ಯಾರೋ ಗಾಲಿಬನಿಗೆ ಕೇಳಿದರು
ಮಂಗಳವಾರ, ಮೇ 18, 2021
Mirza Ghalib: ಯಾವಾಗ ಪ್ರೀತಿಸಬೇಕು?
ಭಾನುವಾರ, ಮೇ 9, 2021
BMC Commissioner Iqbal Singh Chahal: ಕೋವಿಡ್ ನಿಯಂತ್ರಣಕ್ಕೆ 'ಮುಂಬೈ ಮಾಡೆಲ್' ಸೃಷ್ಟಿಸಿದ ಚಹಲ್
ಫಿಟ್ನೆಸ್ ಫ್ರೀಕ್ ಐಎಎಸ್ ಅಧಿಕಾರಿ, ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ಅವರು ಮುಂಬೈನಲ್ಲಿ ಕೋವಿಡ್ ನಿಯಂತ್ರಣಕ್ಕೆ ತಂದು, ‘ಮುಂಬೈ ಮಾಡೆಲ್’ ಸೃಷ್ಟಿಸಿದ್ದಾರೆ.
ನರ್ಸ್ಗಳಿಲ್ಲ
ಅನ್ನೋ ಪರಿಸ್ಥಿತಿ ಎಲ್ಲ ಕಡೆ ಇದೆ. ಕೋವಿಡ್ ನಿರ್ವಹಿಸಬೇಕಾದ ಸ್ಥಳೀಯ ಸಂಸ್ಥೆಗಳು ಕೈ ಚೆಲ್ಲಿ ಕುಳಿತಿವೆ. ಅಧಿಕಾರಿಗಳಿಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಇಡೀ ವ್ಯವಸ್ಥೆಯೇ
ವಿಫಲವಾಗಿದೆ. ಒಬ್ಬರು ಇನ್ನೊಬ್ಬರು ಮೇಲೆ ದೂರುತ್ತಿದ್ದಾರೆ. ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ನಗರ ಮಾತ್ರ ಭರವಸೆಯ
ಬೆಳಕಾಗಿದೆ.
ಬೃಹನ್ ಮುಂಬಯಿ
ಮಹಾನಗರ ಪಾಲಿಕೆ(ಬಿಎಂಸಿ)ಯು ‘ಕೋವಿಡ್ ಏರುಗತಿ ರೇಖೆ’ಯನ್ನು ತಡೆ
ಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಉಳಿದ ನಗರಗಳಿಗೆ ದಾರಿದೀಪವಾಗಿದೆ. ಸ್ವತಃ ಸುಪ್ರೀಂ
ಕೋರ್ಟ್, ಬಿಎಂಸಿ ಅನುಸರಿಸಿದ ಮಾದರಿಯನ್ನು ಮುಕ್ತಕಂಠದಿಂದ ಹೊಗಳಿದೆ;
ನೀವೂ ನೋಡಿ ಕಲಿಯಿರಿ ಎಂದು ತಾಕೀತು ಮಾಡಿದೆ!
ಮುಂಬಯಿಯ ಈ ಸಕ್ಸೆಸ್ ಸ್ಟೋರಿಯ
ನಾಯಕ ಇಕ್ಬಾಲ್ ಸಿಂಗ್ ಚಹಲ್. ಚಹಲ್ ಬೃಹನ್ ಮುಂಬಯಿ ಮಹಾನಗರ ಪಾಲಿಕೆಯ
ಆಯುಕ್ತರು. ಪಾಲಿಕೆ ಕಮಿಷನರ್ ಆಗಿ ಒಂದು ವರ್ಷವಷ್ಟೇ
ಆಗಿದೆ. ಈ ಕಡಿಮೆ ಅವಧಿಯಲ್ಲಿ ಅವರು ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸಿದ
ರೀತಿ ಮಾತ್ರ ಅನನ್ಯ. ಒಂದು ಕಾಲು ಕೋಟಿ ಜನಸಂಖ್ಯೆ ಇರುವ ದೇಶದ ಅತಿದೊಡ್ಡ
ನಗರ, 39,038.83 ಕೋಟಿ ರೂಪಾಯಿ ಬಜೆಟ್ ಮಂಡಿಸುವ
ಪಾಲಿಕೆಯ ಆಡಳಿತವೇನೂ ತಮಾಷೆಯಲ್ಲ. ನಮ್ಮ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್
10 ಸಾವಿರ ಕೋಟಿ ರೂ. ಅಚೆ ಈಚೆ ಇದೆ! ಇಂಥ ಮುಂಬಯಿಗೆ ಕೋವಿಡ್ ಅಪ್ಪಳಿಸಿದರೆ ಅದನ್ನು ಹತೋಟಿಗೆ ತರುವುದು
ಕೂಡ ಅಷ್ಟು ಸಲೀಸಲ್ಲ. ಆದರೆ, ಕಮಿಷನರ್
ಚಹಲ್ ಮತ್ತು ಅವರ ತಂಡ ದಿನದ 24 ಗಂಟೆಯೂ ಕೆಲಸ ಮಾಡಿ, ಅಸಾಧ್ಯವಾದುದನ್ನು ಸಾಧಿಸಿ ತೋರಿಸುತ್ತಿದೆ,
ಬಿಎಂಸಿಯ ಕಾರ್ಯಕ್ಕೆ ಅಲ್ಲಿನ ರಾಜ್ಯ ಸರಕಾರವೂ ಅಷ್ಟೇ ಸಹಾಯ, ಸಹಕಾರ ನೀಡುತ್ತಿದೆ.
ಚಹಲ್ ಅವರೇನೂ
ಮಂತ್ರದಂಡ ಪ್ರಯೋಗಿಸಿ, ರಾತ್ರೋರಾತ್ರಿ ಚಮತ್ಕಾರ ಮಾಡಲಿಲ್ಲ.
ಕಳೆದ ವರ್ಷ ಮೊದಲನೆ ಅಲೆ ಏರುಗತಿಯಲ್ಲಿದ್ದಾಗಲೇ ಚಹಲ್ ಬಿಎಂಸಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಆ ಕ್ಷಣದಿಂದಲೇ
ಕೋವಿಡ್ ನಿರ್ವಹಣೆಗೆ ತಮ್ಮನ್ನು ಒಡ್ಡಿಕೊಂಡರು. ಮೊದಲನೇ ಅಲೆ ವೇಳೆ ಮಾಡಿದ ತಪ್ಪುಗಳಿಂದ ಪಾಠ ಕಲಿತು, ಸ್ಥಳೀಯಾಡಳಿತವನ್ನು
ಎರಡನೇ ಅಲೆಗೆ ಸಜ್ಜುಗೊಳಿಸಿದರು. ಎರಡನೇ ಅಲೆಯ ಗಂಭೀರತೆಯನ್ನು ಗ್ರಹಿಸಿ
ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪಿಸಿದರು. ಫೆಬ್ರವರಿಯಿಂದಲೇ ಇಡೀ
ಬಿಎಂಸಿ ಯುದ್ಧ ಸನ್ನದ್ಧವಾಗಿತ್ತು!
ತ್ವರಿತ ಕೋವಿಡ್ ಟೆಸ್ಟ್ಗಳು, 24 ಗಂಟೆಯೂ ಕಾರ್ಯನಿರ್ವಹಿಸುವ 24 ವಾರ್ ರೂಮ್ಗಳು, ಎಲ್ಲರಿಗೂ ವೈದ್ಯಕೀಯ ಸೇವೆ, ಖಾಸಗಿ ಆಸ್ಪತ್ರೆಗಳ ಜತೆಗಿನ ಸಮನ್ವಯ,
ಸ್ಮಶಾನಗಳ ನಿರ್ವಹಣೆ... ಹೀಗೆ ಕೋವಿಡ್ಗೆ ಅಂತರ್ಗತವಾಗಿರುವ ಎಲ್ಲವನ್ನೂ ಬಿಎಂಸಿ ಅಚ್ಚುಕಟ್ಟಾಗಿ ನಿರ್ವಹಿಸಲು ಯಶಸ್ವಿಯಾಯಿತು.
ಅದರ ಪರಿಣಾಮ ಈಗ ಕೋವಿಡ್ ಹತೋಟಿಗೆ ‘ಮುಂಬಯಿ ಮಾಡೆಲ್’ ಸೃಷ್ಟಿಯಾಗಿ ನಿಂತಿದೆ. ಇದೆಲ್ಲದರ ಹಿಂದೆ 55 ವರ್ಷದ ಕಮಿಷನರ್ ಚಹಲ್ ದೂರದೃಷ್ಟಿ ಚಿಂತನೆ ಮತ್ತು ಪ್ರಯತ್ನಶೀಲತೆಯನ್ನು ಇಡೀ
ಜಗತ್ತೇ ಗುರುತಿಸುತ್ತಿದೆ.
ರಾಜಸ್ಥಾನದ ಜೋಧಪುರದ ಮೇಲ್ಮಧ್ಯಮ
ವರ್ಗದ ಕುಟುಂಬದಲ್ಲಿ 1966ರ ಜನವರಿ 20ರಂದು ಇಕ್ಬಾಲ್ ಸಿಂಗ್
ಚಹಲ್ ಜನಿಸಿದರು. ಶಾಲಾ ದಿನಗಳಿಂದಲೇ
ಕಲಿಕೆಯಲ್ಲಿ ಅಗ್ರಸ್ಥಾನಿ. 12ನೇ ತರಗತಿಯ ಬೋರ್ಡ್ ಎಕ್ಸಾಮ್ನಲ್ಲಿ ನ್ಯಾಷಲ್ ಮೆರಿಟ್
ಲಿಸ್ಟ್ನಲ್ಲಿ ಕಾಣಿಸಿಕೊಂಡವರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ನಲ್ಲಿ ಬಿಟೆಕ್ ಪದವಿ ಪಡೆದುಕೊಂಡಿದ್ದಾರೆ. ಹಾರ್ವರ್ಡ್ ಯೂನಿವರ್ಸಿಟಿಗೆ ತೆರಳಿ ಸಾರ್ವಜನಿಕ ಆಡಳಿತದಲ್ಲಿ
ಪದವಿ ಗಳಿಸಿದ್ದಾರೆ. ಅಲ್ಲಿಂದ ಹಿಂದಿರುಗಿದ ಬಳಿಕ 1988ರ ಯುಪಿಎಸ್ಸಿ ಪರೀಕ್ಷೆ ಬರೆದರು. ಮೊದಲ
ಯುಪಿಎಸ್ಸಿ ಪರೀಕ್ಷೆಯಲ್ಲೇ ಅತ್ಯುತ್ತಮ ಅಂಕ ಪಡೆದು ಪಾಸಾದರು.
