ಸೋಮವಾರ, ಡಿಸೆಂಬರ್ 16, 2019

Finland PM Sanna Marin- 'ಸನ್ನ' ವಯಸ್ಸಿಗೇ ಪ್ರಧಾನಿ!

ಸಲಿಂಗ ಕುಟುಂಬದ ಹಿನ್ನೆಲೆ ಹೊಂದಿರುವ ಸನ್ನಾ ಮರಿನ್‌ ತಮ್ಮ ಆರಂಭದ ದಿನಗಳಲ್ಲಿಬೇಕರಿಯಲ್ಲಿಕೆಲಸ ಮಾಡುತ್ತಿದ್ದರು...


- ಮಲ್ಲಿಕಾರ್ಜುನ ತಿಪ್ಪಾರ
ಡಿಸೆಂಬರ್‌ ಹತ್ತಕ್ಕಿಂತ ಮೊದಲು 'ಸನ್ನಾ ಮರಿನ್‌' ಎಂಬ ಯುವತಿಯ ಬಗ್ಗೆ ಫಿನ್ಲೆಂಡ್‌ ಬಿಟ್ಟು ಹೊರ ಜಗತ್ತಿಗೆ ಅಷ್ಟೇನೂ ಗೊತ್ತಿರಲಿಲ್ಲ. ಆದರೆ, 34 ವರ್ಷ ವಯಸ್ಸಿನಲ್ಲೇ ಫಿನ್ಲೆಂಡ್‌ನ ಪ್ರಧಾನಿ ಹುದ್ದೆಗೇರಿರುವ ಈ ಯುವತಿಯ ಬಗ್ಗೆ ಈ ಇಡೀ ಜಗತ್ತೇ ಈಗ ಮಾತನಾಡುತ್ತಿದೆ. ತೀರಾ ಚಿಕ್ಕ ವಯಸ್ಸಿಗೇ ಪ್ರಧಾನಿ ಹುದ್ದೆಗೇರಿದರು ಎಂಬ ಕಾರಣಕ್ಕಲ್ಲ; ಬದಲಿಗೆ ಅವರಲ್ಲಿರುವ ನಾಯಕತ್ವ, ಬದ್ಧತೆಗಾಗಿ. ಹಾಗೆಯೇ, ಸದ್ಯ ಸೇವೆ ಸಲ್ಲಿಸುತ್ತಿರುವ ಪ್ರಧಾನಿಗಳ ಪೈಕಿ ಇವರೇ ಅತ್ಯಂತ ಕಿರಿಯ ಪ್ರಧಾನಿ. ಸನ್ನಾ ನಂತರದ ಕಿರಿಯ ಸ್ಥಾನದ ಪ್ರಧಾನಿಗಳ ಸಾಲಿನಲ್ಲಿನ್ಯೂಜಿಲೆಂಡ್‌ನ ಪ್ರಧಾನಿ ಜಸಿಂದಾ ಆರ್ಡೇನ್‌(39) ಮತ್ತು ಉಕ್ರೇನಿಯನ್‌ ಪ್ರಧಾನಿ ಒಲೆಕ್ಸಿಯ ಹಂಚರಕ್‌(35) ಇದ್ದಾರೆ.

ಸಂಸದೀಯ ಜನಪ್ರತಿನಿಧಿ ಪ್ರಜಾಪ್ರಭುತ್ವ ಹೊಂದಿರುವ ಫಿನ್ಲೆಂಡ್‌ನಲ್ಲಿಮೊದಲಿನಿಂದಲೂ ಮಹಿಳೆಯರು ರಾಜಕಾರಣದಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಹುಶಃ ಜಗತ್ತಿನಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗೆ ಅನಿಯಂತ್ರಿತ ಸ್ವಾತಂತ್ರ್ಯ ಹಾಗೂ ಮತದಾನದ ಹಕ್ಕು ನೀಡಿದ ಕೀರ್ತಿ ಫಿನ್ಲೆಂಡ್‌ಗೆ ಸಲ್ಲುತ್ತದೆ. ಅದರ ಪರಿಣಾಮವೇ ಈ ವರೆಗೆ ಮೂವರು ಮಹಿಳೆಯರು ಫಿನ್ಲೆಂಡ್‌ನ ಪ್ರಧಾನಿಯಾಗಲು ಸಾಧ್ಯವಾಗಿದೆ. ಈಗ ಪ್ರಧಾನಿಯಾಗಿರುವ ಸನ್ನಾ ಮರಿನ್‌ ನೇತೃತ್ವದ ಸರಕಾರದ ಸಂಪುಟದ ಒಟ್ಟು 14 ಸಚಿವರ ಪೈಕಿ 9 ಮಹಿಳೆಯರಿದ್ದಾರೆ! ಅದರರ್ಥ, ಫಿನ್ಲೆಂಡ್‌ ರಾಜಕೀಯದಲ್ಲಿಮಹಿಳೆ ಮತ್ತು ಪುರುಷರ ನಡುವಿನ ವ್ಯತ್ಯಾಸ ತೀರಾ ತೆಳುವು. ಹಾಗಾಗಿಯೇ, ಸನ್ನಾ ಮರಿನ್‌ನಂಥ ಯುವತಿ ಚಿಕ್ಕ ವಯಸ್ಸಿಗೇ ಪ್ರಧಾನಿಯಾಗಲು ಸಾಧ್ಯವಾಗುತ್ತದೆ.

ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿಯ ನಾಯಕಿ ಮತ್ತು ಪ್ರಧಾನಿಯಾಗಿದ್ದ ಆಂಟ್ಟಿ ರಿನ್ನಾ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ಪಕ್ಷದ ಕಣ್ಣಿಗೆ ಬಿದ್ದಿದ್ದೇ ಸಾರಿಗೆ ಸಚಿವೆಯಾಗಿದ್ದ ಈ ಸನ್ನಾ ಮರಿನ್‌. ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ಜತೆಗೆ ಇನ್ನೂ ನಾಲ್ಕು ಪಕ್ಷಗಳು ಸೇರಿ ರಚಿಸಿಕೊಂಡಿರುವ ಸರಕಾರದ ನೇತೃತ್ವವನ್ನು ಸನ್ನಾ ವಹಿಸಿದ್ದಾರೆ. ಚಿಕ್ಕ ವಯಸ್ಸಿಗೇ ರಾಜಕಾರಣದಲ್ಲಿಪಳಗಿರುವ ಸನ್ನಾ ಅವರ ಆರಂಭದ ದಿನಗಳೇನೂ ಅತ್ಯುತ್ತಮವಾಗಿರಲಿಲ್ಲ. ಕಾಲೇಜು ಶಿಕ್ಷಣ ಮುಗಿದ ಕೂಡಲೇ 2006ರಲ್ಲಿಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ಯುವ ವಿಭಾಗವನ್ನು ಸೇರಿ, 2010ರಿಂದ 2012ರವರೆಗೆ ಅದರ ಮೊದಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.


2008ರಲ್ಲಿನಡೆದ ಫಿನ್ನಿಷ್‌ ಮುನ್ಸಿಪಲ್‌ ಚುನಾವಣೆಗೆ ಸನ್ನಾ ಸ್ಪರ್ಧಿಸಿದ್ದರು. 'ಪ್ರಥಮ ಚುಂಬನಂ ದಂತ ಭಗ್ನಂ' ಎಂಬಂತೆ ಅವರಿಗೆ ಸೋಲು ಎದುರಾಯಿತು. ಮಧ್ಯೆ ಸ್ವಲ್ಪ ಬಿಡುವು ತೆಗೆದುಕೊಂಡು ಮತ್ತೆ 2012ರಿಂದ ರಾಜಕಾರಣದಲ್ಲಿಪೂರ್ಣ ಪ್ರಮಾಣದಲ್ಲಿಸನ್ನಾ ಸಕ್ರಿಯರಾದರು. 27ನೇ ವಯಸ್ಸಿನಲ್ಲೇ ಟ್ಯಾಂಪೇರ್‌ ಸಿಟಿ ಕೌನ್ಸಿಲ್‌ಗೆ ಆಯ್ಕೆಯಾದರು. ಇದು ಅವರ ರಾಜಕೀಯ ಜೀವನಕ್ಕೆ ಬಹುದೊಡ್ಡ ತಿರುವು ನೀಡಿತ್ತು. ಅಷ್ಟೇ ಅಲ್ಲದೆ, ಅವರು ಇಲ್ಲಿಂದ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಅವರ ರಾಜಕೀಯ ಪಯಣವು ಪ್ರಧಾನಿಯ ಹುದ್ದೆಯವರೆಗೆ ಟಾಪ್‌ ಗೇರ್‌ನಲ್ಲಿಓಡಿತು. 2013ರಿಂದ 2017ರ ವರೆಗೂ ಸಿಟಿ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು. 2017ರಲ್ಲಿಪುನಃ ಆಯ್ಕೆಯಾದರು. ಆ ಮೇಲೆ ಟ್ಯಾಂಪೇರ್‌ ಪ್ರಾದೇಶಿಕ ಅಸೆಂಬ್ಲಿಯ ಸದಸ್ಯರಾಗಿದ್ದರು. ಇದೇ ಸಮಯದಲ್ಲಿ2013-16ವರೆಗೆ ಪಿರ್ಕಾನ್ಮಾ ರಿಜನಲ್‌ ಕೌನ್ಸಿಲ್‌ನ ಮೇಂಬರ್‌ ಕೂಡ ಆಗಿದ್ದರು.

30ನೇ ವರ್ಷದಲ್ಲಿಅಂದರೆ, 2014ರಲ್ಲಿಸನ್ನಾ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿಯ ಎರಡನೇ ಡೆಪ್ಯುಟಿ ಚೇರ್ಮನ್ನರಾಗಿ ಆಯ್ಕೆಯಾದರು. 2015ರಲ್ಲಿಪಿರ್ಕಾನ್ಮಾ ಪ್ರದೇಶದ ಪ್ರತಿನಿಧಿಯಾಗಿ ಫಿನ್ಲೆಂಡ್‌ ಸಂಸತ್ತಿಗೆ ಅಡಿಯಿಟ್ಟರು. ನಾಲ್ಕು ವರ್ಷಗಳ ಬಳಿಕ ಪುನಃ ಆಯ್ಕೆಗೊಂಡ ಸನ್ನಾ, 2019ರ ಜೂನ್‌ 6ರಂದು ಸಾರಿಗೆ ಮತ್ತು ಸಂವಹನ ಇಲಾಖೆಯ ಸಚಿವೆಯಾಗಿ ನೇಮಕಗೊಂಡರು.

ಹಂತ ಹಂತವಾಗಿ ರಾಜಕೀಯದಲ್ಲಿಮೇಲೇರಿದ ಸನ್ನಾ ಮರಿನ್‌ಗೆ ಚಿಕ್ಕ ವಯಸ್ಸಿಗೇ ದೇಶದ ಪ್ರಧಾನಿಯಾಗಬಹುದೆಂಬ ಸಣ್ಣ ಸುಳಿವು ಕೂಡ ಆರಂಭದ ದಿನಗಳಲ್ಲಿಇರಲಿಲ್ಲವೇನೋ? ಆದರೆ, ಅವರ ಬದ್ಧತೆ ಮತ್ತು ದೇಶದೆಡೆಗಿನ ಕಾಳಜಿ, ಸಮ್ಮಿಶ್ರ ಸರಕಾರವನ್ನು ಕರೆದೊಯ್ಯುವ ಛಾತಿ ಅವರನ್ನು ಇಂದು ದೇಶದ ಉನ್ನತ ಹುದ್ದೆಯವರೆಗೂ ಕರೆ ತಂದಿದೆ. ಸನ್ನಾಗಿಂತ ಮೊದಲ ಪ್ರಧಾನಿಯಾಗಿದ್ದ ರಿನ್ನಾ ಅವರು ಪೋಸ್ಟಲ್‌ ಮುಷ್ಕರವನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಸನ್ನಾ ಮರಿನ್‌ ಅವರಿಗೇನೂ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲ; ಶ್ರೀಮಂತರೂ ಅಲ್ಲ. 1985 ನವೆಂಬರ್‌ 16ರಂದು ಸನ್ನಾ ಮರಿನ್‌ ಅವರು ಹೆಲ್ಸಿಂಕಿಯಲ್ಲಿಜನಸಿದರು. ತಂದೆ ಕುಡುಕನಾಗಿದ್ದ. ಹೀಗಾಗಿ ತಂದೆ-ತಾಯಿಗಳಿಬ್ಬರು ಸನ್ನಾ ತೀರಾ ಚಿಕ್ಕವಳಿದ್ದಾಗಲೇ ಬೇರೆ ಬೇರೆಯಾದರು. ಆಗ ಇಡೀ ಕುಟುಂಬ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿತ್ತು. ತಾಯಿ ಮತ್ತು ತಾಯಿಯ ಗೆಳತಿ(ಸಂಗಾತಿ)ಯ ಪೋಷಕತ್ವದಲ್ಲಿಸನ್ನಾ ಬೆಳೆದರು. ಸನ್ನಾ ಅವರದ್ದು ರೇನ್‌ಬೋ ಫ್ಯಾಮಿಲಿ(ಎಲ್‌ಜಿಬಿಟಿ ಕಮ್ಯುನಿಟಿ). ತಮ್ಮ ಈ ಕುಟುಂಬದ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶವಿರಲಿಲ್ಲ. ಫಿನ್ಲೆಂಡ್‌ ಸಮಾಜದಲ್ಲಿಸಲಿಂಗ ಕುಟುಂಬಗಳು ನಿಷಿದ್ಧವಾಗಿವೆ. ಇಂಥ ಸಾಮಾಜಿಕ ಪರಿಸ್ಥಿತಿಯಲ್ಲಿಸನ್ನಾ ಅವರ ಮೇಲಾದ ಪರಿಣಾಮ ಬಗ್ಗೆ ನಾವು ಊಹಿಸಬಹುದು.

