ಶುಕ್ರವಾರ, ಮಾರ್ಚ್ 8, 2019

ತೆಲುಗು ಅಸ್ಮಿತೆ ರಾಜಕಾರಣದ ಟಿಡಿಪಿ

ಟಿಡಿಪಿ ಎಂದು ಹೆಚ್ಚು ಪ್ರಚಲಿತವಾಗಿರುವ ತೆಲುಗು ದೇಶಂ ಪಾರ್ಟಿ, ಸಂಸತ್ತಿನಲ್ಲಿ ಪ್ರತಿಪಕ್ಷ ಸ್ಥಾ ನ ನಿರ್ವಹಿಸಿದ ಮೊದಲ ಪ್ರಾದೇಶಿಕ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದೆ. ಟಿಡಿಪಿ ಸದ್ಯ ಆಂಧ್ರದಲ್ಲಿ ಆಡಳಿತ ನಡೆಸುತ್ತಿದ್ದರೆ, ತೆಲಂಗಾಣದಲ್ಲಿ ತನ್ನ ಪ್ರಭಾವ ಹೊಂದಿದೆ. ತೆಲುಗು ಭಾಷೆಯ ಅಸ್ಮಿತೆಗಾಗಿ ತೆಲುಗು ದೇಶಂ ಪಾರ್ಟಿಯನ್ನು ಪ್ರಖ್ಯಾತ ನಟ ಎನ್‌.ಟಿ.ರಾಮರಾವ್‌ ಅವರು 1982ರ ಮಾರ್ಚ್‌ 29ರಂದು ಆರಂಭಿಸಿದರು. ಸದ್ಯ ಆಂಧ್ರದ ಮುಖ್ಯಮಂತ್ರಿ ಆಗಿರುವ ಚಂದ್ರಬಾಬು ನಾಯ್ಡು ಅವರು 1995ರಿಂದ ಟಿಡಿಪಿ ನೇತೃತ್ವ ವಹಿಸಿದ್ದಾರೆ. ಎನ್‌ಟಿಆರ್‌ ಅವರು ಜನಪ್ರಿಯ ಎಷ್ಟಿತ್ತೆಂದರೆ, ಟಿಡಿಪಿ ಆರಂಭಿಸಿದ 9 ತಿಂಗಳಲ್ಲೇ ಅವರು ಅಧಿಕಾರಕ್ಕೆ ಬಂದು, ಮೊದಲ ಬಾರಿಗೆ ಸಿಎಂ ಆದರು. 1984ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಂತರ ಅತಿ ಹೆಚ್ಚು ಸ್ಥಾನ ಗೆದ್ದಿದ್ದರಿಂದ ಪ್ರತಿಪಕ್ಷ ವಾಗಿ ಟಿಡಿಪಿ ಕಾರ್ಯನಿರ್ವಹಿಸಿತು. ಎನ್‌ಟಿಆರ್‌ ಅವರು ತೆಲುಗು ಭಾಷೆ ಮತ್ತು ನಾಡು ಅಸ್ಮಿತೆಯಾಗಿ ಪಕ್ಷ ವನ್ನ ಆರಂಭಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಕಾಂಗ್ರೆಸ್‌ಗೆ ಪರ್ಯಾಯವಾದ ಪಕ್ಷ ವನ್ನು ಹುಟ್ಟುಹಾಕಬೇಕಿತ್ತು. ಹಾಗಾಗಿ, ಟಡಿಪಿಯ ಸೈದ್ಧಾಂತಿಕ ವಿಚಾರಧಾರೆ ತೆಲುಗು ಅಸ್ಮಿತೆಯೇ ಆಗಿದೆ. ಇದರ ಜತೆಗೆ ರೈತರು, ಹಿಂದಿಳಿದವರು ಮತ್ತು ಮಧ್ಯಮ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕೂ ಬದ್ಧವಾಗಿದೆ. 1990ರ ನಂತರ ಟಿಡಿಪಿ ಉದಾರವಾದಕ್ಕೆ ಒತ್ತು ನೀಡಿದ್ದರಿಂದ, ಅದು ಈಗ ಉದ್ಯಮಿಗಳ ಪರ ಮತ್ತು ಅಭಿವೃದ್ಧಿ ಪರ ಎಂಬ ಟ್ಯಾಗ್‌ಲೈನ್‌ ಅಂಟಿಸಿಕೊಂಡಿದೆ. ಲೋಕಸಭೆಯಲ್ಲಿ 15, ರಾಜ್ಯಸಭೆಯಲ್ಲಿ 6 ತನ್ನ ಪ್ರತಿನಿಧಿಗಳನ್ನು ಹೊಂದಿದೆ. ಇನ್ನು ಆಂಧ್ರಪ್ರದೇಶದಲ್ಲಿ ಒಟ್ಟು 102 ಶಾಸಕರೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ. ಕೇಂದ್ರ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಟಿಡಿಪಿ, ಈ ಹಿಂದೆ ಒಮ್ಮೆ ಯುಪಿಎ ಮತ್ತು ಎನ್‌ಡಿಎಗೆ ಬೆಂಬಲ ನೀಡಿತ್ತು. ಪ್ರಸಕ್ತ ಎನ್‌ಡಿಎ ಜತೆಗೆ ಗುರುತಿಸಿಕೊಂಡಿದ್ದ ನಾಯ್ಡು, ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡುತ್ತಿಲ್ಲ ಎಂದು ಆರೋಪಿಸಿ ಕೂಟದಿಂದ ಹೊರ ಬಂದಿದ್ದಾರೆ. ಪಕ್ಷ ದ ಸಂಸ್ಥಾಪಕರಾದ ಎನ್‌ಟಿಆರ್‌ ಅವರು ಒಟ್ಟು ಮೂರು ಬಾರಿ ಆಂಧ್ರ ಸಿಎಂ ಆಗಿದ್ದರು. ಚಂದ್ರಬಾಬು ನಾಯ್ಡು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

