ಸೋಮವಾರ, ಮಾರ್ಚ್ 4, 2019

ಯಶಸ್ಸಿನ ಹಾದಿಯಲ್ಲಿ ಬಿಜೆಪಿ

ಬಿಜೆಪಿ ಸದ್ಯ ಗೆಲುವಿನ ಅಶ್ವ ಏರಿ ಶರವೇಗದಲ್ಲಿ ಸಾಗುತ್ತಿರುವ ಪಕ್ಷ . ಕಾಂಗ್ರೆಸ್‌ಗೆ ಪರ್ಯಾಯ ಮತ್ತು ಬಲಿಷ್ಠ ರಾಜಕೀಯ ವ್ಯವಸ್ಥೆಯನ್ನು ರೂಪಿಸಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ. ಬಿಜೆಪಿಯ ಮೂಲ ಭಾರತೀಯ ಜನ ಸಂಘ ಪಕ್ಷ ದಲ್ಲಿದೆ. ಶ್ಯಾಮ ಪ್ರಸಾದ್‌ ಮುಖರ್ಜಿ ಅವರು 1951ರಲ್ಲಿ ಬಿಜೆಎಸ್‌ ಸ್ಥಾಪಿಸಿದರು. 1977ರ ನಂತರ ಬಿಜೆಎಸ್‌ ಅನ್ನು ಜನತಾ ಪರಿವಾರದೊಂದಿಗೆ ವಿಲೀನ ಮಾಡಲಾಯಿತು. ಮೂರು ವರ್ಷದ ಬಳಿಕ ಜನತಾ ಪರಿವಾರ ಛಿದ್ರವಾಗಿ, ಭಾರತೀಯ ಜನಸಂಘವು ಭಾರತೀಯ ಜನತಾ ಪಾರ್ಟಿಯಾಗಿ ಮರುಜನ್ಮ ಪಡೆದುಕೊಂಡಿತು. ಆರಂಭದಲ್ಲಿ ಅಂಥ ಹೇಳಿಕೊಳ್ಳುವ ಯಶಸ್ಸು ದೊರೆಯಲಿಲ್ಲ. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆದರೆ, ನಂತರದ ದಿನಗಳಲ್ಲಿ ರಾಮಜನ್ಮಭೂಮಿ ವಿವಾದ ಬಿಜೆಪಿಯ ರಾಜಕಾರಣಕ್ಕೆ ಹೊಸದಿಕ್ಕನ್ನೇ ತೋರಿಸಿತು. ನಿಧಾನವಾಗಿ ರಾಜ್ಯಗಳಲ್ಲಿ ತನ್ನ ಬೇರುಗಳನ್ನು ಚಾಚುತ್ತಾ, ಕೇಂದ್ರ ಮಟ್ಟದಲ್ಲಿ ಗಣನೀಯವಾಗಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಯಿತು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ. ಆಡ್ವಾಣಿಅವರು ಬಿಜೆಪಿಗೆ ಸಮರ್ಥ ನಾಯಕತ್ವ ಒದಗಿಸಿದರು. 1996ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷ ವಾಗಿ ಹೊರಹೊಮ್ಮಿ ವಾಜಪೇಯಿ ನೇತೃತ್ವದಲ್ಲಿ ಸರಕಾರ ರಚಿಸಿತು. ಆದರೆ, ಬಹುಮತ ಕೊರತೆಯಿಂದ 13 ದಿನದಲ್ಲಿ ಪತನ ಕಂಡಿತು. 1998ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತದೊಂದಿಗೆ ಅಧಿಕಾರಕ್ಕೇರಿತು. 2014ರಲ್ಲಿ ಮೋದಿ ನೇತೃತ್ವದಲ್ಲಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರದಲ್ಲಿರುವ ಬಿಜೆಪಿ, ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ ಪಕ್ಷ ಎಂಬ ಹೆಗ್ಗಳಿಕೆ ಇದೆ. ಸದ್ಯ 10 ರಾಜ್ಯಗಳಲ್ಲಿ ಬಿಜೆಪಿ ನೇರವಾಗಿ ಅಧಿಕಾರದಲ್ಲಿದ್ದರೆ, 7 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಸರಕಾರಗಳಿವೆ. ಬಲಪಂಥೀಯ ವಿಚಾರಧಾರೆ ಹೊಂದಿರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಗಿ ಅಮಿತ್‌ ಶಾ ಕಾರ್ಯನಿರ್ವಹಿಸುತ್ತಿದ್ದಾರೆ. 

ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
https://vijaykarnataka.indiatimes.com/elections/lok-sabha/news/bjp-party-history/articleshow/68219784.cms

2ನೇ ಚುನಾವಣೆಯಲ್ಲಿ ಅತಿ ಹೆಚ್ಚು ಪಕ್ಷೇತರರ ಆಯ್ಕೆ

16ನೇ ಲೋಕಸಭೆಯು ಪೂರ್ತಿಯಾಗಿ ಅಧಿಕೃತ ಪ್ರತಿಪಕ್ಷ ಇಲ್ಲದೆ ಕಳೆದು ಹೋಯಿತು. ಇಂಥದ್ಧೆ ಸ್ಥಿತಿ 2ನೇ ಲೋಕಸಭೆಯಲ್ಲೂ ಉಂಟಾಗಿತ್ತು. 1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂದಿನಂತೆ ಭರ್ಜರಿ ಗೆಲುವು ಸಾಧಿಸಿ, 494 ಸೀಟುಗಳ ಪೈಕಿ 371 ಸೀಟುಗಳನ್ನು ಗೆದ್ದುಕೊಂಡಿತು. ಮತ ಪ್ರಮಾಣ ಕೂಡ ಶೇ.45ರಿಂದ ಶೇ.48ಕ್ಕೇರಿಕೆಯಾಯಿತು. ವಿಶೇಷ ಎಂದರೆ, ಈ ಚುನಾವಣೆಯಲ್ಲೂ ಪಕ್ಷೇತರರು ಶೇ.19.3ರಷ್ಟು ವೋಟು ಪಡೆದು 42 ಸೀಟುಗಳನ್ನು ಗೆದ್ದರು. ಈವರೆಗೆ ಇದು ದಾಖಲೆಯಾಗೇ ಉಳಿದಿದೆ. ಇನ್ನು ಬಿಜೆಎಸ್‌ 4 ಸೀಟು ಗೆದ್ದರೆ, ಸಿಪಿಐ 27, ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ 19 ಸೀಟುಗಳನ್ನು ಪಡೆದುಕೊಂಡವು. ಮೊದಲನೆಯ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕ್ಷೇತ್ರಗಳು ಹೆಚ್ಚಾಗಿದ್ದವು ಮತ್ತು ಒಟ್ಟಾರೆ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಹೆಚ್ಚುವರಿಯಾಗಿ ಏಳು ಸೀಟುಗಳನ್ನು ಪಡೆದುಕೊಡಿತು. ಜತೆಗೆ, ಈ ಎಲೆಕ್ಷ ನ್‌ನಲ್ಲಿ ಮೊದಲ ಬಾರಿಗೆ ಅಂಚೆ ಮತದಾನ ವ್ಯವಸ್ಥೆ(ಪೋಸ್ಟ್‌ ವೋಟಿಂಗ್‌ ಸಿಸ್ಟಮ್‌)ಯನ್ನು ಜಾರಿಗೆ ತರಲಾಯಿತು. 403 ಕ್ಷೇತ್ರಗಳಲ್ಲಿ 91 ಕ್ಷೇತ್ರಗಳು ದ್ವಿದಸ್ಯ ಕ್ಷೇತ್ರಗಳಾಗಿದ್ದರೆ, ಉಳಿದವು ಏಕಸದಸ್ಯ ಕ್ಷೇತ್ರಗಳಾಗಿದ್ದವು. ದ್ವಿದಸ್ಯ ಕ್ಷೇತ್ರ ಪದ್ಧತಿ ಕಂಡ ಕೊನೆಯ ಚುನಾವಣೆ ಇದು. ಭಾರತದ ಪ್ರಥಮ ಪ್ರಧಾನಿಯಾಗಿ ಜನಪ್ರಿಯರಾಗಿದ್ದ ಜವಾಹರಲಾಲ್‌ ನೆಹರು ಅವರು ಎರಡನೇ ಅವಧಿಗೆ ಮತ್ತೆ ಪ್ರಧಾನಿಯಾದರು. ಲೋಕಸಭೆಯ ಸ್ಪೀಕರ್‌ ಆಗಿ ಹುಕುಂ ಸಿಂಗ್‌ ಸರ್ದಾರ್‌ ಅವರು ಆಯ್ಕೆಯಾದರು. ಅನೇಕ ಮೊದಲುಗಳನ್ನು ಕಂಡ 2ನೇ ಸಾರ್ವತ್ರಿಕ ಚುನಾವಣೆಯು ಕುಖ್ಯಾತಿಗೂ ಒಳಗಾಯಿತು.ಬೂತ್‌ಗಳನ್ನು ವಶಕ್ಕೆ ಪಡೆದ ಮೊದಲ ಪ್ರಕರಣ ದಾಖಲಾಯಿತು. ಬಿಹಾರದ ಬೇಗುಸರಾಯ್‌ ಜಿಲ್ಲೆಯ ಮಾತಿಹಾನಿ ವಿಧಾನಸಭಾ ಕ್ಷೇತ್ರದ ರಚಿಯಾಹಿ ಬೂತ್‌ ಅನ್ನು ಕೆಲವರು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಕಪ್ಪುಚುಕ್ಕೆಯಾಗಿ ದಾಖಲಾಯಿತು. 
- ತಿಪ್ಪಾರ 

ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
https://vijaykarnataka.indiatimes.com/elections/lok-sabha/news/large-number-independent-candidates-elected-in-1957-lok-sabha-election/articleshow/68219193.cms

ಮೊದಲ ಚುನಾವಣೆಯಲ್ಲಿ 489 ಸೀಟಿಗೆ 68 ಹಂತದ ಮತದಾನ

ಮೊದಲನೆ ಸಾರ್ವತ್ರಿಕ ಚುನಾವಣೆಹೇಗಿದ್ದಿರಬಹುದು? ಅಂಥದೊಂದು ಕುತೂಹಲ ಸಾಮಾನ್ಯ. 1949 ನವೆಂಬರ್‌ 26ರಿಂದ ಮೊದಲನೆಯ ಚುನಾವಣೆ ನಡೆಯುವವರೆಗೆ ಮಧ್ಯಂತರ ಸಂಸತ್ತು ಅಸ್ತಿತ್ವದಲ್ಲಿತ್ತು. 25 ಅಕ್ಟೋಬರ್‌ 1951ರಿಂದ 21 ಫೆಬ್ರವರಿ 1952ರ ವರೆಗೆ ಒಟ್ಟು 489 ಸೀಟುಗಳಿಗಾಗಿ 68 ಹಂತದಲ್ಲಿ ಚುನಾವಣೆ ನಡೆಯಿತು. ಶೇ.44.99 ಮತಗಳೊಂದಿಗೆ ಕಾಂಗ್ರೆಸ್‌ 364 ಸೀಟುಗಳನ್ನು ಗೆದ್ದಿತು. ಎರಡನೇ ಸ್ಥಾನದಲ್ಲಿದ್ದ ಸಿಪಿಐ ಗೆದ್ದಿದ್ದು ಕೇವಲ 16 ಸೀಟು ಮಾತ್ರ. ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ್‌ ನಾರಾಯಣ್‌ ನೇತೃತ್ವದ ಸೋಷಿಯಲಿಸ್ಟ್‌ ಪಾರ್ಟಿ 12 ಸೀಟು ಗೆದ್ದುಕೊಂಡಿತು. ಭಾರೀ ಗೆಲುವು ಕಂಡ ಕಾಂಗ್ರೆಸ್‌ ನೆಹರು ನೇತೃತ್ವದಲ್ಲಿ ಸರಕಾರ ರಚಿಸಿತು ಮತ್ತು 1952ರ ಏಪ್ರಿಲ್‌ 17ರಂದು ಮೊದಲ ಲೋಕಸಭೆ ಅಸ್ತಿತ್ವಕ್ಕೆ ಬಂತು. ಅಂದ ಹಾಗೆ, ನೆಹರು ಅವರು ತಮ್ಮ ಸಂಪುಟದ ಮಾಜಿ ಸಹೋದ್ಯೋಗಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್‌ ಅವರಿಂದ ತೀವ್ರ ಸವಾಲು ಎದುರಿಸಿದ್ದರು. ಆದರೂ ಮುಖರ್ಜಿ ನೇತೃತ್ವದ ಜನಸಂಘ(ಇಂದಿನ ಬಿಜೆಪಿ) ಗೆದ್ದಿದ್ದು 3 ಮತ್ತು ಅಂಬೇಡ್ಕರ್‌ ಅವರ ಆಲ್‌ ಇಂಡಿಯಾ ಷೆಡ್ಯೂಲ್ಡ್‌ ಕ್ಯಾಸ್ಟ್‌ ಫೆಡರೇಷನ್‌ 2 ಸ್ಥಾನ ಗೆದ್ದುಕೊಳ್ಳಲು ಮಾತ್ರ ಸಾಧ್ಯವಾಯಿತು. ಆಗ ಮೈಸೂರು ರಾಜ್ಯವಾಗಿದ್ದ ಕರ್ನಾಟಕದಿಂದ ಕಾಂಗ್ರೆಸ್‌ ಗೆದ್ದಿದ್ದು 10 ಸ್ಥಾನ ಮಾತ್ರ. ಅತಿ ಹೆಚ್ಚು ಸ್ಥಾನಗಳನ್ನು ಉತ್ತರಪ್ರದೇಶ(81)ದಿಂದ ಗೆದ್ದುಕೊಂಡಿತ್ತು. ದ್ವಿಸದಸ್ಯ ಕ್ಷೇತ್ರಗಳು ಅಸ್ತಿತ್ವದಲ್ಲಿ ಇದ್ದುದರಿಂದ ಸಹಜವಾಗಿಯೇ ಮತದಾನ ಪ್ರಮಾಣ ಹೆಚ್ಚಿತು. ಮೊದಲ ಚುನಾವಣೆಯಿಂದ ಆರಂಭವಾದ ಕಾಂಗ್ರೆಸ್‌ನ ಜೈತ್ರಯಾತ್ರೆ 1977ವರೆಗೂ ಮುಂದುವರಿಯಿತು. 1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತಕ್ಕೆ ಸಾರ್ವತ್ರಿಕ ಚುನಾವಣೆಯು ಹಬ್ಬದ ರೀತಿಯಲ್ಲಿ ಇತ್ತು. 21 ವರ್ಷ ಮೇಲ್ಪಟ್ಟ ಎಲ್ಲರೂ ಮತ ಚಲಾಯಿಸಲು ಅವಕಾಶವಿದ್ದರಿಂದಲೇ ದೇಶದ ಬಹುತೇಕ ಜನರು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಯಿತು. ಅಲ್ಲಿಂದ ಶುರುವಾದ ದೇಶದ ಚುನಾವಣಾ ರಾಜಕೀಯ ಈಗ 17ನೇ ಲೋಕಸಭೆವರೆಗೂ ಬಂದು ನಿಂತಿದೆ.

ಈ ಆರ್ಟಿಕಲ್ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಕ್ಲಿಕ್ ಮಾಡಿ
https://vijaykarnataka.indiatimes.com/elections/lok-sabha/news/flashback-of-first-general-election-in-india/articleshow/68203413.cms