ಮಗುವಾಗಿ ತಾವು ಎದುರಿಸಿದ ಆ ದಿನಗಳನ್ನು ಅವರದ್ದೇ ಮಾತಿನಲ್ಲಿಹೇಳುವುದಾದರೆ, ಅವರಿಗೆ ಅದು ಸಂಪೂರ್ಣ ನಿಶ್ಶಬ್ಧ ರೀತಿಯ ಅನುಭವ. ಇದು ಅವರಿಗೆ ಅಸಮರ್ಥತೆಯ ಭಾವನೆಯನ್ನು ತಂದುಕೊಡುತ್ತಿತ್ತು. ಅವರನ್ನು ಒಂದು ಕುಟುಂಬ ರೀತಿಯಲ್ಲಿಅಥವಾ ಇನ್ನುಳಿದವರ ಜತೆ ಸರಿಸಮಾನವಾಗಿ ನೋಡುವ ಸ್ಥಿತಿಯಲ್ಲಿಫಿನ್ಲೆಂಡ್‌ ಸಮಾಜ ಇಲ್ಲ. ಆದರೆ, ಇದಾವುದೂ ಸನ್ನಾ ಅವರ ಆತ್ಮವಿಶ್ವಾಸವನ್ನು ಕುಂದಿಸಲಿಲ್ಲ. ತಮಗೆ ಬೇಕಾದದ್ದನ್ನು ಸಾಧಿಸುವ ಛಲಕ್ಕೆ ಅಡ್ಡಿಯಾಗಲಿಲ್ಲ.

ತಮ್ಮ ಆರಂಭದ ದಿನಗಳನ್ನು ಬಹುತೇಕ ಅವರು ಬೇಕರಿಯಲ್ಲಿಕೆಲಸ ಮಾಡುತ್ತಾ ಕಳೆದರು. ವಿಶೇಷ ಎಂದರೆ, ಅವರ ಕುಟುಂಬದಲ್ಲಿವಿಶ್ವವಿದ್ಯಾಲಯ ಮೆಟ್ಟಿಲು ತುಳಿದ ಮೊದಲ ವ್ಯಕ್ತಿ ಇವರು. ಸನ್ನಾ ಅವರ ಪ್ರತಿ ಸಾಹಸಕ್ಕೂ ತಾಯಿಯಿಂದ ಬೆಂಬಲ ದೊರೆಯುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ರಾಜಕಾರಣದ ಆಚೆಯೂ ಕೌಟುಂಬಿಕ ಜೀವನಕ್ಕೆ ಹೆಚ್ಚು ಮಹತ್ವ ನೀಡುವ ಸನ್ನಾ, ಮಾರ್ಕೋಸ್‌ ರಾಯ್ಕೊನೆನ್‌ ಎಂಬವರನ್ನು ವಿವಾಹವಾಗಿದ್ದು, 2018ರ ಜನವರಿಯಲ್ಲಿಅವರು ಎಮ್ಮಾ ಎಂಬ ಹೆಣ್ಣು ಮಗುವಿನ ತಾಯಿಯಾದರು. ಮಗುವಿಗೆ ಈಗ 22 ತಿಂಗಳು. ಸೋಷಿಯಲ್‌ ಮೀಡಿಯಾದಲ್ಲಿಗರ್ಭಿಣಿಯಾದಾಗಿನಿಂದ ಹಿಡಿದು ತಾಯಿಯಾಗುವವರೆಗಿನ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಆ ಮೂಲಕ ವೃತ್ತಿನಿರತ ತಾಯಿಯಾಗುವ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಯುನಿವರ್ಸಿಟಿ ಆಫ್‌ ಟ್ಯಾಂಪೇರ್‌ನಿಂದ ಪದವಿ ಪಡೆದಿರುವ ಸನ್ನಾ ಫಿನ್ನಿಷ್‌, ಇಂಗ್ಲಿಷ್‌ ಮತ್ತು ಸ್ವೀಡಿಷ್‌ ಭಾಷೆಗಳಲ್ಲಿಸರಾಗವಾಗಿ ಮಾತನಾಡುತ್ತಾರೆ. ಹೊರಾಂಗಣ ಚಟುವಟಿಕೆಗಳೆಂದರೆ ತುಂಬ ಇಷ್ಟ. ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಸನ್ನಾ ಎದುರು ಆಡಳಿತವೇನೂ ಸುಲಭವಾಗಿಲ್ಲ. ಪೋಸ್ಟಲ್‌ ಮುಷ್ಕರದಿಂದಾಗಿ ಮುನಿಸಿಕೊಂಡಿರುವ ಮೈತ್ರಿ ಪಕ್ಷಗಳನ್ನು ಒಂದೇ ದಿಕ್ಕಿನಡಿ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಇದೆ. ಸರಕಾರದ ಬಗ್ಗೆ ಜನರು ಕಳೆದುಕೊಂಡಿರುವ ವಿಶ್ವಾಸವನ್ನು ಮತ್ತೆ ಗಳಿಸುವ ದಾರಿ ಕೂಡ ಅಷ್ಟು ಸುಲಭವಾಗಿಲ್ಲ. ಹಾಗಾಗಿ, ತೀರಾ ಚಿಕ್ಕ ವಯಸ್ಸಿಗೇ ಪ್ರಧಾನಿಯಾಗಿರುವ ಸನ್ನಾ ಇದೆಲ್ಲವನ್ನೂ ನಿಭಾಯಿಸಬಲ್ಲರೇ ಎಂಬ ಪ್ರಶ್ನೆಗೆ ಅವರು ಆತ್ಮವಿಶ್ವಾಸದಿಂದಲೇ, ''ನನ್ನ ವಯಸ್ಸು ಅಥವಾ ಲಿಂಗದ ಬಗ್ಗೆ ಎಂದೂ ಯೋಚಿಸುವುದಿಲ್ಲ,'' ಎನ್ನುತ್ತಾರೆ. ಅಂದರೆ, ರಾಜಕಾರಣವೇ ಇರಲಿ, ಆಡಳಿತ ರಂಗವೇ ಇರಲಿ ನೀವು ಹೇಗೆ ವರ್ತಿಸುತ್ತೀರಿ, ನಿಮ್ಮ ಸಾಮರ್ಥ್ಯವನ್ನು ಹೇಗೆ ಪ್ರತಿಷ್ಠಾಪಿಸುತ್ತೀರಿ ಎಂಬುದಷ್ಟೇ ಮಹತ್ವದ್ದಾಗಿರುತ್ತದೆ. ಬಾಕಿ ಎಲ್ಲವೂ ನಗಣ್ಯ ಎಂಬುದನ್ನು ಅವರ ಮಾತುಗಳು ಧ್ವನಿಸುತ್ತವೆ.

ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಭಿನ್ನವಾಗಿರುವ ಫಿನ್ಲೆಂಡ್‌ ದೇಶದ ಚುಕ್ಕಾಣಿ ಹಿಡಿದಿರುವ ಸನ್ನಾ ಮರಿನ್‌, ಜಗತ್ತಿನ ಯುವತಿಯರಿಗೆ ಹೊಸ ರೋಲ್‌ ಮಾಡೆಲ್‌ ಅಂದರೆ ತಪ್ಪಲ್ಲ.

ಸೋಮವಾರ, ಡಿಸೆಂಬರ್ 9, 2019

Safety Apps: ಮಹಿಳೆಯರ ಫೋನ್‌ನಲ್ಲಿ ಇರಲೇಬೇಕಾದ ಆ್ಯಪ್ಸ್

'ಮಧ್ಯರಾತ್ರಿಯಲ್ಲಿ ಮಹಿಳೆಯೊಬ್ಬಳು ಸುರಕ್ಷಿತವಾಗಿ ಸಂಚರಿಸಿದಾಗಲೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕ ಹಾಗೆ' ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಆದರೆ, ಇತ್ತೀಚಿನ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಗಮನಿಸಿದರೆ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲಎಂದು ಹೇಳಬೇಕು. ಯಾಕೆಂದರೆ, ಇತ್ತೀಚೆಗಷ್ಟೇ ಬೆಳಕಿಗೆ ಬಂದ ತೆಲಂಗಾಣದ 'ದಿಶಾ ಅತ್ಯಾಚಾರ' ಪ್ರಕರಣವು ಇಡೀ ದೇಶದಲ್ಲಿಆಕ್ರೋಶಕ್ಕೆ ಕಾರಣವಾಗಿದೆ. 2012ರಲ್ಲಿ ದಿಲ್ಲಿಯಲ್ಲಿ ನಡೆದ 'ನಿರ್ಭಯಾ ಪ್ರಕರಣ'ವಂತೂ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ವಸ್ತುಸ್ಥಿತಿ ಹೀಗಿದ್ದಾಗಲೂ, ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರು ತಮ್ಮನ್ನು ತಾವು ತಕ್ಕಮಟ್ಟಿಗಾದರೂ ಸುರಕ್ಷಿತವಾಗಿಟ್ಟುಕೊಳ್ಳಬಹುದು. ಸ್ಮಾರ್ಟ್‌ಫೋನ್‌ ದಿನಮಾನದಲ್ಲಿ ಬದುಕುತ್ತಿರುವ ನಮಗೆ ತಂತ್ರಜ್ಞಾನ ಲಾಭ ಅಗಾಧವಾಗಿದೆ. ವಿಶೇಷವಾಗಿ ಮಹಿಳೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಆ್ಯಪ್‌ಗಳು ಕಾರ್ಯಾಚರಿಸುತ್ತಿವೆ. ವಿಷಮ ಸ್ಥಿತಿಯಲ್ಲಿಅಲರ್ಟ್‌ ರವಾನಿಸುವ, ಅಸುರಕ್ಷಿತ ಪ್ರದೇಶಗಳನ್ನು ಎಚ್ಚರಿಕೆ ನೀಡುವುದು ಸೇರಿದಂತೆ ಅನೇಕ ಫೀಚರ್‌ಗಳನ್ನು ಒಳಗೊಂಡ ಆ್ಯಪ್‌ಗಳಿವೆ. ಅಂಥ ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸುರಕ್ಷಾ ಆ್ಯಪ್‌ (Suraksha)
ಈ ಆ್ಯಪ್‌ನಲ್ಲಿ ಬಳಕೆದಾರರು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸ್ನೇಹಿತರು, ಪೋಷಕರ ಮೊಬೈಲ್‌ ನಂಬರ್‌ಗಳನ್ನು ಸೇರಿಸಬಹುದು. ತುರ್ತು ಸಂದರ್ಭದಲ್ಲಿ ಆ್ಯಪ್‌ ತರೆದು ಪವರ್‌ ಬಟನ್‌ ಅನ್ನು ಒತ್ತಿ ಹಿಡಿದರೆ ಪೊಲೀಸ್‌ ಸಹಾಯವಾಣಿಗೆ ಕರೆ ಹೋಗುತ್ತದೆ. ಇಷ್ಟು ಮಾತ್ರವಲ್ಲದೇ, ಬಳಕೆದಾರರು ಇರುವ ಪ್ರದೇಶದ ಸ್ಥಳ ಗುರುತು, ಆಡಿಯೊ ಮತ್ತು ವಿಡಿಯೊ ಕೂಡ ರವಾನೆಯಾಗುತ್ತದೆ. ಜತೆಗೆ, ಸೂಚಿಸಲಾದ ತುರ್ತು ನಂಬರ್‌ಗಳಿಗೂ ಕರೆ ಕೂಡ ಹೋಗುತ್ತದೆ. ಇದರಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಮಹಿಳಾ ಬಳಕೆದಾರರು ನೆರವು ಪಡೆಯಲು ಸಾಧ್ಯವಾಗುತ್ತದೆ. ಅಂದ ಹಾಗೆ ಈ ಆ್ಯಪ್‌ ಅನ್ನು ಬೆಂಗಳೂರು ಪೊಲೀಸರು ಅಭಿವೃದ್ಧಿಪಡಿಸಿದ್ದಾರೆ.

