ಕತ್ತಲೆಯೇ ಬದುಕೆಂದು
ನಂಬಿದ ನಾನು ಈಗೀಗ
ನಗಲು ಪ್ರಯತ್ನಿಸುತ್ತಿದ್ದೇನೆ
ದುಃಖದ ಸಾಗರದಲ್ಲಿ ಕೈ
ಬಿಟ್ಟು ನೀ ಹಿಂತಿರುಗಿ ನೋಡದೆ
ಹೋದಾಗ ಸಾಯಬೇಕೆಂದು
ಕೊಂಡವನಿಗೆ ಅಲೆಗಳೇ
ಈಜು ಕಲಿಸಿ ದಡಕ್ಕೆ ಎಸೆದಿವೆ ನನ್ನನ್ನು.
----
ಈಗೀಗ ಪ್ರತಿ ಸೂರ್ಯನ ಹುಟ್ಟು
ಸಾವು ಕೂಡಾ ಆಸಕ್ತಿ ಹುಟ್ಟಿಸುತ್ತಿದೆ
ರಾತ್ರಿಯಲ್ಲಿ ಚಂದ್ರನ ತಣ್ಣನೆಯ
ಬೆಳಗು ಕೂಡಾ ಹೊಮ್ಮಿಸುತ್ತಿದೆ
ನೂರಾರು ಅರ್ಥ ನನ್ನೆದೆಯ
ಭಾವದೊಳಗೆ ಆದರೆ,
ಅಲ್ಲಿ ನೀನಿಲ್ಲವೆಂಬ
ಅರಿವು ಎಚ್ಚರವಾದಾಗ
ಮತ್ತೆ ಅದೇ ಕತ್ತಲೆ ಇಷ್ಟವಾಗುತ್ತದೆ
ಆದರೂ ಪಣತೊಟ್ಟಿದ್ದೇನೆ
ಕತ್ತಲೆಯನ್ನೇ ಹಿಂಜಿ
ಬೆಳಕನ್ನು ಪಡೆಯಬೇಕೆಂದು
ಆ ಬೆಳಕಲ್ಲಿ ಹೊಸ ಲೋಕ,
ಭಾವ, ಭಾಷೆ ಕಲಿಯಬೇಕೆಂಬ
ಹಂಬಲ ನನ್ನದು.