ಸೋಮವಾರ, ಫೆಬ್ರವರಿ 13, 2017

ಹುಡುಗನೊಬ್ಬನ ಗಜಲ್‌ಗಳು: ಕ್ಯಾಮೆರಾ ಕನ್ಯೆಯ ಔಟ್ ಆಫ್ ಫೋಕಸ್ ಪ್ರೀತಿ

- ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ


- ಪ್ರದ್ಯುಮ್ನ
ಮಹಾತ್ಮ ಗಾಂಧಿಯ ರಸ್ತೆಯ ಆ ಕಾಫಿ ಡೇಯ ಮಂದ ಬೆಳಕಿನಲ್ಲಿ ಅವಳ ಮುಖ ಅಸ್ಪಷ್ಟ ಕಾಣುತ್ತಿತ್ತು. ನಮ್ಮಿಬ್ಬರ ತಲೆಯೊಳಗೂ ವಿಚಾರಗಳ ಸ್ಪಷ್ಟತೆ ಇರಲಿಲ್ಲ. ಅಷ್ಟಕ್ಕೂ ಆ ಕಾಫಿ ಡೇ ನಮ್ಮಿಬ್ಬರಿಗೆ ಅಪರಿಚತವೇನೂ ಅಲ್ಲ. ಆದರೆ, ಅಲ್ಲಿರುವ ಎಲ್ಲ ಚೇರ್‌ಗಳೆಲ್ಲ ಭರ್ತಿಯಾಗಿದ್ದರೂ ನಾವಿಬ್ಬರೇ ಅಲ್ಲಿದ್ದೇವೆ ಎಂಬ ಭಾವನೆ ಮನೆ ಮಾಡಿತ್ತು. ಮೊದಲು ಅವಳು ಮಾತು ಆರಂಭಿಸಲಿ ಎಂದು ನಾನು; ನಾನೇ ಮೊದಲು ಮಾತನಾಡಲಿ ಎಂದು ಅವಳು. ಒಬ್ಬರಿಗೊಬ್ಬರು ಬಾಯಿ ಬಿಡುತ್ತಿಲ್ಲ. ಹೀಗೆ ಹತ್ತಾರು ನಿಮಿಷಗಳು ಸರಿದು ಹೋದವು. ಹಿನ್ನೆಲೆಯಲ್ಲಿ  ರಫಿ ಸಾಬ್ ಹಾಡುತ್ತಿದ್ದರು:
ತು ಇಸ್ ತರಹ ಸೇ ಮೇರಿ ಜಿಂದಗಿ ಮೇ ಶಾಮೀಲ್ ಹೈ
ಜಹಾಂ ಭೀ ಜಾಂವೂ ಯೇ ಲಗ್ತಾ ಹೈ ತೇರಿ ಮೆಹಫಿಲ್ ಹೈ
ನಮ್ಮಬ್ಬಿರ ನಡುವಿನ ಏಕಾಂತವನ್ನು ರಫಿ ಸಾಬ್‌ರ  ಈ ಹಾಡು ಮತ್ತಷ್ಟು ಘನ ಘೋರ ಸ್ಥಿತಿಗೆ ತಲುಪುವಂತೆ ಮಾಡುತ್ತಿತ್ತು. ಒಂದು ಹಂತದಲ್ಲಿ ಅವಳನ್ನು ಹಾಗೆಯೇ ಬಿಟ್ಟು ಎದ್ದು ಹೋಗಿ ಬಿಡಲೇ ಎಂಬ ಯೋಚನೆಯೂ ಸುಳಿದು ಹೋಯಿತು. ಮರುಗಳಿಗೆಯಲ್ಲೇ ಬೇಡ, ಇದೇ ಕೊನೆ ಭೇಟಿಯಾಗಬಹುದು. ಮತ್ತೆ ಅವಳು ಸಿಗುತ್ತಾಳೋ ಇಲ್ಲವೋ ಗೊತ್ತಿಲ್ಲ. ಕೊನೆಯ ಅವಕಾಶವನ್ನು ಹೀಗೆ ಫಲಪ್ರದವಿಲ್ಲದೆ ತಪ್ಪಿಸಿಕೊಳ್ಳುವುದು ಬೇಡ ಎಂದು ತಳವೂರಿ ಗಟ್ಟಿಯಾಗಿ ಕುಳಿತೆ. ಅಷ್ಟರಲ್ಲಿ ಆರ್ಡರ್ ಮಾಡಿದ್ದ ಕಾಫಿಯನ್ನು ಹಿಡಿದುಕೊಂಡು ಬಂದ ವೇಟರ್, ನಮ್ಮ ಮುಂದೆ ‘‘ಕಾಫಿ ಪ್ಲೀಸ್,’’  ಎಂದಾಗಲೇ, ಇಬ್ಬರು ‘‘ಇಲ್ಲಿಡಿ,’’ ಎಂದೆವು. ಬಹುಶಃ ಅದೊಂದು ನೆಪ ನಮ್ಮಿಬ್ಬರ ನಡುವೆ ಕವಿದಿದ್ದ ವೌನದ ಕತ್ತಲೆಯನ್ನು ಹೊಡೆದೊಡೆಸಿ, ಮಾತಿನ ಬೆಳಕು ಮೂಡಿಸಲು ಸಾಧ್ಯವಾಯಿತು ಅಂತ ಕಾಣುತ್ತದೆ.
