ಸೋಮವಾರ, ನವೆಂಬರ್ 21, 2016

-ಹುಡುಗನೊಬ್ಬನ ಗಜಲ್‌ಗಳು- ನೋಟು ರದ್ದಾಗಿರಬಹುದು; ನನ್ನ ಪ್ರೀತಿಯಲ್ಲ

- ಆಕೆಯ ನೆನಪಿನ ಕುರುಹಾಗಿ, ಸಾಫಲ್ಯಗೊಳ್ಳದ ಪ್ರೇಮದ ಸಂಕೇತವಾಗಿ ನನ್ನಲ್ಲಿದೆ ಆ ನೋಟು

- ಪ್ರದ್ಯುಮ್ನ
ಇವತ್ತ್ಯಾಕೆ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎನ್ನುತ್ತಾ ಹಾಗೆಯೇ ಟಿವಿ ನೋಡುತ್ತಾ ಕುಳಿತೆ. ಕೊನೆಗೆ, ‘‘ಇಂದು ಮಧ್ಯ ರಾತ್ರಿಯಿಂದಲೇ ನಿಮ್ಮ ಕೈಯಲ್ಲಿರುವ 500 ರೂ. ಮತ್ತು 1000 ರೂ. ನೋಟುಗಳಿಗೆ ಮಾನ್ಯತೆ ಇಲ್ಲ. ಅವು ಕೇವಲ ಕಾಗದದ ಚೂರು,’’ ಎಂದು ಮೋದಿ ಹೇಳುತ್ತಿದ್ದಂತೆ, ಅವರು ದೇಶ ಉದ್ದೇಶಿಸಿ ಮಾತನಾಡುತ್ತಿದ್ದರ ಹಿಂದಿನ ಮರ್ಮ ಅರ್ಥವಾಯಿತು. ಅಂದರೆ, ಇನ್ನು ನಮ್ಮ ನೋಟುಗಳೆಲ್ಲ ರದ್ದಿ. ಮನೆಯಲ್ಲಿ ಕಂತೆ ಕಂತೆ ಕಪ್ಪು ಹಣ ಇಟ್ಟುಕೊಂಡವರ ಗತಿ ಹರೋಹರ ಎಂದ ಖುಷಿಯಾದೆ. ಹಾಗೆಯೇ ಮರುಕ್ಷಣದಲ್ಲಿ ನನ್ನ ಹತ್ತಿರ ಎಷ್ಟಿದೆ ಎಂದು ವಾಲೆಟ್ ತೆಗೆದು ನೋಡಿದೆ; ನಾಲ್ಕೈದು 100 ರೂ.ನೋಟಗಳಿದ್ದವು ಮತ್ತು ಆ ‘1000 ರೂ. ನೋಟು’. ಎರಡು ದಿನದ ಮಟ್ಟಿಗೆ ತೊಂದರೆಯಿಲ್ಲ. ಹೇಗಿದ್ದರೂ ಬ್ಯಾಂಕುಗಳು ಶುರುವಾಗುವ ಹೊತ್ತಿಗೆ ಹೋಗಿ ದುಡ್ಡು ಡ್ರಾ ಮಾಡಿಕೊಂಡರಾಯಿತು ಎಂದು ಯೋಚಿಸುತ್ತಾ ಮಲಗಿಕೊಂಡೆ. ನನ್ನ ವಾಲೆಟ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ  ಬೆಚ್ಚಗೆ ಕುಳಿತಿದ್ದ ಆ 1000 ರೂ. ನೋಟು ಬೇಡ ಬೇಡ ಎಂದರೂ ಕನಸಲ್ಲಿ ಬಂದು ಹೋಗುತ್ತಿತ್ತು. ಅದೊಂದು ತರಹ ಮಲಗಿಯೂ ಮಲಗಿರದ ಸ್ಥಿತಿ ಆ ರಾತ್ರಿ.
