ಮಂಗಳವಾರ, ಜೂನ್ 6, 2017

ವ್ಯಕ್ತಿಗತ- ‘ಬಿಪಿ’ ಹೆಚ್ಚಿಸುವ ರಾವತ್!

ಮಲ್ಲಿಕಾರ್ಜುನ ತಿಪ್ಪಾರ
ಮೇಜರ್ ಗೊಗೊಯಿ ಅವರು ಕಲ್ಲುತೂರಾಟಗಾರನೊಬ್ಬನನ್ನು ಸೇನಾ ಜೀಪಿಗೆ ಕಟ್ಟಿ ತಮ್ಮನ್ನೂ ಸೇರಿದಂತೆ ಚುನಾವಣಾ ಹಾಗೂ ಸೇನಾ ಸಿಬ್ಬಂದಿಯನ್ನು ರಕ್ಷಿಸಿದ ಘಟನೆ ದೊಡ್ಡ ಸುದ್ದಿಯಾಯಿತು. ಸೇನೆಯ ಅಧಿಕಾರಿಯೊಬ್ಬರು ಮಾನವನನ್ನು ಗುರಾಣಿಯ ರೀತಿಯಲ್ಲಿ ಬಳಸಿಕೊಂಡಿದ್ದು ಎಷ್ಟು ಸರಿ ಮತ್ತು ತಪ್ಪು ಎಂಬ ಚರ್ಚೆಗಳು ಇನ್ನೂ ನಡೆದಿವೆ. ಆದರೆ, ಸೇನಾ ಮುಖ್ಯಸ್ಥರು ಈ ಪ್ರಕರಣವನ್ನು ಯಾವ ರೀತಿ ನೋಡುತ್ತಾರೆಂಬುದು ಬಹುತೇಕರ ಕುತೂಹಲವಾಗಿತ್ತು. ಈ ವಿಷಯದಲ್ಲಿ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ವಿಭಿನ್ನ ದಾರಿ ತುಳಿದರು. ಸಾರ್ವಜನಿಕವಾಗಿಯೇ ಮೇಜರ್ ಗೊಗೊಯಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಕೆಳದರ್ಜೆಯ ಸೇನಾ ಸ್ತರದಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು. ಶಿಸ್ತುಬದ್ಧ ಸೈನ್ಯದ ಅಧಿಕಾರಿಯೊಬ್ಬರು ಇಂಥ ದಾರಿ ಅನುಸರಿಸುವುದರ ಕುರಿತಾದ ಪರಾಮರ್ಶೆಯ ಆಚೆ ನಿಂತು ನೋಡಿದಾಗ ಸೇನೆಯ ಕಾರ್ಯತಂತ್ರಗಳು ಬದಲಾಗಿರುವುದು ಸ್ಪಷ್ಟವಾಗುತ್ತದೆ. ಇದರ ಹಿಂದೆ ಜನರಲ್ ಬಿಪಿನ್ ರಾವತ್ ಅವರ ಹೆಚ್ಚುಗಾರಿಕೆ ಮತ್ತು ಜಾಣ್ಮೆಯೂ ಅಡಗಿದೆ. ಗೊಗೊಯಿ ಅವರನ್ನು ಬೆಂಬಲಿಸುವ ಮೂಲಕ ಕಾಶ್ಮೀರ ಕಣಿವೆಯ ಪ್ರಕ್ಷುಬ್ಧ ಸ್ಥಿತಿಗೆ ಕಾರಣವಾದವರಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.
ಇಂಥ ಬಿಪಿನ್ ರಾವತ್ ಅವರು ತಾವು ಸೇನಾ ಮುಖ್ಯಸ್ಥರಾಗುವ ಬಗ್ಗೆ ಯೋಚಿಸಿರಲಿಕ್ಕೂ ಇಲ್ಲ. ಯಾಕೆಂದರೆ, ಸಂಪ್ರದಾಯದಂತೆ ಸೇವಾ ಜೇಷ್ಠತೆ ಆಧಾರದ ಮೇಲೆಯೇ ಜನರಲ್ ಸ್ಥಾನಕ್ಕೇರುವುದು ಭಾರತೀಯ ಸೇನೆಯಲ್ಲಿ ನಡೆದುಕೊಂಡು ಬಂದಿದೆ. ಈ ಸಂಪ್ರದಾಯವನ್ನು 1983ರಲ್ಲಿ ಇಂದಿರಾ ಗಾಂಧಿ ಅವರು ಮೊದಲ ಬಾರಿಗೆ ಮುರಿದರು. ನಂತರ ಯಥಾಸ್ಥಿತಿ ಇತ್ತು. ವಾಸ್ತವದಲ್ಲಿ ಸೇವಾ ಜೇಷ್ಠತೆ ಆಧಾರದ ಮೇಲೆ ಲೆಫ್ಟಿನೆಂಟ್ ಜನರಲ್‌ಗಳಾದ ಭಕ್ಷಿ ಮತ್ತು ಹಾರಿಝ್ ಅವರು ಮುಖ್ಯಸ್ಥರಾಗಬೇಕಿತ್ತು. ಆದರೆ, ಮೋದಿ ಸರಕಾರ ಮಾತ್ರ, ಸೇನಾ ಮುಖ್ಯಸ್ಥ ಸ್ಥಾನಕ್ಕೆ ಆಯ್ದುಕೊಂಡಿದ್ದು ‘ಮ್ಯಾನ್ ಆಫ್ ಆ್ಯಕ್ಷನ್’ ಎಂದೇ ಕರೆಯಿಸಿಕೊಂಡಿದ್ದ ಬಿಪಿನ್ ರಾವತ್ ಅವರನ್ನು. ಅಲ್ಲಿಗೆ, ಸೇನಾ ಮುಖ್ಯಸ್ಥರ ನೇಮಕ ವಿಷಯದಲ್ಲಿ ಮತ್ತೊಮ್ಮೆ ಇತಿಹಾಸ ಮರುಕಳಿಸಿತು.

ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳ ‘ಗಡಿ ನಿಯಂತ್ರಣ’ ರೇಖೆಯಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದ ರಾವತ್ ಅವರೇ ಈಗಿನ ಪರಿಸ್ಥಿತಿಯಲ್ಲಿ ಸೇನೆ ಮುಖ್ಯಸ್ಥರಾಗುವುದು ಹೆಚ್ಚು ಸೂಕ್ತ ಕೂಡ ಆಗಿತ್ತು. ಬರೋಬ್ಬರಿ ಮೂರು ದಶಕಗಳು ಸೇನೆಯ ವಿವಿಧ ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿರುವ ರಾವತ್ ಅವರು, ಚೀನಾ ಗಡಿಯ ಈಸ್ಟರ್ನ್ ಸೆಕ್ಟರ್, ಪುಲ್ವಾಮಾದಲ್ಲಿ ಕಾರ್ಯಾಚರಣೆ ಹೊಣೆ ಹೊತ್ತು ಯಶಸ್ವಿಯಾಗಿದ್ದರು. ಜತೆಗೆ ಈಶಾನ್ಯ ರಾಜ್ಯದಲ್ಲೂ ಕಾರ್ಯಾಚರಣೆ ಜವಾಬ್ದಾರಿಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ, ಸೇನಾ ಪ್ರಧಾನ ಕಚೇರಿಯ ಸೇನಾ ಕಾರ್ಯಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಟ್ರ್ಯಾಕ್ ರೆಕಾರ್ಡ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಸಂಗತಿ ಎಂದರೆ; ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಕಾಂಗೋ ದೇಶದಲ್ಲಿ ಅವರು ತೋರಿದ ಪ್ರದರ್ಶನ.  ಸರ್ಜಿಕಲ್ ದಾಳಿಗಳನ್ನು ಸಂಘಟಿಸುವುದರಲ್ಲಿ ರಾವತ್ ಅವರು ಎಕ್ಸ್‌ಫರ್ಟ್. ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಭಾರಿ ಅನುಭವವ ಹೊಂದಿರುವ  ಇವರು, ಪಾಕಿಸ್ತಾನ ಜತೆಗಿನ ಎಲ್‌ಒಸಿ(ಗಡಿ ನಿಯಂತ್ರಣಾ ರೇಖೆ) ಮತ್ತು ಚೀನಾ ಜತೆಗಿನ ಎಲ್‌ಎಸಿ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ದಾಳಿಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.  ಸೇನಾ ಮುಖ್ಯಸ್ಥರಾಗುವ ಮುಂಚೆ ರಾವತ್ ಅವರು ಸದರ್ನ್ ಕಮಾಂಡ್‌ನ ಮುಖ್ಯಸ್ಥರಾಗಿ ಪುಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಉತ್ತರಾಖಂಡ ರಾಜ್ಯದ ಪೌಡಿ ಗಡ್ವಾಲ್ ಜಿಲ್ಲೆಯವರಾದ ರಾವತ್ ಅವರು ಜನಿಸಿದ್ದು ಸೇನಾ ಹಿನ್ನೆಲೆಯ ಕುಟುಂಬದಲ್ಲಿ. ಇವರ ತಂದೆ ಲಚು ಸಿಂಗ್ ರಾವತ್ ಕೂಡ ಸೇನಾಧಿಕಾರಿ. ಡೆಹ್ರಾಡೂನ್‌ನ ಕ್ಯಾಂಬ್ರಿಯನ್ ಹಾಲ್ ಬೋರ್ಡಿಂಗ್ ಸ್ಕೂಲ್, ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್ ಮತ್ತು ಅಮೆರಿಕದ ವೆಲ್ಲಿಂಗ್ಟನ್ ಆ್ಯಂಡ್ ಹೈಯರ್ ಕಮಾಂಡ್‌ನಿಂದ ಪದವಿ ಪಡೆದಿರುವ ಬಿಪಿನ್ ಅವರು, ರಕ್ಷಣೆ ಸಂಬಂಧಿಯ ಅಧ್ಯಯನಕ್ಕಾಗಿ ಮದ್ರಾಸ್ ವಿವಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. ಮೀರತ್‌ನಲ್ಲಿರುವ ಚೌಧರಿ ಚರಣ್ ಸಿಂಗ್ ವಿವಿಯಲ್ಲಿ ಪಿಎಚ್‌ಡಿ ಕೂಡ ಮಾಡಿದ್ದಾರೆ.
