Tuesday, September 29, 2009

ಗಜಲ್ ಮತ್ತು ಕವನ

ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ,
ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ

ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು,
ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ಮುನ್ನ ನೀ ಜಾರಿ ಹೋಗಬೇಡ

ಇರಳು ಕವಿಯಲಿ, ಚಂದ್ರ ಮೂಡಲಿ, ನಕ್ಷತ್ರ ಮಿನುಗಲಿ,
ಕ್ಷೀರಪಥದಲಿ ಮಿಂದೆದ್ದು ಬರುವೆ, ಅಲ್ಲಿವರೆಗೂ ಹೋಗಬೇಡ

ಬೆರಳುಗಳು ಸುಡುತ್ತಿವೆ, ಸಿಗರೇಟಿನ ನಿಗಿ ನಿಗಿ ಬೆಂಕಿಗೆ,
ಚಿಮ್ಮುವ ಹೊಗೆಯಲಿ ನಿನ್ನದೇ ರೂಪ ಬಿಟ್ಟು ಹೋಗಬೇಡ

ದಾರಿ- ದಾರಿ ನಡುವೆ ಕಲ್ಲು ಮುಳ್ಳೇ ಇರಲಿ, ನೀ ಕಾಲ್ ಇಡುವಲ್ಲಿ
ನಾ ಕೈಯಿಡುವೆ, ನೋವು ನನಗಿರಲಿ, ನಲಿವು ನಿನಗಿರಲಿ, ಹೋಗಬೇಡ

ಎದೆಯ ಮೇಲೆ ಕಾಲಿಟ್ಟು, ಒಳಗೆ ಬೆಂಕಿಯಿಟ್ಟು ಹೋಗಲೇಬೇಕೆನ್ನುವಾಗ
ಮರೆಯಬೇಡ, ಕೆಂಪು ಸೂರ್ಯನ ಮೇಲಿಟ್ಟ ಆಣೆ, ನೀ ಹೋಗಬೇಡ

ಕಂಪ್ಯೂಟರ್ ಪರದೆ ತುಂಬೆಲ್ಲಾ ನಿನ್ನದೆ ಬಿಂಬ, ಆದರೂ
ಬೆರಳು 'ಡಿಲಿಟ್ ಕೀ' ಮೇಲೆ ಊರುತ್ತಿದೆ, ತೊರೆದು ಹೋಗಬೇಡ



ಅಲ್ಲಿ- ಇಲ್ಲಿ

ಅಲ್ಲಿ ದ್ವéೇಷವಿದೆ, ರೋಷವಿದೆ
ತಮ್ಮೊಳಗೆ ಹೊಡೆದಾಡಿ ಅಂತ್ಯವಾಗುವ ಆಪಾಯವಿದೆ

ಇಲ್ಲಿ ಸ್ನೇಹವಿದೆ, ಪ್ರೇಮವಿದೆ
ತ್ಯಾಗದ ಆರಿವಿದೆ, ಒಂದುಗೂಡಿಸುವ ಧ್ವನಿಯಿದೆ

ಅಲ್ಲಿ ತಲ್ಲಣವಿದೆ, ತವಕವಿದೆ,
ಕ್ರೂರ ಅಟ್ಟಹಾಸವಿದೆ, ಅದರಲ್ಲೇ ನೆತ್ತರದ ಹಸಿವಿದೆ

ಇಲ್ಲಿ ತಂಪಿದೆ, ತಂಗಾಳಿಯಿದೆ,
ನೊಂದವರಿಗೆ ನೆರವಾಗುವ ನೆರಳಿದೆ, ಒಲವಿದೆ

ಅಲ್ಲಿ ಬಿಸಿಲಿದೆ, ಬವಣೆಯಿದೆ,
ಒಂದಾಗುವವರ ಬೆನ್ನುಬೀಳುವ ಹಿಂಡೇ ಇದೆ

ಇಲ್ಲಿ ಕರುಣೆಯಿದೆ, ಅನುಕಂಪವಿದೆ,
ಒಲ್ಲೆ ಎಂದವರಿಗೂ ಹಿಡಿ ಪ್ರೀತಿ ಕೊಡವವರ ದಂಡೇ ಇದೆ

ಅಲ್ಲಿ- ಇಲ್ಲಿ ಇವೆರಡು ನಮ್ಮೊಳಗಿವೆ,
ಮನಸ್ಸು, ಹೃದಯದೊಳು ಅವಿತಿವೆ.

