ಮಂಗಳವಾರ, ಮಾರ್ಚ್ 9, 2010

ಯಾಕೆಂದರೆ ಅವಳು ಹೆಣ್ಣು

ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದೇನೆ
ಒಬ್ಬರು ನಾನು ಹೀಗೆ ಇರಬೇಕು ಅಂದ್ರು
ಇನ್ನೊಬ್ಬರು ನಾನು ಹೀಗಿರಬಾರದು ಅಂದ್ರು
ಯಾರೂ ಕೇಳಲಿಲ್ಲ ನಾನ್ ಹೇಗೆ ಇರಬೇಕೆಂದು

ಮೀಸೆ ಮಂದಿ ಅರಿಯಲಿಲ್ಲ
ನನ್ನ ಆಂತಯ೯, ಕೇಳಲಿಲ್ಲ ಬಯಕೆ.
ಹೇರಿದರು ನನ್ನ ಮೇಲೆ ಅವರವರ ಭಾವ.
ತಿಂದುಂಡರು, ತೇಗಿ ಸುಸ್ತಾದರು.
ನನ್ನ ಸುಸ್ತು ಕೇಳಲಿಲ್ಲ, ಅರಿಯಲಿಲ್ಲ

ನಾಲ್ಕು ಗೋಡೆಗಳ ಮಧ್ಯೆ ನಿನ್ನ
ಬಾಳು, ಅಲ್ಲೇ ನಿನ್ನ ಜೀವನ
ಮಕ್ಕಳ ಹೇರು. ಹೊತ್ತೊತ್ತು
ಮಾಡು ಕೂಳು, ಕೇಳಬೇಡ
ಮತ್ತೇನನ್ನು ಯಾಕೆಂದರೆ ನೀನು ಹೆಣ್ಣು

ಇದೆಲ್ಲ ಆಗ...

ಈಗ ಕಾಲ ಉರುಳಿದೆ
ಇತಿಹಾಸದಲ್ಲಿ ಹೂತು ಹೋದವಳೇ
ನಿಮಿ೯ಸುತ್ತಿದ್ದಾಳೆ ಇತಿಹಾಸ
ಸವಾಲಾಗಿದ್ದಾಳೆ ನಾವೇ ಸಮ ಎನ್ನುವರಿಗೇ

ಮೈಲುಗಲ್ಲು ನೆಟ್ಟಿದ್ದಾಳೆ
ನಮ್ಮದೇ ಮೈಲುಗಲ್ಲು ಎನ್ನುವವರ ಮುಂದೆ
ದಾಟಿದ್ದಾಳೆ ಸಂಪ್ರದಾಯ,
ಭವ- ಬಂಧನಗಳನ್ನು ಮೀರಿದ್ದಾಳೆ
ಯಾಕೆಂದರೆ ಅವಳು ಹೆಣ್ಣು.

ಇದು ಈಗ...

ಶುಕ್ರವಾರ, ಜನವರಿ 29, 2010

ಹನಿಮೂನಗೆ ಕಾಶ್ಮೀರಕ್ಕೆ ಬರೋಣ ಕಣೋ...

ಹೇಗಿದ್ದೀಯಾ ಮುದ್ದು?

ನಿನ್ನನ್ನು ಸೇರಿಕೊಳ್ಳುವ ದಿನಗಳು ಸಮೀಪಿಸುತ್ತಿದ್ದಂತೆ ನನ್ನ ಮನಸ್ಸು, ಹೃದಯ ಉಲ್ಲಾಸದಿಂದ ತುಂಬಿ ತುಳುಕುತ್ತಿದೆ. ಉಳಿದಿರುವ ಒಂದು ವಾರ ಕೂಡಾ ಯುಗಯುಗದಂತೆ ಭಾಸವಾಗುತ್ತಿದೆ ಚಿನ್ನು. ನನ್ನ ತರಬೇತಿ ಮುಗಿದಿದೆ. ಈಗೇನಿದ್ದರೂ ಇಡೀ ಕಾಶ್ಮೀರವನ್ನು ಸುತ್ತಾಡಿ ಮರೆಯಲಾಗದ ನೆನಪು, ಅನುಭವವನ್ನು ಹೊತ್ತು ತರುವುದು ಅಷ್ಟೇ ನನ್ನ ಕೆಲಸ. ಆದರೂ ನಿನ್ನ ಸಾನ್ನಿಧ್ಯದಲ್ಲಿ ಸಿಗುವ ಸಂತೋಷ ನನಗೆ ಬೇರಲ್ಲೂ ಸಿಗಲ್ಲ ಕಣೋ. ಹಾಂ.... ಹಾಗೆಂದಕ್ಷಣಾ ನಾನು ಖುಷಿಯಿಂದ ಕಾಶ್ಮೀರ ಸುತ್ತುತ್ತಿದ್ದೇನೆ ಎಂದು ಭಾವಿಸಬೇಡ. ನೀನಲ್ಲದ ಭಾವ ನನ್ನ ಸದಾ ಕೊರೆಯತ್ತಲೇ ಇರುತ್ತದೆ. ನಾವಿಬ್ಬರೂ ಸಪ್ತಪದಿ ತುಳಿದ ನಂತರ ಮತ್ತೆ ಕಾಶ್ಮೀರಕ್ಕೆ ಬರೋಣ. ನಿಜವಾಗಲೂ ಕಾಶ್ಮೀರ "ಪ್ರೇಮಕಾಶ್ಮೀರ" ಕಣೋ ಇದು. ಪ್ರೇಮಿಗಳಿಗಾಗಿಯೇ ಭೂಮಿ ಮೇಲೆ ದೇವರು ಸೃಷ್ಟಿಸಿರುವ ಪ್ರೇಮಲೋಕ. ಆದರೂ, ಈ ಕ್ಷಣದಲ್ಲಿ ನೀನು ನನ್ನ ಬಳಿ ಇಲ್ಲ ಎಂಬುದೇ ನನ್ನ ದುಃಖಕ್ಕೆ ಕಾರಣ. ಚಿನ್ನು.. ಸುಮ್ಮನೇ ಏನೇನೋ ಕಲ್ಪಿಸಿಕೊಂಡು ಭಯಭೀತಗೊಳ್ಳಬೇಡ. ನೀನು ಅಂದುಕೊಂಡ ಹಾಗೆ ನಮ್ಮಪ್ಪ ನಮ್ಮಿಬ್ಬರ "ಅಮರಪ್ರೇಮ"ವನ್ನು ಹಾಳು ಮಾಡಲಾರ. ಯಾಕೆಂದರೆ ನಂಗೆ ಗೊತ್ತು... ನಮ್ಮಪ್ಪ ಒರಟನಂತೆ ಕಂಡರೂ ಹೃದಯ ಬಲು ಮೆದು. ಸಮಾಜಕ್ಕೆ ಹೆದರಿ ಜಾತಿ ಬಗ್ಗೆ ಮಾತನಾಡುತ್ತಾನೇ ಹೊರತು ಅವನೇನೂ ಪ್ರೀತಿಯ ಶತ್ರುವಲ್ಲ. ನಿಂಗೆ ಗೊತ್ತಾ...? ನಾನು ನನ್ನ ಅವ್ವನಿಗಿಂತಲೂ ಹೆಚ್ಚು ಹಚ್ಚಿಕೊಂಡಿದ್ದು ಅಪ್ಪನನ್ನೇ. ಆತ ಎಂದೆಂದಿಗೂ ನನ್ನ ಆಸೆ, ಆಕಾಂಕ್ಷೆಗಳನ್ನು ಭಗ್ನಗೊಳಿಸಲಾರ ಮುದ್ದು. ಧೈರ್ಯವಾಗಿರು. ಈ ಜೀವ ಇರುವುದೇ ನಿನಗಾಗಿ. ನನ್ನನ್ನು ನಾನು ಪ್ರೀತಿಸಿಕೊಳ್ಳುವ ಸಾವಿರ ಪಟ್ಟು ಹೆಚ್ಚು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರ ಈ ನಿಷ್ಕಲ್ಮಷ ಪ್ರೀತಿಗೆ ಜಾತಿ-ಪಾತಿ ಯಾವ ಲೆಕ್ಕ. ಪ್ರೇಮಿಗಳೆಂದರೇ ಎಲ್ಲ ಲೆಕ್ಕವನ್ನು ಬುಡುಮೇಲು ಮಾಡವವರು ಅಲ್ವಾ...? ಇನ್ನು ಒಂದೇ ಒಂದು ವಾರ. ನಾನು ನಿನ್ನ ತೆಕ್ಕೆಯಲ್ಲಿರುತ್ತೇನೆ. ಅಲ್ಲದೇ, ನೀನೇ ನನಗೆ ಪ್ರಪಂಚ. ನಾನೇ ನಿನಗೆ ಪ್ರಪಂಚ. ಬಾಕೀ ಪ್ರಪಂಚ ಬರೀ ನೆಪ ಮಾತ್ರ. ತಿಳೀತಾ ಕೋತಿ..


