ಸೋಮವಾರ, ಡಿಸೆಂಬರ್ 23, 2019

How to download YouTube Video: ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ಈಗೇನಿದ್ದರೂ ವಿಡಿಯೊಗಳ ಕಾಲ. ಎಲ್ಲವೂ ವಿಡಿಯೊಮಯ. ನಿಮಗನ್ನಿಸಿದ್ದನ್ನು ಪಠ್ಯ ಅಥವಾ ಚಿತ್ರದ ಮೂಲಕವೇ ಹೇಳಬೇಕು ಎನ್ನುವ ಕಾಲ ಈಗಿಲ್ಲ. ಕೈಯಲ್ಲಿರುವ ಸ್ಮಾರ್ಟ್‌ಫೋನ್‌ ಮೂಲಕ ನಿಮಗನ್ನಿಸಿದ್ದನ್ನು ಚಿಕ್ಕ ವಿಡಿಯೊ ಮಾಡಿಯೋ ಅಥವಾ ನೀವು ನೋಡಿದ್ದ ಸ್ಥಳ, ಘಟನೆ ಮತ್ತಿತರ ಸಂಗತಿಯನ್ನು ವಿಡಿಯೊ ಮಾಡಿ ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿಷೇರ್‌ ಮಾಡಿಕೊಂಡರೆ ಸಾಕು. ಸಹಸ್ರಾರು ಜನರು ಅದನ್ನು ನೋಡುತ್ತಾರೆ; ತಮಗನ್ನಿಸಿದ್ದನ್ನು ಕಮೆಂಟ್‌ ರೂಪದಲ್ಲಿಫೀಡ್‌ಬ್ಯಾಕ್‌ ನೀಡುತ್ತಾರೆ. ಹಾಗಾಗಿ, ಇದು ‘ವಿಡಿಯೊ ಜಮಾನ’ ಎಂದು ಹೇಳಿದರೆ ತಪ್ಪಲ್ಲ.
ಈಗ ವಿಡಿಯೊ ಆಧರಿತ ಆ್ಯಪ್‌ಗಳೇ ಸಾಕಷ್ಟಿವೆ. ಆದರೆ, ಯೂಟ್ಯೂಬ್‌ ಒದಗಿಸುವ ಸೇವೆ ಮಾತ್ರ ಅನನ್ಯವಾಗಿರುತ್ತದೆ ಮತ್ತು ಗುಣಮಟ್ಟದಿಂದ ಕೂಡಿರುತ್ತದೆ. ಹಾಗಾಗಿ, ವಿಡಿಯೊ ಪ್ರಪಂಚದಲ್ಲಿಈಗಲೂ ಯೂಟ್ಯೂಬ್‌ ಅನಭಿಷಿಕ್ತ ದೊರೆಯ ರೀತಿಯಲ್ಲಿದೆ. ಯೂಟ್ಯೂಬ್‌ ಅನ್ನೋದು ವಿಡಿಯೊಗಳ ಸಮುದ್ರ. ಅಲ್ಲಿ, ಸಿನಿಮಾದಿಂದ ಹಿಡಿದು ಕಾರ್‌ ಕ್ಲೀನ್‌ ಹೇಗೆ ಮಾಡೋದು ಎಂದು ಹೇಳುವ ನಾನಾ ರೀತಿಯ, ನಾನಾ ವರ್ಗದ, ನಾನಾ ವಿಷಯದ ವಿಡಿಯೊಗಳು ಇವೆ. ಬೇಕು, ಬೇಡದ್ದು ಎಲ್ಲವಿಡಿಯೊಗಳು ನಿಮಗೆ ದೊರೆಯುತ್ತವೆ. ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬುದು ನಿಮಗೆ ಬಿಟ್ಟದ್ದು. ಹೀಗೆ, ಯೂಟ್ಯೂಬ್‌ನಲ್ಲಿನೋಡಿದ ವಿಡಿಯೊಗಳನ್ನು ನಿಮ್ಮ ಡೆಸ್ಕ್‌ಟಾಪ್‌ ಇಲ್ಲವೇ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳವುದು ಹೇಗೆ? ಯಾಕೆಂದರೆ, ಡೌನ್‌ಲೋಡ್‌ ಮಾಡಿಕೊಳ್ಳುವ ಆಯ್ಕೆಯನ್ನು ಯೂಟ್ಯೂಬ್‌ ನಿಮಗೆ ನೀಡುವುದಿಲ್ಲ.
ಯೂಟ್ಯೂಬ್‌ನಿಂದ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅನೇಕ ಆ್ಯಪ್‌ಗಳಿವೆ. ಆದರೆ, ಇವುಗಳ ಹೊರತಾಗಿಯೂ ಸಿಂಪಲ್‌ ಆದ ಸ್ಟೆಪ್‌ಗಳ ಮೂಲಕ ಸ್ಮಾರ್ಟ್‌ಫೋನ್‌ಲ್ಲಿಯೂಟ್ಯೂಬ್‌ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಸಿಂಪಲ್‌ ಆಗಿ ಇಲ್ಲಿವಿವರಿಸಲಾಗಿದೆ.