1978 ಡಿಸೆಂಬರ್ 6ರಂದು 11ನೇ ಗೋರ್ಖಾ ರೈಫಲ್ಸ್‌ನ  5ನೇ ಬೆಟಾಲಿಯನ್ ಸೇರಿಕೊಳ್ಳುವ ಮೂಲಕ ಸೇನಾ ಸೇವೆಗೆ ಅಡಿಯಿಟ್ಟರು. ವಿಶೇಷ ಎಂದರೆ ಇದೇ ಯೂನಿಟ್‌ನಿಂದ ರಾವತ್ ಅವರ ತಂದೆ ಕೂಡ ಸೇವೆ ಆರಂಭಿಸಿದ್ದರು. ಇಲ್ಲಿಂದ ಶುರುವಾದ ಸೇನಾವೃತ್ತಿ ಕಳೆದ ಮೂರು ದಶಕದಲ್ಲಿ ನಾನಾ ಮಜಲುಗಳನ್ನು ಕಂಡಿದೆ. ಈ ಸುದೀರ್ಘ ಅವಧಿಯಲ್ಲಿ ಅನೇಕ ಸೇವಾಪದಕಗಳು ಅವರನ್ನು ಅರಸಿಕೊಂಡು ಬಂದಿವೆ. ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿದ್ದಾಗ ಪ್ರತಿಷ್ಠಿತ ‘ಸಾವರ್ಡ್ ಆಫ್ ಆನರ್’ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರು ಖಡಕ್ ಸೇನಾಧಿಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅವರೊಬ್ಬ ಹೃದಯವಂತಿಕೆ ಮತ್ತು ನಾಗರಿಕ ಸಮಾಜದೊಂದಿಗೆ ಉತ್ತಮ ಬಾಂಧವ್ಯದ ಮೂಲಕ ಸಮತೋಲನ ಕಾಪಾಡಿಕೊಳ್ಳುವ ವ್ಯಕ್ತಿತ್ವ ಹೊಂದಿದ್ದಾರೆಂಬುದು ಬಹಳ ಜನರಿಗೆ ಗೊತ್ತಿಲ್ಲ.
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವುದು ‘ಡರ್ಟಿ ವಾರ್’ ಎಂದು ನಿರ್ಭಿಡೆಯಾಗಿ ಹೇಳುವ ರಾವತ್ ಅವರು, ಭಯೋತ್ಪಾದನಾ ವಿರೋಧಿ ಸೇನಾ ಕಾರ್ಯಾಚರಣೆಗೆ ತಡೆಯೊಡ್ಡುವವರನ್ನು ಉಗ್ರರಿಗಾಗಿ ಕೆಲಸ ಮಾಡುತ್ತಿರುವವರೆಂದು ಪರಿಗಣಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಕಲ್ಲುತೊರಾಟಗಾರರಿಗೆ ಎಚ್ಚರಿಸಿದ್ದರು. ಅವರ ಈ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಜನರ ವಿಶ್ವಾಸ ಗಳಿಸುವ ಮೂಲಕ ಸೇನೆ ತನ್ನ ಕಾರ್ಯಾಚರಣೆ ಮಾಡಬೇಕೇ ಹೊರತು ಅವರನ್ನು ಹೆದರಿಸಿ ಅಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಇದಾವುದಕ್ಕೂ ಅವರು ತಲೆಕೆಡಿಸಿಕೊಂಡಿಲ್ಲ. ಕಾಶ್ಮೀರದಲ್ಲಿ ನಡೆಯುತ್ತಿರುವ ‘ಕೊಳಕು ಯುದ್ಧ’ವನ್ನು ವಿನೂತನ ಕ್ರಮಗಳಿಂದಲೇ ಎದುರಿಸಬೇಕೆಂಬ ಅಚಲ ನಂಬಿಕೆ ಅವರದ್ದು. ಏತನ್ಮಧ್ಯೆ, ಕಾಶ್ಮೀರ ಕಣಿವೆಗೆ ಭೇಟಿ ನೀಡಿ, ಅಲ್ಲಿನ ನೈಜ ಸ್ಥಿತಿಯನ್ನು ಅವಲೋಕಿಸಿದ್ದಾರೆ.
ರಾವತ್ ಅವರು ಯೋಧರ ಹಿತಾಸಕ್ತಿ ಕಾಪಾಡುವಲ್ಲಿಯೂ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಸೇನಾ ವೇತನ ಆಯೋಗ ಮತ್ತು ಸರಕಾರದ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ, ಸೇನೆಯಲ್ಲಿ ಬ್ರಿಟಿಷ್ ಕಾಲದಿಂದಲೂ ಚಾಲ್ತಿಯಲ್ಲಿರುವ ‘ಸಹಾಯಕ್’ ಪದ್ಧತಿ ಕೊನೆಗಾಣಿಸುವತ್ತ ಮುಂದಾಗಿದ್ದಾರೆ. ನೆನಪಿರಲಿ, ಈ ಸಹಾಯಕ್ ಪದ್ಧತಿ ಹಿಂತೆಗೆಯುವ ಬಗ್ಗೆ ಸೇನೆಯೊಳಗೇ ಭಾರೀ ಅಸಮಾಧಾನವಿದೆ. ಹೀಗಿದ್ದಾಗ್ಯೂ ಅವರು ಈ ಕೆಲಸಕ್ಕೆ ಮುಂದಾಗಿದ್ದಾರೆ. ಈ ಎರಡು ಕ್ರಮಗಳು ಬಿಪಿನ್ ಅವರಲ್ಲಿರುವ ಮಾನವೀಯ ಗುಣಗಳಿಗೆ ಸ್ಪಷ್ಟ ನಿದರ್ಶನವಾಗಿವೆ.
ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡು ಈಗ ಆರು ತಿಂಗಳಷ್ಟಾಗಿದೆ. ಈಗಾಗಲೇ ರಾವತ್ ಕಾರ್ಯವೈಖರಿಗೆ ಎಲ್ಲರಿಗೂ ಗೊತ್ತಾಗಿದೆ. ಆದರೆ, ಅವರ ಮುಂದೆ ಸವಾಲುಗಳ ಸಾಲೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರ ಕಣಿವೆಯು ಅವರ ಜ್ಞಾನ ಮತ್ತು ಅನುಭವವನ್ನು ಒರೆಗೆ ಹಚ್ಚಲಿದೆ. ಈ ಕಣಿವೆ ರಾಜ್ಯದಲ್ಲಿ 90 ದಶಕದ ಪರಿಸ್ಥಿತಿ ಮತ್ತೆ ಮರುಕಳುಹಿಸಿದೆ. ಹಲವು ಆಯಾಮಗಳನ್ನು ಹೊಂದಿರುವ ಈ ಸಮಸ್ಯೆಯನ್ನು ಕೇವಲ ಬಂದೂಕಿನಿಂದ ಮಾತ್ರ ನಿರ್ವಹಿಸಲಾಗದು ಎಂಬ ಸ್ಪಷ್ಟ ಅರಿವು ಅವರಿಗೂ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಪರಿಹಾರ ಬಿಟ್ಟು ಬೇರೆ ದಾರಿಗಳಿಲ್ಲ. ‘ಸದ್ಯದ ಸ್ಥಿತಿಗೆ ಸೂಕ್ತ ವ್ಯಕ್ತಿ’ ಎಂಬ ಹಣೆಪಟ್ಟಿಯೊಂದಿಗೆ ಸೇನಾ ಮುಖ್ಯಸ್ಥನ ಜವಾಬ್ದಾರಿ ನಿರ್ವಹಿಸುತ್ತಿರುವ ರಾವತ್ ವಿಶಿಷ್ಟ ಸೇನಾ ಮುಖ್ಯಸ್ಥರಾಗಿ ಗುರುತಿಸಿಕೊಳ್ಳುವ ಎಲ್ಲ ಲಕ್ಷಣಗಳಿವೆ.

