ಪಾಕಿಸ್ತಾನದಲ್ಲಿ ಅರಾಜಕತೆ ಎಂಬುದು ಯಾವತ್ತಿಗೂ ಹೊಸ ಸುದ್ದಿ ಅನ್ನಿಸುವುದಿಲ್ಲ. ಪ್ರತಿಬಾರಿಯ ಆಂತರಿಕ ಕಲಹಗಳಲ್ಲಿ ಪಾತ್ರಗಳು ಬದಲಾಗುತ್ತಿರುತ್ತವೆ ಅಷ್ಟೆ. ಈ ಬಾರಿ ಅಲ್ಲಿನ ಮುಖ್ಯಪಾತ್ರಗಳಲ್ಲಿರುವವರು ತಾಹಿರುಲ್ ಖಾದ್ರಿ ಎಂಬ ಧರ್ಮಗುರು, ಇಮ್ರಾನ್ ಖಾನ್ ಎಂಬ ಒಂದು ಕಾಲದ ಕ್ರಿಕೆಟಿಗ ಹಾಗೂ ಈಗಿನ ರಾಜಕಾರಣಿ ಮತ್ತು ನವಾಜ್
ಷರೀಫ್. ಈ ವ್ಯಕ್ತಿಗಳ ಜಾತಕ ಓದುತ್ತ ಪಾಕಿಸ್ತಾನದ ಪ್ರಸ್ತುತ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು.
ಧರ್ಮಗುರುವಿಗೆ ಅಧಿಕಾರದ ಕನಸು ಬಿದ್ದೊಡೆ...
ಪಾಕ್ ಪ್ರಧಾನಿ ಷರೀಫ್ ಅವರ ಕುರ್ಚಿಗೆ ಸಂಚಕಾರ ತರಲು ಇಮ್ರಾನ್ ಖಾನ್ ಜತೆ ಜಂಟಿ ಕಾರ್ಯಾಚಾರಣೆ ನಡೆಸುತ್ತಿರುವ ತಾಹಿರುಲ್ ಖಾದ್ರಿ ಒಂದು ಕಾಲದಲ್ಲಿ ಷರೀಫ್ ಅವರಿಗೆ ಬೇಕಾದ ವ್ಯಕ್ತಿ! ಷರೀಫ್ ಅವರ ತಂದೆ ಮೊಹಮ್ಮದ್ ಅವರು ಕಬ್ಬಿಣ ಮತ್ತು ಸ್ಟೀಲ್ ಕೈಗಾರಿಕಾ ಸಮೂಹದ ಅಧ್ಯಕ್ಷರಾಗಿದ್ದಾಗ ಆಸ್ಪತ್ರೆ ಮತ್ತು ಫೌಂಡ್ರಿಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಮಸೀದಿಗಾಗಿ ಒಬ್ಬ ವಿದ್ವಾಂಸರನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಬಿದ್ದಿದ್ದು ಇದೇ ಖಾದ್ರಿ. ಮುಂದೆ ನವಾಜ್ ಷರೀಫ್ ಪಂಜಾಬ್ ಸಚಿವರಾದಾಗ, ಟಿವಿಯಲ್ಲಿ ಖಾದ್ರಿ ಅವರ ಅಧ್ಯಾತ್ಮಿಕ ಕಾರ್ಯಕ್ರಮ ಪ್ರಸಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಷರೀಫ್ ಜತೆ ಆ ಮಟ್ಟಿಗಿನ ಸಾಮೀಪ್ಯ ಹೊಂದಿದ್ದ ಖಾದ್ರಿ ಯಾಕೆ ಅವರು ವಿರುದಟಛಿ ತಿರುಗಿ ಬಿದ್ದಿದ್ದಾರೆ? ಇದರಲ್ಲಿ ನಿಜವಾಗಲೂ ಏನಾದರೂ ತಾರ್ಕಿಕ ವಿಚಾರಗಳಿವೆಯಾ? ಮೇಲ್ನೋಟಕ್ಕೆ ಚುನಾಯಿತ ಸರ್ಕಾರದ ವಿರುದಟಛಿದ ‘ದಂಗೆ’ ಎಬ್ಬಿಸುವ ಹುನ್ನಾರದಂತೆ ಕಂಡರೂ ಖಾದ್ರಿ ಅವರ ಹೋರಾಟದಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆಯಿದೆ. ಇದೇ ಮಾತನ್ನು