 ಫೋನ್‌ನಲ್ಲಿಡೌನ್‌ಲೋಡ್‌ ಮಾಡಿಕೊಳ್ಳಲು ಹೀಗೆ ಮಾಡಿ....
- ಯೂಟ್ಯೂಬ್‌ ಆ್ಯಪ್‌ಗೆ ಹೋಗಿ. ನೀವು ಡೌನ್‌ಲೋಡ್‌ ಮಾಡಿಕೊಳ್ಳಲು ಇಚ್ಛಿಸಿರುವ ವಿಡಿಯೊ ಅನ್ನು ಓಪನ್‌ ಮಾಡಿಕೊಳ್ಳಿ
- ವಿಡಿಯೊ ಓಪನ್‌ ಮಾಡಿದ ಮೇಲೆ, ಪ್ಲೇನಲ್ಲಿರುವ ವಿಡಿಯೊವನ್ನು ಪಾಜ್‌ ಮಾಡಿ. ಆಗ ವಿಡಿಯೊ ಕೆಳಗೆ  ನೀವು ಷೇರ್‌ ಬಟನ್‌ ನೋಡಬಹುದು.
- ಆ ಷೇರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆಗ ಕಾಪಿ ಲಿಂಕ್‌ ಎಂಬ ಆಪ್ಷನ್‌ ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ ಆ ಲಿಂಕ್‌ ಕಾಪಿ ಮಾಡಿಕೊಳ್ಳಿ.
- ಲಿಂಕ್‌ ಕಾಪಿ ಮಾಡಿಕೊಂಡ ಮೇಲೆ ನಿಮ್ಮ ಕ್ರೋಮ್‌ ಬ್ರೌಸರ್‌ಗೆ ಹೋಗಿ.
- ಬ್ರೌಸರ್‌ನಲ್ಲಿಹೊಸ ಟ್ಯಾಬ್‌ ಓಪನ್‌ ಮಾಡಿ, ಕಾಪಿ ಮಾಡಿಕೊಂಡ ಲಿಂಕ್‌ ಅನ್ನು ಸರ್ಚ್‌ ಬಾಕ್ಸ್‌ನಲ್ಲಿಪೇಸ್ಟ್‌ ಮಾಡಿ.
- ನೀವು ಆಯ್ಕೆ ಮಾಡಿದ ವಿಡಿಯೊ ಬ್ರೌಸರ್‌ನಲ್ಲಿತೆರೆದುಕೊಳ್ಳುತ್ತದೆ.
- ವಿಡಿಯೊ ಓಪನ್‌ ಆದ ಮೇಲೆ, ಯೂಟ್ಯೂಬ್‌ನಲ್ಲಿರುವ y ಅಕ್ಷ ರದ ಹಿಂದೆ ಕರ್ಸರ್‌ ತೆಗೆದುಕೊಂಡು ಬನ್ನಿ
- ಆ ನಂತರ ಯೂಟ್ಯೂಬ್‌ ಅಕ್ಷ ರ ಹಿಂದಿರುವ ಎಲ್ಲವನ್ನು ಅಳಸಿ ಹಾಕಿ.
-  http://m. ಅಳಸಿ ಹಾಕಿದ ಮೇಲೆ, ಯುಟೂಬ್‌ ಪದಕ್ಕಿಂತ ಮುಂಚೆ ಅದೇ ಜಾಗದಲ್ಲಿ ss ಟೈಪ್‌ ಮಾಡಿ.
- ಇಷ್ಟಾದ ಮೇಲೆ ಸರ್ಚ್‌ ಮೇಲೆ ಕ್ಲಿಕ್‌ ಮಾಡಿ. ಆಗ ಹೊಸ ಲಿಂಕ್‌ ತೆರೆದುಕೊಳ್ಳುತ್ತದೆ.
ಇಷ್ಟು ಮಾಡಿದ ಮೇಲೆ ನೀವು ಆಯ್ಕೆ ಮಾಡಿಕೊಂಡಿದ್ದ ವಿಡಿಯೊ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದೇ ಪದ್ಧತಿಯನ್ನು ನೀವು ಡೆಸ್ಕ್‌ಟಾಪ್‌ ಬಳಸಿಕೊಂಡು ಯೂಟ್ಯೂಬ್‌ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಪ್‌ಗಳನ್ನು ಬಳಸಿಕೊಂಡಿಯೂ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದಕ್ಕಾಗಿಯೇ ಸಾಕಷ್ಟು ಆ್ಯಪ್‌ಗಳೂ ಇವೆ. ಆದರೆ ಎಲ್ಲಕ್ಕಿಂತ ಮೇಲು ಎಂದರೆ, ಈ ಮೇಲೆ ಹೇಳಿದ ಸಿಂಪಲ್‌ ಟಿಫ್ಸ್‌ ಬಳಸಿಕೊಂಡು ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳುವುದು. ಇದರಿಂದ ಅನಗತ್ಯವಾಗಿ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ತಪ್ಪುತ್ತದೆ.

 ಯೂಟ್ಯೂಬ್‌ ಬಗ್ಗೆ ನಿಮಗೆ ಗೊತ್ತಾ?
- 2005 ಫೆಬ್ರವರಿ 14ರಂದು ಯೂಟ್ಯೂಬ್‌ ಅನ್ನು ಸ್ಟಿವ್‌ ಚೆನ್‌, ಚಾದ್‌ ಹರ್ಲಿ ಮತ್ತು ಜಾವೆದ್‌ ಕರೀಮ್‌ ಎಂಬುವರು ಆರಂಭಿಸಿದರು.
- ಜಗತ್ತಿನಲ್ಲೇ 2ನೇ ಅತಿ ಹೆಚ್ಚು ಭೇಟಿ ನೀಡುವವರ ವೆಬ್‌ಸೈಟ್‌ ಎಂಬ ಖ್ಯಾತಿ ಇದೆ.
- 1,300,000,000 ಇದು ಯೂಟ್ಯೂಬ್‌ ಬಳಕೆದಾರರ ಸಂಖ್ಯೆ.
- ಪ್ರತಿ ದಿನ 5 ಕೋಟಿ ವಿಡಿಯೊಗಳನ್ನು ಜಗತ್ತಿನಾದ್ಯಂತ ನೋಡಲಾಗುತ್ತದೆ.
- ನಿತ್ಯ 3 ಕೋಟಿ ಜನರು ಯೂಟ್ಯೂಬ್‌ಗೆ ಭೇಟಿ ನೀಡುತ್ತಾರೆ.
- ಒಟ್ಟು ಯೂಟ್ಯೂಬ್‌ ನೋಡುವವರ ಪೈಕಿ ಅರ್ಧದಷ್ಟು ಜನರು ಮೊಬೈಲ್‌ ಬಳಕೆದಾರರಾಗಿದ್ದಾರೆ.


ಈ ಲೇಖನವು ವಿಜಯ ಕರ್ನಾಟಕದ 2019ರ ಡಿಸೆಂಬರ್ 23ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಶುಕ್ರವಾರ, ಡಿಸೆಂಬರ್ 20, 2019

Donald Trump Impeachment: ಡೊನಾಲ್ಡ್‌ ಆಗ್ತಾರಾ ಬೋಲ್ಡ್‌?

