪೈಕಿ ಇವರು ಒಬ್ಬರು. ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಇಲಾಖೆಯ ಹೊಣೆ ಹೊತ್ತಿದ್ದಾರೆ. ಅಂದ ಹಾಗೆ, ಶೈಲಜಾ ಟೀಚರ್ ಅವರು ‘ಸ್ತ್ರೀ ಶಬ್ದಂ’ ಮಾಸಿಕದ ಮುಖ್ಯ ಸಂಪಾದಕಿ ಆಗಿದ್ದರು. ಶೈಲಜಾ ಅವರ ಪತಿ ಕೆ ಬಾಲಕೃಷ್ಣನ್. ಶೋಭಿತ್ ಮತ್ತು ಲಸಿತ್ ಎಂಬ ಮಕ್ಕಳಿದ್ದಾರೆ.

ನಮ್ಮ ರಾಜ್ಯದ ವೈದ್ಯಕೀಯ ಶಿಕ್ಷ ಣ ಸಚಿವ ಡಾ.ಕೆ.ಸುಧಾಕರ್ ಅವರೂ ಶೈಲಜಾ ಟೀಚರ್ ಅವರೊಂದಿಗೆ ಸಂವಾದಿಸಿ, ಕೊರೊನಾ ವಿರುದ್ಧ ಹೋರಾಟದ ಅನುಭವದ ಮಾಹಿತಿ ಪಡೆದುಕೊಂಡಿದ್ದು ಸುದ್ದಿಯಾಗಿತ್ತು. ನಿಜವಾಗಲೂ ಅವರೊಬ್ಬ ಧೈರ್ಯಶಾಲಿ ‘ಕೊರೊನಾ ವಾರಿಯರ್’. ಅವರ ಕೆಲಸವೂ ಅನುಕರಣೀಯ. ಹಾಗಾಗಿಯೇ ಅನೇಕ ರಾಜ್ಯಗಳು ಕೊರೊನಾ ವಿರುದ್ಧ ಹೋರಾಟದಲ್ಲಿಅವರ ಮಾರ್ಗದರ್ಶ ಪಡೆಯುತ್ತಿವೆ. ಅವರು ಮಾಡಿದ ಕೆಲಸವು ಅವರನ್ನು ಅಂತಾಧಿರಾಷ್ಟ್ರೀಯವಾಗಿ ಗುರುತಿಸುವಂತೆ ಮಾಡಿದೆ. ಜಗತ್ತಿನಾದ್ಯಂತ ಕೊರೊನಾ ವಿರುದ್ಧ ಹೋರಾಟಗಾರರನ್ನು ಗುರುತಿಸಿರುವ ಬಿಬಿಸಿ, ಭಾರತದಿಂದ ಶೈಲಜಾ ಟೀಚರ್ ಅವರನ್ನು ಹೆಸರಿಸಿದೆ. ‘ದೇವರನಾಡಲ್ಲಿ ದೆವ್ವ’ (ವೈರಸ್)ದ ಉಪಟಳವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಅವರ ಅನುಭವ ಮತ್ತು ಮಾರ್ಗದರ್ಶನ ಇಡೀ ದೇಶಕ್ಕೂ ಸಿಗಲಿ.

(This article has been published in Vijay Karnataka on 17th of May 2020 edition)

