೮೦ ಮತ್ತು ೯೦ರ ದಶಕದಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ಹೋರಾಟಕ್ಕೆ ಸರಕಾರಗಳು ನಡುಗುತ್ತಿದ್ದವು. ಅವರ ಕಿರಿಯ ಪುತ್ರ ರಾಕೇಶ್ ಟಿಕಾಯತ್ ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ.
- ಮಲ್ಲಿಕಾರ್ಜುನ ತಿಪ್ಪಾರ
ರಾಕೇಶ್ ಟಿಕಾಯತ್ ಎಂಬ ಹೆಸರು ಎರಡು ತಿಂಗಳ ಹಿಂದೆ ಬಹುಶಃ ಉತ್ತರ ಪ್ರದೇಶದ ಜನರನ್ನು ಬಿಟ್ಟು ದೇಶದ ಇತರ ಭಾಗಗಳಿಗೆ ತೀರಾ ಪರಿಚಿತವಾಗಿರಲಿಲ್ಲ. ಆದರೆ, ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ಹೋರಾಟದ ‘ಮುಖ’ವಾಗಿ ಅವರೀಗ ದೇಶಪೂರ್ತಿ ಜನಪ್ರಿಯ. ಅಣ್ಣಾ ಹಜಾರೆ ಚಳವಳಿಯ ಮೂಸೆಯಲ್ಲಿ ಅರವಿಂದ ಕೇಜ್ರಿವಾಲ್ ಎಂಬ ನಾಯಕ ಬೆಳಕಿಗೆ ಬಂದಂತೆ ಈ ರೈತ ಹೋರಾಟದ ಫಲವಾಗಿ, ಭಾರತ ಕಿಸಾನ್ ಯೂನಿಯನ್(ಬಿಕೆಯು)ನ ವಕ್ತಾರ ರಾಕೇಶ್ ಟಿಕಾಯತ್ ಅವರು ಪ್ರಭಾವಿ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ೪೦ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದುಗೂಡಿ ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ತಮ್ಮ ಹೆಗಲ ಮೇಲೇರಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ರಾಕೇಶ್ ಟಿಕಾಯತ್ ಬಗ್ಗೆ ತಿಳಿದುಕೊಳ್ಳುವ ಮುಂಚೆ ಅವರ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಬಗ್ಗೆ ತಿಳಿದುಕೊಂಡರೆ ನಿಮಗೆ ಮತ್ತೊಂದು ಹೊಳಹು ದೊರೆತೀತು. ಅದು ೧೯೮೮ರ ಸಮಯ. ಮಹೇಂದ್ರ ಸಿಂಗ್ ಟಿಕಾಯತ್ ಅವರು ೫ ಲಕ್ಷ ರೈತರೊಂದಿಗೆ ದಿಲ್ಲಿಗೆ ನುಗ್ಗಿದ್ದರು. ಅಂದು ಪ್ರಚಂಡ ಬಹುಮತದೊಂದಿಗೆ ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿ ಮತ್ತು ಗೃಹ ಮಂತ್ರಿಯಾಗಿದ್ದವರು ಇತ್ತೀಚೆಗಷ್ಟೇ ನಿಧನರಾದ ಬೂಟಾ ಸಿಂಗ್. ಅಂದು ಮತ್ತು ಇಂದಿನ ಹೋರಾಟಕ್ಕೆ ವ್ಯತ್ಯಾಸ ಏನೆಂದರೆ; ಅಂದಿನ ಸರಕಾರವು ರೈತರನ್ನು ದಿಲ್ಲಿಯ ಗಡಿಯಲ್ಲೇನೂ ತಡೆದಿರಲಿಲ್ಲ. ಬದಲಿಗೆ ನಗರದೊಳಗೆ ಬಿಟ್ಟುಕೊಂಡಿತ್ತು. ರೈತರೆಲ್ಲರೂ ದಿಲ್ಲಿಯ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೂ ಟೆಂಟ್‌ಗಳನ್ನು ಹಾಕಿ ಪ್ರತಿಭಟನೆ ನಡೆಸಿದ್ದರು. ದಿಲ್ಲಿಯ ಬೋಟ್ ಕ್ಲಬ್ ಲಾನ್‌ನಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ ಸರಕಾರವು ಅವರ ಬೇಡಿಕೆಗಳಿಗೆ ಮಣಿಯದೇ ಬೇರೆ ದಾರಿ ಇರಲಿಲ್ಲ. ಇದರ ಮಧ್ಯೆಯೂ ರೈತ ಹೋರಾಟವನ್ನು ತಡೆಯಲು ಬೂಟಾ ಸಿಂಗ್ ಪೊಲೀಸ್ ಬಲ ಪ್ರಯೋಗಿಸಿದರೂ ಮಹೇಂದ್ರ ಸಿಂಗ್ ಟಿಕಾಯತ್ ಹೆದರಲಿಲ್ಲ, ಬೆದರಲಿಲ್ಲ. ವಾರಗಳ ಕಾಲ ನಡೆದ ಹೋರಾಟದ ಬಳಿಕ ರಾಜೀವ್ ಗಾಂಧಿ ಸರಕಾರವು ರೈತರ ಬೇಡಿಕೆಗಳನ್ನು ಒಪ್ಪಿಕೊಂಡಿತು. ಕಬ್ಬಿಗೆ ಹೆಚ್ಚಿನ ಬೆಲೆ, ವಿದ್ಯುತ್ ಮತ್ತು ನೀರು ಶುಲ್ಕ ಮನ್ನಾ ಸೇರಿದಂತೆ ೩೫ ಬೇಡಿಕೆ ಈಡೇರಿಸಿಕೊಂಡೇ ಟಿಕಾಯತ್ ತಮ್ಮ ರೈತ ಸೇನೆಯೊಂದಿಗೆ ಮುಜಫರ್‌ನಗರಕ್ಕೆ ವಾಪಸಾಗಿದ್ದರು. ಅಂದಿನ ಹೋರಾಟದ ಬಗ್ಗೆ ಹಲವಾರು ಲೇಖನಗಳು ಸಾರ್ವಜನಿಕವಾಗಿ ಲಭ್ಯ ಇವೆ. ಅವುಗಳನ್ನು ಓದಿದರೆ ಅಂದಿನ ಹೋರಾಟದ ಸ್ವರೂಪ ಹಾಗೂ ಸರಕಾರದ ಸ್ಪಂದನದ ರೀತಿ ಅರಿವಾದೀತು.
‘‘ಒಂದು ಹನಿ ಕಣ್ಣೀರು ಸರಕಾರಕ್ಕೆ ಗಂಡಾಂತರ ಸೃಷ್ಟಿಸಲಿದೆ. ಇನ್ನು ಕಣ್ಣುಗಳೇ ಕಡಲಾಗಿ ಉಕ್ಕುವುದನ್ನು ನೀವು ಕಂಡಿರಲಾರಿರಿ,’’ ಎಂಬ ಟಿಕಾಯತ್ ಅವರ ಮಾತುಗಳು ರೈತರ ಒಡಲಾಳದ ಕಿಚ್ಚನ್ನು ಹೊತ್ತಿಸಿದವು.
೧೯೬೯ರ ಜೂನ್ ೪ರಂದು ರಾಕೇಶ್ ಟಿಕಾಯತ್ ಅವರು ಮುಝಫರ್ ನಗರದ ಸಿಸೌಲಿ ಪಟ್ಟಣದಲ್ಲಿ ಜನಿಸಿದರು. ತಂದೆ ಮಹೇಂದ್ರ ಸಿಂಗ್ ಪಶ್ಚಿಮ ಉತ್ತರ ಪ್ರದೇಶದ ಪ್ರಭಾವಿ ರೈತ ನಾಯಕ ಮತ್ತು ಭಾರತ್ ಕಿಸಾನ್ ಯೂನಿಯನ್(ಬಿಕೆಯು) ಸಹ ಸಂಸ್ಥಾಪಕರು. ಟಿಕಾಯತ್ ಕುಟುಂಬವು ಬಿಲಿಯಾನ್ ಖಾಪ್‌ಗೆ ಸೇರಿದ್ದಾಗಿದೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿ ಕೃಷಿಕರಾಗಿರುವ ಜಾಟ್ ಸಮುದಾಯದಕ್ಕೆ ಸೇರಿದವರು ಇವರು. ಮೀರತ್ ವಿಶ್ವವಿದ್ಯಾಲಯದಿಂದ ರಾಕೇಶ್ ಎಂಎ ಪದವಿ ಪಡೆದಿದ್ದಾರೆ.