- ಮಲ್ಲಿಕಾರ್ಜುನ ತಿಪ್ಪಾರ
ನಿರೀಕ್ಷೆಯಂತೆ ಅಮೆರಿಕದ ಕಾಂಗ್ರೆಸ್‌ನ ಹೌಸ್‌ ಆಫ್‌ ರಿಪ್ರಸೆಂಟೇಟಿವ್‌ನಲ್ಲಿಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ದಂಡನೆಗೆ ಗೆಲುವು ದೊರೆತಿದೆ. ಇನ್ನು ಮುಂದಿನ ಪ್ರಕ್ರಿಯೆ ಸೆನೆಟ್‌ನಲ್ಲಿನಡೆಯಲಿದ್ದು, ಇಲ್ಲಿರಿಪಬ್ಲಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸದನದಲ್ಲಿವಾಗ್ದಂಡನೆ ಪ್ರಕ್ರಿಯೆ ನಡೆದು, ಟ್ರಂಪ್‌ ವಿರುದ್ಧ ಗೆಲುವು ದೊರೆತರೆ ಅವರು ಹುದ್ದೆಯನ್ನು ಕಳೆದುಕೊಳ್ಳುತ್ತಾರೆ, ಇಲ್ಲದಿದ್ದರೆ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.

ಅಮೆರಿಕದ 45ನೇ ಅಧ್ಯಕ್ಷರಾಗಿರುವ ಡೊನಾಲ್ಡ್‌ ಟ್ರಂಪ್‌ ಅವರು ಸದಾ ವಿವಾದದಿಂದಲೇ ಸುದ್ದಿಯಾಗಿದ್ದು, ಇದೀಗ ತಮ್ಮ ಅವಧಿಯ ಕೊನೆಯ ಹಂತದಲ್ಲಿವಾಗ್ದಂಡನೆಗೆ ಗುರಿಯಾಗುತ್ತಿದ್ದಾರೆ. ಅಮೆರಿಕ ಸಂಸತ್ತಿನ 230 ವರ್ಷಗಳ ಇತಿಹಾದಲ್ಲಿಈ ವರೆಗೆ ಟ್ರಂಪ್‌ ಅವರನ್ನು ಸೇರಿಸಿಕೊಂಡು ಐವರು ಅಧ್ಯಕ್ಷರು ವಾಗ್ದಂಡನೆ ಪ್ರಕ್ರಿಯೆಗೊಳಪಟ್ಟಿದ್ದಾರೆ. ಆದರೆ, ಯಾವ ಅಧ್ಯಕ್ಷರ ವಿರುದ್ಧವೂ ವಾಗ್ದಂಡನೆ ಸಂಪೂರ್ಣವಾಗಿ ಗೆಲುವು ಕಂಡಿಲ್ಲ. ಟ್ರಂಪ್‌ ಪ್ರಕರಣದಲ್ಲೂಇದೇ ಫಲಿತಾಂಶವನ್ನು ನಿರೀಕ್ಷಿಸಬಹುದು.

ಟ್ರಂಪ್‌ ವಿರುದ್ಧ ವಾಗ್ದಂಡನೆ ಯಶಸ್ವಿಯಾಗಬೇಕಿದ್ದರೆ 'ನಂಬರ್‌ ಗೇಮ್‌' ಮುಖ್ಯ ಪಾತ್ರವಹಿಸುತ್ತದೆ. ಈ ಆಟದಲ್ಲಿಟ್ರಂಪ್‌ ಗೆಲುವು ಸಾಧಿಸಬಹುದು. ಆದರೆ, ಅವರ ವಿರುದ್ಧದ ಆರೋಪಗಳಂತೂ ನಿಷ್ಕರ್ಷೆಯಲ್ಲಿಇರಲಿವೆ ಮತ್ತು ಇತಿಹಾಸದಲ್ಲಿದಾಖಲಾಗಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಜ್ಞಾವಂತ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಅಮೆರಿಕದಲ್ಲಿತಪ್ಪು ಮಾಡಿದರೆ ಅಧ್ಯಕ್ಷರೂ ಶಿಕ್ಷೆಯನ್ನು ಅನುಭವಿಸಬೇಕು ಎಂಬ ಸಂದೇಶವನ್ನಂತೂ ಟ್ರಂಪ್‌ ಪ್ರಕರಣ ಇಡೀ ಜಗತ್ತಿಗೇ ರವಾನಿಸಿದೆ.
ಸಂವಿಧಾನ ಏನು ಹೇಳುತ್ತದೆ?
ಅವಧಿಪೂರ್ವ ಅಧ್ಯಕ್ಷರನ್ನು ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್‌ಗೆ ಅಮೆರಿಕ ಸಂವಿಧಾನ ಸಂಪೂರ್ಣ ಅಧಿಕಾರ ನೀಡಿದೆ. ಆದರೆ, ಅದಕ್ಕೆ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿಒಪ್ಪಿಗೆ ನೀಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅಧ್ಯಕ್ಷರ ವಿರುದ್ಧ, ದೇಶದ್ರೋಹ, ಭ್ರಷ್ಟಾಚಾರ, ಗಂಭೀರ ಸ್ವರೂಪದ ಅಪರಾಧ ಮತ್ತು ದುಷ್ಕೃತ್ಯದಂಥ ಪ್ರಕರಣಗಳಿರಬೇಕು. ಆದರೆ, ಈ ಆರೋಪಗಳನ್ನು ಯಾವ ರೀತಿ ವ್ಯಾಖ್ಯಾನಿಸಬೇಕು ಎಂಬುದನ್ನು ಸಂವಿಧಾನ ಸ್ಪಷ್ಪಡಿಸಿಲ್ಲ. ಇದಕ್ಕಾಗಿಯೇ ಸ್ಟ್ಯಾಂಡರ್ಡ್‌ ಎನ್ನಬಹುದಾದ ಯಾವುದೇ ಮಾನದಂಡಗಳಿಲ್ಲ. ಹಾಗಾಗಿ ಬಹುತೇಕ ಸಂದರ್ಭದಲ್ಲಿಅಧ್ಯಕ್ಷರ ವಿರುದ್ಧದ ವಾಗ್ದಂಡನೆಗಳಿಗೆ ಸೋಲಾಗಿದೆ. ಹೀಗಿದ್ದೂ, ಬಲಿಷ್ಠ ರಾಷ್ಟ್ರವೊಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಮುಖ್ಯಸ್ಥರನ್ನು ವಾಗ್ದಂಡನೆಗೆ ಗುರಿಪಡಿಸುವ ಸಾಧ್ಯತೆಯನ್ನು ಮಾತ್ರ ತೆರೆದಿಟ್ಟಿದೆ.

ಟ್ರಂಪ್‌ ವಿರುದ್ಧ 2 ಆರೋಪ
1. ಅಧಿಕಾರದ ದುರುಪಯೋಗ. ಅಧ್ಯಕ್ಷ ಮರು ಆಯ್ಕೆಗೆ ವಿದೇಶಿ ಸರಕಾರದ ನೆರವು.
2. ವಾಗ್ದಂಡನೆ ಪ್ರಕ್ರಿಯೆಯಲ್ಲಿಕಾಂಗ್ರೆಸ್‌ ಕಾರ್ಯ ನಿರ್ವಹಣೆಗೆ ಅಡ್ಡಿ ಆರೋಪ

ಮುಂದೆ ಏನಾಗುತ್ತದೆ?
ಸಂಸತ್ತಿನಲ್ಲಿ(ಹೌಸ್‌ ಆಫ್‌ ರಿಪ್ರಸೆಂಟೆಟೀವ್‌) ಟ್ರಂಪ್‌ ವಿರುದ್ಧ ವಾಗ್ದಂಡನೆಗೆ ಒಪ್ಪಿಗೆ ಸಿಕ್ಕಿದೆ. ಟ್ರಂಪ್‌ ಅವರು ಶಿಕ್ಷೆ ಎದುರಿಸಬೇಕಿದ್ದರೆ ಅದಕ್ಕೆ ಅಮೆರಿಕದ ಸೆನೆಟ್‌ ಒಪ್ಪಿಗೆ ನೀಡಬೇಕಾಗುತ್ತದೆ. ಸಂಸತ್ತಿನಲ್ಲಿಡೆಮಾಕ್ರಟ್‌ಗಳ ಪಾರಮ್ಯವಿದ್ದರೆ, ಸೆನೆಟ್‌ನಲ್ಲಿರಿಪಬ್ಲಿಕನ್ನರ ಸಂಖ್ಯೆ ಹೆಚ್ಚಿದೆ. ಹಾಗಾಗಿ, ಸೆನೆಟ್‌ನಲ್ಲಿಈ ವಾಗ್ದಂಡನೆಗೆ ಸೋಲಾಗಬಹುದು. ಹಾಗಾಗಿ ಅಷ್ಟು ಸರಳವಾಗಿ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಸೆನೆಟ್‌ನಲ್ಲಿರಿಪಬ್ಲಿಕನ್ನರ ನಾಯಕರಾಗಿರುವ ಮಿಚ್‌ ಮೆಕ್‌ಕೆನ್ನಾಲ್‌ ಅವರು, ವಿಚಾರಣೆ ವೇಳೆ ಅಧ್ಯಕ್ಷರ ತಂಡದೊಂದಿಗೆ ರಿಪಬ್ಲಿಕನ್‌ ಸೆನೆಟರ್‌ಗಳು ಸಂಪೂರ್ಣ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದ್ದರು. ಇದೀಗ ಸೆನೆಟ್‌ನಲ್ಲಿವಾಗ್ದಂಡನೆಗೆ ಸಂಬಂಧಿಸಿದ ನಿಯಮಗಳನ್ನು ರಚಿಸಬೇಕಾದ ಹೊಣೆಗಾರಿಕೆ ಮೆಕ್‌ಕೆನ್ನಾಲ್‌ ಮೇಲಿದೆ.

ವಾಗ್ದಂಡನೆ ಪ್ರಕ್ರಿಯೆ ಹೀಗಿದೆ
- ಅಮೆರಿಕ ಹೌಸ್‌ ಆಫ್‌ ರಿಪ್ರಸೆಂಟೇಟಿವ್‌ನಲ್ಲಿಗೆದ್ದಿರುವ ವಾಗ್ದಂಡನೆ ಇನ್ನು ಸೆನೆಟ್‌ಗೆ ವರ್ಗಾವಣೆಯಾಗುತ್ತದೆ.
- ಸೆನೆಟ್‌ನಲ್ಲಿಸುದೀರ್ಘ ವಿಚಾರಣೆ ನಡೆಯುತ್ತದೆ. ಬಳಿಕ, ಅಧ್ಯಕ್ಷರ ವಿರುದ್ಧದ ವಾಗ್ದಂಡನೆಯನ್ನು ಮತಕ್ಕೆ ಹಾಕಲಾಗುತ್ತದೆ.
- ಒಂದು ವೇಳೆ, ಸೆನೆಟ್‌ನಲ್ಲಿಟ್ರಂಪ್‌ ವಿರುದ್ಧ ಮೂರನೇ ಎರಡಕ್ಕಿಂತ ಕಡಿಮೆ ಮತ ಬಿದ್ದರೆ ಅವರು ಅವರು ಶಿಕ್ಷೆಯಿಂದ ಪಾರಾಗಲಿದ್ದಾರೆ.
- ಟ್ರಂಪ್‌ಗೆ ಶಿಕ್ಷೆಯ ಪರವಾಗಿ ಮೂರನೇ ಎರಡಕ್ಕಿಂತ ಹೆಚ್ಚು ಅಂದರೆ ಶೇ.67ರಷ್ಟು ಮತ ಬಿದ್ದರೆ ಅವರು ತಮ್ಮ ಹುದ್ದೆಯಿಂದ ಕೆಳಗಿಳಯಬೇಕಾಗುತ್ತದೆ.