ಈ ಲೇಖನ ವಿಜಯ ಕರ್ನಾಟಕದ ಜೂನ್ 4, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಸೋಮವಾರ, ಮೇ 8, 2017

ಸಂಜೆಬೆಳಕಿನಲ್ಲೊಂದು ವಾಸಿಯಾಗದ ಅನುರಾಗ!

ಹುಡುಗನೊಬ್ಬನ ಗಜಲ್‌ಗಳು:  ಚಟ ಚಕ್ರವರ್ತಿ ಜತೆ ಮದ್ವಿ ಮಾಡಿದ್ರು..ಅದರ ಫಲ ಅಕೀ ಊಣ್ಣಾಕತ್ತಾಳು...


- ಪ್ರದ್ಯುಮ್ನ
ಆ ಊರೇನೂ ಅಂಥ ದೊಡ್ಡದಲ್ಲ. ಹಾಗಂತ ತೀರಾ ಕುಗ್ರಾಮವಂತೂ ಅಲ್ಲವೇ ಅಲ್ಲ. ನಗರಗಳ ಜೀವನ ಶೈಲಿ ಹಳ್ಳಿಗಳ ಮೇಲೂ ಬಿದ್ದು, ಬದಲಾಗುವಂಥ ಸಂಕ್ರಮಣದ ಕಾಲ. ಊರಲ್ಲಿ ತುಸು ಆಧುನಿಕತೆ ಕಣ್ಣಿಗೆ ಕಾಣುವಷ್ಟು ಇತ್ತು. ಆ ಊರಿನ ಹೊರಗೆ ಇರುವ ಸರ
ಕಾರಿ ಶಾಲೆ ಮುಂದೆ ಹಾದು ಹೋಗುವ ಟಾರ್ ರೋಡ್‌ನಲ್ಲಿ ನಾಲ್ಕಾರು ಅಂಗಡಿಗಳು, ಆ ಪೈಕಿ ಈತ ಕೆಲಸ ಮಾಡುವ ಗ್ಯಾರೇಜು ಒಂದು. ಮುಂಜಾನೆ ಕಾಲೇಜಿಗೆ ಹೋಗಿ, ಮಧ್ಯಾಹ್ನದ ನಂತರ ಆತ ಅಲ್ಲಿಯ ಕೆಲಸ ಮಾಡುತ್ತಿದ್ದ. ಗ್ರೀಸು, ಆಯಿಲ್ ಮೆತ್ತಿದ ಡ್ರೆಸ್ ಹಾಕ್ಕೊಂಡು ಮೋಟರ್‌ಸೈಕಲ್ ರಿಪೇರಿಗೆ ಕುಳಿತನೆಂದರೆ, ಯಾವುದೂ ಹೊರಗಿನ ಜಗತ್ತಿನ ಬಗ್ಗೆ ಅರಿವೇ ಇರುತ್ತಿರಲಿಲ್ಲ. ಇಂಥದ್ದೇ ತಲ್ಲೀನತೆ ಪಾಠ ಕೇಳುವಾಗಲೂ ಇರ್ತಿತ್ತು ಎಂದು ಬೇರೆ ಹೇಳಬೇಕಿಲ್ಲ.
ಸೋಮವಾರ ಬಂತೆಂದರೆ ಈತ ಕೆಲಸ ಮಾಡುವ ಗ್ಯಾರೇಜ್ ಮುಂದಿರುವ ರಸ್ತೆಗೆ ಕಳೆ ಕಟ್ಟುತ್ತಿತ್ತು. ಗ್ಯಾರೇಜ್‌ನಿಂದ ಸ್ವಲ್ಪ ದೂರದಲ್ಲಿ ಊರ ದೇವರ ಭವ್ಯ ದೇವಸ್ಥಾನವಿತ್ತು. ಒಂದು ಕಡೆಯಿಂದ ಹೊಲಗಳಿಗೆ ಹೋದವರು, ತಮ್ಮ ದನಕರುಗಳನ್ನು ಹೊಡ್ಕೊಂಡು ಬರೋದು ನೋಡುತ್ತಿದ್ದರೆ, ಅದು ಪೇಂಟಿಂಗ್ ರೀತಿಯಲ್ಲಿ ಕಾಣಿಸುತ್ತಿತ್ತು. ಯಾಕೆಂದರೆ, ಪಡುವಣ ದಿಕ್ಕಿನಲ್ಲಿ ಸಂಜೆಯ ಸೂರ್ಯ ತನ್ನ ಮೈತುಂಬ ಬಂಗಾರದ ಬಣ್ಣ ಮೆತ್ತಿಕೊಳ್ಳುತ್ತಿದ್ದ. ಅದರ ಪ್ರತಿಫಲನ ಈ ರಸ್ತೆಯ ಮೇಲೂ ಚೆಲ್ಲುತ್ತಿತ್ತು. ಆ ಕೆಂಬೆಳಕಲ್ಲಿ ಎಲ್ಲವೂ ಆಕರ್ಷಕ, ಚಿತ್ತಾರ. ಇನ್ನು ಊರೊಳಗಿನಿಂದ ಮಹಿಳೆಯರು, ಮಕ್ಕಳು ಮತ್ತು ಯುವತಿಯರು ಆ ಊರ ದೇವರ ದರ್ಶನಕ್ಕೆ ಹೋಗುತ್ತಿದ್ದರು. ಅವರೂ ಅದೇ ರಸ್ತೆಯ ಮೂಲಕ ಹೋಗಬೇಕು. ಸೂರ್ಯನಿಗೆ ಎದುರಾಗಿ ಹೋಗುವ ಪ್ರತಿ ಹೆಂಗಳೆಯರ ಮುಖ ಬಂಗಾರ ವರ್ಣದಲ್ಲಿ ಅದ್ದಿ ತೆಗೆದಂತೆ ಕಾಣುತ್ತಿತ್ತು.
ಇಂಥ ಸಂಜೆಗಳನ್ನು ಆತ ಬೇಕಾದಷ್ಟು ನೋಡಿದ್ದ. ತನ್ನದೇ ಆದ ಲೋಕದಲ್ಲಿ ತೇಲುತ್ತಿದ್ದವನಿಗೆ ಈ ಸಂಜೆಗಳು ಅನೇಕ ಬಾರಿ ಆತನಲ್ಲಿ ಹೊಸ ಹೊಸ ಕನಸುಗಳನ್ನು ಹುಟ್ಟುಹಾಕಿವೆ. ಹಗಲುಗನಸು ಕಾಣುವುದು ಸಾಮಾನ್ಯ. ಆದರೆ, ಈತ ಸಂಜೆಗನಸು ಕಾಣುತ್ತಿದ್ದ. ಕೈಯಲ್ಲಿ ಸ್ಪ್ಯಾನರ್ ಹಿಡಿದುಕೊಂಡೇ ಬೈಕ್‌ನ ಎಂಜಿನೊಳಗೇ ಮುಖ ತೂರಿಸಿಕೊಂಡು ಹಾಗೆಯೇ ನಿಶ್ಚಲನಾಗಿದ್ದುಂಟು. ಆತನ ಮೇಸ್ತ್ರಿ(ಮೆಕ್ಯಾನಿಕ್), ‘‘ಏ... ಬಾರಾ ನಂಬರ್ ಪಾನಾ ಕೊಡೊ,’’ ಅಂದಾಗಲೇ ಆತ ತನ್ನ ಕಲ್ಪನಾಲೋಕದಿಂದ ವಾಸ್ತವಕ್ಕೆ ಮರಳುತ್ತಿದ್ದ. ಹೀಗೆ ಅದೆಷ್ಟೋ ಬಾರಿಯಾಗಿದೆಯೋ?