ಸೋಮವಾರ, ಮೇ 11, 2020

Learn to Live With Corona virus ಕೊರೊನಾ ಜತೆಗೇ ನಡೆಯಲಿ ಜೀವನ

- ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ

Yes, the show must go on...
ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್ಯಕ್ಕೆ ಈ ಕೊರೊನಾಗೆ ಪರಿಹಾರವಿಲ್ಲ. ಇರುವ ಪರಿಹಾರ ಮಾರ್ಗಗಳನ್ನು ಅಳವಡಿಸಿ, ಬಳಸಿ ನೋಡಿದ್ದಾಯಿತು. ಈ ಅನುಭವ ಹಾಗೂ ಈ ಹಿಂದಿನ ರೋಗಗಳ ಇತಿಹಾಸದ ಹಿನ್ನೆಲೆಯಲ್ಲಿನಾವೀಗ ಕಂಡುಕೊಳ್ಳಬೇಕಾಗಿರುವ ಸತ್ಯ; ನಮ್ಮ ಬದುಕು ಇನ್ನೇನಿದ್ದರೂ ಕೊರೊನಾ ಜೊತೆಗೇ ನಡೆಯಬೇಕು. ಆದರೆ, ಅದಕ್ಕೊಂದು ಕ್ರಮ ವಿಧಿಸಿಕೊಳ್ಳಬೇಕಷ್ಟೇ.
ಕೊರೊನಾ ವೈರಸ್ಗಿಂತಲೂ ಮಿಗಿಲಾದ, ಅತಿಭಯಂಕರ ವೈರಸ್ಗಳನ್ನು ಈ ಜಗತ್ತು ಕಂಡಿದೆ. ಕಡು ಕಷ್ಟ, ನಷ್ಟ ಅನುಭವಿಸಿದೆ. ಅಂಥ ಕಾಯಿಲೆಗಳನ್ನೂ ಅರಗಿಸಿಕೊಂಡಿದೆ, ಅವುಗಳ ವಿರುದ್ಧ ಜಯ ಸಾಧಿಸಿದೆ. ಸಿಡುಬು, ಮಾರ್ಬರ್ಗ್ ವೈರಸ್, ಎಬೋಲಾ ವೈರಸ್, ರೇಬಿಸ್, ಎಚ್ಐವಿ, ಹಂಟಾ ವೈರಸ್, ಇನ್ಫ್ಲುಂಯೆಜಾ, ಡೆಂಗೆ, ರೋಟಾ ವೈರಸ್, ಸಾರ್ಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ಲೇಗ್, ಕಾಲರಾದಂಥ ಕಾಯಿಲೆಗಳು ಶತಮಾನಗಳವರೆಗೂ ನರಸಂಕುಲವನ್ನು ಹಿಂಡಿ ಹಿಪ್ಪೆ ಮಾಡಿವೆ. ಆದರೂ, ಮನುಷ್ಯ ತನ್ನ ಬದುಕನ್ನು ರೂಪಿಸಿಕೊಳ್ಳಲಿಲ್ಲವೇ? ನಾಗರಿಕತೆಯನ್ನು ವಿಸ್ತರಿಸಲಿಲ್ಲವೇ? ಅಸಾಧ್ಯವಾದುದನ್ನು ಸಾಧಿಸಲಿಲ್ಲವೇ? ಈಗಲೂ ಹಾಗೆಯೇ, ನಾವು ಈ ಕೊರೊನಾ ಜತೆಗೆ ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.
ಯಾವುದೇ ಹೊಸ ವೈರಸ್ನಿಂದ ಕಾಯಿಲೆ ಹುಟ್ಟಿಕೊಂಡಾಗ ಇಡೀ ಜಗತ್ತು ತಲ್ಲಣಗೊಳ್ಳುವುದು ಸಹಜ. ಈಗಲೂ ಹಾಗೆಯೇ ಆಗುತ್ತಿದೆ. ನಾವೆಲ್ಲರೂ ಭಯದಿಂದಲೇ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ. ಈ ಹಿಂದೆ ತಲ್ಲಣಗೊಳಿಸಿದ್ದ ವೈರಸ್ಗಳಿಗೆ ಹೋಲಿಸಿದರೆ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ತುಂಬ ಕಡಿಮೆ. ಫ್ಲೂನಿಂದಲೇ ಪ್ರತಿ ವರ್ಷಕ್ಕೆ 10ರಿಂದ 15 ಸಾವಿರ ಜನರು ಸಾಯುತ್ತಾರೆ, ರಸ್ತೆ ಅಪಘಾತಗಳಲ್ಲಿಸಾಯುವರೂ ಸಂಖ್ಯೆ ಇದಕ್ಕಿಂತ ಎರಡು ಪಟ್ಟು ಹೆಚ್ಚು. ಇದಾವುದು ನಮಗೆ ಭಯವನ್ನು ಹುಟ್ಟಿಸುವುದಿಲ್ಲ. ಹೊಸದಾಗಿ ಕಾಡುತ್ತಿರುವ ಈ ಕೊರೊನಾ ಮಾತ್ರ ಎಲ್ಲಿಲ್ಲದ ಭೀತಿಯನ್ನು ಹುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ- ಮದ್ದಿಲ್ಲದಿರುವುದು ಮತ್ತು ಅತ್ಯಂತ ವೇಗವಾಗಿ ಹರಡುವುದು. ಆದರೆ, ಒಂದು ಮಾತನ್ನು ನೆನಪಿಡಿ. ಕೊರೊನಾದಿಂದಲೇ ನಮ್ಮ ಬದುಕು ನಿಂತು ಹೋಗುವುದಿಲ್ಲ; ಜಗತ್ತು ನಾಶವಾಗುವುದಿಲ್ಲ. ವಿನಾಕಾರಣ ಭಯಪಡಬೇಕಾದ ಅಗತ್ಯವಿಲ್ಲ. ಇದೇ ಅಭಿಪ್ರಾಯವನ್ನು ಪದ್ಮಶ್ರೀ ಪುರಸ್ಕೃತ ಖ್ಯಾತ ವೈದ್ಯ ಬಿ.ಎಂ. ಹೆಗ್ಡೆ ಅವರು ಹೊಂದಿದ್ದಾರೆ. ಸಂದರ್ಶನವೊಂದರಲ್ಲಿಅವರು, ‘‘ಕೊರೊನಾ ಭೂತವಲ್ಲ. ಹೆದರಬೇಡಿ. ಅದೊಂದು ಕಾಯಿಲೆ. ಬರುತ್ತದೆ. ಹೋಗುತ್ತದೆ. ಹಾಗಂತ ನಿರ್ಲಕ್ಷ ್ಯ ಮಾಡುವುದು ಬೇಡ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಎಚ್ಚರಿಕೆ ಇರಲಿ,’’ ಎನ್ನುತ್ತಾರೆ.
ಹೆಗ್ಡೆ ಅವರ ಮಾತುಗಳು ಅಕ್ಷ ರಶಃ ಸತ್ಯ. ನಮ್ಮೊಳಗೆ ಹುಟ್ಟುವ ಹೆದರಿಕೆ ನಮ್ಮನ್ನು ಕೊಂದು ಹಾಕುತ್ತದೆ. ಹಾಗಂತ, ‘ತಲೆ ಗಟ್ಟಿ ಇದೆ ಎಂದು ಬಂಡೆಗಲ್ಲಿಗೆ ಡಿಕ್ಕಿ ಹೊಡೆಯುವ ಅಗತ್ಯವಿಲ್ಲ’. ಕಾರಣವಿಲ್ಲದೇ ಕೊರೊನಾ ಕುರಿತು ಭಯಗೊಳ್ಳುವುದು ಬೇಡ. ಭವಿಷ್ಯದ ಸ್ಥಿತಿಯನ್ನು ನೆನೆದುಕೊಂಡು ನಮ್ಮೊಳಗಿನ ಧೀಃಶಕ್ತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ.



