- ಮಲ್ಲಿಕಾರ್ಜುನ ತಿಪ್ಪಾರ
ಜಗತ್ತಿನ ನಂಬರ್ 1 ಶ್ರೀಮಂತ,
ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಆ ಒಂದು ಟ್ವೀಟ್ ಮಾಡದಿದ್ದರೆ ಈ
ಜಗತ್ತು ‘ಸಿಗ್ನಲ್’ ಎಂಬ ಆ್ಯಪ್ ಹಿಂದೆ ಬೀಳುತ್ತಿರಲಿಲ್ಲವೇನೋ? ವಾಟ್ಸ್ಆ್ಯಪ್ ಹೊಸ ಪ್ರೈವೆಸಿ ನೀತಿಯನ್ನು ಜಾರಿಗೆ ತರಲು ಮುಂದಾಗುತ್ತಿದ್ದಂತೆ
ಎಲಾನ್ ಮಸ್ಕ್ Use Signal ಅಂತಾ ಸಿಂಪಲ್ ಆಗಿ ಮಾಡಿದ
ಈ ಟ್ವೀಟ್ ಸಿಗ್ನಲ್ ಫೌಂಡೇಷನ್ನ ಸರ್ವರ್ ಕ್ರ್ಯಾಶ್ ಆಗುವಂತೆ ಮಾಡಿತು! ಐದಾರು ದಿನಗಳಲ್ಲಿಸಿಗ್ನಲ್ಗೆ ಸೈನ್ ಇನ್ ಆಗುತ್ತಿರುವವರ ಸಂಖ್ಯೆಯಲ್ಲಿವಿಪರೀತ ಹೆಚ್ಚಳವಾಗಿದೆ.
ಜಗತ್ತು ಈಗ ಸಿಗ್ನಲ್ ಸಮೂಹ ಸನ್ನಿಗೆ ಒಳಗಾಗಿದೆ.
ಜಗತ್ತಿನಾದ್ಯಂತ ಪತ್ರಕರ್ತರು,
ಕಾರ್ಯಕರ್ತರು, ವಕೀಲರು, ಸಂಶೋಧಕರು, ರಾಜಕಾರಣಿಗಳು, ಸುರಕ್ಷತಾ ತಜ್ಞರು ಹೆಚ್ಚಾಗಿ
ಈ ಸಿಗ್ನಲ್ ಆ್ಯಪ್ ಬಳಸುತ್ತಿದ್ದರು. ಆದರೆ ಈಗ ಸಾಮಾನ್ಯರೂ
ಸಿಗ್ನಲ್ಗೆ ಅಡಿಯಿಡುತ್ತಿದ್ದಾರೆ. ಲಾಭರಹಿತ ಸಂಸ್ಥೆಯಾಗಿರುವ ಸಿಗ್ನಲ್ ಫೌಂಡೇಷನ್ ಒಡೆತನದ ಸಿಗ್ನಲ್ ಆ್ಯಪ್, ಸುರಕ್ಷತೆಯ ದೃಷ್ಟಿಯಿಂದ ಮಜಬೂತ್ ಆಗಿದೆ. ನಿಮ್ಮ ಯಾವ ಮಾಹಿತಿಯೂ 3ನೇ ವ್ಯಕ್ತಿಯ ಪಾಲಾಗುವುದಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಡೇಟಾ ಯಾವುದೇ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದಿಲ್ಲ.
ಹಾಗಾಗಿ, ಹೆಚ್ಚಿನವರು ಸಿಗ್ನಲ್ ಮೇಲೆ ವಿಶ್ವಾಸ ಇಡುವಂತಾಗಿದೆ. ಹಾಗಾದರೆ, ಸಿಗ್ನಲ್ನಲ್ಲಿ ಏನಿದೆ, ವಾಟ್ಸ್ಆ್ಯಪ್ಗಿಂತಲೂ ಹೇಗೆ ಬೆಸ್ಟು?
ಲಾಭರಹಿತ ಸಂಸ್ಥೆಯ ಒಡೆತನ
ವಾಟ್ಸ್ಆ್ಯಪ್ಗಿಂತ ಸಿಗ್ನಲ್ ಯಾಕೆ ಮುಖ್ಯವಾಗುತ್ತದೆ ಎಂದರೆ, ಈ ಆ್ಯಪ್ ಯಾವುದೇ ದೊಡ್ಡ ಟೆಕ್ ಕಂಪನಿಯದ್ದಲ್ಲ.
ಬದಲಿಗೆ, ಲಾಭರಹಿತ ಸಿಗ್ನಲ್ ಫೌಂಡೇಷನ್ಗೆ ಸೇರಿದೆ. ಹಾಗಾಗಿ,
ಬಳಕೆದಾರರ ಡೇಟಾವನ್ನು ಅದು ವಾಣಿಜ್ಯ ಕಾರಣಕ್ಕೆ ಬಳಸಿಕೊಳ್ಳಲಾರದು.