ಆ ಸಂಜೆಯು ಹಾಗೇ ಇತ್ತು. ಅಂದು ಕೂಡ ಸೋಮವಾರ. ಒಂದೆಡೆ ಹೊಲದಿಂದ ಬರುವವರ ಸಾಲು, ಮತ್ತೊಂದೆಡೆ ದೇವಸ್ಥಾನಕ್ಕೆ ಹೋಗುವವರಿಂದ ಇಡೀ ರಸ್ತೆ ತುಂಬಿಕೊಂಡಿತ್ತು. ಯಾವುದೋ ಬೈಕ್‌ನ ಹಿಂಬದಿಯ ಗಾಲಿ ಬಿಚ್ಚುತ್ತಿದ್ದ ಈತನಿಗೆ ಕಂಡಳು ಆಕೆ. ಆ ಇಳಿಸಂಜೆಯ ಸೂರ್ಯನ ಬಂಗಾರದ ಕಿರಣಗಳು ಆಕೆಯ ಮುಖದ ಮೇಲೆ  ಬಿದ್ದಿದ್ದರಿಂದ ಅವಳ ಚೆಲುವು ದುಪ್ಪಟ್ಟಾಗಿತ್ತು. ನಯವಾಗಿ ಬೀಸುತ್ತಿದ್ದ ಗಾಳಿ ಆಕೆಯ ಮುಖದ ಮೇಲೆ ಸುಳಿದು ಹೋಗುತ್ತಿರುವಾಗಲೇ, ಕೂದಲುಗಳು ಆ ಗಾಳಿಯ ಆಜ್ಞಾನುವರ್ತಿಯಂತೆ ನರ್ತಿಸುತ್ತಿದ್ದವು. ಗಾಲಿಯ ಸಂದಿಯಿಂದಲೇ ಆಕೆಯನ್ನು ನೋಡುತ್ತಿದ್ದ ಈತನನ್ನು, ಆಕೆಯು ತನ್ನ ಮುಖದ ಮೇಲೆ ಬೀಳುತ್ತಿದ್ದ ಕೂದಲನ್ನು ಸರಿಸುವ ಗಳಿಗೆಯಲ್ಲಿ ನೋಡಿದಳು. ಒಂದು ಕ್ಷಣ ಇಬ್ಬರ ಕಣ್ಣುಗಳು ಸಂಧಿಸಿದವು. ಅವಳೇನೋ ಮುಂದೆ ಹೋದಳು. ಆದರೆ, ಈತನಿಗೆ ಆ ಒಂದು ಕ್ಷಣ ಇಡೀ ಜಗತ್ತೇ ಸ್ತಬ್ಧವಾದ ರೀತಿ. ಕಾಲ ತನ್ನ ಕಾಲುಮುರಿದುಕೊಂಡು ಬಿದ್ದ ಭಾವ. ‘‘ಮುಗೀತೇನಪಾ ಗಾಲಿ ಬಿಚ್ಚುದು,’’ ಎಂದು ಮೇಸ್ತ್ರಿ ಕೂಗಿದಾಗಲೇ ಇಡೀ ಜಗತ್ತೇ ರಿಲಾಕ್ಸ್ ಆಗಿದ್ದು.  ‘‘ಮುಗೀತು... ಮುಗೀತು...’’ ಎನ್ನುತ್ತಲೇ ಅವಳು ಹೋದ ದಿಕ್ಕಿನತ್ತ ನೋಡುತ್ತಿದ್ದವನ ಮುಖದ ಮೇಲಿದ್ದ ಗ್ರೀಸ್‌ಗೆ ನೊಣವೊಂದು ಸಿಕ್ಕಿ ಹಾಕಿಕೊಂಡು, ಪಟಪಟನೆ ತನ್ನ ರೆಕ್ಕೆ ಬಡಿಯುತ್ತಿತ್ತು. ಆ ಗೋಧೂಳಿಯ ಸಮಯದಲ್ಲಿ ಈ ನೊಣದ ವಿಚಾರ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ, ಗೊತ್ತಾಗಿದ್ದರೆ ಗೇಲಿ ಮಾಡುತ್ತಿದ್ದರೇನೋ!
ಬೇಡ ಬೇಡ ಎಂದರೂ ಅವಳ ಮುಖ ಈತನ ಮನಪರದೆಯ ಮೇಲೆ ಬರುತ್ತಲೇ ಇದೆ. ರಾತ್ರಿ ಪೂರ್ತಿ ನಿದ್ದೆಯೂ ಇಲ್ಲ. ಬೆಳಗ್ಗೆ ಎದ್ದು ಕಾಲೇಜಿಗೆ ಹೋಗುತ್ತಿರುವಾಗಲೇ ಆತನಿಗೆ ಗೊತ್ತಾಗಿದ್ದು, ಕಣ್ಣುಗಳೆರಡು ಕುಡಿದವರ ರೀತಿ ಕೆಂಪಾಗಿವೆ ಎಂಬುದು. ಈ ರೀತಿ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಆಗಿದೆ. ಆದರೆ, ಆಗ ತಡರಾತ್ರಿವರೆಗೂ ಕೆಲಸ ಮಾಡಿದ್ದರ ಪರಿಣಾಮವದು. ಆದರೆ ಈಗಿನದ್ದೇ ಬೇರೆ. ನಿನ್ನೆ ನೋಡಿದ ಮುಖದ ಗುಂಗಿನಲ್ಲೇ ಕಾಲೇಜು ಗೇಟ್ ದಾಟಿದವನ ಪಕ್ಕದಲ್ಲಿ ಬರುತ್ತಿದ್ದವಳು... ಅವಳೇ! ಈತನಿಗೆ ಕನಸೋ ನನಸೋ ನಂಬಲಾಗುತ್ತಿಲ್ಲ. ಆದರೂ ಸಾವರಿಸಿಕೊಂಡು ಹೋದವನಿಗೆ ಗೊತ್ತಾಗಿದ್ದು ಆಕೆಯ ಹೆಸರು ಮಲ್ಲಿಗೆ. ಕಾಲೇಜಿನಲ್ಲಿ ಅವನ ಜ್ಯೂನಿಯರ್.
ಇನ್ನು ಮುಂದೆ ಏನು ಹೇಳುವುದು? ಎಲ್ಲರ ಕಾಲೇಜ್ ಲೈಫ್‌ನಲ್ಲಾಗುವ ರೀತಿಯಲ್ಲೇ ಈತನೂ ಪ್ರೀತಿಯ ಬಲೆಯಲ್ಲಿ ಬಿದ್ದ. ಮೊದ ಮೊದಲು ಒನ್ ವೇ ಇದ್ದ ಪ್ರೀತಿ ಕಾಲೇಜು ಮುಗಿಯುವ ಹೊತ್ತಿಗೆ ಟು ವೇ ಆಗಿ ಬದಲಾಗಿತ್ತು. ಆದರೆ, ಬಹುತೇಕರ ಜೀವನದಲ್ಲಾಗುವಂತೆ ಈತನ ಪ್ರೀತಿಯೂ ಮದುವೆ ಎಂಬ ಹೊಸ ಆರಂಭಕ್ಕೆ ನಾಂದಿಯಾಗಲಿಲ್ಲ.