ಲಾಕ್ಡೌನ್ವೊಂದೇ ಪರಿಹಾರವಲ್ಲ
ಕೊರೊನಾ ನಿಯಂತ್ರಣಕ್ಕೆ ಈಗಿರುವ ಸದ್ಯ ಪರಿಹಾರ ‘ಬ್ರೇಕ್ ದಿ ಚೈನ್’ ಅಂದರೆ, ಸೋಂಕಿತರನ್ನು ಪ್ರತ್ಯೇಕವಾಗಿಸಿ, ವೈರಸ್ ಹರಡುವುದನ್ನು ತಡೆಯುವುದು. ಅದಕ್ಕಾಗಿ ಇಡೀ ದೇಶವನ್ನು ಲಾಕ್ಡೌನ್ ಮಾಡಿ, ಮೂರು ಬಾರಿ ಅದನ್ನು ವಿಸ್ತರಿಸಲಾಗಿದೆ. ಆದರೆ, ಇದೊಂದೇ ಪರಿಹಾರವಲ್ಲ. ಲಾಕ್ಡೌನ್ ವಿಸ್ತರಿಸುತ್ತ ಹೋದರೆ ನಮ್ಮ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದು, ಇಡೀ ದೇಶವೇ ನರಳಬೇಕಾಗಬಹುದು. ಈಗಾಗಲೇ, ಲಾಕ್ಡೌನ್ ಎಫೆಕ್ಟ್ ಅನ್ನು ದೇಶ ಅನುಭವಿಸುತ್ತಿದೆ. ಹಾಗಾಗಿ, ನಮ್ಮ ಮುಂದಿರುವ ಏಕೈಕ ದಾರಿ, ಕೊರೊನಾದೊಂದಿಗೆ ಬದುಕುವುದು. ‘‘ನಾವಿನ್ನು ಕೊರೊನಾ ಜತೆಗಿನ ಬದುಕನ್ನು ಕಲಿಯಬೇಕಿದೆ,’’ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು ಈ ನೆಲೆಯಲ್ಲಿ. ಯಾಕೆಂದರೆ, ಲಾಕ್ಡೌನ್ ಹೊರತಾಗಿಯೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂದರೆ, ಅದು ತನ್ನ ತುತ್ತ ತುದಿ ತಲುಪಿಯೇ ಕೆಳಗಿಳಿಯುವುದು ಈಗಿನ ಟ್ರೆಂಡ್ ನೋಡಿದರೆ ಗೊತ್ತಾಗುತ್ತದೆ. ಈಗಾಗಲೇ ಚೀನಾ, ಇಟಲಿ, ಇರಾನ್, ಸ್ಪೇನ್ ರಾಷ್ಟ್ರಗಳಲ್ಲೂಹೀಗೆ ಆಗಿದೆ. ಅಲ್ಲೆಲ್ಲಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಮದ್ದಿದ್ದರೆ ಬೇರೆಯಾಗಿರುತ್ತಿತ್ತು ಕತೆ
ಒಂದು ವೇಳೆ ಕೊರೊನಾ ವೈರಸ್ಗೆ ಮದ್ದು ಇದ್ದರೆ ಈಗಿರುವ ಪರಿಸ್ಥಿತಿ ಉದ್ಭವ ಆಗುತ್ತಿರಲಿಲ್ಲ. ಆರ್ಥಿಕ ಕುಸಿತವೂ ಇರುತ್ತಿರಲಿಲ್ಲ. ಹಾಗಾಗಿ, ಸಾಮಾಜಿಕ ಅಂತರೊಂದಿಗೆ, ಕೊರೊನಾ ಜೊತೆಗೆ ನಮ್ಮ ಜೀವನವನ್ನು ಮರು ರೂಪಿಸಿಕೊಳ್ಳಬೇಕು. ಈಗಿರುವ ಪರಿಹಾರ ಎಂದರೆ, ಎಷ್ಟು ಸಾಧ್ಯವೇ ಅಷ್ಟು ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಡಾ. ಬಿ.ಎಂ. ಹೆಗ್ಡೆ ಅವರು ಈ ಕುರಿತು ಹೇಳಿರುವ ಸಂಗತಿಗಳು ಅನ್ವಯಕಗಳಾಗಿವೆ. ‘‘ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮೊದಲನೆಯದಾಗಿ ಸಾವಧಾನಿಯಾಗಿರಬೇಕು. ಮನಸ್ಸಿನಲ್ಲಿದ್ವೇಷ ಭಾವನೆ ಇರಬಾರದು. ಎಂಥದ್ದೇ ಸಂದರ್ಭದಲ್ಲಿಸಮಚಿತ್ತದಿಂದಿರಬೇಕು. ಎರಡನೆಯದಾಗಿ ಆಹಾರ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯನ್ನು ನಾವು ಅನುಸರಿಸಿದರೆ ಒಳ್ಳೆಯದು. ಮೂರನೆಯದು ವಿಶ್ರಾಂತಿ. ದೇಹಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲವಿಶ್ರಾಂತಿ ಅಗತ್ಯ. ಹೀಗೆ ಮಾಡಿದರೆ, ಖಂಡಿತವಾಗಿಯೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಒಂದೊಮ್ಮೆ ವೈರಸ್ ಸೋಂಕಿತವಾದರೂ ನಾವುದನ್ನು ಮೆಟ್ಟಿ ನಿಲ್ಲಬಹುದು’’ ಎನ್ನುತ್ತಾರೆ ಡಾ. ಬಿ.ಎಂ ಹೆಗ್ಡೆ ಅವರು.

ಉಳಿದಿರುವ ದಾರಿಗಳಾದರೂ ಯಾವುವು?
ಮದ್ದಿಲ್ಲದೇ ಕೊರೊನಾವಂತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಮಗೆ ಉಳಿದಿರುವ ದಾರಿಗಳಾದರೂ ಏನಿವೆ? ಒಂದೊ, ಕೊರೊನಾವನ್ನು ಹರ್ಡ್ ಇಮ್ಯುನಿಟಿ (ಸಮುದಾಯ ಪ್ರತಿರೋಧ ಶಕ್ತಿ) ಮೂಲಕ ತಡೆಯಬಹುದು. ಭಾರತದಂಥ ರಾಷ್ಟ್ರದಲ್ಲಿಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಬಲ್ಲದು. ಇದನ್ನು ಹೊರತುಪಡಿಸಿದರೆ, ಸೋಂಕು ತಗುಲಿಸಿಕೊಳ್ಳದಂತೆ ವೈಯಕ್ತಿಕ ನೆಲೆಯಲ್ಲಿನಾವೇ ಎಚ್ಚರ ವಹಿಸುವುದು. ಅಂದರೆ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸುವುದು. ಎಷ್ಟು ಸಾಧ್ಯವೋ ಅಷ್ಟು ಜನ ಜಂಗುಳಿಯಾಗದಂತೆ ನೋಡಿಕೊಳ್ಳುವುದು. ಮದ್ದು ಸಿಗೋವರೆಗೂ ಇವಿಷ್ಟೇ ಪರಿಹಾರಗಳು. ಅಲ್ಲಿತನಕ ನಾವು ಕೊರೊನಾದೊಂದಿಗೆ ಹೆಜ್ಜೆ ಹಾಕೋಣ.

(ಈ ಲೇಖನ ವಿಜಯ ಕರ್ನಾಟಕದ 2020 ಮೇ 11ರ ಸಂಚಿಕೆಯಲ್ಲಿ ಪ್ರಕಟವಾಗಿದೆ)

ಶುಕ್ರವಾರ, ಮೇ 1, 2020

For in my dreams, you have no end- ನನ್ನ ಕನಸುಗಳಲ್ಲಿ ನಿನಗೆ ಅಂತ್ಯವೇ ಇಲ್ಲ...

ನಾನು ಮೌನದಲ್ಲಿ ನಿನ್ನನ್ನು ಪ್ರೀತಿಸುವೆ,
ಯಾಕೆಂದರೆ, ಮೌನದಲ್ಲಿ ತಿರಸ್ಕಾರದ ಭಯವೇ ಇಲ್ಲ.

ನಿನ್ನನ್ನು ಪ್ರೀತಿಸಲು ಏಕಾಂಗಿತನವೇ ಆಯ್ಕೆ ಮಾಡಿಕೊಳ್ಳುವೆ,
ಯಾಕೆಂದರೆ ಒಂಟಿತನದಲ್ಲಿ ನಿನ್ನನ್ನು ಯಾರು ಪಡೆಯಲಾರರು ನನ್ನನ್ನು ಬಿಟ್ಟು.

ನಾನು ನಿನ್ನನ್ನು ದೂರದಿಂದಲೇ ಆರಾಧಿಸಲು ಬಯಸುವೆ,
ಈ ದೂರವಿದೆಯಲ್ಲ ಅದು ನನ್ನ ನೋವಿಗೆ ಗುರಾಣಿಯೇ

ಗಾಳಿಯಲ್ಲಿ ನಿನಗೆ ಮುತ್ತು ನೀಡಲು ಬಯಸುವೆ,
ನನ್ನ ತುಟಿಗಳಿಗಿಂತ ಈ ಗಾಳಿಯ ಹೆಚ್ಚು ಸೌಮ್ಯ.