೨೦೧೧ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ನಿಧನದ ಬಳಿಕ ಅಣ್ಣ ನರೇಶ್ ಟಿಕಾಯತ್ ಯೂನಿಯನ್ ಅಧ್ಯಕ್ಷರಾದರು, ರಾಕೇಶ್ ಬಿಕೆಯುನ ವಕ್ತಾರರಾದರು. ರೈತ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮುಂಚೆ ರಾಕೇಶ್ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದರು. ಆ ಬಳಿಕ ಎಸ್‌ಐ ಕೂಡ ಆದರು. ೧೯೯೩ರಲ್ಲಿ ಮಹೇಂದ್ರ ಸಿಂಗ್ ಅವರು ಕೆಂಪುಕೋಟೆಯಲ್ಲಿ ಪ್ರತಿಭಟನೆ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ, ತಂದೆಯ ಜೊತೆ ಹೋರಾಟಕ್ಕೆ ಧುಮುಕಿದರು. ನಾಲ್ಕು ವರ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಬಳಿಕ ವಕ್ತಾರರಾಗಿ ನೇಮಕವಾದರು. ಅಲ್ಲಿಂದ ಟಿಕಾಯತ್ ಅವರ ರೈತಪರ ಹೋರಾಟ ಆರಂಭವಾಯಿತು. ಹಲವು ಬಾರಿ ರೈತರ ಪರವಾಗಿ ಹೋರಾಟ ಮಾಡಿ ೪೦ಕ್ಕೂ ಹೆಚ್ಚು ಬಾರಿ ಜೈಲುವಾಸ ಕಂಡಿದ್ದಾರೆ. ೨೦೧೮ರಲ್ಲಿ ಟಿಕಾಯತ್ ಸಂಘಟಿಸಿದ ಉತ್ತರಾಖಂಡದ ಹರಿದ್ವಾರದಿಂದ ದಿಲ್ಲಿಯವರೆಗೆ ನಡೆಸಿದ ಕಿಸಾನ್ ಕ್ರಾಂತಿ ಯಾತ್ರೆ ಗಮನ ಸೆಳೆಯಿತು.
೫೧ ವರ್ಷದ ಟಿಕಾಯತ್ ಸಂಘಟಿಸಿದ ಬಹುತೇಕ ರೈತ ಹೋರಾಟಗಳಲ್ಲಿ ಯಶಸ್ಸು ಕಂಡಿದ್ದಾರೆ. ರಾಜಕೀಯದಲ್ಲೂ ತಮ್ಮ ನಸೀಬು ಪರೀಕ್ಷಿಸಿದರಾದರೂ ಯಶಸ್ಸು ಸಿಕ್ಕಿಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ೨೦೦೭ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ಮತಗಳ ಲೆಕ್ಕದಲ್ಲಿ ಅವರು ಆರನೇ ಸ್ಥಾನದಲ್ಲಿದ್ದರು! ಇನ್ನು ೨೦೧೪ರ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಟಿಕೆಟ್ ಪಡೆದು ಅಮ್ರೋಹ ಕ್ಷೇತ್ರದಿಂದ ಸ್ಪರ‌್ಸಿ, ಕೇವಲ ಹತ್ತು ಸಾವಿರ ಒಳಗೆ ಮತಗಳನ್ನು ಪಡೆದರು. ರಾಜಕಾರಣದ ಸೋಲು ಅವರನ್ನೇನೂ ಧೃತಿಗೆಡಿಸಲಿಲ್ಲ. ಬದಲಿಗೆ ರೈತ ಹೋರಾಟದಲ್ಲಿ ಇನ್ನು ಹೆಚ್ಚಿಗೆ ತೊಡಗಿಸಿಕೊಳ್ಳುವಂತೆ ಮಾಡಿತು.
ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರೊಂದಿಗೆ ರಾಕೇಶ್ ಅವರದ್ಧು ಕಭೀ ಖುಷಿ ಕಭೀ ಗಮ್ ಸಂಬಂಧ. ಅವರೂ ಟಿಕಾಯತ್ ಬೆಂಬಲಕ್ಕೆ ನಿಂತಿದ್ದಾರೆ. ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ ಸಿಂಗ್ ಚೌಟಾಲಾ, ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ ಹನುಮಾನ್ ಬೇಣಿವಾಲಾ ಅವರು ಸಂಪೂರ್ಣವಾಗಿ ಟಿಕಾಯತ್ ಬೆಂಬಲಕ್ಕೆ ನಿಲ್ಲುವ ಮೂಲಕ ರೈತರ ಹೋರಾಟಕ್ಕೆ ಹೊಸ ತಿರುವು ದೊರೆಯಲಾರಂಭಿಸಿದೆ. ತಂದೆಯ ದಾರಿಯಲ್ಲೇ ಸಾಗುತ್ತಿರುವ ರಾಕೇಶ್ ಅವರ ಮೇಲೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಜೊತೆಗಿರುವ ೪೦ಕ್ಕೂ ಹೆಚ್ಚು ರೈತ ಸಂಘಟನೆಗಳ ನಡುವೆ ಸಮನ್ವಯ ಸಾಸುತ್ತಲೇ ರೈತ ಹೋರಾಟವನ್ನು ವಿಫಲಗೊಳಿಸುವ ಒಳಸಂಚುಗಳನ್ನು ಮೆಟ್ಟಿ ರೈತ ಹೋರಾಟವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅನೂಹ್ಯವಾಗಿ ವ್ಯಕ್ತವಾಗು ತ್ತಿರುವ ಬೆಂಬಲವನ್ನು ಹಿಡಿದಿಟ್ಟುಕೊಂಡು ಗಮ್ಯ ತಲುಪುವ ಸವಾಲು ಅವರ ಮುಂದಿದೆ.