ಶನಿವಾರ, ಮಾರ್ಚ್ 16, 2019

2014ರಲ್ಲಿ ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್‌ಗೆ ಹೀನಾಯ ಸೋಲು

ಯುಪಿಎ-2 ಅವಧಿಯಲ್ಲಿ ಕಾಂಗ್ರೆಸ್‌ನ ಸ್ವಯಂಕೃತ ಅಪರಾಧಗಳು, ಹಗರಣಗಳೇ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಆ ಪಕ್ಷ ದ ಹೀನಾಯ ಸೋಲಿಗೆ ಕಾರಣವಾಯಿತು. 2004-2009ರ ಅವಧಿಯಲ್ಲಿ ಯುಪಿಎ ಬಗ್ಗೆ ಜನರು ಹೊಂದಿದ್ದ ಸಾವಧಾನ ಭಾವ 2014ರ ಚುನಾವಣೆ ಹೊತ್ತಿಗೆ ಆಕ್ರೋಶವಾಗಿ ಪರಿಣಮಿಸಿತು. ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಮತ್ತು ಅವರ ಸಂಪುಟದ ಅನೇಕ ಸಚಿವರ ವಿರುದ್ಧವೇ ಕಲ್ಲಿದ್ದಲು, 2ಜಿ ಸ್ಪೆಕ್ಟ್ರಮ್‌, ಕಾಮನ್ವೆಲ್ತ್‌, ಆದರ್ಶ ಹೌಸಿಂಗ್‌, ಆಗಸ್ಟಾವೆಸ್ಟಲ್ಯಾಂಡ್‌ ಸೇರಿದಂತೆ ಇನ್ನಿತರ ಹಗರಣಗಳು ಕೇಳಿ ಬಂದವು. ದೇಶದಲ್ಲಿ ಎಷ್ಟೆಲ್ಲ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಧಾನಿ ಸಿಂಗ್‌ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂಬ ಆರೋಪ ಸಾಮಾನ್ಯವಾಗಿತ್ತು. 
ಮತ್ತೊಂದೆಡೆ, ಬಿಜೆಪಿಯು ನರೇಂದ್ರ ಮೋದಿ ಅವರನ್ನು ತಮ್ಮ ಸದೃಢ ನಾಯಕರನ್ನಾಗಿ ಬಿಂಬಿಸಿತಲ್ಲದೇ, ದೇಶವನ್ನು ಮುನ್ನಡೆಸಲು ಇವರೇ ಸೂಕ್ತರು ಎಂದು ಪ್ರಚಾರ ಮಾಡಿತು. ಈ ಅವಧಿಯಲ್ಲಾದ ಒಟ್ಟು ಬೆಳವಣಿಗೆಗಳು ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷ ಗಳ ವಿರುದ್ಧ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದವು. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಖಂಡಿತ ಸೋಲುತ್ತದೆ ಎಂದು ಎಲ್ಲರೂ ಉಹಿಸಿದ್ದರು. ಆದರೆ, ತೀರಾ ಡಬಲ್‌ ಡಿಜಿಟ್‌ಗೆ ಕುಸಿಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅಂತಿಮವಾಗಿ ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್‌ 44 ಸ್ಥಾನಗಳನ್ನು ಪಡೆದ ಹೀನಾಯ ಸೋಲು ಕಂಡಿತು. ಮತ್ತೊಂದೆಡೆ ಬಿಜೆಪಿ ಏಕಾಂಗಿಯೇ 282 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯ ಸಾಧಿಸಿತು. ಕಪ್ಪು ಹಣದ ವಿರುದ್ಧ ಸಮರ ಸಾರುವ ಭರವಸೆ ನೀಡಿದ್ದ ಮೋದಿ ಅವರು ಪ್ರಧಾನಿಯಾದರು. ವಾಜಪೇಯಿ ಬಳಿಕ ಪ್ರಧಾನಿಯಾದ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆ ಅವರದ್ದಾಯಿತು. ಈ ಚುನಾವಣೆಯಲ್ಲಿ ಎನ್‌ಡಿಎ ಒಟ್ಟು 336 ಸ್ಥಾನಗಳನ್ನು ಗೆದ್ದರೆ, ಯುಪಿಎ ಗೆದ್ದಿದ್ದು ಕೇವಲ 60 ಸ್ಥಾನ ಮಾತ್ರ. ಅಧಿಕೃತ ಪ್ರತಿಪಕ್ಷ ನಾಯಕ ಇರಲಿಲ್ಲ ಎಂಬುದು 16ನೇ ಲೋಕಸಭೆಯ ವಿಶೇಷ. ಅಧಿಕೃತ ಪ್ರತಿಪಕ್ಷ ವಾಗಬೇಕಿದ್ದರೆ 545 ಸ್ಥಾನಗಳ ಪೈಕಿ ಕನಿಷ್ಠ 55 ಸ್ಥಾನಗಳನ್ನು ಗೆಲ್ಲಬೇಕು. ಆದರೆ, ಯಾವ ಪಕ್ಷ ಕ್ಕೂ ಅಷ್ಟು ಸ್ಥಾನಗಳನ್ನು ಗೆಲ್ಲಲಿಲ್ಲ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ಲೋಕಸಭೆಯಲ್ಲಿ ತನ್ನ ನಾಯಕನನ್ನಾಗಿ ಆಯ್ಕೆ ಮಾಡಿತು. ಈಗ ಮತ್ತೆ ಬಿಜೆಪಿ, ಕಾಂಗ್ರೆಸ್‌ 2019ರ ಚುನಾವಣೆಗೆ ಸಜ್ಜಾಗಿವೆ. 
- ತಿಪ್ಪಾರ