ಜೊತೆಗೆ, ಈ ಆ್ಯಪ್ ನಿಗೂಢ ಪಠ್ಯವನ್ನು
ಯಾರೂ ಡಿಕೋಡ್ ಮಾಡಲು ಆಗೋದಿಲ್ಲ. ಫೌಂಡೇಶನ್ಗೆ ಬರುವ ಡೊನೇಷನ್ ಮತ್ತು ಬಳಕೆದಾರರು ನೀಡುವ ಹಣವೇ ಇವರಿಗೆ
ಆಧಾರ.
ಸಿಗ್ನಲ್ ಆ್ಯಪ್ ಒಂದು ರೀತಿಯಲ್ಲಿ ತೆರೆದ ಪುಸ್ತಕ. ಇಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನೀವು ಈ ಆ್ಯಪ್ನ ಸೋರ್ಸ್ ಕೋಡ್ ನೋಡಬಹುದು. ಅದು ಸಾರ್ವಜನಿಕವಾಗಿ ಲಭ್ಯವಿದೆ. ಅಂದರೆ, ಜಗತ್ತಿನಾದ್ಯಂತ ತಜ್ಞರು ಈ ಕೋಡ್ ನೋಡುವುದರಿಂದ ಏನಾದರೂ ಸಮಸ್ಯೆ ಎದುರಾದರೆ ಮೆಸೆಂಜರ್ ಮತ್ತು ವಾಟ್ಸ್ಆ್ಯಪ್ಗಿಂತಲೂ ಫಾಸ್ಟ್ ಆಗಿ ಸರಿಪಡಿಸಲು ಸಾಧ್ಯವಾಗುತ್ತದೆ. ಮತ್ತು ಯಾವುದೂ ರಹಸ್ಯವಾಗಿ ಉಳಿಯುವುದಿಲ್ಲ. ಇದೇ ಮಾತನ್ನು ನೀವು ವಾಟ್ಸ್ಆ್ಯಪ್ಗೆ ಹೇಳುವಂತಿಲ್ಲ.
ಎಲ್ಲವೂ ನಿಗೂಢ ಲಿಪಿ
ನಿಮ್ಮ ಪ್ರೊಫೈಲ್ ಫೋಟೊ,
ನಿಮ್ಮ ಧ್ವನಿ, ವಿಡಿಯೋ ಕಾಲ್ಸ್, ಫೋಟೊ ಅಟ್ಯಾಚ್ಮೆಂಟ್ಸ್, ಸ್ಟಿಕರ್ಸ್,
ಲೊಕೇಷನ್ ಪಿನ್ಸ್. ಅಷ್ಟೇ
ಯಾಕೆ ನೀವು ಕಳುಹಿಸುವ ಜಿಐಎಫ್ ಕೂಡ ಎನ್ಕ್ರಿಪ್ಟೆಡ್
ಆಗಿರುತ್ತದೆ. ಈ ವಿಷಯದಲ್ಲಿ ವಾಟ್ಸ್ಆ್ಯಪ್ಗಿಂತಲೂ ಸಿಗ್ನಲ್ ಹೆಚ್ಚು ನಂಬಿಕೆಗೆ
ಅರ್ಹವಾಗಿದೆ. ಬಳಕೆದಾರರ ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಸಿಗ್ನಲ್
ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
ಎಲ್ಲವೂ ಸುರಕ್ಷಿತ
ಸಿಗ್ನಲ್ನ ಇನ್ನೊಂದು
ಖಾಸಿಯತ್ ಏನೆಂದರೆ, ಇಲ್ಲಿ ಎಲ್ಲವೂ ಸುರಕ್ಷಿತ.
ನಿಮ್ಮ ಸುರಕ್ಷಿತ ಮೆಸೆಜ್ಗಳನ್ನು ಸಿಗ್ನಲ್
ಕ್ಲೌಡ್ಗೆ ಕಳುಹಿಸುವುದಿಲ್ಲ.
ಯಾಕೆಂದರೆ, ಈ ಕ್ಲೌಡ್ನಲ್ಲಿರುವ
ಸಂದೇಶಗಳನ್ನು
ವಾಟ್ಸ್ಆ್ಯಪ್,
ಗೂಗಲ್ ಸೇರಿದಂತೆ ಯಾರು ಬೇಕಿದ್ದರೂ ಅವುಗಳನ್ನು ಓದಬಹುದು.
