ಗುರುವಾರ, ಮಾರ್ಚ್ 14, 2019

ಇಂದಿರಾ ಸೋಲು ಸಂಭ್ರಮಿಸಲು ಜನತಾ ಸರಕಾರದಿಂದ 77 ಸಾಫ್ಟ್ ಡ್ರಿಂಕ್!

1977ರಲ್ಲಿ ಇಂದಿರಾ ಗಾಂಧಿ ಸೋತರು. ಜನತಾ ಪಾರ್ಟಿ ಅಧಿಕಾರಕ್ಕೆ ಬಂತು. ಅದೇ ಸಮಯದಲ್ಲಿ ಕೋಕಾ ಕೋಲಾ ಕಂಪನಿಯನ್ನು ದೇಶದಿಂದ ಹೊರ ಹಾಕಲಾಯಿತು. ಆಗ ಕೇಂದ್ರ ಸರಕಾರವೇ ಜನರಿಗೋಸ್ಕರ ಡಬಲ್ ಸೆವೆನ್(77) ತಂಪು ಪಾನೀಯವನ್ನು ಬಿಡುಗಡೆ ಮಾಡಿತು. ಇಂದಿರಾ ಸೋಲ ಸಂಭ್ರಮ ಮತ್ತು ತುರ್ತು ಪರಿಸ್ಥಿತಿಯನ್ನು ಜನರು ಮರೆಯಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. 



1977ರಲ್ಲಿ ಇಂದಿರಾ ಗಾಂಧಿ ಸೋತರು. ಇದರ ನೆನಪಿಗಾಗಿಯೇ ಜನತಾ ಸರಕಾರವೇ ದೇಸಿ ಸಾಫ್ಟ್ ಡ್ರಿಂಕ್ ‘ಡಬಲ್ ಸೆವೆನ್(77)’ ಉತ್ಪಾದನೆ ಆರಂಭಿಸಿತೆಂದರೆ ನಂಬುವಿರಾ ? 

ಹೌದು. ನಂಬಲೇಬೇಕು. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ದೇಶವಾಸಿಗಳ ಕಣ್ಣಲ್ಲಿ ಖಳನಾಯಕಿಯಾಗಿದ್ದರು. ಮತ್ತೊಂದೆಡೆ, ಜಯಪ್ರಕಾಶ್ ನಾರಾಯಣ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬಹುತೇಕ ಪಕ್ಷಗಳು ಜನತಾ ಪಾರ್ಟಿಯಡಿ ಒಗ್ಗೂಡಿ 1977ರಲ್ಲಿ ಚುನಾವಣೆ ಎದುರಿಸಿ, ಐತಿಹಾಸಿಕ ಗೆಲುವು ಸಾಧಿಸಿದವು. ಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂತು. ಮೊರಾರ್ಜಿ ದೇಸಾಯಿಪ್ರಧಾನಿಯಾದರು. 

ಇದೇ ಸಂದರ್ಭದಲ್ಲಿಕೋಕಾ ಕೋಲಾ, ಐಬಿಎಂ ಸೇರಿದಂತೆ ಕೆಲವು ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದವು. ಆಗ ಕೈಗಾರಿಕಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಐಬಿಎಂ ಮತ್ತುಕೋಕಾ ಕೋಲಾ ಕಂಪನಿಗೆ ದೇಶ ತೊರೆಯುವಂತೆ ಸೂಚಿಸಿದರು. ಈ ಹಂತದಲ್ಲಿ ದೇಶದ ಜನರಿಗೆ ದೇಸಿ ಸಾಫ್ಟ್ ಡ್ರಿಂಕ್ ಪರಿಚಯಿಸಲು ಸರಕಾರವೇ ಮುಂದಾಯಿತು. ಆದರೆ, ಅದಕ್ಕೆ ಬೇಕಿದ್ದ ಫಾರ್ಮುಲಾವನ್ನುಕೋಕಾ ಕೋಲಾ ಕಂಪನಿ ಬಿಟ್ಟುಕೊಡಲಿಲ್ಲ. ಆದರೆ, ಜನತಾ ಸರಕಾರ ಮಾತ್ರ ಪಟ್ಟು ಬಿಡದೆ ದೇಸಿ ಸಾಫ್ಟ್ಡ್ರಿಂಕ್ ಪರಿಚಯಿಸಿ, ಅದಕ್ಕೆ 77 (ಡಬಲ್ ಸೆವೆನ್)ಎಂದು ಹೆಸರಿಟ್ಟಿತು !