  ಎರಡು ದಿನಗಳ ಬಳಿಕ ನನ್ನ ಬಳಿಯ ನೂರರ ನೋಟುಗಳೆಲ್ಲ ಖಾಲಿಯಾದರೆ, ಆ 1000 ರೂ. ನೋಟು ವಿನಿಮಯ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾದರೆ, ಒಂದು ಕ್ಷಣ ಅಧೀರನಾದೆ. ಅದು ಕೇವಲ ನೋಟಲ್ಲ; ಆತ್ಮ ಸಂಗಾತಿ. ಅದು ನೋಟಿನ ನಂಟಲ್ಲ; ಪ್ರೀತಿಯ ಗಂಟು. ಪ್ರೇಮದ ಸಿಂಚನ ಹರಿಸಿದ ಮಳೆಬಿಲ್ಲೆ. ಆ ‘ಬೆಳದಿಂಗಳ ಬಾಲೆ’ ನನ್ನೊಂದಿಗೆ ಅಕ್ಷರಗಳ ಜತೆ ಒಡನಾಡಿದ ಕುರುಹು. ಇಷ್ಟೇ ಆಗಿದ್ದರೆ, ಒಂದು ಕ್ಷಣವೂ ಯೋಚಿಸಿದೆ, ವಿನಿಮಯ ಮಾಡಿಕೊಳ್ಳಬಹುದಿತ್ತು. ಆದರೆ, ಇಂದಿಗೂ ಆ ನೋಟು ನನ್ನೊಳಗೆ ಪ್ರೀತಿಯನ್ನು ಪೊರೆಯತ್ತಿರುವ ನಿತ್ಯ ಸಂಜೀವಿನಿ. ನನ್ನ ಅದೆಷ್ಟೋ ಕವನಗಳಿಗೆ ಸ್ಫೂರ್ತಿಯ ಸೆಲೆ; ಅಮೂರ್ತ ರೂಪದ ಸಾಂಕೇತಿಕ ರೂಪ. ಈಗ ಅವಳೆಲ್ಲಿದ್ದಾಳೋ.... ಹೇಗಿದ್ದಾಳೋ... ಏನು ಮಾಡುತ್ತಿದ್ದಾಳೋ.. ಗೊತ್ತಿಲ್ಲ. ಆಕೆ ಕೊಟ್ಟ ನೋಟು ನನ್ನೊಂದಿಗೇ ಇದೆ, ಆಕೆಯ ನೆನಪಿನ ಕುರುಹಾಗಿ; ಸಾಫಲ್ಯಗೊಳ್ಳದ ಪ್ರೇಮದ ಸಂಕೇತವಾಗಿ.
ಏಳು ವರ್ಷಗಳ ಹಿಂದೆ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನನ್ನದೊಂದು ಗಜಲ್ ಪ್ರಕಟವಾಗಿತ್ತು. ಈಗಿನಷ್ಟು ಆಗ ಇನ್ನೂ ಎಸ್‌ಎಂಎಸ್, ವ್ಯಾಟ್ಸಾಪ್‌ಗಳಂಥ ಕ್ಷಿಪ್ರ ಸಂದೇಶವಾಹಕಗಳ ಭರಾಟೆ ಇರಲಿಲ್ಲ. ಪತ್ರ ಬರವಣಿಗೆ ಇನ್ನೂ ಜೀವಂತವಾಗಿತ್ತು. ಹಾಗೆ ಬಂದ ಒಂದು ಪತ್ರವೇ, ಈಗ ನನ್ನಲ್ಲಿರುವ 1000 ರೂ. ನೋಟಿನ ಮೂಲ. ನನ್ನ ಗಜಲ್ ಮೆಚ್ಚಿ ಬಂದಿದ್ದ ಆ ಪತ್ರದಲ್ಲಿ ನಾಲ್ಕೇ ನಾಲ್ಕು ಸಾಲು ಬರೆದಿತ್ತು. ಅವು ಅತ್ಯಾಕರ್ಷಕ, ಅರ್ಥಗರ್ಭಿತವಾಗಿದ್ದವು. ಓದಿದ ಕೂಡಲೇ ಬೇರೆಯದ್ದೇ ಭಾವ ಮೂಡಿಸುವಂಥವು. ಸರಿ, ಯಾರೋ ಒಬ್ಬರು ಮೆಚ್ಚಿ ಬರೆದಿದ್ದಾರೆಂದು ಮರು ಉತ್ತರಿಸೋಣ ಎಂದರೆ; ಅದಕ್ಕೆ ವಿಳಾಸ ಇಲ್ಲ. ಇನ್ನೇನು