್ಡ್ಡ್ಡ
ಈಗ ಸುಮಾರು ಹತ್ತನ್ನೆರಡು ವರ್ಷಗಳು ಸರಿದು ಹೋಗಿವೆ. ಆ ಊರು ಇದೀಗ ಪಟ್ಟಣವೆಂಬ ಬೋರ್ಡನ್ನು ತನ್ನ ಹಣೆಗೆ ಅಂಟಿಸಿಕೊಂಡಿದೆ. ಆ ರಸ್ತೆ ಈಗಲೂ ಇದೆ. ನಾಲ್ಕಾರು ಇದ್ದ ಅಂಗಡಿಗಳು ಇದೀಗ ರಸ್ತೆಯ ಎರಡೂ ಬದಿಯಲ್ಲಿ ತುಂಬಿವೆ. ಅದರ ಮಧ್ಯೆಯೇ ಈತ ಕೆಲಸ ಮಾಡುತ್ತಿದ್ದ ಆ ಸಣ್ಣ ಗ್ಯಾರೇಜು ಈಗಲೂ ಇದೆ. ಅದೇ ಮೇಸ್ತ್ರಿ, ಮುರಿದ ಕುರ್ಚಿಯ ಮೇಲೆ ಯಾವುದಾದರೂ ಮೋಟರ್ ಸೈಕಲ್ ರಿಪೇರಿಗೆ ಬರಬಹುದೆಂದು ಕಾಯುತ್ತಿರುತ್ತಾನೆ. ಅಂದು ಆ ರಸ್ತೆಗಿದ್ದ ಸಾವಧಾನದ ಶ್ರೀಮಂತಿಕೆ, ತಂಗಾಳಿಯ ಸೋಕುವಿಕೆ ಇಂದಿಲ್ಲ. ರಸ್ತೆಗಳ ಮೇಲೆ ಬರ್.. ಬರ್.... ಎಂದು ವಾಹನಗಳು ಓಡುತ್ತಿವೆ. ಹೊಲದಿಂದ ಬರುವವರು ಇದೀಗ ಮೋಟರ್ ಸೈಕಲ್ ಏರಿದ್ದಾರೆ. ಇತ್ತ ಆ ದೇವಸ್ಥಾನಕ್ಕೆ ಹೋಗುವವರು ಕಾರು, ಜೀಪುಗಳ ಮೊರೆ ಹೋಗಿದ್ದರೆ, ಯುವತಿಯರು ಸ್ಕೂಟಿ ಸಂಗ ಮಾಡಿದ್ದಾರೆ. ಎಲ್ಲವೂ ಬದಲಾಗಿದೆ. ಎಲ್ಲೆಲ್ಲೂ ಧಾವಂತ ಎಂದು ಯೋಚಿಸುತ್ತ ಅದೇ ಗ್ಯಾರೇಜಿನಲ್ಲಿ ಕುಳಿತಿದ್ದ ಈತನನ್ನು, ರಸ್ತೆಯ ಬದಿಯ ಆಚೆ ನಡೆದುಕೊಂಡು ಹೋಗುತ್ತಿದ್ದವಳ ಕಣ್ಣುಗಳು ನೋಡುತ್ತಿದ್ದವು. ಅಂದು-ಇಂದಿನ ಪರಿಸ್ಥಿತಿ ತುಲನೆಯಲ್ಲಿದ್ದ ಈತ ಆ ನೋಟವನ್ನೇನೂ ಗಮನಿಸಲಿಲ್ಲ. ಆದರೆ, ಸುಪ್ತ ಮನಸ್ಸಿನೊಳಗಿನ ಆಜ್ಞೆ ಎಂಬಂತೆ ಸಡನ್ನಾಗಿ ಆಕೆಯನ್ನು ದಿಟ್ಟಿಸಿ ನೋಡಿದ. ಹೌದು.. ಆಕೆಯೇ. ಮಲ್ಲಿಗೆ. ಏನಿದು ಇಷ್ಟೊಂದು ಸೊರಗೋಗಿದ್ದಾಳೆ ಎನ್ನುತ್ತಿರುವಾಗಲೇ ಅವಳು ಇವನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ ಮರೆಯಾದಳು.
ಇದನ್ನು ಗಮನಿಸುತ್ತಿದ್ದ ಆ ಮೇಸ್ತ್ರಿ, ‘‘ಯಾಕಪಾ ಹಿಂದಿದ್ದೆಲ್ಲ ನೆನಪಾಯ್ತೇನು?’’ ಎಂದು ಅವನ ಪ್ರತಿಕ್ರಿಯೆಗೂ ಕಾಯದೆ, ‘‘ನೀ ಏನಪಾ ಬೆಂಗ್ಳೂರು ಸೇರಿಕೊಂಡಿ. ನೀ ಹ್ವಾದ ಎರಡ ವರ್ಷಕ್ಕ ಮದ್ವೆ ಮಾಡಿದರು. ಆದ್ರ ಆ ಹುಡುಗ ಸರಿ ಇರ್ಲಿಲ್ಲ. ಅವಂಗ ಎಲ್ಲಾ ಚಟಾ ಇದ್ವು. ಚಟ ಚಕ್ರವರ್ತಿ ಅಂತ ಕರೀತಿದ್ರು ಮಂದಿ. ಎಲ್ಲಾ ಗೊತ್ತಿದ್ದು ಆಕಿ ಅಪ್ಪ ಮದ್ವಿ ಮಾಡಿದ. ಆದ್ರ ಈಗ ನೋಡು ಅದರ ಫಲ ಅಕೀ ಉಣ್ಣಾಕತ್ತಾಳು. ಎರಡ ವರಸದ ಹಿಂದ ಅಂವಾ ಸತ್ಹೋದ,’’ ಎಂದು ಹೇಳಿ ಅಂಗಡಿಯೊಳಗೆ ಸ್ಪ್ಯಾನರ್ ತರಲು ಹೋದ. ಈ ಸುದ್ದಿ ಕೇಳಿದ ಅವನಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಆಕೆಯ ಗಂಡ ಯಾಕೆ ಸತ್ತ? ಏನಾಗಿತ್ತು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಮೋಟರ್ ಸೈಕಲ್ ತಳ್ಳುತ್ತಾ ಒಬ್ಬ ಬಂದು, ‘‘ಮೇಸ್ತ್ರೀ ಗಾಡಿ ಸುರುವಾಗವಲ್ತು ನೋಡು,’’ ಎಂದ. ಮೇಸ್ತ್ರಿ ಗಾಡಿ ರಿಪೇರಿಯಲ್ಲಿ ಮಗ್ನನಾದ.
ಇತ್ತ ರಸ್ತೆಯಲ್ಲಿ ಧಾವಂತದ ಪರಾಕಾಷ್ಠೆ ಇತ್ತು. ಗದ್ದಲ ತುಂಬಿತ್ತು. ಪಾಂವ್... ಪಾಂವ್... ಎಂದು ಚಿತ್ರ ವಿಚಿತ್ರ ಹಾರ್ನ್ ಬಾರಿಸುತ್ತ ಹೋಗುವ ಬಸ್ಸು, ಕಾರುಗಳಿಗೇನೂ ಕೊರತೆ ಇರಲಿಲ್ಲ. ಆದರೆ, ಅವನ ಮನಸ್ಸಿನೊಳಗೆ ಎಲ್ಲವೂ ಸ್ತಬ್ಧ, ನಿಶ್ಶಬ್ಧ. ಅವಳನ್ನು ನೋಡಿದ ಮೇಲೆ; ಬೇಸಿಗೆಯಲ್ಲಿ  ಅಡ್ಡ ಮಳೆ ಜೋರಾಗಿ ಸುರಿದು ಹೋದಂಥ ಭಾವ. ಮಳೆಯಾಗಿದ್ದು ನಿಜ. ಆದರೆ, ನೆಲ ಆ ಮಳೆ ನೀರನ್ನೆಲ್ಲ ಕುಡಿದು, ಮಳೆಯಾದ ಬಗ್ಗೆ ಸಾಕ್ಷಿ ಕೇಳುವಂತಿತ್ತು ಆತನ ಮನಸ್ಥಿತಿ. ಅಷ್ಟರಲ್ಲಿ, ಆ ಮೋಟರ್ ಸೈಕಲ್ ಬರ್ರ ಅಂತ ಶುರುವಾಯ್ತು. ಮೇಸ್ತ್ರಿ ತನ್ನ ಕೈಯೊಳಗಿದ್ದ ಸ್ಪ್ಯಾನರ್ ಒಳಗಿಟ್ಟು ಬಂದು ಕುಳಿತ.
ಇತ್ತ ಪಡುವಣದಲ್ಲಿ ಸೂರ್ಯ, ಆ ಎತ್ತರದ ಬಿಲ್ಡಿಂಗ್‌ನಿಂದ ಇವನತ್ತ ಇಣುಕಿದಂತಾಯಿತು. ನೋಡಿದರೆ, ಆತನ ಮೈ ಬಣ್ಣ ಕೆಂಪಿಲ್ಲ, ಬರಬರುತ್ತಾ ಕಪ್ಪಾಗುತ್ತಿದೆ. ಈತನ ಮೇಲೆ ಅಗಾಧವಾದ ಸಿಟ್ಟು ಎಂಬಂತೆ ಆತ ತನ್ನ ದಿನದ ಕೆಲಸ ಮುಗಿಸಿ ಭೂಗರ್ಭ ಸೇರಿಬಿಟ್ಟ. ಇತ್ತ ರಸ್ತೆ ಮೇಲೆ ಬೀದಿ ದೀಪಗಳ ಬೆಳಕಿನ ಆಟ ಶುರುವಾಗಿತ್ತು. ಭಾರವಾದ ದನಿಯಂದಲೇ ಕೇಳಿದ, ‘‘ಆಕೆಯ ಗಂಡನಿಗೆ ಏನಾಗಿತ್ತು?’’. ಇದೇ ಪ್ರಶ್ನೆಗೆ ಕಾಯುತ್ತಿದ್ದೆ ಎನ್ನುವಂತೆ ಮೇಸ್ತ್ರಿ, ಒಂದು ಗುಕ್ಕಿನಲ್ಲಿ, ‘‘ಅದರ ಹೆಸ್ರ ಹೇಳಾಕ್ ಬರುದಿಲ್ಲ ನಂಗ. ಆದರ, ಅದೇನೋ ಚಲೋ ಆಗಲಾರ್ದು ಜಡ್ಡಂತ ನೋಡ. ಅದ ಈಕಿಗೂ ಬಂದೈತಿ ಅಂತಾರು ಮಂದಿ,’’ ಎಂದು ಹೇಳಿ ಸುಮ್ಮನಾದ.