‘‘ನಿಜವಾಗ್ಲೂ ನನ್ ಕ್ಷಮಿಸಿ ಬಿಡು. ಹಾಗಂತ, ನಾನು ಕ್ಷಮೆಗೆ ಯೋಗ್ಯಳು ಎಂದು ಹೇಳುತ್ತಿಲ್ಲ. ಆದರೆ, ಇದನ್ನು ಬಿಟ್ಟು ಬೇರೆ ಯಾವ ಪದಗಳು ಗೊತ್ತಾಗುತ್ತಿಲ್ಲ; ದಾರಿಯೂ ಕೂಡ,’’ ಎಂದು ಒಂದೇ ಉಸಿರಿನಲ್ಲಿ ಹೇಳಿದಳು. ಅಲ್ಲಿಗೆ ಎಲ್ಲವೂ ಸ್ಪಷ್ಟವಾಯಿತು. ಅವಳ ಮುಖವನ್ನೊಮ್ಮೆ ನೋಡಬೇಕು ಎಂದು ಕತ್ತು ಮೇಲೆತ್ತಿ ನೋಡಲು ಪ್ರಯತ್ನಿಸಿದೆ. ಅದಾಗಲೇ ಅವಳ ಕೆನ್ನೆ ಮೇಲೆ ಕಣ್ಣೀರು ಧಾರೆಯಾಗುತ್ತಿತ್ತು. ಆ ಕ್ಷಣದಲ್ಲಿ ಅವಳಿಗೇನು ಹೇಳಬೇಕು ಎಂದು ತೋಚದೆ ಮತ್ತೆ ನನ್ನ ಚಿತ್ತವನ್ನು ಕಾಫಿಯ ಮೇಲೆ ನೆಟ್ಟೆ. ಕಪ್‌ನಿಂದ ಮೇಲೇಳುತ್ತಿದ್ದ ಹಬೆಯ ಚಕ್ರಗಳು ನನ್ನಲ್ಲೇಳುತ್ತಿದ್ದ ದುಃಖದ ಅಲೆಗಳನ್ನೇ ಸಮೀಕರಿಸುತ್ತಿದ್ದವು.
ಕೇವಲ ಆರು ತಿಂಗಳ ಹಿಂದೆ ನಾವು ಹೀಗಿರಲಿಲ್ಲ; ನಮ್ಮ ನಡುವಿನ ಜಗತ್ತೇ ಬೇರೆಯದ್ದಿತ್ತು. ಅವಳೋ ಕ್ಯಾಮೆರಾ ಹೇಗಲಿಗೇರಿಸಿಕೊಂಡು ಹೊರಟಳೆಂದರೆ ಅದಕ್ಕೆ ದಿಕ್ಕು ದಿಸೆ ಇರುತ್ತಿರಲಿಲ್ಲ. ಹೋಗುವ ದಾರಿ ಯಾವುದು, ಅದು ಎಲ್ಲಿಗೆ ತಲುಪುತ್ತದೆ ಎಂಬುದನ್ನೂ ಯೋಚಿಸುತ್ತಿರಲಿಲ್ಲ. ಎದುರಿಗೆ ಸಿಗುವ ಪ್ರತಿ ವ್ಯಕ್ತಿ, ಗಿಡ, ಮರ, ಪ್ರಾಣಿ, ಪಕ್ಷಿ, ಮನೆ, ದಾರಿ ಬದಿಯ ಕಲ್ಲುಗಳನ್ನಿಟ್ಟು ಪೂಜೆ ಮಾಡುವ ದೇವಸ್ಥಾನವಲ್ಲದ ದೇವಸ್ಥಾನ.... ಹೀಗೆ ಕಣ್ಣಿಗೆ ಕಾಣುವ ಎಲ್ಲವೂ ಅವಳ ಕ್ಯಾಮೆರಾದಲ್ಲಿ ಬಂದಿಯಾಗುತ್ತಿದ್ದವು. ಅವಕ್ಕೊಂದು ಕವಿತೆಯ ಸ್ಪರ್ಶ ದಕ್ಕುತ್ತಿತ್ತು. ಅಷ್ಟೂಂದು ಸೃಜನಾತ್ಮಕವಾಗಿ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಳು. ಅವಳ ಕ್ಯಾಮೆರಾದಲ್ಲಿ ಬಂದಿಯಾಗುವ ಪ್ರತಿ ಚಿತ್ರವೂ ಒಂದೊಂದು ಕತೆ ಹೇಳುತ್ತಿದ್ದವು. ಹಾಗೆ ನೋಡಿದರೆ, ನೈಜದಲ್ಲಿದ್ದ ಚಿತ್ರಗಳಿಗಿಂತ ಆಕೆ ತೆಗೆದ ಚಿತ್ರಗಳು ಹೆಚ್ಚು ಗಮನ ಸೆಳೆಯುತ್ತಿದ್ದವು. ಗೊತ್ತಲ್ಲಿದಂತೆಯೇ ನಿಮ್ಮಳಗೇ ಇಳಿದು ಬಿಡುತ್ತಿದ್ದವು. ಅವಳ ಕ್ಯಾಮೆರಾ ‘ಕಣ್ಣ ಚಳಕ’ ಹಾಗಿತ್ತು. ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ ನನ್ನ ಪಾಲಿಗೆ ಈಗ.