ಹಾಗೆ ಹೆಸರಿಡಲು ಕಾರಣ- ಇಂದಿರಾ ಗಾಂಧಿಯನ್ನು ಸೋಲಿಸಿ ಜನತಾ ಪಾರ್ಟಿ ಅಧಿಕಾರಕ್ಕೇರಿದ ವರ್ಷ 1977. ಭವಿಷ್ಯದಲ್ಲೂ ಜನತೆತುರ್ತು ಪರಿಸ್ಥಿತಿ ಹಾಗೂ ಅದರ ವಿರುದ್ಧ ನಡೆದ ಹೋರಾಟವನ್ನು ಭಾರತೀಯರುಮರೆಯಲೇಬಾರದು ಎಂಬುದು ಸರಕಾರದ ಉದ್ದೇಶವಾಗಿತ್ತು. ನಿಂಬೆ ಫ್ಲೇವರಿನ ‘ಡಬಲ್ ಸೆವೆನ್ ಟಿಂಗಲ್’ ಎಂಬ ಈಡ್ರಿಂಕ್ ತುಸು ಕಿಕ್ಕೇರಿಸುತಿತ್ತು.ಮುಂದೆಜನತಾ ಪಾರ್ಟಿ ತನ್ನ ಆಂತರಿಕ ಕಚ್ಚಾಟದಿಂದಾಗಿಯೇ 1979ರಲ್ಲಿ ಅಧಿಕಾರದಿಂದ ಕೆಳಗಿಳಿಯಿತು. ಬಳಿಕ ನಡೆದ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿ ಪ್ರಚಂಡ ಬಹುಮತದೊಂದಿಗೆ ಪ್ರಧಾನಿಯಾದರು. ಇಂದಿರಾ ಅವರು ಡಬಲ್ ಸೆವೆನ್ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಲಿಲ್ಲ. ಅಂತಿಮವಾಗಿ ಅದು ಮಾರುಕಟ್ಟೆಯಿಂದ ಕಣ್ಮರೆಯಾಯಿತು.
- ಮಲ್ಲಿಕಾರ್ಜುನ ತಿಪ್ಪಾರ

ಈ ಲೇಖನವು ವಿಜಯ ಕರ್ನಾಟಕದ 14-03-2019ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಮಂಗಳವಾರ, ಮಾರ್ಚ್ 12, 2019

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಶಕ್ತಿ ಸಿಪಿಐ(ಎಂ)