ಎಸ್‌ಒಎಸ್‌(SOS Stay Safe)

ಯಾವುದೇ ರೀತಿಯ ಕಷ್ಟದಲ್ಲಿ ಸಿಲುಕಿದಾಗ ಸಹಾಯಕ್ಕಾಗಿ ಮತ್ತೊಬ್ಬರ ನೆರವು ಪಡೆಯಲು ಈ ಆ್ಯಪ್‌ ಅವಕಾಶ ಕಲ್ಪಿಸಿಕೊಡುತ್ತದೆ. ಇಂಥ ಸಂದರ್ಭದಲ್ಲಿಈ ಆ್ಯಪ್‌ ಬಳಕೆದಾರರ ಗೆಳೆಯರು, ಕುಟುಂಬದ ಸದಸ್ಯರಿಗೆ ತ್ವರಿತ ಗತಿಯಲ್ಲಿಸಂದೇಶವನ್ನು ರವಾನಿಸುತ್ತದೆ. ಬಳಕೆದಾರರು ತಮ್ಮ ಕೈಯಲ್ಲಿರುವ ಉಪಕರಣವನ್ನು ಅಲುಗಾಡಿಸಿದರೆ ಸಾಕು ಎಸ್‌ಒಎಸ್‌ ಸಂದೇಶ ಹೋಗುತ್ತದೆ. ಲೈಂಗಿಕ ಕಿರುಕುಳ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಈ ಆ್ಯಪ್‌ನ ನೆರವು ಪಡೆಯಬಹುದು.

​ಸ್ಮಾರ್ಟ್‌ 24x7(Smart 24x7)'
ಈ ಆ್ಯಪ್‌ನಲ್ಲಿರುವ ಪ್ಯಾನಿಕ್‌ ಬಟನ್‌ ಪ್ರೆಸ್‌ ಮಾಡಿದರೆ ಪೊಲೀಸರಿಗೆ ಕರೆ ಹೋಗುತ್ತದೆ. ಹಾಗೆಯೇ ಈ ಮೊದಲೇ ಬಳಕೆದಾರರು ಸೆಟ್‌ ಮಾಡಿದ ಫೋನ್‌ ನಂಬರ್‌ಗಳಿಗೂ ಕರೆ ಮಾಡುವ ಅವಕಾಶವನ್ನು ಈ ಆ್ಯಪ್‌ ಒದಗಿಸುತ್ತದೆ. ಒಂದು ವೇಳೆ, ಜಿಪಿಆರ್‌ಎಸ್‌ ಕಾರ್ಯನಿರ್ವಹಿಸದಿದ್ದ ಪಕ್ಷದಲ್ಲಿ ಲೊಕೇಷನ್‌ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ಈ ಆ್ಯಪ್‌ ಕಳುಹಿಸುತ್ತದೆ. ಟ್ರ್ಯಾಕಿಂಗ್‌, ಕಸ್ಟಮ್‌ ಕೇರ್‌ ಮತ್ತು ಚಾಟ್‌ ಸೇರಿದಂತೆ ಇನ್ನೂ ಅನೇಕ ಫೀಚರ್‌ಗಳಿವೆ. ತುರ್ತು ಸಂದರ್ಭದಲ್ಲಿ ಬಳಕೆದಾರರಿರುವ ಜಾಗದ ಆಡಿಯೊ-ವಿಡಿಯೊವನ್ನು ದಾಖಲಿಸಿಕೊಳ್ಳುತ್ತದೆ.

ಮೈ ಸೇಫ್ಟಿಪಿನ್‌(My Safetipin)

ಮ್ಯಾಪ್‌ ಬೇಸ್ಡ್‌ ಸೇಫ್ಟಿ ಆ್ಯಪ್‌ ತುಂಬ ಉಪಯುಕ್ತವಾಗಿದೆ. ಈ ಆ್ಯಪ್‌ ವಿಶೇಷ ಏನೆಂದರೆ, ನೀವಿರುವ ಸ್ಥಳದ ಸುರಕ್ಷತೆಯ ಶ್ರೇಯಾಂಕವನ್ನು ಸೂಚಿಸುತ್ತದೆ. ಆ್ಯಪ್‌ ನಕ್ಷೆಯಲ್ಲಿರುವ ಪಿನ್‌ ಸ್ಥಳದ ಸುರಕ್ಷತೆಯ ಶ್ರೇಯಾಂಕವನ್ನು ಒದಗಿಸುತ್ತದೆ. ಅಸುರಕ್ಷಿತ ಪ್ರದೇಶವಾಗಿದ್ದರೆ ಪಿನ್‌ ಕೆಂಪು ಬಣ್ಣದ್ದಾಗಿರುತ್ತದೆ. ಸುರಕ್ಷಿತ ಪ್ರದೇಶವಾಗಿದ್ದರೆ ಅದು ಹಸಿರು ಬಣ್ಣದ್ದಾಗಿರುತ್ತದೆ. ಕಡಿಮೆ ಸುರಕ್ಷತೆಯ ಪ್ರದೇಶವನ್ನು ಅಂಬರ್‌(ತುಸು ಹಳದಿ) ಪಿನ್‌ ಸೂಚಿಸುತ್ತದೆ. ನೀವಿರುವ ಪ್ರದೇಶದಲ್ಲಿನ ಸಾರ್ವಜನಿಕ ಸಾರಿಗೆ, ಅಲ್ಲಿರುವ ಪೊಲೀಸ್‌ ಠಾಣೆ, ಫಾರ್ಮಸಿ ಅಥವಾ ಹತ್ತಿರದ ಎಟಿಎಂ, ಜನಸಂದಣಿ ಪ್ರದೇಶ ಮಾಹಿತಿ ನೀಡುವುದು ಮಾತ್ರವಲ್ಲದೆ, ರಿಯಲ್‌ ಟೈಮ್‌ ಲೊಕೇಷನ್‌ ವಿವರವನ್ನು ಜಿಪಿಎಸ್‌ ಟ್ರ್ಯಾಕಿಂಗ್‌ ಮೂಲಕ ನಿಮ್ಮ ಹತ್ತಿರದವರೆಗೆ ರವಾನಿಸುತ್ತದೆ. ಉಳಿದ ಬಳಕೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ನಿಮಗೆ ಅಸುರಕ್ಷಿತ ಎನಿಸಿದ ಪ್ರದೇಶವನ್ನೂ ಮ್ಯಾಪ್‌ನಲ್ಲಿ ಪಿನ್‌ ಮಾಡಬಹುದು.

