- ಹುಡುಗನೊಬ್ಬ ಗಜಲ್‌ಗಳು-
- ಪ್ರದ್ಯುಮ್ನ
ಜೀವನವೇ ಹಾಗೆ. ನಮ್ಮ ನಿರೀಕ್ಷೆಗಳು, ಆಕಾಂಕ್ಷೆಗಳು ಈಡೇರುವ ಹೊತ್ತಿನಲ್ಲಿ ಸಡನ್ನಾಗಿ ಯು ಟರ್ನ್ ತೆಗೆದುಕೊಳ್ಳುತ್ತದೆ. ಮತ್ತೆ ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವಾಗಲೇ ಮತ್ತೊಂದಿಷ್ಟು ತಿರುವುಗಳು. ಈ ತಿರುವುಗಳ ತಿರುಗಣಿಯಲ್ಲಿ ಜೀವನ ಸುರಳಿಯಾಗುತ್ತ, ಅದರೊಳಗೆ ನೋವು, ಹತಾಶೆ, ಸುಖ, ದುಃಖ, ಸಂತೋಷ, ಸಂಭ್ರಮಗಳೆಲ್ಲವೂ ಲೀನವಾಗಿ ಶೂನ್ಯವಾಗುವ ಎಲ್ಲ ಅಪಾಯಗಳಿರುತ್ತವೆ. ನಾವು ಅಂದಕೊಂಡ ರೀತಿಯಲ್ಲಿ ಬದುಕು ಸಾಗದಿದ್ದಾಗ, ಬದುಕು ಅಂದುಕೊಂಡ ರೀತಿಯಲ್ಲಿ ನಾವು ನಡೆಯಬೇಕು. ಈ ತರ್ಕದಿಂದಲೇ ಜೀವನ ಹೆಚ್ಚು ಸಂತೋಷವಾಗಿರುತ್ತದೆ...
- ಹೀಗೆ ನೀನು ಅಂದು ಊರಾಚೆ ಇದ್ದೂ ಇಲ್ಲದಂತಿರುವ ಉದ್ಯಾನದ ಮೂಲೆಯೊಂದರ ಮುರುಕಲು ಬೆಂಚ್‌ನಲ್ಲಿ ಕುಳಿತು ಜೀವನದ ಪಾಠ ಮಾಡುತ್ತಿರುವಾಗ, ನಿನ್ನ ಮಾತುಗಳು ತಲೆಯೊಳಗೆ ಇಳಿದಿರಲಿಲ್ಲ. ಅಂದಿಗೆ, ನಿನ್ನ ಮುಂಗುರುಳು ನೃತ್ಯ ನೋಡುತ್ತಾ.... ನಿನ್ನ ಸಾನ್ನಿಧ್ಯ, ನಿನ್ನ ಸಾಮೀಪ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕಳೆಯುವುದೇ ಬದುಕಾಗಿತ್ತು. ಅಂದಿಗೆ ಅದು ನನ್ನ ಜೀವನದ ಏಕ ಮಾತ್ರ ಗುರಿಯಾಗಿತ್ತು. ಅಂದು ನೀನು ಹೇಳಿದ ಪ್ರತಿಯೊಂದು ಮಾತುಗಳು ನನ್ನ ಅನುಭವಕ್ಕೆ ಈಗ ಬರುತ್ತಿವೆ. ನನ್ನ ಬದುಕಿನ ಅತಿದೊಡ್ಡ ಜೀವನಸೆಲೆ, ಸ್ಫೂರ್ತಿಯ ಚಿಲುಮೆಯಾಗಿದ್ದ ನೀನೇ ಹಠಾತ್ತನೇ ಯು ಟರ್ನ್ ತೆಗೆದುಕೊಂಡು, ನನ್ನನ್ನು ದಾರಿಯ ಮಧ್ಯೆ ಬಿಟ್ಟು ಹೋಗಿತ್ತೀಯ ಎಂಬ ಸಣ್ಣ ಸುಳಿವು ಇರಲಿಲ್ಲ. ಜೀವನದ ದಾರಿಯಲ್ಲಿ ಇಬ್ಬರೂ ಸಹಯಾತ್ರಿಕರಾಗಿ ಪಯಣ ಆರಂಭಿಸಿ, ಮುಗಿಸೋಣ ಎಂದು ಹೇಳಿದವಳು ನೀನು ಮಾತು ತಪ್ಪಿದೆ; ದಾರಿ ತಪ್ಪಿದೆ ನಾನು. ಈಗ ದಿಕ್ಕು ಕಾಣದೆ ನಿಂತಿದ್ದೇನೆ. ನನ್ನ ಮುಂದೆ ಅನೇಕ ಕವಲು ದಾರಿಗಳಿವೆ. ಯಾವ ದಾರಿಯನ್ನು ಆಯ್ಕೆ ಮಾಡಿಕೊಂಡರೆ, ಅದು ಎಲ್ಲಿ ಗೆ ಹೋಗಿ ಮುಟ್ಟತ್ತದೆ ಎಂಬ ಅರಿವು ನನಗಿಲ್ಲ. ಅದರ ಅರಿವು ಇದ್ದವಳು ನೀನು ನನ್ನ ಜತೆಯಲ್ಲಿ ಇದ್ದು ಇಲ್ಲದಂತೆ ಇರುವೆ. ಆಯ್ಕೆಗಳು ವಿಷಯ ಬಂದಾಗ ನನ್ನದು ಕನ್‌ಫ್ಯೂಸ್ಡ್ ಸೋಲ್. ಯಾವ ಆಯ್ಕೆ ನನ್ನನ್ನು ಎಲ್ಲಿಗೆ ಹೋಗಿ ಮುಟ್ಟಿಸುತ್ತದೆ ಎಂಬುದೇ ಗೊತ್ತಿಲ್ಲ. ಆದರೂ ಒಬ್ಬಂಟಿಯಾಗಿ ನಡೆಯುವ ಸಾಹಸ ಮಾಡುತ್ತಿದ್ದೇನೆ. ಯಾಕೆ ಹೇಳು..? ನಿನಗಾಗಿ, ನಿನ್ನ ಮೇಲಿನ ಪ್ರೀತಿಗಾಗಿ. ಆ ಪ್ರೀತಿಯೇ ನನ್ನನ್ನು ಕಷ್ಟದಲ್ಲೂ ಇಂದಿಗೂ ನಡೆಯುವುದನ್ನು ನಿಲ್ಲದಂತೆ ಮಾಡುತ್ತದೆ.
ನಿನ್ನದು ಯಾವಾಗಲೂ ಲೆಕ್ಕಾಚಾರದ ಬದುಕು. ಇಂಚುಪಟ್ಟಿಯನ್ನು ಹಿಡಿದು ಗೆರೆ ಕೊರೆದ ಹಾಗೆ ಬದುಕಬೇಕು ಎನ್ನುತ್ತಿದ್ದವಳು. ನನ್ನದೋ... ಯಾವುದೇ ಶಿಸ್ತಿಗೆ ಒಳಪಡದ, ಯಾವ ಅಂಕೆಗೂ ಸಿಗದ, ಸೂತ್ರ ಹರಿದ ಗಾಳಿ ಪಟದ ಚಲನೆಯಂಥ ಬದುಕು. ನಮ್ಮಿಬ್ಬರಿಗೂ ಸಾಮ್ಯತೆ ಏನು ಎಂದು ಹುಡುಕ ಹೊರಟರೆ ಏನಂದರೆ ಏನೂ ಇರಲಿಲ್ಲ. ಆದರೂ ನಮ್ಮಿಬ್ಬರಲ್ಲೂ ಪ್ರೀತಿ ಎಂಬ ಗಾಢವಾದ ಬಂಧ. ನಮ್ಮ ನಡುವೆ ಇದ್ದ ಎಲ್ಲ ವೈರುಧ್ಯಗಳನ್ನು