ಸಿಪಿಐ(ಎಂ) ಅನ್ನು ಸಾಮಾನ್ಯವಾಗಿ ಸಿಪಿಎಂ ಎಂದು ಕರೆಯುತ್ತಾರೆ. ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾ(ಸಿಪಿಐ)ದಿಂದ ಪ್ರತ್ಯೇಕಗೊಂಡು 1964 ಅಕ್ಟೋಬರ್‌ 31ರಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌ವಾದ) ರಚನೆಯಾಯಿತು. 1964ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾದ 7ನೇ ಸಮಾವೇಶದಲ್ಲಿ ಪಕ್ಷ ಇಬ್ಭಾಗವಾಯಿತು. ಸದ್ಯ, ಸಿಪಿಎಂ ಕೇರಳದಲ್ಲಿ ಅಧಿಕಾರದಲ್ಲಿದ್ದು, ಒಟ್ಟು 8 ರಾಜ್ಯಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯದಲ್ಲಿ ದಟ್ಟ ಪ್ರಭಾವ ಹೊಂದಿರುವ ಸಿಪಿಎಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಪಾಲಿಟ್‌ಬ್ಯೂರೊ ಈ ಪಕ್ಷ ದ ಅತ್ಯುನ್ನತ ನಿರ್ಧಾಕ ಕೈಗೊಳ್ಳುವ ಸಂಸ್ಥೆಯಾಗಿದೆ. ಸಿಪಿಎಂನ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ್‌ ಯಚೂರಿ ಅವರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆಯಲ್ಲಿ ಪಿ. ಕರುಣಾಕರನ್‌ ಅವರು ಪಕ್ಷ ದ ನಾಯಕರಾಗಿದ್ದಾರೆ. ಲೋಕಸಭೆಯಲ್ಲಿ 9, ರಾಜ್ಯಸಭೆಯಲ್ಲಿ 5 ಸಂಸದರನ್ನು ಹೊಂದಿರುವ ಸಿಪಿಎಂ, ಕೇರಳದಲ್ಲಿ 59, ತ್ರಿಪುರಾದಲ್ಲಿ 16 ಮತ್ತು ಪಶ್ಚಿಮ ಬಂಗಾಳದಲ್ಲಿ 26 ಶಾಸಕರನ್ನು ಹೊಂದಿದೆ. ಇನ್ನುಳಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 7 ಶಾಸಕರು ಸಿಪಿಎಂನಿಂದ ಆಯ್ಕೆಯಾಗಿದ್ದಾರೆ. ಮಾರ್ಕ್ಸ್‌ ಮತ್ತು ಲೆನಿನ್‌ ವಾದ ಸಿಪಿಎಂ ಪ್ರಮುಖ ಸಿದ್ಧಾಂತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ನೇತೃತ್ವದಲ್ಲಿ ದೀರ್ಘಾವಧಿಯವರೆಗೆ ಸಿಪಿಎಂ ಅಧಿಕಾರದಲ್ಲಿತ್ತು. ಹಾಗೆಯೇ, 1996ರಲ್ಲಿ ಪ್ರಧಾನಿ ಹುದ್ದೆ ಸಿಪಿಎಂ ನಾಯಕರಿಗೆ ಒಲಿದು ಬಂದಿತ್ತು. ರಾಷ್ಟ್ರದಾದ್ಯಂತ ಪಕ್ಷ ವನ್ನು ಬಲಪಡಿಸುವ ಅನೇಕ ಅವಕಾಶಗಳನ್ನು ಕೈ ಚೆಲ್ಲಿದೆ. ಇತ್ತೀಚಿನ ವರ್ಷಗಲ್ಲಂತೂ ಗಟ್ಟಿ ಬೇರುಗಳನ್ನು ಹೊಂದಿದ್ದ ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕೇರಳ ಮಾತ್ರ ಸಿಪಿಎಂ ಇದೀಗ ಆಸರೆಯಾಗಿ ಉಳಿದಿದೆ. ಇ ಎಂ ಎಸ್‌ ನಂಬೂದರಿಪಾದ್‌, ಹರಿಕಿಶನ್‌ ಸಿಂಗ್‌ ಸುರ್ಜಿತ್‌, ಪ್ರಕಾಶ್‌ ಕಾರಟ್‌, ಜ್ಯೋತಿ ಬಸು, ಬುದ್ಧದೇವ್‌ ಭಟ್ಟಾಚಾರ್ಯ, ಮಾಣಿಕ್‌ ಸರ್ಕಾರ್‌, ಈಗ ಕೇರಳ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್‌, ಸೀತಾರಾಮ್‌ ಯಚೂರಿ ಅವರು ಸಿಪಿಎಂನ ಪ್ರಮುಖ ನಾಯಕರು. ಕುಡುಗೋಲು ಮತ್ತು ಸುತ್ತಿಗೆಯು ಈ ಪಕ್ಷ ದ ಚುನಾವಣಾ ಚಿಹ್ನೆಯಾಗಿದೆ. 