ಅಂಥವಳು ನನಗೆ ಸಿಕ್ಕಿದ್ದು ರೋಚಕವೇ. ನಮ್ಮಿಬ್ಬರು ನಡುವೆ ಅಂಥ ಸಾಮತ್ಯಗಳೇನಿಲ್ಲ. ನಾನೋ ಪುಸ್ತಕದ ಹುಳ. ಕೈಗೆ ಸಿಗುವ ಪುಸ್ತಕಗಳನ್ನು ಓದಲು ಕುಳಿತರೆ ಜಗತ್ತೇ ಮರೆತು ಹೋಗುತ್ತಿತ್ತು. ಆದರೆ, ನಮ್ಮಿಬ್ಬರನ್ನು ಬಂಧಿಸಿದ  ಏಕೈಕ ತಂತು; ‘ಮರಗಳ ಪ್ರೇಮ.’ ಅವಳೂ ಅಷ್ಟೇ ಅಭಿವೃದ್ಧಿಯ ನೆಪದಲ್ಲಿ ನಗರದಲ್ಲಾಗುತ್ತಿರುವ ಮರಗಳ ಮಾರಣಹೋಮಕ್ಕೆ ಆಕ್ರೋಶಿತಗೊಳ್ಳುತ್ತಿದ್ದಳು. ಅದನ್ನು ವಿರೋಧಿಸಿ ನಡೆಯುವ ಪ್ರತಿಭಟನೆ, ಚಳವಳಿಗಳೆನ್ನೆಲ್ಲ ತನ್ನ ಕ್ಯಾಮೆರಾ ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದಳು. ಇಂಥದ್ದೇ ಒಂದು ಪ್ರತಿಭಟನೆ ವೇಳೆ, ಆಕೆ ಪರಿಚಯವಾಗಿದ್ದು. ಅವಳೇನೂ ಅಂಥ ಹೇಳಿಕೊಳ್ಳುವಂಥ ಚೆಲುವೆಯಲ್ಲ. ಆದರೆ, ಅವಳಿಗಿರುವ ಬದ್ಧತೆ, ಪ್ಯಾಶನ್, ಆತ್ಮವಿಶ್ವಾಸ, ಪರಿಸರ ಕಾಳಜಿ ಅವಳತ್ತ ತುಸು ಹೆಚ್ಚೇ ಯೋಚಿಸುವಂತೆ ಮಾಡಿದ್ದವು. ಪರಿಚಯವಾಗಿದ್ದಾಗ ಹಾಯ್, ಬಾಯ್‌ಗಷ್ಟೇ ಸಿಮೀತವಾಗಿದ್ದ ಸಂಬಂಧ ಅದ್ಯಾವಾಗ ಸ್ನೇಹಕ್ಕೆ ತಿರುಗಿ ಮತ್ತೆ ಪ್ರೇಮಕ್ಕೆ ವಾಲಿತು ಎಂದು ಹೇಳುವುದು ಕಷ್ಟ. ಪ್ರೇಮ ಎಂದರೆ, ‘ಆಗುವುದಲ್ಲ’ ಅದು ‘ಸಂಭವಿಸುವುದು’ ಎಂದು ಅದ್ಯಾರೋ ಹೇಳಿದ್ದರು; ನಾನು ನಂಬಿರಲಿಲ್ಲ. ಆದರೆ ಈಗ ನಂಬದೇ ವಿಧಿಯಿಲ್ಲ. ಹೀಗೆ ಸಂಭವಿಸಿದ ಪ್ರೇಮಕ್ಕೆ ನಂಬಿಕೆಯೇ ಮೂಲದ್ರವ್ಯ. ನಮ್ಮಿಬ್ಬರ ಮಧ್ಯೆ ಈ ಮೂಲದ್ರವ್ಯಕ್ಕೇನೂ ಕೊರತೆ ಇರಲಿಲ್ಲ. ಸಂಭವಿಸಿದ ಪ್ರೇಮ ಹೆಮ್ಮರವಾಗಿ ಬೆಳೆದಿತ್ತು. ಅದರ ತಂಪನೆಯ ನೆರಳಲ್ಲಿ ಇಡೀ ಜಗತ್ತೆಲ್ಲ ಸುಂದರ ತಿಳಿ ಕೊಳದಂತಿತ್ತು. ಅಲ್ಲಿ ಕಷ್ಟಗಳೆಂಬ, ಅಪನಂಬಿಕೆಗಳೆಂಬ ಬಿಸಲಿನ ಪ್ರಖರ ಕಿರಣಗಳು ನಮ್ಮನ್ನು ತಾಕುತ್ತಿರಲಿಲ್ಲ. ಎಲ್ಲವೂ ಚೆಂದ ಇತ್ತು. ಮನವರಿತ ಗೆಳತಿ ಬಳಿ ಇರಲು ಇನ್ನೇನು ಬೇಕು?
ಹೀಗೆ ಎಲ್ಲವೂ ಚೆಂದ ಇದ್ದಾಗಲೇ, ಸರಳ ರೇಖೆಯಲ್ಲಿ ಜೀವನ ಸಾಗುತ್ತಿರುವಾಗಲೇ ಧುತ್ತನೇ ಎದುರಾಗುವ ಸಂಕಷ್ಟಗಳು ನಿಮ್ಮನ್ನು ಇನ್ನಿಲ್ಲದಂತೆ ಹೈರಾಣು ಮಾಡುತ್ತವೆ. ಪ್ರೇಮ ಪ್ರಕರಣಗಳೆಲ್ಲವೂ ಯಶಸ್ವಿಯಾಗಬೇಕೆಂದೇನೂ ರೂಲ್ಸ್ ಇಲ್ಲವಲ್ಲ. ಬಹುಶಃ ಈ ರೂಲ್ಸ್ ನಮ್ಮಿಬ್ಬರಿಗೂ ತುಸು ಹೆಚ್ಚೇ ಅಪ್ಲೈ ಆಯಿತು ಅಂತಾ ಕಾಣುತ್ತದೆ. ಈಗಲೂ ನನಗೆ ನಿರ್ದಿಷ್ಟ ಕಾರಣಗಳು ಹೊಳೆಯುತ್ತಿಲ್ಲ. ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ತೊಡಕಾಗಿದ್ದು ಏನು? ಯಾತಕ್ಕಾಗಿ ನಾವಿಬ್ಬರೂ ಈಗ ಒಬ್ಬರನ್ನೊಬ್ಬರನ್ನು ಬಿಟ್ಟು ಅಗಲುವ ಸ್ಥಿತಿಗೆ ಬಂದು ಬಿಟ್ಟಿದ್ದೇವೆ? ಇಂಥ ಪರಿಸ್ಥಿತಿಗೆ ಅಸಲಿಗೆ ಕಾರಣಗಳೇನಾದರೂ ಇವೆಯೇ... ಎಷ್ಟೇ ಯೋಚಿಸಿದರೂ ಉತ್ತರ ಸಿಗುತ್ತಿಲ್ಲ. ನಮ್ಮಿಬ್ಬರನ್ನು ಬಂಧಿಸಿದ ‘ಮರಗಳ ಪ್ರೇಮ’ ಎಂಬ ಬದ್ಧತೆಯೇಕೆ ಇಷ್ಟು ಬೇಗ ಒಣಗಿ ಹೋಯಿತು? ಆದರೆ, ಈಗಂತೂ ಕವಲು ದಾರಿಯಲ್ಲಿ ನಿಂತಿದ್ದೇವೆ. ಸರಳ ರೇಖೆಯ ಜೀವನ, ವಕ್ರರೇಖೆಯಲ್ಲಿ ಅಂತ್ಯವಾಗುತ್ತಿದೆ ಎಂಬುದಂತೂ ಸತ್ಯ. ಇದಕ್ಕೆ ತಾನೇ ಕಾರಣ ಎಂದು, ಕಾರಣ ಹೇಳದೆ ಹೊರಟು ಹೋಗುವ ಸ್ಥಿತಿಯಲ್ಲಿ ಅವಳಿದ್ದಾಳೆ.