ನನ್ನ ಕನಸುಗಳಲ್ಲಿ ನಿನ್ನನ್ನು ಬಂಧಿಯಾಗಿಸ ಬಯಸುವೆ,
ನನ್ನ ಕನಸುಗಳಲ್ಲಿ ನಿನಗೆ ಅಂತ್ಯವೇ ಇಲ್ಲ....


ಮೂಲ: ರೂಮಿ
ಅನುವಾದ: ಮಲ್ಲಿಕಾರ್ಜುನ ತಿಪ್ಪಾರ


ಮಂಗಳವಾರ, ಮಾರ್ಚ್ 17, 2020

Chan Kin-man is a Hong Kong Gandhi- ಹಾಂಕಾಂಗ್ ಗಾಂಧಿ ಚಾನ್

- ಮಲ್ಲಿಕಾರ್ಜುನ ತಿಪ್ಪಾರ
ಹನ್ನೊಂದು ತಿಂಗಳು ಜೈಲುವಾಸ ಪೂರೈಸಿ ಇದೀಗ ಬಿಡುಗಡೆಯಾಗಿರುವ ಹಾಂಕಾಂಗ್‌ನ ಪ್ರಜಾಪ್ರಭುತ್ವವಾದಿ ಹೋರಾಟಗಾರ, ಸಮಾಜಶಾಸ್ತ್ರ ಪ್ರಾಧ್ಯಾಪಕ ಚಾನ್‌ ಕಿ ಮ್ಯಾನ್‌ ಬಗ್ಗೆ ತಿಳಿದುಕೊಳ್ಳುವ ಮೊದಲು 'ಅಕ್ಯುಪಾಯ್‌ ಮೂವ್‌ ವೆಂಟ್‌' ಬಗ್ಗೆ ತಿಳಿದುಕೊಳ್ಳಬೇಕು. ಆಗಲೇ 'ಹಾಂಕಾಂಗ್‌ ಗಾಂಧಿ' ಚಾನ್‌ ಅವರ ವ್ಯಕ್ತಿತ್ವ ಅರಿವಾಗುತ್ತದೆ.

'ಒಂದು ದೇಶ, ಎರಡು ವ್ಯವಸ್ಥೆ' ಸೂತ್ರದಡಿ ಹಾಂಕಾಂಗ್‌ 1997ರಲ್ಲಿಬ್ರಿಟಿಷ್‌ ಮುಷ್ಟಿಯಿಂದ ಚೀನಾದ ಪಾಲಾಯಿತು. ಈ ಸೂತ್ರದಡಿ ಚೀನಾದಲ್ಲಿರುವ ಎಲ್ಲಹಕ್ಕುಗಳು, ಸ್ವಾತಂತ್ರ್ಯ ಹಾಂಕಾಂಗ್‌ನಲ್ಲಿರುವವರಿಗೂ ಅನ್ವಯವಾಗಬೇಕು. ಆದರೆ, ಪ್ರಜಾಪ್ರಭುತ್ವ ಪರ ಹೋರಾಟಗಾರರ ಪ್ರಕಾರ, ಚೀನಾ ಸರಕಾರ ಹಾಂಕಾಂಗ್‌ ಮೇಲೆ ತನ್ನ ಹಿಡಿತ ಬಿಗಿಗೊಳಿಸಿ, ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಹಾಗಾಗಿ, ಹಾಂಕಾಂಗ್‌ನಲ್ಲಿಪ್ರಜಾಪ್ರಭುತ್ವ ವ್ಯವಸ್ಥೆ ಬರಬೇಕು. ಈ ಹಿನ್ನೆಲೆಯಲ್ಲಿ'ಸಾರ್ವತ್ರಿಕ ಮತದಾನ ಹಕ್ಕು'(ಭಾರತದಲ್ಲೂಇದೇ ಮಾದರಿ ಇದೆ) ಜಾರಿಗೋಸ್ಕರ 'ಅಕ್ಯುಪಾಯ್‌ ಸೆಂಟ್ರಲ್‌ ವಿತ್‌ ಲವ್‌ ಆ್ಯಂಡ್‌ ಪೀಸ್‌' ಅಭಿಯಾನದಿಂದ 2014ರಲ್ಲಿಅಸಹಕಾರ ಚಳವಳಿಗೆ ಕರೆ ನೀಡಲಾಯಿತು. 79 ದಿನ ನಿರಂತರ ಚಳವಳಿ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಚೀನಾ ಸರಕಾರಕ್ಕೆ ಚುರುಕು ಮುಟ್ಟಿಸಿದರು. ಹಾಂಕಾಂಗ್‌ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಈ ಚಳವಳಿಯನ್ನು ಜಗತ್ತು 'ಅಂಬ್ರೆಲಾ ಮೂಮೆಂಟ್‌' ಎಂದು ಗುರುತಿಸಿತು(ಪ್ರತಿಭಟನಾಕಾರರು ಪೊಲೀಸರ ಟಿಯರ್‌ ಗ್ಯಾಸ್‌ ಮತ್ತು ಜಲಪ್ರಯೋಗ ತಪ್ಪಿಸಿಕೊಳ್ಳಲು ಕೊಡೆಗಳನ್ನು ಬಳಸುತ್ತಿದ್ದರು).