ರೆಸ್ಕೂಯರ್‌ (Rescuer)

ಬಳಕೆದಾರರು ಈ ಆ್ಯಪ್‌ನಲ್ಲಿರುವ ಎಮರ್ಜೆನ್ಸಿ ಟ್ಯಾಬ್‌ ಪ್ರೆಸ್‌ ಮಾಡಿದರೆ ತಕ್ಷಣವೇ ಗೂಗೂಲ್‌ ಲೊಕೇಷನ್‌ ಸಹಿತ ಸಂದೇಶವನ್ನು ಬಳಕೆದಾರರ ಕಾಂಟಾಕ್ಟ್ ಲಿಸ್ಟ್‌ ಮತ್ತು ಫೇಸ್‌ಬುಕ್‌ ಫ್ರೆಂಡ್‌ ಲಿಸ್ಟ್‌ನಲ್ಲಿರುವ ಐವರಿಗೆ ಸಂದೇಶವನ್ನು ಕಳುಹಿಸುತ್ತದೆ. ಹಾಗೆಯೇ, ತುರ್ತು ಸಂದರ್ಭದಲ್ಲಿ ಇಬ್ಬರಿಕೆ ಕರೆ ಮಾಡುವ ಆಯ್ಕೆಯನ್ನು ಹೊಂದಿದೆ.

ನಿರ್ಭಯ(Nirbhaya)

ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಆ್ಯಪ್‌ ಅನ್ನು ರೂಪಿಸಲಾಗಿದೆ. ಬಳಕೆದಾರರು ದಾಖಲಿಸಿದ ಫೋನ್‌ ನಂಬರ್‌ಗಳಿಗೆ ಅಲರ್ಟ್‌ ರವಾನಿಸುವ ಕೆಲಸವನ್ನು ಇದು ಮಾಡುತ್ತದೆ. ಅಸುರಕ್ಷಿತ ಪ್ರದೇಶದ ಬಗ್ಗೆಯೂ ಇದು ಮಾಹಿತಿ ನೀಡುತ್ತದೆ. ಬಳೆಕದಾರರು ಅಂಥ ಪ್ರದೇಶಕ್ಕೆ ಹೋದಾಗ ಈ ಮಾಹಿತಿಯನ್ನು ನೀಡುತ್ತದೆ.

ಸಿಟಿಜನ್‌ಕಾಪ್‌ (CitizenCop)

ಈ ಆ್ಯಪ್‌ ಬಳಸಿಕೊಂಡು ನೀವಿರುವ ಸ್ಥಳಲ್ಲಿ ನಡೆಯುವ ಕ್ರಿಮಿನಲ್‌ ಕೆಲಸಗಳು ಅಥವಾ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ರಿಪೋರ್ಟ್‌ ಮಾಡಬಹುದು. ಮತ್ತು ನಿಮ್ಮ ಹೆಸರನ್ನು ಗುಪ್ತವಾಗಿಡಲಾಗುತ್ತದೆ. ಈ ಆ್ಯಪ್‌ನಲ್ಲಿ ಲಕ್ಷಣ್‌ರೇಖಾ ಎಂಬ ಫೀಚರ್‌ ಇದ್ದು, ಅದನ್ನು ಮಹಿಳೆಯರು ತುರ್ತು ಸಂದರ್ಭದಲ್ಲಿ ಬಳಸಬಹುದು. ಟ್ರ್ಯಾಕಿಂಗ್‌, ಎಮರ್ಜೆನ್ಸಿ ಕರೆ, ಎಸ್‌ಒಎಸ್‌ ಎಚ್ಚರಿಕೆಗಳನ್ನು ರವಾನಿಸುತ್ತದೆ.

​ಚಿಲ್ಲಾ(Chilla)

ತುರ್ತು ಸಂದರ್ಭದಲ್ಲಿ ಮಹಿಳೆಯರು ತಮ್ಮ ಫೋನ್‌ ಅನ್ನು ಬಳಸಲು ಸಾಧ್ಯವಾಗದಿದ್ದಾಗ, ಜೋರಾಗಿ ಕೂಗುವ ಮೂಲಕ ಈ ಚಿಲ್ಲಾ ಆ್ಯಪ್‌ ಸಕ್ರಿಯಗೊಳಿಸಬಹುದು. ಆಗ ಈ ಆ್ಯಪ್‌ ಪೋಷಕರಿಗೆ ತುರ್ತು ಸಂದೇಶವನ್ನು ರವಾನಿಸುತ್ತದೆ. ಇದರ ಹೊರತಾಗಿಯೂ, ಈ ಮೊದಲೇ ಸೆಟ್‌ ಮಾಡಿದ ಫೋನ್‌ ನಂಬರ್‌ಗಳಿಗೂ ಸಂದೇಶಗಳನ್ನು ಕಳುಹಿಸುತ್ತದೆ. ಇದಕ್ಕಾಗಿ ನೀವು ಪವರ್‌ ಬಟನ್‌ ಅನ್ನು 5 ನಿಮಿಷದವರೆಗೆ ಒತ್ತಿ ಹಿಡಿಯಬೇಕು.


DuckDuckGo: ಗೂಗಲ್‌ಗೆ ಸ್ಪರ್ಧೆ ಒಡ್ಡಲಿದೆಯೇ ಡಕ್‌ಡಕ್‌ಗೋ?