ಇಮ್ರಾನ್ ಖಾನ್ ಅವರಿಗೆ ಅನ್ವಯಿಸುವುದು ಕಷ್ಟ. ಖಾದ್ರಿ ಇಸ್ಲಾಂ ವಿದ್ವಾಂಸರಾದರೂ ಮತಾಂಧರಲ್ಲ. ಇಸ್ಲಾಮ್‌ನ ನಿಜವಾದ ಸಂದೇಶವನ್ನು ಪಾಕ್ ಯುವ ಜನರಿಗೆ ಹೆಚ್ಚು ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ. ಇದರಿಂದಾಗಿಯೇ ಕೆನಡಾದ ‘ಮಾನಸಪುತ್ರ’ರಂತಾಗಿರುವ ಖಾದ್ರಿ ಮಾತಿಗೆ ಪಾಕ್‌ನ ಯುವ ಜನ ಮರಳಾಗಿದ್ದಾರೆ. ಸದಾ ಯುದಟಛಿದ ಭೀತಿಯಲ್ಲಿ, ಅರಾಜಕತೆ ನೆರಳಲ್ಲಿ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಅಲ್ಲಿನ ಜನರಿಗೆ ಖಾದ್ರಿ ಹೇಳುತ್ತಿರುವ ಮಾತುಗಳು ಮನಸ್ಸಿಗೆ ತಟ್ಟಲಾರಂಭಿಸಿವೆ. ಅವರ ಬೆಂಬಲಕ್ಕಾಗಿ ಬೀದಿಗಿಳಿಯುತ್ತಿದ್ದಾರೆ.
ಇಸ್ಲಾಮ್ ವಿದ್ವಾಂಸ ಎಂಬ ಖ್ಯಾತಿಯಿದ್ದರೂ ಕೂಡಾ ಖಾದ್ರಿಯೇನೂ ‘ಅಧಿಕಾರ ಬೇಡ ಎನ್ನುವ ತ್ಯಾಗಿ’ಯಲ್ಲ. ಈಗಿನ ಅವರ ಹೋರಾಟ ಮೇಲ್ನೋಟಕ್ಕೆ ಭ್ರಷ್ಟ ಹಾಗೂ ಅಕ್ರಮ ಮಾರ್ಗದಿಂದ ಚುನಾಯಿತರಾಗಿರುವ ಸರ್ಕಾರವನ್ನು ಕಿತ್ತೊಗೆಯುವುದು. ಚುನಾವಣೆ ಸುಧಾರಣೆ ತರುವುದು. ಆದರೆ, ಅಂತರಾಳದಲ್ಲಿ ಅವರಿಗೆ ಅಧಿಕಾರದ ದರ್ಬಾರ್ ನಡೆಸುವ ಉಮೇದು ಇದೆ. ಈಗ ಎಷ್ಟೇ ಅವರು ಸೇನೆಯ ಜೊತೆ ನೆಂಟಸ್ತನ ಇಲ್ಲ, ಅಧಿಕಾರದ ವ್ಯಾಮೋಹ ಇಲ್ಲ ಎನ್ನಬಹುದು. ಆದರೆ, ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾಗದು. ಅವರ ಇತಿಹಾಸವನ್ನು ಗಮನಿಸಿದರೆ ಇದನ್ನು ಪುಷ್ಟೀಕರಿಸುತ್ತದೆ. ೧೯೮೧ರಲ್ಲಿ ತೆಹ್ರಿಕ್ ಮಿನ್ಹಾಜುಲ್ಕು ರಾನ್ ಪಕ್ಷ ಕಟ್ಟಿದ್ದರು. ಈ ಪಕ್ಷದ ಉದ್ದೇಶ ನಿಜವಾದ ಪ್ರಜಾಪ್ರಭುತ್ವ, ಆರ್ಥಿಕ ಪ್ರಗತಿ, ಮಾನವ ಹಕ್ಕಗಳ ರಕ್ಷಣೆ,
ನ್ಯಾಯದಾನ, ಮಹಿಳೆ ಮತ್ತು ಅಲ್ಪಸಂಖ್ಯಾತರ ರಕ್ಷಣೆಯಾಗಿತ್ತು. ಆದರೆ, ಅದ್ಯಾಕೋ ಪಾಕ್ ಜನರು ಆಗ ಇವರನ್ನು ನಂಬಲಿಲ್ಲ. ಅದಕ್ಕೂ ಕಾರಣವಿದೆ. ಖಾದ್ರಿ ಅವರು ಸ್ವಲ್ಪ ಉದಾರಿ ಎನ್ನಬಹುದಾದ ಸುನ್ನಿ ಪಂಗಡದ ಬರ್ಲೇವಿ ಒಳಪಂಗಡಕ್ಕೆ ಸೇರಿದವರು. ಇದು ಇತರರು ಅವರನ್ನು