ಇಡೀ ಜಗತ್ತೇ ಹಾಂಕಾಂಗ್‌ನತ್ತ ತಿರುಗಿ ನೋಡುವಂತೆ ಮಾಡಿದ ಅಕ್ಯುಪಾಯ್‌ ಅಭಿಯಾನದ ಸಹ ಸಂಸ್ಥಾಪಕನೇ ಈ 'ಚಾನ್‌ ಕಿನ್‌-ಮ್ಯಾನ್‌'. ಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌(ಸಿಯುಎಚ್‌ಕೆ)ನ ಸೋಷಿಯಾಲಜಿ ಪ್ರೊಫೆಸರ್‌ ಆಗಿದ್ದ ಚಾನ್‌, ರೆವರೆಂಡ್‌ ಚು ಯಿಯು-ಮಿಂಗ್‌ ಮತ್ತು ಸಿಯುಎಚ್‌ಕೆ ಕಾನೂನು ಪ್ರಾಧ್ಯಾಪಕ ಬೆನ್ನಿ ತೈ ಯಿಯು-ಟಿಂಗ್‌ ಅವರ ಜೊತೆಗೂಡಿ ಈ ಅಭಿಯಾನವನ್ನು ಆರಂಭಿಸಿ, ವಿದ್ಯಾರ್ಥಿಗಳಲ್ಲಿಪ್ರಜಾಪ್ರಭುತ್ವದ ಮಹತ್ವವನ್ನು ಅರುಹಿದರು. ಇದರ ಫಲವಾಗಿಯೇ ಚೀನಾದ ಆಕ್ರಮಣಕಾರಿ ನೀತಿಗಳ ವಿರುದ್ಧ ಹಾಂಕಾಂಗ್‌ ಜನಸಾಮಾನ್ಯರು ಪ್ರತಿರೋಧ ದಾಖಲಿಸುವ ಮಟ್ಟಿಗೆ ಮನಸ್ಸುಗಳು ಬದಲಾದವು.

ಚಾನ್‌ ವಿರುದ್ಧ ಹಾಂಕಾಂಗ್‌ ನಗರವನ್ನು ಸ್ತಬ್ಧಗೊಳಿಸಿ ಚೀನಾ ಸರಕಾರದ ವಿರುದ್ಧ ಸಾರ್ವಜನಿಕರನ್ನು ಎತ್ತಿಕಟ್ಟಿ, ಗದ್ದಲ ಎಬ್ಬಿಸಿದ ಆರೋಪ ಮಾಡಲಾಗಿತ್ತು. ಹಾಂಕಾಂಗ್‌ ನ್ಯಾಯಾಲಯ ಇವರಿಗೆ 16 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚುನಾವಣೆಗೆ ಸಾರ್ವತ್ರಿಕ ಮತದಾನದ ಹಕ್ಕು ನೀಡಬೇಕೆಂದು ಚಳವಳಿ ಆರಂಭಿಸಿದ ಈ ಚಾನ್‌, ವಿದ್ಯಾರ್ಥಿ ಜೀವನದಿಂದಲೂ ಸಾಮಾಜಿಕ ಕಾರ್ಯಕರ್ತರನಾಗಿ ಗುರುತಿಸಿಕೊಂಡವರು. ಸಮುದಾಯ ಅಭ್ಯುದಯಕ್ಕೆ ಹೋರಾಟ ಮಾಡಿದವರು. ಸ್ವತಃ ಅವರೇ ಸಾಮಾಜಿಕ ಸ್ತರಗಳಲ್ಲಿಅನ್ಯಾಯಗಳನ್ನು ಅನುಭವಿಸಿದವರಾದ್ದರಿಂದ ಅದನ್ನು ಹೋಗಲಾಡಿಸಲು ಸಾಂಸ್ಥಿಕ ಹಂತಗಳಲ್ಲಿಸುಧಾರಣೆ ಅಗತ್ಯ ಎಂದು ಪ್ರತಿಪಾದಿಸಿದರು. ಇದೆಲ್ಲದರ ಒಟ್ಟು ಫಲವೇ ಅಕ್ಯುಪಾಯ್‌ ಅಭಿಯಾನ ಎಂದು ಹೇಳಬಹುದು.