ಮಾಡುವುದು ಎಂದು ಸುಮ್ಮನಾದೆ. ಆದರೆ, ಆ ಪತ್ರಗಳು ಬರುವುದು ನಿಯಮಿತವಾಗುತ್ತ ಹೋದಂತೆ, ಅವಳೊಬ್ಬಳು ಯುವತಿ ಎಂಬುದಂತೂ ಖಚಿತವಾಗಿತ್ತು. ಒಂದೊಂದು ಪತ್ರದಲ್ಲಿ ಒಂದೊಂದು ಭಾವ. ಆದರೆ, ಪತ್ರ ಬರೆಯುವರು ಯಾರೆಂದೂ ಮಾತ್ರ ಗೊತ್ತೇ ಆಗುತ್ತಿಲ್ಲ. ಅದಕ್ಕಾಗಿ ಏನಿಲ್ಲ ಪ್ರಯತ್ನಪಟ್ಟರೂ ಫಲಿತಾಂಶ ಮಾತ್ರ ಶೂನ್ಯ. ಈ ‘ಪತ್ರ ವ್ಯವಹಾರ’ವೇ ನನ್ನ ಮತ್ತೊಂದಿಷ್ಟು ಗಜಲ್ ಕೃಷಿಗೆ ಪೂರಕವಾಯಿತು; ಸ್ಫೂರ್ತಿಯಾಯಿತು. ಮೊದ ಮೊದಲು ಸಾಮಾನ್ಯ ಓದುಗರೊಬ್ಬರ ಅಕ್ಕರೆಯ ಪ್ರೀತಿ ಎಂದು ನಿರ್ಲಕ್ಷ್ಯ ವಹಿಸಿದ್ದವನಿಗೆ ದಿನ ಕಳೆದಂತೆ, ಆಕೆಯ ಕಳುಹಿಸುವ ಪತ್ರಗಳಿಗೆ ಪರವಶನಾದೆ. ನಿಗದಿತ ಸಮಯಕ್ಕೆ ಪತ್ರ ಬರೆದಿದ್ದರೆ ಏನೋ ಚಡಪಡಿಕೆ, ಅವ್ಯಕ್ತ ಆತಂಕಗಳೆರಡೂ ಉಂಟಾಗುತ್ತಿದ್ದವು. ಪತ್ರ ಕೈ ಸೇರಿದ ಬಳಿಕ ಎಲ್ಲವೂ ನಿರಾಳ. ಅಂದ ಹಾಗೆ, ಆಕೆ ಬರೆಯುತ್ತಿದ್ದ ಪತ್ರಗಳೆಂದೂ ನಾಲ್ಕು ಸಾಲುಗಳನ್ನು ಮೀರುತ್ತಿರಲಿಲ್ಲ. ಆದರೆ, ಆ ನಾಲ್ಕು ಸಾಲು ಮಾತ್ರ, ನನಗೆ ನೂರು, ಸಾವಿರ ಸಾಲುಗಳ ರೀತಿಯಲ್ಲಿ ಗೋಚರಿಸುತ್ತಿದ್ದವು. ಅಷ್ಟೊಂದು ಭಾವ, ಲಹರಿ. ಹಾಗೆ ನೋಡಿದರೆ, ನಾನು ಬರೆಯುತ್ತಿದ್ದ, ಗಜಲ್, ಕವನಗಳೆನ್ನೆಲ್ಲ ಆಕೆಯ ಪತ್ರಗಳ ಮುಂದೆ ನಿವಾಳಿಸಿ ಒಗೆಯಬೇಕು, ಹಾಗೆ ಬರೆಯುತ್ತಿದ್ದಳಾಕೆ. ಆದರೇನು ಮಾಡುವುದು, ಇದೆನ್ನೆಲ್ಲ ಹೇಳೋಣ ಎಂದರೆ, ಅವಳ ವಿಳಾಸ ಇಲ್ಲ, ಹೆಸರೂ ಗೊತ್ತಿಲ್ಲ. ಅವಳೊಂದು ರೀತಿ ಬೆಳದಿಂಗಳ ಬಾಲೆಯಾದಳು. ನಿಜವಾಗಿಯೂ ಆಕೆ ನನ್ನ ಪ್ರೀತಿಸುತ್ತಿದ್ದಳಾ? ಅಥವಾ ನಾನೇ ಹಾಗೆ ಅಂದುಕೊಂಡಿದ್ದೇನಾ?, ನಾನೇ ಅವಳನ್ನು ಪ್ರೀತಿಸುತ್ತಿದ್ದೇನಾ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಆಕೆ ಬರೆಯುತ್ತಿದ್ದ ಒಂದೊಂದು ಪತ್ರವೂ ಒಂದೊಂದು