ಪ್ರೇಮ ಸಂಬಂಧ ಕಡಿದುಕೊಳ್ಳುವುದಕ್ಕೆ ಈ ಕಾಫಿ ಡೇ ವೇದಿಕೆಯಾಗಿದೆಯಷ್ಟೇ. ಅವಳಿಗೂ ಗೊತ್ತು ನಂಬಿಕೆ ಬುನಾದಿಯ ಮೇಲೆ ಬೆಳೆದ ಪ್ರೇಮವನ್ನು ಕತ್ತರಿಸಿಕೊಳ್ಳುವುದು ಅಷ್ಟು ಸರಳವಲ್ಲ. ಅವಳ ಮುಖದ ಮೇಲೆ ಎದ್ದೇಳುತ್ತಿದ್ದ ಭಾವನೆಗಳೇ ಎಲ್ಲವನ್ನೂ ಹೇಳುತ್ತಿದ್ದವು. ಆದರೆ, ಅವಳು ನಿಶ್ಚಿಯಿಸಿದ್ದಾಳೆ, ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆಂಬುದಂತೂ ‘‘ಕ್ಷಮಿಸಿ ಬಿಡು,’’ ಎಂದು ಹೇಳುವಾಗಲೇ ಮನವರಿಕೆಯಾಗಿತ್ತು. ಇನ್ನು ಅವಳಿಗೆ ಕಾರಣ ಕೇಳಿಯೂ ಉಪಯೋಗವಿಲ್ಲ. ತಡೆಯುವುದು ಅಸಾಧ್ಯದ ಮಾತು. ಅವಳ ಜೀವನ ಅವಳದ್ದು; ನನ್ನ ಜೀವನ ನನ್ನದು. ಹಾಗಂತ, ಅವಳ ನೆನಪುಗಳಿಂದ ದೂರ ಉಳಿಯತ್ತೇನೆಂದು ಭರವಸೆಯನ್ನಾದರೂ ಹೇಗೆ ಕೊಡಲಿ? ನೆನಪುಗಳಿಲ್ಲದಿದ್ದರೆ ಜೀವನಕ್ಕೇನು ಅರ್ಥವಿದೆ? ಒಣಗಿ ಹೋದ ಬೊಡ್ಡೆಯಿಂದ ಚಿಗುರು ಮತ್ತೆ ಮೂಡದೇ? ನಮ್ಮಿಬ್ಬರ ಜೀವನದಲ್ಲಿ ವಸಂತಗಾನ ಮತ್ತೆ ಶುರುವಾಗಬಹುದು ಎಂದು ಹೇಳಲು ಹೊರಟವನ ಮಾತುಗಳು ಗಂಟಲಲ್ಲೇ ಉಳಿದವು.
ಕಣ್ಣೀರು ಒರೆಸಿಕೊಳ್ಳುತ್ತಾ ಆಕೆ ಎದ್ದು ಹೋಗುವ ಹೊತ್ತಿಗೆ, ಟೇಬಲ್ ಮೇಲಿದ್ದ ಕಾಫಿ ತಣ್ಣಗಾಗಿತ್ತು; ನನ್ನೊಳಗೂ ಅದೇ ಭಾವ. ಹಿನ್ನೆಲೆಯಲ್ಲಿ, ಅದೇ ರಫಿ ಸಾಬ್ ತನ್ನ ತಣ್ಣನೆಯ ದನಿಯ ಹಾಡುತ್ತಿದ್ದರು:
ಇಸ್ಸ ಭರಿ ದುನಿಯಾ ಮೇಂ, ಕೋಯಿ ಭಿ ಹಮಾರಾ ನ ಹುವಾ
ಗೈರ ತೋ ಗೈರ ಹೈ, ಅಪ್ನೋಂ ಕಾ ಸಹಾರಾ ನ ಹುವಾ...




This article has been published in VijayKarnataka, on 13rd Feb 2017 edition

ಶುಕ್ರವಾರ, ಜನವರಿ 13, 2017

ರಾತ್ರಿಗಳು...

ಈ ರಾತ್ರಿಗಳಿಗೇಕಿಲ್ಲ
ಕತ್ತಲೆಯ ಭಯ?
ಚಂದ್ರ, ನಕ್ಷತ್ರಗಳದ್ದೇ
ಇರಬೇಕು ಅಭಯ!
***
ಈ ರಾತ್ರಿಯು ವಿಚಿತ್ರ
ತರುವುದು ಅವಳ
ನೆನಪು ಸಚಿತ್ರ

ಸೋಮವಾರ, ಜನವರಿ 2, 2017

ಹುಡುಗನೊಬ್ಬನ ಗಜಲ್‌ಗಳು: ಅವಳ ಕಣ್ಣಗಳಲ್ಲಿ ಕಾಂತಿ ತುಂಬುವ ಹಂಬಲ

- ಆಕೆ ಬಿಟ್ಟು ಹೋದ ಗಿಫ್ಟ್‌ನೊಂದಿಗೆ ಮತ್ತೆ ಹೊಸ ವರುಷದ ನಿರೀಕ್ಷೆಯಲ್ಲಿ....

- ಪ್ರದ್ಯುಮ್ನ
ಇಡೀ ಜಗತ್ತೇ ಹೊಸ ವರ್ಷದ ಆಚರಣೆಯ ಅಮಲಿನಲ್ಲಿ ಮುಳುಗಿದೆ. ಮಹಾನಗರಗಳ ಪಬ್ಬು, ಕ್ಲಬ್ಬುಗಳಲ್ಲಿ ಮದ್ಯಾರಾಧನೆಯೂ, ಬ್ಯಾಚುಲರ್‌ಗಳ ರೂಮ್‌ಗಳ ತುಂಬ ಬೀಯರ್- ರಮ್ ವಾಸನೆಯೂ, ರಸ್ತೆಗಳ ತುಂಬೆಲ್ಲ ಸೈಲೆನ್ಸರ್ ತೆಗೆದು ಕರ್ಣ ಕರ್ಕಶವಾಗಿ ಚೀರುತ್ತಾ ಓಡುವ ಬೈಕ್‌ಗಳೂ, ಅವುಗಳನ್ನು ಓಡಿಸುವ ನಶೆಯ ಸವಾರರೂ, ಅವರ ಬಾಯಿಂದ ಅಷ್ಟೇ ವಿಕಾರವಾಗಿ ಹೊರಡುವ ಹ್ಯಾಪಿ ನ್ಯೂ ಇಯರ್ ಎಂಬ ಪದಗಳೂ, ಆಕಾಶದ ತುಂಬ ಬಿರುಸು ಬಾಣ ಚಿತ್ತಾರಗಳೂ, ಆ ಸಂತೋಷದ ಕ್ಷಣಗಳೂ... ಇವೆಲ್ಲವೂ ಒಂದು ರೀತಿಯ ಕೊಲಾಜ್. ಇಂಥ ಚಿತ್ರಿಕೆಗಳಿಗೆ ಸಾವಿಲ್ಲ. ಹೊಸ ವರ್ಷವೆಂಬ ಕ್ಯಾನ್ವಾಸ್‌ನಲ್ಲಿ ಪ್ರತಿ ಬಾರಿಯೂ ಒಡಮೂಡಿ, ಸರಿದು ಹೋಗುವ ಚಿತ್ರಗಳು. ಇವಕ್ಕೆ ಕಲಾವಿದನ ಹಂಗಿಲ್ಲ. ಆದರೆ, ಇಂಥ ಸಂತೋಷದ ಕ್ಷಣಗಳನ್ನು ಆಸ್ವಾದಿಸುವ, ರಸಗಳಿಗೆಗಳನ್ನು ಸವಿಯುವ ಸಾಮರ್ಥ್ಯವನ್ನು ನಾನು ಕಳೆದುಕೊಂಡು ಸುಮಾರು ವರ್ಷಗಳಾದವು. ನೀಲಾಕಾಶದಲ್ಲಿ ಚಿತ್ತಾರದ ಸುರುಳಿಗಳು ಬಿಚ್ಚಿಕೊಂಡಾಗಲೆಲ್ಲ ನನ್ನೊಳಗೂ ಭಾವನೆಗಳ ಉಬ್ಬರ. ಅದೆಷ್ಟೋ ಹೊಸ ವರ್ಷಗಳ ಬಂದರೂ, ಹಳೆಯ ನೆನಪಗಳನ್ನೆಲ್ಲ ಗಂಟೆ ಮೂಟೆ ಕಟ್ಟಿಡಲು ಸಾಧ್ಯವಿಲ್ಲ. ಹೊಸ ಹೊಸ ವಸಂತ ತೆರೆದುಕೊಂಡಾಗಲೆಲ್ಲ ನೆನಪುಗಳ ಆಯುಷ್ಯ ಜಾಸ್ತಿಯಾಗುತ್ತಲೇ ಹೋಗುತ್ತದೆ. ಈ ನೆನಪುಗಳೇ ಹಾಗೇ, ಅವುಗಳಿಗೆ ಸಾವಿಲ್ಲ, ಬಣ್ಣವಿಲ್ಲ, ನಿರ್ಗುಣ, ನಿರಾಕಾರ! ಆದರೆ, ಅವುಗಳೊಳಗೇ ತುಂಬಿರುವ ನೋವಿನ ಆಲಾಪನೆ ಮಾತ್ರ ಎಂದಿಗೂ ಸಹಿಸಲು ಅಸಾಧ್ಯ.