- ಮಲ್ಲಿಕಾರ್ಜುನ ತಿಪ್ಪಾರ

ಮೊನ್ನೆ ಮೊನ್ನೆಯಷ್ಟೇ ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ ಅವರು, ''ಡಕ್‌ಡಕ್‌ಗೋ ನನಗೆ ತುಂಬ ಇಷ್ಟವಾಗಿದ್ದು, ಅದನ್ನೇ ನನ್ನ ಡಿಫಾಲ್ಟ್‌ ಸರ್ಚ್ ಎಂಜಿನ್‌ ಆಗಿ ಬದಲಿಸಿಕೊಂಡಿರುವೆ,'' ಎಂದು ಟ್ವೀಟ್‌ ಮಾಡಿದ್ದು ದೊಡ್ಡ ಸುದ್ದಿಗೆ ಕಾರಣವಾಯಿತು. ತಂತ್ರಜ್ಞಾನ ಮಾರುಕಟ್ಟೆಯಲ್ಲಿಗೂಗಲ್‌ ಸರ್ಚ್ ಎಂಜಿನ್‌ ಏಕಸ್ವಾಮ್ಯವನ್ನು ಹೊಂದಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಡಕ್‌ಡಕ್‌ಗೋ ಕೂಡ ಸದ್ದು ಮಾಡುತ್ತಿದೆ. ಹಾಗಂತ, ಸಿಕ್ಕಾಪಟ್ಟೆ ಸ್ಪರ್ಧೆ ನೀಡುತ್ತಿದೆ ಎಂದರ್ಥವಲ್ಲ. ಗೂಗಲ್‌ ಸರ್ಚ್ ಎಂಜಿನ್‌ ಬಳಕೆಯಲ್ಲಿಶೇ. 81.5ರಷ್ಟು ಪಾಲು ಹೊಂದಿದ್ದರೆ, ಡಕ್‌ಡಕ್‌ಗೋ ಪಾಲು ಕೇವಲ ಶೇ. 0.28 ಮಾತ್ರ. ಆದರೆ, ಅದರ ವಿಶ್ವಾಸರ್ಹತೆ ಹೆಚ್ಚಾಗುತ್ತಿದೆ ಎಂದರೆ ತಪ್ಪಲ್ಲ.

ಗೂಗಲ್‌ ಸರ್ಚ್ ಎಂಜಿನ್‌ ನಮ್ಮ ಬದುಕಿನ ಭಾಗವೇ ಆಗಿದ್ದರೂ, ಅದು ನಮ್ಮ ಖಾಸಗಿತನಕ್ಕೆ ಕನ್ನ ಹಾಕಿದೆ, ನಮ್ಮ ನಡವಳಿಕೆ ಮೇಲೆ ಸದಾ ಕಣ್ಣಿಟ್ಟಿರುತ್ತದೆ, ಬಳಕೆದಾರರ ಎಲ್ಲ ಚಟುವಟಿಕೆಗಳನ್ನು ಬೆನ್ನಟ್ಟಿ ಅದರ ಅನ್ವಯ ಜಾಹೀರಾತುಗಳನ್ನು ಪೂರೈಸುತ್ತಿದೆ... ಹೀಗೆ ನಾನಾ ಕಾರಣಗಳಿಂದ ಬಳಕೆದಾರರಿಗೆ ಒಂದಿಷ್ಟು ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂಬ ಆರೋಪಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದ್ದು, ಅದಕ್ಕಾಗಿ ಯುರೋಪ್‌ ಕೋರ್ಟ್‌ಗಳ ಕಟೆಕಟೆಯಲ್ಲಿ ನಿಂತಿದೆ. ಇಂಥ ಹೊತ್ತಿನಲ್ಲಿ ಟ್ವಿಟರ್‌ ದೈತ್ಯ ಕಂಪನಿಯೊಬ್ಬರು ಸಿಇಒ ತಮ್ಮ ಡಿಫಾಲ್ಟ್‌ ಸರ್ಚ್ ಎಂಜಿನ್‌ ಡಕ್‌ಡಕ್‌ಗೋ ಎಂದು ಹೇಳಿದ್ದಾರೆಂದರೆ ಅದಕ್ಕೆ ಮಹತ್ವ ಬಂದೇ ಬರುತ್ತದೆ.


ಕೃತಿಕ ಬುದ್ಧಿಮತ್ತೆ(ಎಐ) ಆಧರಿತ ಡಿಜಿಟಲ್‌ ಸೇವೆಗಳು ನಮ್ಮನ್ನು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಯಾವ ಮಾಹಿತಿಯೂ ರಹಸ್ಯವಾಗಿ ಉಳಿಯುವುದಿಲ್ಲ. ಎಷ್ಟೇ ಕಠಿಣ ಪಾಸ್‌ವರ್ಡ್ ನಮ್ಮ ಮಾಹಿತಿ ಪರರ ಪಾಲಾಗುವುದನ್ನು ತಡೆಯಲಾರದು. ಮಾಹಿತಿ ತಂತ್ರಜ್ಞಾನ ಎಂಬ ಬಟಾ ಬಯಲಿನಲ್ಲಿನಿಂತಿರುವ ನಾವು, ನಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಎದೆಯುಬ್ಬಿಸಿಕೊಂಡಿದ್ದೇವೆ. ಆನ್‌ಲೈನ್‌ನಲ್ಲಿನ ನಮ್ಮ ಪ್ರತಿ ಚಟುವಟಿಕೆಯೂ ನಮ್ಮನ್ನು ಬೆತ್ತಲಾಗಿಸುತ್ತದೆ! ಖಾಸಗಿ ಮಾಹಿತಿಯನ್ನು ಕಾಪಾಡಿಕೊಳ್ಳುವ ವಾಗ್ದಾನಗಳನ್ನು ಎಲ್ಲಸಂಸ್ಥೆಗಳು ನೀಡುತ್ತವೆ. ಆದರೆ, ಅದೇನೂ ಪರಮ ಸತ್ಯವಲ್ಲ.