Sunday, June 28, 2009

ನಿಶಕ್ತ ಕಾಲುಗಳು

ಚಿಕ್ಕವನಿದ್ದಾಗಲೇ ಮೇಲೆದ್ದ. ಮೇಲದ್ದಾಗಲೇ ಬಿದ್ದ
ಮಕ್ಕಳೇ ದೇವರೆಂದ, ಮಕ್ಕಳಿಗೆ ಇವನೇ ದೆವ್ವೆಂದರು.
ಗೆದ್ದಷ್ಟೇ ಸೋತ. ಸೋತಷ್ಟೇ ಮತ್ತೆ ಚಿಗಿತ.
ಚಿಗಿಯುವಾಗಲೂ, ನೆಗೆಯುವಾಗಲೂ ತಾನೇ ತಾನಾದ.
ಕರಿ ಬಿಳಿ ತೊಗಲಿನ ಮಧ್ಯೆ ಕುಣಿದ, ಕುಪ್ಪಳಿಸಿದಎಲುಬುಗಳು
ಮುರಿಯವಂತೆ ಮೈ ಮಣಿಸಿದ ಕಾಲ್ ಕುಣಿಸಿದ,
ದನಿ ಎತ್ತರಿಸಿ, ತಗ್ಗಿಸಿದ ಪ್ರತಿ ಏರಿಳಿತದಲ್ಲೂ
ನೋವು-ನಲಿವು ನಗಿಸಿದ ಪಾಪ್ ಎಂದು ಮೂಗು ಮುರಿಯೋರೋಮೂಗ್
ಮೇಲೆ ಬೆರಳಿಟ್ಟರು, ಕಣ್ಣೀರಿಟ್ಟರು
ಸರ ಸರ ಸರಿದಾಡುವ, ಹರಿದಾಡುವ ಕಾಲುಗಳಿಗೆ ಕಣ್, ಮನ ಸೋತರು.
ಈಗ ಕಾಲುಗಳೇ ನಿತ್ರಾಣ, ನಿಶಕ್ತ ಹಾಡುವ ರಾಗ, ನಿರಾಗ,
ಕೇಳುವಗಡಿ-ಭಾಷೆ ಬೇಧಿಸಿ, ರಾಗ-ದ್ವೇಷ ಸರಿಸಿ ನಾದ ಹರಿಸಿದ.
ಕೊನೆಗೇ ತಾನೇ ನಿನಾದನಾದ.
ನನ್ನ ಕತ್ತರಿಸಿದರೂ ಹರಿಯೋದುಕೆಂಪ ರಕ್ತ, ಕರಿಯಲ್ಲ
ಎನ್ನುತ್ತಲೇ ಬಿಳಿ ಚರ್ಮಕ್ಕೆ ಮನಸೋತ ಬಣ್ಣ ಬಲಾಯಿಸಿದ
ಬಣ್ಣವೇನೋ ಬದಲಾಯಿತು. ಮನಸ್ಸು?

Tuesday, December 16, 2008

ಭಯೋತ್ಪಾದನೆ ದಮನಕ್ಕೆ ಯುದ್ಧ ಪರಿಹಾರವೇ ?

೨೦೦೮, ಡಿಸೆಂಬರ ೧೫ರ `ಕನ್ನಡಪ್ರಭ ' ಸಂಚಿಕೆಯಲ್ಲಿ ಪ್ರಕಟಗೊಂಡ ಅಭಿಮತ ಬರಹ

Wednesday, November 19, 2008

ಏನು ಬರೆಯಲಿ ಹೇಳು...?

ಬರೆಯಲು ಹೊರಟವನ
ಅಂತರಂಗವೆಲ್ಲ ಖಾಲಿಯಾದಾಗ
ಸುಟ್ಟು ಹೋದ ಕನಸುಗಳ
ವಾಸನೆ ಮೂಗಿಗೆ ಅಡರುತ್ತಿರುವಾಗ
ಬರೆಯುವದಾದರು ಹೇಗೆ ಹೇಳು..?
ಆಗುಂತಕಳಾಗಿ ಎದುರಾಗಿ, ಮರೆಯಾದೆ
ಮರೆಯಾಗುವ ಮುನ್ನ
ಮಾಸಲಾರದ ಬರೆ ಹಾಕಿದೆ
ಬರೆ ಇನ್ನು ಹಸಿ ಹಸಿಯಾಗಿರುವಾಗಲೇ
ಹಾಳೆಯ ಮೇಲೆ ಗೆರೆಯಾದ್ರೂ
ಹೇಗೆ ಮೊಡಿತು ಹೇಳು...?
ಬದುಕಿದ್ದು ಸತ್ತಂತಿರುವಾಗ
ಭಾವವಾಗುವ ಅಕ್ಷರಗಳಿಗೆ
ಜೀವವನ್ನಾದರೂ ಹೇಗೆ ತುಂಬಲಿ...?
ನಾ ಹಾಳಾಗುವ ಮುನ್ನ
ಒಮ್ಮೆ ನೀ ಹರಸು
ಎಂದೆಂದಿಗೂ ನಾ ನಿನ್ನ
ನೀ ನನ್ನ ನೋಡದಂತೆ

Monday, November 17, 2008

ಮರೆಯೋದಲ್ಲ

ಮಳೆಗೆ ಅಳೋದು ಮಾತ್ರ ಗೊತ್ತು

ನಗೋದಲ್ಲ

ಸೂರ್ಯನಿಗೆ ಸುಡೋದು ಗೊತ್ತು

ಆರಿಸೋದಲ್ಲ

ಆದರೆ

ನನಗೆ ನಿನ್ನ ನೆನಪು

ಮಾಡಿಕೊಳ್ಳುದು ಗೊತ್ತು

ಮರೆಯೋದಲ್ಲ

- ಇದು ನನಗೆ ಇಷ್ಟವಾದ ಒಂದು ಶಾಯರಿಯ ಭಾವಾನುವಾದ

Thursday, November 13, 2008

ರಾಹುಲನ ಕಲಾತ್ಮಕ ಬ್ಯಾಟಿಂಗ್ ಕಣ್ಮರೆ


Monday, November 10, 2008

ಕರ್ನಾಟಕಕ್ಕೂ ಒಬ್ಬ ರಾಜ್ ಠಾಕ್ರೆ ಬೇಕೇನು ?