ರೀತಿಯಲ್ಲಿರುತ್ತಿತ್ತು. ಉತ್ಕಟ ಪ್ರೇಮ ನಿವೇದನೆಯಂತೆ ಪತ್ರ ಬರೆಯುತ್ತಿದ್ದ ಆಕೆ, ಮತ್ತೊಮ್ಮೆ ಬರೆದಾಗ ಇಡೀ ಜಗತ್ತೇ ನಶ್ವರ, ನಾನು ನೀನು ನಿಮಿತ್ತ ಎನ್ನುವ ವೇದಾಂತಿಯ ಧಾಟಿಯಲ್ಲಿ ಬರೆಯುತ್ತಿದ್ದಳು. ನೆನಪಿರಲಿ... ಎಲ್ಲವೂ ನಾಲ್ಕೇ ನಾಲ್ಕು ಸಾಲುಗಳು! ಅವಳ ಪತ್ರಗಳ ಉದ್ದೇಶಕ್ಕೊಂದು ರೂಪ ಕೊಡುವುದು ಸುಮಾರು ದಿನಗಳವರೆಗೆ ನನಗೆ ಸಾಧ್ಯವಾಗಲೇ ಇಲ್ಲ. ಇದೇ ಗುಂಗಿನಲ್ಲಿ ಹೊರ ಬಂದ ನನ್ನ ಭಾವನೆಗಳು ಗಜಲ್ ರೂಪದಲ್ಲಿ ಪ್ರಕಟವಾಗುತ್ತ ಹೋದಂತೆ, ಮತ್ತಷ್ಟು ಓದುಗರು ಹುಟ್ಟಿಕೊಂಡರು. ಆದರೆ, ಆಕೆ ಯಾರು? ಎಲ್ಲಿದ್ದಾಳೆ? ಎಂಬೆಲ್ಲ ಪ್ರಶ್ನೆಗಳಿಗೆ ಮಾತ್ರ ಇರಲಿಲ್ಲ. ಅಷ್ಟು ಹೊತ್ತಿಗಾಗಲೇ ನಾನು, ಅವಳನ್ನ ಪ್ರೀತಿಸಲಾರಂಭಿಸಿದ್ದೆ. ಅವಳು ಸಿಗುತ್ತಾಳೋ.. ಇಲ್ಲವೋ ಎಂಬುದು ಗೊತ್ತಿಲ್ಲ. ಆದರೂ ಪ್ರೀತಿಸುತ್ತಿದ್ದೆ. ನನ್ನದೇ ಕಲ್ಪನೆಯೊಳಗೆ ಅವಳಿಗೊಂದು ಆಕಾರ, ಬಣ್ಣ, ಸೌಂದರ್ಯವನ್ನು ಕಲ್ಪಿಸಿ ಸಂತೋಷಪಡುತ್ತಿದ್ದೆ. ಒಮ್ಮಮ್ಮೆ ಅವಳ ಪತ್ರಗಳೆನ್ನೆಲ್ಲ ಹರವಿಟ್ಟುಕೊಂಡು, ದೊರೆಯದೇ ಇರುವ ಉತ್ತರಗಳಿಗಾಗಿ ತಡಕಾಡುತ್ತಿದ್ದೆ. ಮತ್ತೆ ಮತ್ತೆ ಓದುತ್ತಿದ್ದೆ; ಮತ್ತೆ ಮತ್ತೆ ಪ್ರೀತಿಸುತ್ತಿದ್ದೆ.
  ಹೀಗೆ ಸಾಗಿತ್ತು ನಮ್ಮ ನಡುವಿನ ಏಕಮುಖಿ ಪ್ರೀತಿಯ ಪಯಣ. ಅವಳೇನೋ ತನ್ನೆಲ್ಲ ಭಾವನೆಗಳನ್ನು ಆ ನಾಲ್ಕು ಸಾಲುಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ನಾನು ಮಾತ್ರ ಅವಳೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆಗೀಗ ಪ್ರಕಟವಾಗುತ್ತಿದ್ದ ನನ್ನ ಕವನ, ಗಜಲ್‌ಗಳಲ್ಲಿ ಪ್ರಶ್ನೆಗಳು ಮತ್ತು ಉತ್ತರಗಳನ್ನು ಏಕಕಾಲಕ್ಕೆ ಹುಡುಕಿಕೊಂಡು ಸಂತೋಷ ಪಡುತ್ತಿದ್ದಳು ಎಂಬುದು ಆಕೆಯ ಪತ್ರ ಓದಿದಾಗ ಗೊತ್ತಾಗುತ್ತಿತ್ತು.