ಅನುಮಾನದಿಂದ ನೋಡುವಂತಾಗಲು ಕಾರಣವಾಯಿತು. ೧೯೯೦ ಮತ್ತು ೧೯೯೩ರಲ್ಲಿ ಖಾದ್ರಿ ಅವರ ರಾಜಕೀಯ ಪ್ರಯತ್ನಗಳು ವಿಫಲಗೊಂಡವು. ೧೯೯೫ರಲ್ಲಿ ರಾಜಕೀಯ ತೊರೆದರು. ಆದರೆ, ೧೯೯೯ರಲ್ಲಿ ಜನರಲ್ ಪರ್ವೇಜ್ಮು ಷರಫ್ ಸೇನಾ ಕ್ಷೀಪ್ರ ಕ್ರಾಂತಿಯಲ್ಲಿ ಪಾಕ್ ಅಧ್ಯಕ್ಷರಾದರು. ಆಗ ಅವರೊಂದಿಗೆ ಬೆಳೆದ ಸ್ನೇಹದ ಫಲವಾಗಿ ೨೦೦೨ರಲ್ಲಿ ನ್ಯಾಷನಲ್ ಅಸೆಂಬ್ಲಿಯ ಸದಸ್ಯರಾದರು. ಆಗಲೇ ಖಾದ್ರಿ ಅವರಿಗೆ ಸೇನೆಯ ಒಳ ದಾರಿಗಳು ಗೊತ್ತಾಗಿದ್ದು. ಖಾದ್ರಿಗೆ ಧಾರ್ಮಿಕ ವ್ಯವಹಾರಗಳ ಸಚಿವರಾಗುವ ಬಯಕೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಕೊನೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ೨೦೦೫ರಲ್ಲಿ ಕೆನಡಾಕ್ಕೆ ವಲಸೆ ಹೋದರು. ಇದೆಲ್ಲವನ್ನು ಗಮನಿಸದರೆ ಪಾಕ್ ರಾಜಕೀಯ, ಅಧಿಕಾರದ ಪಡಸಾಲೆಯಲ್ಲಿ ‘ಕಾಯಂವಾಸಿ’ಯಾಗುವ ಅವರ ಬಯಕೆ ಇದ್ದೇ ಇದೆ ಎಂಬುದು ವೇದ್ಯ. ಹಾಗಾಗಿ, ಇಮ್ರಾನ್ ಖಾನ್ ಜತೆಗೂಡಿ ಷರೀಫ್ ಅವರ ರಾಜಿನಾಮೆಗೆ ಹೋರಾಟದ ಸ್ವರೂಪ ನೀಡಿದ್ದಾರೆ ಎಂಬ ಆರೋಪಗಳಿವೆ.
ಇಮ್ರಾನ್ ಖಾನ್ ಪಾಕ್‌ನ ಕೇಜ್ರಿವಾಲಾ?
೧೯೯೨ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇಮ್ರಾನ್ ಖಾನ್. ಅಂದಿನಿಂದ ಈವರೆಗೂ ಪಾಕ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ, ಕ್ರಿಕೆಟಿಗರಾಗಿ ಈಗಲೂ ಇಮ್ರಾನ್ ಖಾನ್ ಪಾಕಿಸ್ತಾನದ ಹೀರೋ. ರಾಜಕೀಯದಲ್ಲೂ ಅದೇ ‘ನಾಯಕ’ನಾಗುವ ಹುಮ್ಮಸ್ಸಿನಲ್ಲಿ ಸ್ವಲ್ಪ ಆತುರಕ್ಕೆ ಬಿದ್ದಿದ್ದಾರೆ ಅನ್ನಿಸುತ್ತದೆ. ಒಂದು ರೀತಿಯಲ್ಲಿ ನಮ್ಮ ಅರವಿಂದ್ ಕೇಜ್ರಿವಾಲ್ ಅವರಿಗೂ ಇವರನ್ನು ೋಲಿಸಬಹುದು. ಪಾಕ್‌ನ ನಗರವಾಸಿಗಳ ಬೆಂಬಲ ಇರುವಇಮ್ರಾನ್ ಅವರ ಪಾರ್ಟಿ ಆಫ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ)2೦೧೩ರ ನ್ಯಾಷನಲ್ ಅಸೆಂಬ್ಲಿ ಚುನಾವಣೆಯಲ್ಲಿ ೩೪ ಸ್ಥಾನ ಗೆದ್ದಿದೆ. ಇದೇ ಉತ್ಸಾಹದಲ್ಲಿ ಸೇನೆಯ ಬೆಂಬಲದೊಂದಿಗೆ ಸದ್ಯ ಪಾಕ್‌ನಲ್ಲಿ ಹೋರಾಟಕ್ಕಿಳಿದಿದ್ದಾರೆ. ಆದರೆ, ಅವರ ಈ ನಡೆ ಅವರ ಬೆಂಬಲಿಗರಲ್ಲಿ ಸಮಾಧಾನ ತಂದಿಲ್ಲ. ಇಮ್ರಾನ್ ಖಾನ್ ಅವರ ಹೋರಾಟ ಅರಾಜಕತೆ ಮತ್ತು ಸೇನಾಡಳಿತಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬುದು ಅವರ ಆರೋಪ. ಆದರೆ, ಇಮ್ರಾನ್ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಸದ್ಯ ಇಮ್ರಾನ್ ಹೆಗಲ ಮೇಲೆ ಬಂದೂಕು ಇಟ್ಟು ಸೇನೆ ಷರೀಫ್‌ರತ್ತ ಗುಂಡು ಹಾರಿಸುತ್ತಿದೆ. ಖಾದ್ರಿ ಮತ್ತು ಇಮ್ರಾನ್ ಅವರು ಸೇನೆ ಜತೆ ನಂಟಿಲ್ಲ ಎಂದು ಎಷ್ಟೇ ಹೇಳಿದರೂ ಯಾರೂ ನಂಬಲಾರರು. ಯಾಕೆಂದರೆ, ಸದ್ಯದ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ಅವರು ಸಂಧಾನಕಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಸೇನಾಧಿಕಾರಿಯನ್ನೇ! ಪಾಕ್ ಸೇನೆಗೂ
ಷರೀಫ್ ತಮ್ಮ ಮೇಲೆ ಸವಾರಿ ಮಾಡುವುದು ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಈಗಾಗಲೇ ಷರೀಫ್ ಅವರ ಭಾರತದ ಭೇಟಿ ವೇಳೆ ಜಗಜ್ಜಾಹೀರಾಗಿದೆ. ಪ್ರಧಾನಿ ಯಾಗಲೇಬೇಕು ಎಂಬ ಅದಮ್ಯ ಬಯಕೆ ಹೊಂದಿರುವ ಖಾನ್, ೨೦೧೩ರ ಚುನಾವಣೆಯನ್ನು ‘ಫೇಕ್ ಮ್ಯಾಂಡೆಟ್’ ಎನ್ನುತ್ತಾ, ಷರೀಫ್ ಅವರ ರಾಜಿನಾಮೆ ಹಾಗೂ ಹೊಸದಾಗಿ ಚುನಾವಣೆಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆಲ್ಲ ತೆರೆಮರೆಯಲ್ಲಿ ಸೇನೆಯ ಕರಾಮತ್ತು ಇದ್ದೇ ಇದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ಸ್ಥಾನಗಳ ಬಗ್ಗೆ ಮರು ಎಣಿಕೆಯನ್ನು ಇಮ್ರಾನ್ ಬಯಸಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಕಾರಣ ಷರೀಫ್ ಎಂಬುದು ಅವರ ಗುಮಾನಿ. ಈಗತಮ್ಮ ಸ್ವಹಿತಾಸಕ್ತಿ ಮತ್ತು ಸೇನೆಯ ಆಸಕ್ತಿಗಳೆರಡನ್ನು ಸೇರಿಸಿ ಕೊಂಡು ಷರೀಫ್ ಅವರಿಗೆ ಮಗ್ಗುಲು ಮುಳ್ಳಾಗುತ್ತಿದ್ದಾರೆ.