ಎಷ್ಟು ದಿನಗಳ ಕಾಲ ನಡೆಯಲಿದೆ?
- ಒಟ್ಟಾರೆ 126 ಗಂಟೆಗಳ ಕಾಲ ವಾಗ್ದಂಡನೆ ಪ್ರಕ್ರಿಯೆ ನಡೆಯಲಿದೆ
- ಡಿಸೆಂಬರ್‌ 18: ಈಗಾಗಲೇ ಹೌಸ್‌ ಆಫ್‌ ರಿಪ್ರಸೆಂಟೆಟೀವ್‌ನಲ್ಲಿವಾಗ್ದಂಡನೆಗೆ ಒಪ್ಪಿಗೆ ದೊರೆತಿದೆ.
- 2020 ಜನವರಿ 6: ರಿಪಬ್ಲಿಕನ್ನರೇ ಹೆಚ್ಚಾಗಿರುವ ಸೆನೆಟ್‌ನಲ್ಲಿವಿಚಾರಣೆ ಆರಂಭ. ವಾಗ್ದಂಡನೆಯ ಪ್ರಕ್ರಿಯೆಯೆ ನಿಯಮ, ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಲಾಗುವುದು.
- 2020 ಜನವರಿ 7: ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಮತ್ತು ಸೆನೆಟರ್‌ಗಳು ತೀರ್ಪುಗಾರರಾಗಿ ಪ್ರಮಾಣ ಸ್ವೀಕಾರ
- 2020 ಜನವರಿ 9: ಹೌಸ್‌ ಪ್ರಾಸೆಕ್ಯೂಟರ್‌ಗಳು ಮತ್ತು ಶ್ವೇತಭವನದ ಅಧಿಕಾರಿಗಳು ಪ್ರತಿ 24 ಗಂಟೆಗೆ ತಮ್ಮ ವಾದಗಳನ್ನು ಮಂಡಿಸುತ್ತಾರೆ.
- ಈ ಒಟ್ಟಾರೆ ಪ್ರಕ್ರಿಯೆ ಮುಗಿಯಲು ವಾರ ಬೇಕಾಗಬಹುದು. ಆದರೆ, ಅಮೆರಿಕ ಅಧ್ಯಕ್ಷರ ಪ್ರೈಮರಿ ಎಲೆಕ್ಷನ್‌ ಹೊತ್ತಿಗೆ ಈ ಪ್ರಕ್ರಿಯೆ ಮುಗಿಯಬೇಕೆಂದು ಡೆಮಾಕ್ರಟ್‌ಗಳು ಬಯಸುತ್ತಿದ್ದಾರೆ.

ಟ್ರಂಪ್‌ ರಾಜೀನಾಮೆ ನೀಡ್ತಾರಾ?
ಇಲ್ಲ. ಸದ್ಯಕ್ಕೆ ಇಲ್ಲ. ಸಂಸತ್ತಿನ ಜನಪ್ರತಿನಿಧಿಗಳ ಮನೆಯಲ್ಲಿಮಾತ್ರ ವಾಗ್ದಂಡನೆಗೆ ಒಪ್ಪಿಗೆ ದೊರೆತಿದೆ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕಿದ್ದರೆ ಸಂಸತ್ತಿನ ಮತ್ತೊಂದು ಹೌಸ್‌ ಸೆನೆಟ್‌ ಕೂಡ ಒಪ್ಪಿಗೆ ನೀಡಬೇಕು. ಆದರೆ, ಈಗಿರುವ ಲೆಕ್ಕಾಚಾರ ಪ್ರಕಾರ ಅಷ್ಟು ಸುಲಭವಲ್ಲ. ಟ್ರಂಪ್‌ ವಾಗ್ದಂಡನೆಗೆ ಸೆನೆಟ್‌ ಕೂಡ ಮೂರನೇ ಎರಡರಷ್ಟು ಮತ ಹಾಕಬೇಕು. ಆದರೆ, ಇಷ್ಟೊಂದು ಮತಗಳು ದೊರೆಯುವುದು ಕಷ್ಟ. ಯಾಕೆಂದರೆ, ಸೆನೆಟ್‌ನಲ್ಲಿರಿಪಬ್ಲಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸೆನೆಟ್‌ನಲ್ಲಿರುವ 45 ಡೆಮಾಕ್ರಟ್‌ ಹಾಗೂ ಇಬ್ಬರು ಸ್ವತಂತ್ರ ಸದಸ್ಯರ ಜತೆಗೆ 53 ರಿಪಬ್ಲಿಕನ್ನರ ಪೈಕಿ ಕನಿಷ್ಠ 20 ರಿಪಬ್ಲಿಕನ್ನರಾದರೂ ವಾಗ್ದಂಡನೆ ಪರವಾಗಿ ಮತ ಹಾಕಬೇಕು. ಆಗ ಮಾತ್ರ ಟ್ರಂಪ್‌ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಈಗಿನ ಪರಿಸ್ಥಿತಿ ನೋಡಿದರೆ, ಡೆಮಾಕ್ರಟ್‌ಗಳ ಪೈಕಿಯೇ ಇಬ್ಬರು ಕೈಕೊಡುವ ಎಲ್ಲಸಾಧ್ಯತೆ ಇದೆ.

ಉಪಾಧ್ಯಕ್ಷ ಅಧ್ಯಕ್ಷ?
ಸದ್ಯದ ಲೆಕ್ಕಾಚಾರ ಪ್ರಕಾರ ಟ್ರಂಪ್‌ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವುದು ಅಸಂಭವ. ಸೆನೆಟ್‌ನಲ್ಲಿವಾಗ್ದಂಡನೆಗೆ ಸೋಲಾಗುವ ಎಲ್ಲಸಾಧ್ಯತೆಗಳಿವೆ. ಹೀಗಿದ್ದೂ ಒಂದು ವೇಳೆ, ವಾಗ್ದಂಡನೆಗೆ ಗುರಿಯಾಗಿ ಟ್ರಂಪ್‌ ಅಧಿಕಾರ ಬಿಟ್ಟು ಕೊಟ್ಟರೆ ಆಗ ಅಮೆರಿಕ ಅಧ್ಯಕ್ಷರು ಯಾರು ಆಗ್ತಾರೆ? ಅಲ್ಲಿನ ಸಂವಿಧಾನ ಪ್ರಕಾರ, ಸರಕಾರದ ಉಳಿದ ಅವಧಿಯವರೆಗೆ ಉಪಾಧ್ಯಕ್ಷರಾದವರು ಅಧ್ಯಕ್ಷರಾಗಿರುತ್ತಾರೆ. ಅಂದರೆ,ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅಧ್ಯಕ್ಷರಾಗಲಿದ್ದಾರೆ. ಆದರೆ, ಸದ್ಯಕ್ಕಂತೂ ಇದು ಸಾಧ್ಯವಿಲ್ಲ!