-ನಿನ್ನವಳು

ಶನಿವಾರ, ಜನವರಿ 23, 2010

ಜಾತಿಯ ಕೂಪದಲ್ಲಿ ಬೀಳದಿರಲಿ ಪ್ರೀತಿ.....

ಹಾಯ್ ಹೃದಯೇಶ್ವರಿ,


ಈಗೀಗ ಮನಸ್ಸು ಮುಂದಿನದನ್ನು ನೆನೆಸಿಕೊಂಡು ಭಯ ಬೀಳುತ್ತಿದೆ. ಯಾಕೆ ಗೊತ್ತಿಲ್ಲ. ನಮ್ಮಿಬ್ಬರ ಪ್ರೀತಿ ಮದುವೆ ಎಂಬ ಸುಂದರ ಕಲ್ಪನೆಯಲ್ಲಿ ಬಂಧಿಯಾಗುತ್ತದಾ...? ನಾವಿಬ್ಬರೂ ಪ್ರಮಾಣ ಮಾಡಿದಂತೆ ಕೊನೆವರೆಗೂ ಜತೆಯಾಗೇ ಇರುತ್ತೇವೆ..? ಎಂಬ ದುಗುಡ ಕಾಡುತ್ತಿದೆ. ಅಷ್ಟಕ್ಕೂ ಇಂಥ ಅಪಶಕುನ ಪ್ರಶ್ನೆಗಳು ಅದೇಕ ಏಳುತ್ತಿವೆ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ ಜಾಣೆ.

ಯಾರಿಗೆ ಬೇಕು ಈ ಲೋಕ


ಮೋಸಕ್ಕೆ ಇಲ್ಲಿ ಕೈ ಮುಗಿಬೇಕಾ


ಪ್ರೀತಿಯೇ ಹೋದರೂ ಇರಬೇಕಾ..?