ಹೊಸ ವರ್ಷದ ಹಿಂದಿನ ರಾತ್ರಿ ಎಂದರೆ; ನೋವಿನ ಕರಾಳ ರಾತ್ರಿ. ಆ ರಾತ್ರಿಯನ್ನು ನೆನೆಸಿಕೊಂಡರೇ ಈಗಲೂ ಮೈಯಲ್ಲಿ ನಡುಕ. ಉನ್ಮಾದದಲ್ಲಿ ಮಾಡಲು ಹೋದ ಹುಡುಗಾಟಿಕೆ ಇಡೀ ಜೀವನವನ್ನು ನೋವಿನ ಸರಪಳಿಯಲ್ಲಿ ಬಂಧಿಸಿಟ್ಟಿದೆ. ಆಕೆ ಬಿಟ್ಟು ಹೋದ ಹೊಸ ವರ್ಷದ ಗಿಫ್ಟ್ ಬಾಕ್ಸ್ ಇನ್ನೂ ಹಾಗೆಯೇ ಇದೆ; ಭದ್ರವಾಗಿದೆ. ಅದರೊಳಗೇನಿದೆ? ಗೊತ್ತಿಲ್ಲ. ಅದನ್ನು ಒಡೆದು ನೋಡುವ ಸಾಹಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಅದು ಹಾಗೆಯೇ ಇರಬೇಕು; ಅದು ಆಕೆಯ ನಿಷ್ಕಲ್ಮಶ ಪ್ರೀತಿಯ ಕುರುಹು. ಅದರಲ್ಲಿ ನನಗಾಗಿ ಏನು ಕೊಟ್ಟಿರಬಹದು ಎಂಬೆಲ್ಲ ಲೆಕ್ಕಾಚಾರಗಳೇ, ಊಹೆಗಳೇ ನನ್ನೊಳಗೇ ಆಕೆಯನ್ನು ಜೀವಂತವಾಗಿಟ್ಟಿವೆ. ಒಡೆದು ನೋಡಿದರೆ ಊಹೆಗೂ, ಕಲ್ಪನೆಗೂ ಆಕಾರ ದಕ್ಕಿಬಿಡುತ್ತದೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಅದು ಹಾಗೆಯೇ ಇದ್ದರೆ ಚೆನ್ನ. ನಿಗೂಢ ಕಾಣಿಕೆಯಾಗಿ, ನನ್ನನ್ನು ಸದಾ ಅವಳ ನೆನಪಿನಲ್ಲಿರುವಂತೆ ಮಾಡುವ ಏಕೈಕ ಸಾಧನವದು. ಮೋಸ್ಟಲೀ... ನನ್ನೊಂದಿಗೇ ಅದರ ಗುಟ್ಟು ಹೊರಟು ಹೋಗಬಹುದು.
ನಾವಾದರೂ ಹೇಗಿದ್ದವು? ಸ್ವರ್ಗಕ್ಕೆ ಕಿಚ್ಚು ಹಚ್ಚುವ ಪ್ರೀತಿಯದು. ನಮ್ಮನ್ನು ನೋಡಿ ಹಲುಬಿದವರು ಅನೇಕರು. ಅದೊಂದು ದಿವ್ಯ ಅನುಭೂತಿ. ಪ್ರೀತಿ ಕೊಟ್ಟು ಪ್ರೀತಿಯನ್ನು ಪಡೆದಾಗಲೇ ದಕ್ಕುವ ಅನನ್ಯ ಅನುಭವವದು; ಅದಕ್ಕೇ ಸಾಟಿಯೇ ಇಲ್ಲ, ಅವಳಿಗೂ. ಸದಾ ಚಟುವಟಿಕೆಯ ಚಿಲುಮೆ ಅವಳು. ಮುಂಗರುಳು ಸರಿಸುತ್ತಾ, ಪಟಪಟನೆ ಮಾತನಾಡುವ ಅವಳನ್ನು ನೋಡುವುದೇ ಚಂದ. ಅವಳ ಬಟ್ಟಲುಗಣ್ಣುಗಳಲ್ಲಿ ನೂರಾರು ಭರವಸೆ, ಏನೇನೋ ಮಾಡುವ ಹುಮ್ಮಸ್ಸು, ಒಮ್ಮೆಲೇ ನಭಕ್ಕೆ ನೆಗೆಯುವ ಅತ್ಯುತ್ಸಾಹ. ಅವಳನ್ನು ನೋಡಿದ ಯಾರಿಗಾದರೂ ಜೀವನೋತ್ಸಾಹ ಇಮ್ಮಡಿಯಾಗುವುದರಲ್ಲಿ ಸಂಶಯವೇ ಇರಲಿಲ್ಲ. ಗಗನಸಖಿಯಾಗಿ ವಿಮಾನದಲ್ಲಿ ಪ್ರಪಂಚ ಪರ್ಯಟನೆ ಮಾಡುವ ಅದಮ್ಯ ಬಯಕೆ ಆಕೆಯದ್ದು. ಆದರೆ?
ಅವಳೆಲ್ಲ ಕನಸುಗಳನ್ನು, ಹೆಬ್ಬಯಕೆಗಳನ್ನು ನಾನೇ ಕೊಂದು ಹಾಕಿದಿನಾ? ಇಂಥದೊಂದು ಗಿಲ್ಟ್ ಕಳೆದ ಐದು ವರ್ಷಗಳಿಂದ ಕಾಡುತ್ತಲೇ ಇದೆ. ನನ್ನಿಂದಾಗಿ ಅವಳ ಬದುಕೇ ಬರ್ಬಾದಾಗಿ ಹೋಯಿತು. ನನ್ನ ಒಂದು ಬೇಜವಾಬ್ದಾರಿ, ಅವಳ ಜೀವನದ ಪಥವನ್ನೇ ಬದಲಿಸಿ ಮುಂದೆ ದಾರಿಯಿಲ್ಲದ ಅಂಚಿನಲ್ಲಿ ತಂದು ನಿಲ್ಲಿಸಿದೆ ಅವಳನ್ನು. ನನ್ನ ಕನಸುಗಳನ್ನೂ ತನ್ನ ಕನಸಗಳೆಂದೇ ಭಾವಿಸಿ, ಸಂಭ್ರಮಸುತ್ತಿದ್ದ ಆಕೆಯಲ್ಲಿ ಕಣ್ಣಗಳಲ್ಲಿ ಆಕೆಯದ್ದೇ ಕನಸುಗಳಿಲ್ಲ. ಅವೆಲ್ಲವೂ ಮುರುಟಿ ಹೋಗಿವೆ. ಅವಳ ಮುಂದೆ ಹೊಸ ವರ್ಷದ ಆಚರಣೆಯ ಬಾಣ ಬಿರುಸಗಳು ಸೃಷ್ಟಿಸುವ ಚಿತ್ತಾರಗಳು ಕೇವಲ ಢಂ.. ಢಂ.. ಎನ್ನುವ ಶಬ್ಧವಷ್ಟೇ. ಅವುಗಳಿಗೆ ಆಕಾರವಿಲ್ಲ, ಸೌಂದರ್ಯವಿಲ್ಲ.