‘ವಾಸಿಯಾಗದ ಕಾಯಿಲೆ ಯಾವುದು’ ಎಂದು ಯೋಚಿಸುತ್ತಲೇ ಆತನಿಗೆ ಉತ್ತರ ಗೊತ್ತಾಗಿತ್ತು. ಈಗ ರಸ್ತೆ ಆತನಿಗೆ ಬೆಂಗಾಡಿನ ಕಾಲು ದಾರಿಯಂತೆ ಭಾಸವಾಗುತ್ತಿದೆ. ಮತ್ತೆ ಸೂರ್ಯ ಹುಟ್ಟಲಾರ ಅನಿಸುತ್ತಿದೆ.

This article was published in VijayKarnataka, on 08 May 2017 edition

ಸೋಮವಾರ, ಏಪ್ರಿಲ್ 10, 2017

ಅಸಾದ್: ಯಮದೂತ ‘ಡಾಕ್ಟರ್’ ಪ್ರೆಸಿಡೆಂಟ್!

- ಮಲ್ಲಿಕಾರ್ಜುನ ತಿಪ್ಪಾರ
ವೈರಿಗಳನ್ನು ಮತ್ತು ಉಗ್ರರನ್ನು ಮಟ್ಟ ಹಾಕುವ ನೆಪದಲ್ಲಿ ತನ್ನದೇ ದೇಶದ ಮುಗ್ಧರ ಪ್ರಾಣ ತೆಗೆಯುವ ಹಂತಕ್ಕೆ ಯಾವ ದೇಶದ ನಾಯಕನೂ ಹೋಗಲಾರ. ಆದರೆ, ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್ ಇಂಥ ಹೇಯ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಡ್ಲಿಬ್ ಪ್ರಾಂತದ ಖಾನ್ ಶೇಕುನ್ ನಗರದ ಮೇಲೆ ಕೆಮಿಕಲ್ ಬಾಂಬ್ ದಾಳಿ ನಡೆಸಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರ ಪ್ರಾಣ ಹರಣ ಮಾಡಿದ್ದಾರೆ.
ಅಸಾದ್‌ರ ಈ ದುಸ್ಸಾಹಸಕ್ಕೆ ಇಡೀ ಅಂತಾರಾಷ್ಟ್ರೀಯ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ಮಡಿದ ಜೀವಗಳಿಗೆ ಮಮ್ಮಲ ಮರಗುತ್ತಿದೆ. ವಿಷಾನಿಲಕ್ಕೆ ತುತ್ತಾದವರ ಸಂಖ್ಯೆ 80ಕ್ಕೂ ಹೆಚ್ಚು. ಈ ಪೈಕಿ 33 ಮಕ್ಕಳಿದ್ದರೆ, 13 ಮಹಿಳೆಯರು. ಈ ಕೃತ್ಯಕ್ಕೆ ಅಸಾದ್ ಅವರೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್, ಈಗಾಗಲೇ ಸಿರಿಯಾದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದಾರೆ. ಅಸಾದ್ ವಿರುದ್ಧ ಭಾರೀ ಪ್ರಮಾಣದಲ್ಲಿ ಕೈಗೊಳ್ಳುತ್ತಿರುವ ಅಮೆರಿಕದ ಮೊದಲ ಸೇನಾ ಕಾರ್ಯಾಚರಣೆ ಇದು. ಆದರೆ, ಅಸಾದ್‌ನ ಪರಮಮಿತ್ರ ರಾಷ್ಟ್ರವಾಗಿರುವ ರಷ್ಯಾ ಬೇರೆಯದೇ ಕತೆ ಹೇಳುತ್ತಿದೆ. ಆದರೆ, ಅದರ ಕತೆಯನ್ನು ನಂಬುವ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಸಮುದಾಯವಿಲ್ಲ. ಇದೆಲ್ಲವೂ ಅಂತಾರಾಷ್ಟ್ರೀಯ ರಾಜಕೀಯದ ಪಟ್ಟುಗಳು. ತಮ್ಮ ಹಿತಾಸಕ್ತಿಗೋಸ್ಕರ ದಾಳಗಳನ್ನು ಎಸೆಯುವ ‘ಸೂಪರ್ ಪವರ್ ರಾಷ್ಟ್ರ’ಗಳು, ಮುಗ್ಧರ ಜೀವಕ್ಕೆ ಬೆಲೆ ನೀಡುವುದಿಲ್ಲ. ಅಸಾದ್‌ನಂಥ ನಾಯಕರು ಇಂಥ ರಾಜಕಾರಣದ ಕೈಗೊಂಬೆಯಾಗಿದ್ದುಕೊಂಡು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವವರನ್ನು ಹಣಿಯುವುದು ಯಾವುದೇ ಸರಕಾರದ ಕರ್ತವ್ಯ. ಅದರಲ್ಲೇನೂ ತಪ್ಪಿಲ್ಲ. ಆದರೆ, ಅದಕ್ಕಾಗಿ ತನ್ನದೇ ಮುಗ್ಧ ಜನರನ್ನು ಬಲಿ ಕೊಡುವುದು ಎಷ್ಟು ಸರಿ ಎಂಬ ನೈತಿಕ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.
ಮನುಷ್ಯನೊಳಗೆ ಹಿಂಸೆ ಅಂತರ್ಗತವಾಗಿರುತ್ತದೆ. ಅದು ಯಾವುದೇ ಕ್ಷಣದಲ್ಲಿ ಆಸ್ಫೋಟಗೊಳ್ಳಬಹುದು ಎಂಬುದಕ್ಕೆ ಸಿರಿಯಾ ಅಧ್ಯಕ್ಷ ಅಸ್ಸಾದ್ ಅವರು ಅತ್ಯುತ್ತಮ ಉದಾಹರಣೆ. ಅಮಾಯಕರಂತೆ ಕಾಣುವ ಅಸ್ಸಾದ್ ಆಂತರ್ಯದಲ್ಲಿ ಕ್ರೂರ ಸರ್ವಾಧಿಕಾರಿ. ಮುಗ್ಧರ ಮೇಲೆ ನಡೆಸಿರುವ ಘೋರ ಅಪರಾಧಗಳು ಇದನ್ನು ಪುಷ್ಟೀಕರಿಸುತ್ತವೆ. ಹಾಗೆ ನೋಡಿದರೆ, ಸಿರಿಯಾದಲ್ಲಿ ವಿಷಾನಿಲ ದಾಳಿ ನಡೆದಿರುವುದು ಇದೇ ಮೊದಲಲ್ಲ. 2013ರಲ್ಲೂ ಇಂಥ ದಾಳಿ ನಡೆದಿತ್ತು. ಆಗ 1000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಆಗಲೇ ಅಂತಾರಾಷ್ಟ್ರೀಯ ಸಮುದಾಯ ಕಠಿಣ ನಿರ್ಧಾರ ಕೈಗೊಂಡಿದ್ದರೆ ಖಾನ್ ಶೇಕುನ್‌ನಂಥ ಘಟನೆಗಳು ಮತ್ತೆ ನಡೆಯುತ್ತಿರಲಿಲ್ಲ.
ಎಂಥ ದುರಂತ ನೋಡಿ; ಬಶರ್ ಅಲ್ ಅಸಾದ್ ವೃತ್ತಿಯಲ್ಲಿ ವೈದ್ಯರು. ನಾಲ್ಕು ವರ್ಷ ಸೇನಾ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ಅಸಾದರದ್ದು ಜೀವವನ್ನು ಕಾಪಾಡುವಂಥ ಪುಣ್ಯದ ಕೆಲಸ. ಆದರೆ, ಅದೇ ವ್ಯಕ್ತಿ ಈಗ ಸಾಮೂಹಿಕವಾಗಿ ಜನರ ಜೀವ ತೆಗೆಯುತ್ತಿದ್ದಾರೆಂದರೆ ಇದಕ್ಕಿಂತ ವಿಪರ್ಯಾಸವೇನಿದೆ? ತನ್ನದೇ ಜನರನ್ನು ಅತ್ಯಂತ ಭೀಕರವಾಗಿ ಕೊಲ್ಲುವ ಹಂತಕ್ಕೆ ಅಧ್ಯಕ್ಷನೊಬ್ಬ ಹೋಗುತ್ತಾನೆಂದರೆ ಆತನ ಸರ್ವಾಧಿಕಾರತ್ವದ ಹಸಿವು ಅರಿವಾಗುತ್ತದೆ. ಈ ವಿಷಯದಲ್ಲಿ ಅಸಾದ್ ಕೂಡ ಜಗತ್ತು ಕಂಡ ಕ್ರೂರ ಸರ್ವಾಧಿಕಾರಿಗಳಿಗಿಂತ ತಾನೇನೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲಿ ‘ವೈದ್ಯೋ ನಾರಾಯಣೋ ಹರಿ’ ಅಂದರೆ, ವೈದ್ಯ ದೇವರಿಗೆ ಸಮಾನ ಎಂದಿದೆ. ಆದರೆ, ಸಿರಿಯಾದಲ್ಲಿ ವೈದ್ಯ ಯಮನಿಗೆ ಸಮಾನ ಎಂಬಂತಾಗಿದೆ.
ಬಶರ್ ಅವರು 1965ರ ಸೆಪ್ಟೆಂಬರ್ 11ರಂದು ಡಮಾಸ್ಕಸ್‌ನಲ್ಲಿ ಜನಿಸಿದವರು. ತಂದೆ ಹಫೀಜ್ ಅಲ್ ಅಸಾದ್ ಸಿರಿಯಾದ ಅಧ್ಯಕ್ಷ. ಡಮಾಸ್ಕಸ್‌ನಲ್ಲಿ ಬೆಳೆದ ಬಶರ್ 1988ರಲ್ಲಿ ಸ್ಕೂಲ್ ಆಫ್ ಡಮಾಸ್ಕಸ್ ಯುನಿರ್ವಸಿಟಿಯಿಂದ ಪದವಿ ಪಡೆದು, ಸಿರಿಯಾ ಸೇನೆಯಲ್ಲಿ ವೈದ್ಯರಾಗಿ ನಾಲ್ಕು ವರ್ಷ ಕೆಲಸ ಮಾಡುತ್ತಾರೆ. ನಂತರ ಅವರು, ಇಂಗ್ಲೆಂಡ್‌ಗೆ ತೆರಳಿ ಲಂಡನ್ ವೆಸ್ಟರ್ನ್ ಐ ಹಾಸ್ಪಿಟಲ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಹಾಗೆ ನೋಡಿದರೆ, ಬಶರ್ ಅವರಿಗೆ ರಾಜಕೀಯ ಕುರಿತು ಅಷ್ಟೇನೂ ಆಸಕ್ತಿ ಇರುವುದಿಲ್ಲ. ತಂದೆಯ ನಂತರ ರಾಜಕೀಯ  ಉತ್ತರಾಧಿಕಾರಿ ಎಂದು ಬಷರ್ ಅವರ ಅಣ್ಣ  ಬಸೆಲ್ ಅಲ್ ಅಸಾದ್ ಗುರುತಿಸಿಕೊಂಡಿರುತ್ತಾರೆ. ಆದರೆ, ಬಸೆಲ್ 1994ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಆಗ, ಸಿರಿಯಾಗೆ ಬಶರ್‌ನನ್ನು ತಂದೆ ಹಫೀಜ್ ಅವರು  ಕರೆಯಿಸಿಕೊಂಡು, ಮಿಲಿಟಿರಿ ಅಕಾಡೆಮಿಯಲ್ಲಿ ಕೆಲಸ ಕೊಡುತ್ತಾರೆ. ‘ಸಿರಿಯಾ ಸ್ವಾಧೀನ ಲೆಬನಾನ್’ ಉಸ್ತುವಾರಿಯನ್ನು ಬಶರ್‌ಗೆ 1998ರಲ್ಲಿ ವಹಿಸುತ್ತಾರೆ. ಕುಟುಂಬದ ವ್ಯವಹಾರ ನೋಡಿಕೊಂಡು, ರಾಜಕೀಯದ ಕಡೆ ತಲೆಹಾಕದ ಬಶರ್ ಕೊನೆಗೆ ರಾಜಕೀಯ ಉತ್ತುಂಗಕ್ಕೆ ಏರುತ್ತಾ ಹೋಗಿ, ತಂದೆಯ ನಿಧನದ ಬಳಿಕ ಅಂದರೆ 2000ರಲ್ಲಿ ಸಿರಿಯಾದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.
ಅಧಿಕಾರ ವಹಿಸಿಕೊಂಡಾಗ ಅಸಾದ್ ಅವರಿಗೆ 34 ವರ್ಷ. ಜನರು ಸುಧಾರಣೆಯ ಶುಭ ಕಾಲ ಎಂದೇ ಬಗೆದಿದ್ದರು. ತಮ್ಮ ಅಧಿಕಾರಾವಧಿಯ ಆರಂಭಿಕ ವರ್ಷಗಳಲ್ಲಿ ಬಶರ್ ಅವರೂ ಜನರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಅಧಿಕಾರಕ್ಕೇರುತ್ತಿದ್ದಂತೆ ತಮ್ಮ ತಂದೆಯಂತೆ ಸರ್ವಾಧಿಕಾರಿಯ ಲಕ್ಷಣಗಳನ್ನೇನೂ ತೋರಲಿಲ್ಲ. ಮುಕ್ತ ಚಿಂತನೆಯ ಪ್ರತಿಪಾದಕರಂತೆ ಕಂಡರು. ಅನೇಕ ಸುಧಾರಣೆಗಳಿಗೆ ಶ್ರೀಕಾರ ಹಾಕಿದರು. ರಾಜಕೀಯ ವಿರೋಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದರು. ಮಾಧ್ಯಮಗಳ ಮೇಲಿದ್ದ ನಿರ್ಬಂಧಗಳನ್ನು ತೆಗೆದು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಕೊಟ್ಟಿದ್ದರಿಂದ ರಾಜಕೀಯ ಚರ್ಚೆಗಳು ಕೂಡ ನಡೆಯಲಾರಂಭಿಸಿದವು. ಭಿನ್ನ ಧ್ವನಿಗಳಿಗೆ ಅವಕಾಶ ದೊರೆಯಲಾರಂಭಿಸಿತು. ರಾಜಕೀಯ ಬಹುತ್ವಕ್ಕೆ ಮಹತ್ವ ಬರಲಾರಂಭಿಸಿತು. ಈ ಹಿನ್ನೆಲೆಯಲ್ಲೇ ಬಹುತೇಕ ರಾಜತಾಂತ್ರಿಕರು, ಶೈಕ್ಷಣಿಕ ತಜ್ಞರು ಅಸಾದ್ ಅವರ ಮೊದಲನೆಯ ಅವಧಿಯನ್ನು ಶ್ಲಾಘಿಸುತ್ತಾರೆ. ಆದರೆ, ಬಶರ್ ಅವರ ಸುಧಾರಣೆ ಕ್ರಮಗಳನ್ನು ಸೇನೆ ಹಾಗೂ ಸ್ಥಾಪಿತ ಹಿತಾಸಕ್ತಿಗಳು ಪ್ರಶ್ನಿಸಲಾರಂಭಿಸಿದವು. ಬಾತ್ ಪಾರ್ಟಿ ಮತ್ತು ಅಲಾವಿಟ್ ಸಮುದಾಯ(ಬಶರ್ ಅವರು ಪ್ರತಿನಿಧಿಸುವ ಸಮುದಾಯ) ಈ ಸುಧಾರಣೆಗಳಿಂದ ಅತೃಪ್ತಗೊಂಡವು. ಅಸ್ಥಿರತೆಯ ಭಯದಿಂದಾಗಿ ಮತ್ತು ತಮ್ಮ ಪ್ರಭಾವಕ್ಕೆ ಧಕ್ಕೆ ಬರಬಹುದೆಂಬ ಭೀತಿಯಿಂದ ಸುಧಾರಣೆಗಳಿಗೆ ಕೊಕ್ಕೆ ಹಾಕಲಾರಂಭಿಸಿದವು ಮಾತ್ರವಲ್ಲ, ಈ ಹಿಂದಿದ್ದ ದಿನಗಳತ್ತ ಆಡಳಿತವನ್ನು ಕೊಂಡೊಯ್ಯಲು ಪ್ರಯತ್ನಿಸಿದವು. ಇದರ ಪರಿಣಾಮವಾಗಿ, 2014ರಲ್ಲಿ ಅಸಾದ್ ಮರಳಿ ಅಧಿಕಾರಕ್ಕೆ ಬಂದ ನಂತರ, ಅವರ ವ್ಯಕ್ತಿತ್ವ ಹಾಗೂ ಕಾರ್ಯ ನಿರ್ವಹಣೆಯಲ್ಲಿ ಅಪಾರ ವ್ಯತ್ಯಾಸ ಕಂಡು ಬಂತು. ಯಾವ ವ್ಯಕ್ತಿಯನ್ನು ಆಶಾವಾದದ ಪ್ರತೀಕ ಎಂದು ಜನ ನೋಡುತ್ತಿದ್ದರೋ ಅದೇ ವ್ಯಕ್ತಿ ಇದೀಗ ಜನರ ಕಣ್ಣಲ್ಲಿ ವಿಲನ್ ಆಗಿ ಬದಲಾದರು.