ಹೀಗಿದ್ದೂ ಡಕ್‌ಡಕ್‌ಗೋ ಮಾತ್ರ ತಾನು ಬಳಕೆದಾರರ ಖಾಸಗಿ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಿದೆ. ಗೂಗಲ್‌ನಂತೆ ಡಕ್‌ಡಕ್‌ಗೋ, ಬಳಕೆದಾರರ ಚಟುವಟಿಕೆ ಮೇಲೆ ನಿಗಾ ವಹಿಸುವುದು, ಐಪಿ ಅಡ್ರೆಸ್‌ಗಳನ್ನು ಪಡೆಯುವುದು ಮತ್ತು ಆನ್‌ಲೈನ್‌ ನಡುವಳಿಕೆಯ ಆಧಾರದ ಮೇಲೆ ಜಾಹೀರಾತುಗಳನ್ನು ಫುಶ್‌ ಮಾಡುವುದಾಗಲಿ ಮಾಡುವುದಿಲ್ಲಎಂಬುದು ಬಳಕೆದಾರರ ಅಂಬೋಣ. ಹಾಗಾಗಿ, ನಿಧಾನವಾಗಿ ಗೂಗಲ್‌ ಸರ್ಚ್ ಎಂಜಿನ್‌ಗೆ ಡಕ್‌ಡಕ್‌ಗೋ ಪರ್ಯಾಯ ಎಂಬ ರೀತಿಯಲ್ಲಿ ಬಿಂಬಿತವಾಗುತ್ತದೆ. ಬಳಕೆಯ ಪ್ರಮಾಣದ ಗಮನಿಸಿದರೆ ಸದ್ಯಕ್ಕೆ ಹಾಗೇ ಹೇಳುವುದು ತಪ್ಪು. ಹಾಗಂತ, ತೀರಾ ಕಡೆಗಣಿಸುವಂತೆಯೂ ಇಲ್ಲ.

2019ರ ನವೆಂಬರ್‌ ಅಂಕಿ-ಸಂಖ್ಯೆಗಳನ್ವಯ ಡಕ್‌ಡಕ್‌ಗೋ ನಿತ್ಯ ಸರಾಸರಿ 4.8 ಕೋಟಿ ಬಳಕೆದಾರರನ್ನು ಹೊಂದಿದೆ. ಅತಿ ಹೆಚ್ಚು ವೀಕ್ಷಿಸಿದ ಆಧಾರದ ಮೇಲೆ ಶೋಧಗಳನ್ನು ಗೂಗಲ್‌ ನಿಮ್ಮ ಮುಂದಿಟ್ಟರೆ, ಡಕ್‌ಡಕ್‌ಗೋ ಅತಿ ಹೆಚ್ಚು ನಿಖರವಾದ ಶೋಧಗಳನ್ನು ಬಳಕೆದಾರರಿಗೆ ನೀಡುತ್ತದೆ. ಹಾಗಂತ ಅದು ಹೇಳಿಕೊಂಡಿದೆ. ಇದು ತಕ್ಕಮಟ್ಟಿಗೂ ನಿಜವೂ ಹೌದು. ಡಕ್‌ಡಕ್‌ಗೋ ಸರ್ಚ್ಎಂಜಿನ್‌ನಲ್ಲಿ ನಿಮಗೆ ಬೇಕಿರುವ ವಿಷಯವನ್ನು ಶೋಧಿಸಿದರೆ ಅಸಂಖ್ಯ ಮಾಹಿತಿ ನಿಮ್ಮ ಮುಂದೆ ಬಂದು ಬೀಳುವುದಿಲ್ಲ.

ಗ್ರೇಟರ್‌ ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾದ ಪಾವೊಲಿಯಲ್ಲಿ ಡಕ್‌ಡಕ್‌ಗೋ ಕಚೇರಿಯನ್ನು ಹೊಂದಿದ್ದು, ಬೆರಳೆಣಿಕೆ ಉದ್ಯೋಗಿಗಳನ್ನು ಹೊಂದಿದೆ. 11 ವರ್ಷಗಳ ಹಿಂದೆ ಗೆಬ್ರೀಯಲ್‌ ವಿನ್‌ಬರ್ಗ್‌ ಎಂಬುವವರು ಇದನ್ನು ಹುಟ್ಟುಹಾಕಿದರು. 2011 ಫೆಬ್ರವರಿ 22ರಂದು ಡಿಡಿಜಿ.ಜಿಜಿ(ddg.gg) ಡೊಮೈನ್‌ ನೇಮ್‌ ಅಡಿ ಕಂಪನಿ ನೋಂದಣಿಯಾಗಿದೆ. 2018ರಲ್ಲಿ ಡಕ್‌.ಕಾಂ(duck.com) ಸ್ವಾಧೀನ ಪಡಿಸಿಕೊಂಡ ಬಳಿಕ ಡಕ್‌ಡಕ್‌ಗೋ.ಕಾಂ(https://duckduckgo.com/) ಎಂದು ಬದಲಾಯಿತು. ಇನ್ಸ್‌ಟಂಟ್‌ ಆನ್ಸರ್ಸ್‌, ಟಾರ್‌ ಅಕ್ಸೆಸ್‌, ವಾಟ್ಸ್‌ ಸರ್ಚ್, ಬ್ಯಾಂಗ್ಸ್‌ ಇವುಗ ಡಕ್‌ಡಕ್‌ಗೋ ಸರ್ಚ್ ಎಂಜಿನ್‌ನ ವಿಶೇಷತೆಗಳಾಗಿವೆ.

ವೈಯಕ್ತಿಕ ಮಾಹಿತಿ ಸಂಗ್ರಹವಿಲ್ಲಡಕ್‌ಡಕ್‌ ಗೋ ಡಿಫಾಲ್ಟ್‌ ಆಗಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲಅಥವಾ ಹಂಚಿಕೆ ಮಾಡುವುದಿಲ್ಲ. ಇದು ತಮ್ಮ ಪ್ರೈವೇಸಿ ಪಾಲಿಸಿಯಾಗಿದೆ ಎನ್ನುತ್ತಾರೆ ಡಕ್‌ಡಕ್‌ಗೋ ಹಿಂದಿನ ರೂವಾರಿ ಗೆಬ್ರೀಯಲ್‌ ವಿನ್‌ಬರ್ಗ್‌ ಅವರು.

ಪ್ರಮುಖ ಸರ್ಚ್ ಎಂಜಿನ್‌ಗಳುಗೂಗಲ್‌, ಯಾಹೂ, ಬಿಂಗ್‌, ಯಾಂಡೆಕ್ಸ್‌.

ಈ ಲೇಖನವು ವಿಜಯ ಕರ್ನಾಟಕದ 2019ರ ಡಿಸೆಂಬರ್ 12ರ ಸಂಚಿಕೆಯಲ್ಲಿ ಪ್ರಕಟವಾಗಿದೆ