1984ರಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಜಯ

ಸಿಖ್ಖರ ಪವಿತ್ರ ದೇಗುಲವಾದ ಸ್ವರ್ಣ ಮಂದಿರದಲ್ಲಿ ಖಲಿಸ್ಥಾನ ಉಗ್ರರು ಅಡಗಿಕೊಂಡಿದ್ದರು. ಅವರನ್ನು ಅಲ್ಲಿಂದ ಹೊಡೆದು ಹಾಕುವ ಸೇನಾ ಕಾರ್ಯಾಚರಣೆ, ಆಪರೇಷನ್‌ ಬ್ಲೂಸ್ಟಾರ್‌ ಎಂದು ಪ್ರಖ್ಯಾತವಾಗಿದೆ. ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರಕ್ಕೆ ಸೇನೆಯನ್ನು ಕಳುಹಿಸಿದ್ದು ಕೆಲವು ಸಿಖ್ಖರಿಗೆ ಸರಿ ಕಾಣಲಿಲ್ಲ. ಅವರು ಇಂದಿರಾ ಮೇಲೆ ಆಕ್ರೋಶಗೊಂಡಿದ್ದರು. ಇದರ ಪರಿಣಾಮ ಇಂದಿರಾ ಗಾಂಧಿ ಅವರನ್ನು 1984 ಅಕ್ಟೋಬರ್‌ 31ರಂದು ಅವರ ಅಂಗರಕ್ಷ ಕರಾಗಿದ್ದವರೇ ಗುಂಡಿಟ್ಟು ಕೊಂದರು. ಗಾಂಧಿ ಹತ್ಯೆ ನಂತರದ ಸಿಖ್‌ ವಿರೋಧಿ ದಂಗೆಗಳು ಶುರುವಾದವು. ಈ ಹೊತ್ತಲ್ಲಿ ನಡೆದ ನಡೆದ 8ನೇ ಸಾರ್ವತ್ರಿಕ ಚುನಾವಣೆಯು ತುಂಬ ಮಹತ್ವದ್ದಾಗಿತ್ತು. ಇಂದಿರಾ ಗಾಂಧಿ ಹತ್ಯೆ ಚುನಾವಣೆ ಮೇಲೆ ಸಂಪೂರ್ಣ ಪರಿಣಾಮ ಬೀರಿತ್ತು. ಇಂದಿರಾ ಪುತ್ರ ರಾಜೀವ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ 414 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಫಲಿತಾಂಶವನ್ನು ಪಡೆಯಿತು. ಭಾರತೀಯ ಜನತಾ ಪಾರ್ಟಿ(ಬಿಜೆಪಿ) 2ಸ್ಥಾನಗಳನ್ನು ಗೆಲ್ಲುವ ಮೂಲಕ ಚುನಾವಣಾ ರಾಜಕೀಯವನ್ನು ಆರಂಭಿಸಿತು. 