ರಾಜಕೀಯ ಪರಿಣಾಮವೇನು?
ಟ್ರಂಪ್‌ ವಿರುದ್ಧ ವಾಗ್ದಂಡನೆ ರಾಜಕೀಯ ಪರಿಣಾಮ ಬಗ್ಗೆ ಕೂಡ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಟ್ರಂಪ್‌ ಹೇಳಿರುವ ಪ್ರಕಾರ, ಈ ವಾಗ್ದಂಡನೆ ಡೆಮಾಕ್ರಟ್‌ಗಳಿಗೆ ಹಿನ್ನಡೆಯುಂಟು ಮಾಡಲಿದ್ದು, ಅಧ್ಯಕ್ಷೀಯ ಚುನಾವಣೆ ವೇಳೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ, ಇದು ಎರಡು ಅಗಲಿನ ಕತ್ತಿಯ ನಡಿಗೆಯೇ ಆಗಿದೆ. ಮುಂದಿನ ವರ್ಷ ನವೆಂಬರ್‌ 20ರ ಹೊತ್ತಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಟ್ರಂಪ್‌ ಎರಡನೇ ಅವಧಿಗೆ ಮರು ಆಯ್ಕೆ ಬಯಸಿದ್ದಾರೆ. ಒಂದು ವೇಳೆ, ವಾಗ್ದಂಡನೆ ಅವರ ಪರವಾಗಿ ಸಹಾನುಭೂತಿ ಸೃಷ್ಟಿಸಿದರೆ ಖಂಡಿತವಾಗಿಯೂ ಅವರ ಗೆಲುವಿಗೆ ಇದು ಕಾರಣವಾಗಲಿದೆ. ಹಾಗೆಯೇ, ಡೆಮಾಕ್ರಟ್‌ಗಳ ರೀತಿಯಲ್ಲಿಅಮೆರಿಕದ ಜನ ಕೂಡ ಯೋಚನೆ ಮಾಡಿದ್ದಾದರೆ, ಖಂಡಿತವಾಗಿಯೂ ಟ್ರಂಪ್‌ ಹಿನ್ನಡೆಯಾಗಲಿದೆ.

ಐವರು ಅಧ್ಯಕ್ಷರ ವಿರುದ್ಧ ವಾಗ್ದಂಡನೆ
- ಭ್ರಷ್ಟಾಚಾರ ಆರೋಪ ಹೊತ್ತಿದ್ದ ಅಧ್ಯಕ್ಷ ಜೇಮ್ಸ್‌ ಬ್ಯೂಕ್ಯಾನನ್‌ ಅವರ ವಿರುದ್ಧ 1860ರಲ್ಲಿವಾಗ್ದಂಡನೆ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಅವರು ಶಿಕ್ಷೆಯಿಂದ ಪಾರಾಗಿದ್ದರು.
- ಟೆನ್ಯೂರ್‌ ಆಫೀಸ್‌ ಕಾಯಿದೆ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ1868ರಲ್ಲಿಆಂಡ್ರೋ ಜಾನ್ಸನ್‌ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ನಡೆದಿತ್ತು. ಕೇವಲ ಒಂದು ಮತದ ಅಂತರದಲ್ಲಿಅವರು ವಾಗ್ದಂಡನೆಯಿಂದ ಪಾರಾಗಿದ್ದರು.
- 1974ರಲ್ಲಿಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಅವರ ವಿರುದ್ಧವೂ ವಾಗ್ದಂಡನೆ ನಡೆದಿತ್ತು. ಅಧಿಕಾರದ ದುರುಪಯೋಗ ಸೇರಿದಂತೆ ನಾನಾ ಕಾರಣಗಳಿಂದ ವಾಗ್ದಂಡನೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಇನ್ನೇನು ತನಿಖೆ ಮುಗಿಯುವ ಹಂತದಲ್ಲಿಅವರು ರಾಜೀನಾಮೆ ನೀಡಿದ್ದರಿಂದ ವಾಗ್ದಂಡನೆ ಕೈ ಬಿಡಲಾಗಿತ್ತು.
- 1998ರಲ್ಲಿಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ವಾಗ್ದಂಡನೆ ಪ್ರಕ್ರಿಯೆಗೆ ಒಳಗಾಗಬೇಕಾಯಿತು. ವಿಚಾರಣೆಯಲ್ಲಿಅವರು ನಿರ್ದೋಷಿ ಎಂದು ಸಾಬೀತಾಗಿ, ವಾಗ್ದಂಡನೆ ವಿರುದ್ಧ ಗೆಲುವು ಸಾಧಿಸಿದ್ದರು.
- 2019ರಲ್ಲಿ ಹಾಲಿ ಅಧ್ಯಕ್ಷ ಟ್ರಂಪ್‌ ವಿರುದ್ಧವೂ ವಾಗ್ದಂಡನೆ ಪ್ರಕ್ರಿಯೆ ನಡೆಯುತ್ತಿದೆ. ಮರು ಆಯ್ಕೆಗೆ ವಿದೇಶಿ ಸರಕಾರಗಳ ನೆರವು ಸೇರಿದಂತೆ ಇನ್ನಿತರ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.

ಸೋಮವಾರ, ಡಿಸೆಂಬರ್ 16, 2019

How did Google Assistant works: ರಿಯಲ್‌ ಟೈಮ್‌ ದುಭಾಷಿ ಹೇಗೆ ಕೆಲಸ ಮಾಡುತ್ತದೆ?

- ಮಲ್ಲಿಕಾರ್ಜುನ ತಿಪ್ಪಾರ

ಗೂಗಲ್‌ ಹೊರ ತಂದಿರುವ ಅನೇಕ ಉತ್ಪನ್ನಗಳಲ್ಲಿ'ಗೂಗಲ್‌ ಅಸಿಸ್ಟೆಂಟ್‌' ಭಿನ್ನವಾಗಿದ್ದು, ಅತ್ಯುಪಯುಕ್ತ ಮತ್ತು ಬಳಕೆದಾರರ ಸ್ನೇಹಿಯಾಗಿದೆ. ಐಫೋನ್‌ನಲ್ಲಿ ಸಿರಿ, ವಿಂಡೋಸ್‌ ಫೋನ್‌ನಲ್ಲಿ ಕೋರ್ಟನಾ, ಅಮೆಜಾನ್‌ನ ಅಲೆಕ್ಸಾ ರೀತಿಯಲ್ಲೇ ಗೂಗಲ್‌ನ ಈ 'ಗೂಗಲ್‌ ಅಸಿಸ್ಟೆಂಟ್‌' ಕೆಲಸ ಮಾಡುತ್ತದೆ. ಈ ಉತ್ಪನ್ನ ಮೊದಲಿಗೆ ಆರಂಭವಾದಾಗ ಗೂಗಲ್‌ನ ಪ್ರಾಡಕ್ಟ್‌ಗಳಾದ ಪಿಕ್ಸೆಲ್‌ ಫೋನ್‌ ಅಥವಾ ಗೂಗಲ್‌ ಹೋಮ್‌ ಗ್ಯಾಜೆಟ್‌ಗಳಿಗೆ ಮಾತ್ರ ಸಿಮೀತವಾಗಿತ್ತು. ಆದರೆ, ಇದೀಗ ಎಲ್ಲಆ್ಯಂಡ್ರಾಯ್ಡ್‌ ಹಾಗೂ ಐಒಎಸ್‌ ಆಧರಿತ ಫೋನ್‌, ಡಿವೈಸ್‌ಗಳಿಗೂ ಇದು ಸಪೋರ್ಟ್‌ ಮಾಡುತ್ತದೆ.

ಆರಂಭದಲ್ಲಿ ಗೂಗಲ್‌ ಅಸಿಸ್ಟೆಂಟ್‌ ಇಂಗ್ಲಿಷ್‌ನಲ್ಲಿ ಮಾತ್ರ ಸೇವೆಯನ್ನು ಒದಗಿಸುತ್ತಿತ್ತು. ಆನಂತರ ಜಗತ್ತಿನ ಅನೇಕ ಭಾಷೆಗಳಲ್ಲಿ ಸೇವೆಯನ್ನು ನೀಡಲಾರಂಭಿಸಿತು. ಇದರಲ್ಲಿ ನಮ್ಮ ಕೆಲವು ಭಾರತೀಯ ಭಾಷೆಗಳೂ ಸೇರಿವೆ. ಇದೆಲ್ಲವೂ ಗೊತ್ತಿರುವ ಸಂಗತಿಯೇ. ಆದರೆ, ಹೊಸ ವಿಷಯ ಏನೆಂದರೆ, ಗೂಗಲ್‌ ಅಸಿಸ್ಟೆಂಟ್‌ ಇನ್ನು ಮುಂದೆ 'ರಿಯಲ್‌ ಟೈಮ್‌ನಲ್ಲಿ ಭಾಷಾಂತರ ಮಾಡಲಿದೆ'! ಅರ್ಥಾತ್‌ ಅದು ದುಭಾಷಿ ರೀತಿಯಲ್ಲಿಕೆಲಸ ಮಾಡಲಿದೆ.


ಹೌದು, ಇದು ನಿಜ. ಇದಕ್ಕಾಗಿ ಗೂಗಲ್‌, ಅಸಿಸ್ಟೆಂಟ್‌ಗೆ 'ಇಂಟರ್‌ಪ್ರೆಟರ್‌ ಮೋಡ್‌' ಪರಿಚಯಿಸಿದೆ. ಇದು ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಆಧರಿತ ಸಾಧನಗಳಿಗೆ ಸಪೋರ್ಟ್‌ ಮಾಡಲಿದೆ. 2019ರ ಜನವರಿಯಲ್ಲೇ ಈ ಬಗ್ಗೆ ಗೂಗಲ್‌ ಘೋಷಣೆ ಮಾಡಿ, ಗೂಗಲ್‌ ಹೋಮ್‌ ಸ್ಪೀಕರ್‌, ಸ್ಮಾರ್ಟ್‌ ಡಿಸ್‌ಪ್ಲೇಸ್‌ ಸೇರಿದಂತೆ ಇನ್ನಿತ ಸಾಧನಗಳಿಗೆ ಪರಿಚಯಿಸಿತ್ತು. ಇದೀಗ ಈ ಫೀಚರ್‌ ಜಾಗತಿಕವಾಗಿ ಎಲ್ಲ ಫೋನ್‌ ಬಳಕೆದಾರರಿಗೆ ವಿಸ್ತರಿಸಲಾಗಿದೆ.

ವಿಮಾನಗಳು, ಸ್ಥಳೀಯ ರೆಸ್ಟೊರೆಂಟ್‌ಗಳ ಶೋಧ ಸೇರಿದಂತೆ ಇನ್ನಿತರ ಮಾಹಿತಿಗಾಗಿ ಪ್ರವಾಸಿಗರು ಗೂಗಲ್‌ ಅಸಿಸ್ಟೆಂಟ್‌ ನೆರವು ಪಡೆಯುತ್ತಿದ್ದಾರೆ. ಪ್ರಯಾಣದ ವೇಳೆ ಇನ್ನೂ ಹೆಚ್ಚಿನ ನೆರವು ನೀಡುವ ನಿಟ್ಟಿನಲ್ಲಿಅಸಿಸ್ಟೆಂಟ್‌ ಇದೀಗ ರಿಯಲ್‌ ಟೈಮ್‌ ಭಾಷಾಂತರ ಫೀಚರ್‌ ಇಂಟರ್‌ಪ್ರಿಟರ್‌ ಮೋಡ್‌ನೊಂದಿಗೆ ನಿಮ್ಮ ಮುಂದೆ ಬಂದಿದೆ. ಜಗತ್ತಿನಾದ್ಯಂತದ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಫೋನ್‌ಗಳಲ್ಲಿನ ಅಸಿಸ್ಟೆಂಟ್‌ಗಳಿಗೆ ಇದು ಲಭ್ಯವಾಗಲಿದೆ ಎಂದು ಗೂಗಲ್‌ ತನ್ನ ಬ್ಲಾಗ್‌ನಲ್ಲಿತಿಳಿಸಿದೆ.

ಕನ್ನಡ ಸಹಿತ 44 ಭಾಷೆಗೆ ಬೆಂಬಲ

ಪ್ರಯಾಣದ ವೇಳೆ ವಿದೇಶಿ ಭಾಷೆಯಲ್ಲಿ ಮಾತನಾಡುವವರಿದ್ದರೆ ನೀವು ನಿಮ್ಮ ಫೋನ್‌ನಲ್ಲಿರುವ ಈ ಫೀಚರ್‌ ಅನ್ನು ಬಳಸಿಕೊಂಡು ಅವರೊಂದಿಗೆ ಮಾತನಾಡಬಹುದು. ಉದಾಹರಣೆಗೆ, ''ಹೇ ಗೂಗಲ್‌, ಬಿ ಮೈ ಫ್ರೆಂಚ್‌ ಟ್ರಾನ್ಸ್‌ಲೇಟರ್‌,'' ಎಂದು ಹೇಳಿದರೆ, ಆ ಭಾಷೆಯಲ್ಲಿನೀವು ಮತ್ತೊಬ್ಬರೊಂದಿಗೆ ಸಂವಹನ ಮಾಡಬಹುದು. ಗೂಗಲ್‌ ಹೇಳುವಂತೆ ಗೂಗಲ್‌ ಅಸಿಸ್ಟೆಂಟ್‌ ಇಂಟರ್‌ಪ್ರೆಟರ್‌ ಜಗತ್ತಿನ 44 ಭಾಷೆಗಳಿಗೆ ಸಪೋರ್ಟ್‌ ಮಾಡಲಿದೆ. ಈ ಪಟ್ಟಿಯಲ್ಲಿ ಕನ್ನಡವೂ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಯಾವೆಲ್ಲ ಭಾಷೆಗಳಿವೆ?