ಮಹಾರಾಷ್ಟ್ರ ಕೆಡರ್ ಐಎಎಸ್ ಅಧಿಕಾರಿಯಾಗಿ ಸೇರ್ಪಡೆಯಾದರು.
ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿಕೆಲಸ
ಮಾಡಿರುವ ಚಹಲ್,
ಕೆಲವು ಕಾಲ ಕೇಂದ್ರ ಸೇವೆಯಲ್ಲಿಯೂ ಇದ್ದರು. ಮಹಾರಾಷ್ಟ್ರದ
ಔರಂಗಾಬಾದ್ ಮತ್ತು ಥಾಣೆಯ ಜಿಲ್ಲಾಧಿಕಾರಿಯಾಗಿ ಅವರು ಮಾಡಿದ ಕಾರ್ಯಗಳನ್ನು
ಜನ ಈಗಲೂ ನೆನೆಯುತ್ತಾರೆ. ಈ ಜಿಲ್ಲೆಗಳಲ್ಲಿನ ಕೆಲಸದಿಂದಾಗಿ ಜನರ ಅಧಿಕಾರಿ
ಎನಿಸಿಕೊಂಡರು. ಮುಂಬಯಿನ ‘ಧಾರಾವಿ’ ಏಷ್ಯಾದ ಅತಿದೊಡ್ಡ ಕೊಳಗೇರಿ. ಈ ಕೊಳಗೇರಿ ಅಭಿವೃದ್ಧಿಗೆ ಮಹಾರಾಷ್ಟ್ರ
ಸರಕಾರ ‘ಧಾರಾವಿ ರಿಡೆವಲಪ್ಮೆಂಟ್ ಪ್ರಾಜೆಕ್ಟ್’ ಆರಂಭಿಸಿ, ಸಾರಥ್ಯವನ್ನು
ಚಹಲ್ಗೆ ವಹಿಸಿತ್ತು. ಈ ಪ್ರಾಜೆಕ್ಟ್ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಕೊರೊನಾ
ಅಲೆಯಲ್ಲಿ ಧಾರಾವಿಯನ್ನು ದೊಡ್ಡ ಅಪಾಯದಿಂದ ಪಾರು ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಈ ಪ್ರಾಜೆಕ್ಟ್ನ ಯಶಸ್ಸು ಅವರನ್ನು ಬಿಎಂಸಿ ಕಮಿಷನರ್ ಹುದ್ದೆಗೆ
ಕರೆದುಕೊಂಡು ಬಂತು.
ಚಹಲ್ ಅವರನ್ನು
‘ಫಿಟ್ನೆಸ್ ಫ್ರೀಕ್’ ಎಂದೂ
ಗುರುತಿಸಲಾಗುತ್ತದೆ. ಚಹಲ್ ಫಿಜಿಕಲ್
ಫಿಟ್ ಐಎಎಸ್ ಆಫೀಸರ್!
ಹಲವು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದಾರೆ.
2004ರಿಂದಲೂ ಮುಂಬಯಿ ಮ್ಯಾರಥಾನ್ನಲ್ಲಿ ಓಡುತ್ತಿದ್ದಾರೆ.
ಯೋಗ, ಫಿಟ್ನೆಸ್, ಓಟದ ಫೋಟೊಗಳನ್ನು
ಆಗಾಗ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಷೇರ್ ಮಾಡಿಕೊಳ್ಳುತ್ತಾರೆ.