ಷರೀಫ್‌ಗೆ ಸಾಮ್ರಾಜ್ಯ ಉಳಿಸಿಕೊಳ್ಳುವ ತವಕ
೨೦೧೩ಕ್ಕೆ ಮುಂಚೆ ಪಾಕ್ ಜನ ಇವರ ಮೇಲಿಟ್ಟಿದ್ದ ವಿಶ್ವಾಸ ಈಗ ಉಳಿದಿಲ್ಲ. ಇದು ಪ್ರಧಾನಿ ಷರೀಫ್ ಅವರ ಸ್ವಯಂಕೃತ ಅಪರಾಧ. ಷರೀಫ್ ಅವರ ಅತಿಯಾದ ಸ್ವಜನ ಪಕ್ಷಪಾತ ಮತ್ತು ಅತಿಯಾದ ಭ್ರಷ್ಟಾಚಾರ ಜನರಲ್ಲಿ ಭ್ರಮನಿರಸನಕ್ಕೆ ಕಾರಣ. ಷರೀಫ್ ಅವರ ನೀತಿ ಯಾವಾಗಲೂ ಬಿಸಿನೆಸ್ ಪರವಾಗಿರುತ್ತ ವೆ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನದಲ್ಲಿರುವ ಸಕ್ಕರೆ, ಉಕ್ಕು ಸೇರಿದಂತೆ ಸುಮಾರು ಕೈಗಾರಿಕೆಗಳು ಇವರು ಮತ್ತು ಇವರ ಸಂಬಂಧಿಕರ ಹಿಡಿತದಲ್ಲಿವೆ. ಹಾಗೆ ನೋಡಿದರೆ ಇಡೀ ಕೈಗಾರಿಕೋದ್ಯಮ ಇವರ ಅಂಗೈಯಲ್ಲಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಚುನಾವಣೆಯ ಮುಂಚೆ ‘ಅಂಗೈಯಲ್ಲಿ ಆಕಾಶ’ ತೋರಿಸುವ ಭರವಸೆ ನೀಡಿದ್ದ ಷರೀಫ್ ಅದರತ್ತ ಕಿಂಚಿತ್ ಪ್ರಯತ್ನ ಮಾಡಿಲ್ಲ. ಇದುವರೆಗೆ ಒಂದೇ ಒಂದು ಕಾಯ್ದೆಯನ್ನು ಅವರು ಜಾರಿಗೆ ತಂದಿಲ್ಲ. ಅವರ ಆಡಳಿತ ನಿಷ್ಕ್ರಿಯತೆ ಎಷ್ಟಿದೆ ಎಂದರೆ, ಇದುವರೆಗೂ ಪ್ರಮುಖ ಖಾತೆಗಳಿಗೆ ಸಚಿವರನ್ನೇ ನೇಮಿಸಿಲ್ಲ! ಷರೀಫ್ ಅವರ ಸ್ವಜನ ಪಕ್ಷಪಾತಕ್ಕೆ ಮಿತಿಯೇ ಇಲ್ಲ. ಇರುವ ಮಂತ್ರಿಗಳ ಪೈಕಿ ಬಹುತೇಕರು ಅವರ ಸಂಬಂಧಿಕರೇ ಇದ್ದಾರೆ. ಅವರ ವಿರುದಟಛಿ ಭ್ರಷ್ಟಾಚಾರ ಆರೋಪಗಳು ಹೇರಳ. ಎಲ್ಲಕ್ಕಿಂತ ಹೆಚ್ಚಾಗಿ ಸೇನೆಯ ಜತೆ ಷರೀಫ್ ಅವರು ಸಂಘರ್ಷಕ್ಕಿಳಿದಿದ್ದು ಈಗಿನ ಪರಿಸ್ಥಿತಿಗೆ ಕಾರಣ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಷರೀಫ್ ಬಂದಿದ್ದು ಕೂಡಾ ಯಡವಟ್ಟಾಗಿದೆ. ಸದ್ಯಕ್ಕಂತೂ ಅತ್ತ ಸೇನೆಯ ಜತೆಗೂ ಸಂಬಂಧ
ನೆಟ್ಟಗಿಲ್ಲ, ಇತ್ತ ಜನರು ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ಷರೀಫ್. ಪಾಕ್ ಸಂಸತ್ತು ಷರೀಫ್ ಬೆನ್ನಿಗೆ ನಿಂತಿದೆಯಾದರೂ ಅದು ಎಷ್ಟು ದಿನ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲದೆ, ಅವರ ಎದುರಾಳಿ ಜನರಲ್ ಪರ್ವೇಜ್ಮು ಷರ‌್ರಫ್ ಕೂಡಾ ಖಾದ್ರಿ ಜೊತೆ ಕೈಜೋಡಿಸಿದ್ದಾರೆ.
------
ಮೂರು ಮುಖ್ಯ ಪಾತ್ರಗಳು ಹೀಗಿರಲಾಗಿ ಪಾಕಿಸ್ತಾನದ ಭವಿಷ್ಯದ ಕುರಿತ ಭರತವಾಕ್ಯ ಏನು? ಉತ್ತರ: ಥರಹೇವಾರಿ ಪಾತ್ರಗಳ ಆಟ ಮತ್ತು ಪಾಕ್ ಸಂಘರ್ಷ ಎರಡಕ್ಕೂಕನ್‌ಕ್ಲೂಷನ್ ಇಲ್ಲ!
(ಈ ಲೇಖನ 10-09-2014ರಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)