ಅರೆಬಿಕ್‌, ಬಂಗಾಲಿ, ಬರ್ಮೀಸ್‌, ಕಾಂಬೋಡಿಯನ್‌, ಜೆಕ್‌, ಡ್ಯಾನಿಷ್‌, ಡಚ್‌, ಇಂಗ್ಲಿಷ್‌, ಇಸ್ಟೋನಿಯನ್‌, ಫಿಲಿಪಿನೊ, ಫ್ರೆಂಚ್‌, ಜರ್ಮನ್‌, ಗ್ರೀಕ್‌, ಗುಜರಾತಿ, ಹಿಂದಿ, ಹಂಗೇರಿಯನ್‌, ಇಂಡೋನೇಷಿಯನ್‌, ಇಟಾಲಿಯನ್‌, ಜಾಪನೀಸ್‌, ಕೊರಿಯನ್‌, ಮಲಯಾಳಂ, ಮರಾಠಿ, ನೇಪಾಳಿ, ಮ್ಯಾಂಡ್ರಿಯನ್‌, ನಾರ್ವೇಯಿನ್‌, ಪೋರ್ಚುಗೀಸ್‌, ರೋಮಾನಿಯನ್‌, ರಷ್ಯನ್‌, ಸಿಂಹಳಿ, ಸ್ಪ್ಯಾನಿಶ್‌, ಸ್ವೀಡಿಶ್‌, ತಮಿಳು, ತೆಲುಗು, ತುರ್ಕಿಷ್‌, ಉಕ್ರೇನಿಯನ್‌, ಉರ್ದು ಇತ್ಯಾದಿ ಭಾಷೆಗಳಲ್ಲಿಗೂಗಲ್‌ ಅಸಿಸ್ಟೆಂಟ್‌ ಇಂಟರ್‌ಪ್ರೆಟರ್‌ ಸೇವೆ ಲಭ್ಯವಿದೆ. ಸಂಭಾಷಣೆ ಮೇಲೆ ಹೆಚ್ಚು ನಿಯಂತ್ರಣ ಸಾಧಿಸುವುದಕ್ಕಾಗಿ ಇದು ನಿಮಗೆ ಮ್ಯಾನುವಲ್‌ ಮೋಡ್‌ ಕೂಡ ಒದಗಿಸುತ್ತದೆ. ಹಾಗೆಯೇ, ಕೀ ಬೋರ್ಡ್‌ ಮೋಡ್‌ನಿಂದಾಗಿ ನೀವು ಟೈಪಿಸಿಯೂ ಭಾಷಾಂತರ ಮಾಡಬಹುದು. ಈ ಮೋಡ್‌ಗಳನ್ನು ಬಳಸುವಾಗ ನೀವು ಇಂಟರ್‌ಪ್ರೆಟರ್‌ ಮೋಡ್‌ ಅಥವಾ ವಾಯ್ಸ್ ಕಮಾಂಡ್‌ ಅನ್ನು ಟ್ರಿಗರ್‌ ಬಟನ್‌ ಮೇಲೆ ಟ್ಯಾಪ್‌ ಮಾಡುವ ಮೂಲಕ ಸ್ವಿಚ್‌ ಆಫ್‌ ಮಾಡಬಹುದು.


ಏನಿದು ಗೂಗಲ್‌ ಅಸಿಸ್ಟೆಂಟ್‌?

ಇದು ಗೂಗಲ್‌ನ ಅತಿ ಜನಪ್ರಿಯ ಉತ್ಪನ್ನವಾಗಿದ್ದು, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌(ಕೃತಕ ಬುದ್ಧಿಮತ್ತೆ) ಆಧರಿತ ವರ್ಚುವಲ್‌ ಸೇವೆಯಾಗಿದೆ. ಮೊಬೈಲ್‌ ಮತ್ತು ಸ್ಮಾರ್ಟ್‌ ಹೋಮ್‌ ಗ್ಯಾಜೆಟ್‌ಗಳಲ್ಲಿಈ ಸೇವೆ ದೊರೆಯುತ್ತದೆ. ಈ ಹಿಂದಿನ ಗೂಗಲ್‌ ನೌ ಏಕಮುಖವಾಗಿ ಸಂಭಾಷಣೆಗೆ ಅನುವು ಮಾಡಿಕೊಡುತ್ತಿತ್ತು. ಆದರೆ, ಗೂಗಲ್‌ ಅಸಿಸ್ಟೆಂಟ್‌ ದ್ವಿಮುಖ ಸಂಭಾಷಣೆಗೆ ಬೆಂಬಲ ನೀಡುತ್ತದೆ. ಗೂಗಲ್‌ನ ಮೆಸೇಜಿಂಗ್‌ ಆ್ಯಪ್‌ 'ಅಲ್ಲೋ' ಭಾಗವಾಗಿ ಈ ಅಸಿಸ್ಟೆಂಟ್‌ ಸೇವೆ 2016ರಲ್ಲಿಆರಂಭವಾಯಿತು. 2017ರಲ್ಲಿ ಆ್ಯಂಡ್ರಾಯ್ಡ್‌ ಸಾಧನಗಳಿಗೂ ವಿಸ್ತರಣೆಯಾಯಿತು. 2017ರಲ್ಲಿ ಅಂದಾಜು 40 ಕೋಟಿ ಬಳಕೆದಾರರು ಗೂಗಲ್‌ ಅಸಿಸ್ಟೆಂಟ್‌ ಇನ್ಸ್‌ಟಾಲ್‌ ಮಾಡಿಕೊಂಡಿದ್ದಾರೆ.