ಈ ಹಾಡು ಎಫ್ಎಂನಲ್ಲಿ ಕೇಳುತ್ತಿದ್ದಂತೆ ನಮ್ಮಿಬ್ಬರ ಬಿಡಿಸಲಾಗದ ಈ ಪ್ರೀತಿಯ ಗಂಟನ್ನು ಜಾತಿ ಎಂಬ ಎರಡಕ್ಷರಗಳು ಬಿಸಿಡಿಸಿದರೆ ಎಂಬ ಆತಂಕ ಶುರುವಾಗಿದೆ. ಬಿಡಿಸಿದರೆ ಖಂಡಿತವಾಗಿಯೂ ನಾನು ನಾನಾಗಿಯೇ ಇರಲ್ಲ ಚಿನ್ನು. ಹುಚ್ಚನಾದರೂ ಆದೆ, ವ್ಯಸನಿಯಾದರೂ ಆದೇನು. ಪ್ರೀತಿಯ ವ್ಯಸನಿಯಾದ ಮೇಲೆ ಇದು ಸಹಜ ಎನ್ನುತ್ತಾನೆ ನನ್ನ ಭಗ್ನ ಪ್ರೇಮಿ ಗೆಳೆಯನೊಬ್ಬ. ನಾವು ಭಗ್ನಪ್ರೇಮಿಗಳಾದರೆ...? ಖಂಡಿತ ಹಾಗೆ ಆಗುವುದು ಬೇಡ ಎಂಬ ಹಾರೈಕೆ, ಓಲೈಕೆ ನನ್ನದು. ಆದರೆ, ವಿಧಿಯಾಟ ಯಾರು ಬಲ್ಲರು. ಚಿನ್ನು ಒಂದು ಮಾತು ಹೇಳಲಾ...? ನಾನು ಹುಡುಗನಾದರೂ ನನಗಿಂತ ಧೈರ್ಯ ನಿನಗೇ ಹೆಚ್ಚು. ನಮ್ಮ ಪ್ರೀತಿಯ ಯಶಸ್ಸಿನ ಬಗ್ಗೆ ಹೆಚ್ಚು ಕನಸು ಕಾಣುತ್ತಿರುವಳು ನೀನೇ. ಹೀಗಿದ್ದಾಗ್ಯೂ.. ನಿಮ್ಮಪ್ಪನ ಭಯಂಕರ ಜಾತಿ ಪ್ರೇಮ ನೆನೆದು ನನ್ನ ಚಿಕ್ಕಪುಟ್ಟ ದುಗುಡಗಳು ಬೆಳೆದು ಭೂತಾಕಾರ ಪಡೆಯುತ್ತಿವೆ ಬೇಗ ಬಾ ನೀನು. ಜತೆಗಿದ್ದರೆ ನೀನು ಇಂಥ ದುಗುಡ- ದುಮ್ಮಾನಗಳು ನನ್ನಷ್ಟು ಕಾಡಲಾರವು.


ಇನ್ನೊಂದು ವಿಷಯ ಗೊತ್ತಾ...? ಇಷ್ಟೆಲ್ಲ ಮನಸ್ಸಿನ ಕಿರಿಕಿರಿ ನಡುವೆ ನಾನು ನಿನ್ನೊಂದಿಗೆ ಕಳೆದ ಪ್ರತಿಕ್ಷಣಗಳು ದುಗುಡದ ಮರುಗಳಿಗೆಯಲ್ಲಿ ಉಲ್ಲಾಸಿತಗೊಳಿಸುತ್ತೇವೆ. ಅದೇ ನಿನ್ನ ಶಕ್ತಿ ಹೃದಯೇಶ್ವರಿ. ಅದನ್ನೇ ನಾನು ಮೆಚ್ಚಿ ನಿನ್ನ ಹಿಂದೆ ಬಂದದ್ದು. ಹೊಡೆತ ತಿಂದದ್ದು. ಇದೆಲ್ಲ ನೆನಪಾದಾಗೆಲ್ಲಾ ಒಬ್ಬನೇ ನಗ್ತಾ ಇರುತ್ತೇನೆ. ನಿನ್ನ ಹಾದಿಯನ್ನು ಕಾಯುತ್ತಿರುತ್ತೇನೆ ಎಂಬುದನ್ನು ಮರೆಯಬೇಡ.. ಪ್ಲೀಸ್


ಎಂದೆಂದಿಗೂ ನಿನ್ನವ

ಮಂಗಳವಾರ, ಸೆಪ್ಟೆಂಬರ್ 29, 2009

ಗಜಲ್ ಮತ್ತು ಕವನ

ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ,
ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ

ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು,
ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ಮುನ್ನ ನೀ ಜಾರಿ ಹೋಗಬೇಡ

ಇರಳು ಕವಿಯಲಿ, ಚಂದ್ರ ಮೂಡಲಿ, ನಕ್ಷತ್ರ ಮಿನುಗಲಿ,
ಕ್ಷೀರಪಥದಲಿ ಮಿಂದೆದ್ದು ಬರುವೆ, ಅಲ್ಲಿವರೆಗೂ ಹೋಗಬೇಡ

ಬೆರಳುಗಳು ಸುಡುತ್ತಿವೆ, ಸಿಗರೇಟಿನ ನಿಗಿ ನಿಗಿ ಬೆಂಕಿಗೆ,
ಚಿಮ್ಮುವ ಹೊಗೆಯಲಿ ನಿನ್ನದೇ ರೂಪ ಬಿಟ್ಟು ಹೋಗಬೇಡ