1984ರ ಚುನಾವಣೆಯಲ್ಲಿ ದೇಶದೆಲ್ಲೆಡೆ ಸಕಾಲಕ್ಕೆ ನಡೆಯಿತಾದರೂ ಅಸ್ಸಾಮ್‌ ಮತ್ತು ಪಂಜಾಬ್‌ನಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ 1985ರವರೆಗೆ ಮುಂದೂಡಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ನಂತರ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದು ಆಂಧ್ರ ಪ್ರದೇಶದ ತೆಲುಗು ದೇಶಂ ಪಾರ್ಟಿ(ಪಿಡಿಪಿ). ಎನ್‌.ಟಿ.ರಾಮರಾವ್‌ ನೇತೃತ್ವದಲ್ಲಿ ಒಟ್ಟು 30 ಸ್ಥಾನಗಳನ್ನು ಗೆದ್ದುಕೊಂಡಿತು. ತಾನು ಎದುರಿಸಿದ ಮೊದಲನೆಯ ಚುನಾವಣೆಯಲ್ಲಿ ಗರಿಷ್ಠ ಸೀಟುಗಳನ್ನು ಪಡೆದ ಟಿಡಿಪಿ, ಕೇಂದ್ರದಲ್ಲಿ ಪ್ರಮುಖ ಪ್ರತಿಪಕ್ಷ ವಾಗಿ ಹೊರಹೊಮ್ಮಿತು. ಇದು ಭಾರತೀಯ ಚುನಾವಣೆಯ ಇತಿಹಾಸದಲ್ಲೇ ಇನ್ನು ದಾಖಲೆಯಾಗಿ ಉಳಿದಿದೆ. ಪ್ರಧಾನಿ ರಾಜೀವ್‌ ಗಾಂಧಿ ಪ್ರಧಾನಿಯಾಗಿ ಆಯ್ಕೆಯಾದರೆ, ಎನ್‌ಟಿಆರ್‌ ಅವರು ಪ್ರತಿಪಕ್ಷ ದ ನಾಯಕರಾದರು. ಇನ್ನುಳಿದಂತೆ ಜನತಾ ಪಾರ್ಟಿ 10, ಲೋಕದಳ 3 ಮತ್ತು ಕಮ್ಯುನಿಸ್ಟ್‌ ಪಾರ್ಟಿ 22 ಸ್ಥಾನಗಳನ್ನು ಗೆದ್ದುಕೊಂಡವು. ಈ ಚುನಾವಣೆ ಅನೇಕ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟವು. ಹೊಸ ತಲೆಮಾರಿನ ರಾಜಕಾರಣಿಯಾಗಿ ರಾಜೀವ್‌ ಗಾಂಧಿ ಅವರು ಪ್ರವರ್ಧಮಾನಕ್ಕೆ ಬಂದರು. ರಾಜೀವ್‌ ಅವಧಿಯಲ್ಲಿ ತಂತ್ರಜ್ಞಾನಕ್ಕೆ ವಿಶೇಷ ಒತ್ತು ದೊರೆಯಿತು. ಸಂವಹನ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾದವು. ಹಾಗೆಯೇ, ಇಂದಿಗೂ ಪ್ರತಿಪಕ್ಷ ಗಳಿಗೆ ಆಯುಧವಾಗಿರುವ ಬೋಪೊರ್ಸ್‌ ಖರೀದಿ ಹಗರಣ ಕೂಡ ಹೆಚ್ಚು ಸದ್ದು ಮಾಡಿತು. ಇದು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. 
- ತಿಪ್ಪಾರ 