1993ರಿಂದ ಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌ನಲ್ಲಿಅಧ್ಯಾಪನ ವೃತ್ತಿ ಕೈಗೊಂಡ ಚಾನ್‌, ಕಳೆದ ವರ್ಷವಷ್ಟೇ ನಿವೃತ್ತಿಯಾಗಿದ್ದಾರೆ. ಅಧ್ಯಾಪನ ವೃತ್ತಿಯನ್ನು ಪ್ರೀತಿಸುವ ಚಾನ್‌ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರು. ಅದೇ ಕಾರಣಕ್ಕೆ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳ ಸಂಘಟನೆಗಳಿಂದಲೂ ಅನೇಕ ಸಂದರ್ಭಗಳಲ್ಲಿಅತ್ಯುತ್ತಮ ಪ್ರಾಧ್ಯಾಪಕ ಎಂಬ ಗೌರವ ಪಡೆದುಕೊಂಡಿದ್ದಾರೆ. ಚೀನಿ ಸಮುದಾಯಗಳಲ್ಲಿಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜಗಳ ಅಭಿವೃದ್ಧಿಗೆ ಅವರು ತೋರಿದ ಆಸಕ್ತಿ ಮತ್ತು ಸಂಶೋಧನೆ ಅವರನ್ನು ಮೇಲ್ಮಟ್ಟದಲ್ಲಿಕಾಣುವಂತೆ ಮಾಡಿದೆ. ಚೀನಾ ಮತ್ತು ಹಾಂಕಾಂಗ್‌ ಸರಕಾರಗಳಲ್ಲಿಅನೇಕ ಹುದ್ದೆಗಳನ್ನು ನಿರ್ವಹಿಸಿದ ಅವರು ಹಲವಾರು ಸರಕಾರೇತರ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಸದ್ಯ ಅವರು ಹಾಂಕಾಂಗ್‌ ಸಿವಿಲ್‌ ಎಜುಕೇಷನ್‌ ಫೌಂಡೇಷನ್‌ ನಿರ್ದೇಶಕ ಹಾಗೂ ಹಾಂಕಾಂಗ್‌ ಡೆಮಾಕ್ರಟಿಕ್‌ ಡೆವಲಪ್‌ಮೆಂಟ್‌ ನೆಟ್ವರ್ಕ್ನ ಕಾರ್ಯಕಾರಿ ಮಂಡಳಿಯ ಸದಸ್ಯ. ಘ್ಕಿ

1976ರಲ್ಲಿಚಾನ್‌ ಅವರು, ಕಾನ್ಕರ್ಡಿಯಾ ಲೂಥರಿನ್‌ ಮಿಡ್ಲ್‌ಸ್ಕೂಲ್‌ನಲ್ಲಿಆರಂಭಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬಳಿಕ 19983ರಲ್ಲಿಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌ನಿಂದ ಸೋಷಿಯಾಲಜಿ ವಿಷಯದಲ್ಲಿಬ್ಯಾಚುಲರ್‌ ಆಫ್‌ ಸೈನ್ಸ್‌ ಪದವಿ ಪಡೆದುಕೊಂಡರು. ಯಾಲೆ ವಿವಿಯಲ್ಲಿಉನ್ನತ ಅಧ್ಯಯನ ಕೈಗೊಂಡ ಚಾನ್‌ 1990ರಲ್ಲಿಮಾಸ್ಟರ್‌ ಆಫ್‌ ಆರ್ಟ್ಸ್, 1991ರಲ್ಲಿಮಾಸ್ಟರ್‌ ಆಫ್‌ ಫಿಲಾಸಫಿ ಹಾಗೂ 1995ರಲ್ಲಿಸೋಷಿಯಾಲಜಿಯಲ್ಲಿಡಾಕ್ಟರೇಟ್‌ ಪದವಿ ಗಳಿಸಿಕೊಂಡರು. ಸಿಯುಎಚ್‌ಕೆ ವಿವಿಯಲ್ಲಿಅಧ್ಯಯನ ಮಾಡುತ್ತಿದ್ದಾಗಲೇ ವಿದ್ಯಾರ್ಥಿ ಚಳವಳಿಗಳಲ್ಲಿಸಕ್ರಿಯವಾಗಿ ಪಾಲ್ಗೊಂಡರು. ಅದೇ ವಿವಿಯ ವಿದ್ಯಾರ್ಥಿ ಸಂಘಟನೆಯಲ್ಲಿಕೆಲಸ ಮಾಡಿದರು. ಪದವಿ ಪಡೆದ ಬಳಿಕ ಸಮುದಾಯದ ಕೆಲಸಗಳಲ್ಲಿತೊಡಗಿಸಿಕೊಂಡರು. ಯಾಲೆ ವಿವಿಯಲ್ಲಿಹೆಚ್ಚಿನ ವಿದ್ಯಾಭ್ಯಾಸ ಮಾಡಿ ಮರಳಿದ ಬಳಿಕ ತಾವು ಕಲಿತ ವಿವಿಯಲ್ಲೇ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸ ತೊಡಗಿದರು. ಜೊತೆಗೆ ಏಷ್ಯಾ ಫೆಸಿಫಿಕ್‌ ಸ್ಟಡೀಸ್‌, ಸೆಂಟರ್‌ ಫಾರ್‌ ಸಿವಿಲ್‌ ಸೊಸೈಟಿ ಸ್ಟಡೀಸ್‌ನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಹಲವು ವಿವಿಗಳಿಗೆ ಸಂದರ್ಶಕ ಉಪನ್ಯಾಸಕರಾಗಿಯೂ ಗುರುತಿಸಿಕೊಂಡಿದ್ದರು. ಘ್ಕಿ