ಅಂದು ಹೀಗೆಯೇ, ಹೊಸ ವರ್ಷದ ಅಮಲಿನಲ್ಲಿ ತೇಲುತ್ತಾ, ಸಂತೋಷದ ರಣಕೇಕೆ ಹಾಕುತ್ತಾ ಹೊರಟಿತ್ತು ನಮ್ಮ ಟೀಮ್. ನನ್ನ ಬೈಕಿನಲ್ಲಿ ಹಿಂದೆ ಕುಳಿತ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾಕೆ ಗೊತ್ತಾ? ಮುಂದಿನ ವಾರ ಅವಳು ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುವವಳಿದ್ದಳು. ಏರ್‌ಲೈನ್ಸ್ ಕಂಪನಿಯೊಂದು ಆಕೆಗೆ ಆಫರ್ ಲೆಟರ್ ಕೂಡ ಕೊಟ್ಟಿತ್ತು. ಅದೇ ಹುಮ್ಮಸ್ಸಿನಲ್ಲಿ ನನಗೊಂದು ಪುಟ್ಟ ಆ ‘ಗಿಫ್ಟ್’ ಕೊಟ್ಟಿದ್ದಳು. ನಮ್ಮ ಇಡೀ ಟೀಂಗೆ ಅವಳದ್ದೇ ಪಾರ್ಟಿ. ಎಂಟೊಂಭತ್ತು ಜನರಿದ್ದ ನಾವು, ಹೊಸ ವರ್ಷಕ್ಕೆ ಸೇರುವ ಆ ಬೃಹತ್ ರೋಡಿನಲ್ಲಿ ಕುಣಿದು ಕುಪ್ಪಳಿಸಲು ಅಷ್ಟೇ ವೇಗವಾಗಿ ಹೊರಟಿದ್ದವು. ಗಂಟಲೊಳಗೇ ಇಳಿದು ಹೋಗಿದ್ದು ತುಸು ವಿಸ್ಕಿ ನನ್ನನ್ನು ಸಂಪೂರ್ಣವಾಗಿ ನಿಯಂತ್ರಣ ತೆಗೆದುಕೊಳ್ಳುವ ಸನ್ನಾಹದಲ್ಲಿತ್ತು. ಆದರೆ, ಹುಚ್ಚು ಧೈರ್ಯದಿಂದ ಬೈಕಿ ಆ್ಯಕ್ಸಿಲೆಟರ್ ಕಿವಿಯೊತ್ತಿ ಬುರ್ರೆಂದು ಹೊರಟ ನಮಗೆ, ಮುಂದಾಗುವ ಅಪಘಾತದ ಮುನ್ಸೂಚನೆಯೇ ಇರಲಿಲ್ಲ. ಹಿಂದಿದ್ದ ಅವಳ ದನಿಯಲ್ಲಿ ಸಂತೋಷ ಉನ್ಮಾದವಿತ್ತು, ಕನಸು ಸಾಕಾರಗೊಂಡು ಸಂಭ್ರಮವಿತ್ತು. ಪ್ರೀತಿಸುವವನ ತೋಳು ತೆಕ್ಕೆಯಲ್ಲಿ ಬಂಧಿಯಾಗುವ  ದಿನಗಳ ಬಗ್ಗೆ ಲೆಕ್ಕ ಹಾಕುತ್ತಲೇ, ‘‘ನೋಡು ಇನ್ನೆರಡು ವರ್ಷದಲ್ಲಿ ನಾವಿಬ್ಬರು ಮದ್ವೆ ಆಗೋಣ. ಅಷ್ಟರಲ್ಲಿ ನಾನು ಇಡೀ ಜಗತ್ತು ಸುತ್ತಿ ಬರುತ್ತೇನೆ,’’ ಎಂದು ಹೇಳುತ್ತಿದ್ದ ಆಕೆಯ ಮಾತುಗಳು ಈಗಲೂ ಕಿವಿಯಲ್ಲಿ ಅಷ್ಟೇ ಗಟ್ಟಿಯಾಗಿ ಕೇಳಿಸುತ್ತಲೇ ಇರುತ್ತವೆ. ಆಕೆಯ ಮಾತುಗಳಿಗೆಲ್ಲ ‘‘ಎಸ್ ಬಾಸ್,’’ ಎನ್ನುತ್ತಲೇ ಆ್ಯಕ್ಸಿಲೆಟರ್ ತಿರುವುತ್ತಾ ಹೋದವನಿಗೆ, ಎದುರಾಗಿದ್ದು ನಮ್ಮಂತೆಯೇ ಸಂತೋಷದ ಅಮಲಿನಲ್ಲಿ ತೇಲಾಡುತ್ತಿದ್ದ ಜೋಡಿ ಇದ್ದ ಬೈಕ್. ತಪ್ಪು ಅವರದ್ದಾ..  