ಕೋವಿಡ್ ಅತ್ಯುತ್ತಮ
ನಿರ್ವಹಣೆಗಾಗಿ ಇಂಡೋ ಅಮೆರಿಕನ್ ಚೇಂಬರ್ಸ್ ಆಫ್ ಕಾಮರ್ಸ್(ಐಎಸಿಸಿ)
‘ಕೋವಿಡ್ ಕ್ರುಸೆಡರ್ ಅವಾರ್ಡ್-2020’
ನೀಡಿ ಗೌರವಿಸಿದೆ. ಲೋಕಮತ್ ‘ಮಹಾರಾಷ್ಟ್ರಿಯನ್ ಆಫ್ ಇಯರ್-2020’ ಸೇರಿದಂತೆ ಹಲವು
ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದಲೂ
ಗೌರವಗಳು ಸಂದಿವೆ. ಕೋವಿಡ್ ಎರಡನೇ ಅಲೆಯನ್ನು
ನಿರ್ವಹಿಸುತ್ತಲೇ ಬಿಎಂಸಿಯನ್ನು ಸಂಭಾವ್ಯ ಮೂರನೇ ಅಲೆಗೆ ಸಜ್ಜುಗೊಳಿಸುವ ಕೆಲಸವನ್ನು ಚಹಲ್
ಮಾಡುತ್ತಿದ್ದಾರೆ. ಹಲವು ತಜ್ಞರ ಪ್ರಕಾರ, ಮೂರನೇ ಅಲೆಯು ಎರಡನೇ ಅಲೆಗಿಂತಲೂ ಭೀಕರವಾಗಿದ್ದು, ಮಕ್ಕಳು ಹೆಚ್ಚು
ಅಪಾಯಕ್ಕೆ ಈಡಾಗಲಿಧಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಎಂಸಿಯು ಮಕ್ಕಳ ಕೋವಿಡ್ ಕೇರ್ ಸೆಂಟರ್ಗಳನ್ನು ಈಗಿನಿಂದಲೇ ಆರಂಭಿಸುತ್ತಿದೆ.
ಚಹಲ್ ಅವರನ್ನು
ವಿವಾದಗಳೇನೂ ಬಿಟ್ಟಿಲ್ಲ. ಶಿವಸೇನೆ ಮತ್ತು ನಟಿ ಕಂಗನಾ ರಣಾವತ್
ನಡುವಿನ ಬೀದಿ ಕಾಳಗದಲ್ಲಿ ಬಿಎಂಸಿಯೂ ಭಾಗಿಯಾಗಬೇಕಾಯಿತು. ನಿಯಮ ಮೀರಿ ಬಿಲ್ಡಿಂಗ್ ಕಟ್ಟಿದ್ದಾರೆಂದು ಬಿಎಂಸಿ ಕಂಗನಾಳ ಮನೆಯನ್ನು
ಧ್ವಂಸ ಮಾಡಿತ್ತು. ಆಗ, ಪಾಲಿಕೆ ಆಯುಕ್ತ ಚಹಲ್
ವಿರುದ್ಧವೂ ಆರೋಪಗಳು ಕೇಳಿ ಬಂದವು. ಕೋರ್ಟ್
ಕೂಡ ಪಾಲಿಕೆ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಅದೇನೇ ಇರಲಿ, ಕೋವಿಡ್ ಬಿಕ್ಕಟ್ಟನ್ನು
ನಿರ್ವಹಿಸುತ್ತಿರುವ ಅವರ ರೀತಿ ಎಲ್ಲ ಅಧಿಕಾರಿಗಳಿಗೂ ದಾರಿದೀಪವಾಗಿದೆ.
ಭಾನುವಾರ, ಮೇ 2, 2021
Nandurbar DM Dr Rajendra Bharud: 'ಪ್ರಾಣವಾಯು' ನೀಡಿದ ನಂದೂರಬಾರ್ ಡಿಸಿ ಡಾ.ರಾಜೇಂದ್ರ ಭಾರೂಡ್
ಕೋವಿಡ್ ಬಿಕ್ಕಟ್ಟಿನ ನಡುವೆ ಆಕ್ಸಿಜನ್ ಉತ್ಪಾದನೆಯಲ್ಲಿಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿರುವ ನಂದೂರಬಾರ್ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ ಅವರ ಜೀವನಗಾಥೆ ಸ್ಫೂರ್ತಿದಾಯಕ.
- ಮಲ್ಲಿಕಾರ್ಜುನ ತಿಪ್ಪಾರ
ಇಡೀ ದೇಶವೇ ಕೋವಿಡ್ ಎರಡನೇ
ಅಲೆಗೆ ಕೊಚ್ಚಿ ಹೋಗುತ್ತಿದೆ. ವ್ಯವಸ್ಥೆಯ ವೈಫಲ್ಯದ ಪರಿಣಾಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ದೊರಕದೇ ಜನರು ಸಾವಿಗೀಡಾಗುತ್ತಿದ್ದಾರೆ; ಸ್ಮಶಾನಗಳು ಗಿಜಿಗಿಡುತ್ತಿವೆ;
ದೂರದೃಷ್ಟಿ ಮತ್ತು ಸಿದ್ಧತೆಯ ಕೊರತೆಯ ಫಲವಾಗಿ ಇಡೀ ದೇಶ ಅನಾಥಪ್ರಜ್ಞೆಯನ್ನು ಎದುರಿಸುತ್ತಿದೆ.
ಇದರ ನಡುವೆ ಮಹಾರಾಷ್ಟ್ರದ ನಂದೂರಬಾರ್ ಜಿಲ್ಲೆಮಾತ್ರ
ವಿಭಿನ್ನವಾಗಿ ನಿಂತಿದೆ; ಸೋಂಕನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.