ಮೀರಿ ನಮ್ಮನ್ನು ಒಂದಾಗಿಸಿತ್ತು. ನನ್ನ ಅಸ್ತವ್ಯಸ್ತ ಬದುಕಿನ ರೀತಿಯನ್ನು ನೀನು ಸಹಿಸಿಕೊಂಡಿದ್ದು ನಿಜವಾಗಲೂ ಅದು ನಿನ್ನ ಸಹನೆಯ ಶಕ್ತಿಯ ಪ್ರತೀಕ. ಕಾಡು, ಗುಡ್ಡ, ಬೆಟ್ಟ, ಪ್ರಾಣಿ, ಪಕ್ಷಿ, ಚಿಟ್ಟೆ, ಕ್ರೀಮಿ, ಕೀಟಗಳ ಫೋಟೋ ತೆಗೆಯುತ್ತೇನೆ ಎಂದು ಬಗಲಿಗೆ ಕ್ಯಾಮೆರಾ ಏರಿಸಿಕೊಂಡು ಹೋರಡುತ್ತಿದ್ದವನು ನಾನು. ಕ್ಯಾಮೆರಾ ಮೇಲಿನ ಮೋಹ, ಒಂದೊಂದು ಸಾರಿ ನಿನ್ನ ಮೇಲಿನ ಪ್ರೀತಿಗಿಂತ ಹೆಚ್ಚಾಗುತ್ತಿತ್ತು. ಆಗ ನೀನು ತಮಾಷೆಯಾಗಿ, ‘‘ನಿನಗೆ ಕ್ಯಾಮೆರಾ ಫಸ್ಟ್ ಲವ್. ನಾನು ಸೆಕೆಂಡ್ ಲವ್,’’ ಎಂದು ಕಿಚಾಯಿಸುತ್ತಿದ್ದೆ. ಆದರೆ, ಈಗ ನಿಜ ಹೇಳುತ್ತೇನೆ ಕೇಳು; ನನ್ನ ಜೀವನದಲ್ಲಿ ಎಂದಿಗೂ ನೀನೇ ಮೊದಲ ಪ್ರೀತಿ. ನನ್ನ ಅಷ್ಟೂ ಜೀವನದ ಅನುಭವದಲ್ಲಿ ನಿನಗೆ ಕೊಟ್ಟ ಸ್ಥಾನ ನನ್ನ ಕ್ಯಾಮೆರಾಗೂ ಕೊಟ್ಟಿಲ್ಲ. ಆಫ್‌ಕೋರ್ಸ್, ಕ್ಯಾಮೆರಾ ಇಸ್ ಮೈ ಪ್ಯಾಶನ್... ಹಾಗಂತ ಸುಮಾರು ಸಾರಿ ಹೇಳಲು ಯತ್ನಿಸಿದ್ದೆ. ಆದರೆ, ಹೇಳಲು ಆಗಲಿಲ್ಲ. ಅದನ್ನು ಈಗ ಹೇಳುತ್ತಿದ್ದೇನೆ; ನೀನು ಕೇಳಿಸಿಕೊಳ್ಳುತ್ತೀಯ ಎಂಬ ನಂಬಿಕೆ ನನಗಿಲ್ಲ. ಕೇಳಿಸಿಕೊಂಡರೂ ಅದರೊಳಗಿನ ಭಾವನೆಗಳು ಎಬ್ಬಿಸುವ ಸಂಟರಗಾಳಿ ನಿನ್ನನ್ನು ತಾಕಲು ಸಾಧ್ಯವಿಲ್ಲ. ನೀನೀಗ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸಹನಾಮೂರ್ತಿ. ಈ ಜಗತ್ತಿನ ಆಗು ಹೋಗುಗಳ ಅರಿವು ನಿನಗಿಲ್ಲ. ಅಷ್ಟ್ಯಾಕೆ... ನಾನಾರು ಎಂಬುದು ಗೊತ್ತಿರಲಿಕ್ಕಿಲ್ಲ. ಅಂಥ ಸ್ಥಿತಿಯಲ್ಲಿದ್ದೀಯ.
ನೀನು ಹೇಳಿದ ಹಾಗೇ ಬದುಕುತ್ತಿದ್ದೇನೆ ಎಂದರೆ ನಂಬಲಾರೆ. ಅಂದು ನೀನು ಹೇಳಿದ ಹಾಗೆ ಬದುಕು ಅಂದುಕೊಂಡ ರೀತಿಯಲ್ಲಿ ಬದುಕುತ್ತಿದ್ದೇನೆ. ನನಗೀಗ, ಯಾವುದೇ ಬೆಟ್ಟ, ಗುಡ್ಡ, ಪ್ರಾಣಿ, ಪಕ್ಷಿಗಳು ಆಕರ್ಷಕವಾಗಿ ಕಾಣುತ್ತಿಲ್ಲ. ನನ್ನ ಕ್ಯಾಮೆರಾ ಲೆನ್ಸ್ ಮೇಲೆ ಧೂಳು ಕೂತಿದೆ. ನನಗೆ ಕ್ಯಾಮೆರಾ ಮೋಹ ಇನಿತು ಇಲ್ಲ. ಹೇಗೆ ಇರುತ್ತೇ ಹೇಳು..? ನನ್ನ ಕ್ಯಾಮೆರಾ ಕಣ್ಣಿಗೆ ಶಕ್ತಿ ತುಂಬಿದವಳು ನೀನೇ ನಿತ್ರಾಣ ಸ್ಥಿತಿಯಲ್ಲಿರುವಾಗ? ನೀನು ಜತೆಯಲ್ಲಿದ್ದಾಗ, ಸಣ್ಣ ಕೀಟವೂ ನನ್ನ ಕಣ್ಣೀಗೆ ಅಮೇಜಿಂಗ್ ಪ್ರಾಣಿಯಾಗಿ ಕಾಣುತ್ತಿತ್ತು. ಅದಕ್ಕಿರುವ ಬದುಕುವ ಛಲ ರೋಮಾಂಚನಗೊಳಿಸುತ್ತಿತ್ತು. ಎಲ್ಲ ಸಣ್ಣ ಸಣ್ಣ ಖುಷಿಗಳು ದೊಡ್ಡ ಸಂಭ್ರಮಗಳಾಗುತ್ತಿದ್ದವು; ದೊಡ್ಡ ದುಃಖಗಳೆಲ್ಲವೂ ಸಣ್ಣ ಸಣ್ಣ ತೊಂದರೆಗಳಾಗಿ ಬದಲಾಗುತ್ತಿದ್ದವು. ಅದಕ್ಕೆಲ್ಲ ನೀನೇ ಕಾರಣ. ನಿನ್ನ ನಿಷ್ಕಲ್ಮಷ ಪ್ರೇಮ ಕಾರಣ. ಆದರೆ ಈಗ...?
***
ಫೇಸ್‌ಬುಕ್‌ನಲ್ಲಿ ಮಹಿಳೆಯರು ಸೀರೆಯಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಿ, ತಮ್ಮ ಸ್ನೇಹಿತರಿಗೆ ಖೋ ಕೊಟ್ಟು ಅದನ್ನೊಂದು ಆಂದೋಲನ ರೀತಿ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿದ್ದಂತೆ ನನಗೆ ಅಪರಾಧಿ ಭಾವನೆ ಒತ್ತರಿಸಿ ಬರುತ್ತಿದೆ. ಎಲ್ಲವೂ ಚೆನ್ನಾಗಿ ಇದ್ದರೆ, ನಿನ್ನವು ಇಂಥ ಹಲವು ಫೋಟೋಗಳು ನಿನ್ನ ಪ್ರೊಫೈಲ್‌ನಲ್ಲಿ ರಾರಾಜಿಸುತ್ತಿದ್ದವು. ಯಾಕೆಂದರೆ, ಸೀರಿಯುಟ್ಟರೆ, ನಿನ್ನ ಸೌಂದರ್ಯ ದುಪ್ಪಟ್ಟಾಗುತ್ತಿತ್ತು. ಅದಕ್ಕೊಂದು ಚೆಲವು ಬರುತ್ತಿತ್ತು, ಒಲವು ಮೂಡುತ್ತಿತ್ತು. ಆದರೆ, ನನ್ನಿಂದಾದ ತಪ್ಪಿನಿಂದ ನೀನು ಇಂಥ ಎಲ್ಲ ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸಲು ಆಗುತ್ತಿಲ್ಲ. ಅಂದು ನಿನ್ನ ಮಾತು ಕೇಳಬೇಕಿತ್ತು. ಅಂಥ ಅರ್ಜೆಂಟ್ ಏನೂ ಇರಲಿಲ್ಲ. ವಿದೇಶದಿಂದ ಬರುತ್ತಿದ್ದ ಗೆಳೆಯನೊಬ್ಬನನ್ನು ಆರಾಮವಾಗಿ ಕರೆದುಕೊಂಡು ಬರಬಹುದಿತ್ತು. ಬಹಳ ದಿನಗಳ ನಂತರ ನನ್ನ ಬಾಲ್ಯದ ಸ್ನೇಹಿತ ನನ್ನನ್ನು ಮಾತ್ರ ಭೇಟಿಯಾಗಲು ಬರುತ್ತಿದ್ದಾನೆಂಬ ಹುಚ್ಚು ಸಂತೋಷದ ನಡುವೆ ನಿನ್ನ ಎಚ್ಚರಿಕೆಯ ಮಾತುಗಳು ಕೇಳಿಸಲಿಲ್ಲ. ನಿಧಾನವಾಗಿಯೇ ಕಾರು ಓಡಿಸಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು. ಅತಿಯಾದ ಉತ್ಸಾಹ, ಹುಚ್ಚು ಸಂತೋಷದಲ್ಲಿ ಎಲ್ಲೇ ಮೀರಿ ಓಡುತ್ತಿದ್ದ ಕಾರು ದಿಕ್ಕು ತಪ್ಪದೇ ಇರುತ್ತದೆಯೇ? ತಪ್ಪೀತು. ಖಂಡಿತ ಏನು ಆಗ ಬಾರದಿತ್ತೋ... ಅದೇ ಆಗಿತ್ತು. ನನಗೆ ಎಚ್ಚರವಾದಾಗ ಎಲ್ಲವೂ ಸ್ಪಷ್ಟವಾಗಿತ್ತು. ಚಿಕ್ಕ ಪುಟ್ಟ ಗಾಯಗಳಿಂದ ನಾನು ಬಚಾವಾಗಿದ್ದೆ. ಆದರೆ, ನೀನು ಜೀವಂತ ಹೆಣವಾಗಿದ್ದೆ. ‘‘ಶಿ ಈಸ್ ಇನ್ ಕೋಮಾ,’’ ಎಂದು ಡಾಕ್ಟರ್ ಹೇಳಿದಾಗ ನನಗೆ ಇಡೀ ಆಕಾಶವೇ ಮೈ ಮೇಲೆ ಕಳಚಿ ಬಿದ್ದ ಅನುಭವ. ಕಳೆದ ಒಂದು ವರ್ಷದಿಂದ ನಿನ್ನ ಸಾನ್ನಿಧ್ಯದಲ್ಲೇ ಇದ್ದೇನೆ. ಯಾವ ಕ್ಯಾಮೆರಾವೂ ನಿನ್ನ ಸಾನ್ನಿಧ್ಯದಿಂದ ನನ್ನನ್ನು ಬೇರ್ಪಡಿಸುತ್ತಿಲ್ಲ. ಯಾವ ಪಕ್ಷಿ, ಪ್ರಾಣಿಯ ಅಮೇಜಿಂಗ್ ಆಗಿ ಕಾಣುತ್ತಿಲ್ಲ. ನನಗೆ ಈಗಿರುವ ಒಂದೇ ಧ್ಯಾನ. ಅದು ನಿನ್ನ ಸಾನ್ನಿಧ್ಯದಲ್ಲಿ, ನಿತ್ಯ ನೆನಪುಗಳನ್ನು ಮೆಲಕು ಹಾಕುವುದಷ್ಟೆ ನನ್ನ ಒಂದೇ ಸರಳ ರೇಖೆಯಲ್ಲಿ ಎಳೆಯಬಹುದಾದ ಜೀವನ. ನನ್ನ ಜೀವನಕ್ಕೀಗ ಈಗೊಂದು ಅರ್ಥ ಸಿಕ್ಕಿದೆ. ನನ್ನ ಉಸಿರು ಇರೋವರಿಗೆ ನಿನಗೆ ಉಸಿರಾಗಿರುವುದು. ಅದನ್ನು ಬಿಟ್ಟು ನನಗೆ ಬೇರೆ ಯಾವುದೇ ಮೋಹಗಳಿಲ್ಲ...
***
ಹೀಗೆ ಹೇಳಿಕೊಳ್ಳುತ್ತಾ ಆಕೆಯ ತೊಡೆಯ ಮೇಲೆ ಕಣ್ಣೀರಿಟ್ಟವನಿಗೆ, ಆಕೆಯ ಸ್ಪಂದನ ಏನೋ ಎನ್ನುವಂತೆ, ಕಣ್ಣು ಸ್ವಲ್ಪ ಸಂಚಲನಗೊಂಡಿದ್ದು ಅವನ ಅರವಿಗೆ ಬರಲಿಲ್ಲ. ಆದರೆ, ಆತನೇ ತೆಗೆದ ಫೋಟೋದಲ್ಲಿದ್ದ ಅದಾವುದೋ ಕಾಡು ಹಕ್ಕಿಯೊಂದು ಕಂಡು ಕಾಣದಂತೆ ಆಕೆಯ ಕಣ್ ಚಲನೆಯನ್ನು ನೋಡಿಯೂ ನೋಡಿದಂತಿತ್ತು.