ಹಾಗೆ ನೋಡಿದರೆ, 2014ರಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಮತಗಳಿಂದಲೇ ಆಯ್ಕೆಯಾಗಿದ್ದರು. ಶೇ.88.7ರಷ್ಟು ಮತಗಳನ್ನು ಅವರು ಪಡೆದಿದ್ದರು. ಬಾತ್ ಪಾರ್ಟಿಯ ಇತಿಹಾಸದಲ್ಲೇ ಅಧ್ಯಕ್ಷರೊಬ್ಬರು ಪಡೆದ ಅತಿ ಹೆಚ್ಚಿನ ಮತಗಳು ಅವು. ಆದರೆ, ಅಂತಾರಾಷ್ಟ್ರೀಯ ಸಮುದಾಯ ಮಾತ್ರ ಈ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದವು. ಇದ್ಯಾವುದಕ್ಕೆ ತಲೆ ಕೆಡಿಸಿಕೊಳ್ಳದ ಅಸಾದ್ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿದರು. ಅವರ ಸರ್ವಾಧಿಕಾರತ್ವದ ಲಕ್ಷಣಗಳು ಮೊದಲಿಗೆ ಗೋಚರವಾಗಿದ್ದು, ಅರಬ್ ಸ್ಪ್ರಿಂಗ್ ಪ್ರತಿಭಟನಾಕಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಾಗ. ಇದೇ ಮುಂದೆ ಸಿರಿಯಾದ ನಾಗರಿಕ ಸಂಘರ್ಷಕ್ಕೆ ಕಾರಣವಾಗಿ, ಇದೀಗ ವಿಷಾನಿಲದಂಥ ಭೀಕರ ಸಾಮೂಹಿಕ ಶಸ್ತ್ರಾಸ್ತ್ರಗಳ ಬಳಕೆಯವರೆಗೂ ಬಂದು ಮುಟ್ಟಿದೆ. ನಾಯಕನೊಬ್ಬನ ಕೆಲವು ತಪ್ಪು ನಿರ್ಧಾರಗಳು ಹೇಗೆ ಇಡೀ ದೇಶವನ್ನು ಬಡುಮೇಲು ಮಾಡುತ್ತವೆ ಎಂಬುದಕ್ಕೆ ಇದು ಜೀವಂತ ಉದಾಹರಣೆ. ಇಷ್ಟೆಲ್ಲ ಆದರೂ, ಅಸಾದ್ ತಮ್ಮ ಕ್ರಮಗಳನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಆದರೆ, ವಿಶ್ವಸಂಸ್ಥೆ ಕೈಗೊಂಡ ಅಧ್ಯಯನ ಪ್ರಕಾರ ಅಸಾದ್ ಅವರ ವಾರ್ ಕ್ರೈಮ್‌ಗಳ ಪಟ್ಟಿ ದೊಡ್ಡದಿದೆ.
ಸಿರಿಯಾದಲ್ಲಿ ನಾಗರಿಕ ಸಂಘರ್ಷ 2011ರಿಂದಲೇ ಆರಂಭವಾಗುತ್ತದೆ. ರಾಜಕೀಯ ಸುಧಾರಣೆ ಮತ್ತು ನಾಗರಿಕ ಹಕ್ಕುಗಳ ಮರುಸ್ಥಾಪನೆಗಾಗಿ ದೊಡ್ಡ ಹೋರಾಟವೇ ನಡೆಯುತ್ತದೆ. ಆಗಲೂ ಸಿರಿಯಾ ಆಡಳಿತ ಪ್ರತಿಭಟನಾಕಾರರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಒಂದೆಡೆ ಅಸಾದ್ ಆಡಳಿತದ ವಿರುದ್ಧ ಜನರು ಬೀದಿಗಿಳಿದರೆ, ಮತ್ತೊಂದೆಡೆ ಅಸಾದ್ ಪರವಾಗಿಯೂ ಹೋರಾಟ ನಡೆಯುತ್ತದೆ. ಇದರ ಒಟ್ಟು ಪರಿಣಾಮವೇ ಎಂದೂ ಮುಗಿಯದ ಸಿರಿಯಾ ನಾಗರಿಕ ಸಂಘರ್ಷ ಆರಂಭವಾಗುತ್ತದೆ. ಇದರ ಮಧ್ಯೆಯೇ ಅಮೆರಿಕ ಮತ್ತು ರಷ್ಯಾದ ಹಸ್ತಕ್ಷೇಪಗಳಿಂದಾಗಿ ಪರಿಸ್ಥಿತಿ ಮತ್ತಷ್ಟು ಹದೆಗೆಡುತ್ತದೆ. ವಾಸ್ತವದಲ್ಲಿ ತನ್ನ ದೇಶದೊಳಗಿನ ಸಂಘರ್ಷವನ್ನು ಚಾಣಾಕ್ಷತನದಿಂದ ಬಗೆಹರಿಸಬೇಕಿದ್ದ ಅಸಾದ್ ಎಡವುತ್ತಾರೆ. ಅಂತಾರಾಷ್ಟ್ರೀಯ ಸಮುದಾಯ, ಸಿರಿಯಾ ಮೇಲೆ ನಿರ್ಬಂಧನೆಗಳನ್ನು ಹೇರಿದ್ದರಿಂದ ಒಟ್ಟಾರೆ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತದೆ. ವಿರೋಧಿ ಪ್ರತಿಭಟನಾಕಾರರನ್ನು  ಸೇನೆಯಿಂದ ದಂಡಿಸಲಾಗುತ್ತದೆ. ಒಂದೊಮ್ಮೆ ಸಿರಿಯಾದ ಆಶಾದಾಯಕ ಅಧ್ಯಕ್ಷನಾಗಿ ಗುರುತಿಸಿಕೊಂಡಿದ್ದ ಅಸಾದ್ ಇದೀಗ ಸಂಪೂರ್ಣ ಸರ್ವಾಧಿಕಾರಿಯಾಗಿ ಬದಲಾಗುತ್ತಾರೆ. ನಂತರ ನಡೆದಿದ್ದೆಲ್ಲ ಹಿಂಸಾತ್ಮಕ ರಾಜಕೀಯವಷ್ಟೆ.
ನಾಗರಿಕ ಸಂಘರ್ಷದಿಂದ ಬಸವಳಿದಿರುವ ಸಿರಿಯಾದಲ್ಲಿ ತುರ್ತಾಗಿ ಶಾಂತಿ ಸ್ಥಾಪನೆಯಾಗಬೇಕಿದೆ. ಆದರೆ, ತಮ್ಮ ಹಿತಾಸಕ್ತಿಗಳ ಅನುಸಾರವಾಗಿ ಸಿರಿಯಾ ಕುರಿತು ವಿದೇಶಾಂಗ ನೀತಿಗಳನ್ನು ರೂಪಿಸಿಕೊಂಡಿರುವ ಅಮೆರಿಕ ಮತ್ತು ರಷ್ಯಾಗಳಿಂದಾಗಿ ಶಾಂತಿ ಸ್ಥಾಪನೆ ಸದ್ಯಕ್ಕೆ ಮರೀಚಿಕೆಯಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದೆಡೆ, ಶಾಂತಿ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿರಬೇಕಾಗಿರುವ ಅಧ್ಯಕ್ಷ ಅಸಾದ್ ಅವರು ಉಗ್ರರನ್ನು ಮಟ್ಟ ಹಾಕುತ್ತಲೇ, ವಿಷಾನಿಲದ ಬಾಂಬ್‌ಗಳನ್ನು ಮುಗ್ಧರ ಮೇಲೆ ಎಸೆಯುತ್ತಾ ತಿರುಗುತ್ತಿರುವುದು ಮಾತ್ರ ಆಧುನಿಕ ಜಗತ್ತಿನ ಅಣಕವಷ್ಟೆ.

This article was published in VijayKarnataka, on 09 April 2017 edition