ದೂರದೃಷ್ಟಿ ಮತ್ತು ದಕ್ಷತೆಯ
ಜಿಲ್ಲಾಧಿಕಾರಿಯೊಬ್ಬರಿದ್ದರೆ ಒಂದು ಜಿಲ್ಲೆಯ ವ್ಯವಸ್ಥೆಯು ಯಾವ ರೀತಿ ಕಾರ್ಯನಿರ್ವಹಿಸಬಲ್ಲದು ಎಂಬುದಕ್ಕೆ
ನಂದೂರ್ಬಾರ್ ಜಿಲ್ಲೆ ದೃಷ್ಟಾಂತ. ಮಹಾರಾಷ್ಟ್ರದಲ್ಲಿ ಆಕ್ಸಿಜನ್
ಕೊರತೆಯಿಂದ ಜನರು ಸಾಯುತ್ತಿದ್ದ ಸಂದರ್ಭದಲ್ಲಿ ನಂದೂರಬಾರ್ ಎಂಬ ಬುಡಕಟ್ಟು ಜನರೇ ಹೆಚ್ಚಿರುವ ಜಿಲ್ಲೆ ಆಕ್ಸಿಜನ್ ಉತ್ಪಾದನೆಯಲ್ಲಿ ಸ್ವಾವಲಂಬನೆ
ಸಾಧಿಸಿ ಚಿಕಿತ್ಸೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗಿದೆ. ನಂದರೂಬಾರ್ ಯಶಸ್ಸಿನ ಹಿಂದೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ ಮತ್ತು ಅವರ ತಂಡದ ಪರಿಶ್ರಮವಿದೆ;
ದೂರದೃಷ್ಟಿಯ ಚಿಂತನೆಯಿದೆ. ಸ್ವತಃ ವೈದ್ಯರಾಗಿರುವ ರಾಜೇಂದ್ರ
ಅವರಿಗೆ ಕೊರೊನಾದಿಂದ ಉಂಟಾಗಬಹುದಾದ ಅಪಾಯದ ಸ್ಪಷ್ಟತೆ ಇತ್ತು. ತಮ್ಮ ಆಡಳಿತದ
ಜಿಲ್ಲೆಯನ್ನು ಕೊರೊನಾ ಎದುರಿಸಲು ಎಲ್ಲರಿಗಿಂತಲೂ ಮುಂಚೆಯೇ ಸನ್ನದ್ಧ ಮಾಡಿ, ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಕೋವಿಡ್-19 ಸ್ಫೋಟವಾಗುವ ಮುಂಚೆ ನಂದೂರಬಾರ್ ಜಿಲ್ಲೆಯಲ್ಲಿಒಂದೂ ಲಿಕ್ವಿಡ್ ಆಕ್ಸಿಜನ್ ತಯಾರಿಕಾ ಘಟಕಗಳು ಇರಲಿಲ್ಲ. ಕೋವಿಡ್ ಕೇಸ್ಗಳು ಇಳಿಕೆಯಾಗುತ್ತಿದ್ದಂತೆ
ಸೆಪ್ಟೆಂಬರ್ನಲ್ಲಿ ಡಾ. ರಾಜೇಂದ್ರ ಅವರು ನಂದೂರಬಾರ್
ಜಿಲ್ಲಾಸ್ಪತ್ರೆಯಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ ಲಿಕ್ವಿಡ್
ಆಕ್ಸಿಜನ್ ಘಟಕ ಸ್ಥಾಪಿಸಿದರು. ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿಮತ್ತೆ ಎರಡು ಘಟಕಗಳನ್ನು ನಿರ್ಮಿಸಿದರು.
ಪರಿಣಾಮ ಜಿಲ್ಲೆಯಲ್ಲಿ ಪ್ರತಿ ನಿಮಿಷಕ್ಕೆ 2,400 ಲೀಟರ್
ಲಿಕ್ವಿಡ್ ಆಕ್ಸಿಜನ್ ಉತ್ಪಾದನೆಯ
ಸಾಮರ್ಥ್ಯವನ್ನು ಪಡೆದುಕೊಂಡಿತು. ಮೊದಲನೇ ಅಲೆ
ವೇಳೆ ಜಿಲ್ಲೆಯಲ್ಲಿ 190 ಕೇಸ್ಗಳಿದ್ದವು.
ಆದರೆ, ಸೋಂಕಿನ ಅಪಾಯದ ಬಗ್ಗೆ ಮತ್ತು ದೂರದೃಷ್ಟಿಯ ಚಿಂತನೆಯಿಂದಾಗಿ
ಡಾ. ಭಾರೂಡ್ ಅವರು ಆಕ್ಸಿಜನ್ ಉತ್ಪಾದನೆಯಲ್ಲಿಇಡೀ ಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿದರು.
ಮಹಾರಾಷ್ಟ್ರದಲ್ಲಿ ಯಾವಾಗ ಕೋವಿಡ್ ಎರಡನೇ
ಅಲೆ ತೀವ್ರವಾಯಿತೋ ಈ ಬುಡಕಟ್ಟು ಜಿಲ್ಲೆಯಲ್ಲಿ24 ಗಂಟೆಯೊಳಗೆ
1,200 ಪ್ರಕರಣಗಳು ಪತ್ತೆಯಾದವು. ಆದರೆ, ಆಕ್ಸಿಜನ್ ಕೊರತೆಯಿಂದಾಗಿಯೇ ಯಾವುದೇ ಸಾವು ನೋವು ಸಂಭವಿಸಲಿಲ್ಲ.
ಸರಕಾರಿ ಘಟಕಗಳಿಂದ ಪ್ರತಿ ನಿಮಿಷಕ್ಕೆ 1,800 ಲೀ.,
ಖಾಸಗಿ ಕಂಪನಿಗಳಿಂದ ನಿಮಿಷಕ್ಕೆ 1,200 ಲೀ. ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಸಾಧ್ಯವಾಗಿದೆ.
ಜನರು ಇಡೀ ಜಿಲ್ಲಾಡಳಿತವನ್ನು ಹಾಡಿ ಹೊಗಳುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ ಮತ್ತು ಅವರ ತಂಡದ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಾರಂಭಿಸಿದೆ.
ದಿಲ್ಲಿ, ಮುಂಬಯಿ,
ಬೆಂಗಳೂರಿನಂಥ ಮೆಟ್ರೋ ಸಿಟಿಗಳೇ ಆಕ್ಸಿಜನ್ ಕೊರತೆಯಿಂದ
ಬಳಲುತ್ತಿವೆ. ಈ ನಗರಗಳಲ್ಲಿ ಹೆಜ್ಜೆ ಹೆಜ್ಜೆಗೂ ಆಸ್ಪತ್ರೆಗಳಿದ್ದರೂ ಕೋವಿಡ್
ಸೋಂಕಿತ ಗಂಭೀರ ರೋಗಿಗಳಿಗೆ ಪ್ರಾಣವಾಯು ಸಿಗುತ್ತಿಲ್ಲ; ಪ್ರಾಣ ಉಳಿಸಲಾಗುತ್ತಿಲ್ಲ. ಅಂಥದ್ದರಲ್ಲಿ ಅಷ್ಟೇನೂ ಸಂಪನ್ಮೂಲಗಳು
ಇಲ್ಲದೇ ಬುಡಕಟ್ಟು ಜಿಲ್ಲೆಯೊಂದು ಆಕ್ಸಿಜನ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರುವುದು
ಇವರ ಕರ್ತೃತ್ವ ಶಕ್ತಿಗೆ ಉದಾಹರಣೆಯಾಗಿದೆ. ತಮ್ಮ ದೂರದೃಷ್ಟಿಯ ಆಡಳಿತದಿಂದಾಗಿ
ಪ್ರಸಿದ್ಧಿಯಾಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಭಾರೂಡ್ ಅವರ ಜೀವನ ಕತೆಯೂ ಯಾವುದೇ ಥ್ರಿಲ್ಲರ್ ಸಿನಿಮಾಗಿಂತಲೂ ಕಡಿಮೆ
ಇಲ್ಲ. ಪ್ರತಿಭಾವಂತ ಯಾವುದೇ ವಿದ್ಯಾರ್ಥಿಗೆ ಅವರ ಜೀವನಯಶೋಗಾಥೆ ಸೂಧಿರ್ತಿ.
ರಾಜೇಂದ್ರ ಭಾರೂಡ್ 1988ರ
ಜನವರಿ 7ರಂದು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಸಕ್ರಿ ತಾಲೂಕಿನ ಸಾಮೋಡೆ ಹಳ್ಳಿಯಲ್ಲಿ ಜನಿಸಿದರು.
ತಂದೆ ಬಂಡು ಭಾರೂಡ್, ತಾಯಿ ಕಮಲಾಬಾಯಿ. ಒಟ್ಟು ಮೂವರು ಮಕ್ಕಳು. ರಾಜೇಂದ್ರ ಕಮಲಾಬಾಯಿ ಗರ್ಭದಲ್ಲಿದ್ದಾಗಲೇ
ಬಂಡು ಇಹಲೋಕ ತ್ಯಜಿಸಿದರು. ಇಂದಿಗೂ ತಂದೆ ನೋಡಲು ಯಾವ ರೀತಿ ಇದ್ದರು ಎಂಬುದು
ರಾಜೇಂದ್ರಗೆ ಗೊತ್ತಿಲ್ಲ! ಅವರ ತಂದೆಯ ಒಂದೂ ಫೋಟೊ ಅವರ ಬಳಿಯಿಲ್ಲ.
ಅಷ್ಟು ಕಡು ಬಡತನದಲ್ಲಿರಾಜೇಂದ್ರ ಅವರು ಬೆಳೆದು ಬಂದಿದ್ದಾರೆ.
ಬಡತನವನ್ನೇ ಹಾಸಿ ಹೊದ್ದುಕೊಂಡಿದ್ದ
ಕುಟುಂಬ ನಿರ್ವಹಣೆ ಕಷ್ಟವೇ ಆಗಿತ್ತು. ತಾಯಿ ಮತ್ತು ಅಜ್ಜಿ ಇಬ್ಬರು ಸೇರಿ ಮೂವರು ಮಕ್ಕಳನ್ನು
ಕಷ್ಟಪಟ್ಟು ಬೆಳೆಸಿದರು. ಇವರಿಬ್ಬರೂ ದೇಸಿ ಸಾರಾಯಿಯನ್ನು ತಯಾರಿಸಿ ಮಾರಾಟ
ಮಾಡಿ ಕುಟುಂಬವನ್ನು ಸಾಕುತ್ತಿದ್ದರು. ದಿನಕ್ಕೆ ನೂರು ರೂಪಾಯಿ ಸಿಗುತ್ತಿತ್ತು.
ಕಬ್ಬಿನ ರವದಿಯಿಂದ ಮಾಡಿದ ಒಂದು ಸಣ್ಣ ಗುಡಿಸಲೇ ಇವರಿಗೆ ಅರಮನೆಯಾಗಿತ್ತು.
ಅಂಥ ಕಡುಬಡತನದಲ್ಲೇ ಬೆಳೆದ ರಾಜೇಂದ್ರ ವೈದ್ಯರಾಗಿ, ಐಎಸ್ಐ ಅಧಿಕಾರಿಯಾಗುವವರೆಗಿನ ಸಾಧನೆಯನ್ನು ಅಕ್ಷ ರಗಳಲ್ಲಿಹಿಡಿದಿಡಲು ಸಾಧ್ಯವಿಲ್ಲ.
ಗಣಿತ ಮತ್ತು ವಿಜ್ಞಾನ ವಿಷಯಗಳತ್ತ
ಆಸಕ್ತಿ ಬೆಳೆಸಿಕೊಂಡ ರಾಜೇಂದ್ರ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುತ್ತಿದ್ದರು. 10 ಮತ್ತು
12ನೇ ತರಗತಿ ಬೋರ್ಡ್ ಎಕ್ಸಾಮ್ನಲ್ಲಿ ಟಾಪರ್ ಆಗಿದ್ದರು. ಪರಿಣಾಮ ವಿದ್ಯಾರ್ಥಿ
ವೇತನ ಪಡೆದುಕೊಂಡು ಮುಂಬೈನ ಸೇಠ್ ಜಿಎಸ್ ಮೆಡಿಕಲ್
ಕಾಲೇಜ್ಗೆ ಪ್ರವೇಶ ಪಡೆದುಕೊಂಡರು. ಬಾಲ್ಯದಿಂದಲೂ ಅವರಿಗೆ ವೈದ್ಯನಾಗಬೇಕೆಂಬ ಕನಸು. ಆದರೆ,
ಅರಿವು ಹೆಚ್ಚಾಗುತ್ತಾ ಹೋದಂತೆ ತನ್ನ ಸುತ್ತಮುತ್ತ ಇರುವ ಜನರಿಗೆ ಜಾಗೃತಿ ಮೂಡಿಸುವುದು
ಅಗತ್ಯ ಎಂಬುದನ್ನು ಮನಗಂಡ ರಾಜೇಂದ್ರ ಅವರು ವೈದ್ಯರಾದರೂ ನಾಗರಿಕ ಆಡಳಿತ ಕ್ಷೇತ್ರವನ್ನು ಆಯ್ಕೆ
ಮಾಡಿಕೊಂಡರು. ಹಾಗಾಗಿಯೇ ಎಂಬಿಬಿಎಸ್ ಓದುತ್ತಿರುವಾಗಲೇ
ನಾಗರಿಕ ಸೇವಾ ಪರೀಕ್ಷೆಗೂ ತಯಾರಿ ಮಾಡಲಾರಂಭಿಸಿದರು. ಪಟ್ಟಾಗಿ ಕೂತು ಯುಪಿಎಸ್ಸಿ ಎಕ್ಸಾಮ್ಗೆ ಸಿದ್ಧತೆ ಮಾಡಿಕೊಂಡರು. ವೈದ್ಯ ಕೋರ್ಸ್ಗೆ ಸಂಬಂಧಿಸಿದ ಅಧ್ಯಯನದ ಜತೆಗೆ ಸ್ಪರ್ಧಾತ್ಮಕ
ಪರೀಕ್ಷೆಗೆ ಅಗತ್ಯವಾಗಿರುವ ಅಧ್ಯಯನವನ್ನು ಮುಂದುವರಿಸಿದರು. ಇದಕ್ಕಾಗಿ
ಕಠಿಣ ಪರಿಶ್ರಮಪಟ್ಟರು.
ಯುಪಿಎಸ್ಸಿ ಎಕ್ಸಾಮ್
ರಿಸಲ್ಟ್ ಗೊತ್ತಾಗುವ ಹೊತ್ತಿಗೆ ರಾಜೇಂದ್ರ ಹಳ್ಳಿಯಲ್ಲಿದ್ದರು.
ಅವರ ತಾಯಿಗೆ ಮಗ ಯಾವ ಪರೀಕ್ಷೆಯನ್ನು ಪಾಸು ಮಾಡಿದ್ದಾನೆಂಬುದರ ಬಗ್ಗೆ ಸಣ್ಣ ಕಲ್ಪನೆಯೂ
ಇರಲಿಲ್ಲ. 2012ರಲ್ಲಿ ಫರೀದಾಬಾದ್ನಲ್ಲಿ ಐಆರ್ಎಸ್ ಅಧಿಕಾರಿಯಾಗಿ ನಿಯುಕ್ತಿಗೊಂಡರು. ಈ ವೇಳೆ, 2ನೇ ಬಾರಿಗೆ ಯುಪಿಎಸ್ಸಿ
ಎಕ್ಸಾಮ್ ಬರೆದು, ಐಎಎಸ್ ಹುದ್ದೆಗೆ ಆಯ್ಕೆಯಾದರು. 2015ರಲ್ಲಿ ನಾಂದೇಡ್ ಜಿಲ್ಲೆಯಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಕೆಲಸ ಆರಂಭಿಸಿದರು. ಬಳಿಕ 2017ರಲ್ಲಿ ಸೋಲಾಪುರ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದರು.
2018ರಲ್ಲಿ ಅವರನ್ನು ನಂದೂರಬಾರ್ ಜಿಲ್ಲಾಧಿಕಾರಿಯಾಗಿ
ನೇಮಕ ಮಾಡಲಾಯಿತು.
ತಮ್ಮ ಸಂಘರ್ಷದ ಬದುಕಿನ ಜೀವನದ ಸಾರವನ್ನೇ ಸೃಜನಶೀಲ ಸಾಹಿತ್ಯವಾಗಿಸಿರುವ ರಾಜೇಂದ್ರ ‘ಮಿ ಏಕ್ ಸ್ವಪ್ನ ಪಹಿಲ್’ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಮೂವರು ಮಕ್ಕಳನ್ನು ಬೆಳೆಸಲು ತಮ್ಮ ತಾಯಿ ಪಟ್ಟ ಕಷ್ಟ, ಸಂಘರ್ಷದ ಬದಕನ್ನು ಚಿತ್ರಿಸಿದ್ದಾರೆ. ರಾಜೇಂದ್ರ ಅವರು ಈಗ ತಾಯಿ, ಪತ್ನಿ ಮತ್ತು ಮಕ್ಕಳ ಜತೆ ಸರಕಾರ ನೀಡಿರುವ ಕ್ವಾರ್ಟರ್ಸ್ನಲ್ಲಿದ್ದಾರೆ. ನಂದೂರಬಾರ್ ಜಿಲ್ಲಾಧಿಕಾರಿಯಾಗುವ ಮುಂಚೆ ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ತಮ್ಮ ದಕ್ಷ ಕಾರ್ಯನಿರ್ವಹಣೆಯ ದಟ್ಟ ಪ್ರಭಾವವನ್ನು ಬಿಟ್ಟು ಬಂದಿದ್ದಾರೆ. ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಬಡವರು, ನಿರ್ಗತಿಕರ ಬದುಕನ್ನು ಸಹನೀಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಈಗಲೂ ಅವರನ್ನು ಜನರು ಸ್ಮರಿಸಿಕೊಳ್ಳುತ್ತಾರೆ. ಇಂಥ ಜಿಲ್ಲಾಧಿಕಾರಿ ಪ್ರತಿ ಜಿಲ್ಲೆಗೆ ಸಿಕ್ಕರೆ ಕೋವಿಡ್ ಏನು, ಯಾವುದೇ ಸಮಸ್ಯೆಯನ್ನೂ ಆಡಳಿತ ಅನಾಯಸವಾಗಿ ಎದುರಿಸಬಹುದು.
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ನನ್ನೊಳಗಿನ ಭಾವನೆಗಳಿಗೆ ಹಚ್ಚಬೇಕಿದೆ ಬಣ್ಣ, ಹಸಿರಾಗುವ ನೆಪದಲ್ಲಿ ಕೊಸರಾಡುವ ಕನಸುಗಳಿಗೆ ಕಟ್ಟಬೇಕಿದೆ ಬೇಲಿ. ಹಾರಬೇಕಿದೆ ಮುಗಿಲೇತ್ತರಕ್ಕೆ ಎಲ್ಲ ನಿಯಮ ಮೀರಿ ಗೆಲ್ಲಬೇಕ...
-
ಶೋಷಿತರ ಪರ ನಿಲ್ಲುವ ನ್ಯಾಯವಾದಿಯ ಕತೆಯ ಸಿನಿಮಾ ‘ ಜೈ ಭೀಮ್ ’ ಸದ್ದು ಮಾಡುತ್ತಿದೆ . ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್ ಕೆ . ಚಂದ್ರು . ...