ದಾರಿ- ದಾರಿ ನಡುವೆ ಕಲ್ಲು ಮುಳ್ಳೇ ಇರಲಿ, ನೀ ಕಾಲ್ ಇಡುವಲ್ಲಿ
ನಾ ಕೈಯಿಡುವೆ, ನೋವು ನನಗಿರಲಿ, ನಲಿವು ನಿನಗಿರಲಿ, ಹೋಗಬೇಡ

ಎದೆಯ ಮೇಲೆ ಕಾಲಿಟ್ಟು, ಒಳಗೆ ಬೆಂಕಿಯಿಟ್ಟು ಹೋಗಲೇಬೇಕೆನ್ನುವಾಗ
ಮರೆಯಬೇಡ, ಕೆಂಪು ಸೂರ್ಯನ ಮೇಲಿಟ್ಟ ಆಣೆ, ನೀ ಹೋಗಬೇಡ

ಕಂಪ್ಯೂಟರ್ ಪರದೆ ತುಂಬೆಲ್ಲಾ ನಿನ್ನದೆ ಬಿಂಬ, ಆದರೂ
ಬೆರಳು 'ಡಿಲಿಟ್ ಕೀ' ಮೇಲೆ ಊರುತ್ತಿದೆ, ತೊರೆದು ಹೋಗಬೇಡ



ಅಲ್ಲಿ- ಇಲ್ಲಿ

ಅಲ್ಲಿ ದ್ವéೇಷವಿದೆ, ರೋಷವಿದೆ
ತಮ್ಮೊಳಗೆ ಹೊಡೆದಾಡಿ ಅಂತ್ಯವಾಗುವ ಆಪಾಯವಿದೆ

ಇಲ್ಲಿ ಸ್ನೇಹವಿದೆ, ಪ್ರೇಮವಿದೆ
ತ್ಯಾಗದ ಆರಿವಿದೆ, ಒಂದುಗೂಡಿಸುವ ಧ್ವನಿಯಿದೆ

ಅಲ್ಲಿ ತಲ್ಲಣವಿದೆ, ತವಕವಿದೆ,
ಕ್ರೂರ ಅಟ್ಟಹಾಸವಿದೆ, ಅದರಲ್ಲೇ ನೆತ್ತರದ ಹಸಿವಿದೆ

ಇಲ್ಲಿ ತಂಪಿದೆ, ತಂಗಾಳಿಯಿದೆ,
ನೊಂದವರಿಗೆ ನೆರವಾಗುವ ನೆರಳಿದೆ, ಒಲವಿದೆ

ಅಲ್ಲಿ ಬಿಸಿಲಿದೆ, ಬವಣೆಯಿದೆ,
ಒಂದಾಗುವವರ ಬೆನ್ನುಬೀಳುವ ಹಿಂಡೇ ಇದೆ

ಇಲ್ಲಿ ಕರುಣೆಯಿದೆ, ಅನುಕಂಪವಿದೆ,
ಒಲ್ಲೆ ಎಂದವರಿಗೂ ಹಿಡಿ ಪ್ರೀತಿ ಕೊಡವವರ ದಂಡೇ ಇದೆ

ಅಲ್ಲಿ- ಇಲ್ಲಿ ಇವೆರಡು ನಮ್ಮೊಳಗಿವೆ,
ಮನಸ್ಸು, ಹೃದಯದೊಳು ಅವಿತಿವೆ.