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ನೆಹರು ಸಮಾಜವಾದಿ ನೀತಿ ವಿರೋಧಿಸಿ ಸ್ವತಂತ್ರ ಪಾರ್ಟಿ ಕಟ್ಟಿದ ಸಿ.ರಾಜಗೋಪಾಲಾಚಾರಿ

ಒಂದು ಕಾಲದಲ್ಲಿ ಸ್ವತಂತ್ರ ಪಾರ್ಟಿಭಾರತೀಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ ಪಕ್ಷ ವಾಗಿತ್ತು. 1959ರಿಂದ 1974ರವರೆಗೆ ಸಕ್ರಿಯವಾಗಿದ್ದ ಈ ಪಕ್ಷ ವನ್ನು ಮುನ್ನಡೆಸಿದ್ದು ಸಿ. ರಾಜಗೋಪಾಲಾಚಾರಿ ಅವರು. ಅಂದಿನ ಪ್ರಧಾನಿ ನೆಹರು ಅವರ ಸಮಾಜವಾದಿ ಧೋರಣೆ ವಿರೋಧಿಸಿ ರಾಜಗೋಪಾಲಾಚಾರಿ ಅವರು ಪಕ್ಷ ವನ್ನು ಸ್ಥಾಪಿಸಿದರು. ಪಕ್ಷ ದ ಸೈದ್ಧಾಂತಿಕ ನೆಲೆ ಸಂಪ್ರದಾಯವಾದವಾದರೂ ಅದರ ಸ್ವರೂಪದಲ್ಲಿ ಉದಾರವಾದವೂ ಇತ್ತು. ಪಕ್ಷ ಪ್ರಮುಖ ನಾಯಕರೆಲ್ಲರೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರೇ. ಟಿ.ಪಿ. ಪಂತಲು, ಮಿನೋ ಮಸಾನಿ, ಎನ್‌.ಜಿ.ರಂಗಾ ಮತ್ತು ಕೆ.ಎಂ. ಮುನ್ಶಿ ಆ ಪೈಕಿ ಪ್ರಮುಖರು. 
ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಪರ ಇದ್ದ ಈ ಪಕ್ಷ ದ ನಾಯಕತ್ವ ಮಾತ್ರ ಸಾಂಪ್ರದಾಯಿಕ ಮುಂದುವರಿದ ವರ್ಗದವರ ಕೈಯಲ್ಲೇ ಇತ್ತು. ಅಂದರೆ ಜಮೀನ್ದಾರು ಮತ್ತು ಈ ಹಿಂದೆ ರಾಜರಾಗಿದ್ದವರು. ಪ್ರಧಾನಿ ನೆಹರು ಕೂಡ ಈ ಪಕ್ಷ ವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು, ''ಮಧ್ಯ ವಯಸ್ಸಿನ ನಾಯಕರ ಭೂ ಒಡೆಯರ ಪಕ್ಷ '' ಎಂದು