2017ರಲ್ಲಿ ಮಹಾಮೈತ್ರಿ ಮುರಿದು ಬಿತ್ತು. ಆಗ ಮತ್ತೆ ನಿತೀಶ್ ಕುಮಾರ್ ಬಿಜೆಪಿ ಜತೆ ಸಖ್ಯ ಬೆಳೆಸಿ ಸಿಎಂ ಆದರು. ಎನ್‌ಡಿಎ ಭಾಗವಾಗಿದ್ದ ಎಲ್‌ಜೆಪಿ ಕೂಡ ಸರಕಾರದಲ್ಲಿ ಪಾಲುದಾರ ಪಕ್ಷ ವಾಯಿತು. ದಲಿತೋದ್ಧಾರ ಧ್ಯೇಯವನ್ನು ಹೊಂದಿರುವ ಎಲ್‌ಜೆಪಿ ಜಾತ್ಯತೀತ, ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ.
ಗೆಲ್ಲುವ ಕೂಟಗಳನ್ನು ಆಯ್ಕೆ ಮಾಡಿಕೊಳ್ಳುವ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಸಕ್ತಿ ಪಾರ್ಟಿ(ಎಲ್‌ಜೆಪಿ) ಬಿಹಾರದಲ್ಲಿ ಸಕ್ರಿಯವಾಗಿದೆ. 2000ರಲ್ಲಿ ಪಾಸ್ವಾನ್ ಅವರು ಲೋಕ ಜನಶಕ್ತಿ ಪಾರ್ಟಿಯನ್ನು ಸ್ಥಾಪಿಸಿದರು. 1969ರಲ್ಲಿ ಸಂಯುಕ್ತ ಸೋಷಿಯಲಿಷ್ಟ್ ಪಾರ್ಟಿಯಿಂದ ರಾಜಕೀಯ ಜೀವನ ಆರಂಭಿಸಿದ್ದ ಪಾಸ್ವಾನ್, ಎಲ್‌ಜೆಪಿ ಸ್ಥಾಪಿಸುವ ಮುನ್ನ ಜನತಾ ದಳದಲ್ಲಿದ್ದರು. 2004ರ ಚುನಾವಣೆಯಲ್ಲಿ ಯುಪಿಎ ಜತೆ ಮೈತ್ರಿಮಾಡಿಕೊಂಡಿದ್ದ ಅವರು ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡು, ಕೇಂದ್ರದಲ್ಲಿ ಸಚಿವರಾದರು. 2005ರ ಫೆಬ್ರವರಿಯಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೂಡಿ ಸ್ಪರ್ಧಿಸಿ, 29 ಸೀಟುಗಳನ್ನು ಎಲ್‌ಜೆಪಿ ಗೆದ್ದುಕೊಂಡಿತು. ಆದರೆ, ಯಾವುದೇ ಪಕ್ಷ ಕ್ಕೆ ಬಹುಮತ ಬಾರದ್ದರಿಂದ ಸರಕಾರ ರಚನೆಯಾಗಲಿಲ್ಲ. ಕೆಲವು ದಿನಗಳವರೆಗೆ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಮತ್ತೆ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಯು ನೇತೃತ್ವದ ಎನ್‌ಡಿಎ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು.
ಎಲ್‌ಜೆಪಿ 203 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ ಗೆದ್ದಿದ್ದು ಕೇವಲ 10 ಸ್ಥಾನಗಳು ಮಾತ್ರ. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್‌ಜಿಪಿ 'ನಾಲ್ಕನೇ ರಂಗ'ದ ಭಾಗವಾಗಿತ್ತು. ಎಸ್‌ಪಿ, ಆರ್‌ಜೆಡಿ ಕೂಡ ಇದರಲ್ಲಿದ್ದವು. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಎಲ್‌ಜೆಪಿಗೆ ಒಂದೂ ಸ್ಥಾನ ಬರಲಿಲ್ಲ. ಚುನಾವಣೆ ಬಳಿಕ ಆರ್‌ಜೆಡಿ ಬೇಷರತ್ತಾಗಿ ಯುಪಿಎಗೆ ಬೆಂಬಲ ನೀಡಿತು. 2010ರಲ್ಲಿ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಜತೆಗೂಡಿ ಎಲ್‌ಜೆಪಿ ಚುನಾವಣೆ ಸ್ಪರ್ದಿಸಿತಾದರೂ ಗೆದ್ದಿದ್ದು ಕೇವಲ ಮೂರು ಸ್ಥಾನಗಳು ಮಾತ್ರ. ಬೇರೆ ಬೇರೆ ಪಕ್ಷ ಗಳ ಜತೆ ರಾಜಕಾರಣ ಮಾಡಿದ್ದ ಎಲ್‌ಜೆಪಿ ಮತ್ತು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಯಿತು. ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಕೇಂದ್ರದಲ್ಲಿ ಪಾಸ್ವಾನ್ ಮಂತ್ರಿಯಾದರು. 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿ 40 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 2 ಕ್ಷೇತ್ರದಲ್ಲಿ ಜಯ ಸಾಧಿಸಿತು. ಆರ್‌ಜೆಡಿ-ಕಾಂಗ್ರೆಸ್-ಜೆಡಿಯು ಮಹಾಮೈತ್ರಿ ಈ ಚುನಾವಣೆಯಲ್ಲಿ ಬಹುಮತ ಪಡೆದು ಸರಕಾರ ರಚಿಸಿತು. 2017ರಲ್ಲಿ ಮಹಾಮೈತ್ರಿ ಮುರಿದು ಬಿತ್ತು. ಆಗ ಮತ್ತೆ ನಿತೀಶ್ ಕುಮಾರ್ ಬಿಜೆಪಿ ಜತೆ ಸಖ್ಯ ಬೆಳೆಸಿ ಸಿಎಂ ಆದರು. ಎನ್‌ಡಿಎ ಭಾಗವಾಗಿದ್ದ ಎಲ್‌ಜೆಪಿ ಕೂಡ ಸರಕಾರದಲ್ಲಿ ಪಾಲುದಾರ ಪಕ್ಷ ವಾಯಿತು. ದಲಿತೋದ್ಧಾರ ಧ್ಯೇಯವನ್ನು ಹೊಂದಿರುವ ಎಲ್‌ಜೆಪಿ ಜಾತ್ಯತೀತ, ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ.