ಶುಕ್ರವಾರ, ಮಾರ್ಚ್ 22, 2019

ಆಪ್‌, ಅಣ್ಣಾ ಚಳವಳಿಯ ಬಳುವಳಿ

2011ರಲ್ಲಿ ಅಣ್ಣಾ ಹಜಾರೆ ಅವರು ಜನ ಲೋಕಪಾಲ್‌ ಜಾರಿಗಾಗಿ ದಿಲ್ಲಿಯಲ್ಲಿ ಸತ್ಯಾಗ್ರಹ ಆರಂಭಿಸಿದ್ದರು. ಈ ವೇಳೆ ಮಾಧ್ಯಮಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ ಎಂಬ ಹೆಸರು ಆಗಾಗ ಕೇಳಲಾರಂಭಿಸಿತು. ಜನ ಲೋಕಪಾಲ್‌ ರೂಪಿಸಿದ ಪ್ರಮುಖರ ಪೈಕಿ ಕೇಜ್ರಿವಾಲ್‌ ಕೂಡ ಒಬ್ಬರಾಗಿದ್ದು, ಸರಕಾರದ ಜತೆಗಿನ ಮಾತುಕತೆಯಲ್ಲಿ ಭಾಗಿಯಾಗುತ್ತಿದ್ದರು. ಭ್ರಷ್ಟಾಚಾರದ ವಿರುದ್ಧದ ಈ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಲೋಕಪಾಲ್‌ ಅನುಷ್ಠಾನಕ್ಕೆ ಚಳವಳಿಯೇ ಇರಲಿ ಎಂಬ ಅಣ್ಣಾ ನಿಲುವಿಗೆ ಭಿನ್ನ ಅಭಿಪ್ರಾಯ ಹೊಂದಿದ್ದ ಕೇಜ್ರಿವಾಲ್‌ ಹಾಗೂ ಮತ್ತಿತರು ರಾಜಕೀಯ ಭಾಗವಾಗಿ ಅದನ್ನು ಗುರಿ ಸಾಧಿಸಬೇಕೆಂಬ ವಾದವನ್ನು ಪ್ರತಿಪಾದಿಸಿದರು. ಅಂತಿಮವಾಗಿ 2012ರ ನವೆಂಬರ್‌ 26ರಂದು ಅರವಿಂದ್‌ ಕೇಜ್ರಿವಾಲ್‌ ಹಾಗೂ ಇತರರು ಸೇರಿ 'ಆಮ್‌ ಆದ್ಮಿ ಪಾರ್ಟಿ' ಹುಟ್ಟು ಹಾಕಿದರು. 
ಭಾರತೀಯ ರಾಜಕಾರಣದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಆಪ್‌ ಕ್ರಮೇಣ ಅದು ಕೂಡ ಇತರ ಪಕ್ಷ ಗಳಂತಾಯಿತು. ಪಕ್ಷ ದ ಸ್ಥಾಪಕರ ಗುಂಪಿನಲ್ಲಿದ್ದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಅವರನ್ನು ಪಕ್ಷ ದಿಂದ ಹೊರ ಹಾಕಲಾಯಿತು.
 2013ರಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ 70 ಸ್ಥಾನಗಳ ಪೈಕಿ 28 ಸ್ಥಾನ ಗೆದ್ದುಕೊಂಡಿತು. ಯಾವುದೇ ಪಕ್ಷ ಕ್ಕೆ ಬಹುಮತ ಬಾರದ್ದರಿಂದ ಕಾಂಗ್ರೆಸ್‌ನ ಷರತ್ತುಬದ್ಧ ಬೆಂಬಲದೊಂದಿಗೆ ದಿಲ್ಲಿಯಲ್ಲಿ ಸರಕಾರ ರಚಿಸಿತು. ಅರವಿಂದ್‌ ಕೇಜ್ರಿವಾಲ್‌ ಸಿಎಂ ಆದರು. ಆದರೆ, ಜನ ಲೋಕಪಾಲ್‌ ವಿಧೇಯಕ ಜಾರಿಗೆ ಇತರ ಪಕ್ಷ ಗಳಿಂದ ಬೆಂಬಲ ದೊರೆಯದ್ದರಿಂದ ಕೇವಲ 49 ದಿನಗಳಲ್ಲೇ ಸರಕಾರ ಪತನವಾಯಿತು. 2015ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಪ್‌ ಭಾರೀ ಜಯ ಸಾಧಿಸಿತು. 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿತು. ಕೇಜ್ರಿವಾಲ್‌ ಮತ್ತೆ ಮುಖ್ಯಮಂತ್ರಿಯಾದರು. ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದರೆ, ಬಿಜೆಪಿ ಗೆದ್ದಿದ್ದು ಕೇವಲ ಮೂರು ಕ್ಷೇತ್ರ. ದಿಲ್ಲಿ ಗೆಲುವು ಆಪ್‌ಗೆ ಹುಮ್ಮಸ್ಸು ತಂದಿದ್ದರಿಂದ ಪಂಜಾಬ್‌, ಹರಿಯಾಣ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷ ದ ನೆಲೆ ಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ಕೇಜ್ರಿವಾಲ್‌ ಸ್ಪರ್ಧಿಸಿ ಸೋತರು. ಈ ಚುನಾವಣೆಯಲ್ಲಿ ಆಪ್‌ ದೇಶಾದ್ಯಂತ ಒಟ್ಟು 434 ಸ್ಥಾನಗಳಲ್ಲಿ ಸ್ಪರ್ಧಿಸಿ, ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಕಂಡಿತು. ಭಾರತೀಯ ರಾಜಕಾರಣದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಆಪ್‌ ಕ್ರಮೇಣ ಅದು ಕೂಡ ಇತರ ಪಕ್ಷ ಗಳಂತಾಯಿತು. ಪಕ್ಷ ದ ಸ್ಥಾಪಕರ ಗುಂಪಿನಲ್ಲಿದ್ದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಅವರನ್ನು ಪಕ್ಷ ದಿಂದ ಹೊರ ಹಾಕಲಾಯಿತು. ಭ್ರಷ್ಟಾಚಾರ ವಿರೋಧಿ ನೀತಿ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಸಮಜಾವಾದಿ ಪಕ್ಷ ದ ಧ್ಯೇಯಗಳಾಗಿವೆ. ಪೊರಕೆ ಪಕ್ಷ ದ ಚಿಹ್ನೆ. 

ಗುರುವಾರ, ಮಾರ್ಚ್ 21, 2019

ಗೆಲ್ಲುವ ಕೂಟ ಅರಸುವ ಎಲ್‌ಜೆಪಿ

2017ರಲ್ಲಿ ಮಹಾಮೈತ್ರಿ ಮುರಿದು ಬಿತ್ತು. ಆಗ ಮತ್ತೆ ನಿತೀಶ್‌ ಕುಮಾರ್‌ ಬಿಜೆಪಿ ಜತೆ ಸಖ್ಯ ಬೆಳೆಸಿ ಸಿಎಂ ಆದರು. ಎನ್‌ಡಿಎ ಭಾಗವಾಗಿದ್ದ ಎಲ್‌ಜೆಪಿ ಕೂಡ ಸರಕಾರದಲ್ಲಿ ಪಾಲುದಾರ ಪಕ್ಷ ವಾಯಿತು. ದಲಿತೋದ್ಧಾರ ಧ್ಯೇಯವನ್ನು ಹೊಂದಿರುವ ಎಲ್‌ಜೆಪಿ ಜಾತ್ಯತೀತ, ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ. 


ಗೆಲ್ಲುವ ಕೂಟಗಳನ್ನು ಆಯ್ಕೆ ಮಾಡಿಕೊಳ್ಳುವ ರಾಮ್‌ ವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕ ಜನಸಕ್ತಿ ಪಾರ್ಟಿ(ಎಲ್‌ಜೆಪಿ) ಬಿಹಾರದಲ್ಲಿ ಸಕ್ರಿಯವಾಗಿದೆ. 2000ರಲ್ಲಿ ಪಾಸ್ವಾನ್‌ ಅವರು ಲೋಕ ಜನಶಕ್ತಿ ಪಾರ್ಟಿಯನ್ನು ಸ್ಥಾಪಿಸಿದರು. 1969ರಲ್ಲಿ ಸಂಯುಕ್ತ ಸೋಷಿಯಲಿಷ್ಟ್‌ ಪಾರ್ಟಿಯಿಂದ ರಾಜಕೀಯ ಜೀವನ ಆರಂಭಿಸಿದ್ದ ಪಾಸ್ವಾನ್‌, ಎಲ್‌ಜೆಪಿ ಸ್ಥಾಪಿಸುವ ಮುನ್ನ ಜನತಾ ದಳದಲ್ಲಿದ್ದರು. 2004ರ ಚುನಾವಣೆಯಲ್ಲಿ ಯುಪಿಎ ಜತೆ ಮೈತ್ರಿಮಾಡಿಕೊಂಡಿದ್ದ ಅವರು ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡು, ಕೇಂದ್ರದಲ್ಲಿ ಸಚಿವರಾದರು. 2005ರ ಫೆಬ್ರವರಿಯಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೂಡಿ ಸ್ಪರ್ಧಿಸಿ, 29 ಸೀಟುಗಳನ್ನು ಎಲ್‌ಜೆಪಿ ಗೆದ್ದುಕೊಂಡಿತು. ಆದರೆ, ಯಾವುದೇ ಪಕ್ಷ ಕ್ಕೆ ಬಹುಮತ ಬಾರದ್ದರಿಂದ ಸರಕಾರ ರಚನೆಯಾಗಲಿಲ್ಲ. ಕೆಲವು ದಿನಗಳವರೆಗೆ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಮತ್ತೆ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಯು ನೇತೃತ್ವದ ಎನ್‌ಡಿಎ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. 
ಎಲ್‌ಜೆಪಿ 203 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ ಗೆದ್ದಿದ್ದು ಕೇವಲ 10 ಸ್ಥಾನಗಳು ಮಾತ್ರ. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್‌ಜಿಪಿ 'ನಾಲ್ಕನೇ ರಂಗ'ದ ಭಾಗವಾಗಿತ್ತು. ಎಸ್‌ಪಿ, ಆರ್‌ಜೆಡಿ ಕೂಡ ಇದರಲ್ಲಿದ್ದವು. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಎಲ್‌ಜೆಪಿಗೆ ಒಂದೂ ಸ್ಥಾನ ಬರಲಿಲ್ಲ. ಚುನಾವಣೆ ಬಳಿಕ ಆರ್‌ಜೆಡಿ ಬೇಷರತ್ತಾಗಿ ಯುಪಿಎಗೆ ಬೆಂಬಲ ನೀಡಿತು. 2010ರಲ್ಲಿ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಜತೆಗೂಡಿ ಎಲ್‌ಜೆಪಿ ಚುನಾವಣೆ ಸ್ಪರ್ದಿಸಿತಾದರೂ ಗೆದ್ದಿದ್ದು ಕೇವಲ ಮೂರು ಸ್ಥಾನಗಳು ಮಾತ್ರ. ಬೇರೆ ಬೇರೆ ಪಕ್ಷ ಗಳ ಜತೆ ರಾಜಕಾರಣ ಮಾಡಿದ್ದ ಎಲ್‌ಜೆಪಿ ಮತ್ತು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಯಿತು. ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಕೇಂದ್ರದಲ್ಲಿ ಪಾಸ್ವಾನ್‌ ಮಂತ್ರಿಯಾದರು. 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿ 40 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 2 ಕ್ಷೇತ್ರದಲ್ಲಿ ಜಯ ಸಾಧಿಸಿತು. ಆರ್‌ಜೆಡಿ-ಕಾಂಗ್ರೆಸ್‌-ಜೆಡಿಯು ಮಹಾಮೈತ್ರಿ ಈ ಚುನಾವಣೆಯಲ್ಲಿ ಬಹುಮತ ಪಡೆದು ಸರಕಾರ ರಚಿಸಿತು. 2017ರಲ್ಲಿ ಮಹಾಮೈತ್ರಿ ಮುರಿದು ಬಿತ್ತು. ಆಗ ಮತ್ತೆ ನಿತೀಶ್‌ ಕುಮಾರ್‌ ಬಿಜೆಪಿ ಜತೆ ಸಖ್ಯ ಬೆಳೆಸಿ ಸಿಎಂ ಆದರು. ಎನ್‌ಡಿಎ ಭಾಗವಾಗಿದ್ದ ಎಲ್‌ಜೆಪಿ ಕೂಡ ಸರಕಾರದಲ್ಲಿ ಪಾಲುದಾರ ಪಕ್ಷ ವಾಯಿತು. ದಲಿತೋದ್ಧಾರ ಧ್ಯೇಯವನ್ನು ಹೊಂದಿರುವ ಎಲ್‌ಜೆಪಿ ಜಾತ್ಯತೀತ, ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ. 

ಮಂಗಳವಾರ, ಮಾರ್ಚ್ 19, 2019

'ಬಿಸಿ'ಯೇರಿದೆಯಾ ಫೋನು?, ಮಂಡೆ ಬಿಸಿ ಮಾಡಿಕೊಳ್ಳಬೇಡಿ, ಕೂಲ್‌ ಮಾಡಲು ಇಲ್ಲಿದೆ ಪರಿಹಾರ

''ಫೋನ್‌ ತುಂಬಾ ಬಿಸಿಯಾಗುತ್ತದೆ,'' ಎಂದು ನಿಮ್ಮ ಸ್ನೇಹಿತರು ಆಗಾಗ ದೂರುವುದನ್ನು ನೀವು ಕೇಳಿರುತ್ತೀರಿ. ಅಲ್ಲದೇ, ನೀವು ಕೂಡ ಅದೇ ರೀತಿ ಹೇಳಿರುತ್ತೀರಿ. ಇದು ಸ್ಮಾರ್ಟ್‌ಫೋನ್‌ ಬಳಕೆದಾರರ ಸಾಮಾನ್ಯ ದೂರು. ವಿಶೇಷವಾಗಿ ಫೋನ್‌ ರಿಜಾರ್ಜ್‌ ಮಾಡುವಾಗ, ಗೇಮ್‌ ಆಡುವಾಗ, ಸ್ಟ್ರೀಮಿಂಗ್‌ ಕಂಟೆಂಟ್‌ ನೋಡುವಾಗ ಫೋನ್‌ ವಿಪರೀತ ಎನ್ನುವಷ್ಟರ ಮಟ್ಟಿಗೆ ಬಿಸಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಸಾಮರ್ಥ್ಯವಿರುವ ಬ್ಯಾಟರಿಗಳನ್ನು ಎಲ್ಲ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಒದಗಿಸುತ್ತಿವೆ. ಈಗೀಗ 4000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿಗಳು ಸಾಮಾನ್ಯ ಎನ್ನುವಂತಾಗಿದೆ. ಇಷ್ಟು ದೊಡ್ಡ ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಫೋನ್‌ಗಳನ್ನು ಚಾರ್ಜ್‌ ಮಾಡುವಾಗ ಫೋನ್‌ ಬಿಸಿ ನಮ್ಮ ಅನುಭವಕ್ಕೆ ಬರುತ್ತದೆ. ಹಾಗಾದರೆ, ಫೋನ್‌ ಮಿತಿಮೀರಿ ಬಿಸಿಯಾಗಲು ಕಾರಣ ಏನು ಎಂದು ಹುಡುಕತ್ತಾ ಹೊರಟರೆ ಅನೇಕ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಆ ಪೈಕಿ, ಫೋನ್‌ನ ಹಾರ್ಡ್‌ವೇರ್‌ ಸಮಸ್ಯೆ, ಥರ್ಡ್‌ ಪಾರ್ಟಿ ಚಾರ್ಜರ್‌ ಬಳಕೆ, ಅನವಶ್ಯಕ ಆ್ಯಪ್‌ಗಳು ಬಳಕೆ... ಹೀಗೆ ನಾನಾ ಕಾರಣಗಳಿಂದಾಗಿ ಫೋನ್‌ ಬಿಸಿಯಾಗುತ್ತಲೇ ಇರುತ್ತದೆ. ಆದರೆ, ಫೋನ್‌ ಬಿಸಿಯಾಗಿದೆ ಎಂದು ನೀವು ಮಂಡೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವು ಟಿಫ್ಸ್‌ಗಳನ್ನು ಅನುಸರಿಸಿದರೆ ಫೋನ್‌ ಬಿಸಿಯಾಗುವುದನ್ನು ಕಡಿಮೆ ಮಾಡಬಹುದು. 

ಬಿಸಿಲು ತಪ್ಪಿಸಿ 

ಬಹಳ ಸಮಯದವರೆಗೆ ಸ್ಮಾರ್ಟ್‌ಫೋನ್‌ ಮೇಲೆ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅದು ಸ್ಮಾರ್ಟ್‌ಫೋನ್‌ ಬಿಸಿಯಾಗಲು ಕಾರಣವಾಗುತ್ತದೆ. ಅದರಲ್ಲೂ ಪ್ಲ್ಯಾಸ್ಟಿಕ್‌ ವಿನ್ಯಾಸ ಹೊಂದಿರುವ ಫೋನ್‌ಗಳು ಇನ್ನೂ ಹೆಚ್ಚಿಗೆ ಬಿಸಿಯಾಗಬಹುದು. ಅಧ್ಯಯನದ ವರದಿಯೊಂದ ಪ್ರಕಾರ, ದೀರ್ಘ ಸಮಯದವರೆಗೆ ಸ್ಮಾರ್ಟ್‌ಫೋನ್‌ ಬಿಸಿಲಿಗೆ ತೆರೆದುಕೊಂಡರೆ ಅದರ ಟಚ್‌ಸ್ಕ್ರೀನ್‌ ಕಾರ್ಯನಿರ್ವಹಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದಯಂತೆ. ಹಾಗಾಗಿ, ಮೊಬೈಲ್‌ಗಳನ್ನು ಸಾಧ್ಯವಾದಷ್ಟು ಬ್ಯಾಗ್‌ಗಳಲ್ಲಿ ಇಡಲು ಪ್ರಯತ್ನಿಸಿ. ಅದರಲ್ಲೂ ಚರ್ಮದ ಬ್ಯಾಗ್‌ಗಳಲ್ಲಿದ್ದರೂ ಇನ್ನೂ ಬೆಟರ್‌. 

ಚಾರ್ಜಿಂಗ್‌ ಮಾಡುವಾಗ ಹುಷಾರ್‌ 

ಚಾರ್ಜಿಂಗ್‌ ಮಾಡುವಾಗ ಫೋನ್‌ ಒಂದಿಷ್ಟು ಉಷ್ಣಾಂಶವನ್ನು ಹೊರ ಹಾಕುತ್ತದೆ. ಹಾಗಾಗಿ, ಫೋನ್‌ ಸ್ವಲ್ಪ ಗಾಳಿಗೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಚಾರ್ಜ್‌ ಮಾಡುವಾಗ ಅದನ್ನು ಬೆಡ್‌ ಅಥವಾ ಸೋಫಾ ಮೇಲೆ ಇಟ್ಟರೆ, ಉತ್ಪತ್ತಿಯಾಗುವ ಉಷ್ಣಾಂಶವನ್ನು ಹೊರ ಹಾಕಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಫೋನ್‌ನ ಶಾಖ ಇನ್ನೂ ಹೆಚ್ಚಾಗತೊಡಗುತ್ತದೆ. ಚಾರ್ಜ್‌ ಮಾಡುವಾಗ ಫೋನ್‌ ಅನ್ನು ಗಟ್ಟಿ ಮೇಲ್ಮೈ ಹೊಂದಿರುವ ವಸ್ತುವಿನ ಮೇಲೆ ಇಡುವುದು ಒಳ್ಳೆಯದು. 

ಬ್ಯಾಕ್‌ ಕೇಸ್‌ ತೆಗೆಯರಿ 

ಫೋನ್‌ ಸುರಕ್ಷ ತೆಗೋಸ್ಕರ ಸಾಮಾನ್ಯವಾಗಿ ಎಲ್ಲರೂ ಬ್ಯಾಕ್‌ ಕೇಸ್‌ ಹಾಕಿರುತ್ತಾರೆ. ಆದರೆ, ಇದು ಚಾರ್ಜಿಂಗ್‌ ಮಾಡುವಾಗ ಫೋನ್‌ನ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಚಾರ್ಜ್‌ ಮಾಡುವಾಗ ಹ್ಯಾಂಡ್‌ಸೆಟ್‌ನ ಬ್ಯಾಕ್‌ ಕೇಸ್‌ ತೆಗೆಯಿರಿ. ಇದರಿಂದ ಫೋನ್‌ ಹೀಟ್‌ ಆಗುವುದು ತಡೆಯಬಹುದು ಮತ್ತು ಕೂಲ್‌ ಆಗಿ ಇಡಲು ಸಾಧ್ಯವಾಗುತ್ತದೆ. 

 ರಾತ್ರಿ ಪೂರ್ತಿ ಚಾರ್ಜಿಂಗ್‌ ಮಾಡಬಹುದೇ? 

ಈ ಅಂಶವು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ, ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ರಾತ್ರಿಯಿಡಿ ಚಾರ್ಜಿಂಗ್‌ ಇಟ್ಟರೂ ಫೋನ್‌ ಹೀಟ್‌ ಆಗುವುದಾಗಲೀ, ಬ್ಯಾಟರಿ ನಷ್ಟವಾಗುವುದು ಆಗಲಿ ಆಗುವುದಿಲ್ಲ. ಯಾಕೆಂದರೆ, ಬ್ಯಾಟರಿ ಚಾರ್ಜಿಂಗ್‌ ಆದ ತಕ್ಷ ಣ ಅದಕ್ಕೆ ಕರೆಂಟ್‌ ಪ್ರಸರಣ ತಡೆಯಾಗುವಂತೆ ವ್ಯವಸ್ಥೆ ರೂಪಿಸಲಾಗಿರುತ್ತದೆ. ಆದರೆ, ಇದೇ ಮಾತನ್ನು ಹಳೆ ಮಾದರಿಯ ಫೋನ್‌ಗಳಿಗೆ ಹೇಳುವಂತಿಲ್ಲ. ವಿಶೇಷವಾಗಿ ಬೇಸಿಕ್‌ ಫೋನ್‌ಗಳಲ್ಲಿ ಇಂಥ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ರಾತ್ರಿಯಿಡಿ ಫೋನ್‌ ಅನ್ನು ಚಾರ್ಜಿಂಗ್‌ ಮಾಡಿದರೆ ಹೆಚ್ಚು ಹೀಟ್‌ ಆಗುವು ಸಾಧ್ಯತೆ ಹೆಚ್ಚಿರುತ್ತದೆ. 

ಆ್ಯಪ್‌ಗಳ ಬಗ್ಗೆ ಇರಲಿ ಎಚ್ಚರ 

ನಮ್ಮ ಸ್ಮಾರ್ಟ್‌ಫೋನ್‌ಗಳ ಆ್ಯಪ್‌ಗಳಿಂದ ತುಂಬಿ ಹೋಗಿರುತ್ತವೆ. ಬೇಕಾದ್ದು, ಬೇಡವಾದ ಎಲ್ಲ ಆ್ಯಪ್‌ಗಳನ್ನು ನಾವು ಡೌನ್‌ಲೋಡ್‌ ಮಾಡಿಕೊಂಡಿರುತ್ತೇವೆ. ಹೀಗೆ ಡೌನ್‌ಲೋಡ್‌ ಮಾಡಿಕೊಂಡ ಆ್ಯಪ್‌ಗಳ ಪೈಕಿ ಅನೇಕ ಆ್ಯಪ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುತ್ತಲೇ ಇರುತ್ತವೆ ಮತ್ತು ಅವು ಬ್ಯಾಟರಿ ಪವರ್‌ ಅನ್ನು ಕಬಳಿಸುವ ಜತೆಗೆ ಫೋನ್‌ ಹೀಟ್‌ ಆಗಲು ತಮ್ಮ ಕೊಡುಗೆಯನ್ನು ನೀಡುತ್ತವೆ. ಹಾಗಾಗಿ, ಕೆಲಸಕ್ಕೆ ಬಾರದ ಮತ್ತು ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುವ ಆ್ಯಪ್‌ ಅನ್ನು ಅನ್‌ಇನ್ಸ್‌ಟಾಲ್‌ ಮಾಡುವುದು ಇದಕ್ಕೆ ಇರುವ ಪರಿಹಾರ. 