ಹೇಳುತ್ತಿದ್ದರು. ಸ್ವತಂತ್ರ ಪಾರ್ಟಿ ಅಸ್ತಿತ್ವಕ್ಕೆ ಬಂದ ಬಳಿಕ ಅದು 1962ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿತು. ತಾನು ಎದುರಿಸಿದ ಮೊದಲ ಚುನಾವಣೆಯಲ್ಲಿ ಶೇ.6.8ರಷ್ಟು ಮತ ಗಳಿಸಿ, ಒಟ್ಟು 18 ಸ್ಥಾನ ಗೆದ್ದುಕೊಂಡಿತು. ಅಲ್ಲದೆ, ಬಿಹಾರ, ರಾಜಸ್ಥಾನ, ಗುಜರಾತ್‌ ಮತ್ತು ಒಡಿಶಾ ವಿಧಾನಸಭೆಗಳಲ್ಲಿ ಪ್ರಮುಖ ವಿರೋಧ ಪಕ್ಷ ವಾಯಿತು. 1967ರ ಚುನಾವಣೆ ಹೊತ್ತಿಗೆ ಸ್ವತಂತ್ರ ಪಕ್ಷ ವು ದೇಶದ ಕೆಲವು ಭಾಗಗಳಲ್ಲಿ ಭಾರಿ ಪ್ರಭಾವ ಹೊಂದಿತ್ತು. ಈ ಚುನಾವಣೆಯಲ್ಲಿ ಶೇ.8.7ರಷ್ಟು ಮತ ಪಡೆದು ನಾಲ್ಕನೇ ಲೋಕಸಭೆ(1967-71)ಯಲ್ಲಿ ಪ್ರತಿಪಕ್ಷ ವಾಗಿ ಗುರುತಿಸಿಕೊಂಡಿತು. ಒಟ್ಟು 44 ಸ್ಥಾನಗಳನ್ನು ಅದು ಗೆದ್ದುಕೊಂಡಿತ್ತು. ಇಂದಿರಾ ಗಾಂಧಿ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಸ್ವತಂತ್ರ ಪಕ್ಷ ಕೂಡ ಜನತಾ ಪಾರ್ಟಿಯ ಭಾಗವಾಯಿತು. 1971ರಲ್ಲಿ ಶೇ.3ರಷ್ಟು ಮತ ಪಡೆದು 8 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಯಶಸ್ವಿಯಾಯಿತು. 1974ರಲ್ಲಿ ರಾಜಗೋಪಾಲಚಾರಿ ನಿಧನ ಬಳಿಕ ಪಕ್ಷ ವನ್ನು ಚರಣ್‌ ಸಿಂಗ್‌ ನೇತೃತ್ವದ ಭಾರತೀಯ ಲೋಕದಳ ಪಕ್ಷ ದ ಜತೆ ವಿಲೀನ ಮಾಡಲಾಯಿತು. ಸ್ವತಂತ್ರ ಪಾರ್ಟಿಯ ಸ್ಥಾಪನೆಯ ಉದ್ದೇಶವೇ ಕಾಂಗ್ರೆಸ್‌ ನೀತಿ ವಿರೋಧಿಯಾದ್ದರಿಂದ, ಅವಕಾಶ ಸಿಕ್ಕಾಗಲೆಲ್ಲ ಅದು ಕಾಂಗ್ರೆಸ್‌ ವಿರೋಧಿ ಪಕ್ಷ ಗಳ ಜತೆಗೂಡಿದರು.


ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡಿದೆ.

ಶುಕ್ರವಾರ, ಮಾರ್ಚ್ 15, 2019

AGP- ಅಸ್ಸಾಮ್ ಗಣ ಪರಿಷತ್- ವಿದ್ಯಾರ್ಥಿ ಚಳವಳಿಯಿಂದ ವಿಧಾನಸಭೆವರೆಗೆ...

ಸ್ವತಂತ್ರ ಭಾರತದಲ್ಲಿ ಅನೇಕ ಚಳವಳಿಗಳು ನಡೆದಿವೆ. ಆ ಪೈಕಿ ಕೆಲವು ಚಳವಳಿಗಳು ಕ್ರಮೇಣ ರಾಜಕೀಯ ಪಕ್ಷ ಗಳಾಗಿ ಬದಲಾಗಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಅಸ್ಸಾಮ್‌ ಗಣ ಪರಿಷತ್‌. ಈಶಾನ್ಯ ಭಾರತದ ಪ್ರಮುಖ ರಾಜ್ಯವಾಗಿರುವ ಅಸ್ಸಾಮ್‌ನಲ್ಲಿ ರಾಜಕಾರಣ ಇತರ ರಾಜ್ಯಗಳಂತಲ್ಲ. ನೆರೆಯ ರಾಷ್ಟ್ರ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ನಿರಂತರವಾಗಿ ಈ ರಾಜ್ಯದಲ್ಲಿ ನುಸುಳುತ್ತಾರೆ. ಬಹುತೇಕ ಎಲ್ಲ ಚುನಾವಣೆಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯುವ ನೀತಿಯ ಚುನಾವಣಾ ವಿಷಯವಸ್ತುವಾಗಿರುತ್ತದೆ. ಎಜಿಪಿಯ ಪೂರ್ವಾಶ್ರಮವಾದ ಆಲ್‌ ಅಸ್ಸಾಮ್‌ ಸ್ಟುಡೆಂಟ್‌ ಯೂನಿಯನ್‌(ಎಎಎಸ್‌ಯು) 1970ರ ದಶಕದಲ್ಲಿ ಅಕ್ರಮ ಬಾಂಗ್ಲಾದೇಶಿಗರ ವಿರುದ್ಧ ಚಳವಳಿ ಆರಂಭಿಸಿತು. ವಿದ್ಯಾರ್ಥಿ ಸಂಘದ ಈ ಪ್ರಯತ್ನಕ್ಕೆ ಅಸ್ಸಾಮ್‌ನ ಇತರ ಸಂಘ ಸಂಸ್ಥೆಗಳಿಂದಲೂ ಅಪೂರ್ವ ಬೆಂಬಲ ವ್ಯಕ್ತವಾಯಿತು. ಚಳವಳಿ ತೀವ್ರ ಸ್ವರೂಪ ಪಡೆಯುತಿತದ್ದಂತೆ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಅಸ್ಸಾಮ್‌ ಒಪ್ಪಂದ ಏರ್ಪಡುವುದಕ್ಕೆ ಕಾರಣವಾದರು. ಅಂದರೆ, 1985 ಆಗಸ್ಟ್‌ 15ರಂದು ಕೇಂದ್ರ ಸರಕಾರ ಮತ್ತು ಎಎಎಸ್‌ಯು ಮಧ್ಯೆ ಒಪ್ಪಂದವಾಯಿತು. ಮುಂದೆ ಇದೇ ವರ್ಷದ ಅಕ್ಟೋಬರ್‌ನ 13ರಿಂದ 14ವರೆಗೆ ತಿಂಗಳಲ್ಲಿ ನಡೆದ ಗೋಲಾಘಾಟ್‌ ಸಮಾವೇಶದಲ್ಲಿ ವಿದ್ಯಾರ್ಥಿ ಸಂಘವನ್ನು ವಿಸರ್ಜಿ ಅಸ್ಸಾಮ್‌ ಗಣ ಪರಿಷತ್‌ ಎಂಬ ರಾಜಕೀಯ ಪಕ್ಷ ವನ್ನು ಆರಂಭಿಸಲಾಯಿತು. ಪ್ರಫುಲ್‌ ಕುಮಾರ್‌ ಮಹಾಂತ ಅವರು ಪಕ್ಷ ದ ಅಧ್ಯಕ್ಷ ರಾಗಿ ಆಯ್ಕೆಯಾದರು. 1985ರಲ್ಲಿ ನಡೆದ ಅಸ್ಸಾಮ್‌ ವಿಧಾನಸಭೆ ಚುನಾವಣೆಯಲ್ಲಿ ಈ ಹೊಸ ಪಕ್ಷ ಸ್ಪರ್ಧಿಸಿತಲ್ಲದೇ, 126 ಸ್ಥಾನಗಳ ಪೈಕಿ 66 ಸ್ಥಾನಗಳನ್ನು ಗೆದ್ದುಕೊಂಡು ಸರಕಾರ ರಚಿಸಿತು. ಮುಂದೆ 1996ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸಿತು. ಪಕ್ಷ ದ ನಾಯಕ ಪ್ರಫುಲ್‌ ಕುಮಾರ್‌ ಮಹಾಂತ ಅವರು 1985ರಿಂದ 1990 ಮತ್ತು 1996ರಿಂದ 2001ರಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಯಾದರು. ಜತೆಗೆ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದ ಎಂಬ ಹೆಗ್ಗಳಿಕೆ ಮಹಾಂತ ಅವರಿಗಿದೆ. ಎರಡ್ಮೂರು ಬಾರಿ ಈ ಪಕ್ಷ ಒಡೆದು ಹೋಳಾಗಿದೆ. ಅಸ್ಸಾಮ್‌ನ ಹಾಲಿ ಮುಖ್ಯಮಂತ್ರಿ ಸರ್ಬಾನಂದ್‌ ಸೋನವಾಲಾ ಅವರು ಅಸ್ಸಾಮ್‌ ಗಣ ಪರಿಷತ್‌ನ ಫೈರ್‌ ಬ್ರಾಂಡ್‌ ನಾಯಕ. ಆದರೆ, ಭಿನ್ನಾಭಿಪ್ರಾಯದಿಂದಾಗಿ ಅವರು 2011ರಲ್ಲಿ ಬಿಜೆಪಿ ಸೇರಿದ್ದರು.