ಭಾನುವಾರ, ಜೂನ್ 28, 2009

ನಿಶಕ್ತ ಕಾಲುಗಳು

ಚಿಕ್ಕವನಿದ್ದಾಗಲೇ ಮೇಲೆದ್ದ. ಮೇಲದ್ದಾಗಲೇ ಬಿದ್ದ
ಮಕ್ಕಳೇ ದೇವರೆಂದ, ಮಕ್ಕಳಿಗೆ ಇವನೇ ದೆವ್ವೆಂದರು.
ಗೆದ್ದಷ್ಟೇ ಸೋತ. ಸೋತಷ್ಟೇ ಮತ್ತೆ ಚಿಗಿತ.
ಚಿಗಿಯುವಾಗಲೂ, ನೆಗೆಯುವಾಗಲೂ ತಾನೇ ತಾನಾದ.
ಕರಿ ಬಿಳಿ ತೊಗಲಿನ ಮಧ್ಯೆ ಕುಣಿದ, ಕುಪ್ಪಳಿಸಿದಎಲುಬುಗಳು
ಮುರಿಯವಂತೆ ಮೈ ಮಣಿಸಿದ ಕಾಲ್ ಕುಣಿಸಿದ,
ದನಿ ಎತ್ತರಿಸಿ, ತಗ್ಗಿಸಿದ ಪ್ರತಿ ಏರಿಳಿತದಲ್ಲೂ
ನೋವು-ನಲಿವು ನಗಿಸಿದ ಪಾಪ್ ಎಂದು ಮೂಗು ಮುರಿಯೋರೋಮೂಗ್
ಮೇಲೆ ಬೆರಳಿಟ್ಟರು, ಕಣ್ಣೀರಿಟ್ಟರು
ಸರ ಸರ ಸರಿದಾಡುವ, ಹರಿದಾಡುವ ಕಾಲುಗಳಿಗೆ ಕಣ್, ಮನ ಸೋತರು.
ಈಗ ಕಾಲುಗಳೇ ನಿತ್ರಾಣ, ನಿಶಕ್ತ ಹಾಡುವ ರಾಗ, ನಿರಾಗ,
ಕೇಳುವಗಡಿ-ಭಾಷೆ ಬೇಧಿಸಿ, ರಾಗ-ದ್ವೇಷ ಸರಿಸಿ ನಾದ ಹರಿಸಿದ.
ಕೊನೆಗೇ ತಾನೇ ನಿನಾದನಾದ.
ನನ್ನ ಕತ್ತರಿಸಿದರೂ ಹರಿಯೋದುಕೆಂಪ ರಕ್ತ, ಕರಿಯಲ್ಲ
ಎನ್ನುತ್ತಲೇ ಬಿಳಿ ಚರ್ಮಕ್ಕೆ ಮನಸೋತ ಬಣ್ಣ ಬಲಾಯಿಸಿದ
ಬಣ್ಣವೇನೋ ಬದಲಾಯಿತು. ಮನಸ್ಸು?

ಬುಧವಾರ, ನವೆಂಬರ್ 19, 2008

ಏನು ಬರೆಯಲಿ ಹೇಳು...?

ಬರೆಯಲು ಹೊರಟವನ
ಅಂತರಂಗವೆಲ್ಲ ಖಾಲಿಯಾದಾಗ
ಸುಟ್ಟು ಹೋದ ಕನಸುಗಳ
ವಾಸನೆ ಮೂಗಿಗೆ ಅಡರುತ್ತಿರುವಾಗ
ಬರೆಯುವದಾದರು ಹೇಗೆ ಹೇಳು..?
ಆಗುಂತಕಳಾಗಿ ಎದುರಾಗಿ, ಮರೆಯಾದೆ
ಮರೆಯಾಗುವ ಮುನ್ನ
ಮಾಸಲಾರದ ಬರೆ ಹಾಕಿದೆ
ಬರೆ ಇನ್ನು ಹಸಿ ಹಸಿಯಾಗಿರುವಾಗಲೇ
ಹಾಳೆಯ ಮೇಲೆ ಗೆರೆಯಾದ್ರೂ
ಹೇಗೆ ಮೊಡಿತು ಹೇಳು...?
ಬದುಕಿದ್ದು ಸತ್ತಂತಿರುವಾಗ
ಭಾವವಾಗುವ ಅಕ್ಷರಗಳಿಗೆ
ಜೀವವನ್ನಾದರೂ ಹೇಗೆ ತುಂಬಲಿ...?
ನಾ ಹಾಳಾಗುವ ಮುನ್ನ
ಒಮ್ಮೆ ನೀ ಹರಸು
ಎಂದೆಂದಿಗೂ ನಾ ನಿನ್ನ
ನೀ ನನ್ನ ನೋಡದಂತೆ