ನಾನು ಮಾಡಿದ್ದು ತಪ್ಪಾ ಎನ್ನುವುದಕ್ಕಿಂತ, ಏನು ಆಗಬಾರದಿತ್ತೋ ಅದು ಆಗಿ ಹೋಗಿತ್ತು. ನಮ್ಮಿಬ್ಬರ ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ, ನಾವಿಬ್ಬರು ರೋಡ್ ಡಿವೈಡರ್‌ಗೆ ಬಡಿದಿದ್ದಾಯಿತು. ಅಷ್ಟೇ ಗೊತ್ತು. ಮುಂದೆನಾಯ್ತು? ಕಣ್ತೆರೆದು ನೋಡಿದಾಗ, ನಾವಿದ್ದದ್ದು ಆಸ್ಪತ್ರೆಯಲ್ಲಿ. ತಲೆಗೆ ಸ್ವಲ್ಪ ಪೆಟ್ಟು ಬಿದ್ದು, ಅಂಥ ಅಪಾಯವೇನಾಗಿರಲಿಲ್ಲ ನನಗೆ. ಆದರೆ, ಅವಳಿಗೆ? ಆಕೆ ತನ್ನ ಕಣ್ಣು ಕಾಂತಿಯನ್ನೇ ಕಳೆದುಕೊಂಡಿದ್ದಳು. ಮಿರರ್‌ನ ಚೂರುಗಳ ಆಕೆಯ ದೃಷ್ಟಿಯನ್ನು ತೆಗೆದು ಹಾಕಿದ್ದವು. ಅಲ್ಲಿಗೆ, ಆಕೆಯ ಇಡೀ ಕನಸು ಕತ್ತಲೆಯಲ್ಲಿ ಮುಳುಗಿ ಹೋಗಿತ್ತು. ಅದಕ್ಕೆ ನಾನು ಕಾರಣನಾದ ಗಿಲ್ಟು! ಹೊಸ ವರ್ಷದ ಸಂಭ್ರಮ ಈಗಲೂ ನನಗೆ ಅದೇ ನೋವನ್ನು ನೆನಪಿಸುವ, ಮಾಯದ ಗಾಯವನ್ನು ಮತ್ತೆ ಕೆದುಕುವ ದಿನವಷ್ಟೆ. ನನ್ನ ಬೇಜವಾಬ್ದಾರಿಯ ರೈಡಿಂಗ್ ಆಕೆಯ ಜೀವನದ ಮೇಲೆಯೇ ಭಾರಿ ಸವಾರಿ ಮಾಡಿ ಬಿಟ್ಟಿತ್ತು. ಅವಳೀಗ ಮೊದಲಿನಂತಿಲ್ಲ. ಅವಳಿಗೇ ಇಡೀ ಜಗತ್ತೇ ಕತ್ತಲು. ಆ ಗಾಢ ಕತ್ತಲಿನಲ್ಲಿ ನಾನು ಮಾತ್ರ ಮಿಣುಕುವ ದೀಪ ಅವಳಿಗೆ. ಆದರೆ, ಅವಳಪ್ಪನ ಸಿಟ್ಟಿಗೆ ಸುಮ್ಮನಿದ್ದಾಳೆ; ಅದ ಸಹಜವೂ ಕೂಡ.
ಅವಳು ಜತೆಯಲ್ಲಿ ಇಲ್ಲದಿರಬಹುದು. ಆದರೆ, ಆಕೆ ಕೊಟ್ಟ ಹೋದ ದಿವ್ಯ ಪ್ರೀತಿ, ಅನನ್ಯ ಅನುಭೂತಿ ಇದೆ. ಆಕೆ ಬಿಟ್ಟು ಹೋಗಿರುವ ನೂರಾರು ನೆನಪುಗಳಿವೆ. ಅಷ್ಟು ಸಾಕು. ತೀರಾ ದುಃಖವಾದಾಗ, ಆಕೆಯ ಆ ‘ಗಿಫ್ಟ್ ’ ಮತ್ತೆ ನನ್ನಲ್ಲಿ ಅದಮ್ಯ ಪ್ರೀತಿಯನ್ನು ಸ್ಪುರಿಸುತ್ತದೆ. ನೆನಪುಗಳಿಗೆ ಜೀವ ತುಂಬುತ್ತದೆ. ಆ ಕರಾಳ ರಾತ್ರಿಯ ಕಹಿ ನೆನಪನ್ನು ಮರೆ ಮಾಚುತ್ತದೆ. ಅದುವೇ ಆಕೆಯ ಪ್ರೀತಿಯ ದಿವ್ಯ ಸಾನ್ನಿಧ್ಯವನ್ನು ಕಲ್ಪಿಸುತ್ತದೆ. ನಾನು ಈಗಲೂ ಅವಳ ನಿರೀಕ್ಷೆಯಲ್ಲಿದ್ದೇನೆ, ಆಕೆ ನನ್ನ ಮೇಲಿಟ್ಟಿರುವ ಪ್ರೀತಿಗೆ ಅವರಪ್ಪ ಸೋಲುತ್ತಾನೆಂಬ ನಿರೀಕ್ಷೆಯಲ್ಲಿ ಆಕೆಯೂ ಇದ್ದಾಳೆ, ನಾನು ಕೂಡ. ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಆಕೆಗೆ ಜೀವನಪೂರ್ತಿ ಕಣ್ಣಾಗಿ, ಆಕೆ ಕಂಡ ಕನಸಗಳಿಗೆ ನಾನು ಜೀವ ತುಂಬುತ್ತೇನೆ. ಅವಳ ಕಣ್ಣಲ್ಲಿ ಕಾಂತಿ ತುಂಬುವ ಹಂಬಲ ನನ್ನದು.



This article has published in VijayKarnataka, on 2nd jan 2017 edition