ಥರ್ಡ್‌ ಪಾರ್ಟಿ ಚಾರ್ಜರ್‌ ಬೇಡ 

ಥರ್ಡ್‌ ಪಾರ್ಟಿ ಚಾರ್ಜರ್‌ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ನಿಮ್ಮ ಫೋನ್‌ ಯಾವ ಕಂಪನಿಯದ್ದು ಇರುತ್ತದೆ ಅದೇ ಕಂಪನಿ ಒದಗಿಸುವ ಚಾರ್ಜರ್‌ಗಳನ್ನು ಬಳಸುವುದು ಸೂಕ್ತ. ಇಲ್ಲದಿದ್ದರೆ ಬ್ಯಾಟರಿ ಮತ್ತು ಚಾರ್ಜರ್‌ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಬ್ಯಾಟರಿ ಹೆಚ್ಚಿನ ಪ್ರಮಾಣದಲ್ಲಿ ಹೀಟ್‌ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. 


ಸ್ಟ್ರೀಮಿಂಗ್‌ ಕಂಟೆಂಟ್‌ 

ಫೋನ್‌ ಬಿಸಿಯಾಲು ಸ್ಟ್ರೀಮಿಂಗ್‌ ಕಂಟೆಂಟ್‌ ಕೂಡ ಕಾರಣವಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ನೀವು ಯೂಟೂಬ್‌ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಗಂಟೆಗಳ ಕಾಲ ಸ್ಟ್ರೀಮಿಂಗ್‌ ಕಂಟೆಂಟ್‌ ನೋಡುತ್ತಿದ್ದರೆ ಹೀಟ್‌ ಜನರೇಟ್‌ ಆಗುತ್ತದೆ. ಇದಕ್ಕೆ ಕಾರಣ; ಫೋನ್‌ ಪ್ರೊಸೆಸರ್‌ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಉಷ್ಣಾಂಶ ಹೆಚ್ಚಾಗುತ್ತದೆ. 



ಫೋನ್‌ ಯಾಕೆ ಬಿಸಿಯಾಗುತ್ತದೆ? 

ಫೋನ್‌ ಯಾಕೆ ಬಿಸಿಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಫೋನ್‌ ಬಿಸಿ ಮಾಡುವ ನಿಜವಾದ 'ಅಪರಾಧಿ'ಗಳೆಂದರೆ ಬ್ಯಾಟರಿ, ಪ್ರೊಸೆಸರ್‌ ಮತ್ತು ಸ್ಕ್ರೀನ್‌. ಈ ಮೂರು ಘಟಕಗಳು ಉಷ್ಣಾಂಶವನ್ನು ಹೊರ ಹಾಕುತ್ತಲೇ ಇರುತ್ತವೆ. ಬ್ಯಾಟರಿಯೊಳಗಿನ ರಾಸಾಯನಿಕಗಳು ವಿದ್ಯುತ್‌ ಅನ್ನು ಉತ್ಪಾದಿಸಿ ನೀಡುವಾಗ ಬಿಸಿ ಸಹಜ. ಅದೇ ರೀತಿ, ಪ್ರೊಸೆಸರ್‌ ಮಾಹಿತಿಯನ್ನು ಅತ್ಯಂತ ವೇಗದಲ್ಲಿ ವರ್ಗಾವಣೆ ಮಾಡುತ್ತದೆ. ಸ್ಕ್ರೀನ್‌ ಬೆಳಕಳನ್ನು ಹೊರ ಚೆಲ್ಲುತ್ತದೆ. ಹೀಗಾಗಿ, ಈ ಎಲ್ಲ ಘಟಕಗಳು ತಮ್ಮ ಕಾರ್ಯವನ್ನು ನಿರ್ವಹಿಸುವಾಗ ಉಷ್ಣಾಂಶ ಹೊರ ಹಾಕುತ್ತವೆ ಮತ್ತು ಅದರ ಒಟ್ಟು ಬಿಸಿ ಅನುಭವ ನಮಗಾಗುತ್ತದೆ. ಈ ಮೂರು ಘಟಕಗಳು ಮಾತ್ರವಲ್ಲದೆ ಇನ್ನು ಅನೇಕ ಅಂಶಗಳು ಫೋನ್‌ ಹೀಟ್‌ ಆಗಲು ಕಾರಣಗಳಾಗುತ್ತದೆ. ಈ ಲೇಖನವು ವಿಜಯ ಕರ್ನಾಟಕಲ್ಲಿ  ಪ್ರಕಟವಾಗಿದೆ.