ಗುರುವಾರ, ಮಾರ್ಚ್ 7, 2019

ಟಿಎಂಸಿ, ಮಮತಾ ಎಂಬ ಗಟ್ಟಿಗಿತ್ತಿಯ ರಾಜಕಾರಣದ ವೇದಿಕೆ

ಜನತಾ ಪಾರ್ಟಿ ಹೇಗೆ ಅನೇಕ ಹೊಸ ಪ್ರಾದೇಶಿಕ ಪಕ್ಷ ಗಳ ಹುಟ್ಟಿಗೆ ಕಾರಣವಾಯಿತೋ, ಹಾಗೆಯೇ ಕಾಂಗ್ರೆಸ್‌ ಕೂಡ ಅನೇಕ ಪಕ್ಷ ಗಳ ಅಸ್ತಿತ್ವಕ್ಕೆ ದಾರಿ ಮಾಡಿಕೊಟ್ಟಿದೆ. ನಾಯಕತ್ವ ಕಾರಣದಿಂದಾಗಿ ಅನೇಕ ಕಾಂಗ್ರೆಸ್‌ ನಾಯಕರು ತಮ್ಮದೇ ಆದ ಪಕ್ಷ ವನ್ನು ಸಂಘಟಿಸಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಮಮತಾ ಬ್ಯಾನರ್ಜಿ ಅವರೂ ಪ್ರಮುಖರು. 26 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ದುಡಿದಿದ್ದ ಅವರು, 1998 ಜನವರಿ 1ರಂದು ತಮ್ಮದೇ ಆದ ತೃಣಮೂಲ ಕಾಂಗ್ರೆಸ್‌ ಪಕ್ಷ ವನ್ನು ಆರಂಭಿಸಿದರು. 'ಮಾ ಮಾತಿ ಮಾನೂಷ್‌'(ಜನನಿ, ಜನ್ಮಭೂಮಿ ಮತ್ತು ಜನರು) ಎಂಬದು ತೃಣಮೂಲ ಪಕ್ಷ ದ ಧ್ಯೇಯವಾಕ್ಯ ಮತ್ತು ಜನಪ್ರಿಯ ಘೋಷಣೆಯೂ ಹೌದು. 2014ರ ಲೋಕಸಭೆಯ ಚುನಾವಣೆಯಲ್ಲಿ ಶೇ.6ರಷ್ಟು ಮತ ಪಡೆದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಈ ಪಕ್ಷ ಕ್ಕೆ ರಾಷ್ಟ್ರೀಯ ಪಕ್ಷ ದ ಮಾನ್ಯತೆ ಹೊಂದಿದೆ. 30 ವರ್ಷಗಳ ಕಾಲ ಎಡ ಪಕ್ಷ ಗಳು ಪಶಿಮ ಬಂಗಾಳದಲ್ಲಿ ಹೊಂದಿದ್ದ ಹಿಡಿತವನ್ನು ಸಡಿಲಿಸಿದ್ದೇ ಈ ಮಮತಾ ಬ್ಯಾನರ್ಜಿ. ಹೋರಾಟದಿಂದಲೇ ತೃಣಮೂಲ ಕಾಂಗೆÜ್ರಸ್‌ ಅನ್ನು ಅಧಿಕಾರದ ಪಡಸಾಲೆಗೆ ತಂದು ನಿಲ್ಲಿಸಿದರು. ಸಜವಾಗಿಯೇ, ಅವರು ಮುಖ್ಯಮಂತ್ರಿಯೂ ಆದರು. ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ಮೇಲೆ ಪ್ರಭುತ್ವ ಸಾಧಿಸಲು ಪ್ರತಿ ಪಕ್ಷ ವೂ ಹಾತೊರೆಯುತ್ತಿದೆ. ಯಾರು ಹೆಚ್ಚು ಸೀಟುಗಳನ್ನು ಗೆಲ್ಲುತ್ತಾರೋ ಅವರು ಸಜವಾಗಿ ಕೇಂದ್ರ ರಾಜಕಾರಣದಲ್ಲಿ ಪ್ರಭಾವವನ್ನು ಗಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತಾದ ಕೂಟದ ಚರ್ಚೆ ಬಂದಾಗಲೆಲ್ಲ, ಮಮತಾ ಬ್ಯಾನರ್ಜಿ ಅವರು ಹೆಸರು ಮುಂಚೂಣಿಯಲ್ಲಿರುತ್ತದೆ ಮತ್ತು ಅವರು ಪ್ರಧಾನಿ ಹುದ್ದೆಯ ಆಕಾಂಕ್ಷಿಯೂ ಹೌದು. ಪಶ್ಚಿಮ ಬಂಗಾಳ, ತ್ರಿಪುರಾ, ಮಣಿಪುರ, ಜಾರ್ಖಂಡ್‌ ಮತ್ತು ಅಸ್ಸಾಮ್‌ನಲ್ಲಿ ತನ್ನ ಪ್ರಭಾವ ಹೊಂದಿರುವ ತೃಣಮೂಲ ಕಾಂಗ್ರೆಸ್‌ ಲೋಕಸಭೆಯಲ್ಲಿ ಒಟ್ಟು 34 ಸಂಸದರನ್ನು ಹೊಂದಿದ್ದು, ರಾಜ್ಯಸಭೆಯಲ್ಲಿ 13 ಪ್ರತಿನಿಧಿಗಳಿದ್ದಾರೆ. 295 ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ 213 ಶಾಸಕರನ್ನು ಹೊಂದಿದೆ. 2011ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ತನ್ನ ಮಿತ್ರ ಪಕ್ಷ ಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬಂತು. 2016ರ ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಜಯ ಗಳಿಸಿತು.