  ಎಲ್ಲದಕ್ಕೂ ಒಂದು ಅಂತ್ಯ ಇರುತ್ತದೆ ಅಲ್ಲವೇ? ಈ ನಾಲ್ಕು ಸಾಲು ಬರೆಯುವ ಗೆಳತಿಯ ಪತ್ರಕ್ಕೂ ಅಂತ್ಯ ಇತ್ತು ಅಂತ ಕಾಣುತ್ತದೆ. ಅವತ್ತೊಂದಿನ ಅಂಚೆಯಣ್ಣ ಅಂಚೆ ತಂದುಕೊಟ್ಟಾಗ ಎಂದಿನಂತೆ ಖುಷಿಯಿಂದಲೇ ಪಡೆದು, ಒಡೆದು ನೋಡಿದಾಗ ಆಘಾತ ಕಾದಿತ್ತು. ಒಂದೇ ಒಂದು ಸಾಲು; ‘ಇನ್ನು ನಾನು ನಿಮಗೆ ಪತ್ರ ಬರೆಯಲಾರೆ.’ ಜತೆಗೆ ಸಾವಿರದ ಒಂದು ನೋಟ, ಅದರ ಒಂದು ಬದಿಯಲ್ಲಿ ‘ನಿಮ್ಮನ್ನು ಎಂದೆಂದಿಗೂ ಪ್ರೀತಿಸುವವಳು’ ಒಕ್ಕಣಿಕೆಯಷ್ಟೆ. ಆಗ ನನಗಾದ ಹತಾಶೆ, ದುಃಖ ಹೇಳಲಾರದಷ್ಟು. ನಮ್ಮೆದುರಿಗೆ ನಾವು ತುಂಬ ಇಷ್ಟ ಪಡುವ, ಪ್ರೀತಿಸುವ ವ್ಯಕ್ತಿಯೊಬ್ಬರು ಕಣ್ಮರೆಯಾಗುತ್ತಿದ್ದರೆ ಎಂಥ ನೋವು ಇರುತ್ತದೆಯೋ ಅಂಥ ನೋವು ಅದು. ಯಾರೊಂದಿಗೆ ಹಂಚಿಕೊಳ್ಳಲಿ, ಹೇಗೆ ಹೇಳಲಿ? ಆಗ ನನಗುಳಿದಿದ್ದ ‘ದುಃಖ’ ಮತ್ತು  ಆ ‘ನೋಟು’ ಮಾತ್ರ. ಅವಳ್ಯಾಕೆ ಆ ಸಾವಿರದ ನೋಟು ಮೇಲೆ ನಿಮ್ಮನ್ನು ಎಂದೆಂದೂ ಪ್ರೀತಿಸುವಳು ಬರೆದು ಕೊಟ್ಟಳು ಎಂದು ಈಗಲೂ ಯೋಚಿಸುತ್ತೇನೆ. ಉತ್ತರ ಮಾತ್ರ ಸಿಕ್ಕಿಲ್ಲ. ಬಹುಶಃ ಸಿಗಲು ಸಾಧ್ಯ ಇಲ್ಲ. ಅದು ಆಕೆಗೆ ಮಾತ್ರ ಗೊತ್ತು!
***
  ನೋಟ ಅಮಾನ್ಯತೆಯ ಗೆಲವು, ಸೋಲುಗಳೆರಡೂ ನಡೆದಿದೆ. ಈಗ ನನ್ನ ಬಳಿ ಇರುವ ಆ ಸಾವಿರದ ನೋಟು ವಿನಿಮಯ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ಹಾಗೆಂದು, ವಿನಿಮಯ ಮಾಡಿಕೊಳ್ಳುತ್ತೇನೆಂದು ಭಾವಿಸಿಕೊಳ್ಳಬೇಕಿಲ್ಲ. ಸರಕಾರವೇನೋ ಆ ನೋಟಗಳ ಜೀವವನ್ನು ತೆಗೆದಿರಬಹುದು. ಆಕೆ ಕೊಟ್ಟ ಆ ನೋಟು ನನ್ನ ಜೀವನವನ್ನೇ ಪೊರೆದಿದೆ. ನೋಟು ರದ್ದಾಗಿರಬಹುದು; ನನ್ನ ಪ್ರೀತಿಯಲ್ಲ. ನೋಟಿಗೆ ವೌಲ್ಯ ಇಲ್ಲದಿರಬಹುದು; ಆಕೆ ಕೊಟ್ಟ ನೋಟಿನ ಬೆಲೆ ಕುಂದಿಲ್ಲ. ಅದು ಕೇವಲ ಸಾವಿರ ಬೆಲೆಯ ನೋಟಲ್ಲ. ಬಹುಶಃ ಆಕೆಗೂ ನನಗೆ ಕೊಟ್ಟ ಆ ಸಾವಿರದ ನೋಟು ಈಗ ನೆನಪಾಗಿರಬಹುದು?

This article has published in VijayKarnataka, on 21st nov 2016 edition

ಕಾಮೆಂಟ್‌ಗಳಿಲ್ಲ: