ಗುರುವಾರ, ಮಾರ್ಚ್ 5, 2020

10 Deadliest Viruses: ಜಗತ್ತನ್ನು ಕಾಡಿದ ಆ 10 ವೈರಸ್‌ಗಳು!

- ಮಲ್ಲಿಕಾರ್ಜುನ ತಿಪ್ಪಾರ
ಕೊರೊನಾ ವೈರಸ್‌(ಕೋವಿಡ್‌-19)ಗೆ ಇಡೀ ಜಗತ್ತೇ ತಲ್ಲಣಿಸಿದೆ. 60 ರಾಷ್ಟ್ರಗಳಿಗೆ ಹಬ್ಬಿರುವ ಈ ವೈರಾಣುವಿಗೆ ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಕೊರೊನಾ ಹರಡದಂತೆ, ಮಾರಣಾಂತಿಕವಾಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಇನ್ನೂ ದೊಡ್ಡ ಪ್ರಮಾಣದಲ್ಲಿಯಶಸ್ಸು ದೊರೆಯುತ್ತಿಲ್ಲ.

ಆದರೆ, ಕೊರೊನಾ ವೈರಾಣುಗಿಂತಲೂ ಭೀಕರ ವೈರಸ್‌ಗಳ ಹಾವಳಿಯನ್ನು ಈ ಜಗತ್ತು ಕಂಡಿದೆ. 20ನೇ ಶತಮಾನದಲ್ಲಿಇಡೀ ಮನುಕುಲಕ್ಕೆ ಸಂಚಕಾರ ತಂದಿದ್ದ ಸಿಡುಬು(ಸ್ಮಾಲ್‌ ಪಾಕ್ಸ್‌) ವೈರಾಣು ಇದೀಗ ಭೂಮಿಯ ಮೇಲಿಲ್ಲ! ನಮ್ಮ ವೈದ್ಯ ವಿಜ್ಞಾನ ಬೆಳೆದಂತೆ ವೈರಾಣುಗಳಿಗೆ ಲಸಿಕೆಗಳು, ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಆದರೂ ಈವರೆಗೂ ಕೆಲವು ವೈರಾಣುಗಳಿಗೆ ಯಾವುದೇ ರೀತಿಯ ಮದ್ದು ದೊರೆತಿಲ್ಲಮತ್ತು ಇನ್ನೂ ಕೆಲವು ರೋಗಾಣುಗಳನ್ನು ನಿಯಂತ್ರಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಕೊರೊನಾ ಮುಂಚೆ ಎಬೋಲಾ ಎಂಬ ವೈರಸ್‌ ಕೂಡ ಹೆಚ್ಚು ಭೀತಿಯನ್ನು ಸೃಷ್ಟಿಸಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆ ಆಫ್ರಿಕಾದ ಕೆಲವು ರಾಷ್ಟ್ರಗಳಲಿ ಕಾಣಿಸಿಕೊಂಡಿದ್ದ ಎಬೋಲಾ ಸೃಷ್ಟಿಸಿದ್ದ ಭೀಕರತೆ ಮಾತ್ರ ಗಂಭೀರವಾಗಿತ್ತು. ಎಬೋಲಾ ಪೀಡಿತರ ಪೈಕಿ ಶೇ.90ರಷ್ಟು ಜನರು ಸರಿಯಾದ ಚಿಕಿತ್ಸೆ ದೊರೆಯದೆ ಸಾವಿಗೀಡಾಗಿದ್ದರು. ಇದೀಗ ಕೊರೊನಾ ಕೂಡ ಅಂಥದ್ದೇ ಸ್ಥಿತಿಯನ್ನು ಸೃಷ್ಟಿಸಿದೆ. ಆರೋಗ್ಯ ತುರ್ತು ಪರಿಸ್ಥಿತಿ ಮಾತ್ರವಲ್ಲದೇ ವಿಶ್ವದ ಆರ್ಥಿಕ ವಲಯದ ಮೇಲೆ ಕೊರೊನಾ ಕೆಟ್ಟ ಪರಿಣಾಮ ಬೀರಿದೆ.

ಕೊರೊನಾ ಹೊರತುಪಡಿಸಿ ಈ ವಿಶ್ವವನ್ನು ಕಾಡಿದ ಅತಿ ಭಯಂಕರ ಹತ್ತು ವೈರಾಣುಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಮಾರಣಾಂತಿಕ 'ಮಾರ್ಬರ್ಗ್‌'
1967ರಲ್ಲಿವಿಜ್ಞಾನಿಗಳು ಈ ವೈರಸ್‌ ಗುರುತಿಸಿದರು. ಉಗಾಂಡದಿಂದ ಮಂಗಗಳನ್ನು ಲ್ಯಾಬ್‌ ಕಾರ್ಮಿಕರು ಜರ್ಮನಿಗೆ ತರುತ್ತಿದ್ದರು. ಈ ವೇಳೆ, ಮಂಗಗಳಿಂದ ಅವರಿಗೂ ಈ ವೈರಸ್‌ ತಗುಲಿತ್ತು. ಎಬೋಲಾ ವೈರಸ್‌ ಮಾದರಿಯಲ್ಲೇ ಮಾರ್ಬರ್ಗ್‌ ವೈರಸ್‌ ಇದ್ದು, ಹೆಮರಾಜಿಕ್‌ ಫೀವರ್‌(ರಕ್ತಸ್ರಾವ ಜ್ವರ)ಕ್ಕೆ ಕಾರಣವಾಗುತ್ತದೆÜ. ಅಂದರೆ, ಮಾರ್ಬರ್ಗ್‌ ಸೋಂಕುಪೀಡಿತ ವ್ಯಕ್ತಿಗೆ ಸಿಕ್ಕಾಪಟ್ಟೆ ಜ್ವರ ಉಂಟಾಗಿ, ರಕ್ತಸ್ರಾವವಾಗುತ್ತದೆ. ಇದರ ಪರಿಣಾಮ ವ್ಯಕ್ತಿ ಶಾಕ್‌ಗೊಳಗಾಗಬಹುದು, ಬಹು ಅಂಗಾಂಗಗಳು ವೈಫಲ್ಯ ಕಾಣಬಹುದು ಮತ್ತು ಅಂತಿಮವಾಗಿ ಸಾವು ಸಂಭವಿಸಬಹುದು. ಮಾರ್ಬರ್ಗ್‌ ಮರಣದ ಪ್ರಮಾಣ ಶೇ.25ರಷ್ಟಿದೆ. ಆದರೆ, 1998 ಮತ್ತು 2000ರಲ್ಲಿ ಈ ವೈರಸ್‌ ಕಾಣಿಸಿಕೊಂಡಾಗ ಮರಣ ಪ್ರಮಾಣ ಶೇ.80ರಷ್ಟಿತ್ತು! ವಿಶೇಷವಾಗಿ ಕಾಂಗೊದಲ್ಲಿಈ ಜ್ವರ ಕಾಣಿಸಿಕೊಂಡ ನೂರು ಜನರ ಪೈಕಿ 80 ಜನರು ಸಾವಿಗೀಡಾಗುತ್ತಿದ್ದರು. 2005ರಲ್ಲಿಅಂಗೋಲಾದಲ್ಲಿ ಮಾರ್ಬರ್ಗ್‌ ಕಾಣಿಸಿಕೊಂಡು ಹೆಚ್ಚಿನ ಸಾವು ನೋವಿಗೆ ಕಾರಣವಾಗಿತ್ತು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

2. ಅಲ್ಲೋಲ ಕಲ್ಲೋಲ 'ಎಬೋಲಾ'
ಮಾರಣಾಂತಿಕ 'ಎಬೋಲಾ ವೈರಸ್‌' 1967ರ ಸಮಯದಲ್ಲಿಆಫ್ರಿಕಾದ ಕಾಂಗೊ ಮತ್ತೂ ಸೂಡಾನ್‌ ರಾಷ್ಟ್ರಗಳಲ್ಲಿಏಕಕಾಲಕ್ಕೆ ಕಾಣಿಸಿಕೊಂಡಿತು. ಇದು ಕೂಡ ಡೆಡ್ಲಿವೈರಸ್‌ ಆಗಿದ್ದು, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ಸಾವು ಖಚಿತ. ರಕ್ತಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿ, ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್‌ ಹರಡುತ್ತದೆ.  ರಕ್ತಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿ, ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್‌ ಹರಡುತ್ತದೆ. ತೀರಾ ಇತ್ತೀಚೆಗೆ 
ಅಂದರೆ 2014ರಲ್ಲಿಎಬೋಲಾ ಪಶ್ಚಿಮ ಆಫ್ರಿಕಾದಲ್ಲಿಕಾಣಿಸಿಕೊಂಡಿತ್ತು. ಆತಂಕಕಾರಿ ಸಂಗತಿ ಎಂದರೆ, ಈ ವರೆಗೂ ಕಂಡು ಬಂದಿರುವ ವೈರಸ್‌ಗಳ ಪೈಕಿ ಇದು ಅತ್ಯಂತ ಡೆಡ್ಲಿವೈರಸ್‌ ಎಂಬುದು ಡಬ್ಲ್ಯೂಎಚ್‌ಒ ಅಭಿಮತವಾಗಿದೆ. ವೈರಸ್‌ನಿಂದಾಗಿ ಸಾವಿನ ಪ್ರಮಾಣ ಶೇ.50ರಷ್ಟಿತ್ತು. ಸೂಡಾನ್‌ನಲ್ಲಿಈ ಪ್ರಮಾಣ ಶೇ.70ರಷ್ಟಿತ್ತು.

3. ಭಯಂಕರ 'ರೇಬಿಸ್‌'
ರೇಬಿಸ್‌ ವೈರಸ್‌ಗೆ ಈಗ ಮದ್ದು ಇದೆ. ಆದರೆ, 1920ಕ್ಕಿಂತ ಮುಂಚೆ ಈ ವೈರಸ್‌ ಮಾರಣಾಂತಿಕವಾಗಿತ್ತು. ಆ ಬಳಿಕ ರೇಬಿಸ್‌ಗೆ ಮದ್ದು ಕಂಡು ಹಿಡಿದು ಅದನ್ನು ಹತೋಟಿಗೆ ತರಲಾಗಿತ್ತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಈ ವೈರಸ್‌ನ ಉಪಟಳ ಅಷ್ಟಿಲ್ಲ. ಆದರೆ, ಈಗಲೂ ಭಾರತ ಮತ್ತು ಆಫ್ರಿಕದ ಕೆಲವು ಭಾಗಳಲ್ಲಿರೇಬಿಸ್‌ ಆಗಾಗ ಜನರಿಗೆ ತೊಂದರೆ ನೀಡುತ್ತದೆ. ರೇಬಿಸ್‌ಪೀಡಿತ ವ್ಯಕ್ತಿಯ ಮೆದುಳು ತನ್ನ ಕೆಲಸವನ್ನು ನಿಲ್ಲಿಸುತ್ತದೆ. ವಿಶೇಷವಾಗಿ ನಾಯಿ ಕಚ್ಚಿದಾಗ ಈ ವೈರಸ್‌ ಸೋಂಕು ತಗಲುತ್ತದೆ. ಕ್ರೋಧೋನ್ಮತ್ತ ಯಾವುದೇ ಪ್ರಾಣಿ ಕಚ್ಚಿದಾಗಲೂ ರೇಬಿಸ್‌ ಸೋಂಕು ಹರಡಬಹುದು. ಈಗಿನ ದಿನಗಳಲ್ಲಿರೇಬಿಸ್‌ಗೆ ಚುಚ್ಚುಮದ್ದು ಮತ್ತು ಆ್ಯಂಟಿಬಯೋಟಿಕ್ಸ್‌ಗಳು ಲಭ್ಯ ಇವೆ. ಆದರೆ, ರೇಬಿಸ್‌ಪೀಡಿತ ಪ್ರಾಣಿ ಕಚ್ಚಿದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಶೇ.100ರಷ್ಟು ಸಾವು ಖಚಿತ ಎನ್ನುತ್ತಾರೆ ತಜ್ಞರು.

4. 'ಎಚ್‌ಐವಿ' ಎಂಬ ಪಾಶವಿ
ಬಹುಶಃ ಎಚ್‌ಐವಿ ವೈರಾಣು ಸೃಷ್ಟಿಸಿದ್ದ ಆತಂಕವನ್ನು ಬೇರೆ ಯಾವುದೇ ವೈರಾಣು ಸೃಷ್ಟಿಸಿಲ್ಲವೇನೋ? ಅದರಲ್ಲೂಭಾರತದಲ್ಲಂತೂ ಎಚ್‌ಐವಿ ವೈರಾಣು ಸೃಷ್ಟಿಸಿದ್ದ ಭೀಕರತೆ ಇನ್ನೂ ಇದೆ. ಆಧುನಿಕ ಜಗತ್ತಿನ ಅತ್ಯಂತ ಡೆಡ್ಲಿವೈರಸ್‌ ಎಂದು ಎಚ್‌ಐವಿಯನ್ನು ಪರಿಗಣಿಸಲಾಗುತ್ತದೆ. ಈಗಲೂ ಜನರನ್ನು ಕೊಲ್ಲುವುದರಲ್ಲಿಈ ವೈರಾಣು ನಂಬರ್‌ ಒನ್‌ ಸ್ಥಾನದಲ್ಲಿದೆ! 1980ರಲ್ಲಿಕಾಂಗೋದಲ್ಲಿಮೊದಲ ಬಾರಿ ಎಚ್‌ಐವಿ ವೈರಾಣು ಪತ್ತೆಯಾಯಿತು. ಅಲ್ಲಿಂದ ಇಲ್ಲಿವರೆಗೂ 3.6 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಮಾನವ ಕುಲ ಈವರೆಗೆ ಕಂಡ ಅತ್ಯಂತ ಮಾರಣಾಂತಿಕ ವೈರಸ್‌ ಇದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಎಚ್‌ಐವಿಯನ್ನು ತಡೆಯಲು ಅತ್ಯಂತ ಶಕ್ತಿಶಾಲಿ ಆ್ಯಂಟಿ ವೈರಲ್‌ ಔಷಧ ಸಾಧ್ಯವಾಗಿದೆಯಾದರೂ ಈಗಲೂ ಕಡಿಮೆ ತಲಾದಾಯ ಇರುವ ರಾಷ್ಟ್ರಗಳಲ್ಲಿಎಚ್‌ಐವಿ ಆತಂಕ ಇನ್ನೂ ನಿಂತಿಲ್ಲ. ಸಬ್‌-ಸಹರನ್‌ ಆಫ್ರಿಕಾದಲ್ಲಿಪ್ರತಿ 20 ವಯಸ್ಕರಲ್ಲಿಒಬ್ಬರು ಎಚ್‌ಐವಿ ಪೀಡಿತರಾಗುತ್ತಿದ್ದಾರೆ. ಸದ್ಯ 3.1 ಕೋಟಿಯಿಂದ 3.5 ಕೋಟಿ ಜನರು ಎಚ್‌ಐವಿಪೀಡಿತರಿದ್ದಾರೆ. ಭಾರತದಲ್ಲಿಎಚ್‌ಐವಿಪೀಡಿತರ ಸಂಖ್ಯೆ ಹೆಚ್ಚಿತ್ತು. ಆದರೆ ಸರಕಾರ ಹಾಗೂ ಸಂಘಸಂಸ್ಥೆಗಳ ಜಾಗೃತಿಯ ಪರಿಣಾಮವಾಗಿ ಅದರ ಪರಿಣಾಮ ತಗ್ಗಿದೆ.

5. ಜಗತ್ತು ಕಾಡಿದ 'ಸಿಡುಬು'
1980ರಲ್ಲಿವಿಶ್ವ ಆರೋಗ್ಯ ಸಂಸ್ಥೆಯು ಇಡೀ ಜಗತ್ತನ್ನು ಸ್ಮಾಲ್‌ಪಾಕ್ಸ್‌(ಸಿಡುಬು) ಮುಕ್ತ ಮಾಡುವುದಾಗಿ ಘೋಷಿಸಿತು. ಆದರೆ, ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಮಾನವ ಕುಲ ಈ ಸ್ಮಾಲ್‌ಪಾಕ್ಸ್‌ ರೋಗಾಣುವಿನ ಅಟ್ಟಹಾಸಕ್ಕೆ ನರಳಿದೆ. ಸೋಂಕುಪೀಡಿತ ಪ್ರತಿ ಮೂವರ ಪೈಕಿ ಒಬ್ಬರ ಸಾವು ಆಗ ಖಚಿತವಾಗಿತ್ತು. ಇದರಿಂದ ಬದುಕುಳಿದವರು ಶಾಶ್ವತ ಗಾಯದ ಗುರುತುಗಳು ಮತ್ತು ಅಂಧ ಸಮಸ್ಯೆಯಿಂದ ಬಳಲಬೇಕಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. 20ನೇ ಶತಮಾನದಲ್ಲಿಈ ಸ್ಮಾಲ್‌ಪಾಕ್ಸ್‌ನಿಂದಾಗಿ ಅಂದಾಜು 30 ಕೋಟಿ ಜನರು ಸಾವಿಗೀಡಾಗಿದ್ದಾರೆ!

6. ಅಮೆರಿಕದ ಹಂಟರ್‌ 'ಹ್ಯಾಂಟ್‌'
ಹ್ಯಾಂಟ್‌ವೈರಸ್‌ ಪಲ್ಮನರಿ ಸಿಂಡ್ರೋಮ್‌(ಎಚ್‌ಪಿಎಸ್‌) ಮೊದಲ ಬಾರಿಗೆ 1993ರಲ್ಲಿಅಮೆರಿಕದಲ್ಲಿಕಾಣಿಸಿಕೊಂಡಿತು. ಈ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ, ಸೋಂಕಿತ ಇಲಿಯ ಹಿಕ್ಕೆಯು ಮನುಷ್ಯ ಸಂಪರ್ಕಕ್ಕೆ ಬಂದರೆ ಸೋಂಕು ಗ್ಯಾರಂಟಿ ತಗಲುತ್ತದೆ. 1950ರಲ್ಲಿಈ ಹ್ಯಾಂಟ್‌ವೈರಸ್‌ ತೀವ್ರವಾಗಿ ಕಾಣಿಸಿಕೊಂಡಿತು. ಕೊರಿಯನ್‌ ವಾರ್‌ ವೇಳೆ 3,000ಕ್ಕೂ ಹೆಚ್ಚು ಸೈನಿಕರು ಈ ವೈರಾಣುವಿನಿಂದ ಬಳಲಿದ್ದರು ಮತ್ತು ಪೀಡಿತರ ಪೈಕಿ ಶೇ.12ರಷ್ಟು ಯೋಧರು ಸಾವಿಗೀಡಾಗಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇದು ಆಗ ಹೊಸದಾದ ರೋಗಾಣು ಆದ್ದರಿಂದ ತಕ್ಷಣಕ್ಕೆ ಯಾವುದೇ ಚಿಕಿತ್ಸೆ ಇರಲಿಲ್ಲ. ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ಇದಕ್ಕೆ ಔಷಧವನ್ನು ಕಂಡುಹಿಡಿದವು.

7. ಇನ್‌ಫ್ಲುಯೆಂಜಾ
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಪ್ರಕಾರ, ಜಗತ್ತಿನಾದ್ಯಂತ ವರ್ಷಕ್ಕೆ ಐದು ಲಕ್ಷ ಜನರು ಈ ವೈರಸ್‌ನಿಂದಾಗಿ ಸಾವಿಗೀಡಾಗುತ್ತಾರೆ. ಇದು ಕೂಡ ಅತ್ಯಂತ ಡೆಡ್ಲಿವೈರಾಣು ಆಗಿದ್ದು, ಇದನ್ನು ಕೆಲವೊಮ್ಮೆ ಸ್ಪಾನಿಸ್‌ ಫ್ಲುಎಂದೂ ಕರೆಯಲಾಗುತ್ತದೆ. 1918ರಲ್ಲಿಇದು ಮೊದಲ ಬಾರಿಗೆ ಪತ್ತೆಯಾಯಿತು ಮತ್ತು ಈವರೆಗೆ ಸುಮಾರು 5 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಈಗ ಇಡೀ ಜಗತ್ತಿಗೆ ತಲೆನೋವು ತಂದಿರುವ ಕೋವಿಡ್‌-19(ಕೊರೊನಾ ವೈರಸ್‌) ಮರಣದ ಪ್ರಮಾಣದ ಈಇನ್‌ಫ್ಲುಯೆಂಜಾ ವೈರಸ್‌ಗಿಂತಲೂ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

8. 'ಡೆಂಗೆ' ಭೀತಿಯ ಡಂಗುರ
ಡೆಂಗೆ ವೈರಸ್‌ ಬಗ್ಗೆ ಹೇಳುವುದೇ ಬೇಡ! ಪ್ರತಿ ವರ್ಷ ಡೆಂಗೆ ವೈರಸ್‌ ಹಾವಳಿಯನ್ನು ಮಾಧ್ಯಮಗಳಲ್ಲಿಕಾಣುತ್ತವೆ. ಈ ವೈರಸ್‌ 1950ರಲ್ಲಿಫಿಲಿಪ್ಪಿನ್ಸ್‌ ಮತ್ತು ಥಾಯ್ಲೆಂಡ್‌ನಲ್ಲಿಮೊದಲ ಬಾರಿಗೆ ಪತ್ತೆಯಾಯಿತು. ಆ ಬಳಿಕ ಜಗತ್ತಿನ ಉಷ್ಣ ವಲಯ ಹಾಗೂ ಉಪಉಷ್ಣವಲಯಗಳ ರಾಷ್ಟ್ರಗಳಲ್ಲಿವ್ಯಾಪಕವಾಗಿ ಹರಡಿತು. ಸದ್ಯ, ಜಗತ್ತಿನ ಶೇ.40ರಷ್ಟು ಜನಸಂಖ್ಯೆ ಈ ಡೆಂಗೆ ಪ್ರಭಾವದ ಪ್ರದೇಶಗಳಲ್ಲಿದೆ. ಈ ವೈರಸ್‌ ಪ್ರಸರಣಕ್ಕೆ ಮುಖ್ಯ ಸೊಳ್ಳೆಗಳು ಕಾರಣ. ಈ ಸೊಳ್ಳೆಗಳಿಂದಾಗಿಯೇ ಇಡೀ ಜಗತ್ತಿನಾದ್ಯಂತ ವ್ಯಾಪಕ ರೀತಿಯಲ್ಲಿಡೆಂಗೆ ಹರಡುವಂತಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ 5 ರಿಂದ 10 ಕೋಟಿ ಜನರು ಡೆಂಗೆ ಸೋಂಕುಪಿಡೀತರಾಗುತ್ತಾರೆ. ಇತರ ವೈರಸ್‌ಗಳಿಗೆ ಹೋಲಿಸಿದರೆ ಮರಣದ ಪ್ರಮಾಣ ಕಡಿಮೆ ಇದೆ. ಶೇ.2.5ರಷ್ಟು ಮಾತ್ರ ಮರಣ ಪ್ರಮಾಣವಿದೆ. ಹಾಗಂತ ವೈರಸ್‌ ನಿಯಂತ್ರಣಕ್ಕೆ ಮದ್ದು ಇದೆ ಎಂದು ಭಾವಿಸಬೇಕಿಲ್ಲ!

9. ಮಕ್ಕಳಿಗೆ ಕಂಟಕ 'ರೋಟ್‌'
ಮಕ್ಕಳಿಗೆ ಕಂಟಕಪ್ರಾಯವಾಗಿರುವ ಈ ರೋಟ್‌ ವೈರಸ್‌ ನಿಯಂತ್ರಣಕ್ಕೆ ಈಗ ಎರಡು ಲಸಿಕೆಗಳು ಲಭ್ಯ ಇವೆ. ಶಿಶುಗಳು ಹಾಗೂ ಮಕ್ಕಳಿಗೆ ಮಾರಣಾಂತಿಕವಾಗಿ ಕಾಯಿಲೆಯನ್ನು ಸೃಷ್ಟಿಸುತ್ತಿದ್ದ ಈ ವೈರಸ್‌ ಅತ್ಯಂತ ವೇಗವಾಗಿ ಹರಡಬಲ್ಲದು. ಸದ್ಯ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಈ ವೈರಸ್‌ ಕಾರಣಕ್ಕೆ ಸಾವಿಗೀಡಾಗುವ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಇದು ಮಾರಣಾಂತಿಕವಾಗಿ ಪರಿಣಮಿಸಿದೆ. ರೀಹೈಡ್ರೇಷನ್‌ ಚಿಕಿತ್ಸೆ ಎಲ್ಲೆಡೆ ಇರದಿರುವುದೇ ಇದಕ್ಕೆ ಕಾರಣ. 2008ರಲ್ಲಿಐದು ವರ್ಷದೊಳಗಿನ 453,0000 ಮಕ್ಕಳು ಈ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ! ಆದರೆ, ಆ ಬಳಿಕ ಲಸಿಕೆಗಳನ್ನು ಪೂರೈಸಿದ ಪರಿಣಾಮ ಮರದ ಪ್ರಮಾಣದಲ್ಲಿಭಾರೀ ಕುಸಿತವಾಗಿದೆ.

10. ಎಪ್ಪಾ... 'ನಿಫಾ!'
ಬಾವಲಿ ಕಚ್ಚಿದ ಹಣ್ಣುಗಳು ಮಾನವನ ಸಂಪರ್ಕಕ್ಕೆ ಬಂದಾಗ ಈ ನಿಫಾ ಸೋಂಕು ತಗಲುತ್ತದೆ. ಇದಕ್ಕೂ ಸದ್ಯಕ್ಕೆ ಯಾವುದೇ ಔಷಧಗಳಿಲ್ಲ. 2018ರ ಮಾಹಿತಿ ಪ್ರಕಾರ 700 ಜನರಿಗೆ ನಿಫಾ ಸೋಂಕು ತಗುಲಿತ್ತು ಮತ್ತು ವೈರಾಣುಪೀಡಿತರ ಪೈಕಿ ಶೇ.50ರಿಂದ 70ರಷ್ಟು ನಿಧನರಾಗಿದ್ದರು. ನಮ್ಮ ನೆರೆಯ ಕೇರಳದಲ್ಲಿನಿಫಾ ಭಾರಿ ಭೀತಿಯನ್ನು ಸೃಷ್ಟಿಸಿತ್ತಲ್ಲದೇ 17 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.



ಮಂಗಳವಾರ, ಮಾರ್ಚ್ 3, 2020

How To Apply Dark Mode Theme To Twitter?: ಟ್ವಿಟರ್‌ಗೆ ಡಾರ್ಕ್ ಮೋಡ್ ಥಿಮ್‌ಗೆ ಅನ್ವಯಿಸುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ಇತ್ತೀಚಿನ ದಿನಗಳಲ್ಲಿ ಡಾರ್ಕ್‌ಮೋಡ್ ತುಂಬ ಜನಪ್ರಿಯವಾಗುತ್ತಿದೆ. ಬಹುತೇಕ ಎಲ್ಲಆ್ಯಪ್‌ಗಳು, ವೆಬ್‌ಸೈಟ್‌ಗಳು ಡಾರ್ಕ್‌ಮೋಡ್‌ಗೆ ಬದಲಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಪೈಕಿ ಟ್ವಿಟರ್‌ ಡಾರ್ಕ್‌ಮೋಡ್ ಅಳವಡಿಕೆ ವಿಷಯದಲ್ಲಿ ತನ್ನೆಲ್ಲ ಸ್ಪರ್ಧಿಗಳಿಗಿಂತಲೂ ಮುಂದೆ ಇದೆ. ಫೇಸ್‌ಬುಕ್‌ ಹಾಗೂ ವಾಟ್ಸಪ್‌ಗಳು ಇನ್ನೂ ಬೀಟಾ ವರ್ಷನ್‌ನಲ್ಲಿ ಡಾರ್ಕ್‌ಮೋಡ್ ಪರೀಕ್ಷಿಸುತ್ತಿವೆ.

ಕಣ್ಣು, ಬ್ಯಾಟರಿ ಉಳಿತಾಯಕ್ಕೆ ಅನುಕೂಲ

ಮೈಕ್ರೊ ಬ್ಲಾಗಿಂಗ್‌ನಲ್ಲಿ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ಈ ಟ್ವಿಟರ್‌, ಡಾರ್ಕ್‌ಮೋಡ್ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಆಧರಿತ ಫೋನ್‌ಗಳಲ್ಲೂ ಡಾರ್ಕ್‌ಮೋಡ್ ಲಭ್ಯವಿದೆ. ಮೊಬೈಲ್‌ ಅಥವಾ ಡೆಸ್ಕ್‌ಟಾಪ್‌ನಲ್ಲಿ ಡಾರ್ಕ್‌ಮೋಡ್ ಬಳಸುವುದರಿಂದ ಸಾಕಷ್ಟ ಲಾಭಗಳಿವೆ. ಬ್ರೈಟ್‌ನೆಸ್‌ ಡಿಸ್‌ಪ್ಲೇ ಅತಿಯಾದ ಬಳಕೆಯಿಂದ ನಮ್ಮ ಕಣ್ಣಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ದೃಢವಾಗಿದೆ. ಡಾರ್ಕ್‌ಮೋಡ್ ಅಳವಡಿಸಿಕೊಂಡಿದ್ದರೆ ಸ್ಕ್ರೀನ್‌ನಿಂದ ಹೊರಡುವ ಕಿರಣಗಳು ನಿಮ್ಮ ಕಣ್ಣಿಗೆ ತೊಂದರೆಯುಂಟು ಮಾಡಲಾರವು. ಇನ್ನು ಬ್ಯಾಟರಿ ಚಾರ್ಜಿಂಗ್‌ ದೃಷ್ಟಿಯಿಂದಲೂ ಡಾರ್ಕ್‌ಮೋಡ್ ಅಗತ್ಯ. ಶೇ. 50ರಷ್ಟು ಬ್ಯಾಟರಿ ಉಳಿತಾಯವಾಗಬಲ್ಲದು. ಜೊತೆಗೆ ಡಾರ್ಕ್‌ಮೋಡ್‌ನಿಂದ ಒಂದು ವಿಶಿಷ್ಟ ಸೌಂದರ್ಯ ನಿಮ್ಮ ಸ್ಮಾರ್ಟ್‌ಫೋನ್‌ಗೆ ಲಭ್ಯವಾಗುತ್ತದೆ. ಬಹಳಷ್ಟು ಜನರಿಗೆ ಟ್ವಿಟರ್‌ ಅನ್ನು ಡಾರ್ಕ್‌ಮೋಡ್‌ಗೆ ಹೇಗೆ ಬದಲಿಸಬೇಕು ಎಂಬುದು ಗೊತ್ತಿರುವುದಿಲ್ಲ. ಆ ಹಿನ್ನೆಯಲ್ಲಿ ಆ್ಯಂಡ್ರಾಯ್ಡ್‌ ಆಧರಿತ ಫೋನ್‌ಗಳಲ್ಲಿ ಟ್ವಿಟರ್‌ ಅನ್ನು ಡಾರ್ಕ್‌ಮೋಡ್‌ಗೆ ಬದಲಿಸುವ ಬಗ್ಗೆ ಇಲ್ಲಿದೆ ಮಾಹಿತಿ.




ಸಕ್ರಿಯಗೊಳಿಸುವುದು ಹೇಗೆ?

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಟ್ವಿಟರ್‌ ಆ್ಯಪ್‌ ಓಪನ್‌ ಮಾಡಿ. ಇದಾದ ಮೇಲೆ, ಮೊಬೈಲ್‌ ಸ್ಕ್ರೀನ್‌ನ ಎಡ ಭಾಗದ ಮೇಲ್ತುದಿಯಲ್ಲಿಕಾಣುವ ನಿಮ್ಮ ಪ್ರೊಫೈಲ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ, ಆ್ಯಪ್‌ನ ಕೆಳಭಾಗದ ಎಡ ಮತ್ತು ಬಲ ಭಾಗದ ತುದಿಯಲ್ಲಿಎರಡು ಐಕಾನ್‌ಗಳನ್ನು ಕಾಣಬಹುದು. ಎಡ ಭಾಗದ ಐಕಾನ್‌ 'ಬಲ್ಬ್' ರೀತಿಯಲ್ಲಿದೆ. ಬಲಭಾಗದಲ್ಲಿ ನಾಲ್ಕು ಸ್ಕ್ವೇರ್‌ ಮಾರ್ಕಿನ ಐಕಾನ್‌ ಕಾಣಬಹುದು. ಎಡ ಭಾಗದ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ತಕ್ಷಣವೇ ಡಾರ್ಕ್‌ಮೋಡ್‌ಗೆ ಬದಲಾಗುತ್ತದೆ ನಿಮ್ಮ ಟ್ವಿಟರ್‌ ಆ್ಯಪ್‌. ಅದೇ ರೀತಿ, ಮೊದಲಿನ ರೀತಿಯಾಗಿ ಬ್ರೈಟ್‌ನೆಸ್‌ ಡಿಸ್‌ಪ್ಲೇ ಬೇಕಿದ್ದರೆ ಅದೇ ಐಕಾನ್‌ ಮೇಲೆ ಮತ್ತೆ ಟ್ಯಾಪ್‌ ಮಾಡಿ ಆಗ ಮೊದಲಿನಂತಾಗುತ್ತದೆ.ಟ

ಸೆಟ್ಟಿಂಗ್ಸ್‌ ಬದಲಾವಣೆ ಹೇಗೆ?

ಟ್ವಿಟರ್‌ ಆ್ಯಪ್‌ನ ಮೇಲ್ಭಾಗದ ಎಡ ತುದಿಯಲ್ಲಿರುವ ನಿಮ್ಮ ಪ್ರೊಫೈಲ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ಅಲ್ಲಿಅನೇಕ ಆಪ್ಷನ್‌ಗಳ ಕಾಣಬಹುದು. ಇವುಗಳ ಪೈಕಿ ಕೊನೆಯಲ್ಲಿರುವ 'ಸೆಟ್ಟಿಂಗ್‌ ಮತ್ತು ಪ್ರೈವೆಸಿ' ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಆ ಬಳಿಕ ಜನರಲ್‌ ವಿಭಾಗದಲ್ಲಿರುವ 'ಡಿಸ್‌ಪ್ಲೇ ಆ್ಯಂಡ್‌ ಸೌಂಡ್‌ ಆಪ್ಷನ್‌' ಮೇಲೆ ಟ್ಯಾಪ್‌ ಮಾಡಿದಾಗ, ಮೀಡಿಯಾ, ಡಿಸ್‌ಪ್ಲೇ ಮತ್ತು ಸೌಂಡ್‌ ಸೇರಿದಂತೆ ಇತರೆ ವಿಭಾಗಗಳನ್ನು ಕಾಣಬಹುದು. 'ಡಿಸ್‌ಪ್ಲೇ' ವಿಭಾಗದಲ್ಲಿ'ಡಾರ್ಕ್‌ಮೋಡ್‌' ಇರುವುದನ್ನು ಗಮನಿಸಿ. ಇದರ ಮೇಲೆ ಕ್ಲಿಕ್‌ ಮಾಡಿದಾಗ ಬರುವ ಪಾಪ್‌ ಅಪ್‌ನಲ್ಲಿಆಫ್‌, ಆನ್‌ ಮತ್ತು 'ಆಟೊಮೆಟಿಕ್‌ ಅಟ್‌ ಸನ್‌ಸೆಟ್‌' ಎಂಬ ಆಯ್ಕೆಗಳು ಕಾಣಸಿಗುತ್ತವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಪ್ಷನ್‌ ಆಯ್ಕೆ ಮಾಡಿಕೊಳ್ಳಬಹುದು. ಡಾರ್ಕ್‌ಮೋಡ್‌ ಆಯ್ಕೆಯು ನಿಮಗೆ ಡಾರ್ಕ್‌ಮೋಡ್‌ ಅನ್ನು ಸ್ವಯಂ ಆಗಿ ಸೂರ್ಯೋದಯ ಬಳಿಕ ಸಕ್ರಿಯಗೊಳಿಸುವ ಆಯ್ಕೆಯನ್ನು ನೀಡುತ್ತದೆ. ನಿಮಗೆ ರಾತ್ರಿಯ ವೇಳೆ ಮಾತ್ರವೇ ಟ್ವಿಟರ್‌ ಡಾರ್ಕ್‌ಮೋಡ್‌ನಲ್ಲಿದ್ದರೆ ಚೆನ್ನ ಎನಿಸಿದರೆ ಈ ಆಟೊಮೆಟಿಕ್‌ ಆಪ್ಷನ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಡಿಮ್‌ ಮತ್ತು ಲೈಟ್ಸ್‌ ಔಟ್

ಡಿಸ್‌ಪ್ಲೇ ವಿಭಾಗದಲ್ಲಿನೀವು 'ಡಾರ್ಕ್‌ಮೋಡ್‌ ಅಪೀಯರನ್ಸ್‌' ಎಂಬ ಆಪ್ಷನ್‌ ಅನ್ನು ಗಮನಿಸಬಹುದು. ಡಾರ್ಕ್‌ಮೋಡ್‌ ಆಯ್ಕೆ ಕೆಳಭಾಗದಲ್ಲೇ ಇದೆ. ಒಂದು ವೇಳೆ ನೀವು 'ಡಾರ್ಕ್‌ಮೋಡ್‌ ಅಪೀಯರನ್ಸ್‌' ಮೇಲೆ ಟ್ಯಾಪ್‌ ಮಾಡಿದರೆ, 'ಡಿಮ್‌' ಮತ್ತು 'ಲೈಟ್ಸ್‌ ಔಟ್‌' ಆಪ್ಷನ್‌ಗಳಿರುವುದನ್ನು ಕಾಣುತ್ತೀರಿ. ಡಿಮ್‌ ಡಿಫಾಲ್ಟ್‌ ಆಪ್ಷನ್‌ ಆಗಿದ್ದು, ಟ್ವಿಟರ್‌ ಡಾರ್ಕ್ ನ್ಯಾವಿ ಬಣ್ಣವನ್ನು ಹಿನ್ನೆಲೆಯಾಗಿ ಒದಗಿಸುತ್ತದೆ. ಒಂದು ವೇಳೆ, ನೀವು ಲೈಟ್ಸ್‌ ಔಟ್‌ ಆಪ್ಷನ್‌ ಆಯ್ಕೆ ಮಾಡಿಕೊಂಡರೆ, ಟ್ವಿಟರ್‌ ಪೇಜ್‌ನ ಹಿನ್ನೆಲೆ ಸಂಪೂರ್ಣವಾಗಿ ಕಪ್ಪಾಗಿ ಬದಲಾಗುತ್ತದೆ. ವಿಶೇಷವಾಗಿ ಅಮೋಲಿಡ್ ಡಿಸ್‌ಪ್ಲೇಗಳಲ್ಲಿಈ ಆಪ್ಷನ್‌ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಸೋಮವಾರ, ಫೆಬ್ರವರಿ 24, 2020

Joaquin Phoenix: ಅದ್ಭುತ ನಟ, ಹೃದಯವಂತ ವಾಕಿನ್‌

ಮಲ್ಲಿಕಾರ್ಜುನ ತಿಪ್ಪಾರ
''ಹಸುವಿಗೆ ಕೃತಕ ಗರ್ಭಧಾರಣೆ ಮಾಡಲು ಮತ್ತು ಅದರ ಕರುವಿಗೆ ಸ್ವಾಭಾವಿಕವಾಗಿ ದಕ್ಕಬೇಕಿದ್ದನ್ನು ಕಸಿದುಕೊಳ್ಳುವ ಹಕ್ಕು ನಮಗಿದೆ ಎಂದು ನಾವು ಭಾವಿಸಿಕೊಳ್ಳುತ್ತಿದ್ದೇವೆ. ಹಸುವಿನ ಬೇಗುದಿಯ ಕೂಗಿಗೆ ಯಾವುದೂ ಸಮಾಧಾನ ತರಲಾರದು. ಅದರ ಕರುವಿಗೆ ಮಾತ್ರವೇ ಸಿಗಬೇಕಾದ ಹಾಲನ್ನು ನಾವು ನಮ್ಮ ಕಾಫಿ ಮತ್ತು ಊಟಕ್ಕೆ ಬಳಸಿಕೊಳ್ಳುತ್ತಿದ್ದೇವೆ...''










ಜೋಕರ್‌' ಎಂಬ ವಿಶಿಷ್ಟ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ 'ಆಸ್ಕರ್‌' ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ನಟ ವಾಕಿನ್‌ ಫಿನಿಕ್ಸ್‌ ಅವರ ಅಂತರಾಳದ ಮಾತುಗಳು ಇವು. ಆಸ್ಕರ್‌ ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿಆಡಿದ ಈ ಮಾತುಗಳಿಗೆ ಇಡೀ ಜಗತ್ತೇ ತಲೆದೂಗುತ್ತಿದೆ. ವಾಕಿನ್‌ ಅವರ ಸ್ಫೂರ್ತಿದಾಯಕ ಮಾತುಗಳಿಗೆ ಮಾರುಹೋಗಿ ಸುಮಾರಷ್ಟು ಜನರು ವೆಗಾನ್‌(ಸಂಪೂರ್ಣ ಸಸ್ಯಾಹಾರಿ)ಗಳಾಗುತ್ತಿದ್ದಾರೆ. ಒಬ್ಬ ಸೆಲಿಬ್ರಿಟಿ ನಟನೊಬ್ಬನ ಪ್ರಾಮಾಣಿಕ ಕಾಳಜಿಗೆ ಸಲ್ಲುತ್ತಿರುವ ಗೌರವ ಇದು.

ಬಹಳಷ್ಟು ನಟ- ನಟಿಯರು ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವುದು ಅತಿ ವಿರಳ. ಆದರೆ, ವಾಕಿನ್‌ ಫಿನಿಕ್ಸ್‌ನಂಥ ನಟರು ತಮಗೆ ಸರಿ ಅನ್ನಿಸಿದ್ದನ್ನು ನಿರ್ಭೀತಿಯಿಂದ ಮಾಡುತ್ತಾರೆ. ಹಾಗಾಗಿಯೇ ಆಸ್ಕರ್‌ನಂಥ ಬಹುದೊಡ್ಡ ವೇದಿಕೆಯಲ್ಲಿಗೋ ರಕ್ಷಣೆಯ ಆ್ಯಕ್ಟಿವಿಸಮ್‌ ಬಗ್ಗೆ ಮಾತನಾಡುತ್ತಾರೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿದನದ ಮಾಂಸ ಆಹಾರ ಸಂಸ್ಕೃತಿಯ ಭಾಗವಾಗಿದೆ. ಹಾಗಾಗಿ, ಆಸ್ಕರ್‌ ವೇದಿಕೆಯಲ್ಲಿಗೋರಕ್ಷಣೆಯ ಬಗ್ಗೆ ಮಾತನಾಡಿರುವ ಫಿನಿಕ್ಸ್‌ ಅವರ ಮಾತುಗಳಿಗೆ ಹೆಚ್ಚು ಮಹತ್ವವಿದೆ. ಫಿನಿಕ್ಸ್‌ ಅವರ ಗೋ ಕಾಳಜಿಗೆ ಉದಾಹರಣೆ ಎಂಬಂತೆ, ಆಸ್ಕರ್‌ ಸ್ವೀಕರಿಸಿದ ಎರಡು ದಿನಗಳ ಬಳಿಕ ಅವರು ಹಸು ಮತ್ತು ಅದರ ಕರುವನ್ನು ರಕ್ಷಿಸಿ ಸುದ್ದಿಯಾದರು!

ಚಿಕ್ಕ ವಯಸ್ಸಿನಿಂದಲೇ ವೆಗಾನ್‌ ಆಗಿರುವ ವಾಕಿನ್‌ ಫಿನಿಕ್ಸ್‌ ಹಾಲಿವುಡ್‌ನಲ್ಲಿಬಹುದೊಡ್ಡ ಹೆಸರು. ಒಂದೆರಡು ಬಾರಿ ಆಸ್ಕರ್‌ ಪ್ರಶಸ್ತಿ ಕಣದಲ್ಲಿದ್ದರೂ ಸಂದಿರಲಿಲ್ಲ. ಆದರೆ, ಜೋಕರ್‌ ಸಿನಿಮಾ ಅವರ ಆ ಕೊರತೆಯನ್ನು ನೀಗಿಸಿದೆ. ಅವರು ಎಷ್ಟು ದೊಡ್ಡ ನಟರೋ, ಎಷ್ಟು ಸಹಜ ಅಭಿನಯ ನೀಡುತ್ತಾರೋ ಅಷ್ಟೇ ಅಂತಃಕರಣಿ; ನಿಸರ್ಗ ಪ್ರೇಮಿ. ಸಾಮಾಜಿಕ ಕಾರ್ಯಕರ್ತ. ಆಫ್ರಿಕಾದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಉದಾರಿ. ನಿಗರ್ವಿ ಮತ್ತು ಸೀದಾ ಸಾದಾ ವ್ಯಕ್ತಿ.

ವಾಕಿನ್‌ ಫಿನಿಕ್ಸ್‌ ಅವರ ಪೂರ್ತಿ ಹೆಸರು ವಾಕಿನ್‌ ರಫೇಲ್‌ ಫಿನಿಕ್ಸ್‌. 1974ರ ಅಕ್ಟೋಬರ್‌ 28ರಂದು ಪೋರ್ಟರಿಕೊ ಎಂಬ ಕೆರೆಬಿಯನ್‌ ದ್ವೀಪದ ಸ್ಯಾನ್‌ ಜುವಾನ್‌ನ ರಿಯೊ ಪಿಡ್ರಾಸ್‌ನಲ್ಲಿಜನಿಸಿದರು. ಪೋರ್ಟರಿಕೊ ದ್ವೀಪ ಅಮೆರಿಕ ನಿಯಂತ್ರಿತ ಪ್ರದೇಶ. ತಾಯಿ ಅರ್ಲಿನ್‌ ಫಿನಿಕ್ಸ್‌. ತಂದೆ ಜಾನ್‌ ಲೀ ಬಾಟಮ್‌. ಈ ದಂಪತಿಯ ಐದು ಮಕ್ಕಳ ಪೈಕಿ ವಾಕಿನ್‌ ಮೂರನೆಯವರು. ರೇನ್‌, ಸಮ್ಮರ್‌ ಮತ್ತು ಲಿಬರ್ಟಿ ಸಹೋದರಿಯರು ಮತ್ತು ರಿವರ್‌ ಸಹೋದರ. ವಿಶೇಷ ಎಂದರೆ ಇಷ್ಟೂ ಜನರು ಸಿನಿಮಾ ರಂಗದಲ್ಲಿದ್ದಾರೆ. ನಟ, ನಟಿಯರು. 'ಚಿಲ್ಡ್ರನ್‌ ಆಫ್‌ ಗಾಡ್‌' ಎಂಬ ಪಂಥವನ್ನು ಅನುಸರಿಸುತ್ತಿದ್ದ ಇವರ ತಂದೆ ತಾಯಿ ದಕ್ಷಿಣ ಅಮೆರಿಕ ತುಂಬ ಪ್ರವಾಸ ಮಾಡಿ, ಪ್ರಚಾರ ಮಾಡಲು ಪ್ರಯತ್ನಿಸಿದರು. ಆದರೆ, ಮುಂದೆ ಭಿನ್ನಾಭಿಪ್ರಾಯದಿಂದಾಗಿ ಈ ಪಂಥವನ್ನು ತೊರೆದು 1977ರಲ್ಲಿಅಮೆರಿಕಕ್ಕೆ ಮರಳಿದಾಗ ಫಿನಿಕ್ಸ್‌ಗೆ ಮೂರು ವರ್ಷ. ಫಿನಿಕ್ಸ್‌ ಸಹೋದರ ಮತ್ತು ಸಹೋದರಿಯರ ಹೆಸರು ಗಮನಿಸಿದರೆ ನಿಮಗೆ ನಿಸರ್ಗದ ಛಾಯೆ ಎದ್ದು ಕಾಣುತ್ತದೆ. ಬಹುಶಃ ಇದೇ ಮುಂದೆ ಫಿನಿಕ್ಸ್‌ ಕೂಡ ನಿಸರ್ಗಪ್ರೇಮಿಯಾಗಲು ಪ್ರೇರಣೆಯಾಯಿತೇನೊ?

ಬಾಲ್ಯ ಕಲಾವಿದನಾಗಿ ಫಿನಿಕ್ಸ್‌ ಸಹೋದರ ರಿವರ್‌ ಮತ್ತು ಸಿಸ್ಟರ್‌ ಸಮ್ಮರ್‌ ಜೊತೆಗೂಡಿ ನಟನೆಗಿಳಿದರು. ಸ್ಪೇಸ್‌ಕ್ಯಾಂಪ್‌(1986)ನಲ್ಲಿವಾಕಿನ್‌ಗೆ ಪ್ರಮುಖ ಪಾತ್ರ ದೊರೆಯಿತು. 1995ರ ತನಕ ಫಿನಿಕ್ಸ್‌ ಅವರ ಬೆಳ್ಳಿತೆರೆ ಹೆಸರು ಲೀಫ್‌ ಫಿನಿಕ್ಸ್‌ ಎಂದಿತ್ತು. 'ಟು ಡೈ ಫಾರ್‌'(1995) ಸಿನಿಮಾದಲ್ಲಿಅವರ ಮೂಲ ಹೆಸರು ಕಾಣಿಸಿಕೊಂಡಿತು. ವಿಶೇಷ ಎಂದರೆ, 'ಟು ಡೈ ಫಾರ್‌' ಚಿತ್ರವು ಫಿನಿಕ್ಸ್‌ ಅವರ ಸಿನಿಮಾ ಬದುಕಿಗೆ ಗಟ್ಟಿ ಅಡಿಪಾಯ ಹಾಕಿತು. ಈ ಕಾಮಿಡಿ-ಡ್ರಾಮಾ ಫಿಲ್ಮ್‌ನಲ್ಲಿಫಿನಿಕ್ಸ್‌ ನಿರ್ವಹಿಸಿದ ಪಾತ್ರಕ್ಕೆ ಅಪಾರ ಮೆಚ್ಚುಗೆ ದೊರೆಯಿತು. ಬಳಿಕ ಅವರು ಪಿರಿಯಾಡಿಕಲ್‌ ಚಿತ್ರ 'ಕ್ವಿಲ್ಸ್‌'(2000)ನಲ್ಲಿಕಾಣಿಸಿಕೊಂಡರು. ಇದೇ ಅವಧಿಯಲ್ಲಿತೆರೆ ಕಂಡ ಐತಿಹಾಸಿಕ ಕಥಾವಸ್ತು ಹೊಂದಿದ್ದ 'ಗ್ಲಾಡಿಯೇಟರ್‌' ಕೂಡ ಫಿನಿಕ್ಸ್‌ಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಈ ಚಿತ್ರದ 'ಕೊಮೆಡೊಸ್‌' ಪಾತ್ರ ಎಷ್ಟು ಪ್ರಭಾವ ಬೀರಿತು ಎಂದರೆ, ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಆಸ್ಕರ್‌ಗೆ ನಾಮಿನೇಟ್‌ ಆದರು. 2005ರಲ್ಲಿತೆರೆಕಂಡ 'ವಾಕ್‌ ದಿ ಲೈನ್‌' ಸಿನಿಮಾದಲ್ಲಿನಿರ್ವಹಿಸಿದ ಮ್ಯೂಸಿಯನ್‌ ಜಾನಿ ಕ್ಯಾಶ್‌ ಪಾತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತಲ್ಲದೇ ಆಸ್ಕರ್‌ನ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್‌ ಆದರು. ಕುಡುಕ ಯೋಧನ ಪಾತ್ರ ನಿರ್ವಹಣೆಯ 'ದಿ ಮಾಸ್ಟರ್‌'(2012), 'ದಿ ವಿಲೇಜ್‌'(2004), ಐತಿಹಾಸಿಕ ಕಥಾವಸ್ತು ಹೊಂದಿದ 'ಹೊಟೇಲ್‌ ರವಂಡಾ'(2004), ರೋಮಾಂಟಿಕ್‌ ಡ್ರಾಮಾ 'ಹರ್‌'(2013), ಅಪರಾಧ ವಿಡಂಬನಾತ್ಮಕ ಕಥಾವಸ್ತುವಿರುವ 'ಇನ್‌ಹೆರೆಂಟ್‌ ವೈಸ್‌'(2014), ಸೈಕಾಲಜಿಕಲ್‌ ಥ್ರಿಲ್ಲರ್‌ 'ಯು ವೇರ್‌ ನೆವರ್‌ ರಿಯಲೀ ಹಿಯರ್‌'(2017) ಚಿತ್ರಗಳು ವಾಕಿನ್‌ ಫಿನಿಕ್ಸ್‌ಗೆ ಹಾಲಿವುಡ್‌ನಲ್ಲಿಗಟ್ಟಿ ಸ್ಥಾನ ಒದಗಿಸಿದವು. 2019ರಲ್ಲಿತೆರೆ ಕಂಡ 'ಜೋಕರ್‌' ಸಿನಿಮಾದ ಪಾತ್ರ ಫಿನಿಕ್ಸ್‌ಗೆ ಆಸ್ಕರ್‌ ತಂದುಕೊಟ್ಟಿತು. ಆ ಚಿತ್ರದಲ್ಲಿಫಿನಿಕ್ಸ್‌ ಅಭಿನಯಕ್ಕೆ ಮನಸೋಲದವರೇ ಇಲ್ಲ.

ವಾಕಿನ್‌ ಫಿನಿಕ್ಸ್‌ ಕೇವಲ ನಟನೆಯಲ್ಲಿತಮ್ಮನ್ನು ತೊಡಗಿಸಿಕೊಂಡಿಲ್ಲ. ಮ್ಯೂಸಿಕ್‌ ವಿಡಿಯೊಗಳಿಗೆ ನಿರ್ದೇಶನ ಮಾಡಿದ್ದಾರೆ, ಅನೇಕ ಸಿನಿಮಾ ಮತ್ತು ಟಿವಿ ಶೋ ನಿರ್ಮಾಣ ಮಾಡಿದ್ದಾರೆ. 'ವಾಕ್‌ ದಿ ಲೈನ್‌' ಚಿತ್ರದ ಸಂಗೀತ ರೆಕಾರ್ಡಿಂಗ್‌ಗಾಗಿ ಅವರಿಗೆ ಗ್ರ್ಯಾಮಿ ಅವಾರ್ಡ್‌ ಕೂಡ ಬಂದಿದೆ. ಅವರಿಗೆ ಎರಡು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳೂ ಬಂದಿವೆ.

ಫಿನಿಕ್ಸ್‌ ಮಾನವೀಯ ಸಂಘಟನೆಗಳಲ್ಲಿತೊಡಗಿಸಿಕೊಂಡಿದ್ದಾರೆ. ಅನೇಕ ಸೇವಾ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌, ದಿ ಆರ್ಟ್‌ ಆಫ್‌ ಎಲಿಸಿಯಮ್‌, ಹಾರ್ಟ್‌, ಪೀಸ್‌ ಅಲಾಯನ್ಸ್‌ ಸೇರಿದಂತೆ ಅನೇಕ ಸಂಘಟನೆಗಳಿಗೆ ನೆರವು ನೀಡಿದ್ದಾರೆ; ಅವುಗಳ ಕೆಲಸಕಾರ್ಯಗಳಲ್ಲಿತೊಡಗಿಸಿಕೊಂಡಿದ್ದಾರೆ. 'ದಿ ಲಂಚ್‌ಬಾಕ್ಸ್‌ ಫಂಡ್‌' ಎಂಬ ಸರಕಾರೇತರ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯು ದಕ್ಷಿಣ ಆಫ್ರಿಕಾದ ಸೊವೆಟೊ ನಗರದ ಶಾಲಾ ಮಕ್ಕಳಿಗೆ ನಿತ್ಯ ಊಟ ಪೂರೈಸುತ್ತದೆ. ವಿಶೇಷ ಎಂದರೆ, ಫಿನಿಕ್ಸ್‌ ಅವರ ಮಾಜಿ ಪ್ರೇಯಸಿ ದಕ್ಷಿಣಾ ಆಫ್ರಿಕಾದ ಮಾಡೆಲ್‌ ತೋಪಾಜ್‌ ಪೇಜ್‌-ಗ್ರೀನ್‌ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇಷ್ಟಲ್ಲದೆ, ವೆಗನಿಸಮ್‌ ಪ್ರಚುರ ಪಡಿಸುವುದಕ್ಕಾಗಿ ಫಿನಿಕ್ಸ್‌ ಅನೇಕ ಪ್ರಾಣಿದಯಾ ಸಂಘಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಫೆನ್ಸ್‌ ಆಫ್‌ ಆ್ಯನಿಮಲ್ಸ್‌, ಪೆಟಾ ಸದಸ್ಯರಾಗಿದ್ದಾರೆ. ಪ್ರಾಣಿ ಚರ್ಮದಿಂದ ಮಾಡಿದ ಬಟ್ಟೆಗಳನ್ನು ಸಿನಿಮಾದಲ್ಲೂ ತೊಡುವುದಿಲ್ಲ!