ಸದಾ ಸಮುದಾಯ ಅಭ್ಯುದಯದ ಬಗ್ಗೆ ಚಿಂತನೆ ನಡೆಸುತ್ತಿದ್ದ ಚಾನ್‌ ಅವರಿಗೆ ಸಿಯುಎಚ್‌ಕೆ ಕಾನೂನು ಪ್ರಾಧ್ಯಾಪಕ ಬೆನ್ನಿ ತೈ ಮತ್ತು ರೆವರೆಂಡ್‌ ಚು ಯಿಯು-ಮಿಂಗ್‌ ಅವರ ಸಹಚರ್ಯ ದೊರೆಯಿತು. ಈ ಮೂವರ ಚಿಂತನಾ ಫಲವಾಗಿಯೇ ಅಕ್ಯುಪಾಯ್‌ ಅಭಿಯಾನ ಆರಂಭವಾಯಿತು.

ಪ್ರತ್ಯೇಕ ವ್ಯವಸ್ಥೆ ಹೊಂದಿದ್ದರೂ ಹಾಂಕಾಂಗ್‌ ಚೀನಾದ ಕಪಿಮುಷ್ಟಿಯಲ್ಲೇ ಇದೆ. ಚೀನಾ ತನ್ನ ವಾಗ್ದಾನ ಮರೆತ ಪರಿಣಾಮವೇ ಹಾಂಕಾಂಗ್‌ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ದಾರಿ ತುಳಿಯುತ್ತಿರುವುದು. ಇದಕ್ಕೆ ಚಾನ್‌ನಂಥ ಪ್ರಾಧ್ಯಾಪಕರು ದಾರಿದೀಪಗಳಾಗಿದ್ದಾರೆ. 2014ರಲ್ಲಿನಡೆದ ಅಂಬ್ರೆಲಾ ಮೂಮೆಂಟ್‌ ನೇತೃತ್ವ ವಹಿಸಿದ್ದ ಚಾನ್‌, ಮಹಾತ್ಮ ಗಾಂಧಿ ಮಾರ್ಗವನ್ನೇ ಆಯ್ದುಕೊಂಡರು. ತಮ್ಮ ಬೆಂಬಲಿಗರು ಸಾವಿರಾರು ವಿದ್ಯಾರ್ಥಿಗಳೊಂದಿಗೆ ಹಾಂಕಾಂಗ್‌ನಲ್ಲಿಬೀದಿಯಲ್ಲೇ ಕುಳಿತುಕೊಂಡು ಪ್ರತಿಭಟಿಸಿದರು. ಮೊದ ಮೊದಲು ಚೀನಾ ಸರಕಾರ ನಿರ್ಲಕ್ಷಿಸಿತಾದರೂ ಬೆಂಬಲ ಹೆಚ್ಚಾಗುತ್ತಿದ್ದಂತೆ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿತು. ಅಷ್ಟೊತ್ತಿಗಾಗಲೇ ಹಾಂಕಾಂಗ್‌ನಲ್ಲಿನ ಬೆಳವಣಿಗಳು ಇಡೀ ಜಗತ್ತಿನ ಗಮನ ಸೆಳೆದಿದ್ದವು.

ಇದೀಗ ಚಾನ್‌ ಸೆರೆಮನೆಯಿಂದ ಹೊರ ಬಂದಿದ್ದಾರೆ. ಮತ್ತೆ ಹೋರಾಟಕ್ಕೆ ಹುರುಪು ಬರುವುದರಲ್ಲಿಸಂಶಯವೇ ಇಲ್ಲ. ''ಜೈಲಿನಲ್ಲಿಜೀವನ ಕಷ್ಟವಿತ್ತು. ಆದರೆ, ಅದಕ್ಕೆ ನಾನು ಪಶ್ಚಾತ್ತಾಪ ಪಡಲಾರೆ. ಯಾಕೆಂದರೆ, ಪ್ರಜಾಪ್ರಭುತ್ವ ಪಡೆಯಲು ನಾನು ತೆರುತ್ತಿರುವ ಬೆಲೆ ಇದು. ನಮಗೆ ಸಾರ್ವತ್ರಿಕ ಮತದಾನ ಹಕ್ಕು ಬೇಕೇ ಬೇಕು,'' ಎಂದು ಚಾನ್‌ ಹೇಳಿದ್ದಾರೆ. ಅದರರ್ಥ ಹಾಂಕಾಂಗ್‌ನಲ್ಲಿಮತ್ತೆ ಗಾಂಧಿ ಮಾದರಿಯ ಹೋರಾಟ, ಪ್ರತಿಭಟನೆಗಳನ್ನು ನಾವು ಚಾನ್‌ ನೇತೃತ್ವದಲ್ಲಿನಿರೀಕ್ಷಿಸಬಹುದು.

(ಈ ಲೇಖನವು ವಿಜಯ ಕರ್ನಾಟಕದ 2020ರ ಮಾರ್ಚ್ 15ರ ಸಂಚಿಕೆಯ ವ್ಯಕ್ತಿಗತ ಕಾಲಂನಲ್ಲಿ ಪ್ರಕಟವಾಗಿದೆ)