ಬದಲಿಗೆ, ಇಂಥ ಬ್ಯಾಕ್ಅಪ್ಗಳನ್ನು ನಿಮ್ಮ ಫೋನ್ನ ಡೇಟಾಬೇಸ್ನಲ್ಲಿ
ನಿಗೂಢಲಿಪಿಯಲ್ಲಿ ಸಿಗ್ನಲ್ ಸೇವ್
ಮಾಡುತ್ತದೆ ಮತ್ತು ಅದನ್ನು ನೀವು ಮಾತ್ರ ನೋಡಲು ಸಾಧ್ಯವಾಗುತ್ತದೆ. ಇನ್ನೂ ಆಶ್ಚರ್ಯ ಎಂದರೆ, ಇದು ನಿಮ್ಮ ಫೋನ್ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನೂ ತನ್ನ ಸರ್ವರ್ನಲ್ಲಿ ಉಳಿಸಿಕೊಳ್ಳುವುದಿಲ್ಲ!
ಕಣ್ಮರೆಯಾಗುವ ಮೆಸೆಜ್
ಇದರಲ್ಲೇನು ವಿಶೇಷ ಎನ್ನಬೇಡಿ. ವಾಟ್ಸ್ಆ್ಯಪ್ನಲ್ಲಿ ಈ ಫೀಚರ್ ಇದೆಯಲ್ಲ ಅನ್ನಬಹುದು.
ಆದರೆ, ಈ ಫೀಚರ್ ಸಿಗ್ನಲ್ನ ಅತ್ಯಂತ ಹಳೆಯ ಮತ್ತು ಅತ್ಯಂತ ಉಪಯುಕ್ತ ಫೀಚರ್ ಆಗಿದೆ.
ವಾಟ್ಸ್ಆ್ಯಪ್ನಲ್ಲಿ ಅದು ಇತ್ತೀಚೆಗಷ್ಟೇ
ಬಂದಿದೆ. ಬಳಕೆದಾರರು ತಮ್ಮ ಸಂದೇಶಕ್ಕೆ ಹತ್ತು ಸೆಕೆಂಡ್ನಿಂದ ವಾರದವರೆಗೂ ಟೈಮರ್ ಅಳವಡಿಸಬಹುದು.
ಆ ಬಳಿಕ ಅದು ಸ್ವಯಂ ಆಗಿ ಕಣ್ಮರೆಯಾಗುತ್ತದೆ. ಒಂದು ಬಾರಿ
ವೀಕ್ಷಿಸಬಹುದಾದ ಮೀಡಿಯಾ ಮತ್ತು ಮೆಸೆಜ್ ರಿಕ್ವೆಸ್ಟ್ಗಳು ವಾಟ್ಸ್ಆ್ಯಪ್ನಲ್ಲೂ ಇಲ್ಲ.
ಬೇರೆ ಆ್ಯಪ್ಗಳು ಕನ್ನ
ಹಾಕುವಂಗಿಲ್ಲ
ಈ ಫೀಚರ್ ವಾಟ್ಸ್ಆ್ಯಪ್ ಸೇರಿದಂತೆ ಸೇರಿದಂತೆ ಇತರ ಯಾವುದೇ ಪ್ರಮುಖ ಮೆಸೆಂಜರ್
ಆ್ಯಪ್ಗಳಲ್ಲೂ ಇಲ್ಲ. ಸಿಗ್ನಲ್ನಲ್ಲಿ ಇನ್ಕಾಗ್ನಿಟೋ ಕೀಬೋರ್ಡ್ ಆಪ್ಷನ್
ಇದ್ದು, ಇದು ನೀವು ಏನನ್ನು ಟೈಪ್ ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸುವುದಿಲ್ಲ. ಸ್ಕ್ರೀನ್
ಸೆಕ್ಯುರಿಟಿ ಫೀಚರ್, ನಿಮ್ಮ ಸಿಗ್ನಲ್ ಆ್ಯಪ್ನಲ್ಲಿರುವ ಮಾಹಿತಿಯನ್ನು ಕದ್ದು ನೋಡುವುದನ್ನು ತಪ್ಪಿಸುತ್ತದೆ.
ಇದನ್ನು ಗಮನಿಸಿದರೆ ಜಗತ್ತಿನಲ್ಲೇ ಸಿಗ್ನಲ್ ಅತ್ಯಂತ
ಸೆಕ್ಯೂರ್ ಆಗಿರುವ ಮೆಸೆಂಜರ್ ಆ್ಯಪ್
ಎನ್ನುವುದು ತಿಳಿಯುತ್ತದೆ. ಆದರೆ, ದುರದೃಷ್ಟವಶಾತ್ ಈ ಆ್ಯಪ್
ಬಗ್ಗೆ ಜಗತ್ತು ತೀರಾ ಇತ್ತೀಚಿನವರೆಗೂ ಅಪರಿಚಿತವಾಗಿರುವುದು ಚೋದ್ಯವೇ ಸರಿ!