13 ದಿನ ಬಳಿಕ 13 ತಿಂಗ್ಳು ಪ್ರಧಾನಿಯಾದ್ರು ವಾಜಪೇಯಿ

ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅತಂತ್ರ ಪಾರ್ಲಿಮೆಂಟ್‌ಗೆ ಕಾರಣವಾಗಿದ್ದರಿಂದಲೇ ಮತ್ತೊಂದು ಚುನಾವಣೆಯನ್ನು ದೇಶ ಎದುರಿಸಬೇಕಾಯಿತು. ಆದರೆ, ಈ ಚುನಾವಣೆಯಲ್ಲೂ ಯಾವುದೇ ಪಕ್ಷ ಅಥವಾ ಕೂಟಕ್ಕೆ ಬಹುಮತ ಬರಲಿಲ್ಲ. ಹಾಗಾಗಿ ರಾಜಕೀಯ ಅಸ್ಥಿರತೆ ಮುಂದುವರಿಯಿತು. ಅಲ್ಲದೆ ಕೇವಲ ಎರಡು ವರ್ಷದಲ್ಲೇ ಮತ್ತೊಂದು ಚುನಾವಣೆ ಎದುರಿಸಬೇಕಾಯಿತು. 12ನೇ ಲೋಕಸಭೆಗೆ 1998ರಲ್ಲಿ ನಡೆದ ಚುನಾವಣೆಯಲ್ಲಿ ಶೇ.25.8ರಷ್ಟು ಮತಗಳೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷ ವಾಗಿ ಉದಯವಾಯಿತು; ಒಟ್ಟು 141 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಬಿಜೆಪಿ ನೇತೃತ್ವದ ಎನ್‌ಡಿಎ ಒಟ್ಟು 545 ಸೀಟುಗಳ ಪೈಕಿ 256 ಸೀಟುಗಳನ್ನು ಪಡೆಯಿತು. ಅದೇ ರೀತಿ, ಕಾಂಗ್ರೆಸ್‌ ನೇತೃತ್ವದ ಯುಪಿಎ ಶೇ.30.8ರಷ್ಟು ಮತ ಪಡೆದು ಒಟ್ಟು 164 ಸೀಟುಗಳನ್ನು ಪಡೆಯಿತು. ಕಾಂಗ್ರೆಸ್‌ ಸ್ವತಂತ್ರವಾಗಿ 140 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತು. ತೃತೀಯ ರಂಗ ಕೇವಲ 74 ಕ್ಷೇತ್ರಗಳಿಗೆ ತೃಪ್ತಿ ಪಡಬೇಕಾಯಿತು. ಅತಿ ದೊಡ್ಡ ಪಕ್ಷ ವಾಗಿದ್ದ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ದೊರೆಯಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಎರಡನೇ ಬಾರಿಗೆ ಪ್ರಧಾನಿಯಾದರು. ಆದರೆ, ರಾಜಕೀಯ ಸ್ಥಿರತೆ ಮಾತ್ರ ಕಂಡು ಬರಲಿಲ್ಲ. ಅಂತಿಮವಾಗಿ 13 ತಿಂಗಳು ಬಳಿಕ ವಾಜಪೇಯಿ ಸರಕಾರ ಪತನವಾಯಿತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ವಿಶ್ವಾಸಮತ ಸಾಬೀತುವೇಳೆ ಎನ್‌ಡಿಎಗೆ ಬೆಂಬಲ ನೀಡಿಲಲ್ಲ. ಕೇವಲ ಒಂದು ಮತದ ಅಂತರದಲ್ಲಿ ಬಿಜೆಪಿ ಸರಕಾರ ಉರುಳಿತು. ಬಳಿಕ ರಾಷ್ಟ್ರಪತಿಗಳು ಎರಡನೇ ಅತಿದೊಡ್ಡ ಪಕ್ಷ ವಾಗಿದ್ದ ಕಾಂಗ್ರೆಸ್‌ಗೆ ಸರಕಾರ ರಚಿಸಲು ಆಹ್ವಾನ ನೀಡಿದರು. ಆದರೆ, ಕಾಂಗ್ರೆಸ್‌ ಮಾತ್ರ ತನ್ನಿಂದ ಸರಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ, ಅವರು ಸಂಸತ್ತನ್ನು ವಿಸರ್ಜಿಸಿದರು. 1998ರ ಚುನಾವಣೆಯಲ್ಲಿ ಒಟ್ಟು 60,58,80,192 ಮತದಾರರಿದ್ದರು. ಈ ಪೈಕಿ 37,54,41,739 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅಂದರೆ ಒಟ್ಟು ಮತದಾನ ಪ್ರಮಾಣ ಶೇ.62ರಷ್ಟಿತ್ತು. ಒಟ್ಟು 178 ರಾಜಕೀಯ ಪಕ್ಷ ಗಳು ಈ ಚುನಾವಣೆಯಲ್ಲಿ ಭಾಗವಹಿಸಿದ್ದವು. 13 ದಿನ ಮತ್ತು 13 ತಿಂಗಳ ಪ್ರಧಾನಿಯಾಗಿದ್ದ ವಾಜಪೇಯಿ ಅವರು ವಿಶಿಷ್ಟ ದಾಖಲೆ ಮಾಡಿದರು.
- ತಿಪ್ಪಾರ

ಈ ಲೇಖನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.